ಡೂಡು

ಡೂಡು

ಮೂಲ: ಆರ್ ಕೆ ನಾರಾಯಣ್

ಡೂಡುವಿಗೆ ಎಂಟುವರ್ಷ. ಅವನಿಗೆ ಹಣ ಬೇಕಾಗಿತ್ತು. ಅವನಿಗೆ ಇನ್ನೂ ಎಂಟುವರ್ಷವಾದುದರಿಂದ ಯಾರೂ ಅವನ ಆರ್ಥಿಕ ಸಮಸ್ಯೆಗೆ ಇನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. (ಅವನಿಗೆ ನೂರಾರು ಕಾರಣಗಳಿಗಾಗಿ ಹಣ ಬೇಕಾಗಿತ್ತು : ಬರುವ ದೀಪಾವಳಿಗೆ ಆನೆ ಪಟಾಕಿ ಕೊಂಡಿಟ್ಟುಕೊಳ್ಳುವುದರಿಂದ ಹಿಡಿದು, ತರಗತಿಯ ಹುಡುಗರೆಲ್ಲರೂ ಕೊಂಡು ಕೊಂಡೇ ತೀರಬೇಕು, ಇಲ್ಲದಿದ್ದರೆ ಬೆತ್ತದಿಂದ ಬಡಿದುಹಾಕಿಬಿಡುತ್ತೇನೆಂದು ಅವರ ಮೇಷ್ಟರು ಕಡ್ಡಾಯಪಡಿಸುತ್ತಿದ್ದ ಪೆನ್‌ಹೋಲ್ಡರ್ ಕೊಳ್ಳಬೇಕಾದುದರವರೆಗೆ ಅವನಿಗೆ ಅನೇಕಾನೇಕ ತಾಪತ್ರಯಗಳಿದ್ದುವು) ಹಿರಿಯರ ಔದಾರ್‍ಯದ ಬಗ್ಗೆ ಅವನಿಗೆ ಭ್ರಾಂತಿಯೇನೂ ಇರಲಿಲ್ಲ. ಓಡಾಡುವಾಗಲೆಲ್ಲ ಅವರ ಜೇಬುಗಳಲ್ಲಿ ದುಡ್ಡು ಘಲ್ ಘಲ್ ಎನ್ನುತ್ತಿರುವುದು. ಆದರೂ ಕೈಯೆತ್ತಿ ಯಾರಿಗೂ ಕೊಡರು. ಅಷ್ಟು ಜಿಪುಣರು. ಬೇರೆಗತಿಯೇ ಇಲ್ಲವೆನ್ನುವವರೆಗೆ ದೊಡ್ಡವರು ದುಡ್ಡಿನ ಗಂಟು ಬಿಚ್ಚರು.

ಡೂಡುವಿನ ಹತ್ತಿರ ಒಂದು ದೊಡ್ಡ ಜಾಯಿಕಾಯಿಪೆಟ್ಟಿಗೆ ಇತ್ತು. ಅದೇ ಅವನ ಆಫೀಸು. ಅದರ ಮುಚ್ಚಳ ತೆರೆಯಿತೆಂದರೆ ಅವನ ಆಫೀಸು ತೆರೆದಂತೆ. ಇಷ್ಟು ಹೊತ್ತಿಗೆ ತೆರೆಯಬೇಕೆಂಬ ನಿಯಮವಿಲ್ಲ ಅವನ ಆಫೀಸಿಗೆ. ತನಗೆ ಖುಷಿ ಬಂದಹೊತ್ತಿಗೆ ತೆರೆಯುವನು, ಖುಷಿ ಬಂದಾಗ ಮುಚ್ಚುವನು, ಅದು ಅವನ ಮರ್ಜಿ. ಯಾವುದಾದರೂ ಗಾಢಾಲೋಚನೆಯಲ್ಲಿ ತೊಡಗಬೇಕಾದ ಪ್ರಮೇಯ ಒದಗಿದಾಗ ಅವನು ಮುಚ್ಚಳವನ್ನು ತೆಗೆದು, ಸಾಮಾನುಗಳೆಲ್ಲದರಮೇಲೆ, ಪದ್ಮಾಸನ ಹಾಕಿಕೊಂಡು ಕುಳಿತುಕೊಳ್ಳುವನು. ಅವನ ಭಾರಕ್ಕೆ ಮುರಿದುಹೋಗುವಷ್ಟು ಪುಸ್ತಕ ಲಾದ ಸಾಮಾನೇನೂ ಇರಲಿಲ್ಲ ಅಲ್ಲಿ. ಮನೆಯಲ್ಲಿ ಕೆಲಸಕ್ಕೆ ಬಾರದೆಂದು ಎಸೆಯಲ್ಪಟ್ಟ ವಸ್ತುಗಳೆಲ್ಲವೂ ಅವನ ಪೆಟ್ಟಿಗೆಗೆ ವಲಸೆ ಹೋಗುತ್ತಿದ್ದವು. ಪ್ರತಿ ಸಂಜೆಯೂ ಡೂಡು ಮನೆಯಸುತ್ತ ಒಂದು ಗಸ್ತು ಹೊಡೆಯುವನು.

ಸಾಮಾನಿನ’ ಸಂಗ್ರಹಣವೇ ಆ ಪರ್ಯಟನದ ಉದ್ದೇಶ. ಅಪ್ಪನ ಕೋಣೆಯಲ್ಲಿ ಮೇಜಿನ ಕೆಳಗಿದ್ದ ಬುಟ್ಟಿ ಇವನಿಗೆ ಅನೇಕ ಪದಾರ್ಥಗಳನ್ನು ಸರಬರಾಜು ಮಾಡುತ್ತಿತ್ತು. ಅಗಲಗಲವಾದ ಲಕೋಟೆಗಳು, ಬಣ್ಣ ಬಣ್ಣದ ಕ್ಯಾಟಲಾಗುಗಳು, ಕಣ್ಣು ಸೆಳೆಯುವಂಥ ಪುಸ್ತಕಗಳ ರಕ್ಷಾ ಪತ್ರಗಳು, ಬೇಕಾದಷ್ಟು ಕತ್ತೆಕಾಗದ, ಹುರಿ, ಟ್ವೈನ್‌ದಾರ ಇವಲ್ಲದೆ ಇನ್ನೂ ಏನೇನೋ ದೊಡ್ಡಣ್ಣನ ಕೊಠಡಿಯ ಕಿಟಕಿಯ ಹೊರಗೆ ಹೋದರೆ ಸಾಕು, ಗೋಲ್ಡ್ ಪ್ಲೇಕ್ ಸಿಗರೇಟಿನ ಹಳದಿಬಣ್ಣದ ಪ್ಯಾಕೆಟ್‌ಗಳು, ಹೊಳೆ ಹೊಳೆಯುವ ಸಿಗರೇಟ್ ಬೆಳ್ಳಿ, ಬೇಡುಗಳು, ರಟ್ಟಿನ ಡಬ್ಬಿಗಳು ಮೊದಲಾದುವೆ ಸಿಗುತ್ತಿದ್ದುವು. ಅಕ್ಕ ಮನೆಯಲಿಲ್ಲದ ಸಮಯ ಕಾದು ಡೂಡುವು ಅವಳ ಪೆಟ್ಟಿಗೆಗೆ ಮುತ್ತಿಗೆ ಹಾಕಿ ಬಣ್ಣದ ದಾರಗಳನ್ನೂ, ಟ್ರೇಸ್ ಕಾಗದವನ್ನೂ ಕೊಳ್ಳೆ ಹೊಡೆಯುತ್ತಿದ್ದ.

ಹೀಗೆ ದಿನದಿನವೂ ಅವನ ಪೆಟ್ಟಿಗೆಯ ಆಸ್ತಿ ಅಧಿಕವಾಗುತ್ತ ಹೋಗುತಿತ್ತು. ಮನೆಯಲ್ಲಿ ಎಲ್ಲ ಪೆಟ್ಟಿಗೆಗಳಿಗಿಂತ ಅವನ ಪೆಟ್ಟಿಗೆಯೇ ಭಾರಿಯದಾದರೂ ಪ್ರತಿವಾರದ ಕಡೆಯಲ್ಲೂ ಪೆಟ್ಟಿಗೆ ಭರ್ತಿಯಾಗಿ ಹೋಗಿ ವಸ್ತುಗಳು ಹೊರಗೆ ಕೂಡ ಚೆಲ್ಲತೊಡಗುತ್ತಿದ್ದುವು. ಭಂಡಾರ ಇನ್ನೂ ಬೆಳೆದು ಪೆಟ್ಟಿಗೆಗೂ ಗೋಡೆಗೂ ನಡುವೆ ಇದ್ದ ಪ್ರದೇಶವನ್ನು ಆಕ್ರಮಿಸಿಕೊಂಡ, ಸ್ವಲ್ಪ ದೂರದಲ್ಲಿದ್ದ ಕೋಟ್ ಸ್ಟ್ಯಾ೦ಡ ಹತ್ತಿರದವರೆಗೆ ಹಬ್ಬುವಂತಾದಾಗ ಅಪ್ಪನ ದೃಷ್ಟಿ ಅದರ ಕಡೆ ಸುಳಿಯುತ್ತಿತ್ತು. ಅಪ್ಪನ ದೃಷ್ಟಿ ಸುಳಿಯಿತೆಂದರೆ ಡೂಡುವಿಗೆ ಬಹಳ ದುಃಖ ಏಕೆಂದರೆ ಹಾಗಾದಾಗಲೆಲ್ಲ ಅವನ ಪೆಟ್ಟಿಗೆ ಬರಿದಾಗುತ್ತಿತ್ತು. ಅವನ ಐಶ್ವರ್ಯವೆಲ್ಲ ಮನೆಯ ಹಿಂದಿನ ಗಲ್ಲಿಯ ಕಸವಾಗಿ ಮಾರ್ಪಡುತ್ತಿತ್ತು. ಅಪ್ಪ ಬೆನ್ನು ತಿರುಗಿಸಿದರೆಂದರೆ, ಡೂಡು ಚಂಗನೆ ನೆಗೆದು ಕಾಂಪೌಂಡನ್ನು ಬಳಸಿ ಗಲ್ಲಿಯೊಳಕ್ಕೆ ಓಡಿ ಹೋಗಿ, ತನಗೆ ಯಾವುದು ಅತಿ ಮುಖ್ಯ, ಅಗಲಿರಲು ಅಸಾಧ್ಯ ಎಂದು ತೋರುತ್ತಿತ್ತೋ ಅದನ್ನೆಲ್ಲ ಮತ್ತೆ ಆರಿಸಿಕೊಂಡು ಬರುತ್ತಿದ್ದ. ಎದೆ ಯೊಡೆದು ಒಂದು ಇಡೀ ಗಂಟೆಯಕಾಲ ಮೂಲೆಯಲ್ಲಿ ಕುಳಿತಿರುತ್ತಿದ್ದ. ಆದರೇನಂತೆ? ಅಪ್ಪನಿಗೆ ನಿತ್ಯವೂ ಪೋಸ್ಟು ಬಂದೇ ಬರುತ್ತಿತ್ತು; ಅಕ್ಕ ಡಿ. ಎಂ. ಸಿ ದಾರ ಕೊಂಡುಕೊಳ್ಳುತ್ತಲೇ ಇದ್ದಳು; ದೊಡ್ಡಣ್ಣನಂತೂ ಸಿಗರೇಟಿನ ಭಕ್ತ. ಡೂಡು ತನ್ನ ಪೆಟ್ಟಿಗೆಯಲ್ಲಿ ಕುಳಿತು, ದುಡ್ಡು ಸಂಪಾದಿಸುವುದಕ್ಕೇನು ಮಾರ್ಗಗಳುಂಟು ಎಂದು ಚಿಂತಿಸುತ್ತಿದ್ದ. ಹಿಂದೊಂದು ಸಲ ಮಾಡಿದ್ದಂತೆ ಮತ್ತೆ ವ್ಯಾಪಾರೋದ್ಯಮವನ್ನು ಕೈಗೊಳ್ಳುವುದು ಸಾಧುವೇ ಎಂಬ ಪ್ರಶ್ನೆಯನ್ನು ವಿಚಾರ ಮಾಡಿ ನೋಡಿದ. ಸೋದರ ಮಾವ ಮಾದರಾಸಿನಿಂದ ಬಂದಾಗ ಡೂಡುವಿಗೆ ಒಂದು ರೂಪಾಯಿ ಕೊಟ್ಟಿದ್ದರು. ರೂಪಾಯನ್ನು ತೆಗೆದುಕೊಂಡು ಡೂಡು ಪೋಸ್ಟ್ ಆಫೀಸಿಗೆ ಹೋಗಿ ಹನ್ನೆರಡು ಬೂದು ಬಣ್ಣದ ಸ್ಟಾಂಪುಗಳು, ನಾಲ್ಕು ಹಸುರು ಸ್ಟಾಂಪು, ನಾಲ್ಕು ಪೋಸ್ಟ್ ಕಾರ್ಡು ಕೊಂಡುಕೊಂಡು ಬಂದಿದ್ದ. ಕೋಳಿ ಕರೆದಂತಿದ್ದ ತನ್ನ ಅಕ್ಷರದಲ್ಲಿ “ಸ್ಟಾಂಪುಗಳು ಮಾರಲ್ಪಡುತ್ತವೆ” ಎಂಬುದಾಗಿ ಒಂದು ರಟ್ಟಿನ ಮೇಲೆ ಬರೆದು ಪಕ್ಕದ ಬೀದಿಗೆ ಕಾಣುವಂತೆ ತನ್ನ ಕೋಣೆಯ ಕೊಠಡಿಯ ಹೊರಗೆ ತಗಲುಹಾಕಿದ. ಅವನ ಗಿರಾಕಿಗಳೆಂದರೆ ಮನೆಯಲ್ಲಿ ಹಿರಿಯರು (ಅಪ್ಪನನ್ನು ಮಾತ್ರ ಬಿಟ್ಟು), ತನ್ನ ಸರಕನ್ನು ಕೊಳ್ಳುವುದರಲ್ಲಿ ಅವರು ತೋರಿಸಿದ ವೇಗವನ್ನು ಕಂಡು ಡೂಡುವಿಗೆ ವಿಸ್ಮಯವಾಯಿತು. ಪ್ರತಿ ಸಾಮಾನಿನ ಮೇಲೂ ಮೂರುಕಾಸು ಲಾಭವನ್ನಿಟ್ಟು ಮಾರಿದ. ಗಿರಾಕಿಗಳು ಚೌಕಾಸಿ ಮಾಡದೆಯೇ ಕೊಂಡು ಕೊಂಡರು. ಒಂದೇ ಒಂದು ಕಾರ್ಡು ಮಿಕ್ಕಿತ್ತು. ಅದನ್ನು ಕೊಳ್ಳಲು ಪಕ್ಕದ ಮನೆಯಾತ ಬಂದ. ಡೂಡು ಬೆಲೆ ಹೇಳಿದ, ಆತನಿಗೆ ವಿಪರೀತ ಸಿಟ್ಟು ಬಂತು, ಹುಚ್ಚು ಹಿಡಿದವನಂತೆ ಕೂಗಾಡಿ, ಪೋಲೀಸಿನವರಿಗೆ ಫಿರ್ಯಾದು ಕೊಡುವೆನೆಂದು ಗಲಾಟೆ ಮಾಡಿಬಿಟ್ಟ. ಡೂಡುವಿಗೆ ಬಹಳ ದಿಗಿಲಾಯಿತು, ಆದರೂ, ಲಾಭಕ್ಕಲ್ಲದೆ ಹೋದರೆ ಮತ್ತೇಕೆ ತಾನು ಸ್ಟಾಂಪು ಕಾರ್ಡು ಮಾರಬೇಕು, ನೀವೇ ಹೇಳಿ, ಎಂದು ಕೇಳುವಷ್ಟು ದೈರ್ಯಮಾಡಿದ, ಕಡೆಗೆ ಆ ಗಲಾಟೆ ಆಸಾಮಿಯ ಬಾಯಿ ಮುಚ್ಚಿಸುವುದಕ್ಕಾಗಿ ಬಿಟ್ಟಿಯಾಗಿಯೇ ಕಾರ್ಡನ್ನು ಕೊಡಬೇಕಾಗಿ ಬಂತು. ರೂಪಾಯಿಗೆ ಸ್ವಾಂಪು ಕಾರ್ಡು ಕೊಂಡು ಲಾಭಕ್ಕೆ ಮಾರಿ, ಅಸಲನ್ನು ಮತ್ತೆ ಸ್ಟಾಂಪುಗಳ ಮೇಲೆ ವಿನಿಯೋಗಿಸಿ, ಬಂದ ಲಾಭವನ್ನು ಮನಸೋಯಿಚ್ಛೆಯಾಗಿ ಖರ್ಚುಮಾಡಬಹುದೆಂದು ಡೂಡು ಕಾಣುತ್ತಿದ್ದ ಕನಸೆಲ್ಲ ಒಡೆದು ಚೂರುಚೂರಾಯಿತು. ಲಾಭ ಬರುವುದು ಹೋಗಲಿ, ಅಸಲು ಕೂಡ ಗಿಟ್ಟಲಿಲ್ಲ. ಜೇಬಿನ ಮೂಲಕ ನುಸಿದುಹೋಯಿತೆನ್ನೋಣವೆಂದರೆ ಜೇಬಿನಲ್ಲಿ ಯಾವ ತೂತೂ ಇರಲಿಲ್ಲ. ಹೇಗೋ ಏನೋ ಆವಿಯಾಗಿ ಮಾಯವಾಯಿತು: ಹೊಗೆಯಾಗಿ ಹೊರಟು ಹೋಯಿತು. ಅದು ಹೇಗಿರಬಹುದು?…. ಮನೆಯ ಹಿರಿಯರು ನಗದು ಕೊಟ್ಟು ಕೊಂಡು ಕೊಂಡಿರಲಿಲ್ಲ; ಸಾಲದ ಮೇಲೆ. ಆದರೆ ಸಾಲ ತೀರಿಸುವುದನ್ನು ಮಾತ್ರ ಮುಂದುವರಿಸುತ್ತಿದ್ದರು. ಯಾವಾಗ ಕೇಳಲಿ ‘ಚಿಲ್ಲರೆ ಯಿಲ್ಲ’ ‘ಚಿಲ್ಲರೆ ಯಿಲ್ಲ’. ಡೂಡು ಈ ವ್ಯವಹಾರವನ್ನೆಲ್ಲ ಮರೆತೇ ಬಿಟ್ಟು ಸುಮ್ಮನಾದನು. ಆದರೆ ಒಂದು ಮಧ್ಯಾಹ್ನ ಯಾರೋ ಮನೆಯೊಳಕ್ಕೆ ಬಂದು ಹದಿನಾರು ಕಾರ್ಡು ಅರ್ಧಾಣೇ ಸ್ಟಾಂಪು ಹತ್ತು ಕೊಡಿ ಎಂದು ಕೇಳಿದರು, ಅಪ್ಪನಿಗೆ ತುಂಬ ಆಶ್ಚರ್ಯವಾಯಿತು. ಈ ದೃಶ್ಯವನ್ನೆಲ್ಲ ಬಾಗಿಲ ಹಿಂದೆ ಬಚ್ಚಿಟ್ಟು ಕೊಂಡು ನೋಡುತ್ತಿದ್ದ ಡೂಡುವಿನ ಮುಖ ಬಿಳುಪೇರಿತು. ‘ನಿಮ್ಮ ಹಾದಿ ಹಿಡಿದು ನೀವು ಹೋಗಬಹುದು’ ಎಂದು ಅಪ್ಪ ಹೇಳಿದರು. ಅದಕ್ಕೆ ಆತ “ಖಂಡಿತ ಆಗಬಹುದು ಸ್ವಾಮಿ; ಕಿಟಕಿ ಹೊರಗಡೆ ಬೋರ್ಡು ಹಾಕಿಕೊಂಡಿದ್ದಿರಿ, ಬಂದೆ, ಇಲ್ಲದಿದ್ದರೆ ನನಗೇನು ಕೆಲಸ ಇಲ್ಲಿ?” ಎಂದು ಹೇಳಿ ಹೊರಟುಹೋದರು. ಅಪ್ಪ ಬಂದು ನೋಡಿ, ರಟ್ಟನ್ನು ಕಿತ್ತು ಹರಿದುಹಾಕಿ, ಕಾಲಿಂದ ತುಳಿದು, ಡೂಡುವನ್ನು ಕೂಗಿ ರೇಗಾಡಿದರು, ತನ್ನ ಅಂಗಡಿಯನ್ನು ಮುಚ್ಚಿದ ಮೇಲೆ “ಸ್ಟಾಂಪುಗಳು ಮಾರಲ್ಪಡುತ್ತವೆ” ಎಂಬ ಬೋರ್ಡನ್ನು ತೆಗೆಯುವುದನ್ನು ಡೂಡು ಮರೆತುಬಿಟ್ಟಿದ್ದ. ಅದೇ ಕೊನೆಯಾಯಿತು ಅವನ ವ್ಯಾಪಾರೋದ್ಯಮಕ್ಕೆ.

ಸರಿ. ಪೆಟ್ಟಿಗೆಯಲ್ಲಿ ಕೂತುಕೊಂಡು ಡೂಡು ತನ್ನ ಹಿಂದಿನ ಅನುಭವಗಳಿಂದ ಕಲಿತ ಪಾಠಗಳನ್ನೆಲ್ಲ ಲೆಕ್ಕ ಮಾಡುತ್ತಿದ್ದ. ಪಾಠ ಒಂದು, ಹಿರಿಯರಿಂದ ಸಹಾಯವೇ ಆಗಲಿ, ಸಹಾನುಭೂತಿಯೇ ಆಗಲಿ ಸಿಗುವುದಿಲ್ಲ. ಪಾಠ ಎರಡು-ಸೋದರಮಾವ ಮತ್ತೊಮ್ಮೆ ಒಂದು ರೂಪಾಯಿ ಕೊಟ್ಟರೆ, ಈ ಬಗೆಯ ಮುಠಾ ಯೋಜನೆಗಳಿಗೆ ಅದನ್ನು ಖರ್ಚುಮಾಡಬಾರದು. ಸ್ಟಾಂಪುಗಳನ್ನು ಕೊಳ್ಳುವುದೂ ಮಾರುವುದೂ ಹುಚ್ಚು ಕೆಲಸ. ಕೊಳ್ಳುವುದೇನೋ ಸರಿಯಾಗಿಯೇ ಇರುತ್ತಿತ್ತು. ಆದರೆ ಮಾರುವುದು ಇದೆಯಲ್ಲಾ ಅದನ್ನು ಮಾರುವುದೆಂದೇ ಕರೆಯಕೂಡದು. ಧರ್ಮಕ್ಕೆ ಕೊಟ್ಟ ಹಾಗೆ ಆಗಿತ್ತು….. ಡೂಡು ಕಿಟಕಿಯಿಂದ ಹೊರಗಡೆ ನೋಡಿದ. ಒಬ್ಬ ಮನುಷ್ಯ ತೆಂಗಿನಮರ ಹತ್ತುತ್ತಿದ್ದ. ಮರದ ಸುಳಿಯಲ್ಲಿದ್ದ ಹುಳುಗಳನ್ನು ಕಿತ್ತು ಹಾಕಿ ದುಡ್ಡು ಸಂಪಾದಿಸುವುದೇ ಆ ಮನುಷ್ಯನ ಕಸಬು.

ಡೂಡು ಪೆಟ್ಟಿಗೆಯಿಂದ ಹೊರಕ್ಕೆ ತೆಗೆದು ತೆಂಗಿನಮರದ ಹತ್ತಿರಕ್ಕೆ ಓಡಿದ.

“ಅಯ್ಯಾ, ನಿನಗೆ ನಿತ್ಯವೂ ಎಷ್ಟು ದುಡ್ಡು ಬರುತ್ತಯ್ಯಾ?” ಎಂದು ಕೇಳಿದ ಮೇಲುಗಡೆ ನೋಡುತ್ತ.

“ಎರಡು ರೂಪಾಯಿ” ಕೂಲಿಯವನು ಮರದ ಮೇಲಿಂದ ಉತ್ತರವಿತ್ತ.

“ಎರಡು ರೂಪಾಯಿ! ಹಾಗಾದರೆ ಬೇಕಾದಷ್ಟು ದುಡ್ಡು ಮಾಡ್ತಾ ಇರಬೇಕು ನೀನು! ತುಂಬ ಹೆಚ್ಚಲ್ಲವೆ ನಿನಗೆ ಬರೋ ದುಡ್ಡು?”

ಕೂಲಿಯವನು ನಕ್ಕು, ಮನೆಯಲ್ಲಿದ್ದ ಹೆಂಡತಿ ಮಕ್ಕಳ ವಿಷಯ ಏನೋ ಹೇಳಿದ. ಡೂಡುವಿಗೆ ಈ ಮೊಬಲಗು ಅಗಾಧವಾಗಿ ಕಂಡಿತು. ಅಷ್ಟು ದುಡ್ಡಿದ್ದರೆ ಏನು ತಾನೇ ಕೊಳ್ಳುವುದಕ್ಕಾಗುವುದಿಲ್ಲ! ಆಕಾಶಕ್ಕೆ ತಗಲುವಷ್ಟು ಎತ್ತರ ಪಟಾಕಿಗಳ ರಾಸಿ ಹಾಕಬಹುದು, ಪೆಟ್ಟಿಗೆ ಪೆಟ್ಟಿಗೆಗಳ ಭರ್ತಿ ಪೆನ್ಸಿಲ್‌ಗಳು ಪೆಪ್ಪರಮಿಂಟುಗಳು ತುಂಬಬಹುದು.

“ನಾನೂ ಸಂಪಾದಿಸುವುದಕ್ಕಾಗುತ್ತೆಯಾ?” ಎಂದು ಕೇಳಿದೆ ಡೂಡು.
“ಓಹೋ ! ಆಗದೆ ಏನಂತೆ ?”

ಆದರೆ ತೆಂಗಿನಮರ ಎಷ್ಟು ಎತ್ತರವಾಗಿರುತ್ತದೆ! ಅದರ ತುದಿಯಲ್ಲೇನೋ ಎರಡು ರೂಪಾಯಿ ಸಿಗುತ್ತದೆ. ಆದರೆ ಹತ್ತಿ ಹೋಗುವುದು ಹೇಗೆ?

“ಅಯ್ಯಾ, ಕೂಲಿಯವನೆ, ಆ ಹುಳು ಕೆಳಗಡೆಯೆಲ್ಲ ಸಿಗೊಲ್ಲವೆ ? ಮರಾನ ಹತ್ತಿಯೇ ಹೋಗಬೇಕೇ?” ಎಂದು ಕೇಳಿದ ಡೂಡು.

ಹೌದು. ಮರದ ತುದೀಲಿ ಮಾತ್ರವೇ ಆ ಹುಳು ಇರೋದು. ಆ ಹುಳು ಚಿಗುರನ್ನೆಲ್ಲ ತಿಂದುಹಾಕುತ್ತೆ. ಅದನ್ನು ಹುಡುಕಿ ಕಿತ್ತು ಹಾಕೋದೇ ನನ್ನ ಕಸಬು, ಮರಕ್ಕೆ ಎರಡಾಣೆಕೊಡ್ತಾರೆ ನಂಗೆ “ಒಂದೆರಡು ಎಳೆಯ ಎಲೆಗಳನ್ನು ಕಿತ್ತು ಕೂಲಿಯವನು ಕೆಳಕ್ಕೆ ಬಿಸಾಕಿದ. ಡೂಡು ಒಂದನ್ನು ಎತ್ತಿಕೊಂಡ. ಎಷ್ಟು ಚೆನ್ನಾಗಿತ್ತು! ಎಳೆಯದಾಗಿ ಹಳದಿಯಾಗಿ, ಉದ್ದವಾಗಿ, ಎಷ್ಟು ಹೊಳೆಯುತ್ತಿತ್ತು! ಅದರ ಮೇಲೆ ಡೂಡು ತನ್ನ ಉಗುರಿನಿಂದ ಸ್ವಲ್ಪ ಕೆರೆದ, ಗುರುತಾಯಿತು, ಸ್ಪಷ್ಟವಾಗಿ ಗುರುತಾಯಿತು. ಕೊಂಚ ಹೊತ್ತಾದ ಮೇಲೆ ಗುರುತು ಕೆಂಪುಬಣ್ಣಕ್ಕೆ ತಿರುಗಿತು. ಇನ್ನೊಂದು ಎಲೆಯನ್ನು ಎತ್ತಿಕೊಂಡು ಅದರ ಮೇಲೆ ತನ್ನ ಹೆಸರನ್ನು ಬರೆದ. ವ್ವಾ! ಎಷ್ಟು ಅದ್ಭುತವಾಗಿತ್ತು! ಅವನಿಗೊಂದು ಯೋಚನೆ ಹೊಳೆಯಿತು. ದೊಡ್ಡಣ್ಣ ಅಮ್ಮನಿಗೆ ಹೇಳುತ್ತಿದ್ದ ಸಂಗತಿ ಜ್ಞಾಪಕವಾಯಿತು. ದೊಡ್ಡಣ್ಣನ ಸ್ನೇಹಿತರು ಯಾರೋ, ಯಾವುದೋ ಲೈಬ್ರರಿಗೆ ತಾಳೆಗರಿಯೊಂದನ್ನು ತೆಗೆದುಕೊಂಡು ಹೋದರಂತೆ. ಅದರ ಮೇಲೆ ಏನೋ ಬರೆದಿದ್ದರಂತೆ. ಲೈಬ್ರರಿಯವರು ದುಡ್ಡು ಕೊಟ್ಟರಂತೆ …. ದುಡ್ಡಿದೆಯಯ್ಯಾ ತಾಳೆಗರೀಲಿ!

ಮಾರನೆಯ ದಿನ ಬೆಳಿಗ್ಗೆ ಯಾವುದೋ ಮಾತೆತ್ತಿಕೊಂಡು ಡೂಡು ದೊಡ್ಡಣ್ಣನನ್ನು ತಾಳೆಯ ಗರಿಯ ವಿಷಯ ವಿಚಾರಿಸಿದ. ಕತೆ ಹೊರ ಬಿತ್ತು. ಆರ್ಕಿಯಾಲಜಿ ಡೈರೆಕ್ಟರಾದ ಡಾಕ್ಟರ್ ಐಯ್ಯಂಗಾರ್ಯರು ದೊಡ್ಡಣ್ಣನ ಸ್ನೇಹಿತರಿಂದ ತಾಳೆಗರಿಯ ಮೇಲೆ ಬರೆದಿದ್ದಂಥ ಒಂದು ಇತಿಹಾಸದ ಗ್ರಂಥವನ್ನು ಕೊಂಡುಕೊಂಡರಂತೆ, ಓರಿಯೆಂಟಲ್ ಲೈಬ್ರರಿ ಗಾಗಿ, ಡೈರೆಕ್ಟರ್ ಹೆಸರು ಲೈಬ್ರರಿ ಹೆಸರು ಬಂದಾಗ ಡೂಡು ಬಹಳ ಕಿವಿಗೊಟ್ಟು ಕೇಳಿದ.

ಆ ಮಧ್ಯಾಹ್ನ ಡೂಡು ಲೈಬ್ರರಿಯ ದಾರಿ ಕಂಡುಕೊಂಡು ಅಲ್ಲಿಗೆ ಹೋದ. ಪಟಾಕಿ ಮತಾಪುಗಳಿಗೆ ಲೇಶವಾದರೂ ಅಭಾವವಿಲ್ಲದಂಥ ದೀಪಾವಳಿಯ ಚಿತ್ರ ಅವನ ಕಣ್ಣ ಮುಂದೆ ಕುಣಿಯುತ್ತಿತ್ತು.

ಆ ಹಳದಿ ಕಟ್ಟಡ, ಅದರ ಭಾರಿ ಗೋಪುರ-ಅವನ್ನು ನೋಡಿ ಡೂಡುವಿಗೆ ಸ್ವಲ್ಪ ಭಯವಾಯಿತು. ಒಳಕ್ಕೆ ಹೋಗುವುದಕ್ಕೆ ಬಿಡುತ್ತಾರೋ ಇಲ್ಲವೋ ಎಂದು ಅವನಿಗೆ ಶಂಕೆಯಾಯಿತು. ಒಂದು ಬಾಗಿಲ ಹೊರಗೆ ಒಬ್ಬ ಜವಾನನು ಮೊಣಕಾಲು ಮುದುರಿಕೊಂಡು, ಅದರ ಮೇಲೆ ತಲೆಯಿಟ್ಟುಕೊಂಡು ತೂಕಡಿಸುತ್ತಿದ್ದ. ಡೂಡು ಭಯಭಕ್ತಿಯಿಂದ “ಸಾಹೇಬರನ್ನು ನೋಡೋಕೆ ಬಂದಿದ್ದೇನೆ, ಬಹಳ ಅರ್ಜೆಂಟ್ ಕೆಲಸ ಇದೆ” ಎಂದು ಹೇಳಿದ. ಆದರೆ ಜವಾನ ಕಿವಿಯ ಮೇಲೆಯೇ ಹಾಕಿಕೊಳ್ಳಲಿಲ್ಲ. ಅವನಿಗೆ ತುಂಬ ನಿದ್ದೆ.

ಡೂಡು ಕಟ್ಟಡದೊಳಕ್ಕೆ ಹೋದ. ಅಷ್ಟು ದೊಡ್ಡ ಕಟ್ಟಡಕ್ಕೆ ತಾನು ತೀರ ಚಿಕ್ಕವನು ಎನಿಸಿತು ಅವನಿಗೆ. ಎಲ್ಲವೂ ಭಾರಿ ಭಾರಿಯಾಗಿ ಕಾಣುತ್ತಿವೆ! ಎಲ್ಲಿ ನೋಡಲಿ ಕಲ್ಲಿನ ಪ್ರತಿಮೆಗಳು, ಕಲ್ಲಿನ ಹಲಗೆಗಳು, ಅದರ ತುಂಬ ಏನೇನೋ ಕೊರೆತಗಳು ಕಣ್ಣು ಚುಚ್ಚುವಂಥ ಬಣ್ಣಗಳ ಸರಿಗೆ ಶಾಲುಗಳನ್ನು ಹೊದುಕೊಂಡು ಹತ್ತಾರು ಜನ ಪಂಡಿತರು ತಾಳೆಯೆಲೆಗಳನ್ನು ನೋಡುವುದರಲ್ಲೇ ಮಗ್ನರಾಗಿದ್ದರು. ಅಲ್ಲಿಂದ ಕಂಬಿ ಕೀಳುವದೇ ವಾಸಿ ಎಂದು ಸ್ವಾಮಿಗೆ ತೋರಿತು. ಆಷ್ಟು ಭಯಹುಟ್ಟಿಸುವಂತಿತ್ತು ಪ್ರತಿಯೊಂದೂ ಅಲ್ಲಿ. ಎದೆಯ ಬಡಿತಕ್ಕೆ ಹಜಾರವೆಲ್ಲ ಮರುದನಿ ಕೊಡುತ್ತಿದೆಯೇನೋ ಎನ್ನಿಸಿತು.

ಆದರೆ ಸ್ವಾಮಿ ಸೋಲಲಿಲ್ಲ. ಇದ್ದ ಧೈರ್ಯವನ್ನೆಲ್ಲ ಕೂಡಿಸಿಕೊಂಡು ಒಂದು ಭಾರಿ ಮೇಜಿನ ಹತ್ತಿರ ಹೋದ. ಅದರಾಚೆ ಒಬ್ಬ ಮಹಾವ್ಯಕ್ತಿ, ಕನ್ನಡಕ, ಜರತಾರಿ ಪೇಟ ಎಲ್ಲ ಹಾಕಿಕೊಂಡವರು, ಕುರ್ಚಿಯಲ್ಲಿ ಕುಳಿತಿದ್ದರು.

“ಸಾರ್” ಎಂದ ಡೂಡು ಬಹಳ ಗೌರವದಿಂದ. ಆ ಅತಿಶಯವಾದ ಗೌರವದಲ್ಲಿ ಅವನ ಮಾತು ಮೌನದ ಮೇರೆಯನ್ನು ಕೂಡ ಮೀರಲಿಲ್ಲ. ಮಹಾವ್ಯಕ್ತಿಗೆ ಕೇಳಿಸಲಿಲ್ಲ.

“ಸಾರ್” ಎಂದು ಡೂಡು ಇನ್ನೊಂದು ಸಲ ಕರೆದ. ಹಿಂದಿನ ಸಲಕ್ಕೆ ಪರಿಹಾರ ಮಾಡುವುದಕ್ಕೋ ಎಂಬಂತೆ ಈಸಲ ಆವನ ಗಂಟಲು ತೀರ ದೊಡ್ಡದಾಗಿಬಿಟ್ಟಿತ್ತು. ಡೂಡುವಿಗೆ ತುಂಬ ಅವಮಾನವಾಗಿ ಹೋಯಿತು.

ಮಹಾವ್ಯಕ್ತಿ ಈ ಸದ್ದನ್ನು ಕೇಳಿ ಬೆಚ್ಚಿಬಿದ್ದು, ಸುತ್ತಲೂ ನೋಡಿದರು ಆ ‘ಸಾರ್’ ಎಲ್ಲಿಂದ ಬಂತು ತಿಳಿದುಕೊಳ್ಳುವುದಕ್ಕಾಗಿ.

“ನೀವು ಡಾಕ್ಟರೇ?” ಎಂದು ಕೇಳಿತು ಆ ದನಿ. ದೇಹರಹಿತವಾದ ಈ ದನಿ ಎಲ್ಲಿಂದ ಬಂತೆಂದು ತಿಳಿಯದೆ ಮಹಾವ್ಯಕ್ತಿಗೆ ದೊಡ್ಡ ಒಗಟಾಯಿತು. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ, ಮೇಜಿನ ಇನ್ನೊಂದು ಅಂಚಿನಲ್ಲಿ ಮೇಜಿನ ಮಟ್ಟಕ್ಕೆ ಸರಿಯಾಗಿ ಯಾವುದೋ ಒಂದು ಪುಟ್ಟ ಕ್ರಾಪು ಕಾಣಿಸಿತು. ಮಹಾವ್ಯಕ್ತಿ ಕುರ್‍ಚಿಯನ್ನು ಹಿಂದಕ್ಕೆ ನೂಕಿ ಎದ್ದು ನಿಂತರು. ಒಬ್ಬ ಚಿಕ್ಕ ಹುಡುಗ, ಕೊಳೆಯಾದ ಕೋಟು, ಮೋಟು ಚೆಡ್ಡಿ ಹಾಕಿದ ಪುಟ್ಟ ಪೋರ, ಮೇಜಿನ ಆ ಕಡೆ ನಿಂತಿರುವುದನ್ನು ಕಂಡು ಆತನಿಗೆ ತುಂಬ ಸೋಜಿಗವಾಯಿತು.

“ಏನು ಮಾಡ್ತಾ ಇದ್ದೀಯಯ್ಯಾ ಇಲ್ಲಿ?” ಎಂದು ಕೇಳಿದರು.

“ನಾನು ಒಬ್ಬರು ಡಾಕ್ಟರನ್ನು ನೋಡೋಕೆ ಬಂದಿದ್ದೀನಿ…..ನೀವು ಡಾಕ್ಟರಾ?” ಎಂದ ಡೂಡು.

“ಹೌದು. ನೀನು ಯಾರು?” ಡೂಡು ಕುರ್‍ಚಿಯನ್ನು ಹತ್ತಿ ಅದರ ಮೇಲೆ ನಿಂತುಕೊಂಡ.

“ನೀವು ಡಾಕ್ಟರಾದರೆ, ನಿಮಗೆ ಬೇಕಾದಂಥ ಸಾಮಾನು ತಂದಿದ್ದೀನಿ. ಓಲೆಗರಿಯ ಮೇಲೆ ಏನಾದರೂ ಬರೆದಿರೋ ಅಂಥಾದ್ದು ಸಿಕ್ಕಿದರೆ ತುಂಬ ದುಡ್ಡು ಕೊಡ್ತೀರಂತೆ ನೀವು. ಯಾರೋ ಹೇಳಿದರು. ಅಂಥಾದ್ದಕ್ಕೆ ನಾನೂರು ಐನೂರು ರೂಪಾಯಿ ಕೂಡ ಕೊಡ್ತೀರಂತೆ.” ಎಂದು ಹೇಳಿ ಡೂಡು ತನ್ನ ಜೇಬಿಂದ ಮುದುರಿದ ಕೆಲವು ಎಲೆಗಳ ಚೆಂಡೊಂದನ್ನು ತೆಗೆದು ಡಾಕ್ಟರಿಗೆ ಕೊಟ್ಟನು. ಕೆಲಸ ಮಾಡಿ ಮಾಡಿ ಬೇಸರವಾಗಿದ ಡಾಕ್ಟರಿಗೆ ಈ ರೀತಿಯ ಅವಕಾಶ ಸಿಕ್ಕಿದರೆ ಸಾಕೆನಿಸಿತ್ತು. ಬಹಳ ಕುತೂಹಲದಿಂದ ಗರಿಗಳನ್ನು ಪರೀಕ್ಷಿಸಿದರು. ಒಂದರ ಮೇಲೆ ಒಂದು ಹೂಜಿ, ಒಂದು ಮೂಗು, ಒಂದು ಕುದುರೆ ಇವುಗಳ ಚಿತ್ರ ಜೊತೆಗೆ ‘ಡೂಡು’ ಎಂಬ ಹೆಸರು ಇಷ್ಟೂ ಇದ್ದುವು. ಇನ್ನೊಂದು ಗರಿಯಮೇಲೆ ಈ ಕೆಲವು ಸ್ವಾರಸ್ಯವಾದ ಘೋಷಣೆಗಳಿದ್ದುವು ; “ಹಸುವು ಸಾಧುವಾದ ಪ್ರಾಣಿ. ಇದು ರಾಮನ ಪುಸ್ತಕ”…….. ಹಳೆಯ ಕನ್ನಡ ಬಾಲಬೋಧೆಯಿಂದ ಆರಿಸಿದ ವಾಕ್ಯಗಳವು. ಮೂರನೆಯದರ ಮೇಲೆ ಇಂಗ್ಲಿಷಿನಲ್ಲಿ ಈ ರೀತಿ ಬರೆದಿತ್ತು: ಕಾಟ್, ಆಕ್ಸ್, ಸಿಗ್, ಬೇರ್, ಬೇಬಿ, ಎ‌ಎ‌ಎ‌ಎ ಬಿ ಎಸ್ ಡಿಜಿಸಿ.”

ಈ ಉಲ್ಲೇಖಗಳನ್ನು ಬಿಡಿಸಿ ಓದುವುದು ಡಾಕ್ಟರಿಗೆ ಕಷ್ಟವಾಗಲಿಲ್ಲ. ನೂರಾರು ವರ್‍ಷಗಳ ಹಿಂದೆ ಬದುಕಿದ್ದ ಅರಸರು ಕಲ್ಲಿನಲ್ಲಿ, ತಾಮ್ರದ ತಗಡಿನಲ್ಲಿ, ಕೆತ್ತಿಸಿದ್ದ, ಇದಕ್ಕಿಂತ ಕಷ್ಟವಾದಂಥ ಶಾಸನಗಳನ್ನೆಲ್ಲ ಆತ ಬಿಡಿಸಿದ್ದರು. ಡೂಡುವಿನ ಕೈಬರೆಹ ದೊಡ್ಡದಾಗಿ, ಸೊಟ್ಟದಾಗಿ, ವಂಕಿ ವಂಕಿಯಾಗಿದ್ದರೂ ಕೂಡ ಇತ್ತೀಚಿನ ಕಾಲಕ್ಕೆ ಸೇರಿದುದೆಂದು ಕಂಡು ಹಿಡಿಯುವುದು ಅವರಿಗೆ ಕಷ್ಟವಾಗಲಿಲ್ಲ.

ಇದನ್ನು ಓದಿ ಮುಗಿಸಿದ ತಕ್ಷಣ ಆತ ಗಟ್ಟಿಯಾಗಿ ನಕ್ಕರು.

ಡೂಡುವಿಗೆ ಅಸಮಾಧಾನವಾಯಿತು. ತನ್ನನ್ನು ಕಂಡು ನಗುವುದಕ್ಕೆ ಈ ಡಾಕ್ಟರಿಗೇನು ಹಕ್ಕುಂಟು ಎಂದು ತನಗೆ ತಾನೇ ಹೇಳಿಕೊಂಡ. ತನಗೆ ತಾಳೆಗರಿ ಬೇಡದಿದ್ದರೆ ಕೊಟ್ಟುಬಿಡಬೇಕು ವಾಪಸ್ಸು. ಬೇರೆ ಯಾರಾದರೂ ಡಾಕ್ಟರಿಗೆ ಮಾರಿದರೆ ಆಯಿತು….. ಆದರೆ ಇದೊಂದನ್ನೂ ಗಟ್ಟಿಯಾಗಿ ಹೇಳಲಿಲ್ಲ.

“ಈ ತರಹದ ಸಾಮಾನುಗಳಿಗೆ ನಾನು ದುಡ್ಡು ಕೊಡ್ತೀನಿ ಅಂತ ಯಾರು ಹೇಳಿದರು ನಿನಗೆ?” ಎಂದು ಕೇಳಿದರು ಡಾಕ್ಟರು.

ದೊಡ್ಡಣ್ಣ ಹೇಳಿದ ಕತೆಯನ್ನು ಡೂಡು ಒಪ್ಪಿಸಿದ.

ಡಾಕ್ಟರ ಮುಖದಲ್ಲಿ ಮತ್ತೊಂದು ನಗು ಹೊಳೆಯಿತು. “ನೀನು ತುಂಬ ಜಾಣಹುಡುಗ, ನನಗೇನು ಬೇಕಾಗಿತ್ತೋ ಅದನ್ನೇ ತಂದಿದ್ದೀಯೆ. ನಾನು ಇದನ್ನು ಕೊಂಡುಕೊಳ್ಳುತ್ತೇನೆ” ಎಂದರು.

ಗರಿಗಳನ್ನು ತೆಗೆದುಕೊಂಡು, ತಮ್ಮ ಜೇಬಿನಲ್ಲಿದ್ದ ತಾಮ್ರದ ನಾಣ್ಯಗಳನ್ನೆಲ್ಲ ಎತ್ತಿ ಡೂಡುವಿಗೆ ಕೊಟ್ಟರು. ಸುಮಾರು ಆರಾಣೆಗಳಿರಬಹುದು. ಆದರೆ ತಾಮ್ರದ ನಾಣ್ಯಗಳಲ್ಲಿ ಆರಾಣೆಯೆಂದರೆ ತುಂಬ ಇದ್ದಂತೆ ಕಾಣುತ್ತೆ. ಡೂಡು ವಿಶೇಷ ತೃಪ್ತಿಯಿಂದ ಹಣವನ್ನು ಸ್ವೀಕರಿಸಿದ.

“ನೀನು ಯಾರ ಮಗನಪ್ಪಾ?” ಎಂದರು ಡಾಕ್ಟರು.

ಉತ್ತರ ಹೇಳಲು ಡೂಡುವಿಗೆ ಇಷ್ಟವಿರಲಿಲ್ಲ. ವ್ಯವಹಾರವೆಲ್ಲ ರಹಸ್ಯವಾಗಿರಬೇಕೆಂದು ಅವನ ಆಶಯ.

“ನಂಗೆ ಗೊತ್ತಿಲ್ಲ…….. ನಮ್ಮ ತಂದೆ ಯಾವುದೋ ಆಫೀಸಿಗೆ ಹೋಗ್ತಾರೆ” ಎಂದ ಏನೂ ತಿಳಿಯದವನಂತೆ.

“ನಿನ್ನ ಹೆಸರೇನು?”

ಡೂಡು ಕೊಂಚತಾಳಿ, “ರಾಮಸ್ವಾಮಿ” ಎಂದ. ಅದು ಸುಳ್ಳು. ಅವನ ನಿಜವಾದ ಹೆಸರು ಮನೆಯಲ್ಲಿ “ಡೂಡು” ಅಂತ, ಸ್ಕೂಲಲ್ಲಿ “ಲಕ್ಷ್ಮಣ” ಅಂತ.

“ಒಳ್ಳೆಯದಣ್ಣಾ, ರಾಮಸ್ವಾಮಿ, ಜೋಪಾನವಾಗಿ ಮನೆಗೆ ಹೋಗ್ತೀಯಾ? ಫುಟ್‌ಪಾತ್ ಮೇಲೆಯೇ ನಡೆದುಕೊಂಡು ಹೋಗು. ರೋಡಿನಲ್ಲಿ ತುಂಬ ಮೋಟಾರು ಬೈಸಿಕಲ್ಲು ಇರುತ್ತೆ” ಎಂದರು ಡಾಕ್ಟರು.

ಚಿರುತಿಂಡಿ ಮಾರುವ ಮುದುಕಿಯ ಮುಂದೆ ಕುಳಿತು, ಡೂಡು ಮೂರುಕಾಸಿನ ಕಡಲೇಕಾಯನ್ನು ಕೊಂಡುಕೊಂಡು ಜೇಬಿನೊಳಕ್ಕೆ ಇಳಿಯಬಿಟ್ಟು, ಇನ್ನೊಂದು ಮೂರುಕಾಸು ಕೊಟ್ಟು ಒಂದು ಪರಂಗಿ ಹಣ್ಣಿನ ಚೂರನ್ನು ಕೊಂಡುಕೊಂಡು ಅದನ್ನು ತಿಂದು ಮುಗಿಸಿದ. ನಡುಹಗಲಿನ ಕಡುಬಿಸಿಲಲ್ಲಿ ಎದುರಿಗಿದ್ದ ಹಸುರು ಮೈದಾನದಲ್ಲಿ ಹಸುಗಳು ಮೇಯುತ್ತಿದ್ದುವು. ಡೂಡು ಅವುಗಳನ್ನೇ ದಿಟ್ಟಿಸಿನೋಡಿದ. ಮನಸ್ಸಿನಲ್ಲಿ ಸಂತೋಷ ತುಂಬಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾರ್‌ಗಳು
Next post ಒಳಿತಾಗಲಿ

ಸಣ್ಣ ಕತೆ

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ತೊಳೆದ ಮುತ್ತು

  ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

 • ಏಕಾಂತದ ಆಲಾಪ

  ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…