ಚಕ್ರವ್ಯೂಹ

ಚಕ್ರವ್ಯೂಹ

ಚಿತ್ರ: ಪಾಸ್ಕಿ ಗಾರ್ಸಿಯಾ
ಚಿತ್ರ: ಪಾಸ್ಕಿ ಗಾರ್ಸಿಯಾ

ಹಿರಿಪುಢಾರಿಯ ಸಂಪರ್ಕಕ್ಕೆ ಮರಿ ಪುಢಾರಿಯು ಬಂದದ್ದು ಕಿರಿಪುಢಾರಿಯ ಮೂಲಕ. ಮರಿಪುಢಾರಿಯು ಕಾಲೇಜಲ್ಲಿ ಒಬ್ಬ ನಾಯಕನಾಗಿದ್ದನು. ಒಂದೆರಡು ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದನು. ಬೇಕೆಂದೇ ಬೈಕಿನ ಸೈಲೆನ್ಸರ್‍ ಹಾಳು ಮಾಡಿ ಬೈಕು ಓಡಿಸುವುದು, ಭಯಾನಕ ಶಬ್ದಗಳ ಹಾರನ್ನು ಹಾಕಿಸಿ ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳುವಂತೆ ಮಾಡುವುದು, ಬೆಳಿಗ್ಗೆ ಪರಮಾತ್ಮ ಸೇವನೆ ಮಾಡಿಯೇ ಕ್ಲಾಸಿಗೆ ಹಾಜರಾಗುವುದು ಅವನ ಗುಣ ವಿಶೇಷಣಗಳು. ಅವನ ಕಣ್ಣುಗಳು ಸದಾ ಕೆಂಪಗಾಗಿರುತ್ತಿದ್ದವು. ಬಾಯಿ ತೆರೆದರೆ ಅಷ್ಟು ದೂರಕ್ಕೆ ಭಯಾನಕ ವಾಸನೆ ರಾಚುತ್ತಿತ್ತು. ಆದುದರಿಂದ ಮರ್ಯಾದಸ್ಥ ಅಧ್ಯಾಪಕರು ಅವನಿಂದ ಸಾಧ್ಯವಾದಷ್ಟು ದೂರವಿರುತ್ತಿದ್ದರು. ಕಾಲೇಜಲ್ಲೂ ರಾಜಕೀಯ ಪಕ್ಷಗಳ ಭೂಗತ ಚಟುವಟಿಕೆ ನಡೆಸುವ ರಾಜಕಾರಣಿ ಅಧ್ಯಾಪಕರು ಅವನನ್ನು ಬೇಕಾದಂತೆ ಬಳಸಿಕೊಳ್ಳುತ್ತಿದ್ದರು. ತಮಗಾಗದ ಪ್ರಮಾಣಿಕ ಅಧ್ಯಾಪಕರುಗಳ ಚಾರಿತ್ರ್‍ಯವಧೆಗೆ ಅವನನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಅವನ ಹೊಟ್ಟೆಗೆ ಡೀಸಲ್ಲು ಮತ್ತು ಬೈಕಿಗೆ ಪೆಟ್ರೋಲು ಸಿಗುವುದಾದರೆ ಅವನು ಎಂತಹ ಕೆಲಸ ಮಾಡಲೂ ಸಿದ್ಧನಿದ್ದನು.

ಒಂದು ಬಾರಿ ಮಾತ್ರ ಅವನು ರಾಜಕಾರಣಿ ಅಧ್ಯಾಪಕರ ಮಾತು ಕೇಳಿ ಪ್ರಮಾಣಿಕ ಅಧ್ಯಾಪಕರೊಬ್ಬರನ್ನು ದಾರಿಯಲ್ಲಿ ಬೆದರಿಸಿ ಬಿಟ್ಟನು. ಬಹಳ ಅಪಮಾನಕ್ಕೆ ಒಳಗಾದ ಪ್ರಾಮಾಣಿಕ ಅಧ್ಯಾಪಕರು ಅಹಂಕಾರಕ್ಕೆ ಉದಾಸೀನವೇ ಮದ್ದು ಎಂದು ಸುಮ್ಮನಾಗಿದ್ದರು. ಆದರೆ ಅದು ಹೇಗೋ ವಿಷಯ ಪ್ರಿನ್ಸಿಪಾಲರಿಗೆ ಗೊತ್ತಾಗಿ ಬಿಟ್ಟಿತು. ಅವರು ಅದನ್ನು ಪೋಲೀಸರಿಗೆ ತಿಳಿಸಿಬಿಟ್ಟರು. ಪೋಲೀಸರಿಗೆ ಮರಿ ಪುಢಾರಿಯ ಗುಣ ವಿಶೇಷಣಗಳು ತಿಳಿದಿದ್ದವು. ಅವರು ಅವಕಾಶಕ್ಕೆ ಕಾಯುತ್ತಿದ್ದರು. ಈಗ ಅವನನ್ನು ಹಾಗೆ ಹಿಡಕೊಂಡು ಬಂದು ಲಾಕಪ್ಪಿಗೆ ಹಾಕಿ ಪೋಲೀಸ್ ಮೆಥಡಲ್ಲಿ ವಿಚಾರಿಸಿಕೊಂಡರು. ಮರಿಪುಢಾರಿಗೆ ಪೆಟ್ಟುಕೊಟ್ಟು ಗೊತ್ತಿತ್ತೇ ಹೊರತು ತಿಂದು ಗೊತ್ತಿರಲಿಲ್ಲ. ಪೋಲೀಸ್ ಪೆಟ್ಟು ಬೀಳೂತ್ತಿದ್ದಂಥೆ ಅವನಿಗೆ ತಾನು ರಾಜಕಾರಣಿ ಅಧ್ಯಾಪಕರ ಮಾತು ಕೇಳಿ ಮಾಡಿದ ತಪ್ಪುಗಳು ನೆನಪಾದವು. ಕಂಬಳ, ಕೋಳಿಕಟ್ಟ, ಆಯನ, ಕೋಲ, ಜಾತ್ರೆಗಳಲ್ಲಿ ಯಾರ್‍ಯಾರಿಗೋ ಬಡಪಾಯಿಗಳಿಗೆ ಬಡಿದದ್ದು, ಬಡಪಾಯಿ ಹೆಣ್ಣುಗಳನ್ನು ಗೋಳು ಹೊಯ್ದದ್ದು ನೆನಪಾಯಿತು. ಎಷ್ಟು ಹಲ್ಲು ಕಚ್ಚಿಕೊಂಡರೂ ಪೆಟ್ಟಿನ ತೀವ್ರತೆ ಅವನ ಬಾಯಿಯಿಂದ “ಅಯ್ಯೋ ಅಮ್ಮ” ಎಂಬ ಉದ್ಗಾರ ಹೊರಡಿಸಿತು. ಅವನಿಗೆ ಲಾಠಿ ಸೇವೆ ಮಾಡುತ್ತಿದ್ದ ಪೋಲೀಸ “ನೀನು ಬಡಪಾಯಿಗಳಿಗೆ ಬಡಿದಾಗ ಅವರ ಬಾಯಿಯಿಂದ ಹೀಗೆ ಸ್ವರ ಹೊರಟಿರಬೇಕಲ್ಲಾ?” ಎಂದು ಇನ್ನೂ ನಾಲ್ಕು ಬಿಗಿದ. ಮರಿಪುಢಾರಿ ಸುಸ್ತಾಗಿ ಬಿದ್ದ.

ಮರಿಪುಢಾರಿಗೆ ಎಚ್ಚರವಾದಾಗ ಸಂಜೆಯಾಗಿತ್ತು. ಮೈಯಿಡೀ ನೋಯುತ್ತಿತ್ತು. ಹಸಿವೆಯಿಂದ ಹೊಟ್ಟೆಯೂ ಚುರುಗುಡುತ್ತಿತ್ತು. “ನೀನು ಏನು ಮಾಡಿದರೂ ನಾನಿದ್ದೇನೆ ರಕ್ಷಿಸಲು” ಎಂದು ಹೇಳಿದ್ದ ರಾಜಕಾರಣಿ ಅಧ್ಯಾಪಕರ ನೆನಪಾಯಿತು. ತಾನು ವಿನಾಕಾರಣ ಅಪಮಾನ ಮಾಡಿದ ಪ್ರಮಾಣಿಕ ಅಧ್ಯಾಪಕರ ನೆನಪಾಯಿತು. ಅವರ ಮೌನಶಾಪದ ಫಲ ಇದು ಎಂದುಕೊಂಡ. ಒಮ್ಮೆ ಹೊರಬಿದ್ದರೆ ಸಾಕು. ಮತ್ತೆಂದೂ ಪುಢಾರಿಗಿರಿಗೆ ಇಳಿಯುವುದಿಲ್ಲ ಎಂದು ಶಪಥ ಮಾಡಿಕೊಂಡ.

ಸ್ವಲ್ಪ ಹೊತ್ತಲ್ಲಿ ಇವನ ಲಾಕಪ್ ಎದುರಿಂದ ಕಿರಿಪುಢಾರಿ ಹಾದು ಹೋದ. ಅವನು ಸ್ವಲ್ಪ ಮುಂದಕ್ಕೆ ಹೋದವ ಮರಿ ಪುಢಾರಿಯನ್ನು ಗಮನಿಸಿ ಹಿಂದಕ್ಕೆ ಬಂದು “ಇದು ಯಾರು? ನಿನ್ನನ್ನು ಲಾಕಪ್ಪಿಗೆ ಹಾಕಿದ್ದಾರಲ್ಲಾ. ಏನಾಯಿತು?” ಎಂದು ಕೇಳಿದ. ಏನಾಯಿತೆಂದು ಇವ ಹೇಳಿಯಾನು? ಸುಮ್ಮನೆ ತಲೆತಗ್ಗಿಸಿದ. ಕಿರಿ ಪುಢಾರಿ ಅತ್ತಿತ್ತ ನೋಡಿದ. ಮತ್ತೆ ಪಿಸುಗುಟ್ಟಿದ. “ನೀನು ನಮ್ಮ ಎದುರು ಪಕ್ಷಕ್ಕಾಗಿ ಇಷ್ಟು ದಿನ ದುಡಿದೆ. ಈಗ ನೋಡು ನಿನ್ನನ್ನು ಬಿಡಿಸಲು ಯಾರಾದರೂ ಬಂದರಾ? ನೀನು ಹ್ಞೂಂ ಎಂದರೆ ಸಾಕು. ಚಿಟಿಕೆ ಹಾರಿಸುವುದರಲ್ಲಿ ನಿನ್ನನ್ನು ಬಿಡಿಸಿಕೊಂಡು ಹೋಗುತ್ತೇನೆ. ಆದರೆ ಒಂದು ಕಂಡೀಶನ್ನು. ನೀನು ಇನ್ನು ಮುಂದೆ ನಮ್ಮ ಪಕ್ಷಕ್ಕಾಗಿ ದುಡಿಯಬೇಕು. ಪ್ರಾಮಿಸ್ಸು ಮಾಡು” ಎಂದು ಸರಳುಗಳ ಎಡೆಯಿಂದ ಕೈ ಚಾಚಿದ.

ಮರಿಪುಢಾರಿ ಪ್ರಾಮಿಸ್ಸು ಮಾಡಲಿಲ್ಲ. ಕಿರಿಪುಢಾರಿ ನಗುತ್ತಾ ಮಾತು ಮುಂದುವರಿಸಿದ: “ನನಗೇನೂ ತೊಂದರೆಯಿಲ್ಲ. ನಿನ್ನನ್ನು ಬಿಡಿಸುವವರಿಲ್ಲದಿದ್ದರೆ ಇಂದು ರಾತ್ರೆ ಏನಾದೀತು ಯೋಚಿಸು. ಈಗಲೇ ನಿನ್ನನ್ನು ಗುದ್ದಿ ಹಣ್ಣು ಮಾಡಿದ್ದಾರೆ. ರಾತ್ರೆ ಬೆಂಡೆತ್ತುತ್ತಾರೆ. ಇನ್ನು ನಾಲ್ಕು ಗುದ್ದಿಗೆ, ನೀನು ಬದುಕಿರುವುದಿಲ್ಲ. ಇನ್ನು ನಿನ್ನಿಷ್ಟ” ಎಂದ.

ಮರಿಪುಢಾರಿ ಯೋಚಿಸಿದ. ಹೌದು. ಕಿರಿಪುಢಾರಿ ಹೇಳುವುದು ಸತ್ಯವೇ. ಕಾಲೇಜಿನಲ್ಲಿ ದಾದಾಗಿರಿ ಮಾಡಲು ಪ್ರಚೋದಿಸಿದ ರಾಜಕಾರಣಿ ಅಧ್ಯಾಪಕರಿಗೆ ವಿಷಯ ಗೊತ್ತಿದ್ದರೂ ತನ್ನನ್ನು ನೋಡಲು ಬರಲಿಲ್ಲ. ಬೇಡ, ಪಾರ್ಟಿಯ ಬೇರೆಯವರಿಗೆ ಹೇಳಿ ತನ್ನನ್ನು ಬಿಡಿಸಬಹುದಿತ್ತು. ಅಂದರೆ ಆ ಪಾರ್ಟಿ ತನ್ನನ್ನು ಕೈ ಬಿಟ್ಟದ್ದೇ. ಈಗಲೇ ತನಗೆ ಓಡಾಡಲು ತ್ರಾಣವಿಲ್ಲ. ಇನ್ನೆರಡು ಗುದ್ದಿನಲ್ಲಿ ಪ್ರಾಣ ಹೋಗತ್ತದೆ. ಲಾಕಪ್ ಡತ್ತಾದರೆ ಒಂದು ದಿನ ತನ್ನ ಗೆಳೆಯರು ಒಂದಷ್ಟು ಗಲಾಟೆ ಮಾಡುತ್ತಾರೆ. ಮತ್ತೆ ಎಲ್ಲರೂ ಮರೆತು ತಮ್ಮ ತಮ್ಮ ಸಮಸ್ಯೆಗಳಲ್ಲಿ ಮುಳುಗಿ ಬಿಡುತ್ತಾರೆ. ಅಯ್ಯೋ ಭಗವಂತಾ. ಹಾಗಾಗ ಕೂಡದು. ಅವನು ಕಿರಿಪುಢಾರಿಯ ಕೈ ಹಿಡಿದುಕೊಂಡ.

ಕಿರಿಪುಢಾರಿ ವಿಜಯದ ನಗೆ ನಕ್ಕು “ಇರು ಈಗ ಬಂದೆ” ಎಂದು ಮುಂದಕ್ಕೆ ಹೋದ. ವಾಪಾಸು ಬರುವಾಗ ಅವನೊಡನೆ ಬಂದ ಒಬ್ಬ ಪೋಲೀಸನು ಲಾಕು ತೆಗೆದು “ನೀನಿನ್ನು ಹೋಗಬಹುದು. ಇನ್ನು ಮುಂದೆ ಏನಾದರೂ ದಾದಾಗಿರಿ ಮಾಡಿದರೆ ಸಾಹೇಬರು ಶೇಪು ನಿಕಾಲು ಮಾಡಿ ಬಿಡುತ್ತಾರೆ” ಎಂದು ಹೇಳಿದ. ಮರಿಪುಢಾರಿ ಗೋಣು ಅಲ್ಲಾಡಿಸಿ ಕಿರಿ ಪುಢಾರಿಯ ಹಿಂದಿನಿಂದ ನಡೆದ.

ಕಿರಿಪುಢಾರಿ ಮರಿಪುಢಾರಿಯನ್ನು ಕರೆಕೊಂಡು ನೇರವಾಗಿ ಪಾರ್ಟಿ ಆಫೀಸಿಗೆ ಹೋದ. ಅಲ್ಲಿ ಹಿರಿಪುಢಾರಿ ದೂರವಾಣಿಯಲ್ಲಿ ಯಾರೊಡನೆಯೊ ಮಾತಡುತ್ತಿದ್ದನು. ಮರಿಪುಢಾರಿಯನ್ನು ನೋಡಿ ಕುಳಿತುಕೊಳ್ಳುವಂತೆ ಸನ್ನೆ ಮಾಡಿದನು. ಮರಿಪುಢಾರಿ ಅಲ್ಲಿದ್ದ ಮರದ ಬೆಂಚಲ್ಲಿ ಕುಳಿತುಕೊಂಡನು.

ಮಾತು ಮುಗಿಸಿ ರಿಸೀವರು ಕೆಳಗಿಟ್ಟ ಹಿರಿಪುಢಾರಿಯು ಕಿರಿಪುಢಾರಿಯೊಡನೆ “ಇವನನ್ನು ಯಾಕೆ ಕರಕೊಂಡು ಬಂದದ್ದು” ಎಂದು ಕೇಳಿದನು. ಕಿರಿಪುಢಾರಿಯು ನಡೆದದ್ದು ಎಲ್ಲವನ್ನು ಹಿರಿಪುಢಾರಿಗೆ ವಿವರಿಸಿದನು. ಹಿರಿಪುಢಾರಿಯು ಮಂದಸ್ಮಿತನಾಗಿ “ಈಗ ಗೊತ್ತಾಯಿತಾ ನಮ್ಮ ಪಾರ್ಟಿಯ ಪವರು? ಇಷ್ಟು ದಿನ ಆ ಪಾರ್ಟಿಯಲ್ಲಿದ್ದು ನಿನಗೆ ಲಾಭವಾದದ್ದು ಪೋಲೀಸರು ಏಟುಗಳು. ಇನ್ನೇನು ಚುನಾವಣೆ ಬಂದು ಬಿಡುತ್ತದೆ. ನೀನು ಚುನಾವಣಾ ಪ್ರಚಾರಕ್ಕೆ ನಮ್ಮೊಟ್ಟಿಗೆ ಬರಬೇಕು. ಇನ್ನು ಮುಂದೆ ಯಾವ ಪೋಲೀಸನೂ ನಿನ್ನನ್ನು ಮುಟ್ಟುವುದಿಲ್ಲ. ಇದು ನನ್ನ ವಿಸಿಟಿಂಗು ಕಾರ್ಡು. ಇದರಲ್ಲಿ ನನ್ನ ಫೋನು ನಂಬರಿದೆ. ನನ್ನ ಸಂಪರ್ಕದಲ್ಲಿರು” ಎಂದ.

ಮರಿಪುಢಾರಿ ಆಗ “ನಾನಿನ್ನು ಯಾವುದೇ ಪಾರ್ಟಿಯಲ್ಲಿರುವುದಿಲ್ಲ. ಪಾರ್ಟಿಯಲ್ಲಿದ್ದು ರಾಜಕಾರಣಿ ಅಧ್ಯಾಪಕರ ಮಾತು ಕೇಳಿ, ಆದದ್ದು ಸಾಕು. ವಿದ್ಯಾರ್ಥಿಗಳು ರಾಜಕೀಯ ಪಕ್ಷದಲ್ಲಿರುವುದು ತಪ್ಪು ಎಂದು ನನಗೆ ಗೊತ್ತಾಗಿದೆ. ನನ್ನನ್ನು ತಪ್ಪು ದಾರಿಗೆಳೆದ ಆ ರಾಜಕಾರಣಿ ಅಧ್ಯಾಪಕರಿಗೆ ಒಂದು ದಿನ ಬುದ್ಧಿ ಕಲಿಸುತ್ತೇನೆ. ನನಗಿನ್ನು ರಾಜಕೀಯ ಬೇಡ. ನಾನು ಓದಿ ಜಾಣನಾಗಬೇಕು” ಎಂದ.

ಹಿರಿಪುಢಾರಿಯಾಗ “ಅಯ್ಯೋ. ಯಾರು ಬೇಡ ಅಂದರು? ನೀನು ಓದಿ ಜಾಣ ಆಗು. ಆ ರಾಜಕಾರಣಿ ಅಧ್ಯಾಪಕರಿಗೆ ಸರಿಯಾಗಿ ಬುದ್ಧಿ ಕಲಿಸು. ನಾನೇನು ಬೇಡ ಎನ್ನುತ್ತೇನಾ? ನಿನಗೆ ನಮ್ಮ ಸಪೋರ್ಟು ಇದೆ. ನಮಗೆ ನೀನು ಬೇಕು. ಮುಂದೊಂದು ದಿನ ನಿನ್ನನ್ನೇ ಈ ಕ್ಷೇತ್ರದ ಎಮ್ಮೆಲ್ಲೆ ಮಾಡಿಸಿ ಬಿಡ್ತೇವೆ ನೋಡು” ಎಂದು ಗಹಗಹಿಸಿದ. ಕಿರಿಪುಢಾರಿ ಅದಕ್ಕೆ ತನ್ನ ನಗುವನ್ನು ಸೇರಿಸಿದ.

ಮರಿಫುಡಾರಿ “ಸರಿ, ನಿಮ್ಮ ಪಾರ್ಟಿಗೆ ನಾನು ಸೇರುತ್ತೇನೆ. ಈಗಲ್ಲ, ಇನ್ನು ಒಂದು ವರ್ಷ ಇದೆ. ಆಗ ನನ್ನ ಡಿಗ್ರಿ ಮುಗಿಯುತ್ತದೆ. ಮತ್ತೆ ನಾನು ನಿಮ್ಮೊಟ್ಟಿಗೇ ಇರುತ್ತೇನೆ” ಎಂದ.

ಹಿರಿ ಪುಢಾರಿಯದಕ್ಕೆ “ಅದೆಲ್ಲಾಗುತ್ತದೆ? ನೀನು ಇವತ್ತೇ ನಮ್ಮ ಪಾರ್ಟಿಗೆ ಸೇರಬೇಕು. ಎಲೆಕ್ಷನ್ನಿಗೆ ಕ್ಯಾನುವಾಸು ಮಾಡಬೇಕು. ಎಲೆಕ್ಷನ್ನು ನಿನ್ನ ಪರೀಕ್ಷೆಯನ್ನು ಕಾಯುವುದಿಲ್ಲ. ಇನ್ನು ಏನೇನೋ ಕಾರಣ ಕೊಡಬೇಡ” ಎಂದ.

ಮರಿಪುಢಾರಿ ಕುಳಿತಲ್ಲಿಂದ ಎದ್ದ. “ನನ್ನದು ಫೈನಲ್ ಡಿಸಿಷನ್ನು. ಓದು ಮುಗಿಯುವವರೆಗೆ ನನಗೆ ಪಾಲಿಟಿಕ್ಸು ಬೇಡ. ಡಿಗ್ರಿ ಆಗಿ ನಿಮ್ಮೊಟ್ಟಿಗೆ ಸೇರುತ್ತೇನೆ” ಎಂದು ಕೈ ಮುಗಿದು ಹೊರಬಂದ. ಅವನು ಹೊರಬರುತ್ತಿರುವಂತೆ ಹಿಡಿಪುಢಾರಿ ದೂರವಾಣಿಯ ರಿಸೀವರು ಕೈಗೆತ್ತಿಕೊಂಡು ಯಾವುದೋ ನಂಬರು ಒತ್ತುತ್ತಿರುವುದು ಅವನ ಗಮನಕ್ಕೆ ಬಂತು.

ಕಾಲೇಜಿನತ್ತ ಸಾಗುತ್ತಿದ್ದ ಮರಿಪುಢಾರಿ ಇನ್ನೇನು ಕಾಲೇಜು ಮುಟ್ಟಬೇಕು ಅನ್ನುವಷ್ಟರಲ್ಲಿ ಗಕ್ಕನೆ ಜೀಪೊಂದು ಬಂದು ಅವನ ಎದುರು ನಿಂತಿತು. ಅದರಿಂದ ಇಳಿದ ಎಸೈ “……ಮಗ್ನೇ. ಲಾಕಪ್ಪಿನಿಂದ ತಪ್ಪಿಸಕೊಂಡು ಬರ್ತಿದ್ದೀಯಾ?” ಎಂದು ಬೀದಿಯಲ್ಲೇ ಮರಿ ಪುಢಾರಿಯ ಕಪಾಳಕ್ಕೆ ಒಂದು ಬಿಗಿದ. ಮರಿಪುಢಾರಿಗೆ ಮೂರು ಲೋಕಗಳು ಏಕಕಾಲಕ್ಕೆ ಕಣ್ಣ ಮುಂದೆ ಕಂಡಂತಾಯಿತು. “ಹಾಕಿ ಅವನನ್ನು ಜೀಪಿಗೆ” ಎಂದು ಎಸ್ಸೈ ಹೇಳಿದಾಗ ಪೋಲೀಸರಿಬ್ಬರು ಅವನನ್ನು ಸತ್ತನಾಯಿಯನ್ನು ಮುನಿಸಿಪಾಲಿಟಿಯವರು ಎಳಕೊಂಡು ಹೋಗುವಂತೆ ಎಳಕೊಂಡು ಹೋಗಿ ಜೀಪಿಗೆ ತಳ್ಳಿದರು. ಮರಿಪುಢಾರಿ ಏನನ್ನೋ ಹೇಳಲು ಹೋದಾಗ ಪೋಲೀಸನೊಬ್ಬ “ಮಾತಾಡಿದರೆ ನಿನ್ನ ಹಲ್ಲು ಉದುರಿಸಿ ಬಿಡುತ್ತೇನೆ” ಎಂದು ಕೈಯೆತ್ತಿದ. ಮರಿಪುಢಾರಿ ಹೆದರಿ ಸುಮ್ಮನಾದ.

ಮರಿಪುಢಾರಿಯನ್ನು ಮತ್ತೆ ಲಾಕಪ್ಪಿಗೆ ತಳ್ಳಲಾಯಿತು. ಸುತ್ತಲೂ ಕತ್ತಲಾವರಿಸುತ್ತಿದ್ದಂತೆ ಮರಿಪುಢಾರಿಗೆ ವಿಪರೀತ ಹೆದರಿಕೆಯಾಯಿತು. ಲಾಕಪ್ಪಿನಲ್ಲಿದ್ದ ಅಸಂಖ್ಯಾತ ತಿಗಣಿಗಳು ಮತ್ತು ಸೊಳ್ಳೆಗಳು ಅವನನ್ನು ತಕತೈ ಕುಣಿಯುವಂತೆ ಮಾಡಿದವು. ರಾತ್ರೆ ತನ್ನನ್ನು ಲಾಕಪ್ಪಿನಲ್ಲಿ ಇವರು ಕೊಂಡು ಬಿಡಬಹುದು ಎನ್ನುವ ಭೀತಿ ಮೂಡಿ ಅವನು ದೊಡ್ಡ ಸ್ವರದಲ್ಲಿ ಅಳತೊಡಗಿದ.

ಈಗ ಎಸ್ಸೈ ಲಾಕಪ್ಪಿನ ಬೀಗ ತೆಗೆದು ಒಳಬಂದು “ಮುಚ್ಚು ನಿನ್ನ ಕತ್ತೆಗಾಯನ” ಎಂದು ಕೈಯೆತ್ತಿದರು. ಮರಪುಢಾರಿ ಎಸ್ಸೈಯವರ ಕಾಲಿಗೆ ಬಿದ್ದ. ಅಲ್ಲಿಂದಲೇ ತನ್ನ ಜೇಬಿಗೆ ಕೈ ಹಾಕಿ ಹಿರಿಪುಢಾರಿಯ ವಿಸಿಟಿಂಗು ಕಾರ್ಡು ತೆಗೆದು ಎಸ್ಸೈಗೆ ಕೊಟ್ಟನು. “ಇನೆಸ್‌ಪೆಕ್ಟರೇ, ಇವರು ನನಗೆ ಬೇಕಾದವರು. ಅವರಿಗೊಮ್ಮೆ ಫೋನು ಮಾಡಿ ಬಿಡಿ. ದಮ್ಮಯ್ಯ” ಎಂದು ಮತ್ತೊಮ್ಮೆ ಅವರ ಕಾಲು ಹಿಡಿದುಕೊಂಡ.

ಮೀಸೆಯಡಿಯಲ್ಲೇ ನಕ್ಕ ಎಸ್ಸೈ ಲಾಕಪ್ಪಿನಿಂದ ಹೊರಗೆ ಬಂದು ಫೋನು ಮಾಡಿದರು. ಹತ್ತು ನಿಮಿಷಗಳಲ್ಲಿ ಹಿರಿಪುಢಾರಿ ತನ್ನ ಕಾರಲ್ಲಿ ಹಾಜರಾದ. “ಏನು ಇನೆಸ್ಪೆಕ್ಟ್ರೇ ನೀವು ನಮ್ಮ ಹುಡುಗನನ್ನು ಕೂಡಿ ಹಾಕಿದ್ದೀರಲ್ಲಾ? ದಯವಿಟ್ಟು ಬಿಟ್ಟು ಬಿಡಿ” ಎಂದು ನಾಟಕೀಯವಾಗಿ ಕೈ ಮುಗಿದ.

ಇನೆಸ್ಪೆಕ್ಟರು ಲಾಕಪ್ಪಿನ ಬಾಗಿಲು ತೆಗೆದು ಮರಿಪುಢಾರಿಯನ್ನು ಹೊರಬಿಟ್ಟರು. “ಥ್ಯಾಂಕ್ಸು ಇನೆಸ್ಪೆಕ್ಟರೇ” ಎಂದು ಅವರ ಕೈ ಕುಲುಕಿ ಹಿರಿಪುಢಾರಿಯು ಮರಿಪುಢಾರಿಯನ್ನು ಅವುಚಿಕೊಂಡು ಹೊರಬಂದನು.

ಕಾರಲ್ಲಿ ಸಾಗುವಾಗ ಹಿರಿಪುಢಾರಿಯು ಕೇಳಿದನು: “ಹೇಳಪ್ಪ, ನೀನು ನಮ್ಮ ಪಾರ್ಟಿಗೆ ಈಗಲೇ ಸೇರುತ್ತೀಯೊ? ಅಥವಾ ಡಿಗ್ರಿ ಮುಗಿದ ಮೇಲೆ ಸೇರುತ್ತೀಯೋ?”

ಮರಿಪುಢಾರಿ ತಲೆತಗ್ಗಿಸಿ ಉತ್ತರಿಸಿದ:

“ಈಗಲೇ ಸೇರುತ್ತೇನೆ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೦೪
Next post ನಿಧಿಗಳು

ಸಣ್ಣ ಕತೆ