ಉದಯಿಸು ರವಿತೇಜನೇ ನೀನು
ಹೊಂಗಿರಣವ ಹೊರ ಸೂಸುತ|
ನಿನ್ನ ಸ್ವಾಗತಿಸೆ ಕಾದಿಹಳು ಇಬ್ಬನಿ
ತಬ್ಬಿಕೊಂಡು ಬಾಹುಬಂಧನದಿ
ಕರಗಿ ನೀರಾಗಲು
ಹುಲ್ಲ ಹಾಸಿಗೆಮೇಲೆ ಮಲಗಿ||

ಉದಯಿಸು ರವಿತೇಜನೇ ನೀನು
ಹಕ್ಕಿಗಳ ಇಂಚರವನಾಲಿಸುತ|
ಉದಯಿಸು ರವಿತೇಜನೇ ನೀನು
ಝುಳು ಝುಳು ಹರಿವ ನದಿಯ
ನಿನಾದವನು ಕೇಳುತ||

ಉದಯಿಸು ರವಿತೇಜನೇ ನೀನು
ಕರ್ಮವೀರ ನೇಗಿಲಯೋಗಿಯ
ಪ್ರಣಾಮವನು ಸ್ವೀಕರಿಸುತ|
ಉದಯಿಸು ರವಿತೇಜನೇ ನೀನು
ಹಸುವು ಕರುವಿಗೆ ಪ್ರೀತಿಯಿಂದ
ಹಾಲುಣಿಸುವುದನು ನೋಡುತ||

ಉದಯಿಸು ರವಿತೇಜನೇ ನೀನು
ಗುಡಿಯ ಘಂಟಾನಾದವ ಸೇವಿಸುತ|
ಉದಯಿಸು ರವಿತೇಜನೇ ನೀನು
ದೇಗುಲದ ಕಳಸ ಗೋಪುರ ಬೆಳಗಿಸುತ|
ಉದಯಿಸು ರವಿತೇಜನೇ ನೀನು
ಮಂಗಳಕರ ಸುಪ್ರಭಾತವನಾಲಿಸುತ
ಉದಯಿಸು ಸೂರ್ಯಪ್ರಕಾಶನೇ ನೀನು
ಕೋಟ್ಯಾನುಕೋಟಿ ಜೀವರಾಶಿಯ
ಜೀವನವ ಹೊನ್ನ ಕಿರಣದಿ ಬೆಳಗಲು||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)