ಒಲವೇ… ಭಾಗ – ೨

ಛೇ, ಇಷ್ಟಕೆಲ್ಲ ಆಕಾಶವೇ ತಲೆ ಮೇಲೆ ಬಿದ್ದಂತೆ ಮಾತಾಡಿದರೆ ಹೇಗೆ? ಮನಸ್ಸಿನಲ್ಲಿ ಹುದುಗಿರುವ ಚಿಂತೆ ಅಂತಿಮವಾಗಿ ಚಿತೆವರೆಗೆ ಕೊಂಡೊಯ್ಯುತ್ತದೆಯೇ ವಿನಃ ಒಳ್ಳೆಯ ದಾರಿಗಲ್ಲ. ಮನಸ್ಸಿನಲ್ಲಿ ಚಿಂತೆ ಆವರಿಸಿಕೊಂಡರೆ ಕಾಣುವುದು ಕೇವಲ ಶೂನ್ಯವೇ ಹೊರತು ಒಳ್ಳೆಯ ಹಾದಿಯಂತು ಅಲ್ವೇ ಅಲ್ಲ. ಚಿಂತೆ ದೂರಮಾಡಿ ಜೀವನದಲ್ಲಿ ಹೇಗೆ ಮುನ್ನಡೆಯಬೇಕೆಂದು ಚಿಂತನೆ ಮಾಡು. ಅದು ನಿನ್ನನ್ನ ಉತ್ತಮ ಹಾದಿಯೆಡೆಗೆ ಕೊಂಡೊಯ್ಯುತ್ತದೆ. ಒಂದಲ್ಲ ಹತ್ತಾರು ಬಾರಿ ಆಲೋಚನೆ ಮಾಡು ಒಂದೊಳ್ಳೆಯ ದಾರಿ ಸಿಕ್ಕೇ ಸಿಗುತ್ತೆ. ಓದಿಗೆ ತಕ್ಕ ನೌಕರಿಯೇ ಬೇಕೂಂತ ಯಾಕೆ ಹಟ ಹಿಡ್ಕೊಂಡು ಕೂತಿದ್ದೀಯ? ಬೇರೇನಾದರು ಸ್ವ-ಉದ್ಯೋಗ ಕೈಗೊಳ್ಳಬಹುದಲ್ವ? ಅಥವಾ ಸಣ್ಣಪುಟ್ಟ ಕೆಲಸಕ್ಕಾದರು ಸೇಕೋ ಬಹುದಲ್ವ? ಒಂದು ಸಣ್ಣ ಕೆಲ್ಸ ಸಿಕ್ಕರೂ ಸಾಕು. ನಿನ್ನ ನಿರುದ್ಯೋಗ ಸಮಸ್ಯೆ ದೂರ ಆಗುತ್ತೆ. ಎಲ್ಲದಕ್ಕಿಂತ ಹೆಚ್ಚಾಗಿ ಬೇರೆಯವರ ಬಳಿ ಕೈ ಚಾಚೋದನ್ನ ತಪ್ಪಿಸಬಹುದು. ನಂತರ ಅಲ್ಲಿದ್ದುಕೊಂಡು ಒಳ್ಳೆಯ ನೌಕರಿ ಹುಡುಕುವ ಪ್ರಯತ್ನ ನಡೆಸಬಹುದು ಅಂದ ಅಕ್ಷರ ಅದೇ ಹಾದಿಯಲ್ಲಿ ಸಾಲಾಗಿ ಕುಳಿತು ಭಿಕ್ಷೆ ಬೀಡುತ್ತಿದ್ದ ಭಿಕ್ಷುಕರ ಕಡೆಗೆ ನೋಟ ಬೀರಿದಳು.

ಆಗರ್ಭ ಶ್ರೀಮಂತಿಕೆಯ ಅಕ್ಷರಳಲ್ಲಿ ತುಂಬಾ ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಆ ಹಾದಿಯಲ್ಲಿ ದಿನನಿತ್ಯ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಭಿಕ್ಷುಕರು. ಇನ್ನೊಬ್ಬರ ಬಳಿ ಕೈ ಚಾಚಿ ಹೊಟ್ಟೆ ತುಂಬಿಸಿಕೊಳ್ಳಬೇಕು. ಆದರೂ ಕೂಡ ಅವರಲ್ಲಿ ಉತ್ಸಾಹ ಎಂಬುದು ಒಂದು ದಿನವೂ ಕಳೆಗುಂದುವುದಿಲ್ಲ. ಭಿಕ್ಷೆ ಬೇಡುತ್ತಿರುವವರ ಪೈಕಿ ಹಲವರಿಗೆ ವೃದ್ಧಾಪ್ಯ ಆವರಿಸಿಕೊಂಡಿದೆ. ಬದುಕಿನ ಸಂಧ್ಯಾಕಾಲದಲ್ಲಿ ಎಲ್ಲಾ ನೋವು, ಚಿಂತೆಗಳನ್ನು ಮರೆತು ಮಕ್ಕಳ ಆಶ್ರಯದಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಸಂತೋಷದಿಂದ ಇರಬೇಕಾದ ದಿನಗಳಲ್ಲಿ ಭಿಕ್ಷಾಟನೆಗೆ ಇಳಿದಿದ್ದಾರೆ. ಮಕ್ಕಳಿಂದ ತಿರಸ್ಕಾರಕ್ಕೊಳಗಾದ ಅವರು ಎಂದಿಗೂ ಎದೆಗುಂದಲಿಲ್ಲ. ತಾವಾಯ್ತು ತಮ್ಮ ಪಾಡಾಯ್ತು ಎಂಬಂತೆ ಭಿಕ್ಷೆಬೇಡಿ ಜೀವನ ಸಾಗಿಸುತ್ತಾರೆ. ಜೀವನದ ಬಹುತೇಕ ಎಲ್ಲಾ ಸಿಹಿ-ಕಹಿಗಳನ್ನು ಸವಿದು ಜೀವನದ ಕೊನೆಯ ಘಟ್ಟದಲ್ಲಿರುವ ಆ ಭಿಕ್ಷುಕರಲ್ಲಿಯೇ ಅಷ್ಟೊಂದು ಉತ್ಸಾಹ, ಬದುಕಬೇಕೆಂಬ ಛಲ ಇರುವಾಗ ಬಿಸಿರಕ್ತದ ಯುವಕ ಅಭಿಮನ್ಯುವಿನಲ್ಲಿ ಏನನ್ನಾದರು ಸಾಧಿಸಬೇಕೆಂಬ ಛಲ ಮೂಡುತ್ತಲೇ ಇಲ್ಲ. ಕುಡಿತ ಅವನ ಎಲ್ಲಾ ಧೈರ್ಯ, ಛಲವನ್ನು ಅದಾಗಲೇ ಕಿತ್ತುಕೊಂಡಿತು.

ನೋಡು ಅಭಿಮನ್ಯು, ಆ ಭಿಕ್ಷುಕರಿಗೆ ಎಲ್ಲರೂ ಕರುಣೆ ತೋರಿ ಭಿಕ್ಷೆ ಹಾಕೋದಿಲ್ಲ. ದಿನನಿತ್ಯ ದಾರಿಯಲ್ಲಿ ಹೋಗುವ ನೂರಾರು ಜನರ ಮುಂದೆ ಕೈ ಚಾಚುತ್ತಾರೆ. ಕೆಲವರು ಭಿಕ್ಷೆ ಹಾಕುತ್ತಾರೆ. ಉಳಿದವರು ನೋಡಿ ಹಾಗೆಯೇ ತೆರಳುತ್ತಾರೆ. ಆದರೂ ಕೂಡ ಅವರಲ್ಲಿ ಉತ್ಸಾಹ ಕುಂದುವುದಿಲ್ಲ. ಮತ್ತೊಂದಷ್ಟು ಜನರ ಮುಂದೆ ಕೈ ಚಾಚುತ್ತಾರೆ. ಸಂಜೆಯೊಳಗೆ ಖರ್ಚಿಗೆ ಬೇಕಾಗುವಷ್ಟು ಹಣ ಕ್ರೋಡೀಕರಿಸಿಕೊಳ್ಳುತ್ತಾರೆ. ಒಂದು ಸರಕಾರಿ ಇಲಾಖೆ ಅಥವಾ ಒಂದು ಖಾಸಗಿ ಕಂಪೆನಿಗೆ ಕೆಲಸಕೋರಿ ಹಾಕಿದ ಅರ್ಜಿಗೆ ಮನ್ನಣೆ ದೊರೆತ್ತಿಲ್ಲವೆಂದು ನಿರಾಸೆಯಿಂದ ಕುಳಿತರೆ ಏನೇನು ಪ್ರಯೋಜನವಿಲ್ಲ. ಒಂದಲ್ಲ ಹತ್ತಾರು ಬಾರಿ ಪ್ರಯತ್ನ ಪಟ್ಟೇ ಪಡಬೇಕು. ಆ ಪ್ರಯತ್ನ ಮುಂದುವರೆಸು. ಕೊನೆಗೊಂದು ದಿನ ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಖಂಡಿತ ದೊರೆಯುತ್ತದೆ. ಆ ಭರವಸೆ ನನಗಿದೆ. ನಿನ್ಗೆ ಬೇಕಾದ ಎಲ್ಲಾ ಸಹಕಾರ ನನ್ನಿಂದ ಖಂಡಿತ ದೊರೆಯುತ್ತದೆ. ನಿನ್ಗೆ ಎಷ್ಟು ಬೇಕೋ ಅಷ್ಟು ಹಣಕಾಸಿನ ನೆರವು ನೀಡೋದಕ್ಕೆ ನಾನು ತಯಾರಿದ್ದೇನೆ. ಕೂತು ಆಲೋಚನೆ ಮಾಡು. ಬದುಕು ಹಾಳು ಮಾಡಿಕೊಳ್ಳಬೇಡ ಅಂದ ಅಕ್ಷರ ಅಭಿಮನ್ಯುವಿನ ಉತ್ತರಕ್ಕಾಗಿ ಅವನ ಮೊಗವನ್ನೇ ನೋಡುತ್ತಾ ನಿಂತಳು.

ಅಭಿಮನ್ಯುವಿಗೆ ಆಕೆಯ ಮಾತುಗಳಿಗೆ ಏನು ಉತ್ತರ ಕೊಡಬೇಕೆಂದು ತೋಚದೆ ಮೌನಕ್ಕೆ ಶರಣಾದ. ಯುದ್ಧದಲ್ಲಿ ಸೋತ ಸೈನಿಕ ಶತ್ರುವಿನ ಎದುರು ತಲೆ ಬಾಗಿಸುವ ಹಾಗೆ ತಲೆ ತಗ್ಗಿಸಿ ನಿಂತುಬಿಟ್ಟ. ಯಾರೇ ಹಿತವಚನ ಹೇಳಿದರೂ ಅದನ್ನು ಕಿವಿಗೆ ಹಾಕಿಕೊಳ್ಳದ ಅಭಿಮನ್ಯು ಆಕೆ ಆಡುತ್ತಿದ್ದ ಪ್ರತಿಯೊಂದು ಮಾತನ್ನು ತುಂಬಾ ಶ್ರದ್ಧೆಯಿಂದ ಕೇಳುತ್ತಿದ್ದ. ಆದರೆ, ಆಕೆಯ ಒಂದು ಪ್ರಶ್ನೆಗೂ ಉತ್ತರಿಸುವ ಸ್ಥಿತಿಯಲ್ಲಿ ಮಾತ್ರ ಅವನಿರಲಿಲ್ಲ. ಮನಸ್ಸು ಸಾಕಷ್ಟು ನೊಂದು ಹೋಗಿತ್ತು. ಹೀಗಾಗಿ ಅವನಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆಗಳು ಕೇಳಿದರೂ ಅದು ಪ್ರಶ್ನೆಯಾಗಿಯೇ ಉಳಿಯುತ್ತದೆಯೇ ವಿನಃ ಉತ್ತರ ಅವನ ಬಳಿ ಸುಳಿಯುತ್ತಿರಲಿಲ್ಲ.

ಇಬ್ಬರು ಸಂಭಾಷಣೆಯನ್ನು ಪೂರ್ಣಗೊಳಿಸುವಷ್ಟರಲ್ಲಿ ಬಾನಂಗಳದಲ್ಲಿ ಭಾಸ್ಕರ ಕಣ್ಮರೆಯಾಗಲು ಅಣಿಯಾಗುತ್ತಿದ್ದ. ದಿಗಂತದಿಂದ ಮಳೆಯ ಸಣ್ಣ, ಸಣ್ಣ ಹನಿಗಳು ಭುವಿಗೆ ತೊಟ್ಟಿಕ್ಕುತ್ತಿದ್ದವು. ರಸ್ತೆ ಬದಿಯಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದ ಭಿಕ್ಷುಕರಿಗೆ ಅಕ್ಷರ ಒಂದಷ್ಟು ಬಿಡಿಗಾಸು ನೀಡಿ ಮನೆಯ ಹಾದಿ ಹಿಡಿದಳು.

ಜೀವನದಲ್ಲಿ ಹೀಗೊಂದು ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ ಎಂದು ಅಭಿಮನ್ಯು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಅಭಿಮನ್ಯುವಿಗೆ ಸಹಾಯದ ಹಸ್ತ ಚಾಚಲು ಅಕ್ಷರ ಮುಂದಾಗಿದ್ದಾಳೆ. ಇನ್ನೇನಿದ್ದರೂ ಮುಂದಡಿ ಇಡುವುದೊಂದೇ ಬಾಕಿ. ಮನೆಗೆ ತೆರಳಿದ ನಂತರ ಅಭಿಮನ್ಯು ತುಂಬ ಹೊತ್ತು ಏಕಾಂಗಿಯಾಗಿ ಕುಳಿತು ಮುಂದಿನ ಕಾರ್ಯಯೋಜನೆ ಬಗ್ಗೆ ಆಲೋಚಿಸಿದ. ಯಾವ ಹಾದಿ ತುಳಿದರೆ ಜೀವನದಲ್ಲಿ ಯಶಸ್ಸನ್ನು ಕಾಣಬಹುದೆಂದು ತಡರಾತ್ರಿಯವರೆಗೂ ಆಲೋಚನೆಯಲ್ಲಿ ಮುಳುಗಿದ. ಅವನ ಆಲೋಚನಾ ಲಹರಿಯೊಂದಿಗೆ ಒಂದಷ್ಟು ಸಿಗರೇಟ್‌ಗಳು ಸುಟ್ಟು ಬೂದಿಯಾದವು. ಕೊನೆಗೂ ಒಂದು ತೀರ್ಮಾನಕ್ಕೆ ಬರಲು ಅವನಿಂದ ಸಾಧ್ಯವಾಯಿತು.

ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರಿಗೇನು ಕೊರತೆ ಇಲ್ಲ. ಇಲ್ಲಿನ ನಿಸರ್ಗ ಸೌಂದರ್ಯ ಅಸಂಖ್ಯಾತ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಪ್ರವಾಸಿಗರಿಗೆ ಮಾಹಿತಿ ನೀಡುವ ಪ್ರವಾಸಿ ಮಾಹಿತಿ ಕೇಂದ್ರ ಪ್ರಾರಂಭಿಸಿದರೆ ಒಂದಷ್ಟು ಆದಾಯ ಗಳಿಸಬಹುದೆಂದು ನಿರ್ಧರಿಸಿದ.
ವಿದೇಶಿ ಪ್ರವಾಸಿಗರು ಹೆಚ್ಚಾಗಿ ಚಾರಣ ಬಯಸುತ್ತಾರೆ. ಜಿಲ್ಲೆಯಲ್ಲಿ ಬೆಟ್ಟಗುಡ್ಡಗಳಿಗೇನು ಕೊರತೆ ಇಲ್ಲ. ಜಿಲ್ಲೆಯ ಅತ್ಯಂತ ಎತ್ತರದ ಶಿಖರ ತಡಿಯಂಡಮೋಳ್, ಕೋಟೆಬೆಟ್ಟ, ಬ್ರಹ್ಮಗಿರಿ ಬೆಟ್ಟದಲ್ಲಿ ಚಾರಣ ಕೈಗೊಳ್ಳುವುದೆಂದರೆ ವಿದೇಶಿ ಪ್ರವಾಸಿಗರಿಗೆ ಅಚ್ಚುಮೆಚ್ಚು. ಪ್ರವಾಸಿಗರಿಗೆ ಸೂಕ್ತ ಮಾಹಿತಿ ನೀಡಿ ಅವರನ್ನು ಚಾರಣಕ್ಕೆ ಕೊಂಡೊಯ್ಯಲು ಹಾಗೂ ಉಳಿದ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡಲು ಜಿಲ್ಲೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದ ಒಂದಿಬ್ಬರು ಗೈಡ್‌ಗಳನ್ನು ನೇಮಕ ಮಾಡಿಕೊಂಡರೆ ಸಾಕು. ಉಳಿದಂತೆ ಸೂಕ್ತ ಜಾಗದಲ್ಲೊಂದು ಕಚೇರಿ, ಪ್ರವಾಸಿಗರಿಗೆ ಬೇಕಾಗುವಷ್ಟು ಮಾಹಿತಿ ಕೈಪಿಡಿ ಇದ್ದರೆ ಕೆಲಸ ಬಹುತೇಕ ಮುಗಿದಂತೆ. ಪ್ರವಾಸಿ ಮಾಹಿತಿ ಕೇಂದ್ರ ತೆರೆಯಲು ಬ್ಯಾಂಕಿನಿಂದ ಒಂದಷ್ಟು ಸಾಲ ಸೌಲಭ್ಯ ಪಡೆದುಕೊಂಡರೆ ಇನ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವಂತಿಲ್ಲ. ಅದಕ್ಕೆ ಬೇಕಾದ ಸಹಕಾರವನ್ನು ಅಕ್ಷರಳಿಂದ ಪಡೆಯುವ ತೀರ್ಮಾನಕ್ಕೆ ಬಂದ. ಸರಿಸುಮಾರು ಅರ್ಧ ರಾತ್ರಿವರೆಗೂ ಪ್ರವಾಸಿ ಮಾಹಿತಿ ಕೇಂದ್ರ ತೆರೆಯುವ ಬಗ್ಗೆ ಆಲೋಚನೆಯಲ್ಲ್ಲಿ ಮುಳುಗಿದ ಅಭಿಮನ್ಯು ಮೆಲ್ಲನೆ ನಿದ್ರೆಗೆ ಜಾರಿದ. ಬೆಳಗ್ಗೆ ಅಮ್ಮ ಬಂದು ಎಬ್ಬಿಸುವಾಗಲೇ ಅವನಿಗೆ ಎಚ್ಚರವಾಗಿದ್ದು.

ಅದಾಗಲೇ ಗಂಟೆ ಒಂಭತ್ತು ಬಾರಿಸಿತು. ತರಾತುರಿಯಲ್ಲಿ ತಯಾರಾಗಿ ನೇರ ಅಕ್ಷರಳನ್ನು ಭೇಟಿಯಾಗಲು ಬಿರುಸಿನ ನಡಿಗೆ ಹಾಕಿದ. ಅಭಿಮನ್ಯು ಎಂದಿನಂತೆ ಇರಲಿಲ್ಲ. ಆತನ ಮೊಗದಲ್ಲಿ ಹೊಸದೊಂದು ಜೀವಕಳೆ ಮೊಳಕೆಯೊಡೆಯಲು ಪ್ರಾರಂಭಿಸಿತು. ನಿಂತನೀರಾಗಿದ್ದ ಜೀವನದಲ್ಲಿ ಹೊಸದೊಂದು ಚೈತನ್ಯದ ಚಿಲುಮೆ ಜಿನುಗಲು ಪ್ರಾರಂಭಿಸುತ್ತಿದ್ದಂತೆ ಸಂಭ್ರಮದಲ್ಲಿ ಮನಸ್ಸು ಕುಣಿದಾಡಿತು. ಮನದೊಳಗೆ ಏನೋ ಸಂಭ್ರಮ, ಏನೋ ಸಾಧಿಸಲು ಹೊರಟ ಭಾವ. ಮಾರ್ಗದ ಮಧ್ಯ ಎದುರಾದ ಅಕ್ಷರಳನ್ನು ಕಂಡು ಅಭಿಮನ್ಯುವಿಗೆ ದೇವರ ದರುಶನ ಪಡೆದಂತಾಯಿತು. ರಾತ್ರಿಪೂರ ನಿದ್ರೆಗೆಟ್ಟು ಅಂತಿಮವಾಗಿ ಕೈಗೊಂಡ ನಿರ್ಧಾರವನ್ನೆಲ್ಲ ಆಕೆಯ ಎದುರು ತೆರೆದಿಟ್ಟು ಒಮ್ಮೆ ಸಂತೃಪ್ತಿಯಿಂದ ಉಸಿರಾಡಿದ. ಒಂದೇ ದಿನದಲ್ಲಿ ಗೆಳೆಯನ ಜೀವನದಲ್ಲಿ ಕಂಡು ಬಂದ ಬದಲಾವಣೆ ಕಂಡು ಅಕ್ಷರ ಪುಳಕಿತಳಾದಳು.

ಅಕ್ಷರ, ಕಚೇರಿಗೆ ತೆರಳುವ ತರಾತುರಿಯಲ್ಲಿದ್ದಳು. ಅಭಿಮನ್ಯು, ನಾನು ಸಂಜೆ ಸಿಗ್ತೇನೆ. ರಾಜಾಸೀಟ್‌ನಲ್ಲಿ ಭೇಟಿಯಾಗುವ. ಸಂಜೆ ೫.೩೦ಕ್ಕೆ ರಾಜಾಸೀಟ್‌ಗೆ  ಬಂದ್ಬಿಡು. ಎಂದಷ್ಟೇ ಹೇಳಿ ಆಕೆ ಸ್ಥಳದಿಂದ ನಿರ್ಗಮಿಸಿದಳು. ಆಕೆಯನ್ನು ಭೇಟಿಯಾಗಿ ನೇರ ನಡೆದದ್ದು ಬ್ಯಾಂಕ್‌ನ ಕಡೆಗೆ. ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಪ್ರವಾಸಿ ಮಾಹಿತಿ ಕೇಂದ್ರ ಪ್ರಾರಂಭಿಸುವ ಇಂಗಿತ ತೋಡಿಕೊಂಡು ಸಾಲಸೌಲಭ್ಯ ನೀಡುವಂತೆ ಕೋರಿಕೊಂಡ. ಅಭಿಮನ್ಯುವಿನ ಕೋರಿಕೆಗೆ ಬ್ಯಾಂಕ್ ವ್ಯವಸ್ಥಾಪಕರು ಸಕರಾತ್ಮಕ ವಾಗಿಯೇ ಸ್ಪಂದಿಸಿದರು.

ಅಭಿಮನ್ಯುವಿಗೆ ಸಾಧನೆಯ ಒಂದು ಮೆಟ್ಟಿಲು ಹತ್ತಿ ನಿಂತ ಅನುಭವವಾಯಿತು. ಇನ್ನೇನಿದ್ದರೂ ಸಾಧನೆಯ ಮೆಟ್ಟಿಲುಗಳನ್ನು ಹಂತ ಹಂತವಾಗಿ ಹತ್ತುವುದೊಂದೇ ಬಾಕಿ ಎಂಬ ಸಂಭ್ರಮದಲ್ಲಿ ತೇಲತೊಡಗಿದ. ಜೀವನದಲ್ಲಿ ಅನುಭವಿಸಿದ ಯಾತನೆಗಳಿಗೆ ಮಂಗಳ ಹಾಡುವ ಸಮಯ ಬಂದೊದಗಿದೆ. ಅಕ್ಷರ ತನ್ನ ನೆರವಿಗೆ ಬಾರದೆ ಇದ್ದಿದ್ದರೆ ನಾನೇನಾಗುತ್ತಿದ್ದೆನೋ ಏನೋ? ಆಕೆ ಒಂದು ಒಳ್ಳೆಯ ಮಾರ್ಗ ತೋರಿಸಿಕೊಟ್ಟಿದ್ದಾಳೆ. ಆಕೆಯ ಋಣ ಹೇಗೆ ತೀರಿಸಬೇಕೆಂದೇ ಅರ್ಥವಾಗುತ್ತಿಲ್ಲ್ಲ ಎಂದು ಇದ್ದಕ್ಕಿದ್ದಂತೆ ಭಾವುಕನಾಗಿ ಆಲೋಚಿಸ ತೊಡಗಿದ.

ಅಕ್ಷರಳನ್ನು ರಾಜಾಸೀಟ್‌ನಲ್ಲಿ ಭೇಟಿಯಾಗಲು ಸಂಜೆಯಾಗುವುದನ್ನೇ ಎದುರು ನೋಡುತ್ತಿದ್ದ. ಒಮ್ಮೆ ಮನೆಗೆ ಮತ್ತೊಮ್ಮೆ ಮಡಿಕೇರಿ ನಗರದ ಕಡೆಗೆ ನಡೆದಾಡಲು ಪ್ರಾರಂಭಿಸಿದ. ಆಗಸದಲ್ಲಿ ಆದಿತ್ಯ ಯಾವಾಗ ಬದಿಗೆ ಸರಿಯುತ್ತಾನೋ? ಯಾವಾಗ ಸಂಜೆಯಾಗುತ್ತದೆಯೋ? ಆದಷ್ಟು ಬೇಗ ಸಂಜೆ ಆವರಿಸಿಕೊಳ್ಳಲಿ. ಆಕೆಯನ್ನು ಭೇಟಿಯಾಗಿ ಸಂತೋಷನ್ನೆಲ್ಲ ಹಂಚಿಕೊಳ್ಳಬೇಕೆಂಬ ಕಾತುರ ಮನದಲ್ಲಿ ಕಾಡತೊಡಗಿತು.

ಅಭಿಮನ್ಯು ತುಂಬಾ ಲವಲವಿಕೆಯಿಂದ ಇದ್ದ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಅದೆಷ್ಟು ಬಾರಿ ಮನೆಯಿಂದ ಮಡಿಕೇರಿಗೆ, ಮಡಿಕೇರಿಯಿಂದ ಮನೆಯ ಕಡೆಗೆ ಸಿಟಿ ಬಸ್‌ತರ ನಡೆದನೋ ಬಹುಶಃ ಅವನಿಗೇ ತಿಳಿಯದು. ಅವನು ಸಂಜೆಯನ್ನೇ ಎದುರು ನೋಡುತ್ತಿದ್ದ. ಮಗನ ಮೊಗದಲ್ಲಿ ಉತ್ಸಾಹ ಕಂಡು ವಾತ್ಸಲ್ಯಳಿಗೆ ಆಶ್ಚರ್ಯದ ಜೊತೆಗೆ ಸಂತಸವೂ ಉಂಟಾಯಿತು.

ಏನ್ ಮಗ ಅತ್ತಿಂದಿತ್ತ ಓಡಾಡ್ತಾ ಇದ್ದೀಯ…? ಬೆಳಗ್ಗೆ ಮನೆ ಬಿಟ್ರೆ ರಾತ್ರಿ ಬರೋನು. ಇದೇನು ಇವತ್ತು ಮನೆ ಕಡೆ ಆಗಿಂದಾಗೆ ಬತಾ ಹೋಗ್ತಾ ಇದ್ದೀಯಲ್ಲ? ನಿನ್ನ ಮುಖ ನೋಡಿದ್ರೆ ಬಹಳ ಸಂತೋಷದಲ್ಲಿ ಇರೋ ಹಂಗೆ ಕಾಣ್ತಾ ಇದೆ. ಅದೇನೂಂತ ಹೇಳು! ನಾನು ಸ್ವಲ್ಪ ಕೇಳಿ ಸಂತಸ ಪಡ್ತಿನಿ ಮಗನನ್ನು ಪಕ್ಕದಲ್ಲಿ ಕೂರಿಸಿ ಅಕ್ಕರೆಯಿಂದ ಕೇಳಿದರು ವಾತ್ಸಲ್ಯ.

ಅಭಿಮನ್ಯುವಿಗೆ ಎಲ್ಲವನ್ನು ಹೇಳಿ ಮುಗಿಸುವ ಆತುರವಿರಲಿಲ್ಲ. ಅಷ್ಟಕ್ಕೂ ಅಂದುಕೊಂಡ ಕಾರ್ಯ ಪೂರ್ಣಗೊಂಡಿಲ್ಲ. ಅದರಲ್ಲ್ಲಿ ಯಶಸ್ಸು ಕಾಣಲು ಇನ್ನಷ್ಟು ಹೆಜ್ಜೆಗಳನ್ನೂರಬೇಕೆಂಬ ಅರಿವು ಅವನಲ್ಲಿತ್ತು. ಈಗಲೇ ಎಲ್ಲಾ ಹೇಳಿ ಮತ್ತೆ ಅಂದುಕೊಂಡ ಕಾರ್ಯ ನಡೆಯದೆ ಹೋದರೆ ಅಮ್ಮ ತುಂಬಾ ನೊಂದುಕೊಳ್ಳುತ್ತಾರೆ. ಎಲ್ಲಾ ಮುಗಿದ ನಂತರ ತಿಳಿಸಿದರೆ ಸಾಕೆಂದು ನಿರ್ಧರಿಸಿದ.

ಯಾಕೆ ಮಗ ಹಂಗೆ ಮಂಕಾಗಿ ಕೂತ್ಕೊಂಡಿದ್ದೀಯ? ನಾನು ಆಡಿದ ಮಾತಲ್ಲಿ ಏನಾದ್ರು ತಪ್ಪಾಯ್ತ…!? ಅಭಿಮನ್ಯು ಮೌನಕ್ಕೆ ಮಾರು ಹೋದದ್ದನ್ನು ಕಂಡು ಕಳವಳದಿಂದ ಕೇಳಿದರು.

ಛೆ..ಛೆ…, ಹಾಗೇನಿಲ್ಲಮ್ಮ. ನೀನು ಕೇಳಿದ ಪ್ರಶ್ನೆಗಳಿಗೆಲ್ಲ ಸ್ವಲ್ಪ ದಿನದಲ್ಲಿಯೇ ಉತ್ತರ ಸಿಗುತ್ತೆ.  ಆದ್ರೆ, ಈಗ ಅದನ್ನ ಹೇಳೊಲ್ಲ. ಒಟ್ನಲ್ಲಿ. ಎಲ್ಲಾ ಒಳ್ಳೆಯ ರೀತಿಯಲ್ಲಿಯೇ ನಡಿತಾ ಇದೆ ಅಷ್ಟೆ ಅಂದ ಅಭಿಮನ್ಯು ತನ್ನ ಮುಂದಿನ ಕಾರ್ಯಯೋಜನೆಯನ್ನು ಅಮ್ಮನ ಎದುರು ತೆರೆದಿಡಲು ಬಯಸಲಿಲ್ಲ.

ಅಷ್ಟಿದ್ರೆ ಸಾಕು ಬಿಡು ಮಗ. ಆ ದೇವರು ನಿನ್ನ ಚೆನ್ನಾಗಿಟ್ಟಿಲಿ. ದಿನಾ ಆ ದೇವರಲ್ಲಿ ನಾನು ಬೇಡಿಕೊಳ್ಳೋದು ಅದೊಂದನ್ನೇ. ನಾನು ಹೇಗಾದರು ಹಾಳಾಗೋದ್ರೂ ಚಿಂತೆ ಇಲ್ಲ. ಆದ್ರೆ, ಮಗನಿಗೊಂದು ಒಳ್ಳೆಯ ದಾರಿ ತೋರಿಸಪ್ಪ ತಂದೆ ಅಂತ ಆ ದೇವರಲ್ಲಿ ದಿನಾ ಬೇಡ್ಕೊಳ್ತಾ ಇದ್ದೆ. ಆ ದೇವರಿಗೆ ನಮ್ಮ ಕಷ್ಟ ಏನೂಂತ ಈಗ್ಲಾದ್ರೂ ಅರ್ಥ ಆದಂತೆ ಕಾಣ್ತಾ ಇದೆ. ಅದರ ಪ್ರತಿಫಲ ನಿನ್ನ ಮೊಗದಲ್ಲಿ ಕಾಣ್ತಾ ಇದೆ ಅಂದ ವಾತ್ಸಲ್ಯ ಮಗನೊಂದಿಗೆ ಕೆಲ ಹೊತ್ತು ಸಂತಸದಿಂದ ಕಳೆದರು.

ಅತ್ತಿಂದಿತ್ತ ಓಡಾಡುತ್ತಲೇ ಸಂಜೆಯವರೆಗೆ ಸಮಯ ದೂಡಿದ. ಅಭಿಮನ್ಯು ಕಾತುರದಿಂದ ಕಾಯುತ್ತಿದ್ದ ಸಂಜೆ ಬಂದೇ ಬಿಟ್ಟಿತು. ಮಳೆ ಸ್ವಲ್ಪ ಬಿಡುವು ನೀಡಿದರ ಪರಿಣಾಮ ಆಹ್ಲಾದಕರ ವಾತಾವರಣ ನಿರ್ಮಾಣಗೊಂಡಿತು. ರಾಜಾಸೀಟ್ ಉದ್ಯಾನವನ ದಲ್ಲಿ ಸಂಜೆ ಇಬ್ಬರ ಸಮಾಗಮವಾಯಿತು. ರಾಜಾಸೀಟ್ ಮುಂಭಾಗದಲ್ಲಿ ಅಳವಡಿಸಿರುವ ಕಲ್ಲುಹಾಸಿನ ಬೆಂಚಿಯ ಮೇಲೆ ಇಬ್ಬರು ಆಸೀನರಾದರು. ಒಂದಷ್ಟು ಸಮಯ ಇಬ್ಬರಲ್ಲೂ ಮೌನ. ಮಳೆಗಾಲವಾದ್ದರಿಂದ ರಾಜಾಸೀಟ್‌ನಲ್ಲಿ ಪ್ರವಾಸಿಗರ ಸಂಖ್ಯೆಯೂ ಅಷ್ಟಕಷ್ಟೆ. ಜಿಲ್ಲೆಗೆ ಕೆಲವು ಪ್ರವಾಸಿಗರು ಮಾತ್ರ ಮಾನ್ಸೂನ್ ಪ್ರವಾಸೋದ್ಯಮದ ಸವಿಯನ್ನು ಸವಿಯಲು ಭೇಟಿಕೊಡುತ್ತಾರೆ. ಅದು ಬಿಟ್ಟರೆ ಎಂದಿನಂತೆ ಪ್ರವಾಸಿಗರ ಕಲರವ  ಕೇಳಿಸೋದೇ ಇಲ್ಲ. ಪ್ರವಾಸಿಗರ ಕಲರವವಿಲ್ಲದೆ ರಾಜಾಸೀಟ್ ಉದ್ಯಾನವನವೂ ಕೂಡ ಮೌನಕ್ಕೆ ಮಾರು ಹೋದಂತೆ ಕಾಣಿಸುತಿತ್ತು. ಕೆಲವು ಗಂಟೆಗಳ ಹಿಂದಷ್ಟೇ ಮಳೆ ಸುರಿದು ಹೋದದ್ದರಿಂದ ರಾಜಾಸೀಟ್‌ನ ಸುತ್ತಲೂ ದಟ್ಟ ಮಂಜು ಕವಿದುಕೊಂಡಿತ್ತು. ಮಳೆ ಸುರಿದು ಹೋದ ನಂತರ ಇದ್ದಕ್ಕಿದ್ದಂತೆ ಮಂಜು ಕವಿದುಕೊಳ್ಳುವ ದೃಶ್ಯ ನೋಡುಗರಿಗೆ ದೇವಲೋಕ ಧರೆಗಿಳಿದು ಬಂದ ಅನುಭವ. ಒಂದರ್ಥದಲ್ಲಿ ಮಡಿಕೇರಿ ದೇವರ ಅಪರೂಪದ ಸೃಷ್ಟಿ.

ಮಳೆಗಾಲ ಮುಗಿದ ನಂತರ ರಾಜಾಸೀಟ್‌ನ ವೈಭವ ನೋಡುವುದೇ ಮನಕ್ಕಾನಂದ. ಮರಗಿಡಗಳೆಲ್ಲ ಮತ್ತೆ ಯವ್ವನ ಸಂಪಾದಿಸಿಕೊಂಡು ಕಂಗೊಳಿಸುತ್ತಿರುತ್ತವೆ. ರಾಜಾಸೀಟ್‌ನ ಸುತ್ತಲೂ ಹರಡಿಕೊಂಡಿರುವ ಪಶ್ಚಿಮಘಟ್ಟ ಸಾಲುಗಳ ಮೈಮಾಟ ಬಣ್ಣಿಸಲಸದಳ. ವನದೇವತೆಯೇ ಬಂದು ನೆಲೆನಿಂತ ಅಪೂರ್ವ ತಾಣ. ಬೆಟ್ಟಗುಡ್ಡಗಳ ನಡುವೆ ಹಾವು ಹರಿದಾಡಿದಂತಿರುವ ತಿರುವು ರಸ್ತೆಗಳಲ್ಲಿ ಹಾದು ಹೋಗುವ ವಾಹನಗಳನ್ನು ರಾಜಾಸೀಟ್ ಮೇಲ್ಬಾಗದಲ್ಲಿ ನಿಂತು ನೋಡುವುದೇ ಒಂದು ಸಂತಸದ, ಸಂಭ್ರಮದ ಕ್ಷಣ. ಸಂಜೆಯಾಗುತ್ತಿದ್ದಂತೆ ಕಾಣುವ ಸೂರ್ಯಾಸ್ತಮದ ದೃಶ್ಯ ಕಣ್ಮನ ಸೆಳೆಯುವಂಥದ್ದು. ಆದರೆ, ಮಳೆಗಾಲದಲ್ಲಿ ಸೂರ್ಯ ಮಧ್ಯಾಹ್ನದ ವೇಳೆಯಲ್ಲಿಯೂ ಕಾಣಿಸಿಕೊಳ್ಳುವುದು ಅಪರೂಪ.
ಚಳಿ ಯಾಕೋ ವಿಪರೀತ ಇದೆ ಅಲ್ವ್ವ? ಮೌನ ಮುರಿಯಲು ಯತ್ನಿಸಿದಳು.

ಹೌದು, ಚಳಿಯೇನೋ ವಿಪರೀತವಾಗಿದೆ. ಆದ್ರೂ ಪವಾಗಿಲ್ಲ. ಮಳೆ ಬಿಡುವು ನೀಡಿದೆಯಲ್ಲ, ಅದೊಂದೇ ನೆಮ್ಮದಿ. ಸ್ವಚ್ಛಂದ ಪರಿಸರದಲ್ಲಿ ಕೂತು ಒಂದಷ್ಟು ಹೊತ್ತು ಮಾತಾಡೋದಕ್ಕೆ ವರುಣ ಅವಕಾಶ ಮಾಡ್ಕೊಟ್ಟಿದ್ದಾನೆ. ಅದಕ್ಕೆ ಅವನಿಗೊಂದು ಥ್ಯಾಂಕ್ಸ್ ಹೇಳ್ಲೇ ಬೇಕು. ಅಕ್ಷರ, ಅಂದಹಾಗೆ ಬೆಳಗ್ಗೆ ಬ್ಯಾಂಕ್ ಮ್ಯಾನೇಜರನ್ನ ಕಂಡು ಮಾತಾಡಿ ಬಂದೆ. ಸಾಲ ಕೊಡೋ ಭರವಸೆ ಕೊಟ್ಟಿದ್ದಾರೆ. ಆದ್ರೆ ಸಾಕ್ಷಿಗೆ ಒಬ್ರು ಸರಕಾರಿ ನೌಕರರು ಬೇಕೂಂತ ಕೇಳ್ತಾ ಇದ್ದಾರೆ. ನಿನ್ನಿಂದ ಅದೊಂದು ಉಪಕಾರ ಆಗ್ಬೇಕು ವಿನಯವಾಗಿ ಕೇಳಿಕೊಂಡ.

ಆಕೆಯ ಬಳಿ ಸಹಾಯಕ್ಕಾಗಿ ಕೈಚಾಚುವ ಅಗತ್ಯವೇ ಇರಲಿಲ್ಲ. ಅಭಿಮನ್ಯುವಿನ ಬದುಕನ್ನು ಬದಲಾಯಿಸಲು ಹೊರಟು ನಿಂತವಳಿಗೆ ಸಹಾಯದ ಹಸ್ತ ಚಾಚಲು ಮುಂದಾಗದೆ ಇರಲು ಹೇಗೆ ತಾನೇ ಸಾಧ್ಯ? ಎಷ್ಟೇ ಹಣ ಖರ್ಚಾದರೂ ಚಿಂತೆ ಇಲ್ಲ. ಅಭಿಮನ್ಯುವಿನ ಬದುಕು ಬದಲಾಗಬೇಕು. ಒಂದು ಸುಂದರವಾದ ಬದುಕು ಅವನಿಗಾಗಿ ಎದುರು ನೋಡುತ್ತಿದೆ. ಅಂತಹ ಒಂದು ಸುಂದರ ಬದುಕಿನೆಡೆಗೆ ಅವನನ್ನು ಕರೆದೊಯ್ಯಬೇಕು. ಅದು ತನ್ನ ಪಾಲಿನ ಕರ್ತವ್ಯವಾಗಬೇಕೆಂದು ಆಕೆ ನಿರ್ಧರಿಸಿಯಾಗಿತ್ತು. ಕೆಲವೊಂದು ಒಳ್ಳೆಯ ಕೆಲಸಕ್ಕ್ಕೆ ಕೈ ಹಾಕಿದಾಗ ಬ್ಯಾಂಕ್ ಸಾಲವನ್ನು ಮಾತ್ರ ನಂಬಿಕೊಂಡು ಕುಳಿತರೆ ಆಗೋದಿಲ್ಲ. ಕೆಲವೊಂದು ಸಲ ಕೇಳಿದಷ್ಟು ಸಾಲ ಕೊಡಲು ಬ್ಯಾಂಕ್‌ನವರು ತಯಾರಿರೋದಿಲ್ಲ ಎಂಬ ಸತ್ಯ ಅಕ್ಷರಳಿಗೆ ಗೊತ್ತಿಲ್ಲದ್ದೇನು ಇಲ್ಲ. ಹಾಗಾಗಿ ಬಿಡುವಿನ ವೇಳೆ ಬ್ಯಾಂಕ್ ಕಡೆಗೆ ತೆರಳಿ ಅಭಿಮನ್ಯುವಿಗೆ ಕೊಡುವುದಕೋಸ್ಕರ ಐವತ್ತು ಸಾವಿರ ರೂಪಾಯಿ ಪಡೆದು ಬಂದಿದ್ದಳು.

ಅಕ್ಷರ ತನ್ನ ಮದುವೆಗೋಸ್ಕರ ಒಂದಷ್ಟು ಹಣವನ್ನು ಬ್ಯಾಂಕ್‌ನಲ್ಲಿ ಕೂಡಿಟ್ಟಿದ್ದಳು. ಆಕೆಗೆ ಹಣ ಕೂಡಿಡುವಂತಹ ಪರಿಸ್ಥಿತಿಯೇನು ಇರಲಿಲ್ಲ. ಅಪ್ಪನ ಮುಂದೆ ನಿಂತು ಹಣ ಬೇಕು ಅಂತ ಒಂದು ಮಾತು ಕೇಳಿದರೆ ಲಕ್ಷಗಟ್ಟಲೇ ಮೊತ್ತದ ಚೆಕ್ ಬರೆದು ಕೈಗಿಟ್ಟು ಬಿಡುತ್ತಿದ್ದರು. ಆದರೆ, ಆಕೆಗೆ ಅದು ಇಷ್ಟವಿಲ್ಲದ ವಿಚಾರ. ಮದುವೆಯ ಸಣ್ಣಪುಟ್ಟ ಖರ್ಚು ತಾನು ದುಡಿದ ಹಣದಲ್ಲೇ ಆಗಬೇಕೆಂಬ ಹಟ ಆಕೆಯದ್ದು. ಹಾಗಾಗಿ ದುಡಿದ ಹಣವನ್ನು ಪೋಲು ಮಾಡದೆ ಬ್ಯಾಂಕ್‌ನಲ್ಲಿ ಕೂಡಿಡುತ್ತಿದ್ದಳು. ಆದರೆ, ಆತ್ಮೀಯ ಗೆಳೆಯನಿಗೆ ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ಕಂಡು ಮರುಗಿದಳು. ಕೂಡಿಟ್ಟ ಹಣವನ್ನೆಲ್ಲ ಅವನ ಅಭಿವೃದ್ಧಿಗೆ ವಿನಿಯೋಗಿಸಬೇಕೆಂದು ನಿರ್ಧರಿಸಿದಳು.

ವ್ಯಾನಿಟಿ ಬ್ಯಾಗ್‌ನಿಂದ ಐವತ್ತು ಸಾವಿರದ ನೋಟಿನ ಕಂತೆಯನ್ನು ತೆಗೆದು ಅಭಿಮನ್ಯುವಿನ ಕೈಗಿರಿಸಿ ತಗೋ, ಇದು ನನ್ನ ಸಣ್ಣ ಕಾಣಿಕೆ. ನೀನು ಜೀವನದಲ್ಲಿ ಯಶಸ್ಸು ಕಾಣ್ಬೇಕು ಅಭಿಮನ್ಯು. ಅದನ್ನು ನಾನು ಕಣ್ತುಂಬ ನೋಡ್ಬೇಕು ಅಂದಳು.

ಅಭಿಮನ್ಯು ಆಕೆಯಿಂದ ಹಣ ಪಡೆದುಕೊಳ್ಳಲು ಹಿಂದೇಟು ಹಾಕಿದ. ಪ್ರಾರಂಭದಲ್ಲಿ ಆಕೆಯಿಂದ ಸಾಲ ಪಡೆದುಕೊಳ್ಳಲು ನಿರ್ಧರಿಸಿದ್ದನಾದರೂ ಬ್ಯಾಂಕ್‌ನಲ್ಲಿ ಸಾಲ ಸಿಗುವ ಭರವಸೆ ದೊರೆತ ನಂತರ ಮನಸ್ಸು ಬದಲಾಯಿಸಿದ. ಬ್ಯಾಂಕ್ ಮ್ಯಾನೇಜರ್ ಸಾಲ ಕೊಡುವ ಭರವಸೆ ಕೊಟ್ಟಿದ್ದಾರೆ. ಬ್ಯಾಂಕ್‌ನಿಂದ ಸಾಲ ಸಿಕ್ಕರೆ ಇನ್ನು ಯಾವುದಕ್ಕೂ ತಲೆ ಕೆಡಿಸಿಕೊಳ್ಳು ವಂತಿಲ್ಲ. ಇನ್ನು ಇವಳಿಂದ ಸಾಲ ಪಡೆದುಕೊಂಡರೆ ಆ ಸಾಲವನ್ನು ಹೇಗೆ ತೀರಿಸೋದು? ಒಂದ್ವೇಳೆ ಅನಗತ್ಯವಾಗಿ ಹಣ ಖರ್ಚಾಗಿ ಸಾಲ ಮರುಪಾವತಿಸಲು ಕಷ್ಟವಾದರೆ? ಎಂಬ ವಿಚಾರ ಅವನ ಆತಂಕಕ್ಕೆ ಕಾರಣವಾಯಿತು.

ಅಕ್ಷರ, ಈಗಿನ ಪರಿಸ್ಥಿಯಲ್ಲಿ ನೀನು ನನ್ಗೆ ಸಹಕಾರ ನೀಡೋದೇನೋ ಸರಿ. ಆದ್ರೆ ಎಲ್ಲ ಸಹಕಾರವನ್ನ ಒಬ್ಬರಿಂದಲೇ ನಿರೀಕ್ಷೆ ಮಾಡೋದು ತಪ್ಪು ಅಂತ ನನಗನ್ನಿಸ್ತಾ ಇದೆ. ಬ್ಯಾಂಕ್ ಮ್ಯಾನೇಜರ್ ಸಾಲ ಕೊಡೋದಕ್ಕೆ ಒಪ್ಪಿದ್ದಾರೆ. ನೀನು ಬಂದು ಒಂದು ಸಹಿಮಾಡಿದರೆ ಅಷ್ಟೇ ಸಾಕು. ಅಂದ.

ಅಭಿಮನ್ಯು ಸಂಕೋಚದ ಮನುಷ್ಯ ಎಂಬುದು ಆಕೆಗೂ ಗೊತ್ತು. ಬಲವಂತವಾಗಿ ಅವನ ಕೈಗೆ ಹಣ ಇರಿಸಿ ನೀನು ತಗೊಳ್ಳದೆ ಹೋದರೆ ನಿಂಜೊತೆ ಮಾತೇ ನಿಲ್ಲಿಸಿ ಬಿಡ್ತೇನೆ. ನನ್ಗೇನು ಈಗ ಹಣದ ಅವಶ್ಯಕತೆ ಇಲ್ಲ. ನೀನು  ಹಣ ವಾಪಾಸ್ ಕೊಡದೆ ಹೋದ್ರೂ ಚಿಂತೆ ಇಲ್ಲ. ನನ್ನ ಮದ್ವೆಗೋಸ್ಕರ ಕೂಡಿಟ್ಟ ಹಣ ಇದು. ಸದ್ಯಕಂತೂ ನನ್ಗೆ ಮದ್ವೆಯಾಗೋ ಲಕ್ಷಣ ಕಾಣ್ತಾ ಇಲ್ಲ. ಗೆಳೆಯ ಕೈಗೊಂಡ ಒಳ್ಳೆಯ ಕಾರ್ಯಕ್ಕೆ ಈ ಹಣ ವಿನಿಯೋಗವಾದರೆ ಅದೇ ನನ್ಗೆ ದೊಡ್ಡ ಸಂತೋಷ ಅಂದ ಅಕ್ಷರ ಮುಗುಳ್ನಗೆ ಬೀರಿದಳು.

ಅಭಿಮನ್ಯುವಿಗೆ ಅಕ್ಷರಳಿಂದಲ್ಲದೆ ಬೇರೆ ಯಾರಿಂದ ಸಹಾಯ ನಿರೀಕ್ಷೆ ಮಾಡಲು ಸಾಧ್ಯ? ಇರುವ ಗೆಳೆಯರು ಅಗರ್ಭ ಶ್ರೀಮಂತರಾಗಿದ್ದರೂ ಆ ಶ್ರೀಮಂತಿಕೆಯ ಒಡೆತನ ಅವರ ಅಪ್ಪಂದಿರ ಕೈಯಲ್ಲಿತ್ತು. ಖರ್ಚಿಗೊಂದಷ್ಟು ಹಣ ಮನೆಯಿಂದ ದೊರೆಯುತಿತ್ತೇ ವಿನಃ ದೊಡ್ಡ ಮೊತ್ತದ ಹಣ ಅವರು ಕೂಡ ಕಂಡವರಲ್ಲ.

ನಿನ್ಗೆ ನಾನಲ್ಲದೆ ಬೇರೆ ಯಾರು ಸಹಾಯ ಮಾಡೋದಕ್ಕೆ ಸಾಧ್ಯ ಹೇಳು? ಎಷ್ಟೇ ಆದ್ರೂ ನೀನು ನನ್ನ ಬಾಲ್ಯದ ಗೆಳೆಯ. ನಿನ್ಗೆ ಸಹಾಯ ಮಾಡದೆ ಇನ್ಯಾರಿಗೆ ಸಹಾಯ ಮಾಡ್ಲಿ ಹೇಳು? ಹಣದ ವಿಚಾರದ ಬಗ್ಗೆ ತಲೆ ಕೆಡಿಸ್ಕೋ ಬೇಡ. ನಾನು ಕೊಡ್ತಾ ಇರೋ ಹಣ ಸಾಕಾಗೋದಿಲ್ಲ ಅಂದ್ರೆ ಹೇಳು. ಇನ್ನೊಂದಷ್ಟು ಕೊಡ್ತೇನೆ. ನನ್ನಿಂದ ಹಣ ಪಡೆದುಕೊಳ್ಳೋದಕ್ಕೆ ಸಂಕೋಚ ಪಡ್ಬೇಡ. ಒಳ್ಳೆಯ ಕಾರ್ಯಕ್ಕೆ ಇಳಿದಾಗ ಈ ರೀತಿ ಸಂಕೋಚ ಇಟ್ಕೋಬಾದು. ನಾನು ಆವಾಗ್ಲೇ ಹೇಳ್ದಹಾಗೆ ನನ್ಗಂತೂ ಸದ್ಯಕ್ಕೆ ಮದ್ವೆಯಾಗೋ ಭಾಗ್ಯ ಇಲ್ಲ. ಒಂದೊಳ್ಳೆಯ ಹುಡುಗ ಸಿಕ್ಕಿದ್ಮೇಲೆ ಹಣ ಹಿಂತಿರುಗಿಸಿದರೆ ಸಾಕು. ಅಲ್ಲಿ ತನ್ಕ ಸಾಲ ಮರುಪಾ ವತಿಸುವ ಚಿಂತೆಯೇ ಬೇಡ ಅಂದ ಆಕೆಯ ಮಾತಿನಲ್ಲಿ ಅಭಿಮನ್ಯು ಜೀವನದಲ್ಲಿ ಯಶಸ್ಸು ಕಾಣಬೇಕೆಂಬ ಬಲವಾದ ತುಡಿತ ಎದ್ದುಕಾಣುತಿತ್ತು.

ಈ ಜಗತ್ತಿನಲ್ಲಿ ಹುಡುಗರಿಗೇನು ಕೊರತೆ ಇಲ್ಲ ಬಿಡು. ನಿನ್ನಂತ ಸ್ಫುರದ್ರೂಪಿಗೆ ಒಳ್ಳೆಯ ಹುಡುಗ ಸಿಗೋದಿಲ್ಲ ಅಂದ್ರೆ ಅದು ನಂಬುವಂತ ಮಾತಾ? ಒಂದು ಮಾತು ಹೇಳಿದರೆ ನಾಳೆ ಹುಡುಗರ ದಂಡೇ ಬಂದು ನಿನ್ನ ಮನೆಯ ಮುಂದೆ ಕ್ಯೂ ನಿಲ್ತಾರೆ. ಒಳ್ಳೆ ಹುಡುಗ ಸಿಗೋದಿಲ್ಲ ಅಂತ ಮಾತ್ರ ಚಿಂತೆ ಮಾಡ್ಬೇಡ ಅಂದ ಅಭಿಮನ್ಯು ನಕ್ಕು ಸುಮ್ಮನಾದ.

ಹೌದು, ಆಕೆಯ ಸೌಂದರ್ಯವೇ ಅಂಥದ್ದು. ಎಲ್ಲರ ಕಣ್ಸೆಳೆಯುವ ಮೈಮಾಟ. ಮಡಿಕೇರಿಯ ಆಗರ್ಭ ಶ್ರೀಮಂತ ಕಾಫಿ ಬೆಳೆಗಾರ ರಾಜಶೇಖರ್ ಅವರ ಮುದ್ದಿನ ಮಗಳು. ತಾಯಿ ಲೀಲಾವತಿ ಒಂದಷ್ಟು ಸಿಡುಕು ಬುದ್ಧಿಯವಳು. ಆದರೆ, ಮಗಳ ಮೇಲೆ ಆಕೆಗೆ ಮನದೊಳಗೆ ಎಲ್ಲಿಲ್ಲದ ಅಕ್ಕರೆ, ಜೊತೆಗೊಂದಷ್ಟು ಗೌರವ ಭಾವನೆ. ರಾಜಶೇಖರ್ ಮಗಳ ಯಾವುದೇ ಮಾತಿಗೂ ಮೀರುವವರಲ್ಲ. ಅವರಿಗೆ ಮಗಳೆಂದರೆ ಪ್ರಾಣ. ರಾಜಶೇಖರ್ ಮಗಳ ಮೇಲೆ ಎಲ್ಲಿಲ್ಲದ ಅಕ್ಕರೆ ತೋರುವುದನ್ನು ಕಂಡು ಲೀಲಾವತಿ ಒಮೊಮ್ಮೆ ಆತಂಕಕ್ಕೆ ಒಳಗಾಗಿದ್ದೂ ಉಂಟು. ಅತಿಯಾದ ಅಕ್ಕರೆ ಆಕೆಯನ್ನು ಎಲ್ಲಿ ಹಾದಿ ತಪ್ಪುವಂತೆ ಮಾಡಿ ಬಿಡುತ್ತದೆಯೋ ಎಂಬ ಭಯ ಆಕೆಗೆ. ಹೀಗಾಗಿ ಮಗಳ ಮೇಲೆ ಅಕ್ಕರೆ ಇದ್ದರೂ ಅದನ್ನು ತೋರ್ಪಡಿಸದೆ ಒಂದಷ್ಟು ಸಿಡುಕುತ್ತಲೇ ಇರುತ್ತಾರೆ.

ಅಕ್ಷರ ಮನೆಯಿಂದ ಪ್ರತಿದಿನ ಹೊರಡುವುದಕ್ಕಿಂತ ಮುಂಚೆ ಲೀಲಾವತಿ ಅಕ್ಕರೆಯಿಂದ ಮಗಳ ಹಣೆಗೊಂದು ತಿಲಕವಿಟ್ಟು ಕಳುಹಿಸಲು ಮರೆಯುತ್ತಿರಲಿಲ್ಲ. ಆಕೆಗೆ ತಾಯಿ ತಿಲಕವಿಟ್ಟು ಹಣೆಗೊಂದು ಸಿಹಿಮುತ್ತು ನೀಡಿ ಕಳುಹಿಸದಿದ್ದರೆ ಸಮಾಧಾನ ವಾಗುತ್ತಿರಲಿಲ್ಲ. ಆಕೆಗೆ ಅಣ್ಣ ಪ್ರೀತಮ್‌ನಿಂದ ಪ್ರೀತಿ ದೊರೆತ್ತದ್ದು ಅಷ್ಟಕಷ್ಟೆ. ಆಕೆಯನ್ನು ಎಂದಿಗೂ ಅಕ್ಕರೆಯಿಂದ ಕಂಡವನಲ್ಲ. ವಿದ್ಯಾಭ್ಯಾಸ ಮುಗಿದ ಬಳಿಕ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡು ಅಲ್ಲಿಯೇ ನೆಲೆ ನಿಂತುಬಿಟ್ಟ. ಹೀಗಾಗಿ ಮನೆಯಲ್ಲಿ ಅಕ್ಷರಳಿಗೆ ಎಲ್ಲಿಲ್ಲದ ಪ್ರೀತಿ, ವಾತ್ಸಲ್ಯ ದೊರೆಯುತಿತ್ತು. ಅಕ್ಷರ ಸೌಂದರ್ಯದ ಖನಿಯಾದರೂ ಅಹಂ ಎಂಬುದು ಆಕೆಯ ಬಳಿ ಮೊದಲಿನಿಂದಲೂ ಸುಳಿಯಲೇ ಇಲ್ಲ. ನಕ್ಕರೆ ಗುಳಿ ಬೀಳುವ ಕೆನ್ನೆ. ಕೋಳಿ ಬಾಲದಂತಿರುವ ಸಣ್ಣನೆಯ ಜುಟ್ಟು, ವಿಶೇಷವಾಗಿ ಆಕೆಯ ಕಣ್ಗಳಲ್ಲಿರುವ ಮುಗ್ಧತೆ ಎಲ್ಲರನ್ನು ಸೆಳೆಯುತಿತ್ತು. ಆಕೆಯ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ. ಒಮ್ಮೆ ನೋಡಿದರೆ ಸಾಕು ಆಕೆಯ ಸೌಂದರ್ಯಕ್ಕೆ ಮನಸೋಲಲೇ ಬೇಕು. ಅಂತಹ ಒಂದು ಅಪೂರ್ವ ಸೌಂದರ್ಯದ ಖನಿಯಾದ ಅಕ್ಷರಳಿಗೆ ಹುಡುಗ ಸಿಗೋದಿಲ್ಲ ಎಂಬ ಮಾತಿಗೆ ಅರ್ಥವೇ ಇಲ್ಲ. ಅವಳ ಮಾತು ಕೇಳಿಸಿಕೊಂಡವರೆಲ್ಲ ಅಭಿಮನ್ಯುವಿನಂತೆ ನಕ್ಕು ಸುಮ್ಮನಾಗುತ್ತಿದ್ದರು. ಆದರೆ, ಆಕೆಯ ಚಿಂತನೆಯ ಧಾಟಿಯೇ ಭಿನ್ನವಾಗಿತ್ತು.

ಜಗತ್ತಿನಲ್ಲಿ ಹುಡುಗರಿಗೇನು ಕೊರತೆ ಇಲ್ಲ ಎಂಬುದು ಆಕೆಗೆ ಗೊತ್ತಿರುವ ವಿಚಾರವೇ. ಆದರೆ, ಮನಕ್ಕೊಪ್ಪುವ ಹುಡುಗ ಸಿಗಬೇಕಲ್ವ? ಅದೇ ಅತ್ಯಂತ ಮುಖ್ಯವಾದ ಪ್ರಶ್ನೆ. ಆಕೆಯ ಸೌಂದರ್ಯಕ್ಕೆ ಮಾರು ಹೋಗಿ ಹತ್ತಾರು ಹುಡುಗರು ಕೈಯಲ್ಲೊಂ ದು ಪ್ರೇಮಪತ್ರ ಹಿಡಿದು ಆಕೆಯನ್ನು ಒಲಿಸಿಕೊಳ್ಳಲು ಶತಪ್ರಯತ್ನ ಮಾಡಿದ್ದರು. ಆದರೆ, ಆಕೆ ಎಲ್ಲಿಯೂ ಎಡವಲಿಲ್ಲ. ಜೀವನದಲ್ಲಿ ಒಬ್ಬನನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು, ಅವನೇ ಗಂಡನಾಗಬೇಕೆಂಬ ಆಸೆ ಆಕೆಯದ್ದು. ಜೀವನ ಪೂರ್ತಿ ಲವ್ ಮಾಡದೆ ಕಳೆದು ಬಿಡ್ಬೇಡ. ಇನ್ನೆಂದೂ ಇಂತಹ ದಿನಗಳು ಮರಳಿ ಬರೋದಿಲ್ಲ. ಯಾರನ್ನಾದರು ಲವ್ ಮಾಡಿಬಿಡು ಎಂದು ಆಕೆಯ ಸಹಪಾಠಿಗಳು ಕಾಲೇಜು ದಿನಗಳಲ್ಲಿ ಆಕೆಗೆ ಪ್ರೇಮಲೋಕದ ಪಾಠ ಹೇಳಿಕೊಡುತ್ತಿದ್ದರು. ಒಳ್ಳೆಯ ಹುಡುಗ ಸಿಕ್ಕರೆ ಖಂಡಿತ ಲವ್ ಮಾಡ್ತೇನೆ, ಅವನನ್ನೇ ಮದ್ವೆಯಾಗ್ತೇನೆ ಅಂದಿದ್ದಳು ಅಂದು. ಆದರೆ, ಇದುವರೆಗೂ ಅವಳಂದುಕೊಂಡಷ್ಟು ಒಳ್ಳೆಯ ಹುಡುಗ ಸಿಗಲೇ ಇಲ್ಲ!

ಅಭಿಮನ್ಯು, ನಾನು ಆಡೋ ಮಾತು ನಿನ್ಗೆ ತಮಾಷೆ ಅನ್ನಿಸ್ಬೊದು. ನೀನು ಹೇಳುವ ಹಾಗೆ ಈ ಜಗತ್ತಿನಲ್ಲಿ ಹುಡುಗರಿ ಗೇನು ಕೊರತೆ ಇಲ್ಲ. ಆದರೆ, ನನ್ನ ಮನಕ್ಕೊಪ್ಪುವ ಹುಡುಗ ಸಿಗಬೇಕಲ್ವ? ಆ ಕೊರತೆ ಕಾಡ್ತಾ ಇದೆ. ಆ ವಿಷಯ ಒತ್ತಟ್ಟಿಗಿಲಿ ಬಿಡು. ಅಂದಹಾಗೆ, ನೀನೇನಾದ್ರು ಮದ್ವೆಯಾಗೋ ಯೋಚ್ನೆ ಮಾಡಿದ್ದೀಯ? ಯಾರನ್ನಾದರು ಪ್ರೀತಿ ಮಾಡ್ತಾ ಇದ್ದೀಯ? ನಿನ್ನ ಹೆಂಡ್ತಿಯಾಗೋಳು ಹೇಗಿರಬೇಕೂಂತ ಬಯಸ್ತಿಯ…? ಅಕ್ಷರ ಮೇಲಿಂದ ಮೇಲೆ ಪ್ರಶ್ನೆಗಳ ಮಳೆಯನ್ನೇ ಸುರಿಸಲು ಪ್ರಾರಂಭಿಸಿದಳು.

ಆಕೆಯ ಮಾತಿನ ಧಾಟಿಯಲ್ಲಿ ಅಭಿಮನ್ಯುವಿನ ಮನದೊಳಗೇನಿದೆ ಎಂದು ತಿಳಿದುಕೊಳ್ಳುವ ಕಾತುರ ಇತ್ತು. ಅದಾಗಲೇ ಆಕೆಯ ಹೃದಯದಲ್ಲಿ ಅಭಿಮನ್ಯು ಸದ್ದಿಲ್ಲದೆ ಬಂದು ಕುಳಿತುಬಿಟ್ಟಿದ್ದ. ಪ್ರೀತಿಯ ವಿಚಾರವನ್ನು ಒಮ್ಮಿಂದೊಮ್ಮೆಲೆ ತೋರ್ಪಡಿ ಸಲು ಆಕೆಯಿಂದ ಸಾಧ್ಯವಾಗಲಿಲ್ಲ. ಆದರೆ, ಅಭಿಮನ್ಯುವಿಗೆ ಆಕೆಯೆಡೆಗೆ ಇದ್ದದ್ದು ಕೇವಲ ಗೌರವ ಭಾವನೆ ಅಷ್ಟೆ. ಆರ್ಥಿಕ ಸಂಕಷ್ಟದ ಸಂಕೋಲೆಯಲ್ಲಿ ಬಂಧಿಯಾಗಿದ್ದ ಅಭಿಮನ್ಯುವಿಗೆ ಮದುವೆ ಎಂಬ ಪದವೇ ಹಿಡಿಸುತ್ತಿರಲಿಲ್ಲ. ಅದೇನಿದ್ದರೂ ಶ್ರೀಮಂತರಿಗೆ ಮಾತ್ರ, ನಮ್ಮಂತವರಿಗಲ್ಲವೆಂದು ಆಗಿಂದಾಗೆ ಹೇಳಿಕೊಳ್ಳುತ್ತಿದ್ದ. ಇದೀಗ ಅಕ್ಷರ ದಿಢೀರಾಗಿ ಮದುವೆಯ ವಿಚಾರ ಮುಂದಿಟ್ಟಾಗ ಉತ್ತರಿಸದೆ ಇರಲು ಅವನಿಂದ ಸಾಧ್ಯವಾಗಲಿಲ್ಲ.

ಸದ್ಯಕಂತೂ ಯಾರನ್ನೂ ಪ್ರೀತಿ ಮಾಡ್ತಾ ಇಲ್ಲ. ಹಾಗಂತ ಸನ್ಯಾಸಿಯಂತೂ ಅಲ್ವೇ‌ಅಲ್ಲ. ನಾನೇ ಮತ್ತೊಬ್ಬರ ಬಳಿ ಕೈ ಚಾಚುವ ಪರಿಸ್ಥಿತಿ ಇರುವಾಗ ಪ್ರೀತಿಸೋ ಮನಸ್ಸು ಬರುವುದಾದರೂ ಹೇಗೆ? ಮದ್ವೆಯಾಗುವುದಾದರೂ ಹೇಗೆ? ಹೀಗಾಗಿ ಮದ್ವೆ ಮಾಡಿಕೊಳ್ಳುವ ನಿರ್ಧಾರ ಮಾತ್ರ ಕೈಗೊಳ್ಳೋದಕ್ಕೆ ಸದ್ಯಕ್ಕಂತೂ ಸಾಧ್ಯವೇ ಇಲ್ಲ. ಎಷ್ಟೇ ಆದ್ರೂ ನಾವು ಬಡವರಲ್ವ? ತುಂಬಾನೇ ಕನಸು ಕಾಣ್ತೇವೆ. ಅದೊಂದೇ ನಮಗೆ ದೇವರು ಕೊಟ್ಟ ವರ. ನೀನು ಹೇಳಿದ ಹಾಗೆ ನನ್ನ ಪ್ರೀತಿಸುವ, ಮದುವೆ ಯಾಗುವ ಹುಡುಗಿಯ ಬಗ್ಗೆ ನೂರಾರು ಕನಸುಗಳಿವೆ, ನೂರಾರು ಕಲ್ಪನೆಗಳಿವೆ. ಆ ಕಲ್ಪನೆ, ಕನಸುಗಳೆಲ್ಲವನ್ನೂ ಮೂಟೆಕಟ್ಟಿ ಇಟ್ಟುಕೊಳ್ಳೋದಕ್ಕೆ ಮಾತ್ರ ಲಾಯಕ್ಕು. ಉಪಯೋಗಕ್ಕೆ ಬರೋದಿಲ್ಲ ಬಿಡು ಅಂದ ಅಭಿಮನ್ಯು ವೈವಾಹಿಕ ಜೀವನದ ಬಗ್ಗೆ ಕೂಡಿಟ್ಟುಕೊಂಡಿರುವ ಕನಸು, ಕಟ್ಟಿಕೊಂಡಂತಹ ಕಲ್ಪನೆಗಳನ್ನು ತೆರೆದಿಡಲು ಪ್ರಾರಂಭಿಸಿದ.

ನಾನು ಮದ್ವೆಯಾಗೋ ಹುಡುಗಿ ನನ್ನ ಹೆಂಡ್ತಿ ಅನ್ನೋದಕ್ಕಿಂತ ನನ್ನ ಬೆಸ್ಟ್‌ಫ್ರೆಂಡ್‌ನಂತಿರಬೇಕು. ಆಕೆ ನನ್ನೊಂದಿಗೆ ಎಲ್ಲಾ ವಿಚಾರವನ್ನು ಹಂಚಿಕೊಳ್ಳುವಂತಿರಬೇಕು. ಇದೆಲ್ಲದರ ನಡುವೆ ಒಂದಷ್ಟು ಸೌಂದರ್ಯದ ಬೇಡಿಕೆ ಇದ್ದದ್ದೇ ಬಿಡು. ಪ್ರತಿಯೊಬ್ಬ ಗಂಡಸು ಕೂಡ ಬಯಸುವುದು ಅದನ್ನೇ ತಾನೇ. ಇಷ್ಟಿದ್ದರೆ ನೆಮ್ಮದಿ ಜೀವನ ಅನ್ನಬಹುದು. ಆದರೆ, ಇದೆಲ್ಲವೂ ಸಾಕಾರ ಗೊಳ್ಳುವ ಮಾತಲ್ಲ. ಎಲ್ಲವೂ ನಾವಂದುಕೊಂಡತೆ ನಡೆಯೋದಿಲ್ಲ. ಎಲ್ಲಾ ಅಂದುಕೊಂಡಂತೆ ನಡೆಯೋದಾಗಿದ್ರೆ ಮನುಷ್ಯರನ್ನು ತಡೆದು ನಿಲ್ಲಿಸೋದಕ್ಕೆ ಸಾಧ್ಯ ಆಗ್ತಾ ಇತ್ತಾ ಹೇಳು? ಅದಕ್ಕೆ ದೇವರು ಒಬ್ಬೊಬ್ಬರಲ್ಲಿ ಒಂದೊಂದು ಕೊರತೆ ಸೃಷ್ಟಿ ಮಾಡಿಟ್ಟಿ ದ್ದಾನೆ ಅಂದ ಅಭಿಮನ್ಯು ತನ್ನ ಬದುಕಿನ ದೌರ್ಭಾಗ್ಯವನ್ನು ನೆನೆಯುತ್ತಾ ಕುಳಿತ.

ಆಕೆಗೆ ಅಭಿಮನ್ಯುವಿನ ಮಾತಿನಲ್ಲಿ ಅರ್ಥವಿದೆ ಅನ್ನಿಸಿತು. ಪರಸ್ಪರ ಅರಿತು ಬಾಳಿದರೆ ಮಾತ್ರ ಜೀವನ ಸುಗಮವಾಗಿ ಸಾಗೋದಕ್ಕೆ ಸಾಧ್ಯ. ಗಂಡ-ಹೆಂಡತಿ ಎಲ್ಲಾ ವಿಚಾರಗಳನ್ನು ಹಂಚಿಕೊಂಡು ಜೀವನ ನಡೆಸಿದರೆ ಸಂಸಾರದಲ್ಲಿ ವಿರಸದ ಮಾತೆಲ್ಲಿ? ಆದರೆ, ಬಹುತೇಕ ಕುಟುಂಬಗಳಲ್ಲಿ ಅಂತಹ ವಾತಾವರಣವೇ ಇಲ್ಲ. ಹೆಣ್ಣಿನ ಮಾತನ್ನು ಗೌರವ ಭಾವನೆಯೊಂದಿಗೆ ಶಾಂತಚಿತ್ತತೆಯಿಂದ ಆಲಿಸುವ ಗಂಡಸು ಈ ಜಗತ್ತಿನಲ್ಲಿ ಇನ್ನೂ ಹುಟ್ಟಿಲ್ಲ. ಆದರೆ, ಅದೆಷ್ಟೋ ಕುಟುಂಬಗಳಲ್ಲಿ ಹೆಣ್ಣಿನ ಮಾತಿಗೆ ಮೂರು ಕಾಸಿನ ಬೆಲೆಯೂ ಸಿಗೋದಿಲ್ಲ. ವಯಸ್ಸಿಗೆ ಬಂದ ಹೆಣ್ಮಕ್ಕಳನ್ನು ಮನೆಯಲ್ಲಿರಿಸಿಕೊಳ್ಳೋದೇ ಮಹಾ ಅಪರಾಧ ಅಂತ ತಿಳ್ಕೊಂಡು ಎಲ್ಲರು ಸೇರಿ ತಮಗಿಷ್ಟವಾದ ಹುಡುಗನನ್ನು ನೋಡಿ ಮಂಗಳವಾದ್ಯ ಊದಿಸಿ ಬಿಡುತ್ತಾರೆ. ಆ ನಂತರ ಆಕೆ ಗಂಡನ ಮನೆಯಲ್ಲಿ ಯಾವ ರೀತಿ ಜೀವನ ನಡೆಸುತ್ತಿದ್ದಾಳೆಂದು ನೋಡುವ ಗೋಜಿಗೆ ಹೋಗೋದಿಲ್ಲ. ಕಷ್ಟನೋ, ಸುಖನೋ ಹಂಚಿಕೊಂಡು ಜೀವನ ನಡೆಸಬೇಕೆಂಬ ವೇದವಾಕ್ಯ ಇನ್ನೂ ಚಾಲ್ತಿಯಲ್ಲಿದೆ. ಎಷ್ಟೋ ಹೆಣ್ಮಕ್ಕಳು ಗಂಡನ ಮನೆಯ ಕಿರುಕುಳ ತಾಳಲಾರದೆ ತವರು ಮನೆಗೆ ಬಂದರೆ ಅಲ್ಲಿ ಎಲ್ಲರೂ ಅವಳನ್ನು ಕೆಟ್ಟ ದೃಷ್ಟಿಯಿಂದಲೇ ನೋಡುತ್ತಾರೆ. ಗಂಡನ ಮನೆ, ತವರು ಮನೆಯಲ್ಲಿ ಸರಿಯಾದ ಪ್ರೀತಿ, ವಾತ್ಸಲ್ಯ ದೊರೆಯದೆ ಕೊನೆಗೊಂದು ದಿನ ಇಹಲೋಕ ತ್ಯಜಿಸಿ ಬಿಡುತ್ತಾರೆ. ಬಹುತೇಕ ಕುಟುಂಬದ ಪರಿಸ್ಥಿತಿ ಹೀಗಿರುವಾಗ ಅಭಿಮನ್ಯುವಿನ ಚಿಂತನೆಯ ಧಾಟಿಯೇ ಭಿನ್ನವಾಗಿದೆ. ಹೆಂಡ್ತಿಯಾಗುವವಳು ಬೆಸ್ಟ್‌ಫ್ರೆಂಡ್‌ನಂತಿರಬೇಕು ಎಂದು ಬಯಸುವ ಅಭಿಮನ್ಯುವಿನೊಂದಿಗೆ ಬದುಕು ನಡೆಸಿದರೆ ಆ ಬದುಕು ಅತ್ಯಂತ ಸುಂದರವಾಗಿರುತ್ತದೆ, ಸುಮಧುರವಾಗಿರುತ್ತದೆ ಅಂದುಕೊಂಡಳು.

ವೈವಾಹಿಕ ಜೀವನ ಅಂದಕ್ಷಣ ಆಕೆಯನ್ನು ಬೆಚ್ಚಿಬೀಳಿಸುತ್ತಿದ್ದದ್ದು ಪಕ್ಕದ ಮನೆಯ ಶಾರದಳ ಬದುಕನ್ನು ಕಂಡು. ಮೊದಲ ರಾತ್ರಿಯೊಂದನ್ನು ಹೊರತು ಪಡಿಸಿ ಮುಂದೆ ಎದುರಾದ ಪ್ರತಿಯೊಂದು ಕ್ಷಣಗಳನ್ನು ಆಕೆ ಆತಂಕ, ನೋವು, ದುಃಖದಲ್ಲಿಯೇ ಕಳೆದಳು. ಒಂದು ದಿನ ಕೂಡ ಗಂಡ ಅಕ್ಕರೆಯಿಂದ ಮಾತಾಡಿಸಿದವನಲ್ಲ. ಕಾಲೇಜು ದಿನಗಳಲ್ಲಿ ಅದ್ಯಾರನ್ನೋ ಪ್ರೀತಿ ಮಾಡುತ್ತಿದ್ದಳು. ವಿಷಯ ಮನೆಯವರಿಗೆಲ್ಲ ಗೊತ್ತಾಗಿದ್ದೇ ತಡ ಹಿಂದೆಮುಂದೆ ನೋಡದೆ ಅಪ್ಪ, ಅಮ್ಮನ ತೆಕ್ಕೆಯಲ್ಲಿ ಬೆಳೆಯದ ಸ್ಫುರದ್ರೂಪಿ, ಸ್ಥಿತಿವಂತನಾದ ವೆಂಕಟರಾಜುವಿಗೆ ಕೊಟ್ಟು ಮದುವೆ ಮಾಡಿಸಿಬಿಟ್ಟರು. ಅವನ ನಡತೆ ಸರಿಯಿಲ್ಲದ ಕಾರಣ ಅಪ್ಪ, ಅಮ್ಮನೇ ಅವನನ್ನು ಮನೆಯಿಂದ ಹೊರಗಟ್ಟಿದ್ದರು. ಶಾರದಳ ಕುತ್ತಿಗೆಗೆ ತಾಳಿ ಕಟ್ಟಿ ಮನೆ ತುಂಬಿಸಿಕೊಂಡ ವೆಂಕಟರಾಜು ಮೊದಲರಾತ್ರಿ ಉಂಡೆದ್ದ ಬಳಿಕ ಆಕೆಯೆಡೆಗೆ ಒಂದು ತಿರಸ್ಕಾರದ ನೋಟ ಬೀರಲು ಪ್ರಾರಂಭಿಸಿದ. ಅಲ್ಲಿಂದ ಆಕೆಯ ಬದುಕಿ ನಲ್ಲಿ ನೆಮ್ಮದಿ ಎಂಬುದು ಮಾಯವಾಯಿತು. ಹಿಂದೆ ಮುಂದೆ ನೋಡದೆ ತರಾತುರಿಯಲ್ಲಿ ಮಾಡಿದ ವಿವಾಹದ ಪ್ರತಿಫಲ ವನ್ನು ಆಕೆ ಅನುಭವಿಸುತ್ತಿದ್ದಳು. ದಿನನಿತ್ಯ ಕುಡಿದು ತೂರಾಡಿ ಬರುವ ವೆಂಕಟರಾಜು ಆಕೆಯನ್ನು ಕಣ್ಣೀರಿನ ಕಡಲಿಗೆ ನೂಕುತ್ತಾನೆಯೇ ವಿನಃ ನೆಮ್ಮದಿಯ ಬದುಕು ತೋರಿಸಲಿಲ್ಲ. ಆತನ ಕುಡಿತದ ಚಟಕ್ಕೆ ಆಕೆಯ ಮೈಮೇಲಿದ್ದ ಒಡವೆಗಳೆಲ್ಲವೂ ಮಾಯವಾಯಿತು. ಆಕೆಯ ಮೈಮೇಲಿರುವ ಮಾಂಗಲ್ಯ ಸರವೊಂದನ್ನು ಬಿಟ್ಟು. ಅದು ಯಾವಾಗ ಕಣ್ಮರೆಯಾಗುತ್ತದೆಯೋ ಆ ದೇವರೇ ಬಲ್ಲ. ಅವಳ ಸಂಕಷ್ಟದ ಬದುಕನ್ನು ಕಂಡು ಸಾಕಷ್ಟು ಸಲ ಅಕ್ಷರ ಮರುಗಿದ್ದಳು. ತನ್ನ ಬದುಕು ಹೀಗೇನಾದರೂ ಆಗಿಬಿಟ್ಟರೆ ಏನು ಗತಿ? ಎಂದು ಕೆಲವೊಮ್ಮೆ ಆತಂಕಕ್ಕೆ ಒಳಗಾಗುತ್ತಿದ್ದಳು. ಆಕೆಯ ಕರುಣಾಜನಕ ಸ್ಥಿತಿಯನ್ನು ನಿತ್ಯ ನೋಡುವ ಅಕ್ಷರಳ ಮನದಲ್ಲಿ ಕೆಲವೊಮ್ಮೆ ಈ ಮದುವೆ ಎಂಬ ಬಂಧನಕ್ಕೆ ಒಳಗಾಗುವುದಿರುವುದೇ ವಾಸಿ ಅಂದುಕೊಳ್ಳುತ್ತಿದ್ದಳು.  ಮದುವೆ ಆದರೆ ಅದು ತನ್ನ ಮನಕ್ಕೊಪ್ಪುವ ಹುಡುಗ ಸಿಕ್ಕರೆ ಮಾತ್ರ ಎಂಬ ನಿರ್ಧಾರವನ್ನು ಆಕೆ ಕೈಗೊಂಡಿದ್ದಳು. ಆದರೆ, ಎಲ್ಲ ನಾವಂದುಕೊಂಡಂತೆ ನಡೆಯಲು ಈ ಸಮಾಜ ಬಿಡೋದಿಲ್ಲ ಎಂಬ ಸತ್ಯ ಆಕೆಗೆ ಗೊತ್ತಿತ್ತು. ಹಾಗಾಗಿ ವಯಸ್ಸು ಮೀರುತ್ತಿದ್ದಂತೆ ಆಕೆಯಲ್ಲಿ ಆತಂಕ ಹೆಚ್ಚಾಗತೊಡಗಿತು. ಒಂದು ಹೆಣ್ಣು ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿ ಇರಲು ಈ ಸಮಾಜ ಬಿಟ್ಟಿಲ್ಲ. ಮನಸ್ಸಿಲ್ಲದೆ ಇದ್ದರೂ ವಯಸ್ಸಾಗುತ್ತಿದಂತೆ ವಿವಾಹ ಬಂಧನಕ್ಕೆ ಒಳಪಡಿಸಿ ಬಿಡುತ್ತದೆ. ಇಲ್ಲವಾದಲ್ಲಿ ಯವ್ವನ ತುಂಬಿ ತುಳುಕುತ್ತಿರುವುದನ್ನು ಕಂಡೊಡನೆ ವೇಶ್ಯಾವಾಟಿಕೆಗೆ ದೂಡಿ ಬಿಡುತ್ತದೆ. ಎಲ್ಲವನ್ನೂ ಮೆಟ್ಟಿ ನಿಂತು ಒಬ್ಬಂಟಿಯಾಗಿ ಜೀವನ ನಡೆಸುವ ಹೆಣ್ಣು ನೆಮ್ಮದಿಯಿಂದ ಇರೋದಕ್ಕೆ ಈ ಸಮಾಜ ಬಿಡೋದಿಲ್ಲ. ಸೂಳೆ ಎಂಬ ಹಣೆಪಟ್ಟಿ ಕಟ್ಟಿ ಬಿಡುತ್ತದೆ. ಹೆಣ್ಣಿನ ಪಾಲಿಗೆ ವೈವಾಹಿಕ ಜೀವನ ಎಂಬುದು ಕೇವಲ ಕಲ್ಪನೆಗಳಿಗೆ ಮಾತ್ರ ಸೀಮಿತ. ಜಗತ್ತು ಆಧುನಿಕತೆಯ ಕಡೆಗೆ ಮುಖ ಮಾಡಿಕೊಂಡಿದ್ದರೂ ಮಹಿಳೆಯರಿಗೆ ದೊರೆಯಬೇಕಾದ ನಿಜವಾದ ಸ್ವಾತಂತ್ರ್ಯವೇನು ದೊರೆತ್ತಿಲ್ಲ ಎಂಬುದು ಬೇರೆ ಮಾತು. ಕನಿಷ್ಟ ಬಾಳಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಆಕೆಗೆ ಕರುಣಿಸಿಲ್ಲ. ಪ್ರೇಮ ವಿವಾಹಕ್ಕೆ ಸಮಾಜ ಅಘೋಷಿತ ನಿರ್ಬಂಧ ಹೇರಿಬಿಟ್ಟಿದೆ. ಅದನ್ನು ಬೇಧಿಸಿ ವಿವಾಹವಾಗುವವರಿಗೆ ಮನೆಯವರಿಂದ, ಸಮಾಜದಿಂದ ದೊರೆಯುವ ಸಹಕಾರ ಅಷ್ಟಕಷ್ಟೆ. ಪ್ರೇಮವಿವಾಹವಾದವರಿಗೆ ಮನೆಯಲ್ಲಿ ಆಶ್ರಯ ದೊರೆಯುವುದು ಕಷ್ಟ. ಎಲ್ಲೋ ಒಂದಷ್ಟು ಪ್ರೇಮಿಗಳು ಅಪ್ಪ, ಅಮ್ಮನ ಮನವೊಲಿಸಿ ಮತ್ತೆ ಮನೆ ಸೇರಿಕೊಳ್ಳುತ್ತಾರೆ. ಅದು ಅವರ ಭಾಗ್ಯ ಅನ್ನಬಹುದು. ಬಹುತೇಕ ಪ್ರೇಮಿಗಳು ಇಂಥಹ ಅದೃಷ್ಟ ಪಡೆದುಕೊಂಡು ಬಂದವರಲ್ಲ. ಒಂದರ್ಥದಲ್ಲಿ ವಿವಾಹ ವಿಚಾರದಲ್ಲಿ ಹುಡುಗರೇ ಪುಣ್ಯವಂತರು. ಮನಕ್ಕೊಪ್ಪುವ ಹುಡುಗಿ ಸಿಗದೆ ಇದ್ದಲ್ಲಿ ಸನ್ಯಾಸಿಯಾಗಿ ಉಳಿದು ಬಿಡಬಹುದು. ಆದರೆ ಹೆಣ್ಣಿಗೆ ಆ ಸ್ವಾತಂತ್ರ್ಯ ಸಮಾಜ ಕರುಣಿಸಿಲ್ಲ. ವೈವಾಹಿಕ ಜೀವನಕ್ಕೆ ಕಾಲಿಡುವ ವಯಸ್ಸಾಗಿದ್ದರೂ ವಿವಾಹವಾಗದೆ ಇದ್ದರೆ ಆಕೆಯ ನಡತೆ ಸರಿಯಿಲ್ಲ. ಆಕೆಯಲ್ಲಿ ಏನಾದ ರೊಂದು ನ್ಯೂನತೆಗಳಿರಬಹುದು ಅದಕ್ಕೆ ಇನ್ನೂ ಮದುವೆಯಾಗಿಲ್ಲ ಅಂತ ಜನ ಆಡಿಕೊಳ್ಳುತ್ತಾರೆ. ಕೊನೆ ಕೊನೆಗೆ ಆಕೆಯನ್ನು ವೇಶ್ಯೆಯ ರೀತಿ ನೋಡಲು ಪ್ರಾರಂಭಿಸುತ್ತಾರೆ. ಜನರ ಕೊಂಕು ಮಾತುಗಳಿಗೆ ಕೊನೆಗೊಂದು ದಿನ ಮನಸ್ಸಿಲ್ಲದೆ ಇದ್ದರೂ ಜನರ ಮಾತಿನಿಂದ ತಪ್ಪಿಸಿಕೊಳ್ಳುವುದಕೋಸ್ಕರ ಮದುವೆಯಾಗೋ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಅದು ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅನಿವಾರ್ಯವೂ ಕೂಡ ಎಂಬ ಸತ್ಯದ ಅರಿವು ಆದಾಗಿನಿಂದ ಆಕೆ ಕಳವಳದಲ್ಲಿ ಕಾಲ ಕಳೆಯತೊಡಗಿದಳು. ಒಳ್ಳೆಯ ವರ ಸಿಗದೆ ಹೋದರೆ ತನ್ನ ಬದುಕು ಕೂಡ ಶಾರದಕ್ಕನ ಬದುಕಿಗಿಂತ ಭಿನ್ನವಾಗಿರುವುದಿಲ್ಲ ಎಂದು ಆತಂಕಕ್ಕೆ ಒಳಗಾಗುತ್ತಿದ್ದಳು.

ಅಭಿಮನ್ಯುವಿನಲ್ಲಿ ಹಣದ ಕೊರತೆಯೊಂದನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಕೊರತೆಗಳಿಲ್ಲ. ಅಭಿಮನ್ಯುವಿನ ಕೈ ಹಿಡಿದರೆ ಬದುಕು ಸುಂದರವಾಗುತ್ತದೆ ಎಂಬ ನಿರ್ಧಾರಕ್ಕೆ ಬಂದುಬಿಟ್ಟಳು. ಆದರೆ, ಎಲ್ಲಾ ಹುಡುಗರಂತೆ ಅಭಿಮನ್ಯುವಿನ ಮನಸ್ಸು ಬದಲಾಗಿ ಹೋದರೆ ಏನು ಗತಿ? ಎಂಬ ಆತಂಕ ಅವಳನ್ನು ಕಾಡದೆ ಇರಲಿಲ್ಲ.

ಈಗಿನ ಕಾಲದಲ್ಲಿ ಪ್ರೀತಿಸಿದ್ರೂ ಭಯ, ಪ್ರೀತಿಸದೆ ಇದ್ರೂ ಭಯ. ಪ್ರೀತಿಸಿದ ಹುಡುಗರೆಲ್ಲ ಮದ್ವೆಯಾಗುತ್ತಾರೆ ಎಂಬ ಭರವಸೆ ನನಗಿಲ್ಲ. ಪಾಪ, ನನ್ನ ಬಾಲ್ಯದ ಗೆಳತಿ ಗೀತಾ ಪ್ರೀತಿಯ ಬಲೆಗೆ ಬಿದ್ದು ನರಳಾಡ್ತಾ ಇದ್ದಾಳೆ. ಪ್ರೀತಿಸಿದಾತ ಕೈಗೊಂದು ಮಗು ಕೊಟ್ಟು ಪರಾರಿಯಾದನೇ ಹೊರತು ತಾಳಿಕಟ್ಟಲು ಮುಂದಾಗಿಲ್ಲ. ಈಗ ಅವಳ ಪಾಡು ನಾಯಿ ಪಾಡು. ಹೀಗಾದ್ರೆ ಪ್ರೀತಿಯ ಮೇಲೆ ನಂಬಿಕೆ ಇಡೋದಕ್ಕೆ ಸಾಧ್ಯನಾ? ಪ್ರೀತಿಸಬೇಕೆಂಬ ಮನಸ್ಸಿದೆ. ಆದರೆ, ಪ್ರೀತಿ ಮಾಡೋನು ಎಲ್ಲಿ ಕೈ ಕೊಟ್ಟು ಬಿಡ್ತಾನೋ ಎಂಬ ಭಯ ಮಾತ್ರ ಕಾಡ್ತಾ ಇದೆ ಅಂದ ಆಕೆ ಮನದೊಳಗಿದ್ದ ತಳಮಳ ತೋಡಿಕೊಂಡಳು.

ಛೆ..ಛೇ.., ಹುಡುಗ ಕೈ ಕೊಟ್ರೆ ಯಾಕೆ ತಲೆ ಕೆಡಿಸಿಕೊಳ್ಬೇಕು? ಕೈ ಕೊಟ್ರೆ ಕೈಯನ್ನು ಭದ್ರವಾಗಿ ಹಿಡ್ಕೊಂಡ್ರಾಯ್ತು. ಅಷ್ಟೆ ಎಂದು ಆಕೆಯನ್ನು ಛೇಡಿಸಿದ.
ನಿನ್ಗೆ ಯಾವತ್ತೂ ತಮಾಷಿನೇ. ಜೀವನದ ಗಂಭೀರತೆ ನಿನ್ಗೆ ಇನ್ನೂ ಅರ್ಥವಾಗಿಲ್ಲ. ನಡಿ ಮನೆಗೆ ಹೋಗುವ ಎಂದು ಅಭಿಮನ್ಯುವನ್ನು ಹೊರಡಿಸಿದಳು. ಇಬ್ಬರು ರಾಜಾಸೀಟ್ ಉದ್ಯಾನವನದ ಮುಂಭಾಗದ ಬೆಟ್ಟಗಳ ಮರೆಯಲ್ಲಿ ಕಣ್ಮರೆಯಾಗಲು ಅಣಿಯಾಗುತ್ತಿದ್ದ ಸೂರ್ಯನಿಗೊಂದು ಗುಡ್‌ಬಾಯ್ ಹೇಳಿ ಸ್ಥಳದಿಂದ ಕಾಲ್ತೆಗೆದರು.
*  *  *

ಪ್ರವಾಸಿ ಮಾಹಿತಿ ಕೇಂದ್ರ ಪ್ರಾರಂಭಿಸಲು ಸಿದ್ಧತೆಗಳನ್ನು ಕೈಗೊಳ್ಳುವುದರಲ್ಲಿ ಅಭಿಮನ್ಯು ಹಲವು ದಿನಗಳನ್ನು ಕಳೆದ. ಸಮಯಕ್ಕೆ ಸರಿಯಾಗಿ ಬ್ಯಾಂಕ್‌ನಿಂದ ಸಾಲ ದೊರೆಯಿತು. ಅಕ್ಷರ ಕೊಟ್ಟ ಐವತ್ತು ಸಾವಿರ ರೂಪಾಯಿ ಸಾಕಷ್ಟು ಉಪಯೋಗಕ್ಕೆ ಬಂದಿತ್ತು. ಹಣದ ಕೊರತೆ ಕಾಡಲಿಲ್ಲ. ಮಡಿಕೇರಿ ನಗರದ ಎಲ್ಲಾ ಕಡೆಗಳಲ್ಲೂ ಪ್ರದಕ್ಷಿಣೆ ಹಾಕಿ ಕಚೇರಿ ಪ್ರಾರಂಭಿಸಲು ಒಂದುಸೂಕ್ತವಾದ ಜಾಗ ಕಂಡುಕೊಂಡ. ಒಂದು ಶುಭಘಳಿಗೆಯಲ್ಲಿ ಕಚೇರಿ ಪ್ರಾರಂಭಗೊಂಡಿತು. ಸ್ನೇಹಿತರೆಲ್ಲ ಆಗಮಿಸಿ ಗೆಳೆಯನಿಗೆ ಶುಭ ಕೋರಿ ತೆರಳಿದರು. ಪ್ರವಾಸಿಗರ ಆಗಮನದೊಂದಿಗೆ ಅಭಿಮನ್ಯುವಿನ ವರಮಾನವೂ ಹೆಚ್ಚಾಯಿತು. ಸ್ನೇಹಿತರೆಲ್ಲರ ನಿರೀಕ್ಷೆಯಂತೆ ಅಭಿಮನ್ಯು ಆರ್ಥಿಕವಾಗಿ ಸದೃಢನಾಗಿ ಎದ್ದು ನಿಂತ. ವರ್ಷ ಕಳೆಯುವುದರೊಳ ಗಾಗಿ ಬ್ಯಾಂಕಿನ ಸಾಲ ಮರುಪಾವತಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟ. ಇದಾದ ಕೆಲವು ತಿಂಗಳುಗಳ ಬಳಿಕ ಅಭಿಮನ್ಯು ಬ್ಯಾಂಕಿನಿಂದ ಮತ್ತೆ ಒಂದಷ್ಟು ಸಾಲ ಪಡೆದು ಕೈಯಲ್ಲಿದ್ದ ಒಂದಷ್ಟು ಹಣ ಬಳಸಿಕೊಂಡು ಗಿಫ್ಟ್‌ಸೆಂಟರ್‌ವೊಂದನ್ನು ಪ್ರಾರಂಭಿಸಲು ನಿರ್ಧರಿಸಿದ. ಆ ಸಂತಸದ ವಿಚಾರವನ್ನು ಬಾಳಿಗೆ ಬೆಳಕು ತೋರಿದ ಅಕ್ಷರಳಿಗೆ ತಿಳಿಸಲು ಮರೆಯಲಿಲ್ಲ.

ಹಲವು ತಿಂಗಳುಗಳ ಬಳಿಕ ಇಬ್ಬರು ಮತ್ತೆ ರಾಜಾಸೀಟ್ ಉದ್ಯಾನವನದಲ್ಲಿ ಸಂಧಿಸಿದರು. ಗಿಫ್ಟ್‌ಸೆಂಟರ್ ಪ್ರಾರಂಭಿಸುವ ವಿಚಾರವನ್ನು ಆಕೆಯ ಎದುರು ತೆರೆದಿಟ್ಟ. ನನ್ಗೆ ತುಂಬಾ ಸಂತೋಷ ಆಗ್ತಾ ಇದೆ. ಅದಕ್ಕೆ ಕಾರಣಕರ್ತಳು ನೀನು. ನೀನಿಲ್ಲದೆ ಹೋಗಿದ್ದರೆ ಇಷ್ಟು ಹೊತ್ತಿಗಾಗಲೇ ನನ್ನ ಬದುಕು ಚಿಂತಾಜನಕವಾಗುತಿತ್ತು. ನೀನು ತೋರಿದ ದಾರಿ, ನೀಡಿದ ಸಹಕಾರ ಮಾರೆಯೋದಕ್ಕೆ ಸಾಧ್ಯವೇ ಇಲ್ಲ ತುಂಬಾ ಅಭಿಮಾನದಿಂದ ಹೇಳಿಕೊಂಡ.

ಸಾಕು..ಸಾಕು…, ಮಾತಿನಲ್ಲಿಯೇ ಅರಮನೆ ಕಟ್ಟಿಬಿಡ್ತಿಯ. ಈಗ ನನ್ನ ನೆನಪು ನಿನ್ಗೆಲ್ಲಿದೆ ಹೇಳು? ನಿನ್ಗೆ ಕೆಲಸವಿಲ್ಲದ ದಿನಗಳೇ ವಾಸಿ ಇತ್ತು. ಆಗ ನಿನ್ನ ದರ್ಶನ ವಾರಕ್ಕೊಮ್ಮೆಯಾದರೂ ಆಗ್ತಾ ಇತ್ತು. ಈಗ ತಿಂಗಳುಗಳು ಸರಿದರೂ ನಿನ್ನ ಭೇಟಿಯಾಗೋ ಭಾಗ್ಯ ದೊರೆಯ್ತಾ ಇಲ್ಲ. ವ್ಯಾಪಾರ ವಹಿವಾಟು ನಡೆಸಿ ಜೀವನದಲ್ಲಿ ಮುಂದೆ ಬರುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ನನ್ನಿಂದ ದೂರ ಉಳಿಯುವ ಪ್ರಯತ್ನ ಮಾಡಿದರೆ ಮಾತ್ರ ಖಂಡಿತ ಸಹಿಸೋದಿಲ್ಲ. ಕೊಂದೇ ಬಿಡ್ತಿನಿ. ಎಷ್ಟು ತಿಂಗಳಾಯ್ತು ನಮ್ಮಿಬ್ಬರ ಭೇಟಿಯಾಗಿ. ನೆನಪಿದೆಯ? ನನ್ಗೆ ತುಂಬಾ ಕೋಪ ಬತಾ ಇದೆ. ನಾಳೆ ಸಂಜೆಯೊಳಗೆ ನಾನು ರಾಜಾಸೀಟ್‌ನಲ್ಲಿ ನಿನ್ಗೋಸ್ಕರ ಕಾಯ್ತಾ ಇತೇನೆ. ಪ್ರೀತಿ ಇದ್ದರೆ ಬಬೊದು. ಇಲ್ದಿದ್ರೆ ಅವಶ್ಯಕತೆನೇ ಇಲ್ಲ ಮುಂದಿನ ಮಾತಿಗೆ ಅವಕಾಶ ನೀಡದೆ ಅಕ್ಷರ ಸಿಡುಕುತ್ತಾ ಹೊರಟು ಹೋದಳು.

ಅಭಿಮನ್ಯುವಿಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಆಕೆ ಈ ರೀತಿ ಸಿಡುಕಿದ್ದನ್ನು ಅಭಿಮನ್ಯು ಎಂದು ನೋಡಿರಲೇ ಇಲ್ಲ. ಆಘಾತಕೊಳಗಾಗಿ ರಾಜಾಸೀಟ್‌ನ ಕಲ್ಲುಹಾಸಿನ ಬೆಂಚಿಯ ಮೇಲೆ ಕುಳಿತು ದವಡೆಗೆ ಕೈಕೊಟ್ಟು ಯೋಚಿಸುತ್ತಾ ಕಲ್ಲುಬಂಡೆ ಯಂತೆ ಕುಳಿತುಬಿಟ್ಟ.

….. ಮುಂದುವರೆಯುವುದು

ಕಾದಂಬರಿ ಪುಟ ೧೧-೨೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಣ್ಣದ ಹಬ್ಬ
Next post ಕಸದ ಡಬ್ಬಿ

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…