ಬಗೆಬಗೆಯ ಬಗೆಗಳ ಹಗೆಯಲ್ಲಿ
ಬಗೆಹರಿಯದಾಗಲು
ನಿನ್ನ ನಗೆಮೊಗದ ಮುಖಾಂತರ
ನಿನ್ನೆದೆಯ ಗೂಡುಸೇರುವುದು ನನ್ನ ಆಶೆ.
ಎಂತೆಂತಹ ಚಿಂತೆಗಳ ಸಂತೆಯಲ್ಲಿ
ಹಾದಿ ದೊರೆಯದಾಗಲು
ನಿನ್ನ ಭವ್ಯ ಮುಖದ ಮುಖಾಂತರ
ನಿನ್ನ ಭವಿಷ್ಯದ ಮುಗಿಲಲ್ಲಿ ಹಾರುವುದು ನನ್ನ ನಿರಾಶೆ.
ಭವಸಾಗರದ ಸುಳಿಗೆ ಸಿಕ್ಕಿ
ಬಂಡೆಗೆ ಬಡಿಒಡಿದು ನುಗ್ಗಾಗಿ,
ಬಿರುಗಾಳಿಯಲ್ಲಿ ನಿನ್ನ ಧ್ರುವದೃಷ್ಟಿಯ ನಂಬಿ
ಸಾಗುವದು-ನನ್ನ ಆಶೆ.
ತಿರೆಯಂತೆ ತಿರ್ರನೆ ತಿರುತಿರುಗಿ ತಿರುಗಿ ಬರುವುದು
ನಿನ್ನ ಸುತ್ತು-ಮುತ್ತು ಸುತ್ತುವರಿಯಲು
ಎಳನೇಸರನೆ!-ನನ್ನ ನಿರಾಶೆ.
ನನ್ನ ಹಂಬಲಿನ ಹಂಬಿಗೆ ಹಂದರ ನೀನು;
ನನ್ನ ಬೆಂಬಲದ ನಂಬಿಗೆಯ ಮಂದಿರ ನೀನು;
ನೀನೇ ನನ್ನ ಆಶೆಸಿರಾಶೆಗಳ ಗಾಳಿಗೋಪುರ!
*****