ಮಾನವ ಶರೀರ : ವಿಸ್ಮಯಗಳ ಆಗರ

ಮಾನವ ಶರೀರ : ವಿಸ್ಮಯಗಳ ಆಗರ

ಮಾನವ ಶರೀರ ಬರೀ ಮೂಳೆ ಮಾಂಸದ ಮುದ್ದೆಯಲ್ಲ, ವಿಸ್ಮಯಗಳ ಆಗರವಾಗಿದೆ. ನಮ್ಮ ಶರೀರದ ಪ್ರತಿಯೊಂದು ಅಂಗಗಳು ನಿರ್‍ವಹಿಸುವ ಕಾರ್‍ಯಗಳನ್ನು ಅವಲೋಕಿಸಿದರೆ ವಿಸ್ಮಯವಾಗುವುದು ಖಂಡಿತ. ಅಂತಹ ವಿಸ್ಮಯಕರ ಸಂಗತಿಗಳನ್ನು ವಿವರಿಸುವ ಒಂದು ಸಣ್ಣ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ಮನುಷ್ಯನನ್ನು ಪ್ರಾಣಿ ರಾಜ್ಯದ ಸಸ್ತನಿ (ಮ್ಯಾಮಲಿಯಾ) ವರ್‍ಗದಲ್ಲಿ ಸೇರಿಸಲಾಗಿದೆ. ‘ಹೋಮೋ ಸೇಪಿಯನ್ಸ್’ ಮನುಷ್ಯನ ವೈಜ್ಞಾನಿಕ ಹೆಸರು. ಆಯುರ್‍ವೇದ ಆಚಾರ್‍ಯ ಚರಕನು ಶರೀರದ ವ್ಯಾಖ್ಯೆಯನ್ನು ಶ್ಲೋಕದ ಮೂಲಕ ಹೀಗೆ ವಿವರಿಸಿದ್ದಾರೆ. “ತತ್ರ ಶರೀರಂ ನಾಮ ಚೇತನಾ ಧಿಷ್ಠಾನಭೂತಂ ಪಂಚಮಹಾಭೂತವಿಕಾರ – ಸಮುದಾಯತ್ಮಕಮ್ ಸಂಯೋಗವಾಹಿ”. ಅಂದರೆ, “ಆತ್ಮವು ಚೇತನಾ ಸ್ವರೂಪವಾಗಿದ್ದು ಇದರ ಆಶ್ರಯ ಸ್ಥಾನವು ಪಂಚಮಹಾಭೂತಗಳಿಂದ ನಿರ್‍ಮಿತವಾಗಿದೆ – ಇದೇ ಶರೀರ” ಎಂದಾಗುತ್ತದೆ.

ಪಂಚೇಂದ್ರಿಯಗಳು

ಚರ್‍ಮ ನಮ್ಮ ದೇಹದ ಮೇಲ್ಮೈಯನ್ನು ಆವರಿಸಿದೆ. ಅದು ನಮ್ಮ ದೇಹದ ಅತಿ ದೊಡ್ಡ ಅಂಗ. ದೇಹವು ಸುಂದರವಾಗಿ ಕಾಣಲು ಚರ್‍ಮವೇ ಕಾರಣ. ಇದು ಎರಡು ಪದರುಗಳನ್ನು ಹೊಂದಿದೆ (ಎಪಿಡರ್‍ಮಿಸ್ ಮತ್ತು ಡರ್‍ಮಿಸ್). ನಮ್ಮ ಶರೀರದ ಮೇಲೆ ೨೦ ಘನ ಫೀಟುಗಳಷ್ಟು ಚರ್‍ಮವಿರುತ್ತದೆ. ಅದು ನಮ್ಮ ತೂಕದ ೧೦ನೇ ಒಂದು ಅಂಶ. ನಮ್ಮ ಚರ್‍ಮದ ಮೇಲೆ ೭೦ ಲಕ್ಷ ಛಿದ್ರಗಳಿವೆ. ನಮ್ಮ ಅಂಗೈಯಲ್ಲಿನ ಪ್ರತಿ ಘನ ಇಂಚು ಚರ್‍ಮ ಸುಮಾರು ೩,೦೦೦ ಶ್ವೇದಗ್ರಂಥಿಗಳನ್ನು ಹೊಂದಿರುತ್ತದೆ. ಪ್ರತಿ ೫೦ ದಿನಗಳಿಗೊಮ್ಮೆ ನಿಯಮಿತವಾಗಿ ಚರ್‍ಮದ ಹಳೆಯ ಜೀವಕೋಶಗಳು ಉದುರಿ ಹೊಸ ಜೀವಕೋಶಗಳು ಹುಟ್ಟಿಕೊಳ್ಳುತ್ತವೆ.

ಕಣ್ಣು ನಮ್ಮ ದೇಹದ ಪ್ರಮುಖ ಮತ್ತು ಅವಶ್ಯಕ ಅಂಗಗಳಲ್ಲೊಂದು. ನಮ್ಮ ಕಣ್ಣು ಸುಮಾರು ೧೭,೦೦೦ ಬಗೆಯ ಬಣ್ಣಗಳನ್ನು ಗುರುತಿಸಬಲ್ಲದು. ಕಣ್ಣಿನಲ್ಲಿಯ ರೆಟಿನಾವು ೧೩೭ ಮಿಲಿಯನ್ ಬೆಳಕು ಸಂವೇದನಾಶೀಲ ಜೀವಕೋಶಗಳನ್ನು ಹೊಂದಿದೆ. ಅವುಗಳಲ್ಲಿ ೧೩೦ ಮಿಲಿಯನ್ ರಾಡ್ ಜೀವ ಕೋಶಗಳು (ಕಪ್ಪು ಮತ್ತು ಬಿಳುಪು ದೃಷ್ಟಿಗಾಗಿ) ಮತ್ತು ೭ ಮಿಲಿಯನ್ ಕೋನ್ ಜೀವಕೋಶಗಳು (ಬಣ್ಣದ ದೃಷ್ಟಿಗಾಗಿ). ನಾವು ಪ್ರತಿ ೬ ಸೆಕೆಂಡಿಗೊಮ್ಮೆ ಕಣ್ಣು ಮಿಟುಕಿಸುತ್ತೇವೆ. ದಿನಕ್ಕೆ ಸರಾಸರಿ ೨,೫೦೦ ಬಾರಿ, ಜೀವನಪರ್‍ಯಂತ ೨೫೦ ಮಿಲಿಯನ್ ಬಾರಿ! ನಮ್ಮ ಮೂಗು ೫ ಮಿಲಿಯನ್ ಸೂಕ್ಷ್ಮವಾದ ವಾಸನಾ ಗ್ರಂಥಿ (ಓಲ್ ಫ್ಯಾಕ್ಟರಿ ರಿಸೆಪ್ಟರ್‍)ಗಳನ್ನು ಹೊಂದಿದೆ. ವಾಸನೆ ಗ್ರಹಿಸಲು ಇವೇ ಸಹಾಯಕಾರಿ. ಮೂಗು ಸುಮಾರು ೧೦,೦೦೦ ಬಗೆಯ ವಾಸನೆಗಳನ್ನು ಗುರುತಿಸಬಲ್ಲದು! ನಮ್ಮ ಬಾಯಿಯಲ್ಲಿ ದಿನಂಪ್ರತಿ ೨ ರಿಂದ ೩ ಪಿಂಟ್ ಲಾಲಾರಸ ಉತ್ಪತ್ತಿಯಾಗುತ್ತದೆ. ಲಾಲಾರಸವು ಲೈಸೋಜೈಮ್ ಎಂಬ ರೋಗ ನಿರೋಧಕ ಕಿಣ್ವವನ್ನು ಹೊಂದಿದ್ದು ಬಾಯಿಯನ್ನು ಪ್ರವೇಶಿಸುವ ಬ್ಯಾಕ್ಟೀರಿಯಾಗಳನ್ನು ಕೊಂದುಹಾಕುತ್ತದೆ.

ಮೂಳೆಗಳು

ಮನುಷ್ಯ ದೇಹದಲ್ಲಿ ೨೦೬ ಮೂಳೆಗಳಿರುತ್ತವೆ. ಮಕ್ಕಳಲ್ಲಿ ೩೦೦ (ಸ್ನಾಯು ರಜ್ಜುವಿನಲ್ಲಿರುವ ಸಾಸಿವೆಯಂತ ವ್ಯತ್ಯಯ ಸಂಖ್ಯೆಯ ಘಟಕಗಳನ್ನು ಬಿಟ್ಟು). ಅವು ಬೆಳೆದು ದೊಡ್ಡದಾಗುತ್ತ ಬಂದಂತೆ ೯೪ ಮೂಳೆಗಳು ಬೆಸೆದುಕೊಂಡು ೨೦೬ ಆಗುತ್ತವೆ. ಈ ಎಲುಬುಗಳು ೬೫೦ ಸ್ನಾಯುಗಳಿಂದ ಪ್ರವರ್‍ತಿಸುತ್ತವೆ. ದೇಹದಲ್ಲಿ ೧೦೦ ಜೋಡಣೆಗಳಿವೆ. ತಲೆಬುರುಡೆ ೨೨ ಸಣ್ಣಪುಟ್ಟ ಎಲುಬುಗಳಿಂದ ಕೂಡಿದ್ದಾಗಿದೆ. ಆಶ್ವರ್‍ಯವೆಂದರೆ ಇವುಗಳಲ್ಲಿ ಕೇವಲ ಒಂದೇ ಒಂದು ಮೂಳೆ ಚಲಿಸಬಲ್ಲದಾಗಿದೆ! ಅದೇ ಕೆಳದವಡೆ (ಮ್ಯಾಂಡಿಬಲ್). ಬಾಯಿ ತೆರೆಯಲು, ಮುಚ್ಚಲು, ಮಾತಾಡಲು, ನಗಲು, ಆಹಾರ ಅಗಿಯಲು ಇದೊಂದೇ ಸಹಾಯಕಾರಿ. ಇದನ್ನು ಓದುತ್ತ ನಗುಬಂತೇ? ಒಮ್ಮೆ ನಕ್ಕುಬಿಡಿ. ಆದರೆ ನಗಬೇಕಾದರೆ ೧೭ ಸ್ನಾಯುಗಳು ಶ್ರಮಿಸಬೇಕು ಎಂಬುದು ನೆನಪಿರಲಿ. ಸಿಟ್ಟು ಬಂತೇ? ಹುಬ್ಬು ಗಂಟಿಕ್ಕಬೇಡಿ! ಹೀಗೆ ಮಾಡಲು ೪೩ ಸ್ನಾಯುಗಳು ಕೆಲಸ ಮಾಡಬೇಕು!

ದೇಹವು ಕೋಟ್ಯಾನುಕೋಟಿ ಜೀವಕೋಶಗಳಿಂದ ಕೂಡಿದೆ. ಒಂದೇ ಬಗೆಯ ರಚನೆ ಮತ್ತು ಕಾರ್‍ಯಗಳನ್ನು ನಡೆಸುವ ಜೀವಕೋಶಗಳು ಒಂದಕ್ಕೊಂದು ಸೇರಿ ಅಂಗಾಂಶ (ಟಿಶ್ಯೂ) ಗಳಾಗಿವೆ. ಅಂಗಾಂಶಗಳು ಇನ್ನೊಂದರೊಡನೆ ಸೇರಿ ಅಂಗ (ಆರ್‍ಗನ್)ಗಳಾಗಿವೆ. ಪ್ರತಿ ಅಂಗವೂ ನಿರ್‍ಧಿಷ್ಟವಾದ ಕಾರ್‍ಯ ಮಾಡುತ್ತದೆ. ಒಂದೇ ಬಗೆಯ ಕಾರ್‍ಯವನ್ನು ನಡೆಸುವ ಅಂಗಗಳ ಸಮುದಾಯವೇ ಅಂಗವ್ಯೂಹ. ಅಂಗವ್ಯೂಹಗಳು ನಮ್ಮ ದೇಹದಲ್ಲಿ ಒಂದು ಕ್ರಮದಲ್ಲಿ ಜೋಡಿಸಲ್ಪಟ್ಟಿವೆ. ಅಸ್ಥಿಪಂಜರ (ಸ್ಕೆಲೆಟಲ್ ಸಿಸ್ಟಮ್), ಶ್ವಾಸಾಂಗವ್ಯೂಹ (ರೆಸ್ಪಿರೇಟರಿ ಸಿಸ್ಟಮ್), ಜೀರ್‍ಣಾಂಗವ್ಯೂಹ (ಡೈಜಸ್ಟಿವ್ ಸಿಸ್ಟಮ್), ವಿಸರ್‍ಜನಾಂಗವ್ಯೂಹ (ಎಕ್ಸ್‌ಕ್ರೇಟರಿ ಸಿಸ್ಟಮ್), ನರವ್ಯೂಹ (ನರ್‍ವಸ್ ಸಿಸ್ಟಮ್) ಮತ್ತು ಜನನಾಂಗ ವ್ಯೂಹ (ರೀಪ್ರೊಡಕ್ಟಿವ್ ಸಿಸ್ಟಮ್) ಎಂದು ವ್ಯೂಹಗಳು ಕಾರ್‍ಯನಿರ್‍ವಹಿಸುತ್ತವೆ. ಒಂದೊಂದು ವ್ಯೂಹದ ಒಂದೊಂದು ಅವಯವವು ನಿಯಮಿತವಾಗಿ ಒಂದೊಂದು ಕಾರ್‍ಯವನ್ನು ನಿರ್‍ವಹಿಸುತ್ತದೆ.

ನಮ್ಮ ದೇಹವು ೭೨,೦೦೦ ನರಗಳನ್ನು ಹೊಂದಿದೆ. ನರಗಳು ಪಂಚೇಂದ್ರಿಯಗಳನ್ನು ಮೆದುಳಿನ ಜೊತೆಗೆ ಸಂಪರ್‍ಕ ಮಾಡುತ್ತವೆ. ಒಂದೊಂದು ಇಂದ್ರಿಯ ಕೊಡುವ ಸಂದೇಶವನ್ನು ಮೆದುಳಿಗೆ ಕೊಂಡೊಯ್ಯುತ್ತವೆ. ಅದಕ್ಕೆ ಪ್ರತ್ಯುತ್ತರವಾಗಿ ಮೆದುಳಿನಿಂದ ಬರುವ ಆಜ್ಞೆಯನ್ನು ಇಂದ್ರೀಯಗಳಿಗೆ ತಲುಪಿಸುತ್ತವೆ. ನರವ್ಯೂಹದಲ್ಲಿ ಸಂದೇಶಗಳು ಗಂಟೆಗೆ ೪೨೭ ಕಿ.ಮೀ. ವೇಗದಲ್ಲಿ ಒಯ್ಯಲ್ಪಡುತ್ತವೆ.

ಮೆದುಳು

ನಮ್ಮ ಮೆದುಳಿನ ತೂಕ ಕೇವಲ ೧,೨೮೦ ಗ್ರಾಂನಿಂದ ೧,೩೮೦ ಗ್ರಾಂಗಳಷ್ಟು. ನವಜಾತ ಶಿಶುಗಳ ಮೆದುಳಿನ ತೂಕ ೩೭೦ ಗ್ರಾಂನಿಂದ ೪೦೦ ಗ್ರಾಂಗಳಷ್ಟು. ಮೆದುಳು ದೇಹದ ೧/೧೫ನೇ ಅಂಶ. ಅದು ೧೦ ಬಿಲಿಯನ್‌ಗಿಂತಲೂ ಹೆಚ್ಚಿನ ನರಕಣಗಳನ್ನು ಹೊಂದಿದೆ ಮತ್ತು ೯,೦೦೦,೦೦೦,೦೦೦ ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಮೆದುಳಿನ ಶೇ. ೮೦ ರಷ್ಟು ಭಾಗ ನೀರಿನಿಂದ ಕೂಡಿದೆ. ನಾವು ಸೇವಿಸುವ ಆಮ್ಲಜನಕದ ೧/೫ನೇ ಅಂಶ ಮತ್ತು ದೇಹದ ಒಟ್ಟು ಕ್ಯಾಲರಿ ಶಕ್ತಿಯಲ್ಲಿಯ ೧/೫ನೇ ಅಂಶ ಮೆದುಳಿನ ಜೀವಕೋಶಗಳಿಗೇ ಬೇಕು! ಮೆದುಳಿಗೆ ಬೂದು ವರ್‍ಣದ, ಸುಕ್ಕುಗಟ್ಟಿದ ಹೊದಿಗೆ (ಮೆನಿಂಜೆಸ್) ಇದ್ದು ಅದು ೯,೦೦೦,೦೦೦,೦೦೦ ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಮೆದುಳು ನರಗಳ ಮೂಲಕ ಸಂದೇಶವನ್ನು ಸೆಕೆಂಡಿಗೆ ೩೦೦ ಫೀಟ್ ವೇಗದಲ್ಲಿ ಕಳುಹಿಸುತ್ತದೆ. ಮೆದುಳಿನ ಎಡಭಾಗ ದೇಹದ ಬಲಭಾಗವನ್ನು ಮತ್ತು ಮೆದುಳಿನ ಬಲಭಾಗ ದೇಹದ ಎಡಭಾಗವನ್ನು ನಿಯಂತ್ರಿಸುತ್ತದೆ. ದಿನಂಪ್ರತಿ ನಮ್ಮ ಮೆದುಳು ೮೬ ಮಿಲಿಯನ್‌ಗಳಷ್ಟು ಸುದ್ದಿಯ ತುಣುಕುಗಳನ್ನು ನೆನಪಿಡುವ ಸಾಮರ್‍ಥ್ಯ ಹೊಂದಿದೆ. ಮಾನವನ ಮೆದುಳಿನಷ್ಟು ಸುವ್ಯವಸ್ಥಿತವಾಗಿರುವ ವಸ್ತು ಇಡೀ ಜಗತ್ತಿನಲ್ಲಿಯೇ ಬೇರೊಂದಿಲ್ಲ. ಅದರಷ್ಟೇ ಸಾಮರ್‍ಥ್ಯ ಹೊಂದಿರುವ ಒಂದು ಕಂಪ್ಯೂಟರ್‍ ತಯಾರಿಸಬೇಕಾದರೆ ಅದು ೧,೨೫೦ ಫೀಟುಗಳಷ್ಟು ಉದ್ದವಾಗಿರಬೇಕಾಗುತ್ತದೆ ಮತ್ತು ಅದಕ್ಕೆ ೧,೦೦೦,೦೦೦,೦೦೦ ವ್ಯಾಟುಗಳಷ್ಟು ವಿದ್ಯುತ್ ಶಕ್ತಿಯನ್ನು ಪೂರೈಸಬೇಕಾಗುತ್ತದೆ! ನಿಸರ್‍ಗದ ಯಾವ ಪ್ರಾಣಿಯ ಮೆದುಳೂ ಮಾನವನ ಮೆದುಳಿನಷ್ಟು ಬೆಳವಣಿಗೆ ಹೊಂದಿಲ್ಲ. ಅದಕ್ಕೇ ಎಲ್ಲಾ ಜೀವಿಗಳಿಗಿಂತ ಬುದ್ಧಿವಂತ ಜೀವಿ ಈ ಮಾನವ.

ರಕ್ತ

ಆರೋಗ್ಯವಂತ ವಯಸ್ಕರ ದೇಹದಲ್ಲಿ ೫ ರಿಂದ ೬ ಲೀಟರ್‌ಗಳಷ್ಟು ರಕ್ತವಿರುತ್ತದೆ. ಅದು ದೇಹದ ೧/೧೨ನೇ ಅಂಶ. ಅಥವಾ ಶರೀರದ ಒಟ್ಟು ತೂಕದ ಸುಮಾರು ಶೇ. ೮೦ ರಷ್ಟು ಆಸ್ಥಿಮಜ್ಜೆಯು ಸೆಕೆಂಡಿಗೆ ೧.೨ ಮಿಲಿಯನ್ ಕೆಂಪು ರಕ್ತಕಣಗಳನ್ನು ತಯಾರಿಸುತ್ತದೆ. ಒಂದು ಘನ ಮಿ.ಮೀ. ರಕ್ತದಲ್ಲಿ ೫,೦೦೦,೦೦೦ ಕೆಂಪು ರಕ್ತಕಣಗಳು ಮತ್ತು ೫ ರಿಂದ ೧೦ ಸಾವಿರ ಬಿಳಿ ರಕ್ತಕಣಗಳಿವೆ. ನಮ್ಮ ದೇಹದಲ್ಲಿರುವ ಪ್ರತಿ ಕೆಂಫು ರಕ್ತಕಣ ದಿನವೊಂದಕ್ಕೆ ದೇಹದ ಸುತ್ತ ಸುಮಾರು ೧,೪೦೦ ಸುತ್ತು ತಿರುಗುತ್ತದೆ.

ಹೃದಯ

ಮಾನವನ ಹೃದಯದ ತೂಕ ಕೇವಲ ೨೨೦ ರಿಂದ ೨೬೦ ಗ್ರಾಂಗಳು. ಅದು ನಿಮಿಷಕ್ಕೆ ೭೨ ಬಾರಿ ಬಡಿಯುತ್ತದೆ. ತಾಸಿಗೆ ೪,೫೦೦ ಬಾರಿ, ದಿನಕ್ಕೆ ೧೦೦,೦೦೦ ಮತ್ತು ವರ್‍ಷಕ್ಕೆ ೪೦ ಮಿಲಿಯನ್ ಬಾರಿ. ಪ್ರತಿಯೊಂದು ಬಡಿತವು ೭೦ ಗ್ರಾಂನಷ್ಟು ರಕ್ತವನ್ನು ಹೃದಯದಿಂದ ಹೊರ ನೂಕುತ್ತದೆ. ಹೀಗೆ ಒಂದು ವರ್‍ಷಕ್ಕೆ ೨,೫೫೫ ಟನ್ನುಗಳಷ್ಟು ತೂಕದ ರಕ್ತವನ್ನು ಅದು ಪಂಪ್ ಮಾಡುತ್ತದೆ! ಪ್ರತಿ ಅರ್‍ಧಗಂಟೆಗೆ ಅದು ಪಂಪ್ ಮಾಡುವ ರಕ್ತದ ಪ್ರಮಾಣ ೨೬೦ ಲೀಟರ್‌ಗಳು, ದಿನಕ್ಕೆ ೧೨,೦೦೦ ಲೀಟರ್‌ಗಳಷ್ಟು ಮತ್ತು ವರ್‍ಷಕ್ಕೆ ೧.೫ ಮಿಲಿಯನ್ ಗ್ಯಾಲನ್‌ಗಳಷ್ಟು. ಅದು ೬೦,೦೦೦ ಮೈಲುಗಳಷ್ಟು ಉದ್ದದ ರಕ್ತನಾಳಗಳಲ್ಲಿ ರಕ್ತವನ್ನು ಪಂಪ್ ಮಾಡುತ್ತದೆ. ಈ ರಕ್ತನಾಳಗಳನ್ನು ಉದ್ದ ಮಾಡಿ ಒಂದರ ಮುಂದೆ ಒಂದರಂತೆ ಜೋಡಿಸುತ್ತಾ ಬಂದರೆ ೧೦೦,೦೦೦ ಮೈಲುಗಳಷ್ಟು ಉದ್ದವಾಗುತ್ತದೆ. ಇಷ್ಟು ಉದ್ದ ಭೂಮಧ್ಯೆ ರೇಖೆಗೆ ನಾಲ್ಕು ಸಲ ಪ್ರದಕ್ಷಿಣೆ ಹಾಕಲು ಸಾಕು!

ಉಸಿರಾಟ

ನಾವು ನಿಮಿಷಕ್ಕೆ ೧೪ ರಿಂದ ೧೮ ಸಲ ಉಸಿರಾಡುತ್ತೇವೆ. ಅಂದರೆ ಒಂದು ದಿನದಲ್ಲಿ ೨೬,೦೦೦ ಸಲ. ಸಾಧಾರಣ ಉಸಿರಾಟದ ಮೂಲಕ ಒಬ್ಬ ಮನುಷ್ಯನು ೫೦೦ ಮಿ.ಲೀ.ಗಳಷ್ಟು ಗಾಳಿಯನ್ನು ಎಳೆದುಕೊಳ್ಳುತ್ತಾನೆ. ದೀರ್‍ಘ ಉಸಿರಾಡುವಾಗ ೧,೫೦೦ ರಿಂದ ೨,೦೦೦ ಮೀ. ಲೀಟರ್‌ಗಳಷ್ಟು. ಶ್ವಾಸಕೋಶವು ೭೫೦,೦೦೦,೦೦೦ ಅಲ್‌ವಿಯೋಲೈಗಳೆಂಬ ಸೂಕ್ಷ್ಮ ವಾಯುಕೋಶಗಳನ್ನು ಹೊಂದಿದೆ. ಅವುಗಳ ವಿಸ್ತೀರ್‍ಣ ೧೦೦ ಘನ ಮೀಟರ್‌ಗಳಷ್ಟು.

ಮೂತ್ರ ಪಿಂಡಗಳು

ಜೋಡಿ ಮೂತ್ರಪಿಂಡ (ಕಿಡ್ನಿ)ಗಳು ನಮ್ಮ ಬೆನ್ನುಲುಬಿನ ಎರಡು ಬದಿಯಲ್ಲಿವೆ. ಒಂದೊಂದು ಮೂತ್ರಪಿಂಡ ೧೦ ಲಕ್ಷ ನೆಫ್ರಾನ್‌ಗಳನ್ನು ಹೊಂದಿದೆ. ನೆಫ್ರಾನ್‌ನ ವ್ಯಾಸ ೨೦೦ ಮೈಕ್ರೋಮೀಟರ್‍ (೧ ಮೈಕ್ರೋಮೀಟರ್‍ = ೧ ಇಂಚಿನ ೨೫,೦೦೦ನೇ ಭಾಗ) ನಷ್ಟು. ಈ ನೆಫ್ರಾನ್‌ಗಳನ್ನು ಉದ್ದಮಾಡಿ ಒಂದಾದ ನಂತರ ಒಂದರಂತೆ ಜೋಡಿಸಿದರೆ ಆಗುವ ಉದ್ದ ೧೦೫ ಕಿ.ಮೀ.ಗಳು! ಒಂದೊಂದು ಮೂತ್ರಪಿಂಡ ಸುಮಾರು ೨ ಮಿಲಿಯನ್‌ಗಳಷ್ಟು ರಕ್ತ ಶೋಧಿಸುವ ನಾಳಗಳನ್ನು ಹೊಂದಿದೆ. ಪ್ರತಿಯೊಂದು ಮೂತ್ರ ಪಿಂಡವು ನಿಮಿಷಕ್ಕೆ ೧.೨೫ ಲೀಟರ್‌ಗಳಷ್ಟು ರಕ್ತ ಸ್ವೀಕರಿಸಿ ಶುದ್ಧಮಾಡುತ್ತದೆ. ದಿನವೊಂದಕ್ಕೆ ೧೮೦ ಲೀಟರ್‌ಗಳು.

ಜಠರದಲ್ಲಿಯ ಪಾಚಕ ಆಮ್ಲಗಳು ಸತುವಿನಂತಹ ಲೋಹವನ್ನು ಕರಗಿಸುವ ಸಾಮರ್‍ಥ್ಯ ಹೊಂದಿವೆ. ಇದರಿಂದ ಜಠರದ ಪದರುಗಳೂ ಕರಗದಂತಿರಲು ಪ್ರತಿ ನಿಮಿಷಕ್ಕೆ ೫೦೦,೦೦೦ ಹೊಸ ಜೀವಕೋಶಗಳು ತಾಯಾರಾಗುತ್ತವೆ. ಮೂರು ದಿನಕ್ಕೊಮ್ಮೆ ಹೊಸ ಪದರುಗಳ ಬದಲಾವಣೆಯಾಗುತ್ತದೆ.

ನಾವು ಜೀವನಪರ್‍ಯಂತ ೫೦ ಟನ್ ಆಹಾರ ಸೇವಿಸುತ್ತೇವೆ ಮತ್ತು ೧೬,೦೦೦ ಗ್ಯಾಲನ್ ನೀರು ಕುಡಿಯುತ್ತೇವೆ.

ಮನುಷ್ಯನ ವೃಷಣಗಳು ದಿನಂಪ್ರತಿ ೧೦ ಮಿಲಿಯನ್ ಹೊಸ ವೀರ್‍ಯಾಣು ಕೋಶಗಳನ್ನು ತಯಾರಿಸುತ್ತವೆ.

ದಿನಂಪ್ರತಿ ನಾವು ೬,೦೦೦ ದಿಂದ ೮,೦೦೦ ಹೆಜ್ಜೆ ಹಾಕುತ್ತೇವೆ. ಇದು ವರ್‍ಷಕ್ಕೆ ೨.೫ ದಶಲಕ್ಷ. ಜೀವನ ಪರ್‍ಯಂತ ಇಷ್ಟು ಹೆಜ್ಜೆಗಳು ಚಂದ್ರನನ್ನು ತಲುಪಲು ಸಾಕು! ನಡೆಯುವಾಗ ಸರಾಸರಿ ೧,೦೦೦ ಟನ್‌ಗಳಷ್ಟು ಭಾರವನ್ನು ಪಾದಗಳ ಮೇಲೆ ಹಾಕಿದಂತಾಗುತ್ತದೆ. ಇದು ೬ ತಿಂಗಳಲ್ಲಿ ೧೮೦,೦೦೦ ಟನ್‌ಗಳು!

ರೋಗ ಪ್ರತಿರೋಧಕ ಕ್ರಿಯೆ

ಪರಿಸರದಲ್ಲಿ ನೂರಾರು ರೋಗಕಾರಕ ಬ್ಯಾಕ್ಟೀರಿಯಾಗಳು, ಪರಾವಲಂಬಿ, ಜೀವಿಗಳು, ವೈರಸ್‌ಗಳು, ಶಿಲೀಂಧ್ರಗಳು, ಹೀಗೆ ಅಸಂಖ್ಯಾತ ರೋಗಕಾರಕ ಜೀವಿಗಳು ನಮ್ಮ ದೇಹದ ಮೇಲೆ ಸತತವಾಗಿ ದಾಳಿ ಮಾಡುತ್ತಲೇ ಇರುತ್ತವೆ. ದೇಹವನ್ನು ಹೊಕ್ಕು ಅದನ್ನು ನಾಶಪಡಿಸಲು ಹಲವಾರು ವಿಧದಿಂದ ಅನೇಕ ಪ್ರಯತ್ನಗಳನ್ನು ನಡೆಸುತ್ತಿರುತ್ತವೆ. ದೇಹವು ರೋಗಾಣುಗಳನು ಒಳ ಸೇರಬಹುದಾದ ಪ್ರತಿ ಆಯಕಟ್ಟಿನ ಸ್ಥಳಗಳಲ್ಲಿ ಉಪಾಯಗಳನ್ನು ತಂತ್ರಗಳನ್ನು ಯೋಜಿಸಿ ಅವುಗಳ ಒಳಸೇರುವಿಕೆಯನ್ನು ಪ್ರತಿಬಂಧಿಸುತ್ತದೆ. ಇವೆಲ್ಲವನ್ನು ತಪ್ಪಿಸಿ ಒಳಸೇರಿದ ರೋಗಾಣುಗಳನ್ನು ಕೆಲವು ಜೀವಕಣಗಳು ಪಹರೆ ಪಡೆಯಂತೆ ಹೋರಾಡಿ ಸಂಹರಿಸಲು ಪ್ರಯತ್ನಪಡುವುವು. ಇವುಗಳಲ್ಲದೇ ಕೆಲವು ಕಣಗಳು ಕಾಯ್ದಿಟ್ಟ ಪಡೆಗಳಂತೆ ಇರುವುವು. ನಿರ್‍ದಿಷ್ಟ ರೋಧವಸ್ತುವೆಂಬ ವಿಷಪದಾರ್‍ಥವನ್ನು ತಯಾರಿಸಿ ವಿಷವೃಷ್ಟಿಯನ್ನು ಸುರಿಸಿ ರೋಗಾಣುವನ್ನು ನಾಶಮಾಡುವುವು. ಇನ್ನೂ ಕೆಲವು ತರಬೇತಿ ಪಡೆದ ಯೋಧರಂತೆ ಹೊಸ ಆಯುಧಗಳೊಡನೆ ಅವು ಹೋರಾಡುವುವು. ಈ ತರಹ ದೇಹವು ಒಂದು ಪ್ರಬಲ ಮಿಲಿಟರಿ ಪಡೆಯಂತೆ ತನ್ನ ಕಾರ್‍ಯವನ್ನು ನಮಗೆ ಅರಿವಿಲ್ಲದಂತೆಯೇ ನಡೆಸುತ್ತದೆ.

ಇಷ್ಟೆಲ್ಲ ಓದಿಯಾದ ಮೇಲೆ ನಿಮಗೆ ಮಾನವ ಶರೀರ ನಿಜಕ್ಕೂ ಎಂತಹ ಅದ್ಭುತಗಳ ಆಗರವಾಗಿದೆ ಎಂದೆನಿಸಿದರೆ ಆಶ್ಚರ್‍ಯವಿಲ್ಲ. ನಿಸರ್‍ಗ ಮಾನವ ಎಂಬ ಎಂತಹ ಅದ್ಭುತ ಜೀವ ಸೃಷ್ಟಿಸಿದೆ ಅಲ್ಲವೇ?

ನಮ್ಮ ಶರೀರವೆಂಬುದು ನಮಗೆ ನಿಸರ್‍ಗವಿತ್ತ ಬಹು ಶ್ರೇಷ್ಠ ಕೊಡುಗೆ. ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ ಎಂಬ ಪಂಚಮಹಾಭೂತಗಳಿಂದ ರಚಿತವಾದ ದಿವ್ಯಾದ್ಭುತ ಯಂತ್ರ – ಈ ನಮ್ಮ ಶರೀರ. ವಿಜ್ಞಾನಿಗಳು ಪ್ರಕೃತಿಯ ಎಂತೆಂಥ ರಹಸ್ಯಗಳನ್ನು ಭೇದಿಸಿ ತಿಳಿದಿದ್ದರೂ ನಮ್ಮ ಈ ಶರೀರ ಯಂತ್ರದ ರಚನೆಯ ಕೌಶಲವನ್ನಾಗಲಿ ಕಾರ್‍ಯ ನಿರ್‍ವಹಣೆಯ ಸೂಕ್ಷ್ಮಗಳನ್ನಾಗಲಿ ಪರಿಪೂರ್‍ಣವಾಗಿ ತಿಳಿದಿದ್ದಾರೆಂಬುದು ಹೇಳಲಾಗದು. ಮಾನವ ದೇಹ ವಾಸ್ತವವಾಗಿ ಒಂದು ಸಂಕೀರ್‍ಣ ಯಂತ್ರ.

“ಅದ್ಭುತಗಳಲ್ಲಿ ಅದ್ಭುತಯಂತ್ರ ಈ ಮಾನವ ಯಂತ್ರ”.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆನು ಪೇಳಿದೆಲ್ಲವನು ಮಾಡದೊಡೇನಂತೆ ?
Next post ಅನುಕರುಣೆಯೆಂಬ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…