ಇಹಲೋಕದ ಎಂಜಲ್ಸ್

ಆಸ್ಪತ್ರೆ ಎಂದೊಡನೆ ಡಾಕ್ಟರ್’ಗಳು ಒ.ಟಿ. ವಾರ್ಡ್, ರೋಗಿಗಳ ದುರ್ನಾತ, ಪಿನಾಯಿಲ್ ವಾಸನೆ, ಸಾವು ನೋವು ಇವುಗಳ ನಡುವೆಯೇ ಶ್ವೇತವಸ್ತ್ರಧಾರಿಣಿಯಾಗಿ ನಳಿನಳಿಸುತಾ ಮುಗುಳ್ನಗೆ ಚೆಲುತ್ತಾ ವಾರ್ಡ್‍ನಿಂದ ವಾರ್ಡ್ಗೆ ಸ್ಲಿಪರ್ ಶಬ್ದಮಾಡುತ್ತಾ ಕೈನಲ್ಲಿ ಸಿರಂಜ್‌ ಹಿಡಿದು ಸೀರೆಯ ನೆರಿಗೆಗಳನ್ನು ಚಿಮುತ್ತ ಇಲ್ಲವೆ ಸ್ಕರ್ಟ್ಗಳಲ್ಲಿ ಆರೋಗ್ಯವಂತ ಕಾಲುಗಳನ್ನು ದರ್ಶಿಸುತ್ತಾ ರೋಗಿಗಳ ಬೆಡ್ ಬಳಿ ಬರುವ, ತಟ್ಟಿ ಏಳಿಸುವ ‘ಗುಡ್ ಮಾರ್ನಿಂಗ್’ ಹೇಳಿ ರೋಗಿಗಳ ಮೋರೆಯಲ್ಲಿ ಲವಲವಿಕೆ ಮೂಡಿಸಿ ನೋವಾಗದಂತೆ ಇಂಜಕ್ಷನ್ ಮಾಡಿ ‘ನೋವಾಯ್ತಾ?’ ಎಂದು ನಗುತ್ತಾ ಮಸಾಜ್ ಮಾಡಿ ರೋಗಿಯ ನೋವನ್ನು ತಮ್ಮ ಸಾಂತ್ವನದ ಕಿರುನಗೆಯ ಮೂಲಕ ಮಾಯವಾಗಿಸುವ ಅದ್ಭುತ ಶಕ್ತಿ ಇರುವುದು ಯಾರಿಗೆ ಗೊತ್ತೆ?

ಅದು ನರ್ಸ್‌ಗಳಿಗೆ ಮಾತ್ರ. ಅದಕ್ಕೆ ಇವರನ್ನು ‘ಸಿಸ್ಟರ್’ ಎಂದು ರೋಗಿಗಳಷ್ಟೇ ಅಲ್ಲ ಡಾಕ್ಟರುಗಳು ಕರೆಯುತ್ತಾರೆ. ವೈದ್ಯರುಗಳ ಅಣತಿಯನ್ನು ಚಾಚೂ ತಪ್ಪದೆ ಪಾಲಿಸಿ ಕೇಸ್ ಶೀಟ್ಗಳಲ್ಲಿ ಡಾಕ್ಟರ್ ದಾಖಲಿಸುವ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ನೀಡಿ ಬಿ.ಪಿ. ಶುಗರ್ ಪಲ್ಸ್ ಟೆಂಪೆರೇಚರ್ ಇತ್ಯಾದಿಗಳು ಎಷ್ಟಿವೆ ಎಂದೆಲ್ಲಾ ಆಗಿಂದಾಗ್ಗೆ ದಾಖಲಿಸುವ, ಕಾಲಕ್ಕೆ ಸರಿಯಾಗಿ ಮಾತ್ರೆಗಳನ್ನು ನುಂಗಿಸುವುದರಿಂದ ಹಿಡಿದು ಸ್ಪಾಂಜ್ ಬಾತ್ ಮಾಡಿಸುವ, ಕೀವು ರಕ್ತಗಳನ್ನು ಶುಚಿಮಾಡಿ ಬ್ಯಾಂಡೇಜ್ ಮಾಡುವ, ಒದ್ದೆಯಾದ ಹಾಸಿಗೆ ಬದಲಿಸುವ, ಕಡೆಗೆ ಹೇಸಿಗೆಯನ್ನೂ ಅಸಹ್ಯಪಡದೆ ಎತ್ತಿರೋಗಿಯ ಮಗ್ಗಲು ಬದಲಿಸುವ, ಅವನಿಗೆ ‘ಬೆಡ್ ಸೋರ್’ ಆಗದಂತೆ ಸದಾ ಎಚ್ಚರವಹಿಸುವ ಅವನ ಜೊತೆಗಿದ್ದು ಗೆಳತಿಯನ್ನು ನೆನಪಿಸುವ ಈ ಶ್ವೇತವಸ್ತ್ರಧಾರಿಣಿಯರನ್ನು ಅದಕ್ಕೇ ಪ್ರಾಯಶಃ ‘ಸಿಸ್ಟರ್’ ಎಂದು ಕರೆದಿರಬೇಕು.

ರೋಗಿಯಾದವನಿಗೆ ಮಾತ್ರ ನರ್ಸ್‌ಗಳ ಸೇವೆಯ ಮೌಲ್ಯವೇನು? ಅಂತ ಅರ್ಥವಾದೀತು. ರೋಗಿಯಲ್ಲದವರಿಗೆ, ರೋಗಿಗಳ ಕಡೆಯವರಿಗೆ ಸಹ ಆಕೆಯ ಸೇವೆಯ ಮಹತ್ವ ಅರಿವಾಗುವುದು ಕಡಿಮೆಯೆ. ಅಲ್ಲಿಯವರೆಗೂ ಆಸ್ಪತ್ರೆಯ ನರ್ಸ್‌ಗಳೆಂದರೆ ಏನೋ ಒಂದು ಬಗೆಯ ಕುಹಕ, ತಾತ್ಸಾರ ಗುಮಾನಿ. ಅವರ ನಗೆ, ನಡಿಗೆ, ಮಾತು ಎಲ್ಲದಕ್ಕೂ ಅರ್ಥ ಕಲ್ಪಿಸುವ ಕೆಟ್ಟನೋಟದಿಂದ ನೋಡುವ ಕಡೆಗಣ್ಣಿನಿಂದ ಕಾಣುವ ಸೆರಗು ಹಿಂದೆ ಬೀಳಲೆಣಿಸುವ, ಹಗುರವಾಗಿ ಮಾತನಾಡುವ ದುಶ್ಯಾಸನ ಬುದ್ಧಿಯವರೇ ಹೆಚ್ಚು. ಕೆಲವು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಂತೂ ಡಾಕ್ಟರುಗಳೇ ಕೀಚಕರಾಗಿಬಿಡುವ ಪ್ರಸಂಗಗಳೂ ಇವೆ!

ಮೊದಲೆಲ್ಲಾ ಈ ವೃತ್ತಿಗಳಿಗೆ ಬರಲು ಹೆಣ್ಣು ಮಕ್ಕಳು ಹೆದರುತ್ತಿದ್ದರು. ಮನೆಯವರೂ ಒಪ್ಪರು. ಗಂಡ ಸತ್ತ ವಿಧವೆಯರೋ, ಗಂಡ ಬಿಟ್ಟವರೋ, ಗಂಡನನ್ನೇ ಬಿಟ್ಟವರೋ, ನಪಾಸದವರೋ, ಯಾವುದೇ ನೌಕರಿ ಸಿಗದೆ ನಿರಾಶರಾಗಿ ನರ್ಸ್ ಕೆಲಸಕ್ಕೆ ರಾಜಿಯಾಗುವ ನಂತರ ನರಕ ಅನುಭವಿಸುವ ದಿನಗಳಿದ್ದವು. ಸಾಮಾನ್ಯವಾಗಿ ಕ್ರಿಶ್ಚಿಯನ್ ಹೆಣ್ಣುಗಳೇ ನರ್ಸ್ ಕಾಯಕಕ್ಕೆ ಲಾಯಕ್ಕು ಎಂಬ ಅಭಿಪ್ರಾಯವೂ ಇದ್ದಿತು. ಈಗ ಆ ಪರಿಸ್ಥಿತಿಯೇನಿಲ್ಲ. ಡಿಗ್ರಿ, ಓದಿದ ಹೆಣ್ಣುಗಳೂ ನರ್ಸ್ ಕೆಲಸಕ್ಕೆ ಬರಲು ಹಿಂಜರಿಯುವುದಿಲ್ಲ, ಕೈ ತು೦ಬಾ ಸಿಗುವ ಸಂಬಳ, ವಾಸಿಸಲು ಕ್ವಾರ್ಟಸ್‌ನ ಆಕರ್ಷಣೆ ಇದೆ. ಇದರಿಂದಾಗಿ ಚೆಂದವಾದ ಜೀವನವನ್ನು ತಮ್ಮದಾಗಿಸಿಕೊಳ್ಳಬಹುದು. ಗೌರವದಿಂದಲೂ ಬಾಳಬಹುದೆಂಬ ಭರವಸೆ ಹೆಚ್ಚುತ್ತಿದೆ. ಪಿ.ಯು.ಸಿ ಪರೀಕ್ಷೆಯಲ್ಲಿ ಮೆರಿಟ್‌ ಬಂದವರಿಗೆ ನರ್ಸ್‌ ಟ್ರೈನಿಂಗ್ ಅವಕಾಶವೀಗ ಖಾತರಿ, ಯಾವುದೇ ಹಣ, ಯಾರದ್ದೇ ಪ್ರಭಾವದ ಹಾವಳಿ ವಿರಳವಾಗುತ್ತಿರುವುದರಿಂದ ರಾಜ್ಯಾದ್ಯಂತ ಸಾವಿರಾರು ಹುಡುಗಿಯರು ನರ್ಸ್ ನೌಕರಿಗಾಗಿ ಹಾತೊರೆಯುತ್ತಿರುವುದೂ ಶುಭ ಸೂಚಕ. ಹಳ್ಳಿಗಾಡಿನಿಂದಲೂ ಅರ್ಜಿ ಪಡೆಯಲು ಬರುವ ಹುಡುಗಿಯರನ್ನು ನೋಡುವಷ್ಟೇ ಕುತೂಹಲದಿಂದ ಮೇಲ್ಜಾತಿಯ ಹುಡುಗಿಯರೂ ಸರದಿ ಸಾಲಿನಲ್ಲಿರುವುದನ್ನು ಕಾಣುವಾಗ, ಎದೆಗಾರಿಕೆಯಿರುವ ವಿದ್ಯಾವಂತ ಹುಡುಗಿಯರು ದಾಕ್ಷಿಣ್ಯವಿಲ್ಲದೆ ಮುಜುಗರ ಪಡದೆ ನರ್ಸ್‌ಗಳಾಗಿ ದುಡಿಯಲು ಮುಂದೆ ಬರುತ್ತಿರುವುದನ್ನು ಅವಲೋಕಿಸಿದಾಗ ನರ್ಸ್ ಹುದ್ದೆಗೆ ಅಂಟಿದ ಸೂತಕ ನಿವಾರಣೆಯಾದಂತೆ ತೋರುತ್ತದೆ. ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣುವ ಅಥವಾ ಸಂತೃಪ್ತಿಯನ್ನು ಹೊಂದುವ ನರ್ಸ್‌ಗಳು ನಮ್ಮಲ್ಲಿದ್ದಾರೆ. ಮೊದಲಿನಿಂತೆ ನರ್ಸ್ ಒಬ್ಬಳನ್ನು ಸುಲಭವಾಗಿ ತಿಳಿದುಕೊಳ್ಳುವ, ಕೀಚಕರನ್ನು ಎದುರಿಸುವ ತಮಗೊಪ್ಪಿದವರನ್ನು ಮದುವೆಯಾಗಿ ಸಭ್ಯ ಗೃಹಸ್ಥೆಯಾಗಿ ಬಾಳುವ ನರ್ಸ್‌ಗಳನ್ನೂ ಕಾಣುತ್ತಿದ್ದೇವಲ್ಲವೆ ! ತಮ್ಮ ವೃತ್ತಿ ಗೌರವವನ್ನೂ ತಮ್ಮ ಮಾನವನ್ನೂ ಏಕ ಕಾಲದಲ್ಲಿ ಕಾಪಾಡಿಕೊಳ್ಳುವ ಮನೋಬಲ ಇಂದಿನ ಹುಡುಗಿಯರಿಗಿದೆ ಎಂಬುದು ಹೆಮ್ಮೆಯ ಸಂಗತಿ.

ಮನೆಯವರಿಂದಲೇ ತಿರಸ್ಕೃತನಾದ ರೋಗಿಯನ್ನು ಪೋಷಿಸುವ ನರ್ಸ್‌ಗಳ ಕರ್ತವ್ಯವನ್ನು ಕಡೆಗಣಿಸಬಹುದೇ? ಅವರನ್ನು ಕಡೆಗಣ್ಣಿನಿಂದ ಕೆಟ್ಟ ಕಣ್ಣಿನಿಂದ ನೋಡುವುದೆಷ್ಟು ವಿಹಿತ? ರೋಗ ವಾಸಿಯಾದಂತೆ ನರ್ಸ್‌ಗಳೊಡನೆ ಚೇಷ್ಟೆಗಿಳಿಯುವ ರೋಗಿಗಳೂ ಇದ್ದಾರೆ. ಅಂಥವರು ತಮ್ಮ ಆತ್ಮ ಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕಷ್ಟೆ. ಪ್ರೀತಿಯಿಂದ ಮೈದಡವಿ ತಲೆನೇವರಿಸಿ ಮಾತ್ರೆಗಳನ್ನು ಬಾಯಿಗೆ ಹಾಕಿ ನೀರು ಕುಡಿಸುವ, ಮೈ ತುಂಬಾ ರಗ್ ಹೊದ್ದಿಸಿ ‘ಗುಡ್ ನೈಟ್, ಸ್ವೀಟ್ ಡ್ರೀಮ್ಸ್’ ಹೇಳುವ ಮಮತಾಮಯಿಯನ್ನು ‘ಸಿಸ್ಟರ್’ ಅನ್ನುತ್ತೇವೆ. ಇಂತಹ ‘ಸಿಸ್ಟರ್’ಗಳ ಮೈ ಮಾಟ ಅಳೆಯುವ ರೋಗಗ್ರಸ್ತಕಣ್ಣುಗಳ ಬಗ್ಗೆ ಮರುಕಪಡಬೇಕಷ್ಟೆ.

ಯಾವಳ ಗಂಡನೋ, ಯಾವ ತಾಯಿಯ ಮಗನೋ, ಯಾವ ಹೆಂಗಸಿನ ಅಣ್ಣತಮ್ಮಂದಿರೋ, ತಾಯಂದಿರೋ, ಅಜ್ಜಿಯರೋ, ಅವರೆಲ್ಲಾ ಆಸ್ಪತ್ರೆಯಲ್ಲಿರುವವರೆಗೆ ‘ತಮ್ಮವರೇ’ ಎಂಬಂತೆ ನೋಡಿಕೊಳ್ಳುವ ನರ್ಸ್‌ಗಳನ್ನು ನಾಯವಾಗಿ ‘ಮದರ್’ ಎಂದೇ ಸಂಬೋಧಿಸಬೇಕಿತ್ತೇನೋ, ‘ನಾಳೆ ನೀವು ಡಿಸ್ಚಾರ್ಜ್ ಕಣ್ರಿ’ ಎಂದು ನರ್ಸ್ ಒಬ್ಬಳು ರೋಗಿಗೆ ಹೇಳಿದಾಗ ಅವನಿಗಷ್ಟೇ ಅಲ್ಲ ಅವಳಿಗೂ ಅಷ್ಟೇ ಸಂತೋಷವಾಗಿರುತ್ತದೆ. ರೋಗಿಯೊಬ್ಬ ಗುಣಮುಖನಾಗಿ ಮನೆ ಸೇರುತ್ತಾನೆಂದರೆ ವೈದ್ಯನಿಗಾಗಲಿ ನರ್ಸ್‌ಗಳಿಗಾಗಲಿ ಅವರ್ಣನೀಯ ಆನಂದ ಅವರ ಮನವನ್ನಾವರಿಸದಿರದು. ಡಿಸ್ಚಾರ್ಜ್ ಆದ ರೋಗಿ, ಅವನ ಮನೆಯವರು ಹೋಗುವಾಗ ಆರೋಗ್ಯದ ನಗೆ ಚೆಲ್ಲಿ ಆಸ್ಪತ್ರೆ ಸಿಬ್ಬಂದಿಗಳಿಗೆ ಅದೆಷ್ಟು ‘ಥಾಂಕ್ಸ್’ ಹೇಳುತ್ತಾರೆಂಬುದು ಅನುಭವಿಸಿದವರಿಗೆ ಮಾತ್ರ ವೇದ್ಯ. ನಂತರ ನಾಲ್ಕಾರು ದಿನ ನರ್ಸ್ ಅನ್ನು ನೆನಪಿನಲ್ಲಿಟ್ಟುಕೊಂಡು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ. ಆ ಮೇಲೆ ಮರೆತೇ ಬಿಡುತ್ತಾರೆ. ವೈದ್ಯ ಎರಡು ಬಾರಿ ರೌಂಡ್‌ ಬಂದರೆ ಅವನ ಕರ್ತವ್ಯ ಮುಗಿಯಿತು. ಆದರೆ ಇಪ್ಪತ್ಕಾಲ್ಕು ಗಂಟೆಯೂ (ಒಬ್ಬರಲ್ಲ ಒಬ್ಬರು ಶಿಫ್ಟ್‌ಗಳಲ್ಲಿ) ರೋಗಿಗಳ ಜೊತೆಗಿದ್ದು ಸೇವೆಗೈವ ನರ್ಸ್‌ಗಳದ್ದು ಆಸ್ಪತ್ರೆಯಲ್ಲಿ ಇತರರಿಗಿಂತಾ ಅತ್ಯಾವಶ್ಯಕ ಸೇವೆ (ಎಸೆನ್ಸ್‌ಶಿಯಲ್ ಡ್ಯೂಟಿ). ಹಗಲು ರಾತ್ರಿ ದುಡಿವ ಈ ಸಿಸ್ಟರುಗಳು ನೋವಿನ ಮಧ್ಯೆಯೂ ನಗುವ, ದುರ್ವಾಸನೆಯ ನಡುವೆಯೂ ಅರಳುವ ಸಾವಿನ ಮಧ್ಯೆಯೂ ಸಾಂತ್ವನಿಸುವ ರೋಗಿಗಳ ಚೀತ್ಕಾರ, ಕೋಪತಾಪಗಳಿಗೆ ತಾಳ್ಮೆಗೆಡದ ಸಹನಾ ಮೂರ್ತಿಗಳು, ಸೇವಾ ಮನೋಭಾವದಲ್ಲಿ ಇಂದಿಗೂ ಕ್ರಿಶ್ಚಿಯನ್ ಹುಡುಗಿಯರದೇ ಮೇಲುಗೈ, ಅದರಲ್ಲೂ ಮಲೆಯಾಳಿ ತರುಣಿಯರಂತೂ ಎಂತಹವರ ಮನವನ್ನೂ ಕೇವಲ ತಮ್ಮ ಮುಗುಳ್ನಗೆಯಿಂದ ಗೆಲ್ಲಬಲ್ಲ ಏಂಜಲ್ ಗಳು. ಪಕ್ಕದ ಊರಿಗೆ ವರ್ಗವಾದರೆ ಪರಿತಪಿಸುವ, ಪ್ರಭಾವ ಬೀರಿ ಹಣ ಚೆಲ್ಲಿ ಇದ್ದಲ್ಲೇ ಬೇರುಬಿಟ್ಟು ನಿವೃತ್ತರಾಗ ಬಯಸುವ ನಮ್ಮ ಶುಶ್ರೂಷಕರಿಗೆ ಮತ್ತು ಎಲ್ಲಿಂದಲೋ ಬಂದು ಇಲ್ಲಿ ಬೇರು ಬಿಟ್ಟು ಜೀವಿಸುವ ಮಲೆಯಾಳಿ ಶ್ರಮ ಜೀವಿಗಳಿಗೆಲ್ಲಿಯ ಹೋಲಿಕೆ, ಅದರಲ್ಲೂ ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ದುಡಿದವರಿಗಂತೂ ಸಂಬಳ ಕಡಿಮೆ, ಹೆಚ್ಚು ದುಡಿಮೆ. ಆದರೂ ಅವರ ಮುಖದಲ್ಲಿನ ಮಾಸದ ನಗೆಯದೇ ಮಹಿಮೆ. ನರ್ಸಿಂಗ್ ಒಂದರ ಬಂಡವಾಳ ಜೀವಾಳವೇ ಅವರು. ನರ್ಸ್‌ ಆಸ್ಪತ್ರೆಯಲ್ಲೇ ದುಡಿಯಲಿ, ನರ್ಸಿಂಗ್‌ ಹೋಮ್‌ಗಳಲ್ಲೇ ದುಡಿಯಲಿ ಅವರ ಸೇವೆ ಪಡೆಯದೆ ರೋಗಿ ಆರೋಗ್ಯವಂತನಾಗಲು ಅಸಾಧ್ಯ. ಅವರೊಂದಿಗಿಷ್ಟು ಸೇವೆಯಲ್ಲಿ ನಿರ್ಲಕ್ಷ್ಯ ಮಾಡಿದರೂ ರೋಗಿಗಳಿಗೂ, ವೈದ್ಯರಿಗೂ ಆತಂಕ ತಪ್ಪಿದ್ದಲ್ಲ. ತಮ್ಮ ಮೃದು ಮಾತು ಮುಗುಳ್ನಗೆಯಿಂದಲೇ ರೋಗಿಗಳ ಅರ್ಧಕಾಯಿಲೆ ವಾಸಿಮಾಡುವ ಮಾಂತ್ರಿಕ ಶಕ್ತಿ ಉಳ್ಳವರು ನರ್ಸ್‌ಗಳೆಂದರೆ ಅತಿಶಯೋಕ್ತಿಯೇನಲ್ಲ.

‘ಇಹಲೋಕದ ಈ ಎಂಜಲ್ಸ್‌’ಗಳ ಸೇವೆಯನ್ನು ಜೀವನದಲ್ಲಿ ಒಂದಲ್ಲ ಒಂದು ದಿನ ಪಡೆಯಲೇಬೇಕಾದ ಸಂದರ್ಭ ನಮಗಿಂದು ಅನಿವಾರ್ಯ. ಆದರೆ ಸೇವೆಗೈಯುವುದನ್ನು ಅನಿವಾರ್ಯವೆಂದು ಭಾವಿಸರು. ಕರ್ತವ್ಯವೆಂದೇ ಭಾವಿಸುತ್ತಾರೆ. ಅದವರ ವೃತ್ತಿಧರ್ಮ, ಆದ್ದರಿಂದಲೇ ಫ್ಲಾರೆನ್ಸ್ ನೈಟಿಂಗೇಲ್, ಮದರ್‌ ಥೇರೇಸ, ಸಿಸ್ಟರ್ ನಿವೇದಿತಾ ಇವರೆಲ್ಲಾ ವೈದ್ಯರಿಗಿಂತಲೂ ಪ್ರಖ್ಯಾತರು, ಇಂದಿಗೂ ಎಂದೆಂದಿಗೂ ಪ್ರಪಂಚದಾದ್ಯಂತ ಪ್ರಾತಃಸ್ಮರಣೀಯರು. ಸೇವೆಗೊಂದು ಮಾದರಿಯೂ ಆಗಿದ್ದಾರೆ. ನಮ್ಮ ‘ಸಿಸ್ಟರ್’ಗಳು ಸಹ ಇವರಂತೆ ಗೌರವಾನ್ವಿತರಾಗಬಹುದು. ತ್ಯಾಗ ಕರುಣೆ, ದಯೆಯ ಸಸಿಯನ್ನು ಹೃದಯದಲ್ಲಿ ನೆಟ್ಟು ಬೆಳಸಿದರೆ ನರಕವೆಂದೇ ಹೆಸರಾಗಿರುವ ಆಸ್ಪತ್ರೆಯನ್ನು ಸ್ವರ್ಗವನಾಗಿ ಮಾಡಬಲ್ಲ ‘ಏಂಜಲ್ಸ್’ ಗಳಾಗುವುದು ಅಸಾಧ್ಯದ ಮಾತೇನಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲಚಕ್ರ
Next post ಅಂಗಡಿ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys