ಆಂಟಿಯರು ತುಂಟಿಯರಾ?

ಆಂಟಿಯರು ತುಂಟಿಯರಾ?

ಹೀಗಂದೆ ಅಂತ ಗಾಬರಿಯಾಗ್ಬೇಡಿ ಆಂಟಿಯರೆ, ವಿಷಯ ಅಷ್ಟೇನೂ ಗಂಭೀರದಲ್ಲವಾದರೂ ಇತ್ತೀಚೆಗೆ ನಿಮ್ಮ ಘನತೆ, ಗೌರವ, ಗಾಂಭೀರ್ಯ, ವರ್ಚಸ್ಸಿಗೆ ಧಕ್ಕೆ ತರುವಂತಹ ಅಪಪ್ರಚಾರ ನಡೆಯುತ್ತಿದೆಯಲ್ಲ ಹೀಗೇಕೆ? ಆಂಟಿಯರೆಂದರೆ ಗಿಳಿಕಚ್ಚಿದ ಹಣ್ಣು ಮೈಸುಖ ಉಂಡ ಅವರ ದೇಹದ ಪ್ರತಿ ಅಂಗವೂ ಅರಳಿ ಹೂವಾಗಿರುತ್ತದೆ. ಹುಡುಗಿಯರು ದೋರೆಗಾಯಾದರೆ ಅಂಟಿಯರು ರಸಪುರಿ ಮಾವು ! ಅನುಭವಸ್ಥ ಆಂಟಿಯರೆಲ್ಲಿ? ಪ್ರೀತಿ ಎಂದರೆ ಮಾರು ದೂರ ಹಾರುವ ನಾಟಿ ಹುಡುಗಿಯರೆಲ್ಲಿ? ಹೀಗೆ ಪುರಾಣ ಬಿಚ್ಚುತ್ತಾ ನಿಮ್ಮನ್ನು ಅಟ್ಟಕ್ಕೆ ಏರಿಸಿ ಬರೆದು ಕಾಸು ಮಾಡುವ ಪತ್ರಕರ್ತರು, ಸಿನಿಮಾ ಹೊಸೆದು ದುಡ್ಡು ದೋಚುವ ಮಂದಿ ಹೆಚ್ಚುತ್ತಿದ್ದಾರೆ. ‘ಅಂಕಲ್ ಆಫೀಸಿಗೆ ಆಂಟಿ ಪಿಕ್ಚರ್ಗೆ’ ಎಂದು ಆಟೋದವ ಕೂಡ ಆಟೋದ ಮೇಲೆ ಬರೆಸಿ ಮಜಾ ತಗೋತಾನಲ್ಲಾರೀ. ನೀವು ಗಮನಿಸಿಲ್ಲವೆ ? ಗಮನಿಸಿದರೂ ಅದೆಷ್ಟು ತಾಳ್ಮೆಯಿಂದ ಇದ್ದೀರಲ್ಲ! ಏನಂದರೂ ನಿಮಗೆ ವಿಚಾರವಂತಿಕೆ ಮೈನಸ್ ಬಿಡಿ. ಟಿವಿ ನೋಡಿದಷ್ಟು ಪುಸ್ತಕ ಓದೋಲ್ಲ. ಅಲಂಕಾರಕ್ಕೆ ಟೈಂವೇಸ್ಟ್ ಮಾಡಿದಷ್ಟು ವ್ಯವಹಾರ ವಿವೇಕ ಬೆಳೆಸಿ ಕೊಳ್ಳಲು ಟೈಮ್ ಸೇವ್ ಮಾಡಲ್ಲವಾದ್ದರಿಂದ ನಿಮ್ಮನ್ನು ನೋಡಿ ಬೀದಿ ನಾಯಿಗಳೂ ಬೊಗಳುವಂತಾಗಿದೆ. ಹೀಗೆ ಮೌನವಾಗಿದ್ದಿರೋ ಹಿಂಬಾಲಿಸುತ್ತವೆ ಮೈ ಮರೆತಿರೋ ಮನೆ ಒಳಗೂ ನುಸುಳುತ್ತವೆ ಮೈ ಸಿಕ್ಕುತ್ತದೆ ಹುಷಾರು.

ಅಂಕಲ್ ನ ಆಫೀಸಿಗೆ ಸಾಗು ಹಾಕಿ ಮಕ್ಕಳನ್ನು ಕಾನ್ವೆಂಟಿಗೆ ತಳ್ಳಿ ಡ್ರೆಸ್ ಮಾಡಿಕೊಂಡು ಬೀದಿ ಸುತ್ತುವ ಇಲ್ಲವೆ ಬಾಗಿಲಲ್ಲಿ ನಿಂತ ಪಕ್ಕದಾಕೆಯೊಂದಿಗೆ ಮುಸಿ ಮುಸಿ ನಗುತ್ತಾ ಬೀದಿ ಪೋರನತ್ತ ಎದುರು ಮನೆ ಪಡ್ಡೆ ಹುಡುಗರತ್ತ ಓರೆನೋಟ ಬೀರಿ ಅವರುಗಳ ಎಳೆಯ ಹೃದಯಗಳನ್ನು ಛಿದ್ರ ಮಾಡುವ, ಕಾಲೇಜಿಗೆ ಚಕ್ಕರ್ ಹೊಡೆವಂತೆ ಪ್ರೇರೇಪಿಸುವ ಆಯಸ್ಕಾಂತೆಯರು ನೀವು ಬಜಾರಿಗೆ ಹೊರಟರೆ ನಿಮ್ಮನ್ನು ಹಿಂಬಾಲಿಸುವಷ್ಟು ಥ್ರಿಲ್ ಕೊಡುವ, ಓದು ಮರೆತು ರಾತ್ರಿಯೆಲ್ಲಾ ಕಿಟಕಿ ಬಳಿ ಕೂತು ನಿಮ್ಮ ಮನೆ ಬಾಗಿಲು ತೆರೆದಿತೇ ನೀವು ಕಂಡಿರಾ ಎಂದು ನಿರೀಕ್ಷಿಸುವಷ್ಟು ಪಡ್ಡೆಗಳಿಗೆ ಮೋಡಿ ಹಾಕುವ ಮಹಿಮಾಮಣಿಯರು ನೀವು. ಮದುವೆಯಾಗಿ ಮಕ್ಕಳಾದರೂ ನಿಮ್ಮ ಮಾಸದ ಚೆಲುವಿನ ಬಗ್ಗೆ ‘ಈಗೊ’ ಬೆಳೆಸಿಕೊಂಡು ಸುಖಿಸುವ, ‘ಈಗ್ಲೂ ನನ್ನನ್ನು ಹುಡುಗರು ನೋಡ್ತಾರೆ ಕಣ್ರಿ ಅನಿಷ್ಟಗಳು’ ಎಂದು ಸಿಡುಕುತ್ತಲೇ ಬೀಗುವ ತುಂಬಿದೆದೆಯ ಮೇಲೆ ಠೇಂಕಾರದಿಂದ ಮಾಂಗಲ್ಯದ ಸರ ನೇತು ಬಿಡುವ ನಿಮ್ಮ ಮೋಜೇ ಮೋಜು.

ಆಗ ತಾನೆ. ಯೌವ್ವನಕ್ಕೆ ಪಾದಾರ್ಪಣೆ ಮಾಡಿದ ಹುಡುಗರಿಗೆ ಹುಡುಗಿಯರು ಸುಲಭವಾಗಿ ದಕ್ಕುವುದಿಲ್ಲವೆಂಬ ಸತ್ಯ ಗೊತ್ತು. ಅದಕ್ಕಾಗಿ ತಪ್ಪೆಂದು ತಿಳಿದಿದ್ದರೂ ಆಂಟಿಯರ ಬೆನ್ನು ಬೀಳುವುದು ವಯಸ್ಸಿನ ತಪ್ಪು – ಅಮಲು ಅನ್ನಿ, ಆಂಟಿಯರು ಒಂದಿಷ್ಟು ಮಾತನಾಡಿಸಿದರೂ ಸಾಕು ಆಂಟಿಯ ಮಕ್ಕಳನ್ನು ಆಕೆಗಿಂತಲೂ ಹೆಚ್ಚು ಪ್ರೀತಿಸುವ ಅವುಗಳು ಪ್ಯಾಂಟ್ ಮೇಲೆ ಉಚ್ಚೆ, ಇಸ್ಸಿ ಮಾಡಿದರೂ ಸಹಿಸುವ, ತಮ್ಮ ಸಿಗರೇಟ್ ದುಡ್ಡಿನಲ್ಲೇ ಮಕ್ಕಳಿಗೆ ಚಾಕೋಲೇಟ್ ಕೊಡಿಸುವ ಪಡ್ಡೆಗಳು ತಮ್ಮ ಬೈಸಿಕಲ್ ಅಥವಾ ಬೈಕ್ ಮೇಲೆ ಮಕ್ಕಳನ್ನು ಕಾನ್ವೆಂಟಿಗೆ ದಿನವೂ ಬಿಟ್ಟು ಬರಲು ತಯಾರ್. ತರಕಾರಿ ತಂದುಕೊಡುವ ಆಂಟಿಯರ ಸೀರೆ ಇಸ್ತ್ರಿ ಮಾಡಲೂ ಹಿಂಜರಿಯದ ಪಡ್ಡೆ ಹುಡುಗರಲ್ಲೂ ಸಾಧು ಮನಸ್ಸನ್ನು ಅರಿತ ಜಾಣೆ ಆಂಟಿ, ಅವನನ್ನು ಬಿಟ್ಟಿ ಮನೆ ಚಾಕರಿಗೆ ಇಟ್ಟುಕೊಂಡು ಬಿಡುತ್ತಾಳೆ. ತನ್ನ ಅರ್ಧ ಕೆಲಸ ತಪ್ಪಿಸಿದನಲ್ಲ ಪಾಪದ ಹುಡುಗ ಇಷ್ಟವಾಗುತ್ತಾನೆ. ಇವನು ಅಂಕಲ್ ಗೆ ಸೇವಕನೂ ಆಗಿ ನಂಬಿಕೆ ಗಿಟ್ಟಿಸಿ ಯಾವಗೆಂದರೆ ಆವಾಗ ಆಂಟಿ ಮನೆ ನುಗ್ಗುವಷ್ಟು ಸ್ವಾತಂತ್ರ ಪಡೆಯುತ್ತಾನೆ. ಏನೇ ಮಾಡುತ್ತಿದ್ದರೂ ಅವನ ಕಣ್ಣೆಲಾ ಆಂಟಿಯ ಅಂಗಾಂಗಳ ಮೇಲೆ ಕೇಂದ್ರಿಕೃತ. ಇಷ್ಟಾದರೂ ಅವನ ಬಗ್ಗೆ ಅಸಡ್ಡೆಯನ್ನೇ ತೋರುವ ಆಂಟಿ ಒಳಗೇ ಅವನ ಜಿಮ್ ಬಾಡಿಗೆ, ಪುಟಿಯುವ ಯವ್ವನಕ್ಕೆ ಪಾದರಸದಂತಹ ನಡವಳಿಕೆ ಸದಾ ನಗುತ್ತಾ ಇಷ್ಟವಾಗುವಂತೆ ಮಾತನಾಡುವ ಅವನ ಸ್ಪೆಷಾಲಿಟಿಯನ್ನು ಮೆಚ್ಚುತ್ತಾಳೆ. ಅಂವ ಇಂದಿನ ಸಿನಿಮಾಗಳ ಎಳೆ ಹೀರೋನಂತೆಯೇ ಕಂಡು ಬಿಡುತ್ತಾನೆ. ಮನಸ್ಸು ಜೋಕಾಲಿ ! ಸದಾ ಸಿಡಕುವ, ತನ್ನ ಸೇವೆ ಮಾಡಲೆಂದೇ ತಾಳಿ ಕಟ್ಟಿಸಿಕೊಂಡು ಬಂದಿದ್ದಾಳೆಂಬ ಪೊಗರು ತೋರುವ, ಕಾಸು ಕಾಸಿಗೂ ಕಂಜೂಸ್ತನ ಕೇಳಿದ್ದನ್ನೊಂದೂ ಕೊಡಿಸದ, ಬಾಗಿಲಲ್ಲಿ ನಿಂತರೂ ಸಹಿಸದ ಬಜಾರ್‍ಗೆ ಹೋದರೂ ಬಯ್ಯುವ ತಾನೂ ಸಹ ಎಲ್ಲಿಗೂ ಕರೆದೊಯ್ಯದ ರಾತ್ರಿ ಕುಡಿದು ತಿಂದು ಬಂದು ಹಿಂಡಿ ಹಿಪ್ಪೆ ಮಾಡುವ ಅಂಕಲ್ ಅಂದ್ರೆ ಆಂಟಿಗೆ ಅಲರ್ಜಿ ಶುರುವಾಗೋದೇ ಆಗ. ಒರಟು ಮುಖ ಬೋಳಾಗುತ್ತಿರುವ ತಲೆ, ಸಿಗರೇಟು ಘಾಟು, ಬೆಳೆಯುತ್ತಿರುವ ಪುಟ್ಟಿಯಂತಹ ಹೊಟ್ಟೆ, ಬೆಳೆಯದೆ ನಿಂತ ಮೊದಲಿನ ಪ್ರೀತಿ ಕಾಳಜಿ, ಬೆನ್ನು ಹತ್ತಿದ ಬಿಪಿನೋ ಶುಗರ್‍ನ ಹಾವಳಿ ಆಂಟಿಯಲ್ಲಿ ಆಂಟಿಹೀರೋಯಿನ್ ಭಾವನೆಗಳನ್ನು ಮೂಡಿಸುತ್ತವೆ. ನಿಧಾನವಾಗಿ ಪಡ್ಡೆ ಹುಡುಗನ ತೆಕ್ಕೆಗೆ ಬೀಳುತ್ತಾಳೆ. ಇವಳಿಗೆಂತದೋ ಹೊಸ ಸುಖ ಸಿಗುತ್ತದೆ. ಪಡ್ಡೆ ಓದದೆ ಬರೆಯದೆ ಆಂಟಿ ಚಾಕರಿಗೆ ನಿಂತು ಪರೀಕ್ಷೆಗಳಲ್ಲಿ ಪಲ್ಟಿ ಹೊಡೆದು ಕಡೆಗೊಂದು ದಿನ ಅಂಕಲ್’ನ ಗುಮಾನಿಗೆ ಗುರಿಯಾಗಿ ಉಗಿಸಿಕೊಂಡು ‘ಗೆಟ್‌ಔಟ್’ ಆಗುವ ಪಡ್ಡೆ ಅವಳನ್ನು ಮರೆಯಲಾಗದೆ ದೇವದಾಸ್ ಆಗಿ ಬಿಡುತ್ತಾನೆ. ಅವಳ ಗಂಡ ವರ್ಗ ಮಾಡಿಸಿಕೊಂಡು ಊರು ಬಿಡುತ್ತಾನೆ. ಅಲ್ಲಿಗೆ ಪಡ್ಡೆಯ ಬಾಳು ಖತಂ, ಆಂಟಿಯರ ಲೋಕದಲ್ಲಿ ಸ್ವರ್ಗವೂ ಉಂಟು ನರಕವೂ ಉಂಟು. ಹೀಗೆಲ್ಲಾ ಆಂಟಿಯರ ಬಗ್ಗೆ ಕಥೆ ಕಟ್ಟಿ ಬರೆಯೋದು ಸಿನಿಮಾ ತೆಗೆಯೋದು ಈವತ್ತು ಘನಂದಾರಿ ಕೆಲಸವಾಗಿಬಿಟ್ಟಿದೆ. ನಿಜವಾಗಲೂ ಆಂಟಿಯರು ಹೀಗೆಲ್ಲಾ ಇರ್ತಾರೇನ್ರಿ ? ಇದೆಲಾ ಬಹಳಷ್ಟು ಸುಳ್ಳು ಬಿಟ್ಟಾಕಿ. ಹೀಗೆಲ್ಲಾ ಹುಡುಗರನ್ನು ಆಟ ಆಡಿಸಲು ಅವರಿಗೆಲ್ಲಿದೆ ಬಿಡುವು?

ಒಂದಿಷ್ಟು ಆಂಟಿಯರ ದಿನಚರಿ ಗಮನಿಸಿ ನೊಡಿ ಹೇಗಿರುತ್ತೆ ; ಬೆಳಿಗ್ಗೆ ನಾವೆಲಾ ಏಳುವ ಮುಂಚೆಯೇ ಏಳುತ್ತಾರೆ. ನೀರು ತುಂಬಿ ಬಾಯ್ಲರೊ, ಗಿಜರ್‍ನೋ ಆನ್ ಮಾಡಿದವರೆ, ಗಂಡ ಮಕ್ಕಳು ಏಳುವ ಹೊತ್ತಿಗೆ ಕಾಫಿ ರೆಡಿ, ಅಳುವ ಮಕ್ಕಳಿಗೆ ಬ್ರೆಡ್ಡೋ ಬಿಸ್ಕತ್ತೊ ತಿನ್ನಿಸಿ ಆತುರಾತುರವಾಗಿ ಸ್ನಾನ ಮುಗಿಸುತ್ತಾರೆ. ತಿಂಡಿಗೆ ತಯಾರಿ, ತಿಂಡಿ ತಯಾರಿಸುತ್ತಲೇ ಮಕ್ಕಳಿಗೆ ಸ್ನಾನ ಅವರ ಮೈಕೈ ಒರೆಸಿ ಕಾನ್ವೆಂಟ್ ಯೂನಿಫಾರಂ ತೊಡಿಸಿ ತಲೆ ಬಾಚಿ, ಮುಖಕ್ಕೆ ಪೌಡರ್ ಪೂಸುವ ಕ್ರಿಯೆ. ಮಧ್ಯೆ ತಿಂಡಿಗೆ ಒಗ್ಗರಣೆ ಮತ್ತೊಂದು ಡೋಸ್ ಕಾಫಿಗೆ ತಯಾರಿ, ಮಕ್ಕಳಿಗೆ ತಿಂಡಿ ತಿನ್ನಿಸಿ ಕಾನ್ವೆಂಟಿಗೆ ಕಳಿಸುವ ಇಲ್ಲವೆ ತಾವೇ ಕಾನ್ವೆಂಟಿಗೆ ಬಿಟ್ಟು ಓಡುತ್ತಾ ಮನೆ ಸೇರುವುವರೂ ಉಂಟು. ನೆಕ್ಸ್ಟ್, ಗಂಡನ ಸ್ನಾನಕ್ಕೆ ಅಣಿ. ಆತ ದೇವರಿಗೆ ಹೂ ಮುಡಿಸಿ ಬರುವುದರೊಳಗೆ ಟೇಬಲ್ ಮೇಲೆ ತಿಂಡಿ ಹಬೆಯಾಡುತ್ತಿರುತ್ತದೆ. ನಂತರ ಆತನ ಉಡುಪು ಧರಿಸುವಿಕೆಯಲ್ಲೂ ಆಂಟಿ ಇರಬೇಕು. ಬಟನ್ ಹೋಗಿದ್ರೆ ಹಾಕಿ ಬೂಟ್ ಒರೆಸಿಕೊಡಬೇಕು. ಗಂಡ ಆಫೀಸಿಗೆ ಹೋಗುತ್ತಲೇ ಬಾಗಿಲು ದೂಡಿ ಅಡಿಗೆಗೆ ತಯಾರಿ ನಡೆಸುತ್ತಲೇ ಕಸಮುಸರೆ ಮುಗಿಸಿ ಮನೆ ಒಪ್ಪ‌ಓರಣ, ಕೌಂಪೌಂಡಿಗೆ ನೀರು ಹೊಸ್ತಿಲಿಗೆ ಕುಂಕುಮ ಕಾಣಿಸಿ ದೇವರಿಗೆ ಊದುಬತ್ತಿ ತೋರಿಸಿ ಗಂಡು ಮಕ್ಕಳ ಶ್ರೇಯಸ್ಸಿಗೆ ಪ್ರಾರ್ಥಿಸಿದ ಆಂಟಿ, ತರಕಾರಿ ಹೆಚ್ಚಿ ಕಾಯಿ ತುರಿದು ಸಾಂಬಾರ್‌ಗೆ ಸಿದ್ದ ಮಾಡುತ್ತಾಳೆ. ಅನ್ನ ಸಾಂಬಾರ್ ಜೊತೆಗೆ ಚಪಾತಿ, ರೊಟ್ಟಿ ಇಲ್ಲವೆ ಮುದ್ದೆ (ಹಿಟ್ಟು) ಯಾವುದೋ ಗಂಡನಿಗೆ ಇಷ್ಟವಾದೊಂದನ್ನು ಮಾಡಿಟ್ಟಳೆಂದರೆ ಕಾನ್ವೆಂಟಿಗೆ ಹೋಗಲು ತಯಾರಿ. ಮುಖ ತೊಳೆದು, ಸೀರೆ ಬದಲಿಸಿ ಮಕ್ಕಳಿಗಾಗಿ ಊಟದ ಕ್ಯಾರಿಯರ್ ಹಿಡಿದು ಓಟ. ಮಕ್ಕಳಿಗೆ ಊಟ ಮುಗಿಸಿ ಕೈಬಾಯಿ ಕ್ಲೀನ್ ಮಾಡಿ ನಿಧಾನವಾಗಿ ಕಾನ್ವೆಂಟಿನಿಂದ ಮನೆ ಸೇರುವ ಸಮಯಕ್ಕೆ ಅಂಕಲ್ ಹಾಜರ್. ಅಂಕಲ್ಗೆ ಬಡಿಸುತ್ತಲೇ ತಾನೂ ಊಟ ಮುಗಿಸಿ ಆತ ಆಫೀಸಿಗೆ ಹೋಗಲು ಸ್ಕೂಟರ್ ಏರಿದಾಗ ಟಾಟಾ ಮಾಡಿ ನಕ್ಕು ಒಳ ಬಂದರೆ ತಿಂದ ಪಾತ್ರೆ ಪಡುಗ ತೊಳೆವ ಕೆಲಸ. ಅದು ಮುಗಿಸುವಾಗಲೆ ಮಧಾಹ್ನ ೪ ಗಂಟೆ ಹೊಡೆದಿರುತ್ತೆ. ಯಾವುದೋ ಒಂದು ಟಿವಿ ಸೀರಿಯಲ್ ನೋಡುವ ಹೊತ್ತಿಗೆ ಕಾನ್ವೆಂಟ್ ಬಿಡುವ ಸಮಯ. ಕೆಲವರಿಗಂತೂ ಮಕ್ಕಳನ್ನು ಕರೆ ತರುವ ಡ್ಯೂಟಿ ಬೇರೆ. ಅವುಗಳ ಯೂನಿಫಾರಂ ಕಳಚಿ ಕಲರ್ ಡ್ರೆಸ್ ತೊಡಿಸಿ ಅವುಗಳ ಬೇಕು ಬೇಡಗಳ ರಾಡಿ ನೋಡಿಕೊಳ್ಳುವಷ್ಟರಲ್ಲಿ ಅಂಕಲ್ ಸವಾರಿ. ಆತನಿಗೆ ಕಾಫಿ, ಲೈಟಾಗಿ ಕುರುಕಲು ತಿಂಡಿ ಸಮರ್ಪಣೆಯಾಗಬೇಕು.

ಆತ ಧಿರಿಸು ಧರಿಸಿ ಬಜಾರ್‍ಗೆ ಹೊರಟ ನಂತರ ಮುಖ ತೊಳೆದು ದೇವರಿಗೆ ದೀಪ ಹಚ್ಚಿ ಮತ್ತೆ ರಾತ್ರಿಯ ಭೋಜನಕ್ಕೆ ತಯಾರಿ. ಅದರ ನಡುವೆಯೇ ಮಕ್ಕಳಿಗೆ ಪಾಠ ಹೇಳುವ, ಹೇಳುತ್ತಲೇ ಟಿವಿ ನೋಡುತಾ, ಒಂದಷ್ಟು ಸುಖ ಕಾಣುವ ಆಂಟಿಗೆ ರಾತ್ರಿ ಅಡಿಗೆಯ ಜ್ವರ. ಅಂಕಲ್ ಬಜಾರ್ ನಲ್ಲಿ ಬೇಟೆಯಾಡಿ ಅರ್ಥಾತ್ ಇಸ್ಪೀಟ್ ಆಡಿಯೋ ಒಂದಿಷ್ಟು ಕುಡಿದೋ (ಎಲ್ಲರೂ ಅಲ್ಲ) ವಾಪಾಸಾಗುವ ಹೊತ್ತಿಗೆ ಮಕ್ಕಳಿಗೆ ಉಣ್ಣಿಸಿ ಹೊದ್ದಿಸಿ ಮಲಗಿಸುವ ಕಾಯಕ. ಬಳಲಿ ಅಥವಾ ತೂರಾಡುತ್ತಾ ಬಿಜಯಂಗೈವ ಅಂಕಲ್ ನೊಂದಿಗೆ ಪ್ರೀತಿಯ ಮಾತುಗಳನಾಡುತ್ತ ಊಟ ಹಾಕಿ ತಾನು ಒಂದಿಷ್ಟು ತಿಂದು, ಆತನಿಗೆ ಸಿಗರೇಟ್ ಸೇದಲು ಬಿಟ್ಟು ಪುನಃ ಅಡಿಗೆ ಮನೆ ಸೇರಿ ತಿಂದು ಬಿಟ್ಟ ಪಾತ್ರೆ ಮುಸುರೆ ಪಾತ್ರೆಗಳನ್ನೆಲ್ಲಾ ತೊಳೆದಿಟ್ಟು ಸೀರೆ ಒದ್ದೆ ಮಾಡಿಕೊಂಡು ಹಾಸಿಗೆಗೆ ಬರುವ ಹೊತ್ತಿಗೆ ರಾತ್ರಿ ಗಂಟೆ ಹತ್ತು.

ಹಾಸಿಗೆಗೆ ಬರುವ ಆಂಟಿಗಾಗಿ ಅ೦ಕಲ್ ಆಗಲೆ ಸ್ಟಡಿರೆಡಿ. ತನಗೆ ಬೇಕೋ ಬೇಡವೋ ಆತನೊಡನೆ ರತಿಸಿ ರಮಿಸಿ ನಿದ್ದೆಗೆ ಜಾರುವ ಪಾಪದ ಆಂಟಿಗೆ ಆಗಲೆ ವಿರಾಮ – ಆರಾಮ. ಸುಖವಾದ ನಿದ್ರೆಯಲ್ಲಿರುವಾಗಲೆ ಹಾಲಿನವರ ಆರ್ಭಟ ಪೇಪರ್ ಬಿದ್ದ ಸದ್ದು ತರಕಾರಿ ಗಾಡಿಯವನ ಅರಚಾಟ. ಇವರನ್ನೆಲಾ ವಿಚಾರಿಸಿಕೊಂಡು ಪೊರಕೆ ಹಿಡಿದು ಕಾಂಪೌಂಡ್ ಗುಡಿಸಿ ಸಾರಣೆ ಮಾಡಿ ಹಾಲು ಕಾಯಿಸಿ ಕಾಫಿಗೆ ತಯಾರಿ, ಮುಂದೆಲ್ಲಾ ಆಕೆ ಗಾಣದ ಎತ್ತಿನಂತೆ ದುಡಿದು ಪುನಃ ಹಾಸಿಗೆ ಸೇರುವ ಹೊತ್ತಿಗೆ ರಾತ್ರಿ ಹತ್ತು ತೋರುವ ಬಳಲಿದ ಗಡಿಯಾರಕ್ಕೆ ತೂಕಡಿಕೆ, ಸಾಮಾನ್ಯವಾಗಿ ಇಂಥ ಮಹಿಳೆಯರೇ ಎಲ್ಲೆಲ್ಲೂ ಕಾಣಸಿಗುವುದಲ್ಲವೆ. ಇಂತಹ ಕರ್ತವ್ಯನಿಷ್ಟ ಆಂಟಿ ಅಲಂಕಾರ ಮಾಡಿಕೊಂಡು ಪಡ್ಡೆ ಹುಡುಗರಿಗೆ ಲೈನ್ ಹೊಡೆಯಲು ಸಮಯವಾದರೂ ಎಲ್ಲಿಂದ ತಂದಾಳು ? ಉಸಿರು ಬಿಗಿ ಹಿಡಿದು ಬೆಳಗಿನಿಂದ ರಾತ್ರಿವರೆಗೂ ಮನೆಗೆಲಸ, ಗಂಡ ಮಕ್ಕಳ ಆರೈಕೆಯಲ್ಲಿ ತೊಡಗುವ, ಆಗಾಗ ಗಂಡನಿಂದ ಒದೆ ತಿನ್ನುವ ಅತ್ತೆ ನಾದಿನಿಯರಿದ್ದರೆ ತರಾವರಿ ಹಿಂಸೆಗೆ ಗುರಿಯಾಗುವ ಆಂಟಿಗೆ ಗಂಡನನ್ನೇ ಸರಿಯಾಗಿ ಪ್ರೀತಿಸಲು ವೇಳೆ ಸಾಲದಾದಾಗ ಪಡ್ಡೆಗಳಿಗೆ ಲೈನ್ ಹೊಡೆವ ತಾಳ್ಮೆ ಜಾಣ್ಮೆಗೆ ವೇಳೆಯನ್ನಾದರೂ ಎಲ್ಲಿಂದ ಕಡ ತಂದಾಳು ? ಇನ್ನು ಹೊರಗೆ ದುಡಿವ ಆಂಟಿಯರ ಕಥೆ ಮತ್ತೂ ಘೋರ. ಈ ಬಗ್ಗೆ ಮುಂದೆ ಮಾತಾಡಿಕೊಳ್ಳೋಣ. ನನ್ನ ವಿನಂತಿ ಇಷ್ಟೆ ; ಮನಬಂದಂತೆ ಆಂಟಿಯರ ಬಗ್ಗೆ ಬರೆವ, ಹರಟುವ ಚಪಲಚಿತ್ತರೆ ನಿಜವಾಗಿಯೂ ಆಂಟಿಯರ ಲೋಕ ಹೇಗಿರುತ್ತೆ ನೋಡಿದಿರಲ್ಲ! ಅವರಿಗಾಗಿ ಸೆಪರೇಟ್ ಲೋಕವೇ ಇಲ್ಲ, ಗಂಡ ಮಕ್ಕಳೇ ಅವರ ಲೋಕ. ಇಂತಹ ತ್ಯಾಗಮಯಿ ಬಗ್ಗೆ ‘ಆಂಟಿ ಪ್ರೀತ್ಸೆ’ ಸಿನಿಮಾ ತೆಗೆದರೆ ಅಪಮಾನ ಮಾಡಿದಂತಲ್ಲವೆ? ನಿಮ್ಮ ಮನೆಗಳಲ್ಲೂ ಆಂಟಿಯರು ಇರುತಾರಲ್ಲಪ್ಪ, ಅವರೆಲಾ ತುಂಬಾ ತುಂಟಿಯರು ಅಂದರೆ ಒಪ್ಪತ್ತೀರಾ? ಇಷ್ಟಾದರೂ ಆಂಟಿಯರ ಅವಹೇಳನದ ಬಗ್ಗೆ ಮಹಿಳಾ ಸಂಘ, ಸಮಾಜಗಳೇಕೆ ತೆಪ್ಪಗಿವೆ? ಸೀನಿಯರ್ ಆಂಟಿ ಸಚಿವೆ ಮೋಟಮ್ಮನವರೆ ನೀವಾದರೂ ಬಡಿಗೆ ಕೈಗೆತ್ತಿಕೊಳ್ಳಬಾರದೇನ್ರಿ, ಆಂಟಿಯರೆ ಪ್ಲೀಸ್ ತೀರಾ ಹಗುರವಾಗಲು ಯಾರಿಗೂ ಅವಕಾಶ ಕೊಡಬೇಡಿ ಹುಷಾರು…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಕ್ಷಿ
Next post ಮನದೊಳಗಣ

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…