ಹೆಂಡತಿ

ಹೆಂಡತಿ

‘ಸಂಪಾಜೆ’ ನನ್ನ ತಾಯಿಯ ಮನೆ. ಅಲ್ಲಿ ನನ್ನ ತಾಯಿ, ತಂಗಿ, ತಂದೆ ಇದ್ದಾರೆ. ನಾನು ದೂರದ ಮಡಿಕೇರಿಯಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದೆ. ತಂದೆ-ತಾಯಿ ತಂಗಿಯನ್ನು ನೋಡುವ ಹೊಣೆಗಾರಿಕೆ ನನ್ನೊಡಲಿಗೆ ಸೇರಿತ್ತು.

ಅಂದು ಶಾಲೆಗೆ ರಜೆಯಿತ್ತು. ಅಮ್ಮ ಬಟ್ಟೆ ಒಗೆದು ಒಣಗಿಸಲು ಹಜಾರಕ್ಕೆ ಬಂದಳು. ತಂಗಿ ಹೊರಗಡೆಯಿಂದ ಓಡಿ ಬಂದ ನನ್ನ ಬಳಿ – “ಅಕ್ಕ ಭಾವನ ಕಾಗದ”

ಅಂತ ನನ್ನ ಕೈಗೆ ಕಾಗದ ಕೊಟ್ಟು ಓಡಿ ಹೋದಳು. ನನ್ನ ಮನಸ್ಸು ಸುಮಾರು ಒಂದು ವರ್ಷದ ಹಿಂದೆ ಓಡಿತು.

ಕೊಡಗಿನ ಗಡಿಯಾಚಿನ ಸಂಪಾಜೆಯಲ್ಲಿ ನಮ್ಮದೊಂದು ಚಿಕ್ಕ ಚೊಕ್ಕ ಕುಟುಂಬ. ತಂಗಿ ನಾನು ಅಪ್ಪ ಮತ್ತು ಅಮ್ಮ. ಅಪ್ಪನಿಗೆ ಪಕ್ಕದ ಎಸ್ಟೇಟ್‌ನಲ್ಲಿರುವ ಗಣಪತಿ ದೇವಸ್ಥಾನ ಪೂಜೆ, ಪೂಜೆಯಿಂದ ಬರುವ ನಾಲ್ಕು ಕಾಸಿನಿಂದಲೇ ಇಡೀ ಸಂಸಾರವನ್ನು ಅಮ್ಮ ಅಚ್ಚುಕಟ್ಟಾಗಿ ತೂಗಿಸಿಕೊಂಡು ಹೋಗುತ್ತಿದ್ದಳು. ಅಷಾಢ ಪಿತೃಪಕ್ಷಗಳಲ್ಲಿ ದೇವಸ್ಥಾನದಲ್ಲಿ ಭಕ್ತರಿಲ್ಲದೇ ನಾಲ್ಕು ಕಾಸಿನ ಸಿಗದೇ ಅಪ್ಪ ಚಡಪಡಿಸುತ್ತಿದ್ದರೆ ಅಮ್ಮ ಮಾತ್ರ ತೀರಾ ನಿರ್ಲಿಪ್ತ.

ಸಾಕ್ಷಾತ್ ದೈವೀ ಸ್ವರೂಪಿಣಿ ಅನ್ನಬಹುದು. ಯಾವತ್ತೂ ನಮ್ಮನ್ನು ಒಂದು ಪೆಟ್ಟು ಹೊಡದವಳಲ್ಲ. ಹಾಗೆಯೇ ಅಪ್ಪನ ಎದುರು ಒಂದೇ ಒಂದು ಮಾತು ಆಡಿದವಳಲ್ಲ.

ಅಪ್ಪ ತಮಗಿರುವ ಅಲ್ಪ ಸ್ವಲ್ಪ ದುಡಿಮೆಯಲ್ಲಿ ನನ್ನನ್ನು ಕಾಲೇಜು ಶಿಕ್ಷಣ ವರೆಗೆ ಓದಿಸಿದರು. ಇನ್ನೂ ವಿದ್ಯಾಭ್ಯಾಸ ಮುಗಿದ ತಕ್ಷಣ ದೂರದ ಮಲೆನಾಡು ಸೀಮೆಯ ತೀರ್ಥಹಳ್ಳಿಯಿಂದ ವರನೊಬ್ಬ ನನ್ನ ನೋಡಿ ಮೆಚ್ಚಿ ಮದುವೆಯಾಗುವ ಕುರಿತು ಹೇಳಿದಾಗ ತಂದೆ ಅವರ ಪೂರ್ವಾಪರ ವಿಚಾರಿಸಿದರು. ಹುಡುಗ ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತನ ಕೆಲಸ ಮಾಡುತ್ತಾನೆ. ತಂಗಿ, ತಾಯಿ ಚಿಕ್ಕ ಸಂಸಾರ ನಾಲ್ಕು ಎಕರೆ ಅಡಿಕೆ ತೋಟ ಇದೆ. ಇದನ್ನು ನೋಡಿದ ತಂದೆ ಹಿಂದೆ ಮುಂದೆ ನೋಡದೆ ಮದುವೆ ನಿಶ್ಚಯಿಸಿದರು.

ಆಷಾಢ ಮುಗಿದು ಶ್ರಾವಣದಲ್ಲಿ ಮದುವೆಶಾಸ್ತ್ರ ಮುಗಿಸಿಯೇ ಬಿಟ್ಟರು. ನನ್ನ ಬಳಿ ಅವರು ಈ ವಿಚಾರ ಚರ್ಚಿಸಲು ಇಲ್ಲ. ನನ್ನ ಇಷ್ಟಾನಿಷ್ಟ ಕೇಳಲೇ ಇಲ್ಲ. ಮದುವೆ ಮುಗಿದು ಹೊಯಿತು. ತಂದೆ ಸುಮಾರು ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೊಡುವ ಕುರಿತು ಮಾತನಾಡಿದ್ದು. ಅಲ್ಲಿ ಇಲ್ಲಿ ಸಾಲ ಮಾಡಿ ಎಂಬತ್ತು ಸಾವಿರ ಸೇರಿಸಿ ಕೊಟ್ಟು ಮದುವೆ ಮುಗಿಸಿದರು.

ಮದುವೆ ಮುಗಿಸಿ ಗಂಡನ ಮನೆ ಸೇರಿದಾಗಲೇ ಅಲ್ಲಿನ ವಾಸ್ತವತೆ ನನ್ನ ಗಮನಕ್ಕೆ ಬಂತು. ಅಲ್ಲಿ ಮನುಷ್ಯರೇ ಇರಲಿಲ್ಲ. ಎಲ್ಲರೂ ‘ಧನಪಿಶಾಚಿಗಳೇ’ ಎಲ್ಲ ಬರೀ ಹಣಕ್ಕಾಗಿಯೇ ಹುಟ್ಟಿರುವವರ ಹಾಗೇ ವರ್ತಿಸುವವರೇ.

ಅಪ್ಪ ಮದುವೆ ಮುಗಿಸಿ ನಾಲ್ಕು ತಿಂಗಳು ಕಳೆದಾಗ ಮಗಳನ್ನು ನೋಡಲು ಮನೆಗೆ ಬಂದಾಗ ಗಂಡನನ್ನುವ ಪ್ರಾಣಿ ಸಾಂಕೇತಿಕವಾಗಿಯಾದರೂ ಮಾವನನ್ನು ಮಾತಾಡಿಸಬಾರದೇ. ಬಂದವರ ಬಳಿ ಅತ್ತೆ ಮಾವ ಸೇರಿ ತಮಗೆ ಬರಬೇಕಾಗಿರುವ ವರದಕ್ಷಿಣೆ ಬಾಕಿ ಹಣ ಇಪ್ಪತ್ತು ಸಾವಿರ ರೂಪಾಯಿ ಮತ್ತು ತಮ್ಮ ಅಳಿಯನಿಗೆ ಒಂದು ಸ್ಕೂಟರ್ ಕೊಡಿಸುವಂತೆ ಒತ್ತಾಯ ಹೇರಿದಾಗ ನನ್ನ ಪರಿಸ್ಥಿತಿ ಹೇಗಾಗಿರಬೇಡ. ಮೊದಲೇ ಸಾಲ ಮಾಡಿಕೊಂಡು ಮದುವೆ ಮಾಡಿ ಅಪ್ಪ ಊರಿನವರ ಬಳಿ ಮಾತುಗಳನ್ನು ಕೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ನೆನೆದೇ ನನ್ನ ಮನ ದುಃಖದ ಮಡುವಿನಲ್ಲಿ ಮುಳುಗಿತು. ಆಗ ನಮ್ಮ ಅತ್ತೆ ಮಾವ, ಜೊತೆಗೆ ಗಂಡ ಎನ್ನುವ ಪ್ರಾಣಿ ಸಹ ಈ ಗಾಯಕ್ಕೆ ಉಪ್ಪನ್ನು ಹಾಕುತ್ತಿರುವುದನ್ನು ನೋಡಿ ನನ್ನ ಮನಸ್ಸು ಕುದಿಯತೊಡಗಿತ್ತು. ನಾನು ಯಾವಾಗಲೂ ಇಷ್ಟೊಂದು ಕ್ರೋಧಗೊಂಡಿರಲಿಲ್ಲವೇನೋ.

ಈ ಸಂಗತಿ ಕಳೆದು ಮೂರು ನಾಲ್ಕು ಮಾಸ ಕಳೆದಿರಬಹುದೇನೋ. ಅಪ್ಪ ನಮ್ಮ ಮನೆಗೆ ಬಂದು ದುರ್‍ದಾನ ತೆಗೆದುಕೊಂಡು ಹೋದ ಮೇಲೆ ನಮ್ಮ ಮನೆಯ ಕಡೆಗಂತೂ ತಲೆ ಹಾಕಿರಲಿಲ್ಲ. ಭಾದ್ರಪದ ಮಾಸದಲ್ಲಿ ನಮ್ಮವರು ನನ್ನ ಜೊತೆ ನನ್ನ ತವರು ಮನೆ ಕಡೆಗೆ ಬರುವ ಆಸೆ ವ್ಯಕ್ತಪಡಿಸಿದರು. ನನಗಂತೂ ಅಚ್ಚರಿ. ಇವತ್ತು ಸೂರ್‍ಯ ಯಾವ ಕಡೆಯಲ್ಲಿ ಹುಟ್ಟಿದ್ದಾನೆ ಎನ್ನುವ ಅನುಮಾನ ನನ್ನನ್ನು ಕಾಡತೊಡಗಿತು. ನಮ್ಮವರಲ್ಲಾದ ಈ ಬದಲಾವಣೆ ನನಗೆ ಅಚ್ಚರಿಯ ಜೊತೆ ಸಂತೋಷವನ್ನು ತಂದಿತ್ತು. ನಮ್ಮವರ ಜೊತೆ ತೀರ್ಥಹಳ್ಳಿಯಿಂದ ಮಂಗಳೂರು ತಲುಪಿ ಸುಳ್ಯಕ್ಕೆ ಬಂದು ಅಲ್ಲಿಂದ ಸಂಪಾಜೆ ಗೆ ಬಸ್ ಹತ್ತಿದೆವು. ರಾತ್ರಿ ಸಂಪಾಜೆ ತಲುಪಿದೆವು. ಅಳಿಯ ಮಾನವ ಮನೆಗೆ ಬಂದು ಹಬ್ಬವನ್ನು ಮುಗಿಸಿ ಊರಿಗೆ ಹೊರಟಾಗ ಅಮ್ಮ ಅವರನ್ನು ಬಿಟ್ಟು ಬರಲು ಬಸ್ಟಾಂಡಿಗೆ ಹೊರಟರು, ಅಳಿಯನನ್ನು ಬಸ್ಸು ನಿಲ್ದಾಣ ಕ್ಕೆ ಕಳಿಸಿ ಬಸ್ಸು ಹತ್ತಿಸಿ ಬಂದ ಅಪ್ಪಯ್ಯನ ಮುಖದಲ್ಲಿ ಗೆಲುವೇ ಇರಲಿಲ್ಲ.

ಒಂದು ವಾರ, ಎರಡು ವಾರ, ತಿಂಗಳು ಕಳೆದಾಗಲೂ ಇವರು ನನ್ನನ್ನು ಕರೆದುಕೊಂಡು ಹೋಗಲು ಬಾರದಿರುವಾಗ ನನ್ನ ಮನಸ್ಸಿನಲ್ಲೇನೋ ಅಳುಕು ಆತಂಕ ಕಾಣಿಸತೊಡಗಿತು. ಆಗಲೇ ಅಮ್ಮನ ಬಳಿ ವಿಚಾರ ತಿಳಿಯಿತು. ಉಳಿದಿರುವಂತಹ ವರದಕ್ಷಿಣೆ ಹಣ ಮತ್ತು ಸ್ಕೂಟರ್ ಸಮೇತ ಬಂದರೆ ಮಾತ್ರವೇ ನನಗೆ ಆ ಮನೆ ಪ್ರವೇಶ ಎಂಬುದು ಸ್ಪಷ್ಟವಾಗಿತ್ತು.

ನಾನು ಬಹಳ ಯೋಚಿಸಿ ಮಡಿಕೇರಿಯಲ್ಲಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದೆ. ನನ್ನ ದುಡುಮೆ ಪ್ರಾರಂಭಿಸಿ ಈಗ ಎರಡು ವರ್ಷ ಕಳೆದಿದೆ. ಪ್ರತಿ ತಿಂಗಳಿಗೂ ಇವರದೊಂದು ಕಾಗದ ಬರುವುದು ಮಾಮೂಲಾಗಿತ್ತು. ಆಗೆಲ್ಲಾ ಅಮ್ಮ ಬಳಿ ಬಂದು ಕೇಳುವುದು ಒಂದು ಪ್ರಶ್ನೆ.

– “ಅಳಿಯಂದಿರು ಯಾವಾಗ ಬರುತ್ತಾರಂತಮ್ಮ?”

ಅದಕ್ಕೆ ನಗುವೊಂದೇ ನನ್ನ ಉತ್ತರವಾಗಿರುತಿತ್ತು. ಹಾಗೆ ಈ ಕಾಗದ ಸಹ ಬಂದಿದೆ. ಅದರಲ್ಲಿ

“ಪ್ರಿಯಳಿಗೆ

ನಾನು ಇಲ್ಲಿ ಕ್ಷೇಮ. ಅಲ್ಲಿ ನೀವುಗಳೆಲ್ಲಾ ಕ್ಷೇಮವೆಂದು ನಂಬಿರುತ್ತೇನೆ. ಈ ಬಾರಿ ತೀರ್ಥಹಳ್ಳಿ ಕಡೆ ಮಳೆ ಜಾಸ್ತಿ ಇದೆ. ಈ ಬಾರಿಯ ಮಳೆಯಲ್ಲಿ ಎರಡು ಬಾರಿ ತುಂಗೆಯಲ್ಲಿ ರಾಮಮಂಟಪವವು ಮುಳುಗಿ ಹೋಗಿತ್ತು, ಅಡಿಕೆಗೆ ಈಗ ಬಂಪರ್ ರೇಟು ಬಂದಿದೆ. ಹೀಗಾಗಿ ತೋಟದ ಕೆಲಸಕ್ಕೆ ಜನ ಸಿಗುವುದೇ ಕಷ್ಟ ಇದೆ. ಸ್ಪ್ರೇ ಮಾಡಲು ಒದ್ದಾಟ ಮಾಮೂಲಾಗಿದೆ. ಮಾಮ, ಅತ್ತೆ ನಿನ್ನ ನೆನಪಿಸಿಕೊಳ್ಳಿ ದಿನವಿಲ್ಲ.

ಅಪ್ಪನ ಬಳಿ ಹೇಳಿ ಆದಷ್ಟು ಬೇಗ ಹಣವನ್ನು ಹೊಂದಿಸಿಕೊಂಡು ಬಾ. ನಾನು ನಿನಗಾಗಿ ಕಾಯುತ್ತಿದ್ದೇನೆ.

ಇಂತು

ನಿನ್ನವನು

ಈ ಪತ್ರವು ಪ್ರತಿ ಪತ್ರದ ಕಾರ್ಬನ್ ಕಾಪಿಯಂತೆಯೂ ಇತ್ತು. ಪತ್ರವನ್ನು ಓದಿ ಮುಗಿಸಿ, ಒಂದು ನಿರ್ಧಾರಕ್ಕೆ ಬಂದು. ಗಟ್ಟಿಯಾದ ನಿರ್ಧಾರಕ್ಕೆ ಬಂದಂತೆ ಮನಸ್ಸು ಹೇಳಿದಂತೆ ಕೂಡಲೇ ಕಾಕನ ಅಂಗಡಿಯ ಕಡೆಗೆ ಓಡಿದೆನು. ಕಾಕನ ಬಳಿ ಎರಡು ಬಿಳಿ ತಾನು ಹಾಳೆಯನ್ನು ನೀಲಿ ಇಂದಿನ ಪೆನ್ನನ್ನು ತಂದೆನು.

ಕೂಡಲೇ ಕುಳಿತು ಬರೆಯಲಾರಂಬಿಸಿದೆನು.

ಆತ್ಮೀಯರೇ

ನಿಮ್ಮನ್ನು ‘ಆತ್ಮೀಯರೆ’ ಎಂದು ಕರೆಯಲು ನನ್ನ ಒಳ ಮನಸ್ಸು ಒಪ್ಪುತ್ತಿಲ್ಲ. ಆದರೇನು ಮಾಡಲಿ. ಪತ್ರವನ್ನು ಪ್ರಾರಂಭ ಮಾಡುವ ಸೌಜನ್ಯಕ್ಕಾದರು ಹೀಗೆ ಬರೆಯಲೇ ಬೇಕಲ್ಲವೇ?

ನಾನು ಯಾವ ಜನ್ಮದಲ್ಲಿ ಮಾಡಿದ ತಪ್ಪಿಗೆ ದೇವರು ನನಗೆ ನಿಮ್ಮಂತಹ ಗಂಡನನ್ನು ಕೊಟ್ಟನೋ ಎಂಬ ಕೊರಗು ನನ್ನ ಮನದಾಳದಲ್ಲಿ ಆಗಾಗ ಕೊಡುತ್ತಿರುತ್ತದೆ. ನಾನು ನನ್ನಷ್ಟಕ್ಕೆ ಕಾಲೇಜು ವಿದ್ಯಾಭ್ಯಾಸ ಮುಗಿಸಿ ಮುಂದಿನ ಓದು ಅಥವಾ ಕೆಲಸಕ್ಕಾಗಿ ಹುಡುಕುತ್ತಿರುವಾಗ ನೀವೇ ಸಂಬಂಧ ಹುಡುಕಿಕೊಂಡು ಬಂದಿರಾ. ಹೇಳಿ ನಾನು ನಿಮಗೇನು ಅನ್ಯಾಯ ಮಾಡಿದ್ದೆ? ನನ್ನ ಸ್ಥಿತಿ ನಿಮ್ಮ ತಂಗಿಗೇನಾದರೂ ಬಂದಿದ್ದರೆ ನೀವು ಏನು ಮಾಡುತ್ತಿದ್ದಿರಾ? ನಿಮ್ಮನ್ನು ದೂಷಣೆ ಮಾಡಿ ಏನು ಪ್ರಯೋಜನ ಹೇಳಿ.

ನಾನು ಇಲ್ಲಿ ಶಾಲೆಯಲ್ಲಿ ಕೆಲಸ ಮಾಡಿ ಬಂದ ಹಣವನ್ನು ಉಳಿಸಿ ನಿಮಗೆ ಕೊಡಬೇಕಾದ ವರದಕ್ಷಿಣೆ ಬಾಕಿ ಇಪ್ಪತ್ತು ಸಾವಿರ ಹಣವನ್ನು ಒಟ್ಟು ಮಾಡಿರುತ್ತೇನೆ. ರಾಮ ದಶರಥನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ವನವಾಸಕ್ಕೆ ಹೋದಂತೆ ನಮ್ಮಪನನ್ನು ವಚನಭ್ರಷ್ಟನಾಗದಂತೆ ತಡೆಯುವ ಸಲುವಾಗಿ ನಾನು ಹಣವನ್ನು ಉಳಿಸಿ ನಿಮಗಾಗಿ ತೆಗೆದಿರಿಸಿರುತ್ತೇನೆ. ನಾನು ಇನ್ನು ಮುಂದೆ ನಿಮ್ಮ ಜೊತೆಗೆ ಸಂಸಾರವನ್ನು ಮಾಡುತ್ತೇನೆಂಬ ಆಸೆ ಖಂಡಿತ ಬಿಟ್ಟು ಬಿಡಿ.

ನಿಮ್ಮ ಜೊತೆಗೆ ನನ್ನ ಮದುವೆಯಾಗಿದೆಯೆಂಬುದು ಒಂದು ಕೆಟ್ಟ ಕನಸೆಂದು ಮರೆತು ನಾನು ನನ್ನ ಮುಂದಿನ ಬದುಕನ್ನು ಸಾಗಿಸುವ ಪ್ರಯತ್ನ ಮಾಡುತ್ತಿರುವೆ. ನಾನು ಕೊಡುವ ಹಣ ನೀವು ಮುಂದೆ ಮದುವೆಯಾದರೆ ಅದಕ್ಕೆ ಕೊಡುವ ಉಡುಗೊರೆಯೆಂದು ತಿಳಿಯಿರಿ. ಹಾಗೆ ಮುಂದೆ ಬರುವ ನನ್ನ ತಂಗಿಗೆ ನನ್ನ ಹಾಗೆ ಮಾನಸಿಕ ವ್ಯಥೆ ನೀಡದೆ ಅವಳಿಗೊಂದು ಅರ್ಥಪೂರ್ಣ ಬದುಕು ನೀಡಿರಿ. ಇದು ನನ್ನ ಬಯಕೆ”

ಇಂತು ನಿಮ್ಮವಳಲ್ಲದ
ಶೀಲಾ

ಪತ್ರ ಬರೆದು ಟಪಾಲಿಗೆ ಹಾಕಲು ಹೊರಟೆ. ಅಮ್ಮ ನನ್ನನ್ನು ಪ್ರಶ್ನಾರ್ಥಕವಾಗಿ ನೋಡುತ್ತಿದ್ದಳು. ಆಕೆಯು ನನ್ನ ಕುರಿತಾಗಿ ಸಿಹಿ ಕನಸಿನ ಕೋಪವನ್ನು ಕಟ್ಟಿ ಕುಳಿತಿದ್ದಳು. ಆದರೆ ಆಕೆಯ ಆ ನಿರೀಕ್ಷೆ ನಾನು ಸ್ಪಂದಿಸುವುದಕ್ಕೆ ಆಗದಿರುವುದಕ್ಕೆ ನನಗೆ ನೋವಾದರೂ ನನ್ನ ಒಳಮನಸ್ಸು ನನ್ನ ಗಟ್ಟಿ ನಿರ್ಧಾರವನ್ನು ಒಪ್ಪಿಕೊಂಡಿತೆಂಬುದಂತು ಸತ್ಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಕ್ಕಿಗಳ ರೋದನ
Next post ಕುಳಿರ್ ಮಂಜು

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

cheap jordans|wholesale air max|wholesale jordans|wholesale jewelry|wholesale jerseys