ಕುರ್ಚಿಯಲ್ಲಿ ಕುಬ್ಜನಾದ ಮನುಷ್ಯ

ಕುರ್ಚಿಯಲ್ಲಿ ಕುಬ್ಜನಾದ ಮನುಷ್ಯ

ಚುನಾವಣಾ ಹತ್ತಿರಕ್ಕೆ ಬರುತ್ತಿದೆ. ಕರ್ನಾಟಕದಲ್ಲಿ ಕುರ್ಚಿಯ ಕನಸು ಕಾಣುವ ರಾಜಕಾರಣಿಗಳು ಬಾಯ್ತುಂಬ ಮಾತಾಡ ತೊಡಗಿದ್ದಾರೆ. ಈಗಾಗಲೇ ಕುರ್ಚಿಯಲ್ಲಿ ಕೂತಿರುವವರು ಅದನ್ನು ಉಳಿಸಿಕೊಂಡು ಠಿಕಾಣಿ ಹೊಡೆಯುವ ಆಸೆ; ಅದಕ್ಕಾಗಿ ಹತ್ತಾರು ಹುನ್ನಾರಗಳು. ಕನಸು ಕಾಣುವ ಇತರರಿಗೆ ಕುರ್ಚಿಯ ನೆನಪೇ ಒಂದು ರೋಮಾಂಚನ. ಈಗ ಕುರ್ಚಿಯಲ್ಲಿ ಕೂತಿರುವವರ ವಿರುದ್ಧ ವಾಗ್ದಾನಗಳನ್ನು ಬಿಡುತ್ತ ಬತ್ತಳಿಕೆ ಬರಿದಾಗದಂತೆ ಎಚ್ಚರ ವಹಿಸುವ ಹುನ್ನಾರ ಇವರದು. ಹೀಗೆ ಎರಡು ಕಡೆಯವರ ಆಸೆ-ಆತಂಕಗಳ ನಡುವೆ ಕುರ್ಚಿ ಎತ್ತರೆತ್ತರಕ್ಕೆ ಬೆಳೆಯುತ್ತ ಇವರು ಏಣಿಗಾಗಿ ಹುಡುಕುವ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವರಿಗೆ ದೊಡ್ಡ ಕುರ್ಚಿಯೇನೂ ಬೇಕಿಲ್ಲ. ಸಣ್ಣ ಪುಟ್ಟ ಕುರ್ಚಿ ಸಿಕ್ಕಿದರೆ ಸಾಕು; ಅಷ್ಟರಲ್ಲಿ ಸಮಾಧಾನ ಪಡುವ ‘ಔದಾರ್ಯ’ವನ್ನು ತೋರಿಸಲು ಸಿದ್ಧ. ಒಟ್ಟಿನಲ್ಲಿ ಕುರ್ಚಿಯ ಕನಸು ತಿರುಕನ ಕನಸಾಗದಿರಲಿ ಎಂದು ಹರಕೆ ಹೊತ್ತು ಆಶ್ವಾಸನೆಗಳನ್ನು ಬಿತ್ತುವ ರಾಜಕಾರಣಿಗಳಿಗೆ ಈಗ ಬಿಡುವಿಲ್ಲದ ಬಾಯಿ.

ರಾಜಕಾರಣಿಗಳದು ಒಂದೇ ರೀತಿಯದಾದರೆ ಸ್ವತಃ ಕುರ್ಚಿ ಹತ್ತಲು ಅಸಾಧ್ಯವಾದ ಅಸಾಧಾರಣತ್ವವನ್ನು ಆರೋಪಿಸಿಕೊಂಡ ಕೆಲವು ಬುದ್ಧಿವಂತಿಗೆ ಇನ್ನೊಂದು ರೀತಿಯ ಕುರ್ಚಿ ಕನಸು ಬೀಳುತ್ತದೆ. ತಮ್ಮ ವಲಯದಲ್ಲಿ ಯಾರಿಗೆ ವಿಧಾನಪರಿಷತ್ತಿಗೆ ನಾಮಕರಣಗೊಳ್ಳುವ ಅವಕಾಶ ಲಭ್ಯವಾದೀತು. ಯಾರಿಗೆ ಯಾವ್ಯಾವ ಕುರ್ಚಿ ಸಿಕ್ಕೀತು ಎಂದು ಬೀದಿಬದಿಯ ಭವಿಷ್ಯಕಾರನಂತೆ ಗಿಳಿಶಾಸ್ತ್ರ ಹೇಳುತ್ತ ನಾಲಿಗೆ ತೀಟೆ ತೀರಿಸಿಕೊಳ್ಳುವ ಬುದ್ಧಿವಂತರಿಗೇನೂ ಕಡಿಮೆಯಿಲ್ಲ. ಯಾವುದಕ್ಕೂ ಪ್ರಯತ್ನ ಪಡದೆ ತಮ್ಮಾರಕ್ಕೆ ತಾವು ತೆಪ್ಪಗಿರುವವರ ಹೆಸರನ್ನು ಬೀದಿಗೆ ಎಳೆಯುತ್ತ ಕುರ್ಚಿಗೆ ಪ್ರಯತ್ನಿಸುತ್ತಿರುವವರ ಪಟ್ಟಿಗೆ ಸೇರಿಸಿ ವಿಕೃತ ಸಂತೋಷಪಡುವ ಇಂಥವರು ರಾಜಕಾರಣಿಗಳಿಗಿಂತ ಹೆಚ್ಚಾಗಿ ಕುರ್ಚಿ ಪ್ರಿಯರು. ತಮಗೆ ಸಿಕ್ಕದ ಕುರ್ಚಿಯಲ್ಲಿ, ಆಗದವರನ್ನು ಕೂಡಿಸಿ ಕೆಸರು ಎರಚುವ ಹುನ್ನಾರದಲ್ಲಿ ಖುಷಿ ಪಡುವ ಈ ಬುದ್ಧಿವಂತರು ದಕ್ಕದ ದ್ರಾಕ್ಷಿಯನ್ನು ಹುಳಿಯೆಂದು ಹೀಗಳೆಯುವ ನರಿ ಜಾತಿಗೆ ಸೇರಿದವರು. ಇವರಿಗಿಂತ ನೇರವಾಗಿ ಕುರ್ಚಿಯ ಕನಸು ಕಾಣುವವರು ಹೆಚ್ಚು ಸಾಚಾಗಳೆಂದೇ ನನ್ನ ಅಭಿಪ್ರಾಯ.

ಪ್ರಜಾಪ್ರಭುತ್ವದಲ್ಲಿ ಕುರ್ಚಿಯ ಕನಸು ಕಾಣುವುದು ತಪ್ಪಲ್ಲ. ಅದಕ್ಕಾಗಿ ಮುಜುಗರ ಪಡುವ ಅಗತ್ಯವೂ ಇಲ್ಲ. ಆದರೆ ಕುರ್ಚಿಗಾಗಿ ಆತುರದಲ್ಲಿ ಹುಟ್ಟಿದಂತೆ ಆಡುವ ರೀತಿ ಮಾತ್ರ ಅಪಾಯಕಾರಿಯಾದದ್ದು. ಕುರ್ಚಿಯ ಮೇಲೆ ಕೂತುಕೊಳ್ಳಬೇಕು ಎಂಬ ಒಂದೇ ಕಾರಣಕ್ಕೆ ಸತ್ಯವನ್ನು ಸಮಾಧಿ ಮಾಡಿ, ನ್ಯಾಯವನ್ನು ನಾಶ ಮಾಡಿ, ಅನ್ಯಾಯದ ಆವರಣದಲ್ಲಿ ಸುಳ್ಳಿನ ಸಾಮ್ರಾಜ್ಯ ಸೃಷ್ಟಿಸುವ ಸಂಚುಗಾರಿಕೆಯನ್ನು ಜನರು ಧಿಕ್ಕರಿಸಿದರೆ ಕುರ್ಚಿಯು ಕೊಳೆತು ನಾರುತ್ತದೆ. ನೆಲದ ತುಂಬ ಹೊಲಸನ್ನು ಹುಟ್ಟಿಸುತ್ತದೆ.

ಕುರ್ಚಿಯಲ್ಲಿ ಕೂತವರು ಹೊಲಸನ್ನು ಹುಟ್ಟು ಹಾಕುತ್ತಾ ವಿಜೃಂಭಿಸುತ್ತ ಹೊಲಸನ್ನು ಎತ್ತಿ ಎಸೆಯುವ ವಿನಯ ತೋರಿಸುತ್ತಾರೆ ಎಂಬ ಅಂಶ ಪ್ರಜಾಪ್ರಭುತ್ವದಲ್ಲಿ ತುಂಬಾ ಮುಖ್ಯವಾದುದು. ಹಾಗೆ ನೋಡಿದರೆ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದವರೆಗೆ ಕುರ್ಚಿಯದೇ ಒಂದು ಇತಿಹಾಸವಿದೆ. ರಾಜಪ್ರಭುತ್ವದಲ್ಲಿ ಸಿಂಹಾಸನವಾಗಿ ಮೆರೆದದ್ದು ಪ್ರಜಾಪ್ರಭುತ್ವದಲ್ಲಿ ಕುರ್ಚಿಯಾಗಿದೆ. ಸಿಂಹಾಸನದಿಂದ ಕುರ್ಚಿಯವರೆಗೆ ನಡೆದು ಬಂದ ಅಧಿಕಾರದ ಇತಿಹಾಸವನ್ನು ಅವಲೋಕಿಸಿದರೆ ಆತಂಕ-ಆನಂದ ಸಂಕಟ-ಸಂತೋಷ-ಎಲ್ಲಾ ಭಾವಗಳೂ ಒಟ್ಟಿಗೇ ಕಾಡಿಸುತ್ತವೆ. ಹಿಂದೆ ಸಿಂಹಾಸನದ ಸುತ್ತ ಸಿಂಬೆ ಸುತ್ತಿದ ಸಂಚುಗಳು ಇಂದು ಕುರ್ಚಿಯ ಸುತ್ತಲೂ ಬುಸುಗುಡುತ್ತಿದೆ. ಅಂದು ಕುಟುಂಬದಲ್ಲೇ ಕತ್ತಿ ಝಳಪಿಸಿದ ಅಧಿಕಾರ ಲಾಲಸೆ ಇಂದು ಅದೇ ಮಾದರಿಯಲ್ಲಿ ಮೆರೆಯುತ್ತಿದೆ. ಹಳೆಯ ಮಾದರಿಗಳನ್ನು ಮೀರಿ ಜನರಿಂದ ಪಡೆದ ಅಧಿಕಾರವನ್ನು ಜನರ ಮೇಲೆ ಪ್ರಹಾರಗೊಳಿಸಿ ಸ್ವಾರ್ಥದಲ್ಲಿ ಸಂತೋಷಿಸುತ್ತಿದೆ.

ಹಾಗೆ ನೋಡಿದರೆ ನಮ್ಮ ಜನ ಅಲ್ಪ ಸಂತೋಷಿಗಳು. ಅಷ್ಟಿಷ್ಟು ಅನುಕೂಲವಾದರೂ ಆನಂದ ಪಡುವ ಉದಾರಿಗಳು, ಸಣ್ಣ ಸಂತೋಷದಲ್ಲೇ ಸಮಾಧಾನಿಸಿಕೊಳ್ಳುವ ದೊಡ್ಡ ಮನುಷ್ಯರು. ಜನರಲ್ಲಿ ಮನೆ ಮಾಡಿರು ಈ ದೊಡ್ಡತನಕ್ಕೂ ಒಂದು ಇತಿಹಾಸವಿದೆ. ನಮ್ಮ ಚರಿತ್ರೆಯ ಪುಟಗಳನ್ನು ತಿರುವಿ ನೋಡಿದರೆ ಇದು ವೇದ್ಯವಾಗುತ್ತದೆ. ಹಿಂದಿನ ಕಾಲದ ರಾಜರಲ್ಲಿ ಯಾರು ಉತ್ತಮ ರಾಜರು ಎಂಬ ಪ್ರಶ್ನೆಗೆ ಉತ್ತರ ಎಷ್ಟು ಸುಲಭ ಗೊತ್ತೆ? ಸಾಲು ಮರಗಳನ್ನು ನೆಡಿಸಿದರು, ಅಲ್ಲೊಂದು ಇಲ್ಲೊಂದು ಆಸ್ಪತ್ರೆ ಕಟ್ಟಿಸಿದವರು, ಅಪರೂಪಕ್ಕೊಮ್ಮೆ ರಸ್ತೆ ಮಾಡಿಸಿದರು ಅತ್ಯುತ್ತಮ ರಾಜರೆಂದು ನಮ್ಮ ಶಾಲೆ ಚರಿತ್ರೆ ಪಾಠಗಳು ಬಾಯಿಪಾಠ ಮಾಡಿಸಿದೆ, ಅದಕ್ಕಿಂತಲೂ ಉತ್ತಮ ರಾಜರೆಂದರೆ ಮಾರುವೇಷದಲ್ಲಿ ಬಂದು ಜನರ ಕಷ್ಟ ಕಾರ್ಪಣ್ಯಗಳ ಪರಿಚಯ ಪಡೆಯುತ್ತಿದ್ದರೆಂಬ ಪ್ರತೀತಿಯಿದೆ. ಈಗಂತೂ ಕುರ್ಚಿಯಲ್ಲಿ ಕೂತವರು ಸದಾ ಮಾರುವೇಷದಲ್ಲಿ ಇರುವುದರಿಂದ ಹಿಂದಿನ ರಾಜರ ಕಷ್ಟವೇ ಇಲ್ಲ. ಕಷ್ಟವೇನಿದ್ದರೂ ಜನರ ಪಾಲಿಗೆ.

ನಮ್ಮ ಜನರು ಈಗ ಸ್ವಲ್ಪ ಬದಲಾಗುತ್ತಿದ್ದರೂ ಪ್ರಭುತ್ವದ ವಿಷಯದಲ್ಲಿ ಸಿಂಹಾಸನ ಕಲ್ಪನೆಯಿಂದ ಪೂರ್ಣ ಹೊರಬರಲು ಸಾಧ್ಯವಾಗಿಲ್ಲ. ಹಿಂದೆ ಸಿಂಹಾಸನಕ್ಕೆ ಶರಣೆಂದು ಸಂಪ್ರದಾಯವನ್ನೇ ಈಗ ಕುರ್ಚಿಗೆ ಕೈ ಮುಗಿಯುತ್ತಾ ಮುಂದುವರಿಸಿದ್ದಾರೆ. ಹಿಂದೆ ಉತ್ತಮ ರಾಜನೆನ್ನಿಸಿ ಕೊಂಡವನು ಮಾಡಿದ ಅಲ್ಪಸ್ವಲ್ಪ ಕೆಲಸಗಳನ್ನು ಇಂದಿನ ಸರ್ಕಾರಗಳು ಮಾಡಿ ಕೊಟ್ಟರೆ ಅದರಲ್ಲೇ ಆನಂದಿಸುವಷ್ಟರಮಟ್ಟಿಗೆ ಮಾನಸಿಕವಾಗಿ ಸಿದ್ಧವಾಗಿದ್ದಾರೆ. ಆದರೆ ಜನರಿಗೆ ಅನುಕೂಲ ಮಾಡುವುದು ಒಂದು ಕರ್ತವ್ಯವೆಂದು ಭಾವಿಸದೆ ತಾವು ಮಾಡುವ ಒಂದು ಕರ್ತವ್ಯವೆಂದು ಭಾವಿಸಿದೆ ತಾವು ಮಾಡುವ ಒಂದು ಉಪಕಾರ ಎಂಬ ಅಹಂಕಾರದಲ್ಲಿ ಅಮಲು ಹತ್ತಿಸಿಕೊಂಡ ಕುರ್ಚಿಗಳು ಪ್ರಜಾಪ್ರಭುತ್ವ ಮೂಲ ಆಶಯವನ್ನೇ ನಾಶ ಮಾಡುತ್ತಿವೆ. ಹೀಗಾಗಿ ಕುರ್ಚಿಯೆನ್ನುವುದು ಕೊಳಕಿನ ಕೇಂದ್ರವೆಂಬ ಭಾವನೆ ಬಲಿಯುತ್ತಿದೆ. ವಾಸ್ತವವಾಗಿ ಪ್ರಜಾಪ್ರಭುತ್ವದ ಕುರ್ಚಿಗಳು ಬೆಳಕಿನ ಕೇಂದ್ರಗಳಾಗಬೇಕು. ಜನರ ಬದುಕಿಗೆ ಬೆಳಕನ್ನು ತರುವ ತೀವ್ರತೆಯಲ್ಲಿ ಕರ್ತವ್ಯ ಪರಿಕಲ್ಪನೆಗೆ ಅನ್ವರ್ಥಕಗಳಾಗಬೇಕು. ಆದರೆ ಅನ್ವರ್ಥಕವಾಗುವ ಬದಲು ಅನರ್ಥಕಗಳಾಗಿ ಸ್ವಾರ್ಥ ಲಾಲಸೆಯ ಸಿಂಹಾಸನಗಳಾಗಿ, ಜನರ ಪಾಲಿನ ಪೀಡೆಗಳಾಗಿ ಕಾಣಿಸಿ ಕೊಳ್ಳುತ್ತಿರುವ ಕುರ್ಚಿಗಳು, ನಿರೀಕ್ಷೆಗಳನ್ನು ನೆತ್ತರಾಗಿಸುತ್ತಿವೆ. ಕನಸುಗಳಿಗೆ ಕಿಚ್ಚು ಹತ್ತಿಸುತ್ತಿವೆ; ಆಸೆಗಳನ್ನು ಹತ್ತಿಕ್ಕುತ್ತಿವೆ; ಪ್ರಜಾಪ್ರಭುತ್ವದಲ್ಲಿ ಕುರ್ಚಿಯೆಂಬುದು ಜನರ ಪ್ರಾತಿನಿಧಿಕ ರೂಪವಾಗಿರುವ ಬದಲು ಜನ ವಿರೋಧಿ ರಾಕ್ಷಸನಾಗಿ ಪರಿವರ್ತನೆಗೊಳ್ಳುತ್ತಿದೆ. ಈ ಕಾರಣದಿಂದ ಕುರ್ಚಿಯೆಂದರೆ ಅಧಿಕಾರ ಲಾಲಸೆಯೆಂಬ ಅಪಾರ್ಥ ಬೆಳೆದು ಪ್ರಜಾಪ್ರಭುತ್ವದ ಪಾವಿತ್ರ್‍ಯ ನಾಶಗೊಳ್ಳುತ್ತಿದೆ. ಕುರ್ಚಿ ಹತ್ತಿದವರ ಬಗ್ಗೆ ಅನುಮಾನ, ಕುರ್ಚಿ ಬಿಟ್ಟವರ ಬಗ್ಗೆ ಅಭಿಮಾನಿ ಬೆಳೆಯುತ್ತದೆ. ವಾಸ್ತವವಾಗಿ ಕುರ್ಚಿಯಲ್ಲಿದ್ದು ಏನು ಮಾಡಿದರೆಂಬ ವಿಶ್ಲೇಷಣೆ ಮುಖ್ಯವಾಗಬೇಕಿತ್ತು. ಆದರೆ ಕುರ್ಚಿಯಲ್ಲಿರುವ ಬದಲು ಬಿಟ್ಟ ಕೂಡಲೇ ದೊಡ್ಡವರೆನ್ನಿಸಿಕೊಳ್ಳುವ ಮನಸ್ಥಿತಿಯೊಂದು ಜನರಲ್ಲಿ ಸೃಷ್ಟಿ ಯಾಗಿದೆ. ಇತಿಹಾಸದುದ್ದಕ್ಕೂ ಕುರ್ಚಿಗಳು ಜನರ ಮನಸ್ಸಿನ ಮೇಲೆ ಮಾಡಿದ ಆಘಾತ, ಕುರ್ಚಿಗಾಗಿ ನಡೆಸುವ ಕೆಳದರ್ಜೆಯ ರಾಜಕೀಯ, ಕುರ್ಚಿಯಲ್ಲಿ ಕೂತು ಸುತ್ತೆಲ್ಲ ಬಿತ್ತುವ ಕೊಳಕು ಮುಂತಾದವುಗಳನ್ನು ಉದ್ದಕ್ಕೂ ನೋಡಿದ ಜನರಿಗೆ ಅದರಿಂದ ಇಳಿದವನೇ ದೊಡ್ಡವನಾಗಿ ಕಂಡರೆ ಆಶ್ಚರ್ಯವೇನೂ ಇಲ್ಲ. ಜನರಲ್ಲಿ ಕಾಣಿಸಿಕೊಳ್ಳುವ ಕುರ್ಚಿ ಪರವಲ್ಲದ ಮನೋ ಧರ್ಮಕ್ಕೂ ಒಂದು ಇತಿಹಾಸವಿದೆ. ಈಗ ಪಾಂಡವರು ಮತ್ತು ಕೌರವರ ವಿಷಯವನ್ನೇ ನೋಡೋಣ. ಧರ್ಮರಾಯ ದುರ್ಯೋಧನನನ್ನು ಕೇವಲ ಐದು ಗ್ರಾಮಗಳನ್ನು ನೀಡುವಂತೆ ಕೇಳಿಕೊಂಡ. ಅರ್ಧ ರಾಜ್ಯದ ಬದಲು ತನ್ನಲ್ಲಿ ಐದು ಹಳ್ಳಿಗಳಲ್ಲಿ ಸುಖಿಸುವ ಉದಾರತೆಯನ್ನು ತೋರಿದ. ಆದರೆ ದುರ್ಯೋಧನ ನಿರಾಕರಿಸಿದ. ಇಡಿ ಸಾಮ್ರಾಜ್ಯವನ್ನು ಕೇಂದ್ರೀಕರಿಸಿಕೊಂಡ್. ಈ ಪ್ರಸಂಗದಲ್ಲಿ ಸಾಮಾನ್ಯ ಜನರು ಕಳೆದುಕೊಂಡ ಧರ್ಮರಾಯಾದಿಗಳ ಪರ ಇರುತ್ತಾರೆ; ಕಟ್ಟಿಕೊಂಡ ದುರ್ಯೋಧನ ಪರ ಇರುವುದಿಲ್ಲ. ಇನ್ನು ವನವಾಸ, ಅಜ್ಞಾತವಾಸಗಳ ಕಷ್ಟ ಪರಂಪರೆಯಲ್ಲಿ ಬೆಂದು ಬದುಕಿದ ಪಾಂಡವರು ಸಿಂಹಾಸನಕ್ಕೆ ದೂರವಾಗಿದ್ದು ಜನರಿಗೆ ಹತ್ತಿರವಾದರು. ದುರ್ಯೋಧನ ಸಿಂಹಾಸನಕ್ಕೆ ಹತ್ತಿರವಾಗಿದ್ದು ಜನರಿಂದ ದೂರವಾದ. ಹರಿಶ್ಚಂದ್ರ ಮಹಾರಾಜನು ರಾಜ್ಯ ಕೋಷಾದಿಗಳನ್ನು ಕಳೆದುಕೊಂಡು ಜನರ ಮನಸ್ಸಿಗೆ ಹತ್ತಿರವಾದ; ಕಷ್ಟಗಳನ್ನು ಕೊಟ್ಟ ವಿಶ್ವಾಮಿತ್ರ ಜನರ ದೃಷ್ಟಿಗೆ ವನವಾಸ ಮಾಡಿದ ಶ್ರೀರಾಮಾದಿಗಳ ಬಗ್ಗೆ ಜನರಿಗೆ ಗೌರವ; ಕಾಡಿಗೆ ಕಳಿಸಬೇಕೆಂದು ಒತ್ತಾಯಿಸಿದ ಕೈಕೆಯ ಬಗ್ಗೆ ಕೋಪ. ಒಟ್ಟು ಕಾವ್ಯವನ್ನು ವಿಶ್ಲೇಷಿಸುವಾಗ ದುರ್ಯೋಧನ, ವಿಶ್ವಾಮಿತ್ರ, ಕೈಕೆ ಮುಂತಾದವರ ಪಾತ್ರವನ್ನು ಬೇರೆ ರೀತಿಯೂ ನೋಡಲಿಕ್ಕೆ ಸಾಧ್ಯವಿರಬಹುದು. ಅದರ ಕತೆಯ ಸಾರಾಂಶವನ್ನು ಮನಸ್ಸಿಗೆ ತಂದುಕೊಂಡು ಸಾಮಾನ್ಯ ಜನರು ಮೂಡಿಸಿ ಕೊಂಡ ಅಭಿಪ್ರಾಯಗಳು ಸರಳವಾಗಿ, ನೇರವಾಗಿ ಇರುತ್ತವೆ. ಸಿಂಹಾಸನಕ್ಕೆ ಅಂಟಿಕೊಂಡವರಿಗಿಂತ ಅದರಿಂದ ದೂರವುಳಿದವರ ಬಗ್ಗೆ ಜನರಿಗೆ ಅಭಿಮಾನವಿದೆ. ಇಂದಾದರೂ ಅಷ್ಟೆ: ಕುರ್ಚಿಯನ್ನು ಕಟ್ಟಿಕೊಂಡವರಿಗಿಂತ ಕಳೆದು ಕೊಡವರ ಬಗ್ಗೆ ಕಾಳಜಿಯಿದೆ; ಕಳಕಳಿಯಿದೆ. ಕುರ್ಚಿಯಲ್ಲಿದ್ದೇ ಜನರ ಕಾಳಜಿ ಮತ್ತು ಕಳಕಳಿಯನ್ನು ಸಂಪಾದಿಸುವುದು ಪ್ರಜಾಪ್ರಭುತ್ವ ಯಶಸ್ಸು, ಏಕೆಂದರೆ ಇಂದಿನ ಕುರ್ಚಿಗಳ ಬಗ್ಗೆ ಅಸಹ್ಯ ಹುಟ್ಟತೊಡಗಿದರೆ ಹಿಂದಿನ ಸಿಂಹಾಸನಗಳ ಬಗ್ಗೆ ಒಲವು ಹುಟ್ಟಬಹುದು; ಸರ್ವಾಧಿಕಾರದ ಕಡೆಗೆ ಮನಸ್ಸು ವಾಲಬಹುದು. ಹೀಗೆ ಆಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಕುರ್ಚಿಯಲ್ಲಿ ಕೂತವರ ಮೇಲಿದೆ. ಆದರೆ ಹಿಂದಿನ ಸಿಂಹಾಸನಗಳು ಮತ್ತು ಇಂದಿನ ಕುರ್ಚಿಗಳು ಜನರಿಂದ ದೂರ ಉಳಿದ ಉದಾಹರಣೆಗಳು ಹೆಚ್ಚಾಗಿದ್ದು ಜನರಲ್ಲಿ ಅಧಿಕಾರಸ್ಥರ ಬಗ್ಗೆ ಅಸಹನೆ ಮತ್ತು ಅಸಹ್ಯ ಭಾವನೆಗಳು ಹುಟ್ಟಲು ಕಾರಣವಾಗಿದೆ. ಬುದ್ಧಿವಂತರೆನ್ನಿಸಿಕೊಂಡವರಲ್ಲಿ ಸಿನಿಕತನ ಹೆಚ್ಚಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಕುರ್ಚಿಯ ಬಗ್ಗೆ ಅಸಹನೆ, ಅಸಹ್ಯದ ಭಾವನೆ ಮತ್ತು ಸಿನಿಕತನಗಳು ಹುಟ್ಟದೆ ಇರುವಂಥ ವಾತಾವರಣ ನಿರ್ಮಾಣವಾಗದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ. ಇದನ್ನು ಕುರ್ಚಿಯಲ್ಲಿ ಕೂತವರು ಮೊದಲು ಅರ್ಥ ಮಾಡಿಕೊಳ್ಳಬೇಕು.

ಇಂದು ಕುರ್ಚಿಗಳ ಸ್ಥಿತಿ ಯಾವ ಮಟ್ಟ ಮುಟ್ಟಿದೆ ಎಂದರೆ, ಸುರಕ್ಷಿತ ಭಾವನೆಯೇ ಬೂದಿಯಾಗಿದೆ, ನಮ್ಮ ದೇಶದ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿಗಳು, ರಾಜ್ಯಪಾಲರು -ಇತ್ಯಾದಿ ದಢೂತಿ ಕುರ್ಚಿಗಳ ಸುತ್ತ ಕಿವಿಗಳ ರಕ್ಷಣೆ ಇದ್ದೇ ಇರಬೇಕಾದಂಥ ವಾತಾವರಣವಿದೆ, ಹಿಂದೆ ಸಿಂಹಾಸನ ಸಂರಕ್ಷಣೆಗಾಗಿ ಬಿಚ್ಚುಗತ್ತಿಯ ಭಟರು ನಿಂತಂತೆ, ಇಂದು ಕೋವಿ ಹಿಡಿದ ಕಟ್ಟಾಳುಗಳು ನಮ್ಮ ‘ಪ್ರಜಾ ಪ್ರತಿನಿಧಿ’ಗಳನ್ನು ಕಾಯುತ್ತಿದ್ದಾರೆ, ಇದಕ್ಕಾಗಿಯೇ ನಮ್ಮ ದೇಶದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಪ್ರಜಾಪ್ರಭುತ್ವ ಎಂಥ ಅಪಾಯ ಸ್ಥಿತಿಯಲ್ಲಿದೆ ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ.

ಈಗಲಾದರೂ ಕುರ್ಚಿಯಲ್ಲಿ ಕೂತವರು ಆಕಾಶಕ್ಕೆ ಅಟ್ಟ ಕಟ್ಟುವ ಬದಲು ನೆಲದ ಕನಸು ಕಾಣಬೇಕು. ನೆಲದ ನೋವು ನಲಿವುಗಳಲ್ಲಿ ಬಾಳು ತೇಯುತ್ತಿರುವ ಜನಸಾಮಾನ್ಯನ ಹೃದಯ ಸ್ಥಾನಕ್ಕೆ ಕುರ್ಚಿಯನ್ನು ತರಬೇಕು. ಆದರೆ ಕುರ್ಚಿಯಲ್ಲಿ ಕೂತವರು ಜನಮುಖಿಯಾದ ಆಶಯಗಳಿಗೆ ವಿರುದ್ಧವಾಗಿ ವರ್ತಿಸುತ್ತ ಸ್ವಾರ್ಥ ಮುಖಿಗಳಾದದ್ದು ಸಮಸ್ಯೆಯನ್ನು ಬಿಗಡಾಯಿಸಿದೆ.

ಕುರ್ಚಿಯಲ್ಲಿ ಕೂತ ಮನುಷ್ಯ ಕುಬ್ಜನಾಗಬಾರದು. ಕುರ್ಚಿ ಮನುಷ್ಯನಿಗಿಂತ ದೊಡ್ಡದಾಗಬಾರದು. ಮನುಷ್ಯ ಕುರ್ಚಿಗಿಂತ ದೊಡ್ಡವನಾಗಬೇಕು; ಕುರ್ಚಿಯನ್ನು ಕುಬ್ಜಗೊಳಿಸಬೇಕು.

ಕುರ್ಚಿಯಲ್ಲಿ ಕುಬ್ಬನಾದ ಮನುಷ್ಯನಿಂದ ಪ್ರಜಾಪ್ರಭುತ್ವ ಅಳಿಯುತ್ತದೆ, ಕುರ್ಚಿಯನ್ನು ಕುಬ್ಜಗೊಳಿಸಿ ಬೆಳೆಯುವ ಮನುಷ್ಯನಿಂದ ಪ್ರಜಾಪ್ರಭುತ್ವ ಉಳಿಯುತ್ತದೆ.
*****
೨-೧೦-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಮಯ ನನ್ನದೇ ಅನ್ನಿಸಿದಾಗ
Next post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೯

ಸಣ್ಣ ಕತೆ

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಗಿಣಿಯ ಸಾಕ್ಷಿ

  ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ಆವರ್ತನೆ

  ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys