ಪ್ರಿಯ ಸಖಿ,
ಯಾವ ತಂಟೆ ತಕರಾರುಗಳಿಲ್ಲದೇ ಎಲ್ಲವನ್ನೂ ಒಪ್ಪಿಕೊಂಡು ಸದ್ದಿಲ್ಲದೇ ಜೀವನವನ್ನು ಸಾಗಿಸುವವರು ಹಲವಾರು ಮಂದಿ. ಆದರೆ ತಮ್ಮ ಸಿದ್ಧಾಂತಗಳಿಗಾಗಿ, ವ್ಯವಸ್ಥೆಯೆದುರು ಸದಾ ಬಂಡೆದ್ದು ಹೋರಾಟವನ್ನೇ ಬದುಕಾಗಿಸಿಕೊಂಡವರು ಕೆಲಮಂದಿ. ಆದರೆ ಕವಿ ಗೋಪಾಲಕೃಷ್ಣ ಅಡಿಗರು ‘ಬಂಡಾಯ’ ಎಂಬ ತಮ್ಮ ಕವನದಲ್ಲಿ ಹೀಗೆ ಹೇಳುತ್ತಾರೆ.

ದಂಗೆಯೇಳುತ್ತಲೇ ಇರಬೇಕಾಗುತ್ತದೆ
ಇಲ್ಲಿ ಪ್ರತಿಯೊಬ್ಬನೂ ತನ್ನ ತನ್ನ
ಚಿನ್ನದ್ದೋ, ರನ್ನದ್ದೋ, ಕಬ್ಬಿಣದ್ದೋ, ಮರದ್ದೋ
ಅಥವಾ ಬರಿ ಮಣ್ಣಿನದೋ ಸಿಂಹಾಸನವ
ಹುಡುಕಿ ತೆಗೆದು ಗುರುತಿಸಿ ಅಲ್ಲಿ
ಆಸನಾರೂಢನಾಗುವವರೆಗೆ

ವ್ಯಕ್ತಿಯೊಬ್ಬ ತನ್ನ ದಾರಿಯನ್ನ ಕಂಡುಕೊಂಡ ನಂತರ ಗುರಿಸೇರುವ ತನಕ, ಹಾದಿಯಲ್ಲಿ ಎದುರಾಗುವ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ನಿಲ್ಲಬೇಕು. ಎಷ್ಟೋ ಬಾರಿ ವ್ಯವಸ್ಥೆಯೆದುರು ದಂಗೆಯೇಳಬೇಕು. ಎಲ್ಲಿಯವರೆಗೂ ಈ ಹೋರಾಟ ಎನ್ನುವುದನ್ನು ಹೇಳುತ್ತಾ ಕವಿ.

ತನ್ನೊಳಗೆ ತನ್ನ ನಿಜದ ಸೆಲೆ ಪುಟಿವನಕ
ತನ್ನ ವ್ಯಕ್ತಿತ್ವಕೆ ಚಹರೆಯ ಪಟ್ಟಿ ಸಿದ್ಧವಾಗುವವರೆಗೆ
ತನ್ನ ಪರಿಮಿತಿಯೊಳಗೆ ಶಾಖೋಪಶಾಖೆಗಳು
ಹುಟ್ಟಿ ಹಬ್ಬುವವರೆಗೆ

ಎನ್ನುತ್ತಾರೆ. ಈ ರೀತಿಯ ಹೋರಾಟದಿಂದಲೇ ವ್ಯಕ್ತಿಯೊಬ್ಬ ಗಟ್ಟಿಯಾಗುತ್ತಾ ಹೋಗುತ್ತಾನೆ. ತನ್ನ ಪರಿಮಿತಿಯನ್ನು ಕಂಡುಕೊಳ್ಳುತ್ತಲೇ ಅದನ್ನು ಮೀರಲು
ಯತ್ನಿಸುತ್ತಾನೆ. ಹೊರಗಿನ ವ್ಯವಸ್ಥೆಗೆದುರಾಗಿ ಹೀಗೆ ಬಂಡಾಯವೇಳುವುದು ಸುಲಭವಾದರೆ ಮನದೊಳಗಿನ ವೈರಿಗಳ ವಿರುದ್ಧ ದಂಗೆಯೇಳುವುದು ತುಂಬಾ ಕಷ್ಟ! ಹೀಗೆ ಮನದೊಂದಿಗೆ ಹೋರಾಡಿ ಗೆದ್ದವನು ವಿಶಿಷ್ಟ ವ್ಯಕ್ತಿತ್ವದವನಾಗುತ್ತಾನೆ. ಸಮಾಜಕ್ಕೇ ಮಾನವತೆಯ ಸಂಕೇತವಾಗುತ್ತಾನೆ ಎನ್ನುತ್ತಾರೆ ಕವಿ.
ಕವನವಮ್ನ ಮುಂದುವರೆಸುತ್ತಾ,

ಬಂಡಾಯದ ಘೋಷ ಮೊಳಗುತ್ತಲೇ ಇರಬೇಕು.
ಗೊಂಚಲು ಗೊಂಚಲಾಗಿ ಸಿಹಿಸಿಹಿ ಹಣ್ಣು
ಪಕ್ವವಾಗುವವರೆಗೆ; ತಿರುಳ ಸಿಹಿ ಅನ್ಯರಿಗೆ
ಬಿತ್ತು ಭವಿಷ್ಯಕ್ಕೆ; ಮಾನವತ್ವದ ಬುನಾದಿಗಿನ್ನೊಂದು ಕಲ್ಲು
…………………………..

ಎನ್ನುತ್ತಾರೆ. ಮನದ ವಿಕಾರಗಳನ್ನೆಲ್ಲಾ ಗೆಲ್ಲುವುದು ಸುಲಭ ಸಾಧ್ಯವಲ್ಲವಾದರೂ ಆ ವಿಕಾರಗಳ ವಿರುದ್ಧ ದಂಗೆಯೇಳುತ್ತಲೇ ಇರಬೇಕು. ಯಾರಿಗೆ ಗೊತ್ತು ನಾಳೆಗೆ ಗೆಲುವೂ ಸಿಕ್ಕಬಹುದಲ್ಲವೇ ಸಖಿ ?
*****