ರಾವಣಾಂತರಂಗ – ೨೧

ರಾವಣಾಂತರಂಗ – ೨೧

ಆರಿದ ನಂದಾದೀಪ

ಎಂದಿನಂತೆ ನಿರುತ್ಸಾಹದಿಂದ ಎದ್ದು ರಣರಂಗಕ್ಕೆ ಬಂದು “ಮಹಾರಾಜ ನಿಮ್ಮ ಜೇಷ್ಠ ಪುತ್ರರಾದ ಇಂದ್ರಜಿತುವು ನಿಕುಂಬಳಾ ದೇವಿಯ ಅನುಗ್ರಹದಿಂದ ದೊರೆತ ಮಾಯಾರಥದಲ್ಲಿ ಕುಳಿತು ಯಾರಿಗೂ ಕಾಣದಂತೆ ಆಕಾಶದಲ್ಲಿ ಅಡಗಿ ಬಾಣಗಳ ಪ್ರಯೋಗದಿಂದ ಲಕ್ಷಲಕ್ಷ ಕಪಿಸೈನ್ಯವನ್ನು ಸಂಹರಿಸಿ ಹನುಮಂತನ ಹೊರತು ಮಿಕ್ಕ ಕಪಿವೀರರನ್ನೆಲ್ಲಾ ಕೆಡವಿದನು. ಅವರೆಲ್ಲಾ ಅಪಾರವಾದ ರಕ್ತಸ್ರಾವ ಗಾಯಗಳಿಂದ ಮೂರ್ಚಿತರಾದರು. ಸಂಜೆಯವರೆಗೂ ವಾನರಸೈನ್ಯವನ್ನು ಸದೆಬಡಿದು ವಿಜಯಿಯಾಗಿ ಲಂಕೆಗೆ ಬರುತ್ತಿದ್ದಾರೆ” ವಿಜಯದ ಕಹಳೆ ಮೊಳಗುತ್ತಿತ್ತು. ವಂದಿಮಾಗದರು ಜಯಘೋಷ ಕೂಗುತ್ತಿದ್ದಾರೆ. ವೀರಯೋಧನಂತೆ ಗದೆಯನ್ನು ಹೆಗಲ ಮೇಲಿಟ್ಟು ದರ್ಪದಿಂದ ಬರುತ್ತಿದ್ದಾನೆ. ಇಂದ್ರಜಿತ್ತು ಎಷ್ಟಾದರೂ ನನ್ನ ಮಗ, ಇಂದ್ರನನ್ನೇ ಸೋಲಿಸಿ ಬ್ರಹ್ಮದೇವರಿಂದ ಹೆಸರು ಪಡೆದವನಲ್ಲವೇ ಭಲೇ! ಕುಮಾರ ಭಲೇ ನಿನ್ನಿಂದ ನನ್ನ ಮಾನ ಉಳಿಯಿತು ನೀನಿರುವಾಗ ನನಗೆ ಸೋಲು ಎಲ್ಲಿದೆ? ಇಂದ್ರಜಿತುವು ಬಂದು ಪಾದಕ್ಕೆರಿಗಿದಾಗ ಎತ್ತಿ ಬಾಚಿ ತಬ್ಬಿಕೊಂಡೆ. “ವಿಜಯೀಭವ! ಕುಮಾರ! ನಿನಗೆ ಮಂಗಳವಾಗಲಿ ಸದಾ ವಿಜಯಲಕ್ಷ್ಮಿ ನಿನ್ನ ಅಧೀನದಲ್ಲಿರಲಿ, ಮುಂದೆಯೂ ಯುದ್ಧವನ್ನು ನಡೆಸಿಕೊಂಡು ಹೋಗು ರಾಮಲಕ್ಷ್ಮಣರಲ್ಲಿ ಒಬ್ಬರನ್ನಾದರೂ ಜೀವಂತವಾಗಿಯೋ ಶವವಾಗಿಯೋ ಹೊತ್ತುಕೊಂಡು ಬಾ, ಪಿತೃ‌ಋಣವನ್ನು ತೀರಿಸು, ಮಗನೇ ನನಗೀದಿನ ಸಂತೋಷ ಆನಂದ ತಡೆಯಾಗುತ್ತಿಲ್ಲ ಹೋಗು ನಿನ್ನ ತಾಯಿಗೆ ವಿಷಯವನ್ನು ತಿಳಿಸು. ಸಮಾಧಾನ ಹೊಂದುತ್ತಾಳೆ”

“ತಂದೆಯೇ ಒಂದು ಭಿನ್ನಹ! ನಾಳಿನಯುದ್ಧವನ್ನು ಬೇರೆ ಯಾರಿಗಾದರೂ ವಹಿಸಿ, ಸಾಧ್ಯವಾದರೆ, ನೀವೇ ಮುಂದುವರಿಸಿ ನಾನು ನಿಕುಂಬಳಾ ಯಾಗವನ್ನು ಪೂರ್ತಿಗೊಳಿಸಬೇಕು. ಮರಣವೇ ಬಾರದಂತೆ ವರ ಪಡೆದರೆ ನನ್ನ ಯಾರೂ ಮುಟ್ಟುವುದಿಲ್ಲ. ಈ ರಾವಣೇಶ್ವರನ ಮಗ ಅಜೇಯನೆನಿಸಿಕೊಳ್ಳುತ್ತಾನೆ. ಯಾಗದ ಫಲ ಸಿಗುವಂತೆ ಆಶೀರ್ವದಿಸಿ.”

ಧೈರ್ಯ, ಸಮಯಪ್ರಜ್ಞೆ ಶಿಸ್ತು ಹಿಡಿದ ಕೆಲಸವನ್ನು ಮುಗಿಸುವ ಛಲವುಳ್ಳ ಮನುಷ್ಯನಿಗೆ ಸೋಲು ಇಲ್ಲ. ಸದಾ ವಿಜಯದ ಹಾದಿಯಲ್ಲಿ ನಡೆಯುತ್ತಾನೆ. ಎಚ್ಚರಿಕೆ ಮಗು, ಶತ್ರುಗಳಿಗೆ ವಿಷಯ ತಿಳಿಯದಂತೆ ಜಾಗರೂಕನಾಗಿರು ವಿಷಯ ತಿಳಿದರೆ ನಿನ್ನ ಯಾಗ ಪೂರ್ತಿಯಾಗದಂತೆ ಕೆಡಿಸುತ್ತಾರೆ. ಬಲವಾದ ಕಾವಲು ಹಾಕು, ಒಳ್ಳೆಯದು ಮಗು ನೀನಿನ್ನು ನಡೆ ತಾಯಿಯ ಆಶೀರ್ವಾದ ಪಡೆದು ಯಾಗದ ಸಿದ್ಧತೆ ಮಾಡಿಕೊ”

ಮರುದಿವಸ ಶತ್ರುಗಳ ಗಮನವನ್ನು ಬೇರೆಡೆಗೆ ತಿರುಗಿಸಬೇಕು. ಇಂದ್ರಜಿತುವಿನ ಯಾಗ ಮುಗಿಯುವವರೆಗೆ ಯುದ್ಧವನ್ನು ನಿಲ್ಲಿಸಿ. ಅಲ್ಪವಿರಾಮ ಪಡೆಯಬೇಕೆಂದು ಯೋಚಿಸಿ ಒಂದು ಯುಕ್ತಿಯನ್ನು ನಿಯೋಜಿಸಿ ಅದರಂತೆ ರಣರಂಗಕ್ಕೆ ಬಂದು ಸೀತಾದೇವಿಯ ಕೃತಿಮ ಆಕೃತಿಯನ್ನು ತಂದು ಕಪಿನಾಯಕರಾದ ಆಂಜನೇಯ, ಸುಗ್ರೀವ, ಜಾಂಬವಂತಾದಿಗಳ ಎದುರಿಗೆ ನಿಂತು “ಕಪಿವೀರರೇ ಇಲ್ಲಿ ನೋಡಿ. ಯಾವ ದೇವಿಗೋಸ್ಕರ ಸಮುದ್ರಕ್ಕೆ ಸೇತುವೆ ಕಟ್ಟಿ ಇಷ್ಟು ದೂರ ಬಂದು ಯುದ್ಧ ಮಾಡುತ್ತಿರುವಿರೋ ಅವಳನ್ನೇ ಸಂಹರಿಸುವೆನು ನೋಡಿರಿ” ಎಂದು ಆಕೃತ್ರಿಮ ಮೂರ್ತಿಯನ್ನು ಖಡ್ಗದಿಂದ ಕತ್ತರಿಸಿ, ಚಲ್ಲಿ ಲಂಕೆಯ ಕಡೆ ನಡೆದನು. ಅಲ್ಲಿ ಮುಂದೇನಾಯಿತೆಂದು ಗೂಢಾಚಾರರು ವರದಿ ಮಾಡಿದರು. ದುಃಖಿತರಾದ ಕಪಿವೀರರು ಆ ಮಾಯಾಸೀತೆಯ ದೇಹದ ತುಂಡುಗಳನ್ನು ತಂದು ಶ್ರೀರಾಮನ ಮುಂದಿಟ್ಟರು. ಅದನ್ನು ಕಂಡು ಶ್ರೀರಾಮನು ಪ್ರಜ್ಞಾಶೂನ್ಯನಾದನು. ಲಕ್ಷ್ಮಣನು ಅಣ್ಣನಿಗೆ ಶೈತೋಪಚಾರ ಮಾಡಿ ದುಃಖವನ್ನು ತಹಬಂದಿಗೆ ತರಲು ಯತ್ನಿಸಿದನು. “ತಮ್ಮ ಲಕ್ಷ್ಮಣಾ ಎಂತಹ ಅನರ್ಥವಾಯಿತು. ಇಷ್ಟು ಕಷ್ಟಪಟ್ಟು ಲಂಕೆಗೆ ಬಂದದ್ದು ವ್ಯರ್ಥವಾಯಿತು. ನೀರಿನಲ್ಲಿ ಹೋಮ ಮಾಡಿದಂತಾಯಿತು. ಸೀತೆಯನ್ನು ಕಳೆದುಕೊಂಡು ನಾನು ಹೇಗೆ ಅಯೋಧ್ಯೆಗೆ ಹಿಂದಿರುಗಲಿ ಅವಳ ತಂದೆ ತಾಯಿಗಳಿಗೆ ಹೇಗೆ ಮುಖ ತೋರಿಸಲಿ, ಕೌಸಲ್ಯ ಮಾತೆ “ನನ್ನ ಪ್ರೀತಿಯ ಸೊಸೆ ಜಾನಕಿಯನ್ನು ಎಲ್ಲಿ ಬಿಟ್ಟು ಬಂದೆ. ಏನಾಯಿತು ನನ್ನ ಮುದ್ದಿನ ಸೊಸೆಗೆ” ಎಂದು ಕೇಳಿದರೆ ನಾನು ಏನು ಹೇಳಲಿ? ಅಯೋಧ್ಯೆಯ ಪುರವಾಸಿಗಳಿಗೆ ಏನೆಂದು ಹೇಳಿ ಸಮಾಧಾನಪಡಿಸಲಿ, ಹಾ ಸೀತೆ ನಿನ್ನನ್ನು ರಾವಣ ಕದ್ದೊಯ್ದಾಗ ಸಿಕ್ಕೇ ಸಿಗುತ್ತೀಯೆಂದು ನಂಬಿಕೆಯಿತ್ತು. ಭರವಸೆಯಿತ್ತು. ಈಗ ನೀನೇ ನನ್ನ ಕಣ್ಣ ಮುಂದೆಯೇ ಈ ಸ್ಥಿತಿ! ಶಿವಾ ಶಿವಾ ಈ ಘೋರ ದುರಂತವನ್ನು ಹೇಗೆ ಸಹಿಸಲಿ” ಎಂದು ರಾಮನು ಮತ್ತೆ ಎಚ್ಚರ ತಪ್ಪಿದನು. ಗಳಿಗೆಯವರೆಗೂ ಎಚ್ಚರವೇ ಬರಲಿಲ್ಲ. ಪ್ರೇಮದ ಬೆಂಕಿಯಲ್ಲಿ ಅಂತಃಕರಣವು ಸುಟ್ಟು ಹೋಯಿತು. ಕೆಲಹೊತ್ತು ಅರಿವು ಕೆಲ ಹೊತ್ತು ಮರೆವು. ಹೀಗೆ ಶ್ರೀರಾಮಚಂದ್ರನು ಬ್ರಾಂತಿಯೋಗದಲ್ಲಿದ್ದನು. ಆಗ ಲಕ್ಷ್ಮಣನಿಗೆ ಪಂಚವಟಿಯಲ್ಲಿ ಸೀತೆಯನ್ನು ಕಳೆದುಕೊಂಡು ಪರಿತಪಿಸುವ ಅಡಿಗಡಿಗೂ ನಿಟ್ಟುಸಿರುಬಿಡುತ್ತಾ ಎಲ್ಲೆಂದರಲ್ಲಿ ಕುಳಿತು ಶೋಕಿಸುತ್ತಿದ್ದ ರಾಮನ ನೆನಪಾಯಿತು. ಆಗಲಂತೂ ಲಕ್ಷಣ ಅಣ್ಣನನ್ನು ಸಂತೈಸಲಾಗದೆ ಕಂಗೆಟ್ಟಿದ್ದನು” ಲಕ್ಷ್ಮಣಾ ಸೀತಾದೇವಿಯಿಲ್ಲದೆ ನಾನು ಹೇಗಿರಲಿ? ರವಿಕಿರಣವಿಲ್ಲದೆ ಸೂರ್ಯನಿರುವುದೇ ಕಮಲವಿಲ್ಲದ ಸರೋವರವಿರುವುದೇ ನದಿಯಿಲ್ಲದೆ ಸಮುದ್ರವಿರುವುದೇ? ಸೀತೆಯಲ್ಲಿ ಶ್ರೀರಾಮನಿರುವನೇ “ನೋಡು ಲಕ್ಷಣಾ, ಗಿಡ, ಮರ, ಪೊದರು ಗುಡ್ಡ ಬೆಟ್ಟ ಸಂದುಗಳಲ್ಲಿ ಹುಡುಕಿ ನೋಡು, ನಿನ್ನ ಅತ್ತಿಗೆ ನಮ್ಮನ್ನು ಆಟವಾಡಿಸಲು ಅಡಗಿ ಕುಳಿತಿರಬಹುದು. ಇನ್ನೊಮ್ಮೆ ಪರ್ಣಶಾಲೆಯಲ್ಲಿ ಹುಡುಕು ಕೊಳದ ಹತ್ತಿರ ನೋಡು ನೀರು ತರುತ್ತಿರಬಹುದು. ಹುಡುಕಿದೆಯಾ, ಸಿಕ್ಕಿದಳಾ ಬಾ ಗುಹೆಗಳಲ್ಲಿ ಎಲೆಬಳ್ಳಿಗಳ ಗುಂಪಿನಲ್ಲಿ ನೋಡು, ಮಲ್ಲಿಗೆಯ ಪೊದೆಯ ಬಳಿ ನೋಡು ಅಲ್ಲಿರುವ ಕಲ್ಲುಹಾಸಿನ ಮೇಲೆ ಕುಳಿತು ಮಿಥಿಲೆಯ ಬಗ್ಗೆ ಅಯೋಧ್ಯೆಯ ಬಗ್ಗೆ ಯೋಚಿಸುತ್ತಿರಬಹುದು. ಬಾ ನೋಡೋಣ, ಅಲ್ಲೆಲ್ಲೂ ದೇವಿಯನ್ನು ಕಾಡೆಲ್ಲಾ ಅಲೆದಲೆದು ಸಂಶಯ ಬಂದ ಜಾಗಗಳಲ್ಲಿ ಜಾನಕಿಯನ್ನು ಹುಡುಕಿದ್ದಾಯಿತು. ಮುನಿಗಳ ಆಶ್ರಮಗಳಿಗೆ ಹೋಗಿ ಮುನಿಪತ್ನಿಯರನ್ನು ವಿಚಾರಿಸಿಯಾಯಿತು. ರಾಮನಂತೂ ತರುಲತೆಗಳನ್ನು ಪಶುಪಕ್ಷಿಗಳನ್ನು ಗಿಣಿಗೊರವಂಕಗಳನ್ನು ಅರಳಿದ ತಾವರೆ, ಪುಷ್ಪಗಳನ್ನು ಕಂಡು ನನ್ನ ಸೀತೆ ಇರುವಳೇ ಕಂಡಿರಾ ನನ್ನ ಸೀತೆಯನ್ನು ನೀವು ಕಂಡಿರಾ ನನ್ನ ಜಾನಕಿಯನ್ನು” ಎಂದೆಲ್ಲಾ ಸೀತೆಯನ್ನು ಕೇಳಿ ಶೋಕ ಸಾಗರದಲ್ಲಿ ಮುಳುಗುತ್ತಿದ್ದನು. ಅರಣ್ಯದಲ್ಲಿ ಅನ್ನ ನೀರಿಲ್ಲದೆ ತಿರುಗುತ್ತಾ ಬಳಲುತ್ತಾ ಶ್ರೀರಾಮನು ಸೀತೆಯ ಕೊರಗಿನಲ್ಲಿ ಶ್ರೀರಾಮನು ಕೃಶನಾದನು. ವಿರಹಾಗ್ನಿಯಿಂದ ಅವನ ಅಂಗಗಳಲ್ಲಿ ಬೆಂದು ಸಂತಪ್ತನಾದ ಅಣ್ಣನನ್ನು ಕಂಡು, ಲಕ್ಷ್ಮಣನ ಕಣ್ಣುಗಳಲ್ಲಿ ನೀರು ಬಂದು ಅತಿಶಯವಾದ ದುಃಖದಿಂದ ಹೇಗೆ ಸಮಾಧಾನಿಸಲಿ, ರಾಘವನನ್ನು ಶೈತ್ಯೋಪಚಾರ, ಮಾಡಿದಷ್ಟು ರಾಮನ ಚಿಂತಾಗ್ನಿಯು ಹೆಚ್ಚಾಯಿತು. ಹಾ! ಸೀತೆ ಹಾ! ಜಾನಕಿ! ಎಂದು ಕನವರಿಸಿ ಬಾಯ್ಬಿಡುತ್ತಿದ್ದ ಶ್ರೀರಾಮಚಂದ್ರನು. “ನಾನು ನಾರಾಯಣ, ವಿಷ್ಣುವಿನ ಅವತಾರವೆನ್ನುವುದು ಮರೆತು ಸಾಮಾನ್ಯ ಮನುಷ್ಯರಂತೆ ಶೋಕಸಾಗರದಲ್ಲಿ ಮುಳುಗಿರುವುದನ್ನು ಕಂಡು “ಅಣ್ಣಾ ಸಮಧಾನಿಸು, ಬೆಳಗಾದ ಮೇಲೆ ಅತ್ತಿಗೆಯ ಸುದ್ದಿಯು ಗೊತ್ತಾಗದಿದ್ದರೆ ಮೂರು ಲೋಕಗಳನ್ನು ಸುಟ್ಟು ಬಿಡುವೆನು, ಸ್ವರ್ಗ, ಮೃತ್ಯು, ಪಾತಾಳ, ಮೂರು ಲೋಕಗಳಲ್ಲಿದ್ದರೂ ತಂದೊಪ್ಪಿಸುವೆನು, ಧೈರ್ಯ ತಂದುಕೊಳ್ಳಿ ಏಳಿ ಅತ್ತಿಗೆಯನ್ನು ಹುಡುಕೋಣ, ಇಲ್ಲಿ ಇದ್ದರೆ ಸೀತಾಮಾತೆಯ ನೆಲೆ ತಿಳಿಯುವುದಿಲ್ಲ. ನನ್ನ ಬಾಹುಗಳಲ್ಲಿ ಶಕ್ತಿಯಿದೆ ಉತ್ತಮವಾದ ಬಿಲ್ಲುಬಾಣಗಳಿವೆ. ಮೃತ್ಯುವಿನ ಕುತ್ತಿಗೆಯನ್ನೇ ಕತ್ತರಿಸುವಂತಹ ಖಡ್ಗವಿದೆ. ದೈವಾನುಗ್ರಹವಿದೆ. ಜಗನ್ಮಾತೆಯಾದ ಸೀತಾದೇವಿಯನ್ನು ಹುಡುಕಿಯೇ ತೀರುವೆನು. ನನ್ನ ಶೌರ್ಯದ ಮೇಲೆ ನಿಮಗೆ ನಂಬಿಕೆಯಿಲ್ಲವೇ?” ಲಕ್ಷ್ಮಣನ ಮಾತುಗಳಿಂದ ರಾಮನ ಧೈರ್ಯವು ಹೆಚ್ಚಾಯಿತು. ಜಟಾಯುವಿನ ದರ್ಶನವಾಗಿ ಆತನಿಂದ ಸೀತೆಯ ವೃತ್ತಾಂತವೆಲ್ಲಾ ತಿಳಿಯಿತು. ಸೀತಾಮಾತೆಯನ್ನು ರಾವಣನು ಕದ್ದೊಯ್ದನೆಂದು ಕೇಳಿ ಕಿಡಿಕಿಡಿಯಾದನು. ಶ್ರೀರಾಮನು ರೋಷದಿಂದ ರಾವಣನ ಬಗ್ಗೆ ಕೋಪವನ್ನು ತಾಳಿ ಆದಷ್ಟು ಬೇಗ ದುಷ್ಟನನ್ನು ಸಂಹರಿಸಿ ಸೀತಾಮಾತೆಯನ್ನು ಬಿಡುಗಡೆ ಮಾಡಬೇಕೆಂದು ಜಟಾಯು ತೋರಿದ ದಕ್ಷಿಣ ದಿಕ್ಕಿನತ್ತ ಸಾಗಿದೆವು. ಅಂದು ಅಣ್ಣನನ್ನು ಸಹಜ ಸ್ಥಿತಿಗೆ ತರಬೇಕಾದರೆ ನನ್ನ ಧೈರ್ಯ ಶೌರ್ಯಗಳನ್ನು ಒತ್ತೆಯಿಟ್ಟು ಕಾಪಾಡಿಕೊಂಡೆನು. ಈಗ ಸೀತಾ ಮಾತೆಯು ಮರಣಹೊಂದಿದಳೆಂದು ಧೃತಿಗೆಟ್ಟು, ಮತಿಗೆಟ್ಟು ಮಲಗಿರುವ ಅಣ್ಣನನ್ನು ಹೇಗೆ ಸಂತೈಸಲಿ. ಕಷ್ಟಗಳು ಒಂದರ ಮೇಲೊಂದು ಬರುತ್ತಲೇ ಇವೆ. ಒಂದು ಹೊಡೆತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಇನ್ನೊಂದು ಹೊಡೆತ, ನರಮಾನವನಾಗಿ ಮಾತ್ರ ಹುಟ್ಟಬಾರದು. ಸುಖ ಸಂತೋಷವೆನ್ನುವುದು ಮರೀಚಿಕೆಯಂತೆ. ಅದರ ಹಿಂದೆ ಹೋಗಲು ಪ್ರಯತ್ನಿಸಿ ಹತಾಶರಾಗುವುದು. ಸುಖದುಃಖಗಳಂತೂ ಹಗಲು ರಾತ್ರಿಗಳಂತೆ ಬರುತ್ತಲೇ ಇರುತ್ತವೆ. ಹೋಗುತ್ತಲೇ ಇರುತ್ತವೆ. ಯಾವುದೂ ಶಾಶ್ವತವಿಲ್ಲ. ಆದರೂ ಮನುಷ್ಯನಿಗೆ ಬದುಕಿನ ಮೇಲೆ ಅದೆಷ್ಟು ಪ್ರೀತಿ! ಕಷ್ಟಗಳ ಸರಮಾಲೆಗಳು ಎದುರಾದರೂ ನಗುನಗುತ್ತಲೇ ಇರುತ್ತಾನೆ. ಬದುಕಬೇಕು, ಬದುಕಬೇಕೆಂದು ಸಾವಿನ ಅಂತಿಮಕ್ಷಣದಲ್ಲಿಯೂ ಹಂಬಲಿಸುತ್ತಿರುತ್ತಾನೆ. ಹುಚ್ಚು ಮನುಷ್ಯ ಈ ಜೀವನ ಮೂರೇ ದಿನಗಳ ಸಂತೆ ಎಂದರಿವಾದರೂ ಹೇಗೆಲ್ಲಾ ಒದ್ದಾಟ! ಎಷ್ಟೆಲ್ಲಾ ಆಟೋಟೋಪ! ನನ್ನ ಯೋಚನೆಯ ದಾರಿ ಸಾಗುತ್ತಿತ್ತು ಅಷ್ಟರಲ್ಲಿ ವಿಭೀಷಣ ಬಂದು ಶ್ರೀರಾಮನೇ ಇದು ರಾವಣನ ಕುತಂತ್ರ ನಮ್ಮ ಮನಸ್ಸನ್ನು ಬೇರೆಡೆ ತೊಡಗಿಸಲು ಈ ತಂತ್ರ ಮಾಡಿದ್ದಾನೆ. ಇಂದ್ರಜಿತು ನಿಕುಂಬಳಾಯಾಗವನ್ನು ಪೂರ್ತಿ ಮಾಡಲು ಹವಣಿಸಿದ್ದಾನೆ. ಅವನು ಯಾಗ ಪೂರ್ತಿ ಮಾಡಿದನೆಂದರೆ ಅನಾಹುತಗಳೇ ಆಗುವುವು. “ಪ್ರಭು” ಇಂದ್ರಜಿತುವಿನ ಯಾಗವನ್ನು ಹೇಗಾದರೂ ಕೆಡಿಸಿ ಅವನ ಬಲವು ನಾಶವಾಗುವಂತೆ ಮಾಡಬೇಕು. ಅದು ಅಲ್ಲದೆ ಹದಿನಾಲ್ಕು ವರ್ಷ ಬ್ರಹ್ಮಚರ್ಯ ವ್ರತದಲ್ಲಿದ್ದವರಿಂದಲೇ ಅವನ ಸಾವು ಎಂಬ ವರವಿದೆ. ಹೀಗಾಗಿ ಸೌಮಿತ್ರಿಯೇ ಅವನನ್ನು ಕೊಲ್ಲಬೇಕು. ಇದು ಸೀತಾಮಾತೆಯ ಕೃತಿಮ ಆಕೃತಿ, ನೀವು ಮೋಸ ಹೋಗಿ ಸೀತೆ ಸತ್ತಳೆಂದು ರೋಧಿಸುತ್ತಿರುವಿರಿ, ಸೀತೆ ಸಾಯಲು ಹೇಗೆ ಸಾಧ್ಯ. ಎದ್ದೇಳಿ ಕಾರ್ಯಪ್ರವೃತ್ತರಾಗಿ”

ವಿಷಯಜ್ಞ ವಿಭೀಷಣ ಮಾತಿನಿಂದ ಶ್ರೀರಾಮನಿಗೆ ಹೋದ ಜೀವ ಮರಳಿದಂತಾಗಿ ಲಕ್ಷ್ಮಣ ವಿಭೀಷಣ, ಸುಗ್ರೀವರಿಗೆ ಇಂದ್ರಜಿತುವಿನ ಯಾಗವನ್ನು ನಾಶಮಾಡಬೇಕೆಂದು ಆಜ್ಞೆ ಮಾಡಿದನು. ರಾಮನ ಆಜ್ಞೆ ಬಂದದ್ದೇ ಕಪಿಸೈನ್ಯವು ನಾಲ್ಕು ದಿಕ್ಕಿನಿಂದಲೂ ದೇವಾಲಯವನ್ನು ಮುತ್ತಿ ಅಲ್ಲಿದ್ದ ಕಾವಲಿದ್ದ ರಾಕ್ಷಸರನ್ನೆಲ್ಲಾ ಕೊಂದು ಅರ್ಧದಲ್ಲೇ ನಿಂತು ಹೋಯಿತು. ಇಂದ್ರಜಿತುವು ಕೃದ್ಧನಾಗಿ ಕೋಪಾವಿಷ್ಟನಾಗಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಯುದ್ಧಕ್ಕೆ ಬಂದನು. ಕ್ಷಣಾರ್ಧದಲ್ಲಿಯೇ ಎರಡೂ ಕಡೆಯವರಿಗೆ ಭೀಕರ ಕಾಳಗವಾಯಿತು. ರಕ್ಕಸರು ಬಿಲ್ಲುಬಾಣಗಳಿಂದಲೂ ವಾನರರೂ ಕಲ್ಲು ಗುಂಡುಗಳಿಂದಲೂ ಹೊಡೆದಾಡ ಹತ್ತಿದರು. ಇಂದ್ರಜಿತುವು ಲಕ್ಷ್ಮಣನೂ ಎದುರುಬದುರಾದರು. ಇಂದ್ರಜಿತುವು ಹೊಡೆದ ಬಾಣಗಳಿಗೆ ಲಕ್ಷ್ಮಣನು ಪ್ರತಿ ಅಸ್ತ್ರವನ್ನು ಹೊಡೆಯುತ್ತಿದ್ದನು. ಹೀಗೆ ಪರಸ್ಪರ ಕಾದಾಡುತ್ತಿರಲು ಇಂದ್ರಜಿತುವಿನ ಶಕ್ತಿಯು ಕುಗ್ಗಿತು. ಉತ್ಸಾಹ ಕುಂದಿತು. ತಾನು ಗಳಿಸಿದ್ದ ಪುಣ್ಯವೆಲ್ಲಾ ಖಾಲಿಯಾಗಿ ಸಾವಿನ ಕ್ಷಣ ಹತ್ತಿರವಾಯಿತು. ಆಗ ವಿಭೀಷಣನು ಲಕ್ಷ್ಮಣಾ ಸುಮ್ಮನೆ ಕೆಲಸಕ್ಕೆ ಬಾರದ ಶಸ್ತ್ರಗಳನ್ನು ಬಳಸಿ ಸಮಯ ಹಾಳು ಮಾಡಿಕೊಳ್ಳಬೇಡ ವೈರಿಯಶಕ್ತಿಯು ಕುಂಠಿತವಾಗುತ್ತಿದೆ. ಅನುಮಾನ ಪಡೆದೆ, ಅನುಕಂಪ ತೋರದೆ ದಿವ್ಯಾಸ್ತ್ರವನ್ನು ಹೂಡಿ ಇಂದ್ರಜಿತುವಿನ ಕಥೆ ಮುಗಿಸು” ಎನ್ನಲು ಲಕ್ಷ್ಮಣನು ಬ್ರಹ್ಮಾಸ್ತ್ರವನ್ನು ಮಂತ್ರಿಸಿ ಇಂದ್ರಜಿತುವಿನ ಕೊರಳಿನ ನೇರವಾಗಿ ಗುರಿಯಿಟ್ಟು ಹೊಡೆದನು. ಇಂದ್ರಜಿತುವಿನ ಶಿರಸ್ಸು ಆಕಾಶಕ್ಕೆ ಹಾರಿತು ರಾವಣನ ಮನೆಯ ನಂದಾದೀಪ ಆರಿಹೋಗಿ ಇಡೀ ಲಂಕಾ ನಗರವೇ ಕತ್ತಲಲ್ಲಿ ಮುಳುಗಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬದರಿಕಾಶ್ರಮದಲ್ಲಿ ಒಂದು ಬೆಳಗು
Next post ಚಳಿಗಾಲದಂತಿದ್ದ ನಿನ್ನ ಅಗಲಿಕೆ ಹೇಗೆ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…