ಅಂಗವಿಕಲರೆ ಆಗಿರಲಿ, ಮುದುಕರೆ ಆಗಿರಲಿ, ಹೆಳವರೇ ಆಗಿರಲಿ, ಅವರಿಗೆಲ್ಲ ಮಾರ್ಗದರ್ಶಕನಂತೆ ಗುರಿ ತೋರಿಸುವ ವಿನೂತವಾದ ಸಂಪರ್ಕ ಸಾಧನವನ್ನು ಇತ್ತೀಚಿಗೆ ಕಂಡು ಹಿಡಿಯಲಾಗಿದೆ. ಇದನ್ನು ಹಿಡಿದುಕೊಂಡು ಕಣ್ಣಿದ್ದವರಿಗಿಂತಲೂ ಸಲೀಸಾಗಿ ಎಂಥಹ ಜನಸಂದಣಿ ಮತ್ತು ವಾಹನಗಳ ಭರಾಟೆಗಳನ್ನು ಭೇಧಿಸಿ ಹೋಗಬಹುದು ಎನ್ನುತ್ತಾರೆ ವಿಜ್ಞಾನಿಗಳು. ಬ್ರಿಟನ್ನಿನಲ್ಲಿ ಸಂಶೋಧಿಸಲ್ಪಟ್ಟ ಈ ಸಾಧನವನ್ನು ಜರ್ಮನಿಯಲ್ಲಿ ತಯಾರಿಸಲಾಗುತ್ತದೆ.

ಈ ಮೊದಲು ಅಮೇರಿಕ ಮತ್ತು ರಷಿಯಾ ರಾಷ್ಟ್ರಗಳು ಕಂಪ್ಯೂಟರ್ ಸಹಕಾರದ ಕೃತಕ ಉಪಗ್ರಹದ ಉಪಯೋಗಿಸುವ ಕ್ಷಿಪಣಿಗಳನ್ನು ಮಿಲಿಟರಿ ಕಾರ್ಯಾಚರಣೆಗೆ ತಯಾರಿಸುತ್ತಿದ್ದರು. ನಗರದ ಭೂಪಟದಲ್ಲಿ ನಾವು ತಲುಪಬೇಕಾದ ಪ್ರದೇಶವನ್ನು ಗುರುತಿಸಿದಾಗ ಕಂಪ್ಯೂಟರ್ ಅದನ್ನು ಗುರುತಿಸಿ ಆ ಪ್ರದೇಶಕ್ಕೆ ಹೋಗುವಾಗ ಇರುವ ಅಡೆತಡೆಗಳನ್ನು ಕೂಡ ತಿಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಬಾಹ್ಯಾಕಾಶದಲ್ಲಿ ಭೂಪ್ರದಕ್ಷಿಣೆ ಹಾಕುತ್ತಿರುವ ವಿಶ್ವಸೂಚಿ ವ್ಯವಸ್ಥೆಯನ್ನು (Global positioning System) ಹೊಂದಿದ ಕೃತಕ ಉಪಗ್ರಹಗಳ ನೆರವಿನಿಂದ ಅಂಧರು ತಮ್ಮ ದೇಹಕ್ಕೆ ಅಳವಡಿಸಿಕೊಳ್ಳುವ ಸಾಧನ ‘ಮೊಬಿಕ್’ (Mobic) ನಲ್ಲಿರುವ ಭೂಪಟದಲ್ಲಿ ಇರುವ ಮಾರ್ಗವನ್ನು ಕಂಪ್ಯೂಟರ್ ಮೂಲಕ ಅರಿತುಕೊಳ್ಳುತ್ತಾರೆ. ಈ ಕಂಪ್ಯೂಟರ್ ಅಂಧರ ದೇಹದ ಸಂವೇಧನೆಗಳಿಗೆ ಸಂಪರ್ಕ ಹೊಂದಿದವರಿಗೆ ದಾರಿ ತೋರಿಸುತ್ತದೆ.

ಇಂಥಹ ಮೊಬಿಕ್, ಸಾಧನಗಳು ಜಗತ್ತಿನಲ್ಲಿರುವ ಕೋಟ್ಯಾಂತರ ಅಂಧರ, ಅಂಗವಿಕಲರ, ವೃದ್ಧರ ಆಶಾಕಿರಣವಾದರೆ ಕೆಲವಷ್ಟು ಸಮಸ್ಯೆಗಳು ಪರಿಹಾರವಾಗಬಹುದು.
*****