“ಗಂಡಂದಿರ ಮುಂದೆ ಹೆಂಡೂತಿ ಸತ್ತರೆ
ಗಂಧಕಸ್ತೂರಿ ಪರಿಮಳ! ಸ್ವರ್ಗದ
ರಂಬೇರಾರತಿ ಬೆಳಗೂರ!”

“ಯಾವ್ಯಾವ ಸಿರಿಗಿಂತ ಮೂಗುತಿ ಸಿರಿಮ್ಯಾಲೆ
ಬಾಲಾರ ಹಡೆದ ಸಿರಿಗಿಂತ! ದ್ಯಾವರೇ
ಮುತೈದಿತನವೇ ಬೋ ಮ್ಯಾಲೆ”

ಇದು ಉತ್ತರ ಕನ್ನಡದ ಜನಪದರ ಆಡು ಮಾತಿನ ಸುಂದರ ಪದವಿನ್ಯಾಸದಲ್ಲಿ ಮೂಡಿದ ಕವನಗಳು. ಎರಡು ಜಾನಪದ ತ್ರಿಪದಿಗಳು ಕೂಡಾ ಹೆಂಡತಿಯ ಬಾಳಿನಲ್ಲಿ ಗಂಡನ ಮಹತ್ವ, ಪತಿ ಭಕ್ತಿಯ ಪರಮತೆಯಲ್ಲಿ ವ್ಯಕ್ತಗೊಂಡಿದೆ. ಪುರುಷ ಪ್ರಧಾನತೆಯನ್ನು ಎತ್ತಿ ಹಿಡಿದಂತೆ ತೋರುವ ಈ ಹಾಡುಗಳು ಮನೆಯ ಆವರಣಕ್ಕೆ ಬದ್ದವಾಗಿದ್ದುಕೊಂಡ ಹೆಣ್ಣೊಬ್ಬಳ ಆತ್ಮಗತ ಸೃಷ್ಟಿ. ಆಕೆಗೆ ಗಂಡನ ಹೊರತಾದ ಪ್ರಪಂಚವಿಲ್ಲ. ಅವರಿಬ್ಬರ ಅನುಬಂಧ ಎಲ್ಲ ಸಿದ್ದಾಂತಗಳಿಗೆ ಮೀರಿದ್ದು. ಈ ಮನೋಭಾವ ಪುರುಷ ಸಮಾಜವೇ ವಿಧಿಸಿದ ವಿಧಿಯಾಗಿತ್ತು ಎಂಬುದು ಸತ್ಯವಾದರೂ ಅಲ್ಲೊಂದು ಬಿಡಿಸಲಾಗದ ಭಾವದ ಗಂಟಿತ್ತು. ಸುಸಂಸ್ಕೃತ ಜೀವನ ಬೆಸುಗೆ ಆ ಮೂಲಕ ಸ್ತ್ರೀಯ ಜೀವನ ಸಾರ್ಥಕ್ಯದ ಚಿತ್ರಣವಿದೆ.

ಗಂಡನಿರುವಾಗಲೇ ಹೆಣ್ಣೊಬ್ಬಳು ಮುತೈದೆಯಾಗಿ ಸಾಯಲು ಬಯಸುತ್ತಾಳೆ. ಅದು ಮುತೈದೆತನದ ಆಕಾಂಕ್ಷೆಗಿಂತಲೂ ಪತಿಯಲ್ಲಿ ಆಕೆಗಿರುವ ಪ್ರೀತಿ. ಹೆಣ್ಣು ಸದಾ ಗಂಡ ಮತ್ತು ಮಕ್ಕಳ ಶ್ರೇಯೋಭಿಲಾಷಿ. ಸಾಮಾಜಿಕ ಹೊರ ಬದುಕಿನಲ್ಲಿ ಸ್ವಾರ್ಥಿಯಾಗಿ ಕಾಣುವ ಹೆಣ್ಣು ಕೌಟಂಬಿಕ ವಿಚಾರಗಳಲ್ಲಿ ತ್ಯಾಗಿ,ಉದಾರಿ.ಇದು ವಿಚಿತ್ರವಾದರೂ ಸತ್ಯ ಸಂಗತಿ. ತನ್ನ ಆಯಸ್ಸನ್ನು ಕೂಡಾ ಮಕ್ಕಳಿಗೆ ಗಂಡನಿಗೆ ಹಂಚಿ ಹೋಗಲಿ ಎಂದು ಬಯಸುವ ಅನುಪಮ ತ್ಯಾಗ ಆಕೆಯದು. ಆದರೆ ಪುರುಷ ಸಮಾಜ ಮಾತ್ರ ಆಕೆಯ ತ್ಯಾಗಕ್ಕೆ ಪುರಸ್ಕರಿಸುವುದಿಲ್ಲ. ಹೆಮ್ಮೆ ಪಡುವುದಿಲ್ಲ. ಅದಾಗಬೇಕೆಂದರೆ ಪುರುಷನ ಚಿಂತನೆಯ ಗತಿ ಬದಲಾಗಬೇಕು.

ಸ್ತ್ರೀ ಪುರುಷರಿಬ್ಬರೂ ಬಾಳ ಬಂಡಿಯ ಸಹಪಯಣಿಗರು. ದಂಪತಿಗಳಾಗಿದ್ದರೆ ಪರಸ್ಪರ ಬದುಕಿನ ಎಲ್ಲ ಆಗು ಹೋಗುಗಳ, ಜವಾಬ್ದಾರಿಗಳ ಸಮಾನ ಬಾಧ್ಯಸ್ಥರು. ಅವರಲ್ಲಿ ತಾ ಮೇಲೆ ನೀ ಕೆಳಗೆ ಎಂಬ ಭಾವ ಇಲ್ಲದಿರುವುದೇ ಲೇಸು. ಅರಿತು ಬದುಕಬೇಕಾದ ಭಾವಸಂಬಂಧ ಅಲ್ಲಿರುವುದು. ಇದು ಜಗತ್ತಿನ ಸಾಮಾನ್ಯ ಬಂಧ. ಸಾಂಸಾರಿಕ ಕಷ್ಟಗಳಲ್ಲೂ, ನಷ್ಟಗಳಲ್ಲೂ ಸಂತೋಷ ಸಂಭ್ರಮಗಳಲ್ಲೂ ಹೆಣ್ಣ ಗಂಡು ವಿದ್ಯುಕ್ತವಾಗಿ ಸಮಾನವಾಗಿ ಭಾಗವಹಿಸಿದಾಗಲೇ ಸಮಾನತೆಯ ಸಿದ್ದಾಂತಗಳಿಗೊಂದು ಬೆಲೆ ಬರಬಹುದು. ಆದರೆ ಅದು ಹಾಗಾಗದೆ ಗಂಡು ಶ್ರೇಷ್ಟನೆಂದು ಸ್ತ್ರೀ ಆತನಿಗೆ ಅಧೀನವೆಂದು ನಮ್ಮ ಸಾಂಪ್ರದಾಯಿಕ ಜಗತ್ತು ಉದ್ಘೋಷಿಸುತ್ತ ಬಂದಿದೆ. ಇದರಿಂದ ಶಾಂತಿಗಿಂತ ಕಲಹಗಳು ಹೆಚ್ಚಬಹುದು.

ಎಲ್ಲಿ ಸಮಾನ ಅಭಿರುಚಿಗಳು, ಸಮಾನ ನಡಾವಳಿಗಳು, ಸಮಾನ ಜವಾಬ್ದಾರಿಗಳು, ಸಮಾನ ಪರಿಗಣನೆ ಇರುವುದೋ ಅಲ್ಲಿ ಸಹಜವಾಗಿ ಬದುಕು ಸಹ್ಯವಾಗಿರುವುದು. ಇದಕ್ಕೆ ನಮ್ಮ ಜಾನಪದರ ಬದುಕು ಕೆಲವೊಮ್ಮೆ ಉದಾಹರಣೆಯಾಗಬಹುದು. ಅಲ್ಲಿ ಮೌಖಿಕ ಸಾಹಿತ್ಯ ರಚನೆಯಲ್ಲಿ, ಕೆಲಸಗಳ ಸಮಾನ ಹಂಚಿಕೆಯಲ್ಲಿ ಬಹುಮಟ್ಟಿಗೆ ಸಾಮರಸ್ಯವಿದೆ. ಅಷ್ಟೇ ಅಲ್ಲದೇ ಹೆಣ್ಣಿಗೆ ವಿಶೇಷ ಆದರವೂ ಇತ್ತೆಂದು ಕಾಣುವುದು. ಉದಾಹರಣೆಗೆ ಆಕೆಯ ಸಾಹಿತ್ಯ ಕೊಡುಗೆಯಲ್ಲಿ ಗರತಿಯ ಹಾಡುಗಳು ಗಣನೀಯವಾಗಿ ಪರಿಗಣಿಸಲ್ಪಟ್ಟಿದೆ.ಇನ್ನು ಜನಪದರು ಕಾರ್ಯ ಹಂಚಿಕೆಯಲ್ಲಿ ಸ್ತ್ರೀಯರನ್ನು ದೈಹಿಕ ಅಬಲತೆಯ ಕಾರಣ ಹಾಗೂ ಮಕ್ಕಳ ಹೊತ್ತು ಹೆತ್ತು ಸಲುಹ ಬೇಕಾದ ಮಾತೃಕಾರ್ಯಗಳ ಬಹುವಾಗಿ ಗೌರವಿಸುತ್ತಿದ್ದು ಹೆಣ್ಣು ಮನೆಯ ಒಳಗಡೆಯ ಜವಾಬ್ದಾರಿಗಳ ಹೊತ್ತು ಅಡುಗೆ,ಮನೆವಾಳ್ತೆಯ ನೋಡಿಕೊಳ್ಳಲು ಶಕ್ತಳಾಗಿದ್ದಳು. ಗಂಡು ಹೊರಹೋಗಿ ದುಡಿದು ತನ್ನ ಹೊಲ ಜಮೀನಿನ ಹೊರೆಯನ್ನು ಏಗುತ್ತಿದ್ದ. ಆ ಕಾಲದ ಪತಿ ಪತ್ನಿಯರಲ್ಲಿ ಅಪೂರ್ವವಾದ ಸಾಮರಸ್ಯವಿತ್ತು. ಗಂಡು ಹೆಣ್ಣಿನ ಸಂಬಂಧ, ಅನುಬಂಧ, ರಸ ಸರಸ ಎಲ್ಲವೂ ಅವರ್ಣನೀಯ. ಸಂಬಂಧಗಳ ಬೆಸುಗೆ ಹಿತವಾಗಿದ್ದು, ಔಚಿತ್ಯ ಸಮಾನತೆಯ ಸೂಡಿಯಲ್ಲಿ ಬೆಳಗಿತ್ತು. ಆದರೆ ಬರಬರುತ್ತ ಆಧುನಿಕತೆಯಲ್ಲಿ ವಿದ್ಯೆಯಿಂದ ಜ್ಞಾನಭಾರ ಹೆಚ್ಚಾದಷ್ಟೂ ದೌರ್ಜನ್ಯದ ಅತಿರೇಕಗಳು ಹೆಚ್ಚುತ್ತಲೇ ಇರುವುದು ವಿಚಿತ್ರ.

ಜಾನಪದ ಹಾಡುಗಳಲ್ಲಿ ತಂದೆಗಿಂತ ತಾಯಿಯ ಮಹತ್ವವನ್ನು ಬಿಂಬಿಸುವ ಹಾಡುಗಳೇ ಹೇರಳ. ಆಕೆಯ ಶ್ರೇಷ್ಠತೆಯನ್ನು ನಿಸ್ಸಂಶಯವಾಗಿ ಅವು ಸಾರಿವೆ. ಇದಲ್ಲದೇ ಜಾನಪದ ಹೆಣ್ಣು ಪುರುಷನ ದಬ್ಬಾಳಿಕೆಯನ್ನು ವಿರೋಧಿಸುವ, ಗಂಡ ಸತ್ತ ಹೆಣ್ಣು ಮರುವಿವಾಹವಾಗುವ ಇಲ್ಲ ಗಂಡನ ಅಣ್ಣ ಅಥವಾ ತಮ್ಮನನ್ನು ವಿವಾಹವಾಗಿ ಬದುಕಿದ ಪದ್ಧತಿ ಇದೆ. ಜನಪದದಲ್ಲಿ ಒಲ್ಲದ ಗಂಡನನ್ನು ಬಿಟ್ಟು ಒಲಿದವನ ಕೂಡಿ ದಿಟ್ಟವಾಗಿ ಬಾಳಿದ ಸ್ತ್ರೀಯರಿದ್ದಾರೆ. ಹಾಗಾಗಿ ಇಲ್ಲಿ ಹೆಣ್ಣಿಗೆ ಹೆಚ್ಚು ಪ್ರಾದಾನ್ಯತೆ ಇದೆ. ಸ್ವಾತಂತ್ರ್ಯದ ಪರಿಕಲ್ಪನೆ ಅವರ ಬದುಕಿನ ಪ್ರಾಯೋಗಿಕತೆಯಲ್ಲಿಯೇ ಸ್ಪುಟಗೊಂಡಿದೆ.

“ಗಂಡು ಮಕ್ಕಳು ಒಂಬತ್ತು ಕೊಡು ಸ್ವಾಮಿ,
ಬಂಡೀಯ ಕಳಸಕ್ಕೆ ಒಪ್ಪುವಂತ ಒಬ್ಬ ಹೆಣ್ಣ ಮಗಳ ಕೊಡು ದೇವ” ಎಂದು ಗರತಿಯೊಬ್ಬಳು ಹಾಡು ಹೀಗೆ ಹೇಳುವಲ್ಲಿ ಸ್ತ್ರೀಗೆ ಎಂಥಹ ಬೆಲೆಯಿತ್ತು ಎಂಬುದು ವೇದ್ಯವಾಗುತ್ತದೆ. ಹೆಣ್ಣು ಎಲ್ಲ ಗಂಡು ಮಕ್ಕಳಿಗಿಂತ ಶ್ರೇಷ್ಟವಾಗಿದ್ದಾಳೆ. ಆಕೆಯನ್ನು ಬಂಡಿಯ ಕಳಸಕ್ಕೆ ಹೋಲಿಸಲಾಗಿದೆ. ಆ ಮೂಲಕ ಹೆಣ್ಣು ಆಕೆಯ ಗರಿಮೆಯನ್ನು ಗರತಿಯೊರ್ವಳು ಕೊಂಡಾಡಿದ್ದಾಳೆ.

ಆಧುನಿಕರಾದ ನಾವು ಹೆಣ್ಣು ಹುಟ್ಟಿದರೆ ನೋಯುವ ನರಳುವ ಬುದ್ದಿ ಬಿಟ್ಟಿಲ್ಲ. ಹೆಣ್ಣು ಜನಿಸಿದರೆ ತೋರಿಕೆಗೆ ಸಮಾಧಾನಿಯಾಗಿ ಕಾಣುವ ಎದೆಷ್ಟೋ ಹೆತ್ತವರಿಲ್ಲ. ಒಳಗೊಳಗೆ ತಮ್ಮನ್ನೇ ಶಪಿಸುವ ಇಲ್ಲ ಹೆಣ್ಣು ಹುಟ್ಟಿದ್ದಕ್ಕೆ ಹೆಂಡತಿಯೇ ಕಾರಣವೆಂದು ಪತ್ನಿಯನ್ನು ಹೀಯಾಳಿಸುವ, ಮನೆಯಿಂದ ಹೊರಗೆ ಹಾಕುವ ಪುರುಷೋತ್ತಮರು ಇಂದಿಗೂ ಇರುವರು.ಆದರೆ ಇಲ್ಲೊಬ್ಬ ಅಶಿಕ್ಷಿತ ಜಾನಪದ ಮಹಿಳೆ ಇರುವಳು. ಆಕೆ ತನ್ನ ಹೆಣ್ಣು ಕೂಸನ್ನು ಎಷ್ಟೊಂದು ಪ್ರೀತಿಯಿಂದ ಮೋದದಿಂದ ಹೊಗಳುತ್ತಿರುವಳು

“ಹೆಣ್ಣು ಇದ್ದ ಮನೆಗೆ ಕನ್ನಡಿ ಯಾತಕ್ಕೆ
ಹೆಣ್ಣು ಸಣ್ಣವಳು ಒಳಗಿರಲು ! ನನ ಮಗಳು
ಕನ್ನಡಿ ಹಾಂಗೆ ಹೊಳೆವಳು”

ಹೆಣ್ಣು ಕನ್ನಡಿ ಇದ್ದ ಹಾಗೆ. ಆಕೆ ಇದ್ದಲ್ಲಿ ಕನ್ನಡಿಯೇ ಬೇಕಿಲ್ಲ. ತನ್ನ ಮುಖವನ್ನು ಮಗಳ ಮುಖದಲ್ಲಿ ಕಂಡು ಸಂಭ್ರಮಿಸುವ ತಾಯಿ ಆಕೆ. ಯಾವ ಮಹಾಕವಿಯೂ ಕಾಣದ ಅದ್ಭುತ ಪ್ರತಿಮೆ ತಾಯಿಗೆ ಕಾಣುತ್ತದೆ .ಆಕೆಯ ವಾತ್ಸಲ್ಯ ದೃಷ್ಟಿ ಅಂತಹುದು.

ಇವೆಲ್ಲವನ್ನೂ ಗಮನಿಸಿದಾಗ ಸ್ತ್ರೀ ಜೀವನದಲ್ಲಿ ಗಂಡಿನ ಪಾತ್ರ, ಗಂಡಿನ ಬಾಳ ಹಾದಿಯಲ್ಲಿ ಹೆಣ್ಣಿನ ಹೆಜ್ಜೆ ಗುರುತುಗಳು ಪರಸ್ಪರ ಜೊತೆಯಾದ ಸಮಾನ ನಡಿಗೆ ಇವೇ ನಮ್ಮ ಬದುಕಿನ ಹಾಡನ್ನು ಮಧುರಗೊಳಿಸಬಲ್ಲವು.ಇದನ್ನರಿತ ಜಾನಪದರು ಅವುಗಳನ್ನು ಬಾಳಿದರು ಬದುಕಿದರು ಸಂಭ್ರಮಿಸಿದರು. ನಲಿದರು, ಉಲಿದರು. ಸುಜ್ಞಾನಿಗಳು ಸಚ್ಚಾರಿತ್ರ್ಯ ಉಳ್ಳವರು, ಸಮಾನತೆಯಲ್ಲಿ ಶ್ರದ್ಧೆಯುಳ್ಳವರು ಆದ eನಪದರಿಗಿಂತ ಶಿಷ್ಟ ಜಗತ್ತಿನ ಆಧುನಿಕರು ಧೂರ್ತರಾಗಿ ಕಂಡುಬರುತ್ತಾರೆ. ಇಂದು ಪುರುಷನ ದಬ್ಬಾಳಿಕೆಗೆ ನಲುಗಿಹೋದ, ದಮನಕ್ಕೆ ಒಳಗಾಗುತ್ತಿರುವ ಸಹೋದರಿಯರು ಆ ಅಟ್ಟಹಾಸದ ವಿರುದ್ದ ಮಾತಾಡುವ, ಪುರುಷನನ್ನೆ ವಿರೋಧಿಸುವ ಮನಃ ಸ್ಥಿತಿ ನಿರ್ಮಾಣವಾಗುತ್ತಿದೆ. ಇದು ತಪ್ಪಾದರೂ ದಿನನಿತ್ಯದ ದೌರ್ಜನ್ಯಗಳು, ಹಾಡುಹಗಲೇ ಮುಗ್ಧ ಹೆಣ್ಣುಗಳ ಮೇಲಿನ ಅನಾಚಾರಗಳು ಸ್ತ್ರೀ ತಿರುಗಿ ಬೀಳುವಂತೆ ಮಾಡುತ್ತಿವೆ.ಹೆಣ್ಣೆಂದರೆ ಬರಿ ತನ್ನ ಸೇವೆಗೆ, ಭೋಗಕ್ಕೆ, ಆದೇಶ ಪಾಲನೆಗೆ ಇರುವ ನಿರ್ಜೀವ ವಸ್ತುವೆಂಬಂತೆ ಸುಶಿಕ್ಷಿತ ಸಮಾಜದ ಮಹನೀಯರೂ ವರ್ತಿಸುತ್ತಿರುತ್ತಾರೆ.ಹಾಗಾಗೇ ಸ್ತ್ರೀ ವಾದ ಇಂದು ಪ್ರಬಲ ದ್ವನಿಯಾಗಿ ಮೂಡಿಬರುತ್ತಿದೆ.
*****