ಒಳಿತಾಗಲಿ ಗುರು ಎಲ್ಲರಿಗೆ
ಒಳಿತಾಗಲಿ ಪ್ರಭು ಎಲ್ಲರಿಗೆ //ಪ//

ತಿಥಿಯೂಟಕೆ ಹಾತೊರೆಯುವ ಮಂದಿಗೆ
ಚಿತೆಯಲಿ ಬೀಡಿ ಹಚ್ಚುವ ಮಂದಿಗೆ
ಕಂಡವರ ಮನೆ ಜಂತೆಯ ಕಿತ್ತು
ಬಿಸಿ ಕಾಯಿಸಿಕೊಳ್ಳುವ ಈ ಮಂದಿಗೆ

ಏರುವವರ ಕಾಲೆಳೆಯುವ ಮಂದಿಗೆ
ನಡೆವವರಿಗೆ ತೊಡರ್‍ಗಾಲಿನ ಮಂದಿಗೆ
ಪರರ ಮಕ್ಕಳ ಬಾವಿಗೆ ತಳ್ಳಿ
ಆಳ ನೋಡುವ ಜಾಣ ಮಂದಿಗೆ

ಉಪ್ಪು ತಿಂದವ ನೀರು… ಕುಡಿಯಲೆಬೇಕು
ಭೂಮಿ ಗುಂಡಗಿದೆ ಎಲ್ಲ… ಸಿಗಲೆಬೇಕು
ಖೆಡ್ಡವ ತೋಡಿ ಆನೆಯ ಹಿಡಿದವ
ವೀರಪ್ಪನ್ ಆಗದೆ… ಬೇರೇನಾಗಬೇಕು?
*****