ವಲಯ

ವಲಯ

ಪ್ರವೇಶ : ದಕ್ಷಿಣದ ತುದಿಯಲ್ಲಿ ನಿಂತು ನೋಡಿದರೆ ಇಡೀ ಭೂ ಪ್ರದೇಶ ಅಂದಾಜು ಭಾರತದ ನಕ್ಷೆಯಂತೆ ಕಾಣುತ್ತದೆ. ಮಧ್ಯ ಭಾಗದಲ್ಲಿ ನಿಂತು ನೋಟ ಹಾಯಿಸಿದರೆ ಸುತ್ತಲೂ ವೃತ್ತಾಕಾರವಾಗಿ ಕೋಟೆ ಕಟ್ಟಿರುವಂತೆ ಎತ್ತರದ ಗುಡ್ಡಗಳು ಭಾಸವಾಗುತ್ತವೆ. ವೃತ್ತವೊಂದಕ್ಕೆ ಕೇಂದ್ರದಿಂದ ಎಳೆವ ವ್ಯಾಸದಂತೆ ನದಿಯೊಂದು ಈ ತುದಿಯಿಂದ ಆ ತುದಿಗೆ ಹರಿಯುತ್ತದೆ. ಇತ್ತೀಚೆಗೆ ಈ ನದಿಗೆ ಅಡ್ಡಲಾಗಿ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ಅದು ರೈಲ್ವೆ ಇಲಾಖೆಯವರದೋ, ಕಬ್ಬಿಣದ ಕಾರ್ಖಾನೆಯವರದೋ, ಅಂತೂ ರೈಲು ಓಡಾಡುತ್ತಿದೆ. ಎರಡು ವರ್ಷಗಳ ಹಿಂದೆ ಈ ಗುಡ್ಡಗಳಲ್ಲಿ ಕಬ್ಬಿಣದ ಅದಿರು ಇದೆಯೆಂದು ತಿಳಿದ ನಂತರ ಬದಲಾವಣೆಗಳು ಕ್ರಮೇಣವಾಗಿ ಆಗುತ್ತಿವೆ. ಈ ಗುಡ್ಡದಿಂದ ಹೊರಗೆ ಕಬ್ಬಿಣದ ಕಾರ್ಖಾನೆಯಿರುವುದರಿಂದ ಅದಿರನ್ನು ಸಾಗಿಸಲೆಂದು ಗುಡ್ಡವನ್ನು ಸುರಂಗದಂತೆ ಕೊರೆಯ ಲಾಗಿದೆ. ಅದಕ್ಕೆ ಮೊದಲು ಆ ವಲಯದಲ್ಲಿ ಜನರು ವಾಸಿಸುತ್ತಿರಲಿಲ್ಲ. ಭಯಂಕರವಾದ ಕಾಡು ಆವರಿಸಿಕೊಂಡಿದ್ದರಿಂದ ಜನ ವಾಸಿಸುವ ಸಾಧ್ಯತೆ ಕಡಿಮೆಯಿತ್ತು. ಜನ ವಾಸಿಸ ಲಾರಂಭಿಸಿದ ನಂತರ ಊರಿಗೊಂದು ಹೆಸರು ಬೇಕೆಂದು `ಹಾಲೂರು’ ಎಂದರು- ನದಿ ನೀರು ಹಾಲಿನಂತಿದೆ ಎಂಬ ಕಾರಣದಿಂದ, ಆದರೆ ಈಚೆಗೆ ಅಪಭ್ರಂಶವಾಗಿ ‘ಹಾಳೂರು’ ಎಂದಾಗಿದೆ. ಅದಕ್ಕೆಂದು ಆಶ್ಚರ್ಯಪಡಲು ಈಗ ಅಲ್ಲಿ ನಿಜವಾಗಿ ಏನೂ ಉಳಿದಿಲ್ಲ. ರೈಲ್ವೆ ಸುರಂಗದಿಂದ ಶೋಷಣೆ ಶುರುವಾಯಿತು. ಗುಡ್ಡದ ಹೊರ ವಲಯವನ್ನೆಲ್ಲಾ ಬೋಳಿಸಿದ್ದ ಜನರಿಗೆ, ಒಳ ವಲಯದ ಮಾಲನ್ನು ಸಾಗಿಸಲು ದಾರಿ ಸುಗಮವಾಯಿತು. ಒಂದೂವರೆ ವರ್ಷದಲ್ಲಿ ಇಡೀ ವಲಯದಲ್ಲಿ ಹೆಸರಿಸಲು ಒಂದು ಬಿದಿರಿನ ಬೊಂಬು ಉಳಿದಿಲ್ಲ. ಕಾಗದದ ಕಾರ್ಖಾನೆಯ ಜೊತೆ, ಯಾರು ಯಾರೋ ದೊಡ್ಡ ದೊಡ್ಡ ಮರಗಳನ್ನೆಲ್ಲಾ ಕಡಿದಿದ್ದಾರೆ. ಒಟ್ಟಿನಲ್ಲಿ ವಲಯವೆಲ್ಲಾ ಬಟ್ಟ ಬಯಲಾಗಿದೆ. ಪರಿಣಾಮವಾಗಿ ಮಳೆಯೂ ಮುನಿಸಿಕೊಂಡಂತಿದೆ. ನದಿಯಲ್ಲಿ ನೀರು ಬತ್ತಿ ತಳ ಕಾಣುತ್ತಿದೆ.

ಪರಿಚಯ: ಮಾಚಯ್ಯ ಅದಿರು ತೆಗೆಯುವ ಕೆಲಸಗಾರ, ಹೆಂಡತಿ ಇದ್ದಾಳೆ. ನಾಲ್ಕು ವರ್ಷದ ಹೆಣ್ಣು ಮಗಳೂ ಇದ್ದಾಳೆ. ಹೆಂಡತಿ ಪುನಃ ಗರ್ಭಿಣಿಯಾಗಿದ್ದಾಳೆ. ಈ ಹಿಂದೆ ಎರಡು ಸಲ ಆಗಿದ್ದರೂ, ಎರಡೂ ಹೆಣ್ಣೆ ಆಗಿದ್ದವು. ಅದೃಷ್ಟವೋ, ದುರಾದೃಷ್ಟವೋ, ಎರಡೂ ಸತ್ತು ಹೋಗಿದ್ದವು. ಮಾಚಯ್ಯನಿಗೆ ತನ್ನ ವಂಶದ ಹೆಸರು ಹೇಳಲು ಗಂಡು ಬೇಕೆಂಬ ಛಲ. ಆದ್ದರಿಂದಲೇ ಏನೋ ಸತ್ತ ಮಕ್ಕಳ ಬಗ್ಗೆ ವ್ಯಥಿತನಾದಂತೆ ಕಾಣುವುದಿಲ್ಲ.

ಆರೂವರೆ ಅಡಿ ಎತ್ತರದ ಆತ ಸಣಕಲಾಗಿ ಕಾಣಲು ಯೋಚನೆ ಹಚ್ಚಿಕೊಂಡಿದ್ದಾನೆ ಎಂಬುದು ಸಕಾರಣವಲ್ಲ. ವಾಸ್ತವವಾಗಿ ಆತ ಮೊದಲಿಗಿಂತಲೂ ಸುಖಿ, ಕೆಲಸ ಮಾಡುವಲ್ಲಿ ಹಾಕಿರುವ ಗುಡಿಸಲು ಹೋಟೆಲ್‌ನ ಒಡತಿ ರಾಮವ್ವ ಅವನ ಪ್ರೇಯಸಿ, ಸುಮಾರು ನಾನೂರು -ಐನೂರು ಜನ ಕೆಲಸ ಮಾಡುವ ಅಲ್ಲಿ ಅವಳ ವ್ಯಾಪಾರ ಬಹಳ ಚೆನ್ನಾಗಿಯೇ ನಡೆಯುತ್ತದೆ. ಬೀಡಿ ಸಿಗರೇಟಿನಿಂದ ಹಿಡಿದು ಕಾಫಿ, ಟೀ, ಉಪ್ಪಿಟ್ಟು, ಕೇಸರಿಬಾತ್ ಜೊತೆಗೆ ಹೆಂಡ ಸಾರಾಯಿವರೆಗೆ ಪ್ರತಿಯೊಂದೂ ಸಿಗುತ್ತದೆ.

ಸರಸ : ಆ ದಿನ ಮಾಚಯ್ಯನ ಮಗಳು ಜೊತೆಗೆ ಬರುತ್ತೇನೆಂದು ಹಟ ಹಿಡಿದಿದ್ದರಿಂದ ಕರೆದುಕೊಂಡು ಹೋದ. ಕಂಪನಿಯ ರೈಲಿನಲ್ಲಿ ಹೋಗಿ ಬರುತ್ತಿದ್ದುದರಿಂದ ಹಾಗೂ ರಾಮವ್ವ ಪ್ರೇಯಸಿಯಾಗಿದ್ದರಿಂದ, ಮಗಳ ಒತ್ತಡ ತನ್ನ ಮೇಲೆ ಬೀಳದೆಂದು ಅವಳ ಆಸೆಯನ್ನು ಪೂರೈಸಿದ್ದ.

“ಏನ್ ರಾಮವ್ವೋ…. ಏನೇನ್ ಇಸೇಸ ಮಾಡಿದ್ಯಾ ಇವತ್ತು…” ಎಂದ.

“ಓ… ಬಾ ಬಾ ಮಾಚಣ್ಣ… ಏನ್ ಮಗ್ಳಾ…?”

“ಯೇ… ನೋಡುದೇ ಗೊತ್ತಾಗಕಿಲ್ವಾ? ಎಂಗ್ ನನ್ನಂಗೇ ಔಳೆ ಅಂತ?”

“ಅಂಗೆ ಅಂದ್ಕಂಡೆ ಕಣಪ್ಪೋ…. ಆದ್ರೂ ಗ್ಯಾರಂಟಿ ಮಾಡ್ಕಣನಾ ಅಂತ ಕ್ಯೋಳ್ದೆ….” ಎನ್ನುತ್ತಾ ಎಂಜಲು ಲೋಟವನ್ನು ತೊಳೆಯುವುದನ್ನು ಬಿಟ್ಟು ಬಂದು ಅವಳನ್ನು ಎತ್ತಿ ಮುತ್ತಿಕ್ಕಿದಳು. ಅಪ್ಪನಂತೆಯೇ ಕಡ್ಡಿಯಂತಹ ಕೈ ಕಾಲ ಹುಡುಗಿಗೆ ರಾಮವ್ವನ ಪ್ರೀತಿಯ ಒತ್ತಡದಿಂದ ಎದೆ ಮುಖದ ಮೂಳೆಗಳೆಲ್ಲಾ ಒತ್ತಿದಂತಾಗಿ ನೋವಾಗಿ ಅಳಲಾರಂಭಿಸಿತು.

“ಯೇ…. ಯಾಕಂಗಳ್ತೀಯ ಮಗಾ? ಆಕಿಯೇನ್ ಬ್ಯಾರೇನ?…. ನಿಮ್ಮವ್ವ ಇದ್ದಂಗೆ ತಗಾ….” ಎಂದಾಗ ಅವನ ಬಾಯಿಯ ಎಲೆಯಡಿಕೆ ರಸ ಸಿಡಿಯುತ್ತಿತ್ತು. ರಾಮಿ ಸುತ್ತಮುತ್ತ ಕಣ್ಣು ಹಾಯಿಸಿ ಯಾರೂ ಇಲ್ಲದ್ದನ್ನು ಗಮನಿಸಿ, “ತಗಂಬ್ಯಾಡ್ದಾ…. ಆ ತಾಕತ್ ಐತಾ ನಿಂಗೆ?…. ಇದ್ದಿದ್ರೆ ನಾನ್ಯಾವತ್ತೊ ಈ ಎಂಜ್ಲು ಲೋಟ ತೊಳ್ಯದ್ ಬಿಟ್ಟು ದುಡ್ಡು ಎಣುಸ್ತಲೇ ಕುಂತಿರ್ತಿದ್ದೆ” ಎಂದಳು.

“ಗೇ…. ಏನ್ ಅಷ್ಟು ಕಂಡಂ ಮಾಡ್ಕಂಬುಟ್ಟಾ ನನ್ನ?” ಅಧಿಕಾರಿಗಳ ಪ್ರಭಾವದಿಂದ ಕಲಿತಿದ್ದ ಇಂಗ್ಲಿಷನ್ನು ಸೇರಿಸಿಯೇ ಹೇಳಿದ “ಇವ್ಳೇನು ನಂಗುಟ್ಟಿದ್ ಮಗ್ಳ್ ಅಲ್ಲ ಅದ್ಕಂಡಿದ್ಯಾ? ನಾನ್ ಆಗ್ಲೆ ನಾಕ್ ಮಕ್ಳು ತಂದೆ ಕಣೇ…. ಆದ್ರೇನ್ಮಾಡ್ತಿಯಾ, ಆಳ್ ಮುಂಡೇವು ಸತ್ತೋದ್ವು….” ಎನ್ನುವಾಗ ಬಳಸುತ್ತಿದ್ದ ಈ ಕಣೇ, ಗೇ, ಏನೇ ಇತ್ಯಾದಿ ಏಕವಚನದ ಮಾತುಗಳು ರಾಮಿಗೆ ಬಹಳ ಖುಷಿ ಕೊಡುತ್ತಿದ್ದವು.

ಸರಸದಲ್ಲೇ ರೈಲು ತುಂಬಲು ಹೋಗಬೇಕಾದ್ದನ್ನು ಮರೆತ. ಮೇಸ್ತ್ರಿ ಬಂದು ಕರೆದಿದ್ದಕ್ಕೆ “ಸುಮ್ಮನೆ ಅವ್ವುನ್‌ತಾವ ಇರ್ ಮಗಾ. ಕೆಲ್ಸ ಮುಗುಸ್ಕಂಡು ಜಲ್ದ್ ಬಂದ್ಬುಡ್ತೀನಿ” ಎಂದು ಮಗುವಿಗೆ ಹೇಳಿ ಹೋದ.

ದಾರಿಯಲ್ಲಿ ಅವರಿಬ್ಬರ ಪ್ರಣಯದ ಬಗ್ಗೆ ಕೇಳಿದ ಮೇಸ್ತ್ರಿ. ಮುಜುಗರದಿಂದಲೇ ಹೇಳಿದ ಮಾಚಯ್ಯ, ಆದರೆ ರಾಮಿಯನ್ನು ಆತ ಚುಡಾಯಿಸಿ ಮಾತನಾಡಿದಾಗ ಮಾಚಯ್ಯನಿಗೆ ತಡೆಯಲಾಗಲಿಲ್ಲ. ಬಂಜೆ, ಸೂಳೆ ಮುಂತಾಗಿ ಆಡುಭಾಷೆಯಲ್ಲಿ ಮೇಸ್ತ್ರಿ ಮಾತನಾಡಿದ್ದ. ನಾಲ್ಕು ಇಕ್ಕಬೇಕೆನಿಸುವಷ್ಟು ಸಿಟ್ಟು ಬಂದರೂ ಅಂದು ಬಟವಾಡೆಯ ದಿನವಾದ್ದರಿಂದ ತನ್ನ ಸಂಬಳಕ್ಕೆ ಕುತ್ತಾಗಬಹುದೆಂದು ಸುಮ್ಮನಾದ.

ಸಂಚು : ಮಧ್ಯಾಹ್ನ ಬಂದಾಗ ರಾಮಿಯ ಬಳಿ ಎಲ್ಲಾ ಹೇಳಿದ. ಆಕೆ ‘ಅಂಗ ಅಂಗಾರೇ…. ಮಾಡ್ತೀನಿ ನನ್ನೆಂಡ್ರು ಮಗ್ನಿಗೆ….’ ಎನ್ನುತ್ತಾ ಏನೋ ಯೋಚಿಸಿದಳು.

ನಂತರ ಮೇಸ್ತ್ರಿ ಬಂದು ಆರ್ಡರ್ ಮಾಡಿದ್ದಕ್ಕೆ ಏನನ್ನೋ ಒಲೆಯ ಬಿಸಿಗೆ ಹಿಡಿದು ಅದರ ರಸವನ್ನು ತೊಟ್ಟಿಕ್ಕಿಸಿ ತಂದು ಕೊಟ್ಟಳು. ಕೊಡುವಾಗ ಅದೇನನ್ನೋ ನೋಡುತ್ತಿದ್ದ ಮೇಸ್ತ್ರಿ “ಇದೇನ್ ರಾಮಿ… ಜಾಕೀಟ್ನ ಉಲ್ಟಾ ಉಟ್ಕಂಡಿದ್ದೀಯಾ?” ಎಂದ. ಆದರೆ ಆಕೆ ಮಾತನಾಡಲಿಲ್ಲ. ‘ರಾಮಿ’ ಎಂದು ಏಕವಚನ ಬಳಸಿದ್ದರಿಂದ ಮಾಚಯ್ಯ ಮುಂದೇನೋ ಮಾಡುವವನಂತೆ ಉಪಕ್ರಮಿಸುತ್ತಿರುವಾಗಲೇ ಕಣ್ಸನ್ನೆಯಲ್ಲೆ ತಡೆದಳು.

ರಾಮಿ ತೊಟ್ಟಿಕ್ಕಿಸಿದ ರಸ ಊಸರವಳ್ಳಿ (ಗೋಸುಂಬೆ)ಯದು. ಅದನ್ನು ಸಾಯಿಸಿ ಒಣಗಿಸಿ ಇಟ್ಟುಕೊಂಡಿದ್ದಳು. ಮೂಢ ನಂಬಿಕೆಯ ಅನೇಕ ಪ್ರಯೋಗಗಳಲ್ಲಿ ಇದೂ ಒಂದು. ಈ ಕ್ರಿಯೆಯನ್ನು ಮದ್ದು ಮಾಡುವುದು ಎನ್ನುತ್ತಾರೆ.

ಅವಳನ್ನು ಅನುಸರಿಸಿ ಒಳಹೋದ ಮಾಚಯ್ಯನಿಗೆ ‘ಮದ್ ಹಾಕಿ ಕೊಟ್ಟಿದೀನಿ ಸುಮ್ಕಿರು…. ಅನುಭವುಸ್ಲಿ…’ ಎಂದಳು. ಮಾಚಯ್ಯ ಜೋರಾಗಿ ನಕ್ಕ. ಅವನ ನಗು ಮೇಸ್ತ್ರಿಗೆ ಸಿಟ್ಟು ಭರಿಸಿತು. ‘ಮಾಚಯ್ಯನಿಗಿಂತ ದುಡ್‌ನಾಗೆ, ರೂಪದಾಗೆ ಚೆನ್ನಾಗಿರಾ ನನ್ನ ಜತೆ ಯಾಕ್ ಅವ್ಳು ಅಂಗ್ ನಗಲ್ಲ?’ ಎಂಬುದು ಕಾರಣ.

ಪ್ರಮಾದ : ಹೊರಗೆ ಕಲ್ಲು ಬೆಂಚಿನ ಮೇಲೆ ಕುಳಿತಿದ್ದ ಮಗು ಮೇಸ್ತ್ರಿ ತಿನ್ನುವುದನ್ನೇ ನೋಡುತ್ತಿತ್ತು. ತಾನು ತಿನ್ನುವುದರಲ್ಲಿಯೇ ಒಂದಿಷ್ಟನ್ನು ಕೊಟ್ಟ. ಮೊದಲು ಹಿಂಜರಿದಂತೆ ಮಾಡಿದರೂ ನಂತರ ತಿಂದಿತು. ಮೇಸ್ತ್ರಿಗೆ ಮಾಚಯ್ಯನದು ಆ ಮಗು ಎಂದು ತಿಳಿದಿರಲಿಲ್ಲ. ಮದ್ದು ಹಾಕಿದ ತಿಂಡಿಯನ್ನು ಮಗು ತಿಂದಿತೆಂದು ಮಾಚಯ್ಯನಿಗಾಗಲೀ, ರಾಮಿಗಾಗಲೀ ತಿಳಿಯಲಿಲ್ಲ. ಕೆಲಸ ಮುಗಿಸಿಕೊಂಡು ಸಂಜೆ ಮಗುವನ್ನು ಕರೆದುಕೊಂಡು ಮನೆಗೆ ಬಂದ ಮಾಚಯ್ಯ.

ಮದ್ದು : ಇದ್ದಿಲಿನಿಂದ ಹಲ್ಲುಜ್ಜಿ, ಎರಡು ಬೆರಳಿಟ್ಟು ನಾಲಿಗೆ ತಿಕ್ಕುವಾಗ ಕೆಮ್ಮು ಬಂದು ವಾಂತಿ ಬರುವಂತಾದಾಗ, ಮಾಚಯ್ಯನ ಹೆಂಡತಿ ನಿಂಗವ್ವ ಏನೋ ನೆನಪಾದವಳಂತೆ ಪಕ್ಕದ ಮನೆಯ ಮುದುಕಿಯೊಬ್ಬಳ ಬಳಿಗೆ ತನ್ನ ಮಗಳನ್ನೂ ಕರೆದುಕೊಂಡು ಹೋದಳು.

“ನೋಡೇ ಯವ್ವಾ…. ಈ ಕಂದಾ ಕಮ್ಮೇ ಕೆಮ್ತದೆ… ನಂಗೂ ಅಂಗೇ ಆಗದೆ, ನಾನೆಂಗಾರ ತಡ್ಕಂಡಾರ ತಡ್ಕಂಡೇನು. ಪಾಪ ಈ ಮಗಾ ಒಂದ್ ವಾರದಿಂದ ಅನ್ನ ನೀರು ಅಂತ ತಿನ್ನಾಕಿಲ್ಲ, ಕುಡ್ಯಾಕಿಲ್ಲ. ನಂಗೂ ಅದೇ ಕಾಯ್ಲೆ. ಮದ್ ಮದ್ಲು ಅನ್ನ ಸೇರಿಲ್ಲ. ಆಮೇಲಿಂದ ನೀರು ಕುಡಿಯಾಕ್ಕೂ ಆಗಾಕಿಲ್ಲ. ಕುಡುದ್ರೆ ಕೆಮ್ಮು ಅಂದ್ರೆ ಕೆಮ್ಮು. ತಿಂದಿದ್ದು, ಕುಡ್ದಿದ್ದು ಎಲ್ಡೂ ವಾಂತಿ ಆಗೋಯ್ತದೆ. ದಕ್ಕುಸ್ಕಣಾಕ್ಕೆ ಆಗಾಕಿಲ್ಲ. ಬಸ್ರಿ ಆಗಿದ್ದಕ್ಕೂ ಅದೂ ಹೊಟ್ಯಾಗಿಂದಲ್ಲಾ ಬಾಯಿಗೆ ಬಂದಾಂಗಾತದೆ” ಎನ್ನುತ್ತಾ ಕೆಮ್ಮಿ, ಬಾಗಿಲಿಗೆ ಹೋಗಿ ಬಾರದ ವಾಂತಿಯನ್ನು ‘ಬಂತು’ ಎಂದುಕೊಳ್ಳುತ್ತ ಉಗಿಯುತ್ತಾ ಕುಂತಳು.

ಅದನ್ನೆಲ್ಲಾ ಪರಾಮರ್ಶಿಸಿದ ಅನುಭವಸ್ಥೆ ಅಜ್ಜಿ ಅದೆಲ್ಲಾ ಮದ್‌ನಿಂದಾಗೈತೆ ಕಣವೊ… ಯಾವಳೋ ನಿರ್ವಾಕಿಲ್ಲದ ಮುಂಡೆ ಕೈಚಳ ಮಾಡೌಳೆ… ಮನೆ ಮನೆ ನನ್ ಮಮ್ಮಗ್ನಿಗೂ ಇಂಗೇ ಆಗಿತ್ತು. ಆ ವೋಟ್ಲು ರಾಮಿ ಆಕ್ಬುಟ್ಟಿದ್ಲು. ಅಂದಂಗೇ ನೀನ್ಯಾವಾಗಾದ್ರೂ ಅತ್ತಾಗ್ ವೋಗಿದ್ದ?” ಎಂದಳು. ನಿಂಗಮ್ಮ ಮಗಳು ಹೋಗಿದ್ದುದಾಗಿ ತಿಳಿಸಿದಳು. ಆಕೆಯ ಎಂಜಲು ಊಟ ತಿಂದುದರಿಂದಲೇ ತನಗೂ ಬಂದಿದೆಯೆಂದು ತರ್ಕಿಸಿದಳು. “ಪಚ್ಚ ಬಾಳೆಹಣ್ಣಿನಾಗ ಪ್ರತಿ ಮದ್ದು ಬೇಕಾದರೆ ನಾನೇ ಮಾಡ್ಕೊಡ್ತೀನಿ….. ಆದ್ರೆ ಈಗ ರೋಗ ಬಿಗಡಾಯಿಸಿ ಬಿಟ್ಟದೆ… ಮ್ಯಾಲಾಗಿ ನನ್ನ ಔಸ್ತಿ ನಿಧಾನ ಆಗ್ತದೆ. ಅದ್ಕೆ ಒಂದ್ ಕೆಲ್ಸ ಮಾಡು. ಶಂಕ್ರು ಬೆಟ್ಟುದ್ ತಪ್‌ಲಾಗೆ ಮುನಿ ಜಿನಲ್ಲಾ. ಅವ್ನೂ ಮದ್ದು ಕೊಡ್ತಾನೆ. ಕೂಡ್ಲೇ ಗುಣ ಆತದೆ ನೋಡು” ಎಂದಳು.

ಮಾಚಯ್ಯ ಆಗಿನ್ನೂ ಕೆಲಸಕ್ಕೆ ಹೋಗಿದ್ದರಿಂದ ಅವನು ಸಾಯಂಕಾಲ ತಿರುಗಿ ಬರುವುದರೊಳಗಾಗಿ ಹಿಂದಿರುಗಿ ಬಂದು ಬಿಡಬಹುದೆಂದು ಮಗುವನ್ನು ಕರೆದುಕೊಂಡು, ತಟ್ಟಿಗೆ ಬಾಗಿಲಿಗೆ ಬೀಗ ಜಡಿದು ನಡೆದಳು.

ಏಪ್ರಿಲ್ ತಿಂಗಳ ಧಗೆ… ಕಾಲು ಸುಡುವ ನೆಲ… ನಡೆಯಲು ಹಟ ಹಿಡಿದ ಮಗುವನ್ನು ಹೆಗಲ ಮೇಲೆ ಕೂರಿಸಿಕೊಂಡಳು. ಜೊತೆಗೆ ತುಂಬಿದ ಹೊಟ್ಟೆಯಲ್ಲಿರುವ ನಾಲ್ಕು ತಿಂಗಳ ಕೂಸು, ನಡೆಯುವಾಗ ಉಸಿರು ಬಿಗಿ ಹಿಡಿದು ಬರುವ ಕೆಮ್ಮು, ಮೇಲೆ ಕುಳಿತ ಮಗುವೂ ಕೆಮ್ಮಿದಾಗ, ವಾಂತಿ ಮಾಡಿದಾಗ ಆಗುವ ಅಸಹ್ಯದಿಂದ ಆಕೆಗೆ ಬರುತ್ತಿದ್ದ ವಾಂತಿಯ ಉಮ್ಮಳಿಕೆ, ಉಸಿರು ಕಟ್ಟುವಂತಹ ಕೆಮ್ಮಿನ ಜೊತೆಗೆ ಹೊಟ್ಟೆಯಲ್ಲಿನ ಕರುಳು, ಭ್ರೂಣ ಎದೆಗೇರಿದಂತೆ, ಉಗುಳು ನೆತ್ತಿಗೇರಿದಂತೆ ಆಗುವ ಎಲ್ಲವನ್ನೂ ತಡೆಯಲಾಗದಿದ್ದರೂ ಅದುಮುತ್ತಾ, ಸಂದಿಗ್ಧದಲ್ಲಿ ಜೀವಂತವಾಗಿ ಸುಡುತ್ತಾ, ಮಾನಸಿಕವಾಗಿ ಕರಗುತ್ತಾ, ಸೇತುವೆ ದಾಟಿದಳು.

ಸೇಡು x ಸೇಡು : ಅಷ್ಟರಲ್ಲಿ ಮೇಸ್ತ್ರಿಗೂ ರಾಮಿಯೇ ತನಗೆ ಮದ್ದು ಹಾಕಿದ್ದಾಳೆಂದು ತಿಳಿದು ಸರಿಯಾಗಿ ಬುದ್ದಿ ಕಲಿಸಬೇಕೆಂದು ಮಾಚಯ್ಯನ ವಾರದ ಬಟವಾಡೆಯಲ್ಲಿ ಅರ್ಧ ಸಂಬಳ ಮುರಿದು ಪೂರ್ತಿ ಸಂಬಳಕ್ಕೆ ಸಹಿ ಹಾಕಿಸಿಕೊಂಡ ವಿಷಯ ರಾಮಿಗೂ ತಿಳಿಯಿತು. ಮೇಸ್ತ್ರಿ ರಾಮಿಯ ಹೋಟೆಲ್‌ಗೆ ಬಂದು ಕೇಸರಿಬಾತ್‌ಗೆ ಆರ್ಡರ್ ಮಾಡಿದ. ಸೇಡು ತೀರಿಸಿ ಕೊಳ್ಳಬೇಕೆಂಬ ಕಾತರ ಇಬ್ಬರಲ್ಲೂ ಇತ್ತು.

ಕೇಸರಿಬಾತ್‌ನಲ್ಲಿ ಏನೋ ದುರ್ಗಂಧದ ವಾಸನೆ ಬಂದಂತಾಗಿ ಮೇಸ್ತ್ರಿಯ ಸಿಟ್ಟನ್ನು ಕೆದಕಿತು. ಪ್ಲೇಟನ್ನು ಅವಳ ಮುಖಕ್ಕೆ ಎಸೆದು, ಚಪ್ಪಲಿ ಕಾಲಿನಿಂದ ಝಾಡಿಸಿ ಒದೆಯುತ್ತ ಗಲಾಟೆ ಮಾಡಿದ. ಆದರೆ ಮಾಚಯ್ಯನು ಭೂಮಿಯ ಒಳಗೆ ಹೋಗಿದ್ದರಿಂದ ಮೇಲೆ ಬರಲಾಗಿರಲಿಲ್ಲ. ಆದರೆ ಕೇಸರಿಬಾತ್‌ಗೆ ಅಮೇಧ್ಯ ಬೆರಸಲಾಗಿದೆಯೆಂದು ಆ ಮೊದಲೇ ತಿಳಿದಿತ್ತು.

ಸಂಹಾರ : ಸಗಣಿಯಿಂದ ಸಾರಿಸಿದ ನೆಲದ ಮೇಲೆ ಕೂರಿಸಿ ಮುನಿಗಳು ಆಯುರ್ವೇದದ ಔಷಧಿಯೆಂದು ಕುಡಿಸಿದರು. ಅದು ಕೋಳಿಯ ಈರಿ(ಪಿತ್ತಕೋಶ)ಯಿಂದ ಮಾಡಿದ ಕಷಾಯವಾಗಿತ್ತು. ಮಗುವಿಗೆ ಕುಡಿಸಿದರೆ, ಮನೆಗೆ ಹೋಗುವವರೆಗೆ ತಡೆಯಲಾರದೆಂದು ಮುದುಕದ ಎಲೆಯ ಜೊನ್ನೆಯಲ್ಲಿ ಹಾಕಿ ಕೊಟ್ಟರು.

ಆದಷ್ಟು ಬೇಗ ಮನೆ ಸೇರುವ ಆತುರದಲ್ಲಿ ಬಿರುಸಾದ ಹೆಜ್ಜೆಗಳನ್ನಿಡಲಾರಂಭಿಸಿದಳು. ಹನ್ನೆರಡು ಗಂಟೆಯ ನಡು ಮಧ್ಯಾಹ್ನ. ಮೇಸ್ತ್ರಿಯೂ ಅದೇ ವೇಳೆಗೆ ಅದೇ ಮುನಿಗಳ ಬಳಿ ಔಷಧಿ ಪಡೆಯಲು ನಡೆಯುತ್ತಿದ್ದ. ಪರಿಚಯವಿದ್ದುದರಿಂದ ನಿಂಗಮ್ಮನೇ ಮೇಸ್ತ್ರಿಯನ್ನು “ಏನಣ್ಣಾ ಇತ್ತಾಗೆ ಹೊಂಟೆ?” ಎಂದು ಮಾತನಾಡಿಸಿದಳು. ಹಿಂದುಮುಂದಿನ ಎಲ್ಲಾ ಸಿಟ್ಟನ್ನು ಒಟ್ಟುಗೂಡಿಸಿ, ಹುಲಿಯೊಂದು ತನ್ನ ಬೇಟೆಯ ಮೇಲೆ ನಗೆಯುವಂತೆ ಛಂಗನೆ ಆಕೆಯ ಮೇಲೆ ಎಗರಿದ. ಅವನ ಕಪ್ಪು ಚುಕ್ಕೆ ಮುಖದಲ್ಲಿ ರಕ್ತಕಾರುವಂತಿದ್ದ ಕಣ್ಣುಗಳನ್ನೆಲ್ಲಾ ನೋಡಿದ ಮಗು “ಅವ್ವಾ…” ಎಂದು ದಿಕ್ಕು ತಪ್ಪಿ ಓಡಿತು. ನಿಂಗಮ್ಮನಿಗೆ ಯಾವುದೇ ಧ್ವನಿಯನ್ನು ಗಂಟಲಿಂದ ಹೊರಗೆಡವಲು ಸಾಧ್ಯವಾಗಲಿಲ್ಲ.

ವಾಯುವ್ಯ ದಿಕ್ಕಿನಲ್ಲಿ ಮುಗಿಲು ಕೆಂಧೂಳಿನಿಂದ ಕೂಡಿತ್ತು. ನೆತ್ತಿಯ ಮೇಲೆ ಸೂರ್ಯನಿದ್ದ. ಮುತ್ತುಗದ ಎಲೆಯ ಜೊನ್ನೆಯಲ್ಲಿದ್ದ ಕಷಾಯ ನೆಲಕ್ಕೆ ಚೆಲ್ಲಿತ್ತು. ನಿಂಗಮ್ಮನಿಗೆ ಕೆಮ್ಮಲೂ ಅವಕಾಶವಿರಲಿಲ್ಲ. ಚೆನ್ನಾಗಿ ಒಸಕಿ ಅರೆ ಜೀವವಾದ ಆಕೆಯನ್ನು ಬಿಟ್ಟು ಮೇಲೆದ್ದ ಮೇಸ್ತ್ರಿ. ಆಗ ವಾಯುವ್ಯ ದಿಕ್ಕಿನ ಗಾಳಿಯು ಅದಿರು ತೆಗೆಯುತ್ತಿದ್ದ ಗುಡ್ಡವನ್ನು ತಲುಪಿತ್ತು. ಅದಿರು ಮಣ್ಣಿನ ಕೆಂಧೂಳು ವೃತ್ತಾಕಾರವಾಗಿ ಮೇಲೇರಿ ಸುಳಿಯ ತುದಿಯು ಕಾಣದಂತಾಗಿತ್ತು. ಮತ್ತೊಮ್ಮೆ ನೋಡಲೂ ಮೇಸ್ತ್ರಿ ಸಿಗಲಿಲ್ಲ. ನಿಂಗಮ್ಮ ಮಗಳನ್ನು ಹುಡುಕುತ್ತಾ ಸೋತ ಹರಿಣಿಯಂತೆ ಮನೆಯತ್ತ ನಡೆಯತೊಡಗಿದಳು.

ವಾಯುವ್ಯ ದಿಕ್ಕಿನಿಂದ ಬೀಸುತ್ತಿದ್ದ ಗಾಳಿಯ ವೇಗ ಅಪರಿಮಿತವಾಗಿತ್ತು. ಮರಗಳು ಬುಡಸಮೇತ ಬೀಳುತ್ತಿದ್ದವು. ವಲಯದಲ್ಲಿ ಸೇರಿದ ಮಲಯ ಅತ್ತಲಿಂದ ಇತ್ತಲಿನ ಗುಡ್ಡಕ್ಕೆ, ಇತ್ತಲಿಂದ ಅತ್ತಲಿನ ಗುಡ್ಡಕ್ಕೆ ಬಡಿಯಲಾರಂಭಿಸಿತು. ಮಳೆಯ ಹನಿಯೂ ಅಂತೆಯೇ ದಿಕ್ಕನ್ನು ಬದಲಾಯಿಸುತ್ತಿತ್ತು. ಆಣೆಕಲ್ಲಿನ ಹೊಡೆತಕ್ಕೆ ನಿಂಗಮ್ಮನ ತಲೆಯ ಮೇಲೆ ಬೊಬ್ಬೆ ಬಂದಿತ್ತು. ಓಡುತ್ತಿದ್ದಳು. ನಾಲಿಗೆಯ ತೇವ ಆರುತ್ತಿತ್ತು. ಗಂಟಲು ಪೂರ್ತಿ ಒಣಗಿತ್ತು. ಮಳೆ ಹನಿಯನ್ನೇ ಬಾಯಿಗೆ ತೆಗೆದುಕೊಳ್ಳಲು ನಾಲಿಗೆ ಚಾಚಿದಳು. ನೆಲದಲ್ಲಿ ಬಿದ್ದಿದ್ದ ಆಣಿಕಲ್ಲೊಂದನ್ನು ಬಾಯಿಗೆಸೆದುಕೊಂಡಳು. ತಡೆಯಲಾರದ ಕೆಮ್ಮು ಬಂತು. ಅದರೊಂದಿಗೆ ರಕ್ತ ರಕ್ತವೇ ಬಂದರೂ ಓಡುವುದನ್ನು ನಿಲ್ಲಿಸುವಂತಿರಲಿಲ್ಲ. ಜನನೇಂದ್ರಿಯದ ಭಾಗದ ಸೀರೆ ಸಂಪೂರ್ಣ ಕೆಂಪಾಗಿತ್ತು. ಬಹುಶಃ ಒತ್ತಡಕ್ಕೆ ಭ್ರೂಣವೇ ಕರಗಿ ಹೋಗಿರಬೇಕು. ಕಷಾಯದ ಪ್ರಭಾವದಿಂದ ವಾಂತಿ ಬೇಧಿಯಾಗುತ್ತಿದ್ದರೂ ಗಮನಿಸುವ ಸ್ಥಿತಿಯಲ್ಲಿರಲಿಲ್ಲ.

ಹೊಳೆಯನ್ನು ದಾಟಲು ರೈಲು ಸೇತುವೆಯ ಮೇಲೆ ಬಂದಳು. ನೀರು ಸೇತುವೆಯನ್ನು ಮುಚ್ಚಿ ಹರಿಯುತ್ತಿತ್ತು. ದಾಟುವುದರೊಳಗೇ ಕೊಚ್ಚಿ ಹೋಗಬಹುದೆಂದು ಜೋರಾಗಿ ಓಡಲಾರಂಭಿಸಿದಳು. ಒಣಗಿದ ಗಂಟಲನ್ನು ತಣಿಸಲು ಬಗ್ಗಿ ನದಿಯ ನೀರನ್ನು ಬೊಗಸೆಯಲ್ಲಿ ತೆಗೆದುಕೊಳ್ಳಲು ಪ್ರಯತ್ನಿಸಿದಳು. ಆಗ ಕೊಚ್ಚಿ ಹೊಡೆದ ಗಾಳಿಗೆ ಹುಲ್ಲು ಕಡ್ಡಿಯೂ ಆಧಾರವಾಗಿ ಸಿಗದೇ ನದಿಯ ಪಾಲಾದಳು.

ಉಪಸಂಹಾರ : ಭೂಮಿ ಕುಸಿದಿತ್ತು.

ಎರಡು ದಿನದ ನಂತರ ರಾಮಿಯ ಹೋಟೆಲ್‌ನ ಮೇಲೆ ಹದ್ದುಗಳು ಆಗಸದಲ್ಲಿ ಸುತ್ತುತ್ತಿದ್ದವು. ನೆಲದಲ್ಲಿ ನೊಣಗಳು ಒಂದಕ್ಕೊಂದು ಢಿಕ್ಕಿ ಹೊಡೆಯುತ್ತಿದ್ದವು.
*****
(ಮಾರ್ಚ್ ೧೯೮೮)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೫೪
Next post ಅಭಿಮಾನದ ಹಣತೆ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys