ಸಾರಜನಕ ಸ್ಥಿರೀಕರಣ

ಸಾರಜನಕ ಸ್ಥಿರೀಕರಣ

ಸಾರಜನಕ ಸ್ಥಿರೀಕರಣವು ಅತ್ಯಂತ ಪ್ರಮುಖ ಕ್ರಿಯೆಯಾಗಿದ್ದು ನಿಸರ್‍ಗದಲ್ಲಿ ಸದಾ ಜರುಗುತ್ತಿರುತ್ತದೆ. ಸಾರಜನಕ (ನೈಟ್ರೋಜನ್)ವು ಒಂದು ಬಹುಮುಖ್ಯ ಮೂಲವಸ್ತುವಾಗಿದ್ದು ಎಲ್ಲ ಸಜೀವ ವಸ್ತುಗಳಲ್ಲಿ ಅಡಕವಾಗಿರುತ್ತದೆ. ಆಮ್ಲಜನಕ, ಹೈಡ್ರೋಜನ್ ಮತ್ತು ಕಾರ್‍ಬನ್ ಮೂಲವಸ್ತುಗಳ ನಂತರ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವ ಮೂಲವಸ್ತು. ಸಸ್ಯಗಳಲ್ಲಿ ಸುಮಾರು ೧-೩% ಭಾಗದಷ್ಟು ಸಾರಜನಕ ಅಂಶವಿರುತ್ತದೆ. ಸಾರಜನಕವು ಪ್ರೋಟಿನು ಮತ್ತು ಅಮಿನೋ ಆಮ್ಲಗಳ ರೂಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆಯಾದರೂ ಅದು ನ್ಯೂಕ್ಲಿಯಿಕ್ ಆಮ್ಲ, ಕ್ಲೋರೋಫಿಲ್‌ಗಳು, ಸೈಟೊಕ್ರೋಮುಗಳು, ಅಲ್ಕಾಲ್ಯಾಡ್‌ಗಳು, ವಿಟಮಿನ್‌ಗಳು ಮತ್ತು ಸಸ್ಯ ಹಾರ್‍ಮೋನುಗಳ ರೂಪದಲ್ಲಿಯೂ ಲಭ್ಯವಿರುತ್ತದೆ. ಹಾಗಾಗಿ ಈ ಮೂಲವಸ್ತುವು ಉಪಾವಚಯ (ಮೆಟಾಬೊಲಿಸಮ್), ಬೆಳವಣಿಗೆ, ಸಂತಾನೋತ್ಪತ್ತಿ ಮತ್ತು ಅನುವಂಶಿಕಗಳಂತಹ ಅತ್ಯಂತ ಅವಶ್ಯಕ ಕ್ರಿಯೆಗಳಲ್ಲಿ ಬಹುಮುಖ್ಯವಾದ ಕಾರ್‍ಯ ನಿರ್‍ವಹಿಸುತ್ತದೆ. ಇದು ಎಷ್ಟು ಅತ್ಯಾವಶ್ಯಕ ಧಾತುವೆಂದರೆ ಇದರ ಅನುಪಸ್ಥಿತಿಯಲ್ಲಿ ಜೀವದ ಉಗಮವು ಸಾಧ್ಯವಿಲ್ಲ.

ಸಾರಜನಕದ ಲಭ್ಯತೆ

ವಾತಾವರಣದ ಸಾರಜನಕ: ವಾಯು ಮಂಡಲವು ಸುಮಾರು ೭೮% ದಷ್ಟು ಸಾರಜನಕ ಹೊಂದಿದೆ. ಈ ಅಣು ಸಾರಜನಕವು ಬಹಳ ಸ್ಥಿರವಾಗಿದ್ದು, ಉಚ್ಚವರ್‍ಗದ ಸಸ್ಯಗಳಿಗೆ ಇದನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಕೆಲವು ಬ್ಯಾಕ್ಟೀರಿಯಾಗಳು, ನೀಲಿ ಹಸಿರು ಪಾಚಿಗಳಂತಹ ಸೂಕ್ಷ್ಮ ಸಸ್ಯಗಳು ಮಾತ್ರ ಈ ಅಣು ಸಾರಜನಕವನ್ನು ಸ್ಥಿರೀಕರಿಸುವ ಸಾಮರ್‍ಥ್ಯ ಹೊಂದಿವೆ.

ಅಕಾರ್‍ಬನಿಕ್ ಸಾರಜನಕ: ಇದು ನೈಟ್ರೇಟುಗಳು, ನೈಟ್ರೈಟುಗಳು ಮತ್ತು ಅಮೋನಿಯಾ ರೂಪದಲ್ಲಿ ಮಣ್ಣಿನಲ್ಲಿ ಲಭ್ಯವಿದೆ.

ಸಾರಜನಕ ಸ್ಥಿರೀಕರಣ

ನಿಸರ್‍ಗದಲ್ಲಿ ಸಾರಜನಕ ಸ್ಥಿರೀಕರಣವು ಮುಖ್ಯವಾಗಿ ಎರಡು ವಿಧದಲ್ಲಿ ಜರುಗುತ್ತದೆ. ಭೌತ ಸಾರಜನಕ ಸ್ಥಿರೀಕರಣ ಮತ್ತು ಜೈವಿಕ ಸಾರಜನಕ ಸ್ಥಿರೀಕರಣ.

ಭೌತ ಸಾರಜನಕ ಸ್ಥಿರೀಕರಣ: ನೈಸರ್‍ಗಿಕ ಮೂಲದಿಂದ ಸ್ಥಿರೀಕರಣಗೊಳ್ಳುವ ಸಾರಜನಕದಲ್ಲಿ ಸುಮಾರು ೧೦% ರಷ್ಟು ಮಿಂಚು, ಗುಡುಗು ಮತ್ತು ವಾತಾವರಣದ ಮಾಲಿನ್ಯದಿಂದ ಆಗುತ್ತದೆ. ಭೌತ ಸಾರಜನಕ ಸ್ಥಿರೀಕರಣವು ಗುಡುಗು – ಮಿಂಚುಗಳಿಂದ ಕೂಡಿದ ಮಳೆಯ ಕಾಲದಲ್ಲಿ ಜರುಗುತ್ತದೆ. ಮಿಂಚು ಮತ್ತು ಅಲ್ಟ್ರಾವಯೋಲೆಟ್ ಕಿರಣಗಳಿಂದ ವಾತಾವರಣದಲ್ಲಿಯ ಸಾರಜನಕವು ಆಮ್ಲಜನಕದೊಂದಿಗೆ ಕೂಡಿದಾಗ ನೈಟ್ರಿಕ್ ಆಕ್ಸೈಡ್ (NO) ಆಗುತ್ತದೆ. ಇದು ಮತ್ತೆ ಆಕ್ಸೀಡೀಕರಣ ಹೊಂದಿ ನೈಟ್ರೋಜನ್ ಪೆರಾಕ್ಸೈಡ್ ಆಗುತ್ತದೆ.

 

ಮಳೆಯ ಸಂದರ್‍ಭದಲ್ಲಿ ನೈಟ್ರೋಜನ್ ಪೆರಾಕ್ಸೈಡ್ ನೀರಿನೊಂದಿಗೆ ಸಂಯೋಗ ಹೊಂದಿ ನೈಟ್ರಿಸ್ ಆಮ್ಲ ಮತ್ತು ನೈಟ್ರಿಕ್ ಆಮ್ಲಗಳಾಗುತ್ತದೆ. ಈ ಆಮ್ಲಗಳು ಮಳೆಯ ನೀರಿನೊಂದಿಗೆ ಭೂಮಿಗೆ ತರಲ್ಪಡುತ್ತವೆ ಮತ್ತು ಕ್ಷಾರೀಯ ರ್‍ಯಾಡಿಕಲ್‌ಗಳೊಂದಿಗೆ ವರ್‍ತಿಸಿ ನೀರಿನಲ್ಲಿ ಕರಗುವಂತಹ ನೈಟ್ರೇಟುಗಳು (No3) ಮತ್ತು ನೈಟ್ರೈಟುಗಳಾಗಿ (No2) ಉತ್ಪತ್ತಿಯಾಗುತ್ತವೆ.

2NO2+H2O->HNO2+HNO3 HNO3 + Ca ಅಥವಾ K ಲವಣಗಳು ->Ca ಅಥವಾ K ನೈಟ್ರೇಟುಗಳು.

ನೈಟ್ರೇಟುಗಳು ಸುಲಭವಾಗಿ ನೀರಿನಲ್ಲಿ ಕರಗುತ್ತವೆ ಹಾಗೂ ಸಸ್ಯಗಳು ಸುಲಭವಾಗಿ ಹೀರಿಕೊಳ್ಳುತ್ತವೆ. ಒಂದು ಲೆಕ್ಕಾಚಾರದ ಪ್ರಕಾರ ಮಳೆಯ ನೀರು ಈ ಕ್ರಿಯೆಯಿಂದ ವರುಷಕ್ಕೆ ಪ್ರತಿ ಹೆಕ್ಟೇರಿಗೆ ೪ ಕಿ.ಗ್ರಾಂ. ನಷ್ಟು ಸಾರಜನಕವನ್ನು ಭೂಮಿಗೆ ತರುತ್ತದೆ.

ಜೈವಿಕ ಸಾರಜನಕ ಸ್ಥಿರೀಕರಣ: ಜೀವಿಗಳ ಗುಂಪಿನ ಸಹಾಯದಿಂದ ಅಣು ಸಾರಜನಕವು ಅಕಾರ್‍ಬನಿಕ್ (ಅಜೈವಿಕ) ಅಥವಾ ಕಾರ್‍ಬನಿಕ್ ರೂಪ ತಾಳುವುದಕ್ಕೆ ಜೈವಿಕ ಸಾರಜನಕ ಸ್ಥಿರೀಕರಣ ಎನ್ನಬಹುದು. ಇದು ಎರಡು ವಿಧಗಳ ಸೂಕ್ಷ್ಮ ಜೀವಿಗಳಲ್ಲಿ ಜರುಗುತ್ತದೆ.
೧) ಸ್ವತಂತ್ರವಾಗಿ ಸಾರಜನಕ ಸ್ಥಿರೀಕರಣಗೊಳಿಸುವಂಥವು ಮತ್ತು
೨) ಇತರ ಸಸ್ಯಗಳೊಂದಿಗೆ ಸಹಯೋಗದಿಂದ ಸ್ಥಿರೀಕರಣಗೊಳಿಸುವಂಥವು.

ಸ್ವತಂತ್ರವಾಗಿ ಸಾರಜನಕ ಸ್ಥಿರೀಕರಣಗೊಳಿಸುವ ಸೂಕ್ಷ್ಮಜೀವಿಗಳು:
ಮಣ್ಣಿನಲ್ಲಿ ಅಸಂಖ್ಯಾತ ಸೂಕ್ಷ್ಮಜೀವಿಗಳು ವಾಸವಾಗಿರುತ್ತವೆ. ಅವುಗಳಲ್ಲಿ ಕೆಲವು ವಾಯುಜೀವಿ (ಮುಕ್ತ ಆಮ್ಲಜನಕದಲ್ಲಿ ಮಾತ್ರ ಬದುಕಬಲ್ಲವಂಥವು) ಮತ್ತು ಅನಿರೋಬಿಕ್ (ಆಮ್ಲಜನಕವಿಲ್ಲದೇ ಬದುಕುವಂಥದು) ಬ್ಯಾಕ್ಟೀರಿಯಾಗಳು, ನೀಲಿ ಹಸಿರು ಪಾಚಿಗಳು ಸೇರಿವೆ. ಸ್ವತಂತ್ರವಾಗಿ ಸಾರಜನಕ ಸ್ಥಿರೀಕರಿಸುವ ಸೂಕ್ಷ್ಮ ಸಸ್ಯಗಳೆಂದರೆ:

ಅ. ಸ್ವತಂತ್ರವಾಗಿ ಬದುಕಬಲ್ಲ ವಾಯುಜೀವಿ ಸಾರಜನಕ ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳು ( ಉದಾ: ಅಜೋಟೋಬ್ಯಾಕ್ಟರ್‍)
ಆ. ಸ್ವತಂತ್ರವಾಗಿ ಬದುಕಬಲ್ಲ ಅನಿರೋಬಿಕ್ ಸಾರಜನಕ ಸ್ಥಿರೀಕರಣದ ಬ್ಯಾಕ್ಟೀರಿಯಾಗಳು (ಉದಾ: ಕ್ಲೋಸ್ಟ್ರೀಡಿಯಂ)
ಇ. ಸ್ವತಂತ್ರವಾಗಿ ಬದುಕಬಲ್ಲ ದ್ಯುತಿಸಂಶ್ಲೇಷಕ ಬ್ಯಾಕ್ಟೀರಿಯಾಗಳು (ಉದಾ: ಕ್ಲೋರೋಬಿಯಂ)
ಈ. ಸ್ವತಂತ್ರವಾಗಿ ಬದುಕಬಲ್ಲ ರಾಸಾಯನಿಕ ಸಂಶ್ಲೇಷಕ ಬ್ಯಾಕ್ಟೀರಿಯಾಗಳು (ಉದಾ: ಡೈಸಲ್ಫೋವಿಬ್ರಿಯೋ)
ಉ. ಸ್ವತಂತ್ರವಾಗಿ ಬದುಕಬಲ್ಲ ಶಿಲೀಂಧ್ರಗಳು (ಉದಾ: ಯೀಸ್ಟ್) ಮತ್ತು
ಊ. ಹಟಿರೋಸಿಸ್ಟ್ ಗಳೆಂಬ ವಿಶೇಷ ಜೀವಕೋಶಗಳನ್ನು ಹೊಂದಿರುವ ನೀಲಿ ಹಸಿರು ಪಾಚಿಗಳು (ಉದಾ: ನಾಸ್ಪಾಕ್, ಅನಾಬೆನಾ ಇತ್ಯಾದಿ).

ಸ್ವತಂತ್ರವಾಗಿ ಸಾರಜನಕ ಸ್ಥಿರೀಕರಿಸುವ ಸೂಕ್ಷ್ಮ ಜೀವಿಗಳು ಗಾಳಿಯಲ್ಲಿಯ ಸಾರಜನಕ ಅಂಶವನ್ನು ಹೀರಿಕೊಂಡು, ತಮ್ಮ ದೇಹದಲ್ಲಿ ಅಮೀನೋ ಆಮ್ಲಗಳ ರೂಪದಲ್ಲಿ ಸ್ಥಿರೀಕರಿಸಿ, ಅದರಿಂದ ಪ್ರೋಟೀನನ್ನು ತಯಾರಿಸಿಕೊಳ್ಳುತ್ತವೆ. ಈ ಜೀವಿಗಳು ಸತ್ತಾಗ ದೇಹದಲ್ಲಿಯ ಪ್ರೋಟೀನ್ ಮಣ್ಣಿಗೆ ಬಿಡುಗಡೆಯಾಗುತ್ತದೆ. ಕೆಲವು ವಿಶೇಷವಾದ ಬ್ಯಾಕ್ಟೀರಿಯಾಗಳು ಇದರ ಮೇಲೆ ಕ್ರಿಯೆ ನಡೆಸಿ ನೈಟ್ರೇಟುಗಳಾಗಿ ಪರಿವರ್‍ತಿಸುತ್ತವೆ. ನೈಟ್ರೇಟುಗಳನ್ನು ಸಸ್ಯಗಳು ಹೀರಿಕೊಂಡು, ಸಸ್ಯ ಪ್ರೋಟೀನ್‌ಗಳಾಗಿ ಪರಿವರ್‍ತಿಸಿ ಶೇಖರಿಸಿಟ್ಟುಕೊಳ್ಳುತ್ತವೆ.

ಇತರೆ ಸಸ್ಯಗಳ ಸಹಯೋಗದೊಂದಿಗೆ ಸಾರಜನಕ ಸ್ಥಿರೀಕರಿಸುವ ಸೂಕ್ಷ್ಮ ಸಸ್ಯಗಳು:
ಕೆಲವು ಸಸ್ಯಗಳು ಸೂಕ್ಷ್ಮ ಸಸ್ಯಗಳ ಸಹಾಯದಿಂದ ಸಾರಜನಕ ಸ್ಥಿರೀಕರಿಸುತ್ತವೆ. ನೀವು ಮುಂದಿನ ಸಲ ಹೊಲಕ್ಕೆ ಭೇಟಿಯಿತ್ತಾಗ ಶೇಂಗಾ ಗಿಡವನ್ನು ಬೇರು ಸಮೇತ ಕಿತ್ತು ಪರೀಕ್ಷಿಸಿ. ಬೇರಿಗೆ ಅಲ್ಲಲ್ಲಿ ಗಂಟು ಗಂಟು ಕಾಣಿಸುತ್ತವೆ. ಈ ಗಂಟುಗಳಲ್ಲಿ ಸಾರಜನಕ ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳು ವಾಸವಾಗಿರುತ್ತವೆ. ಗಾಳಿಯಲ್ಲಿಯ ಸಾರಜನಕ ಅಂಶವನ್ನು ಹೀರಿ, ತಮ್ಮ ದೇಹದಲ್ಲಿ ಸ್ಥಿರೀಕರಿಸಿ ಬ್ಯಾಕ್ಟೀರಿಯಾಗಳು ಸಸ್ಯಗಳಿಗೆ ಒದಗಿಸುತ್ತವೆ. ಇದಕ್ಕೆ ಬದಲಾಗಿ ಸಸ್ಯವು ಬ್ಯಾಕ್ಟೀರಿಯಾಗಳಿಗೆ ಆಹಾರ ಮತ್ತು ಇರಲು ಜಾಗ ನೀಡುತ್ತದೆ. ಹೀಗೆ ಇವು ಪರಸ್ಪರ ಸಹಾಯ ಮಾಡುತ್ತ ಬದುಕುತ್ತವೆ. ಶೇಂಗಾ ಗಿಡದ ಬಳಗದ ಕುಟುಂಬ (ಲೆಗ್ಯುಮಿನೇಸಿ)ದ ಇತರ ಸಸ್ಯಗಳಲ್ಲಿಯೂ ಕ್ರಿಯೆಯನ್ನು ಕಾಣಬಹುದು. ಹೀಗೆ ಎರಡು ಸಸ್ಯಗಳು ಒಟ್ಟಾಗಿ ಸಾರಜನಕ ಸ್ಥಿರೀಕರಿಸುವ ಇತರ ಉದಾಹರಣೆಗಳೆಂದರೆ –

ಅ. ಲೆಗ್ಯುಮಿನೇಸಿ ಹೊರತುಪಡಿಸಿ ಇತರ ಗುಂಪಿನ ಸಸ್ಯಗಳ ಬೇರುಗಳಲ್ಲಿ – ಉದಾ: ಕೇಸರಿಕೆ, ಆಲ್ನಸ್ ಇತ್ಯಾದಿ.

ಆ. ಅನಾವೃತ ಬೀಜೀಯ ಸಸ್ಯಗಳು (ಜಿಮ್ನೋಸ್ಪರ್‍ಮ್‌ಸ್) ಬೇರುಗಳಲ್ಲಿ ಉದಾ: ಪೋಡೋ ಕಾರ್‍ಪಸ್ ಇತ್ಯಾದಿ; ಮತ್ತು ಮೈಕೋರೈಜ ಗಿಡಗಳಲ್ಲಿ ಉದಾ: ಪೈನಸ್ ಇತ್ಯಾದಿ.

ಮಣ್ಣಿನಲ್ಲಿಯ ಸಾರಜನಕ ಸ್ಥಿರೀಕರಿಸುವ ಬ್ಯಾಕ್ಟೀರಿಯಾಗಳು (ರೈಜೋಬಿಯಂ ಕುಲದ ಹಲವು ಜಾತಿಗಳು) ಮೇಲೆ ಕಾಣಿಸಿದ ಸಸ್ಯಗಳ ಬೇರುಗಳು ಗಾಯ ಹೊಂದಿದ ಅಥವಾ ಸೂಕ್ಷ್ಮವಾದ ಭಾಗಗಳ ಮೂಲಕ ಒಳಸೇರಿ, ಒಳಭಾಗದ ಕಾರ್‍ಟೆಕ್ಸ್‌ನಲ್ಲಿ ಪ್ರವೇಶಿಸಿ, ಅವನ್ನು ದ್ವಿಗುಣಗೊಳ್ಳುವಂತೆ ಪ್ರಚೋದಿಸುತ್ತವೆ. ಆಗ ಬೇರಿಗೆ ಅಲ್ಲಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ಇವು ದುಂಡಗೆ, ಅಂಡಾಕಾರ ಅಥವಾ ಚಪ್ಪಟೆಯಾಗಿರಬಹುದು ಮತ್ತು ಗಾತ್ರದಲ್ಲಿ ಗುಂಡು ಪಿನ್ನಿನ ತಲೆಯಷ್ಟು ದಪ್ಪದಿಂದ ಹಿಡಿದು ೧ ಸೆಂ.ಮೀ. ವ್ಯಾಸವಾಗಿರಬಹುದು.

ಬೆಳೆ ಪರಿವರ್‍ತನೆ (ಕ್ರಾಪ್ ರೊಟೇಷನ್)

ಅನು ಸಾರಜನಕ ಸ್ಥಿರೀಕರಣದ ಕ್ರಿಯೆಯು ಕೃಷಿಗೆ ಸಂಬಂಧಿಸಿದಂತೆ ಬಹು ಪ್ರಾಮುಖ್ಯತೆಯನ್ನು ಪಡೆದಿದೆ. ಹೆಚ್ಚಾನೆಚ್ಚು ಎಲ್ಲ ಬೆಳೆಗಳು ಮಣ್ಣಿನಿಂದ ಸಾರಜನಕವನ್ನು ಹೀರಿಕೊಳ್ಳುತ್ತವೆ. ಲೆಗ್ಯುಮ್ ಸಸ್ಯಗಳ ಗಂಟು ಗಂಟಾದ ಬೇರುಗಳು ಮಣ್ಣಿನಲ್ಲಿ ಎಳಿದಾಗ ಮಣ್ಣು ಸಾರಜನಕದಿಂದ ಫಲವತ್ತಾಗುತ್ತದೆ. ಆದುದರಿಂದಲೇ ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಲೆಗ್ಯುಮಿನೇಸಿ ಬೆಳೆಗಳೊಂದಿಗೆ ಅಂದರೆ ಬೇಳೆಕಾಳುಗಳು, ಅಲಸಂದಿ ಇತ್ಯಾದಿಗಳ ಜೊತೆಗೆ ಇತರ ಲೆಗ್ಯುಮಿನೆಯೇಸಿಯಲ್ಲದ ಬೇಳೆಗಳನ್ನು (ಅಕ್ಕಿ, ಗೋಧಿ, ಮೆಕ್ಕೆ, ಬಾರ್‍ಲಿ ಮತ್ತು ಧಾನ್ಯಗಳು ಇತ್ಯಾದಿ) ಪರಿವರ್‍ತನೆಗಾಗಿ ಬೆಳೆಯಲಾಗುತ್ತದೆ. ಇದೇ ಕಾರಣದಿಂದ ಟೆಪ್ರೋಸಿಯ ಮತ್ತು ಡೆರ್‍ರಿಸ್‌ಗಳಂತಹ ಲೆಗ್ಯುಮಿನೇಸಿ ಸಸ್ಯಗಳನ್ನು ಚಹಾ ಗಿಡದ ತೋಟಗಳಲ್ಲಿ ನೈಸರ್‍ಗಿಕ ಗೊಬ್ಬರವಾಗಿ ಬೆಳೆಯಲಾಗುತ್ತದೆ.

ಸಾರಜನಕ ಚಕ್ರ

ಜೀವಿಗಳಿಗೆ ಸಾರಜನಕದ ಮೂಲವೆಂದರೆ ಅಣು ಸಾರಜನಕ ಅಥವಾ ವಾಯುಮಂಡಲದ ಸಾರಜನಕ. ಈ ಸಾರಜನಕವು ಅಕಾರ್‍ಬನಿಕ್ ಸಾರಜನಕ ಸಂಯುಕ್ತಗಳ ರೂಪದಲ್ಲಿ ಸ್ಥಿರೀಕರಣಗೊಂಡಾಗ ಸಸ್ಯಗಳು ಹೀರಿಕೊಂಡು ಪ್ರೋಟೀನ್ಗಳಾಗಿ ಮಾರ್‍ಪಡಿಸುತ್ತವೆ. ಸಸ್ಯ ಪ್ರೋಟೀನನ್ನು ಪ್ರಾಣಿಗಳು ತಿಂದಾಗ ಅವುಗಳ ದೇಹ ಸೇರುತ್ತದೆ. ಸಸ್ಯ ಮತ್ತು ಪ್ರಾಣಿಗಳು ಸತ್ತಾಗ ಅವನ್ನು ಉರಿಸುವುದರಿಂದ ಅಥವಾ ಕೊಳೆಯುವುದರಿಂದಲೂ ಅಣು ಸಾರಜನಕ ವಾತಾವರಣ ಸೇರುತ್ತದೆ.

ಹೀಗೆ ಸಾರಜನಕ ಚಕ್ರದ ಉಗಮವು ಪರಿಪೂರ್‍ಣ ಸಂತುಲನವನ್ನು ಕಾಯ್ದುಕೊಂಡಿರುತ್ತದೆ. ಇದರ ಮುಖ್ಯ ಅಂಶಗಳು ಯಾವುದೆಂದರೆ:

ಮಳೆಯ ಸಂದರ್‍ಭದಲ್ಲಿ ಮಿಂಚು ಹೊಳೆದಾಗ ಗಾಳಿಯಲ್ಲಿಯ ಆಮ್ಲಜನಕ ಸಾರಜನಕದೊಂದಿಗೆ ಸಂಯೋಗ ಹೊಂದಿ, ವಾಯುಮಂಡಲದ ಸ್ವತಂತ್ರ ಅಣು ಸಾರಜನಕವು ನೈಟ್ರೇಟುಗಳಾಗಿ ಸ್ಥಿರೀಕರಣಗೊಳ್ಳುತ್ತದೆ. ಈ ಸ್ಥಿರೀಕರಣಗೊಂಡ ಸಾರಜನಕವು ಮಳೆಯೊಂದಿಗೆ ಭೂಮಿಗೆ ಇಳಿಯುತ್ತದೆ. ಮಣ್ಣಿನಿಂದ ಅದನ್ನು ಸಸ್ಯಗಳು ಹೀರಿಕೊಂಡು ಅಮೋನಿಯಾಗಳಾಗಿ ಆಕರ್‍ಷಿಸುತ್ತದೆ.

ಅಣು ಸಾರಜನಕವನ್ನು ಜೈವಿಕ ರೂಪದಲ್ಲಿಯೂ ಲೆಗ್ಯುಮ್ ಜಾತಿಯ ಸಸ್ಯಗಳು, ನೀಲಿ ಹಸಿರು ಪಾಚಿಗಳು, ಬ್ಯಾಕ್ಟೀರಿಯಾಗಳ ಸ್ಥಿರೀಕರಿಸಿ ಅಮೋನಿಯಾಗಳಾಗಿ ಪರಿವರ್‍ತಿಸಬಲ್ಲವು.

ಸಸ್ಯಗಳಲ್ಲಿ ಅಮೋನಿಯಾವು ಕಾರ್‍ಬನಿಕ ರೂಪಕ್ಕೆ ಪರಿವರ್‍ತನೆಗೊಂಡು ಅದನ್ನು ಪ್ರೊಟೀನ್ ಮತ್ತಿತರ ಕಾರ್‍ಬನಿಕ್ ಸಾರಜನಕ ಸಂಯುಕ್ತಗಳ ತಯಾರಿಕೆಗಾಗಿ ಉಪಯೋಗಿಸಲಾಗುತ್ತದೆ. ಸಸ್ಯ ಪ್ರೋಟೀನನ್ನು ಪ್ರಾಣಿಗಳು ತಿಂದಾಗ ಅವುಗಳ ದೇಹ ಸೇರುತ್ತದೆ. ಸತ್ತ ಸಸ್ಯ ಮತ್ತು ಪ್ರಾಣಿಗಳನ್ನು ಸುಟ್ಟಾಗಲೂ ಅಣು ಸಾರಜನಕವು ವಾಯುಮಂಡಲಕ್ಕೆ ಬಿಡುಗಡೆಯಾಗುತ್ತದೆ.

ಸತ್ತ ಸಸ್ಯ ಮತ್ತು ಪ್ರಾಣಿಗಳ ಮೇಲೆ ಕೆಲವು ಸೂಕ್ಷ್ಮಜೀವಿಗಳು ವರ್‍ತಿಸಿ ಅಮೋನೀಕರಣ ಮತ್ತು ನೈಟ್ರೀಕರಣ ಕ್ರಿಯೆಗಳ ಮೂಲಕ ಅಪಕರ್‍ಷಿತವಾಗಿ ಅಮೋನಿಯಾ, ನೈಟ್ರೇಟು ಮತ್ತು ನೈಟ್ರೈಟುಗಳಾಗಿ ವಿಭಜಿಸುತ್ತದೆ. ಅದನ್ನು ಮತ್ತೆ ಸಸ್ಯಗಳು ಹೀರಿಕೊಳ್ಳುತ್ತವೆ.

ಮಣ್ಣಿನಲ್ಲಿಯ ಬ್ಯಾಸಿಲಸ್ ಡೀನೈಟ್ರೀಫಿಕನ್ಸ್‌ಗಳಂತಹ ಬ್ಯಾಕ್ಟೀರಿಯಾಗಳ ಸಹಾಯದಿಂದ ಹೀಗೆ ತಯಾರಾದ ನೈಟ್ರೇಟು ಮತ್ತು ನೈಟ್ರೈಟುಗಳು ಮತ್ತೆ ಅಣು ಸಾರಜನಕವಾಗಿ ಪರಿವರ್‍ತನೆಯಾಗುತ್ತದೆ. ಈ ಕ್ರಿಯೆಯನ್ನು ಡೀನೈಟ್ರೀಕರಣ ಎನ್ನುತ್ತಾರೆ.

ಸಸ್ಯಗಳಲ್ಲಿ ಸಾರಜನಕದ ಕೊರತೆಯ ಲಕ್ಷಣಗಳು:
ಸಾರಜನಕದ ಕೊರತೆಯಿಂದ ಪ್ರೋಟೀನ್ ಸಂಶ್ಲೇಷಣೆ ನಿಂತು ಹೋಗಿ, ಎಲ್ಲಾ ವಿಧಧ ಬೆಳವಣಿಗೆ ಕುಂಠಿತವಾಗುತ್ತದೆ. ಮೊದಲ ಲಕ್ಷಣವೆಂದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಬಿಳಿಚು ರೋಗ (ಕ್ಲೋರೋಸಿಸ್) ಕಾಣಿಸಿಕೊಳ್ಳುವಿಕೆ. ಗಿಡದ ಕೆಳಮಟ್ಟದ ಎಲೆಗಳು ಪೇಲವು ಕಂದು ಬಣ್ಣಕ್ಕೆ ತಿರುಗಿ ಒಣಗಲು ತೊಡಗುತ್ತವೆ. ಎಲೆ ತೊಟ್ಟು ಸಣ್ಣದಾಗಿರುತ್ತದೆ. ಹೂಗಳ ಹುಟ್ಟು ನಿಧಾನವಾಗಿ ಆಗಬಹುದು ಅಥವಾ ಆಗದೇ ಇರಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ಸಂತೆ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys