ಎಲ್ಲಾ ಅಂಗಡಿ ಹರವಿಕೊಂಡಿದ್ದೇವೆ
ಈ ಬಡಿವಾರ ಬಟ್ಟೆ, ಮೋಜಿನ ಕಟ್ಟೆ
ಬೆಚ್ಚನ ಮನೆ-ವೆಚ್ಚದ ಬೇನೆ
ಈ ಬೆಚ್ಚಿ ಬೀಳುವ ಧಿಮಾಕು ನಾಜೋಕು-ಷೋಕು
ಹುಚ್ಚು ನಾಯಿಯ ಹಾಗೆ ತಿರುಗಾಟ
ಕಾಮಾಲೆ ರೋಗದಂಥ ನೋಟ
ನಾಲಿಗೆ ಪಾಚಿಗಟ್ಟಿ, ಹೊಟ್ಟೆ ಜಿದ್ದುಗಟ್ಟುವವರೆಗೆ
ತಿನ್ನುವ ತೀಟೆಗಳು
ಇಲ್ಲದವರ ಮೇಲೆ ಮಾಡುವ ರೋಪು
ಇದ್ದವರ ಮೇಲೆ ದೇಶಾವರೀ ಛಾಪು
ಒರಟು ಹಾಸಿಗೆಗೆ ಮೈ ಮುಳ್ಳು
ರಾಜಸ ರಸವಿಲ್ಲದೂಟಕ್ಕೆ ನಾಲಿಗೆಮುಳ್ಳು
ಬೀಸುವ ಗಾಳಿಗಳಿಗೆ ತಕ್ಕಂತೆ ಬದಲಾಗುವ
ಊಸರವಳ್ಳಿ ಪಾತ್ರಗಳು
ಠಾಕು ಠೀಕು ತೋರುವ
ಥಳ್ಳ ಬೆಳ್ಳನ ಪಾತ್ರಗಳು
ಇತ್ಯಾದಿ ಇತ್ಯಾದಿ ನಡೆದಿದೆ ನಮ್ಮ ಅಂಗಡಿ
ಇದಕ್ಕೆ ಭಂಡವಾಳವೆಂದರೆ
ನಾನು ಮತ್ತು ನನಗೆಂಬ ನಾಣ್ಯ
ಯಾವಾಗ ನೀನು ಮತ್ತು ನಿನಗೆಂಬ
ಬಿರುಗಾಳಿ ಒಳಗೋ ಹೊರಗೋ ಎದ್ದು ಬೀಸಿ
ಈ ಅಂಗಡಿಯನ್ನು ಬೋರಲು ಹಾಕಿ
ಗೊಂಗಡಿ ಮಾಡೀತೋ
ಎಂಬ ಭಯವಿದೆ ನಮಗೆ
*****


















