ಪಾರದರ್‍ಶಕ ಪ್ರಾಣಿಗಳು

ಪಾರದರ್‍ಶಕ ಪ್ರಾಣಿಗಳು

ಸಾಗರ ಭೂಮಂಡಲದ ಅತ್ಯಂತ ದೊಡ್ಡ ಆವಾಸ, ಜೀವಗೋಳದ ಶೇ.೯೯ಕ್ಕಿಂತಲೂ ಹೆಚ್ಚಿನ ಜಾಗ ಆಕ್ರಮಿಸಿರುವ ಗ್ರಹದ ಜಾಗವಾಗಿದೆ. ಸಮುದ್ರದಾಳದಲ್ಲಿ ಅಸಂಖ್ಯಾತ ಜೀವಿಗಳು ಜೀವಿಸಿಕೊಂಡಿರುತ್ತವೆ. ಅಂತಹವುಗಳಲ್ಲಿ ಪಾರದರ್‍ಶಕ (ಟ್ರಾನ್ಸ್‌ಪರೆಂಟ್) ಪ್ರಾಣಿಗಳು ಅಚ್ಚರಿ ಹುಟ್ಟಿಸುವಂಥವು. ಜೆಲ್ಲಿ ಮೀನು ಅಂತಹವುಗಳಲ್ಲಿ ಒಂದು. ಇದು ಅದೆಷ್ಟು ಪಾರದರ್‍ಶಕವಾಗಿದೆಯೆಂದರೆ ಸ್ವಲ್ಪ ದೂರದಿಂದ ಸ್ಪಷ್ಟವಾಗಿ ಕಾಣುವುದಿಲ್ಲ. ಹೆಬ್ಬೆಟ್ಟಿನ ಗಾತ್ರದಿಂದ ಹಿಡಿದು ಬಾಸ್ಕೆಟ್ ಬಾಲ್ ನ ಗಾತ್ರದಷ್ಟಿರುವ ಅವುಗಳ ಹೊಟ್ಟೆಯಲ್ಲಿಯ ಆಹಾರ ಅಥವಾ ಒಮ್ಮೊಮ್ಮೆ ಬಣ್ಣದ ಚುಕ್ಕೆಗಳು ಅಥವಾ ಬೆಳಕು ಚಿಮ್ಮುವುದನ್ನು ಬಿಟ್ಟರೆ ಉಳಿದೇನೂ ಕಾಣಿಸದು. ಉಳಿದವು ಎಷ್ಟು ಪಾರದರ್‍ಶಕವೆಂದರೆ ಕೇವಲ ಸೆಂ.ಮೀ.ನಷ್ಟು ದೂರದಲ್ಲಿದ್ದರೂ ಕಾಣಿಸಲಾರವು.

ಇಂತಹ ಪ್ರಾಣಿಗಳ ದೇಹವು ಜೆಲಿಟಿನ ವಸ್ತುವಿನಿಂದ ಮಾಡಲ್ಪಟ್ಟಿದ್ದು, ಅದರಿಂದ ಹಲವು ಉಪಯೋಗಗಳಿವೆ. ಸಾಗರ ತಳದ ನೀರಿನ ಒತ್ತಡವು ಜೀವಿಗಳ ದೇಹದ ಮೇಲೆ ಬೀಳುತ್ತದೆ. ಅದರಿಂದ ಅವು ಸಂಕುಚಿತವಾಗುವುದಿಲ್ಲ. ಅಷ್ಟೇ ಅಲ್ಲ ಬೆಲೂನಿನಂತೆ ನೀರಿನಲ್ಲಿ ತೇಲುವ ಪ್ಲವನತೆಯನ್ನು ಒದಗಿಸುತ್ತದೆ. ಜೆಲಿಟಿನ ನಿರ್‍ಜೀವ ವಸ್ತುವಾಗಿದ್ದು, ಸುಲಭವಾಗಿ ತಯಾರಾಗುತ್ತದೆ. ಅದರಿಂದ ಮಾಡಲ್ಪಟ್ಟ ಜೀವಿಗಳು ಬಹಳ ಕಡಿಮೆ ಆಹಾರದಿಂದಲೂ ಜೀವಂತವಾಗಿರಬಹುದು. ಸುಲಭವಾಗಿ ಆಹಾರ ಸಿಗುವಂತಾದರೆ ಅವು ಬೆಳೆದು, ತ್ವರಿತಗತಿಯಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಬಹಳ ಕಡಿಮೆ ಸಮಯದಲ್ಲಿ ಜೀವಿಗಳು ಗುಂಪುಗಟ್ಟಲೇ ವೃದ್ಧಿಸಿ ಸಾವಿರಾರು ಚದರ ಕಿಲೋಮೀಟರ್‌ಗಳಷ್ಟು ಜಾಗ ಆಕ್ರಮಿಸುತ್ತವೆ.

ಈಗ ನಮಗೆ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಪಾರದರ್‍ಶಕ ಪ್ರಾಣಿಗಳೆಂದರೆ ಎಷ್ಟು ಪಾರದರ್‍ಶಕ? ಅಂತಹ ಪ್ರಾಣಿಗಳ ದೇಹ ಪಾರದರ್‍ಶಕವಾಗಿ ಉಗಮವಾಗಲು ಕಾರಣವೇನಿತ್ತು?

ಈ ಸಮಸ್ಯೆಗಳಿಗೆ ಸಮಾದಾನ ಸಿಗಬೇಕಾದರೆ ಅಂತಹ ಪ್ರಾಣಿಗಳನ್ನು ಜೀವಂತವಾಗಿ ಸೆರೆ ಹಿಡಿದು ಅಭ್ಯಸಿಸುವುದು. ಜೀವಂತವಾಗಿದ್ದಾಗಷ್ಟೇ ಪಾರದರ್‍ಶಕವಾಗಿರುವ ಅವು ಸತ್ತಾಗ ಅಪಾರದರ್‍ಶಕವಾಗುತ್ತವೆ. ಜೀವಂತವಾಗಿ ಹಿಡಿಯುವುದು ಸಮಸ್ಯೆಯೇ ಸರಿ. ಏಕೆಂದರೆ ಅವು ಅತ್ಯಂತ ಸೂಕ್ಷ್ಮವಾಗಿದ್ದು ದೇಹ ಹರಿದುಹೋಗಬಹುದು. ಹಾಗಾಗಿ ಸ್ಕೂಬಾ ಮುಳುಗುವವರು ಹಾಗು ಸಬ್‌ಮರ್‍ಸಿಬಲ್‌ಗಳ ಸಹಾಯದಿಂದ ಹಿಡಿಯಬಹುದು.

ಪಾರದರ್‍ಶಕ ಪ್ರಾಣಿಗಳ ದೇಹದಿಂದ ಶೇ. ೨೦ ರಿಂದ ೯೦ ರಷ್ಟು ಬೆಳಕು ಹಾಯುತ್ತದೆ. ಬೃಹತ್ತಾದ ಪ್ರಾಣಿಗಳ ದೇಹವು ಪಾರದರ್‍ಶಕ ಊತಗಳಿಂದ ತಯಾರಾಗಿರುತ್ತದೆ. ಸಾಗರದ ೭೫೦ ಮೀ. ಆಳದಲ್ಲಿ ಜೀವಿಸುವ ಪ್ರಾಣಿಯ ದೇಹವು, ಸಾಗರದ ಮೇಲ್ಮೈ ಮೇಲೆ ಜೀವಿಸುವ ಪ್ರಾಣಿಯಷ್ಟೇ ಪಾರದರ್‍ಶಕವಾಗಿರುತ್ತದೆ.

ಸಾಮಾನ್ಯವಾಗಿ ನಾವು ತಿಳಿದುಕೊಂಡಂತೆ ಸಾಗರದ ಮೇಲ್ಮೈ ಮೇಲೆ ವಾಸಿಸುತ್ತಿರುವ ಪ್ರಾಣಿಗಳಲ್ಲಿ ಹೆಚ್ಚು ಪಾರದರ್‍ಶಕವಾಗಿರುತ್ತವೆ. ಇದು ತಪ್ಪು ಕಲ್ಪನೆ. ತಳದಲ್ಲಿ ವಾಸಿಸುವ ಕೆಲವು ಪ್ರಾಣಿಗಳು ಅದೆಷ್ಟು ಪಾರದರ್‍ಶಕವಾಗಿರುತ್ತವೆಂದರೆ ಕೇವಲ ಕೆಲವೇ ಸೆಂ.ಮೀ. ಅಥವಾ ಮಿ.ಮೀ. ದೂರದಲ್ಲಿದ್ದರೂ ವೈರಿಗಳ ಕಣ್ಣಿಗೆ ಕಾಣಿಸಲಾರವು!

ಒಂದು ಜೀವಿಯು ಎಷ್ಟು ಪಾರದರ್‍ಶಕವಾಗಿ ಇದೆಯೆಂಬುದನ್ನು ತಿಳಿಯಬೇಕಾದರೆ ಒಂದು ವಸ್ತುವಿನ ದೃಶ್ಯತೆಯು ಅದರ ಸುತ್ತಮುತ್ತಲಿನ ಪರಿಸರಕ್ಕನುಗುಣವಾಗಿ ವರ್‍ಣತೆಯನ್ನು ಅವಲಂಬಿಸಿದೆ. ಸಮುದ್ರದ ಜೀವಿಗಳ ಮಟ್ಟಿಗೆ ಹೇಳುವುದಾದರೆ, ದೃಷ್ಟಿ ಹಾಯಿಸುವವರ ಮತ್ತು ಪ್ರಾಣಿಯ ನಡುವಿನ ನೀರು ಚದುರುತ್ತ, ಜೀವಿಯಿಂದ ಪ್ರತಿಫಲನಗೊಂಡ ಬೆಳಕು ಹೀರಿಕೊಳ್ಳುತ್ತದೆ. ಪ್ರಾಣಿಯು ದೂರದಲ್ಲಿದ್ದರೆ ಅದರ ಬಿಂಬವು ಅಷ್ಟು ಗೋಚರವಾಗಿರದೇ ದೃಶ್ಯ ಕಾಣಿಸುವುದಿಲ್ಲ. ಸ್ವಲ್ಪ ದೂರದಿಂದ, ಪ್ರಾಣಿಗಳ ನಿಜ ವರ್‍ಣತೆಯನ್ನು ಅವಲಂಬಿಸಿ ನೀರು ಬೆಳಕಿಗೆ ಎಷ್ಟು ಪ್ರಭಾವ ಬೀರುತ್ತದೆ, ಆಗ ವರ್‍ಣತೆ ಕಡಿಮೆಯಾಗಿ ಜೀವಿಗಳು ಗೋಚರವಾಗುತ್ತವೆ. ಈ ದೂರವನ್ನು ದೃಶ್ಯ ವ್ಯತ್ಯಾಸವೆಂದು ಕರೆಯಲಾಗುತ್ತದೆ. ಅದರ ಆಚೆಗಿನ ದೂರದಲ್ಲಿದ್ದರೆ ಪ್ರಾಣಿಯು ಗೋಚರವಾಗುವುದಿಲ್ಲ.

ಪಾರದರ್‍ಶಕತೆ ಮತ್ತು ದೇಹ ರಚನೆ

ಹಲವು ಬಗೆಯ ಕಪಟ ರೂಪಗಳಂತೆ, ಪಾರದರ್‍ಶಕತೆಯೂ ಪ್ರಾಣಿಗಳ ದೇಹವನ್ನು ಅವಲಂಬಿಸಿದೆ. ಅದು ಹಲವು ಸಮಸ್ಯೆಗಳನ್ನು ತರುತ್ತದೆಯಾದರೂ ವಿಕಾಸವು ಆ ಸಮಸ್ಯೆಗಳನ್ನು ಬಗೆಹರಿಸಿದೆ.

ಅವುಗಳಲ್ಲಿಯ ಕೆಲವು ಸಮಾಧಾನಗಳನ್ನು ಬರಿಗಣ್ಣಿನಿಂದಲೇ ಅರಿಯಬಹುದು. ಅಂತಹ ಜೀವಿಗಳು ಚಪ್ಪಟೆ ಮತ್ತು ತೆಳುವಾಗಿರುತ್ತವೆ, ಏಕೆಂದರೆ ತೆಳುವಾದ ವಸ್ತುವಿನಿಂದ ಹೆಚ್ಚಿನ ಬೆಳಕು ಹಾಯುತ್ತದೆ. ಚಪ್ಪಟೆತನವೂ ಪ್ರಾಣಿಗಳಿಗೆ ದೃಷ್ಟಿನೆಡಲು ಸಹಾಯಕವಾಗುವುದಿಲ್ಲ. ಕೆಲವು ಪ್ರಾಣಿಗಳ ಅದರಲ್ಲೂ ಲೆಪ್ಟೋಸೆಪಲಸ್ ಎಂಬ ಮೀನು ಲಾರ್‍ವವು ಕೆಲವೇ ಮಿ.ಮೀ.ನಷ್ಟು ದಪ್ಪನಾಗಿದ್ದು, ೧೦ ಸೆಂಟಿಮೀಟರ್‍ ನಷ್ಟು ಉದ್ದವಾಗಿರುತ್ತದೆ. ಕೆಲವು ಬಾಚಣಿಗೆ ಜೆಲ್ಲಿಗಳು ಸೊಂಟದ ಪಟ್ಟಿ (ಬೆಲ್ಟ್) ಯಂತೆ ಚಪ್ಪಟೆ ಮತ್ತು ಉದ್ದವಾಗಿರುತ್ತವೆ. ಕ್ಯಾರಿಬ್ಬಿಯನ್ ಸಮುದ್ರದಲ್ಲಿಯ ಲೋಬ್‌ಸ್ಟರ್‌ಗಳು ಅರ್‍ಧ ಡಾಲರ್‍ ಹಣದಷ್ಟು ಉದ್ದ ಮತ್ತು ಕಾಗದದಷ್ಟು ತೆಳುವಾಗಿರುತ್ತವೆ. ಇವುಗಳನ್ನು ಹಿಡಿಯುವ ಒಂದೇ ಮಾರ್‍ಗವೆಂದರೆ ನೆರಳನ್ನು ಅರಸುತ್ತ ಸಾಗುವುದು!

ದೃಷ್ಟಿ ನೆಡಬೇಕಾದರೆ ರೆಟಿನಾವು ಬೆಳಕನ್ನು ಹೀರಿಕೊಳ್ಳಬೇಕಾಗುತ್ತದೆ. ಆದರೂ ಕಣ್ಣಿನ ಸ್ವಲ್ಪ ಭಾಗವಾದರೂ ಕಾಣಿಸುತ್ತದೆ. ಈ ಸಮಸ್ಯೆಗೆ ಸಮಾಧಾನಗಳು ದೊರಕಿವೆ. ಕೆಲವು ಪ್ರಾಣಿಗಳ ಕಣ್ಣುಗಳು ಉದ್ದನಾದ ಸ್ಟಾಕ್‌ಗಳ ತುದಿಯಲ್ಲಿದ್ದು, ಇನ್ನೂ ಕೆಲವು ಪ್ರಾಣಿಗಳ ರೆಟಿನಾಗಳು ಬಹಳ ಒತ್ತೊತ್ತಾಗಿರುತ್ತವೆ, ಫೈಬರ್‍ ಆಪ್ಟಿಕ್ ಜಾಲದಂತೆ, ಕೆಲವು ಪ್ರಾಣಿಗಳ ಕಣ್ಣು ಅತ್ಯಂತ ದೊಡ್ಡದಾಗಿದ್ದು ಕಾರ್‍ನಿಯದ ಕೆಳಗಿನ ರೆಟಿನಾವು ತೆಳು ಮತ್ತು ಪೇಲವವಾಗಿರುತ್ತದೆ.

ಹೊಟ್ಟೆಯು ಗೋಚರವಾಗುವಂತಹ ಮತ್ತೊಂದು ಅಂಗ, ಹೊಟ್ಟೆಯಲ್ಲಿ ಶೇಖರವಾಗುವ ಆಹಾರವೇ ಇದಕ್ಕೆ ಕಾರಣ. ಏಕೆಂದರೆ ಅದು ಅಪಾರ ದರ್‍ಶಕವಾಗಿರುತ್ತದೆ. ಕೆಲವು ಸಮುದ್ರ ಜೀವಿಗಳ ಹೊಟ್ಟೆಯು ಕಡ್ಡಿಯಾಕಾರವಾಗಿದ್ದು, ಸದಾ ಕೆಳಮುಖವಾಗಿರುತ್ತದೆ. ಇದರಿಂದ ಪಾರದರ್‍ಶಕ ಪ್ರಾಣಿಗಳು ವೈರಿಗಳಿಂದ ಬಚಾವಾಗುತ್ತವೆ. ಮತ್ತೊಂದು ತಂತ್ರವೆಂದರೆ ಪ್ರತಿಫಲಕ ಊತಕಗಳಲ್ಲಿ ಹೊಟ್ಟೆಯಿರುವುದು ಇಂತಹ ಊತಕವು ಕನ್ನಡಿಯಂತೆ ವರ್‍ತಿಸಿ, ಗೋಚರವಾಗುವುದಿಲ್ಲ. ಏಕೆಂದರೆ, ಅದು ಪ್ರತಿಫಲಿಸುವ ಬೆಳಕ್ನನು ಅದರ ಹಿಂದಿನ ಬೆಳಕಿನಿಂದ ಗುರುತಿಸಲಾಗುವುದಿಲ್ಲ. ಇದೇ ತತ್ವದ ಆಧಾರದಿಂದ ಹಲವು ಮೀನುಗಳಲ್ಲಿ ಬೆಳ್ಳಿಯಂತೆ, ಕನ್ನಡಿಯಂತೆ ಸ್ಕೇಲ್‌ಗಳು ದೇಹದ ಹೊರಭಾಗದಲ್ಲಿರುತ್ತವೆ. ಪಾರದರ್‍ಶಕ ಪ್ರಾಣಿಗಳ ಚರ್‍ಮವೂ ಒಂದು ಸಮಸ್ಯಾತ್ಮಕ ಅಂಗವಾಗಿರುತ್ತದೆ. ಏಕೆಂದರೆ ಅದು ಕೊಂಚವಾದರೂ ಬೆಳಕನ್ನು ಪ್ರತಿಫಲಿಸುತ್ತದೆ. ವೈರಿಗಳಿಗೆ ಸುಲಭವಾಗಿ ಆಹಾರವಾಗಬಹುದು. ಇದರಿಂದ ಬಚಾವಾಗಲು ಕೆಲವು ಪ್ರಾಣಿಗಳ ದೇಹವು ಸಣ್ಣದಾಗಿರುತ್ತದೆ.

ಅತಿ ಕಡಿಮೆ ಪ್ರತಿಫಲನವು ಮುಖ್ಯವಾಗಿದೆ. ಆದರೆ ಅಗೋಚರಕ್ಕೆ ಹೊಂದುವುದಿಲ್ಲ. ಕಿರಣಗಳು ದೇಹದ ಮುಖಾಂತರ ಹಾಯುವಾಗ ಅವು ಚದುರಲೂಬಾರದು ಅಥವಾ ಅವನ್ನು ಹೀರಿಕೊಂಡಿರಲೂ ಬಾರದು. ಪ್ರಾಣಿಗಳ ಪಾರದರ್‍ಶಕತೆಯಲ್ಲಿ ಚದುರುವಿಕೆಯೂ ಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಕೇವಲ ಕೆಲವೇ ರಾಸಾಯನಿಕ ಅಣುಗಳು ಬೆಳಕು ಹೀರುತ್ತವೆ.

ವಕ್ರೀಕರಣ ಸೂಚಿಯಲ್ಲಿ ಬದಲಾವಣೆ ಯಾದಾಗ ಚದುರುವಿಕೆಯಾಗುತ್ತದೆ. ಬೆಳಕು ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ಚಲುಸಿವಾಗ, ವಕ್ರೀಕರಣ ಸೂಚಿಯು ಅದರ ವೇಗವನ್ನು ಬದಲಿಸುತ್ತದೆ. ಪ್ರಾಣಿಗಳ ಊತಕಗಳು ಹಲವು ವ್ಯತ್ಯಾಸಗಳನ್ನು ಹೊಂದಿದ್ದು (ಜೀವಕೋಶಗಳು, ಫೈಬರ್‌ಗಳು, ಕೋಶಬೀಜ, ನರಕಣ, ಇತ್ಯಾದಿ). ವಕ್ರೀಕರಣದ ಸೂಚಿಯಲ್ಲಿಯ ಬದಲಾವಣೆ ಮತ್ತು ಬೆಳಕು ಚದುರುವಿಕೆಗಳ ನಡುವೆ ಜಟಿಲವಾದ ಸಂಬಂಧವಿದೆ.

ಕಠಿಣವಾದ ಪರಿಸ್ಥಿತಿಗಳಲ್ಲಿಯೂ ವಿಕಾಸದ ಪಥದಲ್ಲಿ ಪಾರದರ್‍ಶಕತೆಯೂ ಅಸಾಧಾರಣದ ಉದಾಹರಣೆಯಾಗಿದೆ. ದೇಹ ಮತ್ತು ಜೀವಕೋಶಗಳ ಅತ್ಯುತ್ತಮ ಬದಲಾವಣೆಗಳಿಂದ ಮೆದು ಪ್ರಾಣಿಗಳು ತೆರೆದ ಮತ್ತು ಅಪಾಯಕವಾದ ವಾತಾವರಣದಲ್ಲಿ ಜೀವನ ಸಾಗಿಸುತ್ತಿವೆ. ಅವುಗಳ ನೈಸರ್‍ಗಿಕ ವಿಕಾಸದ ಪದ್ಧತಿಗಳಿಂದಲೆ ನವೀನ ತಂತ್ರಜ್ಞಾನಗಳಲ್ಲಿ ದೃಕ್ ತಂತುಗಳು (ಫೈಬರ್‍ ಆಪ್ಟಿಕ್ಸ್) ಅಪ್ರತಿಫಲನದ ದ್ಯುತಿಲೇಪನಗಳು ಮತ್ತು ಮನೆಯಲ್ಲಿ ಬಳಿಯುವ ಬಣ್ಣಗಳ ಆವಿಷ್ಕಾರ ನಾಂದಿಯಾಗಿವೆ. ಕಣ್ಪರೆಯ ಸಂಶೋಧನೆಯಲ್ಲಿ ರೋಗ ನಿದಾನದ ಕ್ಷೇತ್ರದಲ್ಲಿ ಹಾಗೂ ಬೆಳಕಿನ ಸಹಾಯದಿಂದ ರೋಗಗಳ ಚಿಕಿತ್ಸೆಯಲ್ಲಿ ಅವುಗಳ ಅಧ್ಯಯನ ಜರೂರಾಗಿದೆ. ಹೀಗೆ ಪಾರದರ್‍ಶಕ ಪ್ರಾಣಿಗಳು ನಿಗೂಢವಾಗಿದ್ದು, ಆಶ್ಚರ್‍ಯಕರವಾದ ಸಂಗತಿಗಳನ್ನು ಸ್ವಲ್ಪ ಸ್ವಲ್ಪವೇ ತಿಳಿಸುತ್ತಾ ಹೋಗುತ್ತವೆ.

ಧ್ರುವೀಕರಣ: ಪರಭಕ್ಷಕಗಳ ರಹಸ್ಯ ಅಸ್ತ್ರ

ವೈರಿಗಳಿಂದ ಬಚಾವಾಗಲು ಕೆಲವು ಜೀವಿಗಳು ಪಾರದರ್‍ಶಕತೆಯಂತಹ ಕಪಟರೂಪವನ್ನು ಪಡೆದಿವೆ. ಸಾಗರಗಳಲ್ಲಿ, ಸೂರ್‍ಯ ಕಿರಣಗಳನ್ನು ಚದುರಿಸಿ, ಧ್ರುವೀಕರಿಸಿದ ಬೆಳಕು ಆಗಿ, ಅದರ ಬೆಳಕಿನ ತರಂಗಗಳು ಅಲ್ಲಾಡುತ್ತಿರುತ್ತವೆ. ಪೊಲಾರೈಡ್ ಕನ್ನಡಕಗಳನ್ನು ಧರಿಸಿದಾಗ ಮಾತ್ರ ಅವನ್ನು ಕಾಣಬಹುದು. ಆದರೆ ಸ್ಕ್ವೀಡ್‌ಗಳಂತಹ ಚಿಪ್ಪು ಪ್ರಾಣಿಗಳು ಇಂತಹ ಬೆಳಕನ್ನು ಕಾಣಬಲ್ಲವು. ಈ ಸಾಮರ್‍ಥ್ಯದಿಂದ ಅವು ಪಾರದರ್‍ಶಕ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಈಚೆಗೆ ವೂಡ್ಸ್‌ಹೋಲ್‌ನ ಸಂಶೋಧನಾ ಸಂಸ್ಥೆಯ ನಾದವ ಶರ್‍ ಮತ್ತು ಗೆಳೆಯರು ಸ್ಕ್ವೀಡ್ ಮೀನುಗಳ ಧ್ರುವೀಕರಣದ ಬೆಳಕು ಅರಿತು ಪಾರದರ್‍ಶಕ ಪ್ರಾಣಿಗಳ ಇರುವನ್ನು ಅರಿಯುತ್ತವೆ ಮತ್ತು ಅದರಿಂದ ಒಂದಕ್ಕೊಂದು ಸಂದೇಶ ವಿನಿಮಯ ಮಾಡಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನುಭವಿ (ಟೈಲರ್‍)
Next post ಅಂಬಿಗನಾಗು ನನಗೆ ಇನ್ನು

ಸಣ್ಣ ಕತೆ

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

 • ಜೋತಿಷ್ಯ

  ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ಕಲಾವಿದ

  "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…