ಕನ್ನಡ ಮಾಧ್ಯಮ : ಸಂವಿಧಾನದ ಸುತ್ತ ವ್ಯಾಖ್ಯಾನದ ಹುತ್ತ

ಕನ್ನಡ ಮಾಧ್ಯಮ : ಸಂವಿಧಾನದ ಸುತ್ತ ವ್ಯಾಖ್ಯಾನದ ಹುತ್ತ

ಅಂತೂ ಹದಿಮೂರು ವರ್ಷಗಳ ದೀರ್ಘ ಗರ್ಭಧಾರಣೆ ನಂತರ ರಾಜ್ಯದ ಉಚ್ಛ ನ್ಯಾಯಾಲಯವು ಕಡೆಗೂ ಕೂಸು ಹಡೆದಿದೆ. ಆದರೆ ಅದು ಕನ್ನಡದ ಕೂಸಲ್ಲ. ಮಾತೃ ಮೂಲ ಮಗುವೂ ಅಲ್ಲ. ಯಾಕೆಂದರೆ ಮಾತೃ ಭಾಷಾ ಮಾಧ್ಯಮಕ್ಕೆ ವಿರುದ್ಧವಾದ ವಿಚಿತ್ರ ವಾದಗಳ ಹೊರೆ ಹೊತ್ತ ‘ನ್ಯಾಯ’ವೊಂದು ಜನ್ಮತಾಳಿದೆ. ಈ ತೀರ್ಪಿನ ಕೆಲಭಾಗಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಅವುಗಳನ್ನು ಗಮನಿಸಿದಾಗ ವಿಚಿತ್ರವಾದಗಳ ವೈಖರಿ ಗೊತ್ತಾಗುತ್ತದೆ. ಇಂಗ್ಲಿಷ್ ಕಲಿಕೆ ಅಪರಾಧವಲ್ಲವೆಂದು ಒತ್ತಿ ಹೇಳುವ ‘ತೀರ್ಪು’ ಕನ್ನಡ ಮಾಧ್ಯಮದ ಅನುಷ್ಠಾನವನ್ನು ಅಪರಾಧವೆಂದು ಪರಿಗಣಿಸಿರುವಂತಿದೆ. ನಾವ್ಯಾರೂ ಇಂಗ್ಲಿಷ್ ಕಲಿಕೆ ಅಪರಾಧವೆಂದು ತಿಳಿದಿಲ್ಲ. ಆದರೆ ಇಂಗ್ಲಿಷ್ ಕಲಿಕೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಕೆ – ಎರಡರಲ್ಲೂ ವ್ಯತ್ಯಾಸವಿದೆ. ಕಡೇ ಪಕ್ಷ ನಾಲ್ಕನೇ ತರಗತಿಯವರೆಗಾದರೂ ಮಕ್ಕಳು ತಂತಮ್ಮ ಮಾತೃ ಭಾಷಾ ಮಾಧ್ಯಮದಲ್ಲಿ ಕಲಿಯಲಿ, ಜೊತೆಗೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಯಲಿ ಎಂದು ಪ್ರತಿಪಾದಿಸುತ್ತ ಬಂದ ನಮ್ಮಂಥವರಿಗೆ ಹೈಕೋರ್ಟ್ – ನ್ಯಾಯಾಧೀಶರ ಇಂಗ್ಲಿಷ್ ಪರ ಪಾಠ ವಿಚಿತ್ರವಾಗಿ ಕಾಣಿಸುತ್ತದೆ. ಇವತ್ತಿನ ಸಂದರ್ಭದಲ್ಲಿ ಸಂಪರ್ಕಕ್ಕಾಗಿ ಇಂಗ್ಲಿಷ್ ಅಗತ್ಯ ಎಂದು ಹೇಳುವ ತೀರ್ಪು ಆ ಕಾರಣದಿಂದ ಇಂಗ್ಲಿಷ್ ಕಲಿಕೆಯೂ ಬೇಕೆಂದು ಹೇಳುವ ಬದಲು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಅಗತ್ಯವನ್ನು ಹೇಳುತ್ತದೆ. ಇವತ್ತಿನ ಜಗತ್ತಿಗೆ ಇಂಗ್ಲಿಷ್ ಬೇಕೆಂದು ಭಾವಿಸುವ ಘನವೆತ್ತ ನ್ಯಾಯಮೂರ್ತಿಗಳು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಕನ್ನಡ ಅಥವಾ ಮಾತೃ ಭಾಷಾ ಮಾಧ್ಯಮವು ಇರಬಹುದೆಂದು ಹೇಳುವ ಮೂಲಕ ಸರ್ಕಾರಿ ಮಕ್ಕಳಿಗೆ ಜಗತ್ತಿನ ಜ್ಞಾನ ಮತ್ತು ಜಗತ್ತಿನ ಸಂಪರ್ಕ ಸಾಧ್ಯತೆಗಳು ಬೇಡ ಎನ್ನುತ್ತಾರೆಯೆ? ಇಂಗ್ಲಿಷ್ ಮಾಧ್ಯಮದ ಪರವಾಗಿರುವಾಗಲೂ ಅಸಮಾನತೆಯ ಮಾತೇಕೆ? ಹೀಗೆಂದ ಕೂಡಲೇ ಇಂಗ್ಲಿಷ್ ಮಾಧ್ಯಮವನ್ನು ಸಾರ್ವತ್ರಿಕಗೊಳಿಸಬೇಕೆಂದು ನಾನು ಹೇಳುತ್ತಿಲ್ಲ. ಜಗತ್ತಿನ ಜ್ಞಾನ ಮತ್ತು ಸಂಪರ್ಕದ ಸಾಧ್ಯತೆಗಳಿಗೆ ಇಂಗ್ಲಿಷನ್ನು ಪ್ರಾಥಮಿಕ ಹಂತದಲ್ಲಿ ಒಂದು ಭಾಷೆಯಾಗಿ ಕಲಿತರೆ ಸಾಕೆಂದು ಹೇಳುತ್ತಿದ್ದೇನೆ. ಜೊತೆಗೆ ಜ್ಞಾನ ಗಳಿಕೆಯ ಸಾಧ್ಯತೆಗಳನ್ನು ಪ್ರಾದೇಶಿಕ ಭಾಷೆಗಳೂ ಹೆಚ್ಚಿಸಿಕೊಳ್ಳಬಹುದು.

ಕನ್ನಡವನ್ನು ಕುರಿತ ನ್ಯಾಯಾಂಗ ಹೋರಾಟಕ್ಕೆ ತನ್ನದೇ ಇತಿಹಾಸವಿದೆ. ಉಚ್ಚ ನ್ಯಾಯಾಲಯವು ೧೯೯೪ರ ಸರ್ಕಾರಿ ಆದೇಶದ ವಿರುದ್ದ ತೀರ್ಪು ನೀಡಿದ್ದು, ಈ ಆದೇಶಕ್ಕೂ ಒಂದು ಇತಿಹಾಸವಿದೆ. ಓದುಗರಿಗಾಗಿ ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ನೀಡಬಯಸುತ್ತೇನೆ.

೧೯೮೨ರಲ್ಲಿ ಸಲ್ಲಿಸಲಾದ ‘ಗೋಕಾಕ್ ವರದಿ’ಯನ್ನು ಆಧರಿಸಿ ಸರ್ಕಾರವು ೨೦-೭-೧೯೮೨ ರಂದು ಆದೇಶವೊಂದನ್ನು ಹೊರಡಿಸಿತು. ೨೦-೭-೧೯೮೨ರ ಇಡಿ ೧೧೩ ಎಸ್.ಒ.ಎಚ್. ೭೯ ಕ್ರಮಾಂಕದ ಈ ಆದೇಶದಲ್ಲಿ ಪ್ರೌಢಶಾಲಾ ಹಂತದಲ್ಲಿ ಕನ್ನಡವೇ ಏಕೈಕ ಪ್ರಥಮ ಭಾಷೆಯೆಂದು ಜಾರಿಗೊಳಿಸಲಾಗಿತ್ತು. ಅಲ್ಲದೆ ಕನ್ನಡದ ಜೊತೆಗೆ ಇತರೆ ಎರಡು ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವುದು, ಕನ್ನಡೇತರ ಶಾಲೆಗಳಲ್ಲಿ ಮೊದಲ ವರ್ಷದಿಂದಲೇ ಕನ್ನಡ ಕಡ್ಡಾಯ ಎಂಬ ಅಂಶಗಳು ಈ ಆದೇಶದಲ್ಲಿದ್ದವು. ಕೆಲವರು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಈ ಆದೇಶವನ್ನು ಪ್ರಶ್ನಿಸಿದರು. ಉಚ್ಚ ನ್ಯಾಯಾಲಯವು ಸಂವಿಧಾನದ ೧೪, ೨೯ (೧) ಮತ್ತು ೩೦(೧)ನೇ ವಿಧಿಗಳನ್ನು ಈ ಆದೇಶವು ಉಲ್ಲಂಘಿಸುತ್ತದೆಯೆಂಬ ಕಾರಣದಿಂದ ಸದರಿ ಸರ್ಕಾರಿ ಆದೇಶವನ್ನು ಅನೂರ್ಜಿತಗೊಳಿಸಿತು. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೆ ಧಕ್ಕೆಯಾಗುತ್ತದೆಯೆಂಬ ಅಂಶ ಇಲ್ಲಿ ಮುಖ್ಯವಾಗಿತ್ತು. ಯಾಕೆಂದರೆ ಕನ್ನಡವೊಂದೇ ಪ್ರಥಮ ಭಾಷೆಯಾದರೆ ಇತರೆ ಮಾತೃಭಾಷೆಯವರು ತಮ್ಮದನ್ನು ಪ್ರಥಮ ಭಾಷೆಯಾಗಿ ಕಲಿಯಲಾಗುತ್ತಿರಲಿಲ್ಲ. ಆದರೂ ಮಾತೃಭಾಷೆಯ ಜೊತೆಗೆ ಇನ್ನೊಂದು ಭಾಷೆಯನ್ನು ಬೋಧಿಸಲು ಒಪ್ಪಿಗೆ ನೀಡಿದ ನ್ಯಾಯಾಲಯವು ಒಟ್ಟು ಮೂರು ಭಾಷೆಗಳಲ್ಲಿ ಒಂದಾಗಿ ಕನ್ನಡ ಕಲಿಕೆಯನ್ನು ಕಡ್ಡಾಯಗೊಳಿಸುವ ಅಧಿಕಾರವನ್ನು ಸರ್ಕಾರಕ್ಕೆ ನೀಡಿತು. ಇದು ಪ್ರೌಢಶಾಲೆಗಳಿಗೆ ಮತ್ತು ಭಾಷಾ ಕಲಿಕೆಗೆ ಸಂಬಂಧಿಸಿದ ತೀರ್ಪಾಗಿದ್ದರೂ ಮಾತೃಭಾಷೆಗೆ ಮತ್ತು ಅಲ್ಪಸಂಖ್ಯಾತರ ಕನ್ನಡ ಕಲಿಕೆಗೆ ಅವಕಾಶ ಕಲ್ಪಿಸಿದ್ದು ಹಾಗೂ ಸರ್ಕಾರಿ ಆದೇಶವನ್ನು ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆ ಎಂದು ವಿಂಗಡಿಸದೆ ಎಲ್ಲಕ್ಕೂ ಅನ್ವಯಿಸಲು ಅವಕಾಶವಾಗಿದ್ದನ್ನು ಇಲ್ಲಿ ಗಮನಿಸಬೇಕು.

ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತಾದರೂ ಮತ್ತೊಂದು ಆದೇಶವನ್ನು ೧೯-೬-೧೯೮೯ ರಂದು ಹೊರಡಿಸಿತು. ಇದರ ಪ್ರಕಾರ
(೧) ೧ ರಿಂದ ೪ನೇ ತರಗತಿಯವರೆಗೆ ಮಾತೃಭಾಷಾ ಮಾಧ್ಯಮ ಕಡ್ಡಾಯ
(೨) ಕನ್ನಡೇತರ ಶಾಲೆಗಳಲ್ಲಿ ೩ನೇ ತರಗತಿಯಿಂದ ಕನ್ನಡವನ್ನು ಎಲ್ಲ ಶಾಲೆಗಳೂ ಐಚ್ಛಿಕವಾಗಿ ಬೋಧಿಸುವುದು
(೩) ಪ್ರೌಢಶಾಲೆಗಳಲ್ಲಿ ಒಂದು ಭಾಷೆಯಾಗಿ ಕನ್ನಡ ಕಡ್ಡಾಯ.
ಇದರ ಜೊತೆಗೆ ಸರ್ಕಾರವು ೧೯೮೭-೮೮ ರಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಬಾರದೆಂದು ತೀರ್ಮಾನಿಸಿತ್ತು. ಈ ಎಲ್ಲ ಅಂಶಗಳನ್ನು ಪ್ರಶ್ನಿಸಿ ಕೆಲವು ಶಿಕ್ಷಣ ಸಂಸ್ಥೆಗಳು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದವು. ಸುಪ್ರೀಂ ಕೋರ್ಟು ೧೯೯೩ರಲ್ಲಿ ಕೊಟ್ಟ ತೀರ್ಪಿನಲ್ಲಿ ಕರ್ನಾಟಕ ಸರ್ಕಾರದ ೧೯-೬-೧೯೮೯ರ ಆದೇಶದ ಸಿಂಧುತ್ವವನ್ನು ಎತ್ತಿ ಹಿಡಿಯಿತು. ಜೊತೆಗೆ ಭಾಷಾ ನೀತಿಯನ್ನು ಹೇಗೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ರಾಜ್ಯಕ್ಕೆ ತಿಳಿದಿದೆ. ಈ ವಿಚಾರದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಬಾರದು’ ಎಂದೂ ಅಭಿಪ್ರಾಯ ಪಟ್ಟಿತು.

ಸುಪ್ರೀಂ ಕೋರ್ಟಿನ ಈ ತೀರ್ಪಿನ ನಂತರ ರಾಜ್ಯ ಸರ್ಕಾರವು ೨೯-೪-೧೯೯೪ರ ಇ.ಡಿ. ೨೮ ಪಿಜಿಸಿ ೯೪ – ಕ್ರಮಾಂಕದ ಹೊಸ ಆದೇಶವನ್ನು ಹೊರಡಿಸಿತು. ಈ ಆದೇಶದ ಪ್ರಕಾರ –
(೧) ೧ ರಿಂದ ೪ನೇ ತರಗತಿಯವರೆಗೆ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಿರುತ್ತದೆ.
(೨) ಕನ್ನಡೇತರ ವಿದ್ಯಾರ್ಥಿಗಳು ತಂತಮ್ಮ ಮಾತೃಭಾಷಾ ಮಾಧ್ಯಮದಲ್ಲಿ ಕಲಿಯುವುದರಿಂದ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಮೂರನೇ ತರಗತಿಯಿಂದ ಐಚ್ಛಿಕವಾಗಿ ಕಲಿಯ ಬಹುದು. ಆದರೆ ಪರೀಕ್ಷೆ ಇಲ್ಲ.
(೩) ೫ನೇ ತರಗತಿಯಿಂದ ಮೂರನೇ ಭಾಷೆಯನ್ನು ಜಾರಿಗೆ ತರಲಾಗುವುದು. ಒಂದು ಮತ್ತು ಎರಡನೇ ಭಾಷೆ ಬಿಟ್ಟು ಮತ್ತೊಂದು ಭಾಷೆಯನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಆದರೆ ಉತ್ತೀರ್ಣರಾಗುವುದು ಕಡ್ಡಾಯವಲ್ಲ (೪) ಪ್ರೌಢ ಶಾಲೆಯಲ್ಲಿ ಮೂರು ಭಾಷೆಗಳ ಕಲಿಕೆ ಮತ್ತು ಉತ್ತೀರ್ಣತೆ ಕಡ್ಡಾಯ
(೫) ೪ನೇ ತರಗತಿಯ ನಂತರ ವಿದ್ಯಾರ್ಥಿಗಳು ಯಾವುದೇ ಭಾಷಾ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಬಹುದು. (೬) ಸಿ.ಬಿ.ಎಸ್.ಇ. ಮತ್ತು ಐ.ಸಿ.ಎಸ್.ಇ. ಶಾಲೆಗಳಿಗೆ ರಾಜ್ಯ ಸರ್ಕಾರವು ನಿರಾಕ್ಷೇಪಣಾ ಪತ್ರವನ್ನು (ಎನ್.ಓ.ಸಿ.) ಕೊಡುವಾಗ ಕೆಲವು ನಿಬಂಧನೆಗಳನ್ನು ವಿಧಿಸುವ ಅಂಶಗಳನ್ನು ಈ ಆದೇಶದಲ್ಲಿ ಸೂಚಿಸಲಾಗಿತ್ತು.

ಅಲ್ಲದೆ ಸರ್ಕಾರದ ಹಿಂದಿನ ಆದೇಶದ ಪ್ರಕಾರ (೧೯೮೯) ಮಾತೃ ಭಾಷಾ ಮಾಧ್ಯಮವನ್ನು ಪೂರ್ವಾನ್ವಯಗೊಳಿಸಬೇಕಾಗಿತ್ತು ಮತ್ತು ೧೯೯೪ರ ಆದೇಶವು ೧ ರಿಂದ ೪ರ ವರೆಗೆ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸಿತ್ತು. ಯಥಾಪ್ರಕಾರ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟುಗಳಲ್ಲಿ ಸರ್ಕಾರದ ಆದೇಶವನ್ನು ಪ್ರಶ್ನಿಸಲಾಯಿತು. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅರ್ಜಿ ಸಂಬಂಧದಲ್ಲಿ – ೧೯೯೯ ರಲ್ಲಿ – ಸುಪ್ರೀಂಕೋರ್ಟು ‘ಈ ಪ್ರಕರಣವೇ ನಿರರ್ಥಕ’ ಎಂದು ಹೇಳಿತು. ಅಲ್ಲಿಗೆ ಸುಪ್ರೀಂಕೋರ್ಟು ೧೯೯೩ ಮತ್ತು ೧೯೯೯ರಲ್ಲಿ ಮಾತೃಭಾಷಾ ಮಾಧ್ಯಮದ ಪರವಾಗಿ ಅಭಿಪ್ರಾಯ ನೀಡಿ ಆದೇಶ ಹೊರಡಿಸಿದಂತಾಗಿದೆ.

ಆದರೂ ೨೯-೪-೧೯೯೪ರ ಆದೇಶವನ್ನು ಪ್ರಶ್ನಿಸಿ ರಾಜ್ಯದ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯ ಪೀಠವು ಸುಪ್ರೀಂಕೋರ್ಟಿನ ಆದೇಶಗಳನ್ನು ಯಾಕೆ ಪರಿಗಣಿಸಿಲ್ಲ ಎಂದು ಪ್ರಶ್ನಿಸಬೇಕಾಗಿದೆ. ನ್ಯಾಯಾಂಗವು ಸಂವಿಧಾನದ ಚೌಕಟ್ಟು ಮತ್ತು ವಿವಿಧ ತೀರ್ಪುಗಳ – ಅದರಲ್ಲೂ ಸುಪ್ರೀಂಕೋರ್ಟಿನ ತೀರ್ಪುಗಳ ಆಶಯಗಳನ್ನು ಗಣನೆಗೆ ತೆಗೆದುಕೊಳ್ಳದೆ ನ್ಯಾಯಾಧೀಶರ ಇಷ್ಟಾನಿಷ್ಟಗಳಿಗನುಗುಣವಾಗಿ ನಿರ್ಣಯ ಕೈಗೊಳ್ಳುವ ಅವಕಾಶಕೊಟ್ಟಿದೆಯೆ? ಸರ್ಕಾರವು ೨೯-೪-೧೯೯೪ರ ಆದೇಶ ಹೊರಡಿಸುವಾಗ ಅದಕ್ಕೆ ಕಾನೂನು ಸಮರದ ಒಂದು ಇತಿಹಾಸವೇ ಇತ್ತೆಂಬುದನ್ನು ನಿರ್ಲಕ್ಷಿಸುವುದು ಸರಿಯೆ ? ಹೋಗಲಿ ಈಗ ತ್ರಿಸದಸ್ಯ ಪೀಠವು ಕೊಟ್ಟಿರುವ ತೀರ್ಪು ನಿಜಕ್ಕೂ ಸಂವಿಧಾನಾತ್ಮಕ ಹಾಗೂ ಸಾಮಾಜಿಕ ನ್ಯಾಯಗಳನ್ನು ಒಳಗೊಂಡಿದೆಯೆ? ಕಡೆಪಕ್ಷ ಎರಡು ನ್ಯಾಯಗಳನ್ನು ಸಮತೋಲನಗೊಳಿಸುವ ದೃಷ್ಟಿಕೋನ ವಾದರೂ ಇದೆಯೆ : ಈ ಪ್ರಶ್ನೆಗಳಿಗೆ ‘ಇಲ್ಲ’ ಎನ್ನುವುದೇ ಉತ್ತರವಾದೀತು.

ಕನ್ನಡ ಅಥವಾ ಮಾತೃಭಾಷಾ ಮಾಧ್ಯಮಕ್ಕೆ ವಿರೋಧವಾಗಿದೆಯೆಂಬ ಒಂದೇ ಕಾರಣ ವಲ್ಲದೆ ಪ್ರಜಾಪ್ರಭುತ್ವದ ಕೆಲವು ಮೂಲತತ್ವಗಳನ್ನು ಈ ತೀರ್ಪು ಉಲ್ಲಂಘಿಸಿದೆಯೆಂಬ ಭಾವನೆ ನನ್ನದಾಗಿದೆ. ನಿಜ; ಪ್ರಾಥಮಿಕ ಹಂತದಲ್ಲಿ ಮಾತೃ ಭಾಷಾ ಮಾಧ್ಯಮವೇ ಸರಿಯೆಂದು ಬಹುಪಾಲು ಶಿಕ್ಷಣ ತಜ್ಞರು ಮತ್ತು ಮನೋವಿಜ್ಞಾನಿಗಳು ಪ್ರತಿಪಾದಿಸಿದ್ದರೂ ಭಿನ್ನಮತ ಹೊಂದಿದವರೂ ಇದ್ದಾರೆ. ಆದರೆ ರಾಜ್ಯದ ಉಚ್ಚ ನ್ಯಾಯಾಲಯವು ೨೯-೪-೧೯೯೪ರ ಸರ್ಕಾರಿ ಆದೇಶಕ್ಕೆ ವಿರುದ್ದವಾಗಿ ೩-೭-೨೦೦೮ ರಂದು ನೀಡಿರುವ ತೀರ್ಪು – ಭಾಷಾ ಮಾಧ್ಯಮವನ್ನೂ ಮೀರಿದ ಕೆಲ ವಿಚಿತ್ರ ಹಾಗೂ ವಿಪರ್ಯಾಸದ ಅಂಶಗಳನ್ನು ಪ್ರತಿಪಾದಿಸಿದೆ.

ಈ ತೀರ್ಪಿಗೆ ಆಧಾರವಾಗಿ ಸಂವಿಧಾನದ ೧೯ (೧) (ಜಿ) ೨೬ ಮತ್ತು ೩೦(೧) – ಈ ವಿಧಿಗಳನ್ನು ಮುಖ್ಯವಾಗಿ ಉಲ್ಲೇಖಿಸಲಾಗಿದೆ. ಹಾಗಾದರೆ ಈ ವಿಧಿಗಳು ವಿದ್ಯಾರ್ಥಿಗಳ ಪೋಷಕರಿಗೆ ಬೋಧನಾ ಮಾಧ್ಯಮದ ಆಯ್ಕೆಯ ಸ್ವಾತಂತ್ರ್ಯವನ್ನು ಅನಾಮತ್ತಾಗಿ ನೀಡುತ್ತವೆಯೆ ಎಂದರೆ ಹಾಗೇನೂ ಇಲ್ಲ. ಈಗ, ಸಂವಿಧಾನದ ಈ ವಿಧಿಗಳು ಏನು ಹೇಳುತ್ತವೆಯೆಂದು ನೋಡೋಣ :

೧೯ (೧) (ಜಿ) ವಿಧಿಯು ‘ಭಾರತದ ನಾಗರೀಕರು ಯಾವುದೇ ಉದ್ಯೋಗ, ವೃತ್ತಿ, ವ್ಯಾಪಾರ ವಹಿವಾಟುಗಳನ್ನು ನಡೆಸುವ ಹಕ್ಕನ್ನು ನೀಡುತ್ತದೆ. ೨೬ನೇ ವಿಧಿಯು ‘ಧಾರ್ಮಿಕ ವ್ಯವಹಾರವನ್ನು ನಿರ್ವಹಿಸುವ ಸ್ವಾತಂತ್ರ್ಯ’ವನ್ನು ಕೊಡುತ್ತದೆ. ೩೦ (೧)ನೇ ವಿಧಿಯ ಪ್ರಕಾರ ‘ಅಲ್ಪಸಂಖ್ಯಾತರು ತಮ್ಮ ಇಚ್ಛೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ, ಆಡಳಿತ ನಡೆಸುವ ಹಕ್ಕನ್ನು’ ಪಡೆದಿದ್ದಾರೆ.

ರಾಜ್ಯದ ಉಚ್ಚ ನ್ಯಾಯಾಲಯವು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸಬಾರದೆಂದು ಆದೇಶ ನೀಡಲು ಸಂವಿಧಾನದ ಈ ವಿಧಿಗಳು ಪೂರಕವಾಗಿವೆಯೆ ಅಥವಾ ಅಧಿಕೃತ ಆಧಾರವಾಗಬಲ್ಲವೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ತುಂಬಾ ಕಷ್ಟ ಪಡಬೇಕಾಗಿಲ್ಲ. ನಿಜ; ಸಂವಿಧಾನದ ವಿವಿಧ ವಿಧಿಗಳನ್ನು ಒಟ್ಟಾರೆ ನೋಡಿ ವ್ಯಾಖ್ಯಾನಿಸುವ ಅಗತ್ಯವೂ ಇರುತ್ತದೆ. ಆದರೆ ತೀರ್ಪೊಂದಕ್ಕೆ ಮೂಲಾಧಾರವಾದ ವಿಧಿಗಳು ಅಸ್ಪಷ್ಟವಾದಾಗ ಇಂತಹ ಅಗತ್ಯ ಬೀಳುತ್ತದೆ. ಇಲ್ಲದಿದ್ದರೆ ಇಲ್ಲ.

ರಾಜ್ಯದ ಹೈಕೋರ್ಟು ಶಿಕ್ಷಣವನ್ನು ಒಂದು ವ್ಯಾಪಾರ ಎಂದು ಒಪ್ಪಿಕೊಂಡು ಆಘಾತಕರ ತೀರ್ಮಾನಗಳತ್ತ ನಡೆದಿರುವುದು ಸ್ಪಷ್ಟವಾಗಿದೆ. ತಾನು ನೀಡಿದ ತೀರ್ಪಿಗೆ ಒಂದು ಆಧಾರವಾಗಿ ೧೯ (೧) (ಜಿ) ವಿಧಿಯನ್ನು ಬಳಸಿಕೊಂಡಿರುವುದು ನನ್ನ ಈ ಮಾತಿಗೆ ಸಮರ್ಥನೆಯಾಗಿದೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವವರು ಸಾಮಾನ್ಯವಾಗಿ ಶಿಕ್ಷಣವನ್ನು ಒಂದು ಸೇವಾಕ್ಷೇತ್ರವೆಂದು ಘೋಷಿಸುತ್ತಾರೆ. ‘ಸರಸ್ವತಿ ಸೇವೆ’ಗೆ ಕಂಕಣಬದ್ಧರಾಗಿರುವ ಆದರ್ಶವನ್ನು ಪ್ರತಿಪಾದಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣವು ‘ಸೇವೆ’ಯಾಗುವ ಬದಲು ಲಾಭದಾಯಕ ವ್ಯಾಪಾರವಾಗಿದೆ, ಶಿಕ್ಷಣ ತಜ್ಞರ ಜಾಗವನ್ನು ಇಂದು ‘ಶಿಕ್ಷಣೋದ್ಯಮಿಗಳು’ ಆಕ್ರಮಿಸಿಕೊಂಡಿದ್ದಾರೆ, – ಎಂದು ನನ್ನಂಥ ಕೆಲವರು ಟೀಕೆ ಮಾಡುತ್ತ ಬಂದಿದ್ದೇವೆ. ಈಗ ರಾಜ್ಯದ ಹೈಕೋರ್ಟು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟ ತೀರ್ಪಿಗೆ, ವ್ಯಾಪಾರ ವಹಿವಾಟಿಗೆ ಸಂಬಂಧಿಸಿದ ೧೯ (೧)(ಜಿ) ವಿಧಿಯನ್ನು ಸಹಾಯಕ್ಕೆ ಪಡೆದು ‘ಸಮಕಾಲೀನ ಸತ್ಯ’ಕ್ಕೆ ಮನ್ನಣೆ ನೀಡಿದೆ. ಮತ್ತು ಶಿಕ್ಷಣ ಕ್ಷೇತ್ರವು ಸೇವಾ ಕ್ಷೇತ್ರವಲ್ಲ, ವೃತ್ತಿ, ಉದ್ಯೋಗ ಅಥವಾ ವ್ಯಾಪಾರ ಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಿದಂತಾಗಿದೆ. ಆದ್ದರಿಂದ ಶಿಕ್ಷಣ ವ್ಯಾಪಾರಿಗಳಿಗೆ ಧಕ್ಕೆಯಾಗಬಾರದೆಂದು ಪ್ರತಿಪಾದಿಸಿದೆ. ಇಷ್ಟಕ್ಕೂ ಈ ವಿಧಿಯನ್ನು ಶಿಕ್ಷಣ ಕ್ಷೇತ್ರದ ವಿಷಯಕ್ಕೆ ಆಧಾರವಾಗಿ ಬಳಸಿದ್ದು ಸಂಗತವೋ ಅಸಂಗತವೊ ಅಸಂಬದ್ಧವೊ ತಜ್ಞರು ಹೇಳಬೇಕು. ಇಲ್ಲದಿದ್ದರೆ ಸಾಮಾನ್ಯರೇ ಈ ಅಸಾಮಾನ್ಯ ತೀರ್ಮಾನದ ಬಗ್ಗೆ ಒಂದು ಅಭಿಪ್ರಾಯಕ್ಕೆ ಬರುತ್ತಾರೆ!

ಇನ್ನು ‘ಧಾರ್ಮಿಕ ವ್ಯವಹಾರವನ್ನು ನಿರ್ವಹಿಸುವ ಸ್ವಾತಂತ್ರ್ಯ’ ನೀಡುವ ೨೬ನೇ ವಿಧಿಗೂ ಮಾತೃಭಾಷಾ ಮಾಧ್ಯಮದ ವಿರೋಧಿ ನಿರ್ಣಯಕ್ಕೂ ಏನು ಸಂಬಂಧವಿದೆ ಎಂಬ ಪ್ರಶ್ನೆ. ಮಾತೃಭಾಷಾ ಮಾಧ್ಯಮವು ಯಾರದೇ ಧಾರ್ಮಿಕ ವ್ಯವಹಾರಗಳಿಗೆ ಅಡ್ಡಿ ಬರುವುದಿಲ್ಲ, ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳಿಗೂ ಧಕ್ಕೆ ತರುವುದಿಲ್ಲ. ೩೦ (೧)ನೇ ವಿಧಿಯ ಪ್ರಕಾರ ಅಲ್ಪಸಂಖ್ಯಾತರು ತಮ್ಮಿಚ್ಛೆಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕಿಗೂ ಮಾತೃಭಾಷಾ ಮಾಧ್ಯಮವು ವಿರೋಧಿಯಾಗುವುದಿಲ್ಲ. ಸಂವಿಧಾನದ ೩೫೦ಎ ಮತ್ತು ೩೫೦ಬಿ – ವಿಧಿಗಳು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆಯಲ್ಲಿ ಕಲಿಯುವ ಹಕ್ಕನ್ನು ನೀಡಿವೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಹಕ್ಕನ್ನು ನೀಡಿಲ್ಲ. ಯಾಕೆಂದರೆ ಆಂಗ್ಲೋ ಇಂಡಿಯನ್ನರನ್ನು ಹೊರತುಪಡಿಸಿ ಬೇರಾವ ಅಲ್ಪಸಂಖ್ಯಾತರಿಗೂ ಇಂಗ್ಲಿಷ್ ಮಾತೃಭಾಷೆಯಲ್ಲ. ಆಂಗ್ಲೊ ಇಂಡಿಯನ್ನರಿಗೆ ಮಾತ್ರವೇ ಇಂಗ್ಲಿಷ್ ಮಾಧ್ಯಮ ಕಡ್ಡಾಯವಾಗಬಹುದು.

ಹೀಗೆ, ೧೯ (೧)(ಜಿ), ೨೬ ಮತ್ತು ೩೦(೧) ಈ ಮೂರು ವಿಧಿಗಳಿಗೂ ಮಾತೃಭಾಷಾ ಮಾಧ್ಯಮವು ಧಕ್ಕೆ ತರುವುದಿಲ್ಲ. ಆದರೆ ಉಚ್ಚ ನ್ಯಾಯಾಲಯದ ಪೂರ್ಣ ಪೀಠಕ್ಕೆ ಇದೆಲ್ಲ ಬೇಕಾಗಿಲ್ಲ. ಅದರ ವಾದವು – ಹೌದು ತೀರ್ಪು ಎನ್ನುವ ಬದಲು ವಾದ ಎಂಬ ಪದವೇ ಸರಿಯಾದೀತು – ಸಂಪೂರ್ಣವಾಗಿ ಖಾಸಗಿಯವರ ಹಕ್ಕುಗಳನ್ನು ರಕ್ಷಿಸುವುದಕ್ಕೆ ಮೀಸಲಾಗಿದೆ. ಹೀಗಾಗಿ, ಮಾತೃಭಾಷಾ ಮಾಧ್ಯಮವನ್ನು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅನ್ವಯಿಸಬಹುದೇ ಹೊರತು ಖಾಸಗಿ, ಅನುದಾನರಹಿತ ಶಾಲೆಗಳಿಗೆ ಅನ್ವಯಿಸಲಾಗದು ಎಂದು ‘ತೀರ್ಪು’ ನೀಡಲಾಗಿದೆ. ಬೋಧನೆಯ ಮಾಧ್ಯಮವು ಪಾಲಕರ ಆಯ್ಕೆ ಎಂದು ಹೇಳಿದ್ದರೂ ಒಟ್ಟಾರೆಯಾಗಿ ಇದು ಖಾಸಗಿ ಶಿಕ್ಷಣೋದ್ಯಮಿಗಳ ಆಯ್ಕೆ ಮತ್ತು ಹಕ್ಕು ಎನ್ನುವ ನಿಲುವು ಸ್ಪಷ್ಟವಾಗಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಹಾಗೂ ಪ್ರಜಾಪ್ರಭುತ್ವದ ಒಂದು ಮುಖ್ಯ ಅಂಗವಾದ ‘ಸರ್ಕಾರ’ದ ನೀತಿಗಳು ಕಾನೂನು – ಕಾಯಿದೆಗಳು ಸರ್ಕಾರಿ ವಲಯಕ್ಕೆ ಮಾತ್ರ, ಖಾಸಗಿ ವಲಯಕ್ಕಲ್ಲ – ಎಂದು ಈ ತೀರ್ಪು ಸ್ಪಷ್ಟಪಡಿಸಿದೆ. ಎಂಥ ವಿಪರ್ಯಾಸ! ಇನ್ನು ಮೇಲೆ ಹೆಲ್ಮಟ್ ಕಡ್ಡಾಯ ಸರ್ಕಾರಿ ನೌಕರರಿಗೆ ಮತ್ತು ಸರ್ಕಾರದಿಂದ ಉಪಕೃತರಾದವರಿಗೆ (ಅನುದಾನಿತರಾದವರಿಗೆ ಮಾತ್ರ, ಖಾಸಗಿಯವರಿಗೆ ಹೆಲ್ಮಟ್ ಹಾಕುವ ಹಾಕದಿರುವ ಸ್ವಾತಂತ್ರ್ಯವಿದೆಯೆಂದು ಸರ್ಕಾರವು ಆದೇಶ ಹೊರಡಿಸಬೇಕು! ಒಂದಂಕಿ ಲಾಟರಿ ಮತ್ತು ಸಾರಾಯಿ ನಿಷೇಧವು ಖಾಸಗಿ ಲಾಟರಿ ಪ್ರಿಯರಿಗೂ ಖಾಸಗಿ ಪಾನಪ್ರಿಯರಿಗೂ ಅನ್ವಯಿಸುವುದಿಲ್ಲವೆಂದು ಹೊಸ ಕಾನೂನು ಮಾಡಬೇಕು! ನಾನು ಹೀಗೆ ಹೇಳಿದರೆ ವಿತಂಡ ವಾದದಂತೆ ಕಾಣಿಸಬಹುದು. ಆದರೆ ಒಟ್ಟು ಕತೆಯ ನೀತಿ-ಖಾಸಗಿಯವರ ಸ್ವಾತಂತ್ರ್ಯ ರಕ್ಷಣೆಯೇ ಮುಖ್ಯವೆಂಬ ಮನೋಧರ್ಮ ಮತ್ತು ಅದೇ ಮುಖ್ಯ ಮೌಲ್ಯವೆಂಬ ಪ್ರತಿಪಾದನೆಗೆ ನ್ಯಾಯಾಂಗ ಮುಂದಾಗಿದೆ.

ನೋಡಿ, ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿಷಯ ಬಂದಾಗ ಈ ದೇಶದಲ್ಲಿ ಏನೆಲ್ಲ ನಡೆಯಿತು! ವೃತ್ತಿ ಶಿಕ್ಷಣದ ಸೀಟು ಹಂಚಿಕೆಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟು ಖಾಸಗಿಯವರಿಗೆ ಹೆಚ್ಚು ಅನುಕೂಲವಾಗುವ ತೀರ್ಪು ನೀಡಿತಲ್ಲ! ಆರ್ಥಿಕ ಉದಾರೀಕರಣದಿಂದ ಈ ಕಾಲಘಟ್ಟವು ಸಂಪೂರ್ಣವಾಗಿ ಶ್ರೀಮಂತರ ಪರವಾಗಿದೆ. ಬಡವರ ಪರವಾಗಿಲ್ಲ. ಮುಕ್ತ ಮಾರುಕಟ್ಟೆಯಲ್ಲಿ ಬಂಡವಾಳಗಾರನೇ ಅಧಿಪತಿ, ಖಾಸಗೀಕರಣವೇ ಮನುಧರ್ಮಶಾಸ್ತ್ರ. ನ್ಯಾಯಾಂಗವೂ ಮುಕ್ತ ಮಾರುಕಟ್ಟೆ ಮನೋವೃತ್ತಿಯಿಂದ ಪ್ರಭಾವಿತವಾಗಿರುವುದಕ್ಕೆ ಹೊಸ ಸೇರ್ಪಡೆಯೆಂದರೆ – ರಾಜ್ಯದ ಉಚ್ಚ ನ್ಯಾಯಾಲಯದ ಮಾತೃ ಭಾಷಾ ಮಾಧ್ಯಮ ವಿರೋಧಿ ವಾದ ಅಥವಾ ತೀರ್ಪು!

೧೯(೧)(ಜಿ) – ವಿಧಿಯನ್ವಯ ಎಲ್ಲ ರೀತಿಯ ವೃತ್ತಿ ವ್ಯಾಪಾರಗಳಿಗೆ ಸ್ವಾತಂತ್ರ್ಯವಿರುವುದು ನಿಜವಾದರೂ ಸರ್ಕಾರಕ್ಕೆ ನಿಯಂತ್ರಣ ಮತ್ತು ನಿಬಂಧನೆಗಳನ್ನು ಹೇರುವ ಅಧಿಕಾರವಿದೆ. ಈ ಅಧಿಕಾರವನ್ನು ೧೯(೬)ನೇ ವಿಧಿಯು ನೀಡುತ್ತದೆ. ಉಚ್ಚ ನ್ಯಾಯಾಲಯವು ಸರ್ಕಾರದ ನಿಯಂತ್ರಣಾಧಿಕಾರವನ್ನು ಒಪ್ಪುತ್ತದೆಯಾದರೂ ‘ಭಾಷಾ ಮಾಧ್ಯಮದ ವಿಷಯದಲ್ಲಿ ನಿರ್ಬಂಧ ಪಡಿಸುವಂತಿಲ್ಲ’ ಎಂದು ಪ್ರತಿಪಾದಿಸಿದೆ. ಹೀಗೆಂದು ಎಲ್ಲಿದೆ? ನಿರ್ಬಂಧ – ನಿಯಂತ್ರಣಗಳು ಸಾಮಾಜಿಕ ಹಿತಕ್ಕನುಗುಣವಾಗಿರಬೇಕೆಂಬ ಆಶಯವಿದೆಯೇ ಹೊರತು ಭಾಷಾ ಮಾಧ್ಯಮವನ್ನು ಹೊರತುಪಡಿಸಿ ಇತರೆ ನಿರ್ಬಂಧಗಳನ್ನು ಹೇರಬಹುದೆಂಬ ಸೂಚನೆಯಾಗಲಿ, ಪರೋಕ್ಷ ಸುಳುಹಾಗಲಿ ಎಲ್ಲೂ ಇಲ್ಲ. ಹಾಗೆ ನೋಡಿದರೆ ಸಂವಿಧಾನದಿಂದ ದತ್ತವಾದ ಅಧಿಕಾರ ಬಳಸಿ ಸರ್ಕಾರವು ‘ರಾಷ್ಟ್ರೀಕರಣ’ ಮಾಡಬಹುದಾಗಿದೆ. ಆದರೆ ಉಚ್ಚ ನ್ಯಾಯಾಲಯ ‘ಖಾಸಗೀ ಕರಣ’ದ ಪರವಾಗಿದೆ. ಅದರಲ್ಲೂ ಇಂಗ್ಲಿಷ್ ಖಾಸಗೀಕರಣ!

ಸಂವಿಧಾನಾತ್ಮಕವಾಗಿಯೇ ರಾಜ್ಯ ಸರ್ಕಾರಗಳು ಶಿಕ್ಷಣ ಕಾಯಿದೆಯನ್ನು ರೂಪಿಸಿ ಅದರಂತೆ ನಡೆಯುವ ಅಧಿಕಾರ ಹೊಂದಿವೆ. ಇದರಲ್ಲಿ ಇರಬಹುದಾದ ಕಾನೂನು ತೊಡಕುಗಳನ್ನು ಅಸಮತೋಲನದ ಅಂಶಗಳನ್ನು ನ್ಯಾಯಾಂಗ ಸರಿಪಡಿಸಬೇಕಾದ್ದು ಸರಿ. ಆದರೆ ನ್ಯಾಯಾಂಗವೇ ‘ಅಸಮಾನತೆ’ಗೆ ಕುಮ್ಮಕ್ಕು ಕೊಟ್ಟರೆ ಏನು ಹೇಳಬೇಕು? ಮಾತೃಭಾಷಾ ಮಾಧ್ಯಮವನ್ನು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಲಾಗದು ಎಂದು ಹೇಳುವ ಮೂಲಕ ಒಂದೇ ವಯಸ್ಸಿನ ಮಕ್ಕಳು ಎರಡು ವಿಭಿನ್ನ ಮಾಧ್ಯಮ ಮತ್ತು ಮಾದರಿಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದನ್ನು ಪ್ರೋತ್ಸಾಹಿಸಿದಂತಾಗಿದೆ. ಬಡ ಮತ್ತು ಗ್ರಾಮೀಣ ಮಕ್ಕಳಿಗೆ ಸರ್ಕಾರಿ ಶಾಲೆ, ಉಳ್ಳವರಿಗೆ ಇಂಗ್ಲಿಷ್ ಖಾಸಗಿ ಶಾಲೆ! ಇದು ಇವತ್ತಿನ ಸಾಮಾಜಿಕ ನ್ಯಾಯ! ಈ ತೀರ್ಪಿನಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬಗ್ಗೆ ಹೇಳಲಾಗಿದೆ ಮತ್ತು ಕನ್ನಡವನ್ನು ಉಳಿಸಿಕೊಳ್ಳುವ ಇತರೆ ಮಾರ್ಗಗಳನ್ನು ಸೂಚಿಸಲಾಗಿದೆ. ೪ನೇ ತರಗತಿಯವರೆಗಾದರೂ ಮಾತೃಭಾಷಾ ಮಾಧ್ಯಮಕ್ಕೆ ಅವಕಾಶ ಕೊಡದೆ ಕನ್ನಡದ ಉಳಿವಿನ ಮಾರ್ಗಗಳನ್ನು ಸೂಚಿಸುವುದು ಒಂದು ವೈಚಿತ್ರ್ಯವೇ ಸರಿ. ಆದರೆ ನ್ಯಾಯಾಲಯದ ಅಧಿಕಾರವನ್ನು ನಾವು ಪ್ರಶ್ನಿಸುವುದು ಸರಿಯಲ್ಲ. ಎಲ್ಲ ಸೂಚನೆಗಳಿಗೂ ಗೌರವ ಕೊಡೋಣ; ತೀರ್ಪನ್ನೂ ಗೌರವದಿಂದ ಕಾಣುತ್ತಲೇ ಗೌರವಪೂರ್ವಕವಾಗಿ ಭಿನ್ನಮತವನ್ನು ಹೇಳೋಣ. ನಿಜ; ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಮುಖ್ಯ. ನನ್ನ ಮೊದಲ ಪ್ರಶ್ನೆ – ‘ಗುಣಮಟ್ಟ’ದ ನಿರ್ದಿಷ್ಟ ವಿವರಣೆ ಏನು ? ಮೂಲ ಸೌಕರ್ಯಗಳಿದ್ದರೆ ಗುಣಮಟ್ಟವೆ? ಉತ್ತಮ ಮಾರ್ಗಗಳ ಪಠ್ಯಗಳು ಮತ್ತು ಸೂಕ್ತ ಬೋಧನೆ ಇದ್ದರೆ ಗುಣಮಟ್ಟವೆ? ಇಂಗ್ಲಿಷ್ ಮಾಧ್ಯಮವಿದ್ದರೆ ಗುಣಮಟ್ಟವೆ? ಯಾವುದು ಗುಣಮಟ್ಟ? ಮೂಲ ಸೌಕರ್ಯಗಳಿಲ್ಲದ ಕೆಲ ಸರ್ಕಾರಿ ಶಾಲೆಗಳಿರುವಂತೆಯೇ ಖಾಸಗಿ ಇಂಗ್ಲಿಷ್ ಶಾಲೆಗಳೂ ಇವೆ. ಪಠ್ಯಗಳಲ್ಲಿ ವ್ಯತ್ಯಾಸವೇನೂ ಇರುವುದಿಲ್ಲವಾದರೂ ಖಾಸಗಿ ಶಾಲೆಗಳು ಹೆಚ್ಚುವರಿ ಪಠ್ಯ ನಿಗದಿ ಮಾಡುತ್ತವೆ. ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಬಾಯಿಪಾಠವನ್ನು ಚನ್ನಾಗಿ ಮಾಡಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲರೂ ಅಲ್ಲದಿದ್ದರೂ ಕೆಲಸ ಕದಿಯುವ ಕೆಲ ಅಧ್ಯಾಪಕರು ಇರುತ್ತಾರೆ. ಆದರೆ ಎಲ್ಲ ಸರ್ಕಾರಿ ಶಾಲೆಗಳೂ ಕೆಟ್ಟದಾಗಿಲ್ಲ. ಸರ್ಕಾರಿ ಶಾಲೆಯ ಅಧ್ಯಾಪಕರೆಲ್ಲ ಕೆಟ್ಟ ಅಧ್ಯಾಪಕರಲ್ಲ. ಈ ನಾಡಿನ ಬಡಮಕ್ಕಳಿಗೆ, ಕೂಲಿ ಕಾರ್ಮಿಕರ ಮಕ್ಕಳಿಗೆ, ಬಡರೈತರ ಮಕ್ಕಳಿಗೆ ಪಾಠ ಮಾಡುವವರು ಸರ್ಕಾರಿ ಶಾಲೆಯ ಅಧ್ಯಾಪಕರು. ಹೆಚ್ಚು ಅಥವಾ ಸಂಪೂರ್ಣ ಶೈಕ್ಷಣಿಕ ಹಿನ್ನೆಲೆಯಿಲ್ಲದ ಕೌಟುಂಬಿಕ ಪರಿಸರದಿಂದ ಬಂದ ಮಕ್ಕಳನ್ನು ಮತ್ತು ಅವರ ಶಾಲೆಗಳನ್ನು ‘ಗುಣಮಟ್ಟ’ದ ಸಿದ್ಧ ಮಾನದಂಡದಿಂದ ಅಳೆಯುವುದು ಹೇಗೆ ಸರಿ? ಇಷ್ಟಕ್ಕೂ ಇಲ್ಲೀವರೆಗಿನ ಬಹು ದೊಡ್ಡ ಸಾಧಕರಲ್ಲಿ ಎಷ್ಟು ಜನ ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆಂದು ಲೆಕ್ಕ ಹಾಕಿ ನೋಡಿ. ಆಗ ಗುಣಮಟ್ಟದ ಇನ್ನೊಂದು ಮಾನದಂಡ ಸಿಗುತ್ತದೆ. ಮಕ್ಕಳ ಸಾಮಾಜಿಕ-ಆರ್ಥಿಕ ಹಿನ್ನೆಲೆ, ಶಾಲೆಯ ಭೌಗೋಳಿಕ ಸ್ಥಾನ – ಇತ್ಯಾದಿಗಳನ್ನು ಗಮನಿಸದೆ ಸರಳವಾಗಿ ಗುಣಮಟ್ಟದ ನಿರ್ಣಯ ಕೊಡಲಾಗದು.

ಒಟ್ಟಿನಲ್ಲಿ ಸಂವಿಧಾನದ ವಿಧಿಗಳನ್ನು ಖಾಸಗೀಕರಣ ಪರವಾಗಿ ವ್ಯಾಖ್ಯಾನಿಸಿಕೊಂಡು ಶೈಕ್ಷಣಿಕ ಅಸಮಾನತೆಗೆ ಅಧಿಕೃತ ಮನ್ನಣೆ ಕೊಡುವ ತೀರ್ಪು ಹೊರಬಂದಿದೆ. ಈ ತೀರ್ಪಿನ ವಿರುದ್ದ ಸುಪ್ರೀಂಕೋರ್ಟಿಗೆ ಹೋಗಬೇಕಾಗಿದೆ. ೧೯೯೩ ಮತ್ತು ೧೯೯೯ರಲ್ಲಿ ಸುಪ್ರೀಂ ಕೋರ್ಟು ಪ್ರಾಥಮಿಕ ಶಿಕ್ಷಣದಲ್ಲಿ ಮಾತೃ ಭಾಷಾ ಮಾಧ್ಯಮವನ್ನು ಪುರಸ್ಕರಿಸಿದಂತೆ ಮತ್ತೊಮ್ಮೆ ಪುರಸ್ಕರಿಸುತ್ತದೆಯೆಂದು ನಂಬಿ ಕಾನೂನು ಸಮರಕ್ಕೆ ಸಿದ್ಧವಾಗಬೇಕಾಗಿದೆ. ಜೊತೆಗೆ ಸಾಮಾಜಿಕ ಆರ್ಥಿಕ ತಾತ್ವಿಕತೆಯನ್ನು ಒಳಗೊಂಡಂತೆ ಕನ್ನಡವನ್ನು ಅನ್ನದ ಪ್ರಶ್ನೆಯಾಗಿ ಪರಿಗಣಿಸಿದ ಚಿಂತನೆ ಮತ್ತು ಕ್ರಿಯೆ ಮುಖ್ಯವಾಗಬೇಕು. ಆರ್ಥಿಕ ಉದಾರೀಕರಣವನ್ನು ವಿರೋಧಿಸಬೇಕು.
*****
(ಜೂನ್ ೨೦೦೮)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ಕೆಂದುಟಿಯಿಂದ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೫೩

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys