ದೇವಸ್ಥಾನ ಪ್ರವೇಶ

ದೇವಸ್ಥಾನ ಪ್ರವೇಶ

ಪಡು ಬೈಲಲ್ಲಿ ಒಮ್ಮಿಂದೊಮ್ಮೆ ದೊಡ್ಡ ಬೊಬ್ಬೆ ಎದ್ದಿತು. ‘ಪಿಜಿನ ಪೂಜಾರಿ ಬಿದ್ದ! ಮರದಿಂದ ಬಿದ್ದ!’ ಎಂದು. ಉಳುತ್ತಿದ್ದ ಬೊಗ್ಗು ಕೋಣಗಳನ್ನು ನಿಲ್ಲಿಸದೆ ಓಡಿದ; ನೀರು ಮೊಗೆಯುತ್ತಿದ ಜಾರು ಮುಳುಗಿಸಿದ ಮರಿಗೆಯನ್ನು ಅಲ್ಲೇ ಬಿಟ್ಟೋಡಿದ; ಗದ್ದೆಯ ಅಂಚಿನಲ್ಲಿ ಹುಲ್ಲು ಕೆರೆಯುತ್ತಿದ್ದ ರಂಗು ಕೈಯಲ್ಲಿದ್ದ ಮುಷ್ಟಿ ಹುಲ್ಲನ್ನು ಹಿಡಿದುಕೊಂಡೇ ಹಾರಿದಳು. ಹೀಗೆ ಬೈಲಿನ ನಾಲ್ಕು ಕಡೆಗಳಿಂದಲೂ ಜನರು ಓಡುತ್ತಿದ್ದರು. ಧಾನ್ಯದ ಗದ್ದೆಗೆ ಇಳಿದು, ಬಿತ್ತಿದ ಗದ್ದೆಯನ್ನು ತುಳಿದು ಕಬ್ಬಿನ ಏರಿಯನ್ನು ಜರಿದು, ನೇರಾಗಿ ಪಿಜಿನ ಪೂಜಾರಿಯ ಮನೆತೋಟದ ಕಡೆಗೆ ಧಾವಿಸುತ್ತಿದ್ದರು ಬೈಲನ ಜನರೆಲ್ಲ. ಮುದಿ ಉಮ್ಮಕ್ಕು ರೆಡ್ತಿಯೂ ಊರು ಗೋಲು ಊರಿಕೊಂಡು ತನ್ನ ಅಂಗಳದ ತುದಿಗೆ ಬಂದು ಓಡುವವರನ್ನು ಕರೆದು, ‘ಯಾರಪ್ಪಾ ಬಿದ್ದದು? ಪಿಜಿನನ? ಹೋಗಿಯಪ್ಪ ಬೇಗ. ಗಡಿ ತುಪ್ಪ ಹಾಕಿ’ ಎಂದು ಕೂಡಿದಷ್ಟು ಕೂಗಿ ಹೇಳಿದಳು. ‘ಆಯ್ಯೋ, ಪಿಜಿನಾ, ಅಮಲು ತಕ್ಕೊಂಡು ಮರಕ್ಕೇರ ಬೇಡ ಎಂದು ಹೇಳಲಿಲ್ಲವೇ ನಾನು ಎಷ್ಟೋ ಸಲ’ ಹಿಂದೊಮ್ಮೆ ಬಿದ್ದೂ ಬುದ್ಧಿ ಬಾರದೆ ಹೋಯಿತೆ ನಿನಗೆ?’ ಎಂದು ನಿಟ್ಟುಸಿರು ಬಿಡುತ್ತಾ, ಏನು ಸುದ್ದಿ ಬರುವುದೆಂದು ಅಲ್ಲೇ ಅಂಗಳದ ತುದಿಯಲ್ಲಿ ಕಾದು ಕುಳಿತಳು; ಕುಳಿತು ಕಾದಳು.

ಪಿಜಿನ ಪೂಜಾರಿಯನ್ನು ಎತ್ತಿಕೊಂಡು ಹೋಗಿ ಚಾವಡಿಯಲ್ಲಿ ಮಲಗಿಸಿದರು. ಅವನ ಪಕ್ಕೆಲುಬು ಮುರಿದಿತ್ತು, ತಲೆಗೆ ಪೆಟ್ಟಾಗಿತ್ತು; ನೆರೆದ ನೂರಾರು ಮಂದಿ ಸಾವಿರಾರು ಮದ್ದು ಹೇಳಿದರು. ಸಿಕ್ಕಿದ ಏನೇನೋ ಮದ್ದು ಹಾಕಿ ಕಟ್ಟಿದರು. ‘ಏನೋ ದೈವದ ನೆಟ್ಟಿಲ್ಲದೆ ಹೀಗೆ ಬೀಳುವುದೆಂದರೇನು? ಕೋಳಿ ಸುಳಿದುಬಿಡಿ ಎಂದು ಹಲವರು. ಪಿಜಿನನು ಕ್ಷೀಣ ಸ್ವರದಿಂದ ತನ್ನ ಮಗನನ್ನು ಕರೆದನು; ‘ಚೀಂಕ್ರಾ, ನನ್ನನ್ನು ನೋಡು; ಆಣೆ ಇಡು ಹೆಂಡ ಕುಡಿಯುವುದಿಲ್ಲ ಎಂದು, ಸ್ಥಳದ ಆಣೆಯಿದು,’ ಎಂದನು. ಚೀಂಕ್ರನು ಪ್ರತಿಜ್ಞೆ ಮಾಡಿದ; ತಂದೆಯು ತೀರಿಕೊಂಡ.

ಚೀಂಕ್ರನು ತಂದೆಯ ನುಡಿಯಂತೆ ನಡೆದನು. ಮೂರ್ತೆಯನ್ನು ಬಿಡಲಿಲ್ಲ; ಆದರೆ ಹೆಂಡ ಕುಡಿಯಲಿಲ್ಲ. ಚಿಕ್ಕ ಗುತ್ತಿಗೆಯನ್ನು ವಹಿಸಿಕೊಂಡು ಒಂದು ದಾರಿಗೆ ಬರುವಂತಿದ್ದ. ಆದರೆ ಮಾಡುವುದೇನು? ಪಿಜಿನನು ಸತ್ತು ನಾಲ್ಕು ವರ್ಷಗಳಾಗಿಲ್ಲ: ನಿರಪರಾಧಿ ಚೀಂಕ್ರನು ಅಬ್ಕಾರಿ ಮೊಕದ್ದಮೆಯೊಂದರ ತಿಕ್ಕಿನಲ್ಲಿ ಸಿಕ್ಕಿಬಿದ್ದು ಆರು ತಿಂಗಳು ಜೈಲನ್ನು ಸೇರಿದ. ಹಿಂತಿರುಗಿ ಬರುವಷ್ಟರಲ್ಲಿ ಅವನ ತಾಯಿಯು ತೀರಿಕೊಂಡಿದ್ದಳು. ಇದ್ದ ಮನೆಜಾಗ ಗುತ್ತಿಗೆಯ ಹಣಕ್ಕೆ ಏಲಂ ಆಗಿ ಹೋಗಿತ್ತು! ಇದನ್ನೆಲ್ಲಾ ಕಂಡು ಚೀಂಕ್ರನಿಗೆ ತಡೆಯಲಾರದ ದುಃಖವಾಯಿತು. ಸ್ವಲ್ಪ ಸಮಯ ಅಲ್ಲಿ ಇಲ್ಲಿ ತನ್ನವರೆಂಬವರಲ್ಲೆಲ್ಲಾ ಅಲೆದಲೆದು ಕೊನೆಗೆಲ್ಲೋ ಮಾಯ ವಾದ.
* * * *

ಅಂದಿನಿಂದ ಇಂದಿಗೆ ಇಪ್ಪತ್ತು ವರುಷಗಳು ಜಾರಿ ಹೋಗಿವೆ! ನೋಡಿರಿ, ಚೀಂಕ್ರನು ತಿರುಗಿ ಊರಿಗೆ ಬಂದಿದ್ದಾನೆ. ಈಗ ಚಿಂಕ್ರನ ರೀತಿಯೇ ಬೇರೆ. ತಾನು ಚೀಂಕ್ರನೆಂದು ಹೇಳಿಕೊಳ್ಳದಿರುತ್ತಿದ್ದರೆ ಅವನ್ಯಾರೋ ಮೇಲು ಜಾತಿಯ ದೊಡ್ಡ ಮನುಷ್ಯನೆಂದು ಆ ಹಳ್ಳಿಯವರೆಲ್ಲ ಅವನೊಡನೆ ಬೆರೆಯುತ್ತಿದ್ದರೋ ಏನೋ! ಹಾಗಿತ್ತು ಅವನ ನಡೆ ನುಡಿ ವೇಷ! ಈಗ ಅವನಿಗೆ ಹೆಂಡತಿ, ಎರಡು ಗಂಡು ಮಕ್ಕಳೂ ಇವೆ. ಹೇರಳ ಹಣವನ್ನು ಸಂಪಾದಿಸಿಕೊಂಡು ಬಂದಿದ್ದನು. ಊರು ಬಿಟ್ಟವನು ದೂರದ ಸಂಬಂಧಿಕನೊಬ್ಬನಿದ್ದ ರಂಗೂನಿಗೆ ಅವನೊಡನೆ ಹೋಗಿದ್ದನಂತೆ. ಅಲ್ಲೊಂದು ಕಾಮಗಾರಿಕೆಯಲ್ಲಿದ್ದು ದುಡ್ಡು ಗಂಟುಕಟ್ಟಿ ಕೊಂಡು ಬಂದಿದ್ದನಂತೆ.

ಊರಿಗೆ ಬಂದ ಚೀಂಕ್ರನು ಅದೇ ತನ್ನ ಹಿರಿಯರ ಮನೆ ಜಾಗವನ್ನು ಕೊಂಡುಕೊಂಡ. ದೊಡ್ಡ ಮಹಡಿಯ ಮನೆಯನ್ನು ಕಟ್ಟಿಸಿದ; ಆಸ್ತಿ ಪಾಸ್ತಿ ಮಾಡಿದ. ಈಗ ಚೀಂಕ್ರನು ಊರಲ್ಲಿ ದೊಡ್ಡ ಮನುಷ್ಯ. ಅವನ ಹಣ, ಅವನ ಸಹಾಯ, ಮೇಲು ಜಾತಿಯವರಿಗೂ ಬೇಕು; ಅವಕ್ಕೆಲ್ಲಾ ಅವನು ಹತ್ತಿರದವ, ಆದರೆ ಹತ್ತು ಕೂಡಿದಲ್ಲಿ ಅವನು ದೂರದವ! ಅನೇಕರಲ್ಲಾಗುವ ಮದುವೆ ಮುಂಜಿಗಳಿಗೆ ಸಾಲ ಕೊಡಬೇಕು ಚೀಂಕ್ರಪೂಜಾರಿ, ಊರಲ್ಲಿಯ ವರಾಡ ವಂತಿಗೆಯಲ್ಲಿ ಚೀಂಕ್ರಪೂಜಾರಿಯ ಅಂಕೆ ದೊಡ್ಡದು. ಆದರೆ ಅಂತಹ ಕಾರ್ಯಕಲಾಪಗಳಲ್ಲಿ ಮಾತ್ರ ಚೀಂಕ್ರಪೂಜಾರಿಯು ದೂರದವ! ಚಪ್ಪರದೊಳಗೆ ತಲೆ ಹಾಕಲಿಕ್ಕೂ ಅಯೋಗ್ಯ! ಅಷ್ಟೇಕೆ? ಆ ಹಳ್ಳಿಯಲ್ಲಿ ಎಲ್ಲರಿಗಿಂತ ಹೆಚ್ಚು ತೀರ್ವೆತೆರುವ ದೊಡ್ಡ ವರ್ಗದಾರ ಚೀಂಕ್ರಪೂಜಾರಿ; ಆದರೆ ಬ್ರಾಹ್ಮಣ ಪಠೇಲರಲ್ಲಿ ಸರಕಾರ ಹಣ ತೆರಲಿಕ್ಕೆ ಹೋದಾಗ ಅವನು ನಿಂತು ಕಾಯಬೇಕು ಹೊರಗಿನ ಅಂಗಳದಲ್ಲಿ! ಆದರೆ ಚೀಂಕ್ರನು ಇದನ್ನೆಲ್ಲಾ ಸಹಿಸಿಕೊಂಡನು. ಊರ ಕಟ್ಟಳೆಯೆಂದು ತಲೆ ಬಗ್ಗಿಸಿದನು. ಸಂದು ಬಂದ ರೂಢಿಯೆಂದು ಸುಮ್ಮಗಿದ್ದನು.

ಒಂದು ದಿನ ಚೀಂಕ್ರನ ಹೆಂಡತಿಯು ಊರ ಜಾತ್ರೆಯ ಸಂತೆಗೆ ಬಳೆಯಿಡಿಸಿಕೊಳ್ಳಲು ಹೋಗಿದ್ದಳು. ಗಾಳಿಗೆ ಅವಳ ಸೆರಗು ಹಾರಿತು; ಅಲ್ಲೆ ಬಳೆಯಿಡಿಸಿಕೊಳ್ಳುತ್ತಿದ್ದ ಮೇಲು ಜಾತಿಯವಳೊಬ್ಬಳ ಮೈಗೆ ತಾಗಿತು! ಕೂಡಲೆ ಗದ್ದಲವೆದ್ದಿತು. ಮೇಲು ಜಾತಿಯ ಹೆಂಗಸರೆಲ್ಲಾ ಒಟ್ಟಾದರು; ಅವಳನ್ನು ಬೈದು ಹಂಗಿಸಿದರು-‘ದುಡ್ಡಿನ ಸೊಕ್ಕು! ಹೆಂಡದ ಸೊಕ್ಕು!’ ಎಂದರು. ಚೀಂಕ್ರನ ಹೆಂಡತಿ ಮಾನವಂತೆ; ರಂಗೂನಿನಲ್ಲಿ ಗೌರವಸ್ಥರ ಸ್ತ್ರೀಯರೊಂದಿಗೆ ತಿರುಗಿದವಳು. ಈ ಅಸಮಾನವನ್ನು ಸಹಿಸಲಾರದೆ ನೆಟ್ಟಗೆ ಮನೆಗೆ ಬಂದು ನಡೆದ ವಿಚಾರವನ್ನೆಲ್ಲ ತನ್ನ ಗಂಡ ನೊಡನೆ ಹೇಳಿ ಗೊಳ್ಳೆಂದು ಅತ್ತು ಬಿಟ್ಟಳು. ‘ನಮಗೆ ಇಷ್ಟು ಸಂಪತ್ತಿದ್ದರೂ, ನಾವಿಷ್ಟು ನಿರ್ಮಲವಾಗಿದ್ದರೂ, ನಾಯಿಗಿಂತ ಕೀಳಾದೆವಲ್ಲಾ!’ ಎಂದು ಕಣ್ಣೀರಿಟ್ಟಳು. ಈ ಮಾತು ಚೀಂಕ್ರನ ಎದೆಗೂ ನಾಟಿತು.

ಚೀಂಕ್ರನು ಯೋಚಿಸಿ ಯೋಚಿಸಿ ಇಟ್ಟನು. ಕೊನೆಗೊಂದು ಸಂಕಲ್ಪ ಮಾಡಿದನು. ತನ್ನ ಇಬ್ಬರು ಮಕ್ಕಳನ್ನು ಮಿಶನ್ ಶಾಲೆಗೆ ಕಳುಹಿಸತೊಡಗಿದ. ತಿಂಗಳು ವರ್ಷಗಳು ಕಳೆದುವು. ಮಕ್ಕಳಿಬ್ಬರೂ ವಿದ್ಯಾಭ್ಯಾಸದಲ್ಲಿ ನಿಪುಣರಾಗುತ್ತ ಹೋದರು, ಹಿರಿಯವನಾದ ಸುಂದರನು ಬಿ. ಎ. ಬಿ. ಎಲ್. ಆಗಿ ಮದ್ರಾಸಿನಲ್ಲಿ ಪ್ರಖ್ಯಾತ ವಕೀಲನೆನಿಸಿಕೊಂಡ. ಚೀಂಕ್ರನ ಊರಿನ ಹಲವು ಮೇಲು ಜಾತಿಯವರೂ ಅವನಲ್ಲಿಗೆ ಹೋಗಿ ‘ಆಪೀಲು ನಂಬ್ರ’ಗಳನ್ನು ಕೊಟ್ಟು ಬರುತ್ತಿದ್ದರು.

ಚೀಂಕ್ರನ ಕಿರಿಯ ಮಗ ರಾಮುವು ಇಂಗ್ಲೆಂಡಿಗೆ ಹೋಗಿ ಐ. ಸಿ. ಯಸ್, ಪಾಸಾಗಿ ಬಂದನು. ಮದ್ರಾಸಿನಲ್ಲಿ ತನ್ನ ಸಹಪಾಠಿಯಾಗಿದ್ದ ಮಿಶನ್ ತರುಣಿಯೊಬ್ಬಳಲ್ಲಿ ಅವನಿಗೆ ಪ್ರೀತಿ ಬಿತ್ತು. ಕೊನೆಗೆ ಅವಳನ್ನು ಮದುವೆಯಾಗಲೂ ಬೇಕಾಯಿತು. ಪರಿಣಾಮವಾಗಿ ಈಗ ಅವನ ಹೆಸರು ಆರ್. ಜೋರ್ಜ್ ರೋಬರ್ಟ್ಸ್ ಐ. ಸಿ. ಯಸ್. ಕೆಲವು ಸಮಯ ಮಧುರೆಯಲ್ಲಿ ಕಲೆಕ್ಟರನಾಗಿದ್ದು ತನ್ನೂರಾದ ಚಂದ್ರಪುರಿಗೆ ವರ್ಗವಾಗಿ ಬಂದನು. ಚಂದ್ರಪುರಿಯಲ್ಲಿ ಮೊದಲ ಸಲ ಬಂದಾಗ ಆ ಕಲೆಕ್ಟರರನ್ನು ಇದಿರು ಗೊಳ್ಳುವ ಸಂಭ್ರಮವೇನು? ಮಠದಿಂದ ಗಗ್ಗರ ಕೋಲು, ಮಕರ ತೋರಣ, ಆನೆ, ಬ್ಯಾಂಡು ಮುಂತಾದ ಬಿರುದಾವಳಿಗಳು ಜೋಡುಕಟ್ಟೆಯಲ್ಲಿ ಎದುರುಗೊಳ್ಳಲು ಸಜ್ಜಾಗಿ ನಿಂತಿದ್ದುವು. ಆಚಾರವಂತರು ವಿಚಾರವಂತರು ಊರ ಪ್ರಮುಖರು ಸಾಹುಕಾರರು ಎಲ್ಲರೂ ಅಲ್ಲಿ ನೆರೆದಿದ್ದರು.

ಕಲೆಕ್ಟರರು ಬರುವ ಆ ಮೂರು ಗಂಟೆಯ ಸಮಯವಾಯಿತು. ಎಲ್ಲರೂ ಕುತ್ತಿಗೆ ಎತ್ತಿ ಎತ್ತಿ ದಾರಿನೋಡುತ್ತಿದ್ದರು. ಅಷ್ಟರಲ್ಲಿ ಬಂತೇ ಬಂತು ನಾಗಯ್ಯ ಶೆಟ್ರ ಜಟ್ಕಾ ಕಂಪೆನಿಯ ದೊಡ್ಡ ಜಟ್ಕ. ಎದುರಲ್ಲಿ ಕುಳಿತಿದ್ದರು ಕಲೆಕ್ಟರ್ ದೊರೆಗಳು! ದೊರೆಗಳು ಜಟ್ಕದಿಂದ ಇಳಿದರು. ಅಲ್ಲೇ ಸಮೀಪ ತನ್ನ ತಂದೆಯು ಇತ್ತೀಚೆಗೆ ಕೊಂಡುಕೊಂಡಿದ್ದ ಬಂಗಲೆಗೆ ಎಲ್ಲರನ್ನೂ ಕರೆದುಕೊಂಡು ಸಾಗಿದರು, ಆಚಾರವಂತರೂ ವಿಚಾರವಂತರೂ ತಾನು ಮುಂದು ತಾನು ಮುಂದು ಎಂದು ನಡೆದೇ ಬಿಟ್ಟರು ಚೀಂಕ್ರಪೂಜಾರಿಯ ಬಂಗ್ಲೆಗೆ!

ಬಂಗ್ಲೆಯ ಮುಂಭಾಗದಲ್ಲಿ ಅಂದವಾದ ದೊಡ್ಡ ಚಪ್ಪರ, ಅದರಲ್ಲಿ ದೊಡ್ಡ ಸಭೆಗೂಡಿತು. ಚೀಂಕ್ರ ಮತ್ತು ತಹಶೀಲ್ದಾರರ ನಡುವೆ ಕಲೆಕ್ಟರರು ಸುತ್ತು ತಿರುಗಿ ಸಭಿಕರ ಪರಿಚಯ ಮಾಡಿಕೊಂಡರು. ಅನಂತರ ಚೀಂಕ್ರನು (ಈಗ ಚೀಂಕ್ರಪ್ಪನವರು!) ತನ್ನ ಕೈಯಿಂದಲೇ ಸಭಿಕರಿಗೆಲ್ಲಾ ಪನ್ನೀರು ಚಿಮುಕಿಸಿ ತಾಂಬೂಲ ಫಲ ಪುಷ್ಪ ಕೊಟ್ಟು ಉಪಚರಿಸಿದನು.

ನಾಲ್ಕು ತಿಂಗಳು ಕಳೆದುವು. ಮಠದಲ್ಲಿ ದೊಡ್ಡ ರಥೋತ್ಸವ. ಚಂದ್ರಪುರಿಯಲ್ಲಿ ಅಂತಹ ರಥೋತ್ಸವವಾಗುವುದು ಏಳು ವರ್ಷಕ್ಕೊಮ್ಮೆ. ಭಾರಿ ಜನ ಕೂಡುವುದು. ಅದೊಂದು ದೊಡ್ಡ ಜಾತ್ರೆ, ನೆಮ್ಮದಿ ಭಂಗವಾಗದಂತೆ ನೋಡಿಕೊಳ್ಳುವುದಕ್ಕೆ ಕಲೆಕ್ಟರರು ಬರುವ ಪದ್ಧತಿ. ಎಂದ ಮೇಲೆ ಮಠದಿಂದ ಮುಂಚಿತವಾಗಿ ಆಮಂತ್ರಣ ಹೋಗಿತ್ತು. ಹಿಂದಿನಿಂದ ನಜರು ಕಾಣಿಕೆ ಒಲಿಪೆಯೂ ಸಾಗಿದ್ದವು. ಬೇಸಿಗೆಯ ರಜೆಗೆಂದು ಮದ್ರಾಸಿನಿಂದ ವಕೀಲ್ ಸುಂದರನ್‌ರವರೂ ಅವರ ಪತ್ನಿಯೂ ಬಂದಿದ್ದರು. ಎಲ್ಲರೂ ಕಲೆಕ್ಟರರ (ಚೀಂಕ್ರಪೂಜಾರಿಯರ) ಬಂಗ್ಲೆಯಲ್ಲಿದ್ದರು. ಚೀಂಕ್ರಪ್ಪನವರು ರಥೋತ್ಸವ ನೋಡಲಿಕ್ಕೆ ತನ್ನ ಮಗಂದಿರಿಬ್ಬರೊಡನೆ ಹೊರಟರು. ಹೆಂಗಸರು ಹೊರಟರು, ಮಕ್ಕಳು ಹೊರಟರು, ಎಲ್ಲರೂ ಹೊರಟರು! ಕಲೆಕ್ಟರರ ಮನೆಯ ಹೆಂಗಸರೆಂದಾದ ಮೇಲೆ ಅಲ್ಲಿ ಅವರಿಗೆ ಸನ್ಮಾನವೇನು! ರಥದ ಎದುರಲ್ಲಿ ಎಲ್ಲರಿಗೆ ಮುಂದಾಗಿ ಅವರಿಗೆ ನಿಲ್ಲಲು ಮಠದಿಂದ ಜಾಗಮಾಡಿಕೊಡುವ ಸಂಭ್ರಮವೇನು! ಮಠದ ಆಚಾರವಂತರಿಬ್ಬರು ‘ಅಮ್ಮಾ, ಅಮ್ಮಾ’ ಎಂದು ಅವರ ಬಳಿಯಲ್ಲೇ ನಿಂತು ಎಲ್ಲವನ್ನೂ ವಿವರಿಸಿ ಹೇಳುವ ರೀತಿಯೇನು! ರಥವು ಸುತ್ತು ಬಂದು ಗುತ್ತಿನಲ್ಲಿ ನಿಂತಿತು. ಬಲಿಮೂರ್ತಿ ಒಳಗೆ ಹೋಯಿತು, ಆಗ ‘ನಾವೂ ಒಳಗೆ ಹೋಗಿ ನೋಡೋಣವೆ?’ ಎಂದಳು ಕಲೆಕ್ಟರರ ಪತ್ನಿ. ‘ಅದಕ್ಕೇನು? ಮೊನ್ನೆ ನನಗೆ ಎಲ್ಲ ತೋರಿಸಿದ್ದರು, ನಾನು ಹೋಗಿ ನೋಡಿದ್ದೆ; ಅಲ್ಲೆಲ್ಲ ಬಹಳ ಚಂದ ಉಂಟು. ಬಾ,’ ಎಂದು ಮುಂದಾದರು. ತಂದೆಯನ್ನೂ ತಮ್ಮನನ್ನೂ ಬನ್ನಿ ಯೆಂದರು. ಅಕ್ಕಾ ಬನ್ನಿ, ಅತ್ತೆ ಬನ್ನಿ, ಎಲ್ಲಾ ಬನ್ನಿ! ಎಂದು ತನ್ನೊಡನಿದ್ದ ಹೆಂಗಸರು ಮಕ್ಕಳನ್ನೆಲ್ಲ ಕರೆದುಕೊಂಡು ಕಲೆಕ್ಟರರ ಪತ್ನಿಯು ಗಂಡಸರನ್ನುಹಿಂಬಾ ಲಿಸಿದಳು. ಗಲಭೆಯಿಲ್ಲದೆ ಆಯಿತು ದೇವಸ್ಥಾನಪ್ರವೇಶ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಚ
Next post ಮರದ ಮರಗು

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…