ಕತ್ತಲ ಹಳ್ಳಿಗೂ ಕಾಲ ಬಂತು

ಕತ್ತಲ ಹಳ್ಳಿಗೂ ಕಾಲ ಬಂತು

ಮುಖ್ಯ ರಸ್ತೆಯಿಂದ ಐದು ಕಿ.ಮೀ. ದೂರವಿದ್ದ ಕತ್ತಲ ಹಳ್ಳಿಗೆ ಬಸ್ ಇರಲಿಲ್ಲ. ಮುಖ್ಯರಸ್ತೆಯಲ್ಲಿಳಿದು ‘ಕತ್ತಲ ಹಳ್ಳಿಗೆ ದಾರಿ’ ಎಂದು ಸೂಚಿಸುವ ನಾಮಫಲಕದ ಜಾಡು ಹಿಡಿದು ನಡೆಯಬೇಕು. ಎತ್ತಿನಗಾಡಿಗಳು ಹರಿದಾಡಿ ಇತ್ತ ಗಾಡಿಗಳಿಗೂ ತ್ರಾಸ ನಡೆವ ಹಳ್ಳಿಗರಿಗೂ ಆಯಾಸವೆಂಬಂತೆ ಉದ್ದಕ್ಕೂ ರಸ್ತೆ ಉಬ್ಬು ತಗ್ಗುಗಳು ಹುಟ್ಟಿಕೊಂಡಿದ್ದವು. ಪಕ್ಕದ ಮುಳ್ಳ ಬೇಲಿಗಳೊ ನಡೆದಾಡುವವರನ್ನು ಮುತ್ತಿಡದೆ ಬಿಡುವುದಿಲ್ಲ. ಊರು ಸನಿಯವಾಯಿತೆಂಬುದನ್ನು ಸೂಚಿಸುವಂತೆ ಮೊದಲು ಮೂಗಿಗೆ ದುರ್‍ನಾತ ಆಮೇಲೆ ಕಣ್ಣಿಗೆ ಒಣಗಿದ ಗುಪ್ಪೆ ಗುಪ್ಪೆ ಹೇಸಿಗೆ ಬಡಿಯುತ್ತಿತ್ತು. ಊರಲ್ಲಿ ಒಂದೇ ಬಾವಿ. ಹರಿಜನರಿಗೆ ನೀರು ಸೇದಿ ಹಾಕಿ ಪುಣ್ಯ ಕಟ್ಟಿಕೊಳ್ಳುವವರೂ ಇದ್ದುದರಿಂದ ಅಂತಹ ವ್ಯಾಜ್ಯವೇನೂ ಇರಲಿಲ್ಲ. ಕೆಲಸವಿಲ್ಲದೆ ಹಳ್ಳಿಯಲ್ಲಿ ಬೀಡಿ ಸೇದುತ್ತಾ ಅಲೆವ ಇಲ್ಲಿನ ಮಾಜಿ ಕಾಲೇಜ್ ಹೈಕಳು ಸಮಾಜಸುಧಾರಕರೆಂಬಂತೆ ಬಾವಿ ನೀರು ಸೇದಿ ಹರಿಜನ ಪೋರಿಯರ ಬಿಂದಿಗೆ ತುಂಬಿಸುವುದನ್ನೇ ಕಾಯಕ ಮಾಡಿಕೊಂಡಿದ್ದರು. ಹಂಗೆ ಪೋರಿಯರನ್ನು ಬಲೆಗೆ ಬೀಳಿಸಿಕೊಳ್ಳುವ ಕಸರತ್ತೂ ನಡೆಸಿದ್ದರು. ಈ ವಿಷಯಕ್ಕಿಂತ ಬೇರೆ ವಿಷಯವನ್ನು ನೀವು ತಿಳಿದುಕೊಳ್ಳುವ ಅಗತ್ಯ ಶ್ಯಾನೆ ಇರೋದ್ರಿಂದ ಇದನ್ನ ಬಿಟ್ಟು ಮುಂದೆ ಹೋಗೋಣ.

ಮಳೆಬಿದ್ದಾಗ ಹೊಂಡವಾಗುವ ಬೀದಿಗಳು ಬೇಸಿಗೆಯಲ್ಲಿ ಬೆಂದು ಕೆಂಧೂಳು ಎಬ್ಬಿಸುತ್ತಿದ್ದವು. ಪ್ರೈಮರಿ ಸ್ಯಾಲೆಯೂ ಒಂದಿತ್ತು. ಹೊಲಗೆಲಸವಿಲ್ಲದ ದಿನ ಸ್ಯಾಲೆ ತೆರೆಯುತ್ತಿದ್ದ ಮಾಸ್ತರನೂ ಇದ್ದ. ಶಿಷ್ಯರ ಹೊಲದಲ್ಲಿ ಬೆಳೆದ ಹಸಿಸೇಂಗಾ, ಟೊಮಾಟೋ, ಸೌತೆಕಾಯಿ, ಸೊಪ್ಪುಸದೆ ಇತ್ಯಾದಿಗಳನ್ನು ವಸೂಲಿ ಮಾಡಲೆಂದೇ ಸ್ಯಾಲೆಯನ್ನು ಆಗೀಗ ತೆರೆಯುತ್ತಿದ್ದ. ಹಂಗಾರೆ ಈ ಊರಿನ ಹೈಕಳೆಲ್ಲಾ ಪದ್ದರೆ? ಹಂಗನ್ನಂಗಿಲ್ಲ. ಈ ಸ್ಯಾಲೆನಾಗೆ ಈವರೆಗೂ ಯಾರನ್ನೂ ಫೇಲ್ ಮಾಡಿರಲಿಲ್ಲವಾಗಿ ಮುಂದಿನ ಹಳ್ಳಿ ಮಾಧ್ಯಮಿಕ ಶಾಲೆನಾಗ ಓದಿ ಕಾಲೇಜ್ ಕಟ್ಟೆ ಹತ್ತಿದ ಹೈಕಳೂ ಇದ್ದರು. ಅಷ್ಟೆಲ್ಲಾ ಯಾಕೆ ಈ ಹಳ್ಳಿ ಸ್ಯಾಲೆನಾಗಿ ಗೊಣ್ಣೆ ಸುರಿಸುತ್ತಾ ಓದಿದ, ಮಾಮೂಲಿ ರೈತನ ಮಗನೊಬ್ಬ ಈವತ್ತಿಂದಿವ್ಸ ದೇಶದ ಬೋದೊಡ್ಡ ನಾಯಕನಾಗವನೆ. ಈತ ಡೆಲ್ಲಿನಾಗೆ ಮನೆ ಮಾಡಿಕೊಂಡವನೆ ಅಂದ್ಮಲೆ ಸ್ಯಾಲೆ ಫೋಟೋ ಟಿ.ವಿ. ನಾಗೂ ಬಂತು. ಊರಿನ ಅಂಕುಡೊಂಕಿನ ಹಳ್ಳ ಬೀದಿ ಹಾದಿ, ಏಕೈಕ ಬಾವಿ ಎಲ್ಲಾನೂ ಟಿ.ವಿ. ನಾಗೆ ಬಂದವು. ಇಡೀ ಕನ್ನಡನಾಡಿನ ಮಾಜನತೆ ಬಾಯಿ ತೆರ್‍ಕಂಡು ನೋಡಿತು. ಅಷ್ಟರಮಟ್ಟಿಗೆ ಫೇಮಸ್ ಈವಳ್ಳಿ, ಆ ದೊಡ್ಡ ದೇಶದ ದೊಡ್ಡ ನಾಯಕ ಕುಟುಂಬದ ಜೀವಿಗಳು ಜೀವಿಸುವುದು ಈ ಹಳ್ಳಿ ನೆಲದಲ್ಲೆ – ಮಣ್ಣಿನ ಮನೆಯಲ್ಲೆ. ಮಣ್ಣಿಂದೇ ಆದರೂ ದೊಡ್ಡದಾಗೆ ಐತೆ. ಪುಟ್ಟ ಕಿಟಕಿಗಳನ್ನು ಯಾವುದೋ ಕಾಲದಾಗೆ ಮಡಗಿದ್ದರೂ ಹೆಂಚಿನ ಮನೆಯಾದ್ದರಿಂದ ಮೇಲಿನಿಂದ ಗಾಳಿ ಬೆಳಕು ಯಥೇಚ್ಛವಾಗಿ ಒಳಗೆ ನುಗ್ಗುತೇತೆ. ಬಿಸಿಲು ಚಿತ್ತಾರಬಿಡಿಸ್ತೇತೆ. ಎಲ್ಲಿಂದರಲ್ಲಿ ಬಿಸಿಲು ಕೋಲುಗಳು ಬಿದ್ದು ಹೊರಗಿನಿಂದ ಒಳಗೆ ಬರುವವರೆಗೆ ಇಚಿತ್ರ ದೃಶ್ಯವನ್ನು ನೀಡಿ ಮುದಗೊಳಿಸುತ್ತೆ. ಹೆಚ್ಚು ಕಮ್ಮಿ ಎಲ್ಲರ ಮನೇದೂ ಇದೇ ಪಾಡು, ಮನೆನಾಗೆ ಒಂದಡೆ ದನಗಳಿವೆ. ಅಲ್ಲೆ ಗಂಜಲ ಮುಸುರೆ ಬಾನಿ, ದನಗಳ ಸುರಬುರ ಉಸಿರಾಟ ಕೊರಳ ಗೆಜ್ಜೆಯ ನಾದದ ಹಿತ. ಸೊಳ್ಳೆಗಳ ಸಂಗೀತ ಮುತ್ತು ಮುತ್ತಿಗೆ. ಹಲ್ಲಿ ಹಾವು ಇಲಿ ಹೆಗ್ಗಣ ತಿಗಣೆಗಳ ಸಹಕೂಟ. ಪಕ್ಕಾ ರೈತನ ಮನೆ ಅನ್ನೋದಕ್ಕೆ ಸಾಕ್ಷಿಯಾಗಿ ವಾಸವಾಗವೆ. ಅವನೂ ಅಲ್ಲೆ ಕುಕ್ಕರುಗಾಲಿನಲ್ಲಿ ಕೂತು ರಾಗಿಮುದ್ದೆ ಕುಕ್ಕಿ ಉಂಡು ಹರಿದ ಕಂಬಳಿ ಹೊದ್ದು ಉರುಳಿಕೋತಾನೆ. ನಮ್ಮ ದೊಡ್ಡ ದೇಶದ ದೊಡ್ಡ ನಾಯಕನ ಮನೆಯೋರ್‍ದೂ ಇದೇ ಪಾಡು. ದಿಳ್ಳಿಗೆ ದೊರೆಯಾದರೂ ಆತನ ಮನೆಯೋರು ಇತರೆ ಹಳ್ಳಿಯ ಪ್ಯಾದೆಗಳಂತೆಯೇ ಬದುಕುತ್ತಾರೆ – ಸಮಾನತೆ ಅಂದರೇನ್ ಮತ್ತೆ?

ದೊ.ದೇ.ದೊ. ನಾಯಕನ ಅಪ್ಪ ಅಪ್ಪ ಅಕ್ಕ ತಮ್ಮಂದಿರು ಇಲ್ಲೇ ಅವರೆ ನಗುನಗ್ತಾ ಹರಕು ಬಟ್ಟೆ ಅರೆಹೊಟ್ಟೆನಾಗೆ. ಸರಿಸುಮಾರು ಐವತ್ತು ವರುಷದ ಹಿಂದೆ ದೊ.ದೇ.ದೊ. ನಾಯಕನೂ ಇಲ್ಲೇ ಇದ್ದ. ಇದೆ ಸ್ಯಾಲೆನಾಗೆ ಓದಿ ಪ್ಯಾಸ್ ಆದ. ಆಮೇಲೆ ಅಂವಾ ಫೇಲಾದ್ದೇಯಿಲ್ಲ. ಒಂದೇ ಸಮನೆ ಓದ್ದ. ಈಪಾಟಿ ಓದಿದ ಹಳ್ಳಿ ಹುಡುಗನಿಗೆ ಒಂದು ಹೆಣ್ಣನ್ನು ಹಳ್ಳಿನಾಗೆ ಹುಟ್ಟಿಸ್ದೇ ಹೋದ್ದು ಈ ಹಳ್ಳಿಮಾಡಿದ ದೊಡ್ಡ ತಪ್ಪು. ಅದಕ್ಕೆ ಅಂವಾ ಪೇಟೆ ಹುಡ್ಗಿನೇ ಲಗ್ನವಾದ. ಆಕಿನೂ ದೇಶದ ನಾಯಕನ ಮಗಳೆ, ಮಾವ ದೇಶದ ನಾಯಕನಾದ್ಮಲೆ ಅಳೀಮಯ್ಯನ್ನ ಸುಮ್ಗೆಬಿಡಕಾಯ್ತದ. ಜುಜುಬಿ ವಕೀಲಿಂದ ಎತ್ತಿ ದೇಶ ಸೇವೆಗೆ ಕರ್‍ಕಂಬಂದ. ಮುಂದೆ ಮಾವನ ತಿಕ್ಕೆ ನೀರು ತಿದ್ದಿದ ನಮ್ಮ ಹಳ್ಳಿ ಹೈದ ಮಾಮಗೇ ಎದುರಿಗೆ ಯಲಕ್ಸನ್ಗೆ ನಿಂತು ಮಾವನ್ನೇ ಪಲ್ಟಿ ಹೊಡಿಸಿ ಗೆದ್ದು ಬಂದ. ವಜನ್ ಆದ ಪದವಿ ಪಟ್ಟಿಗಳನ್ನೇ ಬಾಚಿಕೋತ ದೇಹದ ವಜನ್ ಹೆಚ್ಚಿಸಿಕೊಂಡ. ಈ ತರಾತುರಿನಾಗೆ ನಮ್ಮೊರು ತಮ್ಮೋರು ಅನ್ನೋರನ್ನ ಮರ್‍ತ. ಆತನಿಗೆ ಮಾಜನವೇ ಬಂಧುಬಳಗ, ಹಳ್ಳಿ ಮರ್‍ತ ಅಂದರೆ ತಪ್ಪಾದೀತು. ಚಪ್ಪನ್ನಾರು ದೇಶದ ಹಳ್ಳಿಗಳೂ ಈತನವೆಯಾ. ಯಾವುಯಾವುದಕ್ಕೆ ತಾರ್‌ ಹಾಕಿಸೋದು ಬೋರ್ ಕೊರೆಸೋದು ಸ್ಯಾಲೆ ಕಟ್ಟಿಸೋದು ದವಾಖಾನೆ ಮಾಡೋದು? ಹಳ್ಳಿ ಅಂದ್ಮಲೆ ಸಮಾನತೆ ಇರಬೇಕು. ಅಂತೇಳಿ ಹಂಗ್‌ಹಂಗೆ ಬಿಟ್ಟುಬಿಟ್ಟ. ಅವ್ಪಾಡಿಗೆ ಮೊದಲಿನಂಗೇ ಇದ್ದು, ತಾನು ರಾಜಧಾನಿಯಾಗೆ ಅರಮನೆ ಕಟ್ಕೊಂಡು, ಹೆಂಡ್ತಿ ಕಡೇರ ಮನೆಯಾಗೆ ಮಡಿಕ್ಕಂಡು ಓದ್ಸಿ ಬರ್‍ಸಿ ದೊಡ್ಡ ದೊಡ್ಡ ನೋಕ್ರಿ ಕೊಡ್ಸಿ ಮಾವನ ಋಣ ತೀರಿಸ್ದ. ಮಾವನ ಮನೇಲೂ ಬಡವರೇ. ಬಡವರ ಉದ್ಧಾರ ಮಾಡೋದು ಅಂದ್ರನ್ ಮತ್ತೆ. ಈವತ್ತು ಕತ್ತಲ ಹಳ್ಳಿಯ ಧೂಳಿನ ಮಗನೊಬ್ಬ ದೊಡ್ಡ ದೇಶದ ದೊಡ್ಡ ನಾಯಕನಾದ ಅಂದ್ರೆ ಸೋವಿಮಾತೆ. ಆತನಿಗಿಂತ್ಲೂ ಬಡವರಿದ್ದಾರೇನು ದೇಶದಾಗೆ? ಹನಿ ಹನಿಗೂಡಿದರೆ ಹಳ್ಳ, ಹಿಂಗೆ ಮಣ್ಣಿನ ಮಕ್ಕಳು ಕಲ್ಲಿನ ಕೆಸರಿನ ಮಕ್ಕಳು ಸೆಗಣಿ ಮಕ್ಕಳು ಗಂಜಲ ಮಕ್ಕಳೆಲ್ಲಾ ನಮ್ಮ ದೇಸದ ರಾಜಕಾರಣದಾಗೆ ಉದ್ದಾರವಾಗೋದೇ ಸಮಾಜ ಸುಧಾರಣೆ ಅಲ್ವಾ ಮತ್ತೆ. ನಮ್ಮ ಹಳ್ಳಿ ಹುಡ್ಗ ಈಮಾನ ಹತ್ದ, ರಾಕೆಟ್‌ನಾಗ ಸುತ್ದ. ನಾವೆಲ್ಲಾ ಮ್ಯಾಪಿನಾಗೆ ಮಾತ್ರ ನೋಡ್ದ ದೇಶವಿದೇಶಾನೆಲ್ಲಾ ಸುತ್ಕಂಬಂದ. ಇದೇನು ಸೋವಿಮಾತೇ? ಹಳ್ಳಿಜನ ಹಿಗ್ಗಿನಿಂದ ಊಟ ಬಿಡಬ್ಯಾಡವಾ. ದಿಣಾ ಹೊಟ್ಟೆ ತುಂಬಾ ಉಣೋವಾದ್ರೆ ಊಟ ಬಿಡಾಕೆ ಅಂಜ್ಕೋತಾವೆ – ಇವು ಬಿಟ್ಟು ನಮ್ಮ ನಾಯಕ ಅಮೃತಶಿಲೆ ಮೇಲೆ ಅಡ್ಡಾಡ್ದ, ಸುಪ್ಪತ್ತಿಗೆ ಮ್ಯಾಲೆ ಮಲಗ್ತಾನೆ ಅಂದ್ರೆ ಚಿಂದಿಬಟ್ಟೆ ಹಾಸಿಹೊದ್ದು ಮಲಗೋ ನಮಗೆ ಹೆಮ್ಮೆಯಾಗಬ್ಯಾಡವಾ – ಆತು. ನಮ್ಮೋನೊಬ್ಬ ಮೇಲೆ ಏರ್ತಾ‌ಅವ್ನೆ ಅಂದ್ರೆ ಪುಗಸಟ್ಟೆ ಖುಸಿಪಡೋಕೇನ್ ಸವಕಾಣಂಗೈತೆ.

ಹಳ್ಳಿಣಾಗಿರೋ ಆಯಪ್ಪನ ತಂದೆ ತಾಯಿಗೆ ಬಲು ಕಷ್ಟಪಟ್ಟು ಅಕ್ಕತಗೇರು ಅಣ್ಣತಮ್ಮಂದಿರು ಆವಾಗಾವಾಗ ಆಯಪ್ಪನ ವಿಸ್ಯ ಕಿವಿಗೆ ಹಾಕೋರು. ಕಿವಿ ಕೇಳದ ಕಣ್ಣು ಕಾಣದ ಆ ಮುದ್ಕರು ಏಟು ಅರ್ಥಮಾಡಿಕ್ಕಂಡ್ರೋ ಬೊಚ್ಚು ಬಾಯಲ್ಲಿ ನಕ್ಕವು. ಸ್ಯಾಲೆಮಾಸ್ತರ ಪೇಪರ್‌ನಾಗಳ ಪೋಟೋ ತೋರ್‍ಸಿ ಬಣ್ಣಿಸೋವಾಗ, ಆಟು ದೊಡ್ಡನಾದ್ನೆ ನರಪೇತನಂಗಿದ್ದೋನು. ನಮ್ಮ ಮಗ ದೇಶದ ಮಗನಾಗಿ ಹೋದ್ರೆ ಸಿವನೆ ಅಂತ ಮುದುಕರು ಪೇಪರ್ ಮ್ಯಾಲೆ ಕಣ್ಣೀರು ಹಾಕಿದವು. ‘ಇದೇ ಕಣ್ರಯ್ಯ ಆನಂದಭಾಸ್ಪ ಅಂದ್ರೆ’ ಅಂಥ ವರ್ಣಿಸಿದರು. ಅಂವಾ ದೇಸದ ಮಗನೇ ಸೈ! ಅಂವಾ ನಮ್ಮ ಮಗನಾರ ಯಾವಾಗ ಆಗಿದ್ದ? ಅಂತ ಕಣ್ಣಿನಾಗೆ ಕೊಚ್ಚನ್ ಮಾಡಿತು ಅವನವ್ವ. ಮದುವೆ ಮಾಡ್ಕ್ಯಂಡ ಕರೀನಿಲ್ಲ. ಬೇರೆ ಜಾತಿ ಹುಡ್ಗಿನಾ ಕಟ್ಕೊಂಡೇ ಅಂಬ್ತ ಹೆದರಕ್ಕಂಡವನೆ ಕಣವ್ವ…. ಪಾಪ ಅಂತ ಒಡಹುಟ್ಟಿದೋರು ತಿಪ್ಪೆ ಸಾರಿಸಿದರು. ಮುದುಕಿ ಸುಮ್ಮಗಾಗಿತ್ತು. ಆಮೇಲೆ ಮಕ್ಕಳ ಮಾಡ್ಡ. ಅವಕ್ಕೆಲ್ಲಾ ಓದ್ಸಿ ಕೆಲ್ಸಬೊಗ್ಸೆ ಕೊಡಿಸ್ದ. ಲ್ಯಗ್ನನೂ ಮಾಡ್ಡ, ಒಂದಕ್ಕೂ ಕರಿನಿಲ್ಲ. ಹಳ್ಳಿ ಕಡಿಗೂ ತಲೆ ಹಾಕಲಿಲ್ಲ. ಇವರೇ ಹೋಗಿ ಬರಾನಾ ಅಂದ್ರೆ ಬಸ್‌ಚಾರ್ಜಿಗೂ ಕಾಸಿಲ್ಲ. ಅಲ್ಲೂ ತಮ್ಮಂದಿರು ಹೋಗಿ ನೋಕರಿಗಾಗಿ ಅಂಗಲಾಚಿ ಹಿಂದುಮುಂದು ಎಡತಾಕಿ ಬಂದಿದ್ದಷ್ಟೇ ಲಾಭವಾತು. ಅಕ್ಕತಂಗೇರಾದ್ರೂ ಹೆಂಗ್ ಸುಮ್ಗಿದ್ದಾರು. ಅವರುಗಳೂ ತಮ್ಮ ಹೆಣ್ಣುಮಕ್ಕಳ್ನಾರ ನಿನ್ನ ಮಕ್ಳಿಗೆ ತಂದ್ಕಳಯ್ಯ, ಅವನಾ ನೆಟ್ಗೆ ಎಲ್ಡು ಹೊತ್ತು ಮುದ್ದೆ ಉಣ್ಲಿ ಅಂತ ಗೋಗರೆದ್ವು. ಮದುವೇನೋ ಆದ್ವು. ಆಗಿದ್ದು ಅವನೆಲ್ಲಾ ಗಂಡು ಮಕ್ಕಳದ್ದು. ನಿರಾಶೆಯಾಗಲಿಲ್ಲ. ಮತ್ತೆ ತಮ್ಮ ಬೇಡಿಕೆ ಮುಂದಿಟ್ಟವು. ಹುಡ್ಗೇರ್‍ಗೆ ಹೈಸ್ಕೂಲು ಮಟ್ಟ ಓದವರೆ. ಅವಕ್ಕಾರ ಗಂಡು ಹುಡುಕಿ ಕೊಡೋಯಣ್ಣಾ ಅಂತ ದುಂಬಾಲು ಬಿದ್ದರು, ದೇಶದ ನಾಯಕ ಮದುವೆ ದಳ್ಳಾಲಿ ಆಗೋಕಾದೀತಾ. ಹೋಗತ್ಲ ಹುಡ್ಗೇರ್‍ಗೆ ಗೋರ್‌ಮೆಂಟ್ ನೋಕರಿನಾರ ಕೊಡಿಸೋಯಣ್ಣಾ ಅಂತ ಆಯಪ್ಪನ ಮನಿಬಾಗ್ಲು ಕಾದ್ವು. ಗಂಜಲ ವಾಸ್ನೆ ಹೊಡೆಯೋರ್‍ನ ಇಂಪೋರ್ಟೆಡ್ ಸೆಂಟಿನಾಕೆ ಹೆಂಗ್ ಸೇರ್‍ಸಾಳು. ತನ್ನ ಮಕ್ಕಳಿಗೇ ನೆಟ್ಟಗೆ ಒಂದು ಗೋರ್‌ಮೆಂಟ್ ನೋಕ್ರಿ ಕೊಡಿಸೋ ತಾಕತ್ತಿಲ್ದೆ ಅವರ್‍ನೆಲ್ಲಾ ತನ್ನಂಗೇ ದೇಶಸೇವೆಗೆ ತಕ್ಕ ಖದ್ದರ್ ತೊಡಿಸಿದ ಬಡಪಾಯಿಯಣ್ಣ ಒಡಹುಟ್ಟಿದೋರ್‍ಗೆಲ್ಲಿಂದ ನೋಕ್ರಿ ಕೊಡಿಸ್ಯಾನು? ಆತನದು ನಿಷ್ಪಕ್ಷಪಾತ ಧೋರಣೆ ಖಾದಿ ಮಕ್ಕಳು ಖಾದಿ ತೊಡಬೇಕು – ರೇಮಂಡ್ಸ್ ಅಲ್ಲ. ರೈತ ರೇಮಂಡ್ಸ್ ತೊಟ್ಟರೆ ಹೊಲಗೆಯ್ಯೋರು ಯಾರು? ರೈತನೇ ದೇಶದ ಬೆನ್ನೆಲಬು. ಅವನ ಬನ್ನೆಲಬು ಬೆನ್ನೆಲಬು ಮುರಿದರೇನೇ ದೇಶದ ಮಂದಿ ಹೊಟ್ಟೆ ಭರ್ತಿ – ಬೆನ್ನೆಲುಬು ಗಟ್ಟಿ ಅಂದ್ಮಲೆ ಒಡಹುಟ್ಟಿದ ರೈತ ಮಕ್ಕಳನ್ನು ತನ್ನ ದೇಶಕ್ಕಾಗಿ ಅಂತ್ಲೆ ಮುಡಿಪಾಗಿಟ್ಟು ಹಳ್ಳಿನಾಗೇ ಬಿಟ್ಟ. ಇದು ತಪ್ಪಾ? ಇಂಥ ಹದಿನಾರಣೆ ತ್ಯಾಗಮಯಿನಾ ಪೇಪರ್‍ನೋವು ಬೈತಾವೆ. ಅವಾರ ಯಾರ ಬಿಟ್ಟವೆ? ಗಾಂಧಿನ ಬೈದ್ವು – ಇಂದಿರಾ ಗಾಂಧೀನ ಬೈದ್ವು, ಸಂಜಯನ್ನ ಬೈದ್ವು, ರಾಜೀವನ್ನ ಬೈದ್ವು, ಜಯಪ್ರಕಾಶ ನಾರಾಣೀನೂ ಬೈದ್ವು. ಬಯ್ಯೋದೇ ಅವುಗಳ ಕುಲಕಸುಬು. ಧೂಳಿನ ಮಗ ದೇಶದ ನಾಯಕನಾದಾಗ ಹೊಟ್ಟೆ ಉರ್‍ಕೊಂಡು ಸತ್ತೋರೇ ಹೆಚ್ಚು. ಆಯಪ್ಪ ದೊ.ದೇ.ದೊ. ನಾಯಕನಾದಾಗ ಅವನ ಹೆಂಡ್ರಮಕ್ಳ ಐಭೋಗವನ್ನೆಲ್ಲಾ ತೋರಿಸೋದು ಬಿಟ್ಟುಬಿಟ್ಟು ಕ್ಯಾಮರಾ ಹಿಡ್ಕಂಡು ಓಡಿಬಂದ್ವು – ಹಳ್ಳಿಕಡೀಗೆ.

ಅವನಕ್ಕನ ತಲೆಯಾಗಳ ಹೇನು ಕುಕ್ಕುತಾ ಕುಂತ ತೆಂಗಿ ಪಟ ಹಿಡಿದ್ವು, ಅವನ ಇನ್ನೊಬ್ಬ ಅಕ್ಕ ಸೆಗಣಿ ಹೊರೋದನ್ನ ತೋರಿಸಿದ್ವು. ಅವನ ತಮ್ಮಂದಿರು ಹೊಲಗೇಯೋದ್ನ ಹರಕು ಅಂಗಿ ಚೊಣ್ಣ ಹಾಕ್ಕಂಬೋದ್ನ ಪಟ ಹಿಡಿದ್ವು. ಮುರಕಲ ಮನೆ ಚಿತ್ರ ಬಿಡಿಸಿದ್ವು. ದನದ ಕೊಟ್ಟಿಗೆನಾಗೆಲ್ಲಾ ಕ್ಯಾಮರಾ ಅಡ್ಡಾಡಿಸಿದ್ವು. ಹಳ್ಳಿ ಬೀದಿ ತುಂಬಾ ಕ್ಯಾಮರಾ ಹೊತ್ಕಂಡು ಅಲೆದ್ವು. ಆಯಪ್ಪ ಹುಟ್ಟಿದ ಹೆಂಚಿನ ಮನೆ, ಓದಿದ ಮುರುಕಲ ಸ್ಯಾಲೆನೆಲ್ಲಾ ತೋರಿ ಸಂಭ್ರಮಪಟ್ಟವು. ಇಷ್ಟೆಲ್ಲಾ ಇಡೀ ದೇಶೆಂಬ ದೇಶವೇ ಟಿ.ವಿ. ಪೆಟ್ಟಿನಾಗೆ ಕಂಡು ಬೆಕ್ಕಸ ಬೆರಗಾಗೋತು. ಆತನಲ್ಲಿ ಲವಲೇಸವೂ ಬೇಧಭಾವ ಅಂಬೋದಿಲ್ಲ. ತನ್ನ ಹಳ್ಳಿ ತನ್ನೋರು ಅಂತ ಮಮಕಾರವಿಲ್ಲ. ಎಲ್ಲರಿಗೂ ಒಂದೇ ಮಂತ್ರ ಒಂದೇ ದಂಡ, ಒಂದು ಇಚಿತ್ರ ಏನಪ್ಪಾ ಅಂತಂದ್ರೆ ದೇಶಂಬೋ ದೇಶದ ಜನಾನೇ ಟಿ.ವಿ. ನಾಗೆ ಆಯಪ್ಪನ ಕತ್ತಲಹಳ್ಳಿ ಐಭೋಗ ನೋಡಿದ್ರೂ ಆ ಹಳ್ಳಿನೋರೇ ನೋಡಲಿಲ್ವೆ?! ಯಾಕಂದ್ರೆ ಆ ಹಳ್ಳಿಗಿನ್ನೂ ಕರೆಂಟೇ ಬಂದಿಲ್ಲ. ಮನೆಯಾಗೆ ಕಂದೀಲುಗಳವೆ. ಬೀದಿ ಬೆಳಗಾಕ ಚುಕ್ಕಿ ಚಂದ್ರಮರವರೆ ಕರೆಂಟು ಉಳಿಸಬೇಕೆ ಮತ್ತೆ. ಅಪವ್ಯಯವಾಗೋದ್ನ ತಡೆಗಟ್ಟೋದು ಹೆಂಗ್ ಮತ್ತೆ. ಆತನ್ನ ಬರೋಬರ್ರಿಯಾಗಿ ಅರ್ಥ ಮಾಡಿಕೊಂಡೋರು ಆತನ ಪಕ್ಷದಾಗೂ ಇರಲಿಲ್ಲ. ಪಕ್ಕದಾಗೂ ಇರಲಿಲ್ಲ. ಬೇರೆ ಪಕ್ಷದೋರು ಹೇಳಿ ಕೇಳಿ ಹೊಟ್ಟೆ ಉರುಕರು. ಆತ ಮಾಡಿದೋಟು ಗಂಟು ತಾವು ಮಾಡಾಕೆ ಆಗ್ಲಿಲ್ವಲ್ಲ ಅಂತ ಹಾರ್ಟ್‍ಪೇಸೆಂಟುಗಳಾಗೋದರು.

ಯಾರೇನಾದ್ರೇನು ನಮ್ಮ ದೊ.ದೇ.ದೊ ನಾಯಕ ಹಳ್ಳಿ ಜಗಲಿಯ್ಯಾಗಿಂದ ದಿಳ್ಳಿ ಜಗಲಿಮ್ಯಾಗೆ ಕೂತಿದ್ದು ದೈವಲೀಲೆ ಅಂಥ ಅತಿರಥ ಮಾರಥನ್ನ ಹುಟ್ಟಿಹಾಕಿದ ಕತ್ತಲ ಹಳ್ಳಿಗೂ, ಒಂದು ಕಾಲ ಬರ್‍ದಂಗೆ ಇದ್ದೀತೆ-ಬಂತು. ದೈವಪ್ರೇರಣಾ ಅಂಬಂತೆ ಒಂದಿಣ ದೇಶದ ನಾಯಕನ ಮುದುಕ ಅಪ್ಪನಿಗೆ ಮಗನ್ನ ನೋಡೋ ಆಸೆ ಹತ್ಕ್ಯಂತು – ಅದೂ ಸಾಯಕಾಲ್ದಾಗೆ. ಅಜ್ಜಿ ತಾವ ಅಜ್ಜ ಗೊಳೋ ಅಂತು. ಲಕ್ವ ಹೊಡ್ದ ಬಾಯ್ನಾಗೆ ಮಾತೇ ಹೊಲ್ಡವು. ಅಜ್ಜ ಮಾಡಿದ ಇಶಾರಾ ಅಜ್ಜಿಗೆ ಅರ್ಥಾತು. ತಾಯಿ ಜೀವ ಅದಕ್ಕೂ ಮಗ ಸೊಸಿ ಮೊಮ್ಮಕ್ಕಳ ಸಾಯೋದ್ರಾಗೆ ಒಂದಪ ಕಣ್ತುಂಬಾ ನೋಡಿ ಸಟಕ್ಕಂತ ಹೊರಟು ಹೋಗಿಬಿಡೋ ಹುಚ್ಚು ಕೆಳ್ತು. ಮುದ್ಕಿ ಮಕ್ಕಳ್ನ ಕರೆಸಿ ಅಜ್ಜನ ಕೊನಿ ಆಸಿ ಹೇಳ್ತು. ಲಗ್ನದಾಗೆ ಅಜ್ಜ ತೊಡಿಸಿದ ಬೆಳ್ಳಿ ಕಡಗ ಕೈನಾಗಿತ್ತು. ಅದ್ನೆ ಕಿತ್ತು ಮಕ್ಕಳ ಕೈನಾಗಿಟ್ಟು ಹೋಗ್ರಲಾ ಆವಯ್ಯನ ಕರ್‍ಕೊಂಬರ್ರಿ ಅಂತು. ಇವೂ ಆಕಿಗೆ ಹುಟ್ಟಿದ ಗಂಡುಮಕ್ಳೆ! ಒಬ್ಬರ್‍ಗಾನಾ ದಿಳ್ಳಿ ತಂಕ ಹೋಗಿ ಬರೋದು ಇಲ್ಲ.

ಅಜ್ಜನ ಕಾಯಿಲೆ ದಿನೆ ದಿನೇ ಜಾಸ್ತೀನೇ ಆತು. ಮಲಗಿದಲ್ಲೆ ಹೇಲು ಉಚ್ಚೆ, ಮಕ್ಕಳು ಯಾರೂ ಅಸಹ್ಯ ಪಟ್ಟಗಣದಂಗೆ ಸ್ಯಾವೆ ಮಾಡಿದರು. ಅಜ್ಜನ ಡಾಕ್ಟರಿಗಾನ ತೋರಿಸಾನಾ ಅಂದರೆ ಹಳ್ಳಿನಾಗೆ ದವಾಖಾನಿಲ್ಲ. ಪ್ಯಾಟಿನಾಗಾನ ತೋರಿಸಾನ ಅಂದ್ರೆ ಜೇಬಿನಾಗೆ ದುಡ್ಡಿಲ್ಲ. ಅಜ್ಜನಿಗೆ ನಾಟಿ ಔಸ್ತಿ ಮಾಡಿಸಿದರು. ಗಂಜಿನೂ ಗಂಟಲ್ನಾಗೆ ಇಳೀದು. ಔಸ್ತಾನೂ ವಾಂತಿ ಬೆರ್‍ಕೆಲೆ ಹೊರಾಗ್ ಬಂತು. ನಾಟಿ ಪಂಡಿತ ಕೈ ಆಡಿಸಿಬಿಟ್ಟ. ಸಿವನ ಮೇಲೆ ಭಾರವಾಕಿ ಅಂತ ತನ್ನ ಮ್ಯಾಲಿನ ಕೊಡವಿಕ್ಯಂಡ. ಇಡೀ ಹಳ್ಳಿ ಮಂದಿ ಸಾಲ್ನಾಗೆ ಬಂದು ಅಜ್ಜನ ದರುಶನ ಮಾಡಿಕೊಂಡೋತು. ದೊ.ದೇ.ದೊ ನಾಯಕನ ಪಿತೃದೇವನಿಗೆ ಈಟು ಗೌರವ ಕೊಡದಿದ್ದರೆ ಹೆಂಗ್ ಮತ್ತೆ, ಅಕ್ಕಪಕ್ಕದ ಹಳ್ಳಿಯಾಗಳ ನೆಂಟರು ಇಷ್ಟರೂ ಬಂದರು. ನಾಯಕ ಬಂದಾನು ಕೈಕಾಲಾರ ಹಿಡ್ಕಂಡು ತಮ್ಮ ಮಕ್ಳುಮರಿಗೊಂದು ಗೋರ್‌ಮೆಂಟ್ ನೋಕ್ರಿ ಹಿಡಿಯೋಂವಾ ಅಂತ ಆಶೆಯಿಂದ್ದೇ ಬಂದರು. ನಾಯಕನಿಗೆ ಸುದ್ದಿನೇ ಹೋಗಿಲ್ಲ ಅಂದಾಗ ಯಾರೋ ಒಬ್ಬ ಆಫೀಸ್ನಾಗೆ ನೋಕ್ರಿ ಮಾಡಿ ಅನುಭೋಗ ಇದ್ದನೆಂಟ ದಿಳ್ಳಿಗೆ ತಾರುಕೊಟ್ಟು ಕುಂತ. ಆಮೇಲೊಂದು ಕೊಟ್ಟ. ಅದೇ ಅಭ್ಯಾಸವಾದಂಗಾಗಿ ದಿನಕೊಬ್ಬ, ದಿನಕ್ಕೊಂದು ತಾರ್‌ಕೊಟ್ಟ – ಫಾದರ್ ಅಗ್ದಿ ಸಿರಿಯಸ್ಸು ಸ್ಟಾಲ್ಟು ಅಂತ. ಇವರು ಸ್ಟಾಲ್ಟು ಅಂದ ತಕ್ಷಣವೆ ಸ್ಟಾಲ್ಟು ಆಗಾಕೆ ದೇಶದ ನಾಯಕನ ಕಾರೇನು ಎತ್ತಿನ ಬಂಡಿನಾ? ಹಳ್ಳಿ ಎಲ್ಲಿ? ದಿಳ್ಳಿಯಲ್ಲಿ. ಕಾರಿಗೆ ಪೆಟ್ರೋಲ್ ಉಳಿಸೋದು ಬ್ಯಾಡ್ವಾ – ದೇಶದ ಪ್ರಗತಿ ಅಂದ್ರೇನ್ ಮತ್ತೆ.

ಇಡೀ ದೇಶೆಂಬ ದೇಶಾನೇ ಸಮಸ್ಯೆಗಳಿಂದ ಎದೆಯೊಡೆದು ಸಾಯ್ತಾ ಇರೋವಾಗ ಅಜ್ಜನಿಗೆ ಸೀರಿಯಸ್ ಆದ ಮಾತ್ರಕ್ಕೆ ಅದನ್ನೆಲ್ಲಾ ಸೀರಿಯಸ್ ಆಗಿ ತಗೊಂಬಾಕೆ ಟೇಮಾರ ಎಲ್ಲೈತೆ. ನಿದ್ದೆ ಮಾಡೋಕೂ ಟೈಮಿಲ್ಲದೆ ಸಭೆ ಸಮಾರಂಭದಾಗೆ ಮೆರವಣಿಗೆನಾಗೇ ನಿದ್ದೆ ಮಾಡಿಬಿಡೋ ನಾಯಕನಿಗೆ ಟಾಯಂ ಈಜ್ ಮೊನಿ.

ಆದರೇನು ಹಳ್ಳಿ ಮಂದಿ ನಾಯಕನ ಮಾರೆ ನೋಡಾಕ ತಹತಹಿಸುತ್ತಾ ಅಜ್ಜನ ಸಾವಿಗಾಗಿ ಕಾದು ಕುಂತರು. ಬಂದ ನೆಂಟರು ಹಾಕಿದ ಟೆಂಟು ಕೀಳಲಿಲ್ಲ. ಅಜ್ಜ ಸಾಯಲಿಲ್ಲ. ಅಜ್ಜನಿಗೆ ಗಂಜಿ ನೀರು ಜೋಡಿಸೋಕಾಗ್ದೆ ಒದ್ದಾಡ್ತಾ ಇದ್ದ ಅಜ್ಜಿಗೆ ಈಪಾಟಿ ಮಂದಿ ಮನೆನಾಗ ಸೇರೊಂಡಾಗ ಕೆಟ್ಟ ಅನ್ನಿಸ್ತು. ಇವರ್‍ಗೆಲ್ಲಾ ಕೂಳು ನೀರು ಹೊಂದಿಸಲಾರ್‍ದೆ ತನ್ನ ಗಂಡುಮಕ್ಳು ಏದುಸಿರು ಬಿಡೋದನ್ನ ಕಂಡು ಅಜ್ಜಿ ತನ್ನ ಕಳ್ಳು ಸುಟ್ಕಂತು. ಮನೆ ಹೆಣ್ಣಮಕ್ಳು ಸೊಸೇರು ಉಪಾಸ ಇದ್ದು ಬಂದ ಮಂದಿಗೆ ಅಂಬಲಿ ಕಾಸಿ ಹಾಕಿದರು. ಅಜ್ಜನಾರ ಬ್ಯಾಗ ಸಾಯಬಾರ್‍ದೆ ಅಂತ ಸರ್ವರೂ ಸಿವ ಅಂಬೋ ಸಿವನ್ನ ಧ್ಯಾನ ಮಾಡಿದರು. ಅಜ್ಜಂಗೂ ಟೇಮ್ ಅಂಬೋದಿತ್ತು. ಕಾಲನ ಕರೆ ಬರೋದು ಒಂದ್ ಮಿನೀಟ್ ಮುಂಚೆ ಹೋಗಂಗಿಲ್ಲ. ಒಂದು ಮಿನೀಟ್ ಹಿಂಚೆ ಹೋಗಂಗಿಲ್ವೆ. ಅಷ್ಟು ಸ್ಟಿಕ್ಟು ಜವರಾಯನ ವಾಚು. ದಿಳ್ಳಿನಿಂದ ನಾಯಕ ಸಿಟಿಗೆ ಬಂದವ್ನೆ ಅಂಬೋ ಪೇಪರ್‌ನಾಗಳ ಸುದ್ದಿನಾ ಮಾಸ್ತರನೇ ತಂದ. ‘ಅಲ್ಲಿಗಾನಾ ಹೋಗಿ ಬರಲೆ ನಾಮರ್ದುಗುಳಾ’ ಅಂತ ಅಜ್ಜಿ ಗಂಡುಮಕ್ಳಿಗೆ ಉಗೀತು. ‘ಹೋದ್ರೆ ನೆಟ್ಗೆ ಮಾತಾಡ್ಸಾಕಿಲ್ಲಮಿ. ಒಳಗಾ ಬಿಟ್ಕಂಬಲ್ಲ…… ಕತ್ತುಹಿಡ್ದು ತಳ್ತಾರೆ’ ಅಂತಂದು ಅವೂ ಕಣ್ಣಾಗೆ ನೀರ್ ತಂದ್ವು. ಅಜ್ಜಿಗೆ ಮಾತೇ ಹೊಂಡಲಿಲ್ಲ. ಇಟೊಂದು ಬದಲಾಗಿ ಹೋದ್ನೆ ನರಪೇತ. ಮೂಗಿನಾಗ್ಳ ಗೊಣ್ಣೆ ತೆಗೆಯಾಕೆ ಬರ್ದಾನು ದೇಸ ಇನ್ನೆಂಗೆ ಆಳ್ತಿದ್ದಾನು ಅವನ ಅಸ ಅಡಗ ಅಂತಂದು ಹಿಡಿಹಿಡಿ ಶಾಪಹಾಕ್ತು. ಮಗನ್ನ ನೋಡ್ದೆ ಈವಜ್ಜನ ಜೀವ ಹೋಗಂಗೆ ಕಾಣಲ್ಲ. ಮಗ ಬರಂಗಿಲ್ಲ. ಹಿಂಗಾರೆ ಮನಿ ತುಂಬಾ ತುಂಬಿಕೊಂಡ ನೆಂಟರಾ ಸಂಭಾಳಿಸೋದಾರ ಹೆಂಗೆ? ಹೇನು ತಲೆನಾ ಪರಪರ ಕೇರಿತು ಮುದ್ಕಿ. ಅವನು ಬರ್‍ದೆ ಈವಜ್ಜ ಆಕಾಸಕ್ಕೆ ಕಣ್ಣು ಮಾಡಿ ಉಸಿರಾಡ್ತು. ಹಿಂಗೇ ಬಿಟ್ಕಂಡಿದ್ರೇನ್ ಬಂತು ಉಪೇಗ, ಸಿವ ಇದರ ಕಣ್ಣಾರ ಮುಚ್ಚುಬಾರ್ದ ಅಂತಂದು ಮುದ್ಕಿ ತನ್ನ ಸೌಭಾಗ್ಯ ಮಾಂಗಲ್ಯ ಭಾಗ್ಯಾನೂ ಕಳ್ಕೊಂಬಾಕೆ ತಯಾರಾತು. ಅಜ್ಜ ಮುಷ್ಕರ ಹೂಡ್ದಂಗಿತ್ತು. ಸೊಸಿ ಒಬ್ಳು ನೆಟ್ಟಿಗೆ ಮುರಿದ್ಳು. ಅಜ್ಜ ಜುಮ್ಮೆನ್ನಲಿಲ್ಲ. ಸಿಟಿಗೂ ತಾರ್ ಮೇಲೆ ತಾರ್ ಕೊಟ್ಟರು ನೆಂಟರು. ಸಿಟಿನಾಗೆ ತನ್ನ ಪಕ್ಸದ ಸೀಟೇ ಅದುರಿ ಅಲ್ಲಾಡೋವಾಗ ತೊಂಬತ್ತರ ಗಡಿ ದಾಟಿದ ಅಜ್ಜನ ಸೀಟು ಖಾಲಿ ಆಗೋದರ ಬಗ್ಗೆಯೆಲ್ಲಾ ನಾಯಕ ತಲೆ ಕೆಡಿಸಿಕೊಳ್ಳೋದು ವಿಹಿತವೂ ಅಲ್ಲ. ವಿವೇಚನೆಯೂ ಅಲ್ಲ. ದೇಶದ ಭಾರ ತಗ್ಗಬೇಕಲ್ಲ ಮತ್ತೆ ಸತ್ತರೆ ಅವನೇ ಸತ್ತ.

ವಜ್ಜ ಸಾಯಲಿಲ್ಲ. ಮಗ್ಗಲು ಹಾಸ್ಗೆ ಮೈಗಂಟಿ ಬೆನ್ನೆಲ್ಲಾ ವ್ರಣವಾಗಿ ಹುಳುಬಿದ್ದು ಅಜ್ಜ ನಾರೋವಾಗ ನರಳೊವಾಗ ನಾತ ತಡಿಲಾರ್ದ ಮನೆಯೋರು ಕೂಳು ನೀರು ಬಿಡಂಗಾತು. ಈಗಾರ ನೆಂಟರು ಹೋದಾರೇನೋ ಅಂದ್ರೆ ಅವು ಬೆಳದಿಂಗಳಾಗೆ ಕೂತು ಉಂಡ್ವು. ದುರ್ನಾತಕ್ಕೆ ಅಡ್ಜಸ್ಟ್ ಆಗಿಹೋದ್ವು. ಅಪ್ಪನ ಚಿತೆಗೆ ಬೆಂಕಿ ಇಕ್ಕಕಾರ ಬರ್ದಂಗೆ ಇದ್ದಾನೆ ಪಸ್ಟ್‍ಸನ್ನು ಅಂತಂದು ತೀರ್ಮಾನ ತಗಂಡು ಕದಲದಂಗೆ ಕುಂತ್ವು – ಕೈನಾಗೆ ಅಪ್ಲಿಕೇಶನ್ ಹಿಡ್ಕಂಡು. ಈವಜ್ಜ ಸಾಯೋನಲ್ಲ. ನಮ್ಮನ್ನೆಲ್ಲಾ ಸಾಯ್ಸಿ ಸಾಯ್ತಾವ್ನೆ ಅಂಬ್ತ ಮನೆ ಮಂದಿ ಮಕ್ಳು ರುದ್ದರಾದಿಯಾಗಿ ಲಟಿಕೆ ಮುರಿದು ಸಾಪಳಿಸಿದ ರಾತ್ರಿಯೇ, ಅಜ್ಜ ಆಕಾಸಕ್ಕೆ ನೆಟ್ಟ ಕಣ್ಣು ಕಿತ್ತು ಪಟ್ ಅಂತ ಮುಚ್ಚಿ ಕಣ್ತು. ಇಡೀ ಮನೆಯಾಗೆಲ್ಲಾ ತುಂಬ್ಕಂಡ ಗೊರ್ ಗೊರ್ ಸಬ್ಬ ಇದ್ದಕ್ಕಿದ್ದಂಗೆ ನಿತ್ಕಂಡಾಗ ಬೆಚ್ಚಿಬಿದ್ದ ಅಜ್ಜಿ, ಅಜ್ಜನ ಮಾರಿ ನೋಡ್ತು. ಮಕ್ಕಂಡಾನೆ ಮುದ್ಕ, ಅಜ್ಜಿ ಸೆರಗಿನ ತುದಿಗೆ ಎಂಜಲು ಹಚ್ಚಿ ಚೂಪಗೆ ವಸ್ದು ಅಜ್ಜನ ಕಣ್ಣಿನಾಗೆ ಇಟ್ಟು ನೋಡ್ತು. ರೆಪ್ಪೆ ಬಡೀನಿಲ್ಲ. ಮೂಗಿಂತಾವ ಕೈತಾಗಿಸ್ತು ಉಸಿರು ಬಡೀನಿಲ್ಲ. ಖಾತರಿ ಆತು. ಬುಳುಬುಳು ಅಳ್ತು. ‘ನನ್ನ ಒಂಟಿ ಮಾಡಿ ಹೋದ್ಯಲ್ಲೋ ನೀನ್ ನೆಗ್ದು ಬಿದ್ದು ಸಾಯಾ. ನನಗಿನ್ನಾರು ದಿಕ್ಕೋ ಸಿವ್ನೆ’ ಅಂಬ್ತ ಪ್ರಲಾಪ ಮಾಡ್ತು. ಈಗ ಮನಿಮಂದೆಲ್ಲಾ ಒಂತಾರ ಹಬ್ಬ. ನೆಂಟರ್‍ಗೆಲ್ಲಾ ಹಿಡಿದ ಗ್ರಾಣ ಬಿಟೋಟು ಖುಸಿ, ಕೂಗಾಡೋರೆ ಎಲ್ಲಾ. ಪಕ್ಕದ ಊರಿಗೆ ದೌಡಿ ‘ಫಾದರ್ ಎಕ್ಸ್‍ಪೇರ್‍ಡ್’ ಅಂತ ಸ್ಯಾಲಿ ಮಾಸ್ತರೆ ಖುದ್ದಾಗಿ ಹೋಗಿ ತಾರ್ ಕೊಟ್ಟು ಬಂದರು. ತಮ್ಮ ಕಾಸಿನಾಗೆ. ಅದೆಂಗೆ ಪೇಪರ್‍ನವ್ಕೆ ಸುದ್ದಿ ಹೋತು ಸಿವನೇಬಲ್ಲ. ಮರುದಿನ ಎಲ್ಲಾ ಪೇಪರ್‌ನಾಗೂ ದೂ.ದೇ.ದೂ ನಾಯಕನ ತಂದೆ ಪರಸಪಜ್ಜ ದೈವಾದೀನ ಅಂಬೋ ಸುದ್ದಿ ಹೆಡ್‌ಲೇನ್‌ನಾಗೆ ಫ್ರಂಟ್ ಪೇಜಿನಾಗೆ ಅಪ್ಪರ್ ಸೈಡ್‌ನಲ್ಲೇ ಕಾಣ್ತು. ಅದರಾಗೆ ದೇಶದ ನಾಯಕ ಕತ್ತಲಹಳ್ಳಿನಾ ವಿಜಿಟ್ ಮಾಡೋ ಸುದ್ದಿನೂ ಅಚ್ಚಾಗಿತ್ತು. ಇಡೀ ಹಳ್ಳಿ ಅಂಬೋ ಹಳ್ಳಿನ್ಯಾಗೇ ಜೀವ ಸಂಚಾರವಾತು. ಹೊಸಗಾಳಿ ಬೀಸೋಕೆ ಸುರುವಾತು.

ಸೂರ್ಯೋದಯಕ್ಕೆ ಮುಂಚೇನೆ ಕಾರುಗಳು ಜೀಪುಗಳು ಲಾರಿಗಳು ವ್ಯಾನುಗಳು ದಡಪಡಿಸಿ ಬಂದವು. ಅದರಾಗಿಂದ ಹಳ್ಳದಂಗೆ ಜನ ತುಪುತುಪು ಇಳಿದುಬಂದರು. ಕೂಲಿನಾಲೇರು, ಸೂಟು ಬೂಟಿನೋರು ಖದ್ದರ್ ಷರಾಯಿಗಳೋರು ಬಂದರು. ಹಳ್ಳಿಮಂದಿಗೂ ಕೂಲಿ ಕೆಲಸಸಿಗ್ತು. ಇಲಿಕ್ಯಾಪ್ಟರ್‌ನಾಗೆ ನಾಯಕರು ಬತ್ತಾರೆ ಅಂದರು. ಹಳ್ಳಿಗರ ಹಿಗ್ಗು ನೂರ್ಮಡಿಸಿತು. ನಾಯಕನ ಅಕ್ಕತಂಗೀರ ತಮ್ಮಂದಿರ ಆನಂದಕ್ಕೆ ಪಾರವಿಲ್ಲ. ಭಾಳಮಂದಿಗೆ ನಾಯಕನಿಗಿಂತ ಇಲಿಕ್ಯಾಪ್ಟರ್ ನೋಡೋ ಖುಸಿ. ನೆಲ ಹೊಲ ಹಸನುಮಾಡೋ ಕೆಲ್ಸ ನಡೀತು. ಹಳ್ಳಿ ಹೊರಗಡೆ ಬಯಲಾಗೆ ಕುಕ್ಕರಗಾಲ್ನಾಗೆ ಬಿದ್ದು ಕಾಯ್ತಾ ಕುಂತ್ವು. ಟ್ರಾಕ್ಟರ್‌ಗಳೂ ಗಡಗಡ ಸೌಂಡ್ ಮಾಡ್ತಾ ನೆಗೀತಾಬಂದ್ವು. ತಾರಿನ ಡಬ್ಬಗಳು ಉಲ್ಡಿ ಬಂದವು. ಬೀದಿ ಅಂಬೋ ಬೀದೆಲ್ಲಾ ಕಪ್ಪು ಬಣ್ಣ ಬಳ್ಕೊಂಡು ಸಿಂಗಾರ ಆತು. ಬೋರ್‌ವೆಲ್ ಕೊರೆಯೋರು ಲಾರಿನಾಗೆ ಮಿಷನ್ ಹೊತ್ಕಂಡು ಬಂದರು. ಹಳ್ಳಿ ತುಂಬಾ ಗದ್ದಲವೋ ಗದ್ಲ. ಬೋರ್‌ವೆಲ್‌ಗಳು ದಶದಿಕ್ಕುನಾಗೆ ಕುತ್ಕಂಡವು. ಎಲ್ಲರೂ ನೀರು ಜಗ್ಗಿ ಕುಡಿದಿದ್ದೇ ಕುಡಿದಿದ್ದು, ಟೆಂಪರರಿ ನಲ್ಲಿಗಳೂ ಬಿದ್ದವು. ಟೆಂಪ್ರರಿ ಬೀದಿ ದೀಪಗಳು ಕಂಬಗಳು ಕಮಾನುಗಳೂ ಹತ್ಕಂಡವು. ಟೆಂಪ್ರರಿ ಕಕ್ಕಸುಗಳೂ ಎದ್ದವು. ಊರಗಲ ಸ್ಯಾಮಿಯಾನಗಳು ಸ್ಯಾಲೆ ಮುಂದಿಣಿಂದ ನಾಯಕನ ಮುರುಕಲ ಮನೆತಂಕ ಹೊಚ್ಚಿದರು. ಲಾರಿಗಳು ಲೋಡುಗಟ್ಟಲೆ ದಿನಸಿ ಸಾಮಾನು ಮಸಾಲೆ ಸಾಮಾನು ಕುರಿ ಕೋಳಿಗಳನ್ನ ಹೊತ್ತುತಂದವು. ಹಳ್ಳಿ ಮಂದಿ ಮಸಾಲೆವಾಸ್ನೆ ಊಹಿಸಿಕೊಂಡೇ ಕುಣಿದಾಡಹತ್ತಿದ್ದವು. ಇಲಿಕ್ಯಾಪ್ಟರ್‌ ಇಳಿಯೋಕೆ ಜಾಗ ಸಜ್ಜಾತು. ದೇಶದಾಗಿರೋ ಪೋಲಿಸರೆಲ್ಲಾ ಬಂದು ಜಮಾಯಿಸಿದರು. ಗನ್‌ನೋರು. ರಿವಾಲ್‌ವಾರ್‌ನೋರು, ಲಟ್ಟಿದೋರು, ಬೂಟ್‌ನೋರು, ಕೆಂಪುದೀಪದ ಕಾರಿನೋರು ಗೂಟದ ಬಾವುಟದ ಕಾರಿನೋರು ಬರ್ರ್ ಅಂತ ಅಡ್ಡಾಡಿದ್ದೇ ಅಡ್ಡಾಡಿದ್ದು.

ಯಾರೂ ದೇಶದ ನಾಯಕನ ಮನೆಯೋರ ಕ್ಯಾರೆ ಅನ್ನಲಿಲ್ಲ. ಸತ್ತ ಸವನೂ ನೋಡಲಿಲ್ಲ. ಒಂದುದಿನ ಕಳ್ದು ಎಲ್ಡನೇ ದಿನವೂ ಆಗಿ ಸವದ ಹೊಟ್ಟೆ ಊದ್ಕಂಡಾಗ ಅಜ್ಜಿಗೆ ಅಂಗಾಲಿಂದ ನಡುನೆತ್ತಿವರ್‍ಗೂ ರೇಗಿಹೋತು. ‘ಅವನ್ನೇನ್ಲಾ ಕಾಯ್ತಿರಾ ಋಣಪಾತಕನ್ನ. ಎತ್ತರ್ರಲಾ ಸವಾನಾ’ ಅಂತ ಕೂಗಾಡಿತು. ‘ನಾಯಕರು ಬರೋವರ್‍ಗೂ ಹೆಣ ಎತ್ತಂಗಿಲ್ಲ’ ಕಾಕಿಧಿರಸಿನ ಡೊಳ್ಳು ಹೊಟ್ಟೆಯವನೊಬ್ಬ ಹೊಡೆದ ರೋಪ್‌ಗೆ ಅಜ್ಜಿಯ ಗಂಡುಮಕ್ಳು ತಿಕಮುಚ್ಕಂಡು ಸುಮ್ಮಗಾದರು. ಅಜ್ಜಿನಾರ ಮಾಡದೇನೈತೆ. ‘ಅವನು ಕಮೀಸನರ್ ಅಂತೆ ಕಣವ್ವ’ ಅಂತ ವಯ್ಯಾರ ಮಾಡಿದಳೊಬ್ಬಳು ನೆಂಟಿ. ‘ಕಂಡ್ಯಾ ನಿನ್ನ ಮಗನ ಪ್ರತಾಪಾವಾ, ಹೆತ್ತರೆ ಇಂತ ಮಗೀನ ಹೆರಬೇಕ್ ಕಣೆ ಇಡೀ ಹಳ್ಳಿ ಅಂಬೋ ಹಳ್ಳಿನೇ ಇಂದ್ರನಗರಿ ಆಗೋತು, ಭೇಷ್ ನಂತಾಯಿ’ ನೆರಮನೆ ಮುದ್ಕಿಯೊಬ್ಬಳ ಅಪ್ರಿಸಿಯೇಸನ್ನೂ ಬಂತು. ಅಜ್ಜಿ ಸೈಲೆಂಟ್ ಆತಷ್ಟೆ. ಹೊರಾಗ್ ಎದ್ದು ಬಂದು ಒಮ್ಮೆ ಕಿರುಗಣ್ಣಾಗೂ ಇಂದ್ರನಗರಿ ನೋಡಲಿಲ್ಲ. ಉಸೂರ್ ಅಂತು. ಗಂಡನ ಸವಕ್ಕೆ ಮುತ್ತೋ ನೊಣ ಜಾಡಿಸ್ತಾ ಕುಂತು. ‘ಮುಂಡೇ ಮಗ ಅತ್ಲಾಗೆ ಬಂದಾನ ಹೋಗುವಲ್ಲ. ಸವದ ಹೊಟ್ಟೆ ಡಬ್ ಅಂದ್ರೇನ್ಲಾಗತಿ’ ಅಂತಂದು ಮನದಾಗೆ ಶಾಪ ಹಾಕ್ತು. ದೇಶದ ನಾಯಕನಾದರೇನು ತಾಯಿಯ ಸಾಪಳಿಕೆ ತಟ್ಟದೇ ಬಿಟ್ಟೀತೆ.

ಇಲಿಕ್ಯಾಪ್ಟರ್ ಬರೋ ಸದ್ದು ಇಡೀ ಹಳ್ಳಿನೇ ಗಡಗಡ ನಡುಗಿಸಿಬುಡ್ತು. ಮುದ್ದೆ ಕೂದಿಸೋದು ಅಲ್ಲೇ ಬಿಟ್ಟು, ಮಕ್ಕಳಿಗೆ ಎದೆ ಬಿಡ್ಸಿ, ಉಣ್ಣಾ ಗಂಗಳಾದಾಗೆ ನೀರು ಹುಯ್ದು, ಸೇದಾಬಾವಿನಾಗೆ ಕೊಡಬಿಟ್ಟು, ಗೆಯ್ಯೋ ನೇಗಿಲು ಅಲ್ಲೆ ಬಿಸಾಡಿ, ಗುಡಿಯಾಗಳದೇವರ್‍ನ ಅಲ್ಲೆ ಹೊಸಾಡಿ, ಗಂಡನ ತೆಕ್ಕೆಲಿಂದ ಹೊಡ್ಕಂಡು ಮಕ್ಳ ಮರಿನಾ ಮರ್ತು, ಕೈನಾಗ್ಳ ಬೀಡಿ ಬಿಸಾಡಿ, ಚಾ ಬಟ್ಟಲು ಹೊಗ್ದು, ಒಬ್ಬರಾನಾ ಮನೆಯಾಗೆ ಇರ್ದಾಂಗೆ ಅಬಾಲರುದ್ಧರಾದಿಯಾಗಿ ಈಚೆಕಡೆ ಓಡಿಬಂದವು. ಇಲಿಕ್ಯಾಪ್ಟರ ತಲೆಮೇಲಿನ ಚಕ್ರ ನೋಡುತ್ಲು ಇಸ್ಣುಚಕ್ರಾನೇ ಪ್ರತ್ಯಕ್ಷ ಕಂಡಂಗಾಗಿ ಕೈ ಮುಗಿದು ಕೇಕೆ ಹೊಡೆದ್ವು. ದೇಶದ ನಾಯಕನಿಗೆ ಜಯಕಾರವೋ ಜಯಕಾರ, ಅದೆಲ್ಲಿದ್ದವೋ ಏನೊ ಲಾರಿಗಟ್ಟಲೆ ಹೂವು ಆತನ ಕೊಳ್ಳ ತುಂಬಾ ಬಿದ್ದವು. ಅವರಿವರು ಕೈ ಕುಲುಕಿದರು. ಸಿಟಿಯಿಂದ ಬಂದು ಮೊದ್ಲೆ ಟಿಕಾಣಿ ಹೊಡ್ದೋರು. ಹಳ್ಳಿಮಂದಿ ಯಾರೂ ನಾಯ್ಕನ ತಾವ ಸುಳಿದಾಡ್ದಂಗೆ ಪೋಲಿಸಿನೋರು ಸರ್ಪಕಾವಲು ಕಾದರು. ಎಲ್ಲರನ್ನೂ ಅದೆಂತದೋ ಸೊಟ್ಟ ಕಬ್ಬಿಣ ಹಿಡ್ದು ತಲಾಷ್ ಮಾಡಿದ್ದೂ ಮಾಡಿದ್ದು, ಹಳ್ಳಿ ಮಾಸ್ತರನೆಂಬ ಹಿರೇ ಮನಸ್ಸನ್ನ ನಾಯಕನ ಜುಬ್ಬದ ತುದಿ ತಾವ್ಕೂ ಹೋಗಾಕ್ ಬಿಡಲಿಲ್ಲ. ಇಲಿಕ್ಯಾಪ್ಟರ್ ಇಳಿದು ಸೊಟ್ಟಗೆ ನಗ್ತಾ ಎಲ್ಲರಿಗೂ ಆಯಪ್ಪ ಕೈ ಮೇಲೆತ್ತಿ ನಮಸ್ಕಾರ ಮಾಡೋವಾಗ ಹಳ್ಳಿಮಂದಿ ಕೇಕೆ ಹಾಕಿ ಸೀಟಿ ಚಪ್ಪಾಳೆ ಹೊಡೆದವು. ‘ಎಂಥ ನಿಗರ್ವಿ ನಂ ಸಂಕವ್ವತ್ತೆ ಮಗ’ ಅಂತ ಗುಣಗಾನ ಮಾಡಿದವು.

ನಾಯಕ ನೇರ ತನ್ನ ಮುರುಕಲ ಮನೆಗೆ ಬಂದ. ಹಿಂದೆಯೇ ಟಿ.ವಿ. ಜನ ಪೇಪರ್‍ನೋರು ಅಧಿಕಾರಿಗಳು ನುಗ್ಗಿದರು. ಮನೆಯಲ್ಲಿ ಬಿದ್ದಾತೋ ಅಂತ ತಮ್ಮಂದಿರು ಉಗುಳು ನುಂಗಿದರು. ಸವದ ಸನಿಯ ಬಂದು ನಿಂತ ನಾಯಕ ಕಣ್ಣಿನಾಗೆ ನೀರು ತಂದ್ಕಂಡ. ತನ್ನ ಕೊಳ್ಳನಾಗೆ ಉಳ್ಕಂಡಿದ್ದ ಹಾರನೆಲ್ಲಾ ತೆಗ್ದು ಮೂಳೆ ಚಕ್ಕಳವಾಗಿದ್ದ ತಂದೆ ಸರೀರ ಕಾಣ್ದಂಗೆ ಹೊಚ್ಚಿದ. ತಾಯಿ ಪಾದ ಮುಟ್ಟಿ ಕಣ್ಣೀರು ತೊಡೆದ. ಮನೆ ತುಂಬಾ ಮಿಂಚುಗಳು. ಸನ್‌ಗನ್‌ಗಳ ಬೆಳಕು. ಅಜ್ಜಿ ಕಣ್ಣುಗಳಿಗೆ ಬಗ್ಗನೆ ಸನ್‌ಗನ್‌ಗಳ ಬೆಳಕು. ಅಜ್ಜಿ ಕಣ್ಣುಗಳಿಗೆ ಬಗ್ಗನೆ ಉರಿಹತ್ತಿ ಮಗನ ಐಭೋಗ ನೋಡಲಾಗದೆ ಎಲ್ಡು ಕಣ್ಣು ಮುಚ್ಕೊಂಡು ಗೊಣಗೊಣ ಅಂತು. ಗದ್ದಲದಾಗೆ ಕೇಳಲಿಲ್ಲ. ‘ಸವಸಂಸ್ಕಾರ ಮಾಡೋನೇನಣ್ಣಾ’ ಒಬ್ಬ ತಮ್ಮ ಅಣ್ಣಂತಾವ ಹೋಗಲು ಜಾಗವಿಲ್ದೆ ಪರದಾಡ್ತಾ ಕೂಗಿ ಕೂಗಿ ಕೇಳಿದ. ನರಿ ಕೂಗು ಗಿರಿಗೆ ಮುಟ್ಟುವಂತಿರಲಿಲ್ಲ. ಹೂವಿನ ಚಟ್ಟ ಅದೆಲ್ಲಿತ್ತೋ ಬಂತು. ಬಡ್ಡಿಮಕ್ಳು ಪೋಲೀಸ್ನೋರು ತಮ್ಮ ಮನೆ ಸವ ಎಂಬಂತೆ ಮುಂದೆ ನಿತ್ಕಂಡು ದುರ್‍ವಾಸ್ನೆಗೂ ಅಂಜದೆ, ಸವಕಾದ ಅಭ್ಯಾಸಬಲದ ಮ್ಯಾಲೆ ಸವಕ್ಕೆ ಸ್ಯಾನ ಮಾಡ್ಸಿ ಹೊಸ ಅರಿವೆ ಉಡಿಸಿ ಸವ ಸಿಂಗಾರಮಾಡಿ ಚಟ್ಟದ ಮ್ಯಾಗೆ ಮಲಗಿಸಿದರು. ಸವದತ್ತ ಮುದ್ಕಿನ್‌ಸತ ಬಿಡಲಿಲ್ಲ. ಮುದ್ಕಿ ಬಾಯಿ ಬಾಯಿ ಬಡ್ಕಂಡ್ರೆ ದುಃಖ ಪಾಪ ಅಂದ್ರು ಮಂದಿ. ಸವಯಾತ್ರೆ ಹೊರಟಿತು. ಹಿಂದೆ ಮುಂದೆ ಕಾರು, ಜೀಪು, ವ್ಯಾನು, ಲಾರಿಗಳು ಸಿಟಿ ಜನಗಳು ಬ್ಯಾಂಡಿನೋರು ಪೋಲೀಸ್ ಬ್ಯಾಂಡಿನೋರು ಎಲ್ಲಾ ಮುತ್ಕಂಡ್ರೆ ಹಳ್ಳಿ ಜನ ಸಲೂಪವೇ ಆತು. ನಾಯಕನ ಸನಿಯ ಸೂಟಿನೋರು ಒಂದಿಬ್ಬರು ಸಿನೆಮಾ ಆಗಡ್ರಿಸ್ಸು ಬಂದರು. ಕೆಂಪು ತೊಗಲಿನ ಎತ್ತರದ ಹೊಕ್ಕಳ ಕೆಳಗೆ ಸೀರೆ ಉಟ್ಟ ಹೆಂಗಸರೂ ಟುಸ್ ಪುಸ್ ಅಂತ ಆಯಪ್ಪನ ಪಕ್ಕಾನೇ ಬಿಡಲಿಲ್ಲ. ಅಣ್ಣಂತಾವ ಮಾತಾಡೋ ಆಸಿ ಅಕ್ಕತಂಗೇರ್‍ಗೆ. ಆದರೂ ಆಜುಬಾಜು ಜಾಗ ಸಿಕ್ಕಲೆಲ್ಲಾ ಗಿರ್‍ಕಿ ಹೊಡೆದವು. ಅಣ್ಣಿರ್‍ಲಿ ಅಣ್ಣನ ಜುಬ್ಬದ ತುದಿ ಗುಂಜೂ ಸಿಗವಲ್ದು. ತಮ್ಮ ಬಡತಾನವೆಲ್ಲಾ ಹೇಳ್ಕಂಡು ಮಕ್ಳಿಗೆ ಕೆಲಸನಾರ ಕೇಳೋಂವಾ ಅಂಬ ಕಕುಲಾತಿ. ಹೊಸ ಎತ್ತುಗಾಡಿನಾರಾ ಕೊಡಿಸಪ್ಪೋಯಣ್ಣಾ ಅಂತ ಕೇಳೊ ಆಸೆ ತಮ್ಮಂದಿರ್‍ಗೆ. ಪ್ಯಾಟೆ ತೋರ್‍ಸು ಮಾಮ, ಇಲಿಕ್ಯಾಪ್ಟರು ಹತ್ಸು ಮಾಮ, ದೊಡ್ಡಪ್ಪಾ ಅಂತ ಕೇಳೋ ಆಸೆ ಕಳ್ಳು ಸಂಬಂಧಿ ಹೈಕಳಿಗೆ. ಆದರೆ ಪೋಲಿಸಿನೋರು, ಅವರ ಬಂದೂಕ ನೋಡಿ ಎಲ್ಡ ಬಂದಂಗಾಗಿ ಆಸೆಗುಳ್ನೆಲ್ಲಾ ಅದಮ್ಕಂಡು ಹಿಂದಿಂದೆ ಅಡ್ಡಾಡಿದವು.

ನಾಯಕನದೆಂಬ ಹೊಲದಾಗೆ ಸವಾನ ಇಕ್ಕಿ ಕಡಿ ಪೂಜೆ ಮಾಡಿದರು. ಅಜ್ಜಿ, ಮಕ್ಳು, ಸೊಸಿಯಂದಿರ್‍ನ ಕ್ಯೂನಾಗೆ ದರುಶನಕ್ಕೆ ಬಿಟ್ಟರು. ಆಮೇಲೆ ಅತ್ಲಾಗೆ ತಳ್ಳಿಬಿಟ್ಟರು. ಅಜ್ಜಿ ಬಳೆ ಒಡಿಬೇಕು. ಕುಂಕಮಾವ ತೆಗಿಬೇಕು ಅಂತಂದು ಒಂದಿಷ್ಟು ಮುದ್ಕಿರು ರಾಗ ಎಳೆದಾಗ ನಾಯಕ ರೇಗಿದ. ‘ಅದೆಲ್ಲಾ ಗೊಡ್ಡು ಸಂಪ್ರದಾಯ, ಹೆಂಡ್ತಿ ಸತ್ತಾಗ ಗಂಡ ಏನ್ ತೆಗಿತಾನೆ? ಹೆಣ್ಣಿಗೆ ಹುಟ್ಟಿದಾಗಿಂದ ಬಂದ ಕುಂಕುಮ ಬಳೆ ಹೂವು ಯಾಕೆ ಬೇಡ?’ ಭಾಷಣ ಬಿಗಿದೇಬಿಟ್ಟ. ಮುಂದಾಳುಗಳು ಗಗನ ಬಿರಿಯಂಗೆ ಚಪ್ಪಾಳೆ ಇಕ್ಕಿದರು. ಅಜ್ಜಿಗೆ ದಿಕ್ಕು ತೋಚದಂಗಾಗಿ ಮುಳು ಮುಳು ಅಳ್ತು. ಗದ್ದಲದಾಗೆ ಅಜ್ಜಿಗೇ ಕೇಳಲಿಲ್ಲ. ನಾಯಕನು ಚಿತೆಗೆ ಅಗ್ನಿಸ್ಪರ್ಶ ಮಾಡಿದ. ೨೧ ಶೋಕ ಸೂಚಕ ಕುಶಾಲ ತೋಪುಗಳು ಹಾರಿದವು. ಪೋಲೀಸ್ ಬ್ಯಾಂಡ್ ಬಜಾಯಿಸಿದರು. ಪುರೋಹಿತರು ವೇದಮಂತ್ರ ಉಗುಳಿದರು. ಪಾದ್ರಿ ಜಪ ಮಾಡಿದ. ಸಾಬಿ ಕುರಾನ್ ಮುಲುಗಿದ – ಸರ್ವಧರ್ಮ ಸಮನ್ವಯ ಅಂದ್ರೇನ್ ಮತ್ತೆ. ಅಜ್ಜನ ಮಡಿಕೋಲಿನಂತಹ ದೇಹ ಬುಗಬುಗನೆ ಉರಿದು ಬೂದಿಯಾಗಿ ಹೋತು.

ಮಸಣದಿಂದ ಮನೀಗ್ ಬಂದು ಸಾರಿಸಿ ಬಳ್ದು ತೊಳ್ದು ಮಾಡಿದರು. ನಾಯಕ ಮಾತ್ರ ತಾನು ಓದಿದ ಸ್ಯಾಲೆನಲ್ಲೆ ಸುಪ್ಪತ್ತಿಗೆ ತರಿಸ್ಕೊಂಡು ಮೊಕ್ಕಾಂ ಮಾಡ್ಡ. ಸೊಸಿ ಮೊಮ್ಮಕ್ಳು ಎಲ್ಲಲೆ? ಅಂತ ಕೇಳೋ ಆಸೆ ಅಜ್ಜಿಯ ಗಂಟಲದಾಗೆ ಉಳ್ಕಂತು. ಕೇಳೋ ಆಸಿನೂ ಹಿಂಗಿಹೋತು. ಸ್ಯಾಲಿನಲ್ಲೇ ಪಕ್ಷದ ಸಭೆ ನಡೀತು. ತಮ್ಮಂದಿರು ಜಾಗ ಮಾಡ್ಕೊಂಡು ಸನಿಯಕ್ಕೆ ಬಂದು ಅಣ್ಣನ ಮುಂದೆ ನಿಂತರು. ಹನ್ನೊಂದು ದಿನದ ತಿಥಿ ಮಾಡೋತಂಕ ಹೋಗಬ್ಯಾಡಣ್ಣಾ ಅಂದರು. ಅದೆಲ್ಲಾ ನೀವ್ ನೀವೆ ಮಾಡ್ಕಳಿ, ಮೂರುದಿನದ ಕಾರ್ಯ ಮುಗಿಸ್ಕೊಂಡು ಹೋಗ್ತಿನಿ. ನನಗೆಲ್ಲಿದೆ ಟೈಮು? ಜಬರಿಸಿದ ನಾಯಕ, ದುಸುರಾ ಮಾತು ಬರಲಿಲ್ಲ. ನಾಳೀಕೆ ಮೂರ್‍ನೆ ದಿನದ ಕಾರ್ಯ ಮುಗಿಸಿ ಅಂದ ನಾಯಕ. ‘ವುಂಟೆ ಮಾಸ್ವಾಮೆ, ಸುಟ್ಟು ಎಲ್ಡು ದಿನದ ಮ್ಯಾಗೆ ಬೂದಿ ತಕ್ಕಂಡು ಬಂದು ಮಾಡ್ಬೇಕ್ ಕಣ್ರಾ’ ಅಂದ ಹಿರಿಮುಪ್ಯಾನೊಬ್ಬ. ‘ನಾಳೆನೇ ಬೂದಿ ಅಂತ ಕಾರ್ಯ ಮುಗಿಸಿಬಿಡ್ರಲಾ’ ದೇಶದ ನಾಯಕ ಗದರಿದ. ಯಾರೂ ಮತ್ತೆ ಉಸಿರೆತ್ತಲಿಲ್ಲ.

ನಾಯಕ ಇದ್ದ ಮೂರು ದಿನವೂ ನೂರಾರು ಕುರಿ ಕೋಳಿಗಳು ತಮ್ಮ ಜೀವ ತ್ಯಾಗಮಾಡಿ ಸಾವಿರಾರು ಮಂದಿ ಹೊಟ್ಟೆ ತುಂಬಿಸಿದವು, ಹೆಂಡ ಖಂಡದ ಹೊಳಿ ಹರೀತು. ಸುತ್ತಲ ಮುತ್ತಲ ಹಳ್ಳಿಗೂ ಮಸಾಲೆ ವಾಸ್ನೆ ಹುಳಿನಾತ ವ್ಯಾಪಿಸಿತು. ಸಾವಿರಾರು ಜನ ಬಂದರು ಉಂಡರು. ಟೆಂಪರರಿ ಕಕ್ಕಸಿನ ಸದುಪಯೋಗ ಪಡೆದರು. ನಲ್ಲಿಗಳೂ ಕೊಳಕಾದವು. ದೀಪಗಳೂ ಮಂಕಾದವು. ಎಲ್ಲಂದರಲ್ಲಿ ಓಲಾಡೋ ಜನ. ಪರಸಪಜ್ಜನ ತಿಥಿ ಆದಂಗೆ ಹಿಂದೆ ಆಗಿನ್ನಿಲ್ಲ ಮುಂದೆ ಆಗಂಗಿಲ್ಲ. ಮಗ ಪುಣ್ಯವಂತ ಅಂತ ನಾಯಕನ್ನ ಕೊಂಡಾಡಿದರು. ಬಗೆ ಬಗೆಯ ಸಿಹಿಯೂಟ ತಯಾರಿಸಲೆಂದು ನೂರಾರು ಮಂದಿ ಉಡುಪಿ ಜನ ಬಂದಿದ್ದರು. ಸಿಹಿ ಉಂಡ ಬ್ರಾಂಬ್ರರು ‘ನಭೂತೋ ನಭವಿಷ್ಯತಿ. ಅಜ್ಜ ಸ್ಟ್ರೈಟ್ ಸ್ವರ್ಗಕ್ಕೆ ಹೋದ ಅಂತ ಹೊಟ್ಟೆ ಸವರಿಕೊಂಡರು. ಮೂರು ದಿನ ಹತ್ತಿದ ಒಲೆಗಳು ನಂದಲಿಲ್ಲ. ಊಟ ತಿಂಡಿ ಸರಬರಾಜಿಗೂ ತಡೆಯಿಲ್ಲ. ಎಲ್ಲರೂ ಉಂಡುಂಡು ತೇಗಿದರು. ಒಂದು ಹನಿ ನೀರನ್ನೂ ಬಾಯಿಗೆ ಹಾಕಿಕೊಳ್ಳದ ಜೀವವೂ ಒಂದಿತ್ತು – ಅದೇ ಆವಜ್ಜಿ. ಸಂಕವ್ವತ್ತೆ ಮಾಸ್ತರು ತಮ್ಮ ಸ್ಯಾಲೆ ಇಂಪ್ರೂಮೆಂಟ್ ಬಗ್ಗೆ ಅಲವತ್ತುಕೊಂಡಾಗ ಹಳ್ಳಿಗೆ ಕಾಲೇಜೇ ತರೋಣ ಬಿಡ್ರಿ ಅಂತ ನಾಯಕ ಅಶ್ವಾಸನೆ ಕೊಟ್ಟ. ಮಾಸ್ತರ ತಿಕ ಬಾಯಿ ಮುಚ್ಚಕಂಡು ಕುಂತ.

ಮತ್ತೆ ಇಲಿಕ್ಯಾಪ್ಟರು ಬಂತು. ದೇಶದ ನಾಯಕನಿಗಾಗಿ ಕಾರುಗಳು, ಜೀಪುಗಳು, ಲಾರಿ, ವ್ಯಾನುಗಳು ಸಿಟಿ ದಾರಿ ಹಿಡಿದವು. ಬೀದಿ ದೀಪಗಳು ಮಾಯ. ನಲ್ಲಿಗಳು ನಾಪತ್ತೆ. ಕಕ್ಕಸುಗಳೂ ಕಾಣಲಿಲ್ಲ. ತಾರ್ ರಸ್ತೆಯಾಗಲೇ ಜಖಂ ಆಗಿತ್ತು. ಬೋರ್‌ವೆಲ್‌ಗಳ ಕೈ ಪಂಪುಗಳು ಮಿಸುಗಪು. ಹಳ್ಳಿನಾಗೆ ಅಜ್ಜನ ಹೆಸರಲ್ಲಿ ಆಸ್ಪತ್ರೆ ಕಟ್ಟಿಸುವುದಾಗಿ ಭರವಸೆ ನೀಡಿದ ನಾಯಕ ತಮ್ಮ ಹೊಲವನ್ನೇ ಸರ್ಕಾರಕ್ಕೆ ಬಿಟ್ಟುಕೊಟ್ಟು ಸುದ್ದಿ ಮಾಡಿದ. ತಮ್ಮಂದಿರು ಲಬಲಬೋ ಅಂತ ಬಾಯಿ ಬಡ್ಕೊಂಡರು. ಗದ್ದಲ್ಲದಲ್ಲಿ ಕೇಳೋರು ಯಾರು? ಅಣ್ಣನ ಬಳಿ ಹೋಗಿ ಕಾಲಾರೂ ಹಿಡಿಯೋಣವೆಂದರೆ ಪೋಲೀಸರ ಭಯ.

ದೊಡ್ಡ ದೇಶದ ದೊಡ್ಡ ನಾಯಕ ಹೋಗುವಾಗ ದೊಡ್ಡ ಮನಸ್ಸು ಮಾಡಿ ಮನೆತಂಕ ಬಂದ. ಹಡೆದವ್ವನ ದರುಶನ ಮಾಡಲು ಹಿಂದೇ ನುಗ್ಗಿತು ಟಿ.ವಿ. ಮಂದಿ ಪೇಪರ್ ಮಂದಿ, ಇನ್ನಿಲ್ಲದಂಗೆ ಕರೆದರೂ ತಾಯಿ ಅಡಿಗಿಕೋಣೆ ಬಿಟ್ಟು ಎದ್ದು ಈಚೆ ಬರ್‍ನಿಲ್ಲ. ಪುಟ್ಟ ಬಾಗಿಲಾಗೆ ನಾಯಕನ ದೇಹ ಹಿಡಿಸದು ಎಂಗೋ ಒಳಾಗ್ ನುಸುಳಿಕೊಂಡು ಹೋದ. ಮಸಿಗತ್ತಲಲ್ಲಿ ಉರಿವ ಬೆಂಕಿತಾವ ಕುಂತಿದ್ದ ಅವ್ವ ಕತ್ತೆತ್ತಿಯೂ ನೋಡಲಿಲ್ಲ. ‘ಅವ್ವಾ ಬತೀನವ್ವ’ ಮಾರಿ ನೋಡಿದ ದೇಶದ ಮಗ. ಕುಂಕುಮವಿಲ್ಲ, ಬಳೆಯಿಲ್ಲ, ನತ್ತಿಲ್ಲ! ವಿಕಾರವಾದ ಮಾರಿನಲ್ಲಿ ಒಲೆಯಾಗ್ನ ಬೆಂಕಿನಂತದೇ ಬೆಂಕಿ ಉರಿತಾ ಇರೋದ್ನ ಗ್ರಹಿಸಿದ ದೊ.ದೇ.ದೊ. ನಾಯಕನ ಎದೆ ಕ್ಷಣ ಅದುರಿತು. ಪಾದ ಮುಟ್ಟಿ, ಶರಣು ಮಾಡಲು ಬಗ್ಗಿದ. ಸಟಕ್ಕನೆ ಪಾದ ಎಳೆದುಕೊಂಡಿತು ಅಜ್ಜಿ. ತಾನೇನಾದರೂ ಬಾಯಿಬಿಟ್ಟರೆ ಇಷ್ಟು ಮಂದಿ ಎದುರು ಉಗಿಯಲೂ ಹೇಸಳೆಂಬ ಗಿಲ್ಟಿ ಹೊಟ್ಟೆನಾಗೆ ಹುಟ್ಟಿದ ಪಿಸುಗಲ್ದೆ ಯಾರು ಅರಿತಾರು ಮತ್ತೆ. ‘ಬರ್‍ತಿನವ್ವ’ ಅಂತ ಮತ್ತೆ ಮೆಲ್ಲಗೆ ಉಸುರಿದ. ಅಜ್ಜಿ ಸರಕ್ಕನೆದ್ದು ಒಳಕೋಣೆಗೆ ಹೋಗಿ ದಬಾರನೆ ಬಾಗಿಲು ಹಾಕಿಕೊಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಖಾಂತ
Next post ರುಚಿ

ಸಣ್ಣ ಕತೆ

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಕೆಂಪು ಲುಂಗಿ

  ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

 • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

  ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…