ರಾವಣಾಂತರಂಗ – ೨

ರಾವಣಾಂತರಂಗ – ೨

ಪ್ರೇಮಯೋಗ

ಅನವರತವೂ ಯುದ್ಧಗಳಲ್ಲಿಯೇ ಕಾಲಕಳೆಯುತ್ತಿದ್ದ ನಾನು ಒಂದು ದಿನ ಬೇಟೆಯಾಡಲು ಮಲಯ ಪರ್ವತದ ತಪ್ಪಲಿಗೆ ಹೋಗಿ ಅನೇಕ ಕಾಡುಮೃಗಗಳನ್ನು ಸಂಹರಿಸಿದೆನು. ಹುಲಿ, ಸಿಂಹಗಳನ್ನು ಕೆಣಕಿ, ಕೆರಳಿಸಿ ಬೆದರಿಸಿ ಓಡಿಸಿದೆ. ಹೀಗೆ ಸಂಚರಿಸುತ್ತಾ ಆಯಾಸ ಪರಿಹರಿಸಿಕೊಳ್ಳಲು ತಾಣವನ್ನು ಹುಡುಕುತ್ತಿರುವಾಗ ಸುಂದರವಾದ, ಉದ್ಯಾನವೊಂದು ಕಣ್ಣಿಗೆ ಬಿತ್ತು. ಅಷ್ಟು ಸುಂದರವಾದ ಉದ್ಯಾನವನ್ನು ವರ್ಣಿಸಲು, ನೋಡಲು ಕಣ್ಣುಗಳೆರಡು ಸಾಲದು, ದೇವಲೋಕದ ನಂದನವನವೇ ಧರೆಗೆ ಇಳಿದಂತಿತ್ತು. ಮರವೊಂದರ ಕೆಳಗೆ ಕುಳಿತು ಸುತ್ತಲೂ ಕಣ್ಣಾಡಿಸಿದೆ. ಅಪ್ಸರ ಕನ್ನಿಕೆಯೊಬ್ಬಳು ಸಾಧು ಪ್ರಾಣಿಗಳೊಂದಿಗೆ; ಸ್ತಂಭೀಭೂತನಾದೆ. ಇಷ್ಟು ದಟ್ಟವಾದ ಅರಣ್ಯದಲ್ಲಿ ಸುಂದರವಾದ ಉದ್ಯಾನವನದಲ್ಲಿ ವಾಸಿಸುವ ಇವಳಾರು? ಗಂಧರ್ವಕನ್ಯೆಯೋ ಮೋಹಿನಿಯೋ, ಯಾರಿರಬಹುದು? ನೋಡಿ ಮಾತನಾಡಿಸಬೇಕೆಂದು ಹತ್ತಿರ ಹೋದೆ. ನನ್ನನ್ನು ಕಂಡು ಬೆದರಿದ ಹರಿಣಿಯಂತೆ ಓಡಹತ್ತಿದಳು. “ಸುಂದರಿ ನಿಲ್ಲು ನೀನಾರು? ಎಲ್ಲಿಂದ ಬಂದೆ, ಈ ಕಾಡಿನಲ್ಲಿರಲು ಭಯವಾಗುವುದಿಲ್ಲವೇ?” ಅವಳು ಲಜ್ಜೆಯಿಂದ ಕಾಲಿನ ಉಂಗುಷ್ಟದಿಂದ ನೆಲೆಕೆರೆಯ ತೊಡಗಿದಳು. ಅಪ್ರತಿಮ ಸೌಂದರ್ಯದಿಂದ ಮೋಹಿತನಾದೆ. ಮದುವೆಯಾದರೆ ಇವಳನ್ನೇ ಎಂದು ನಿರ್ಧರಿಸಿ ಅವಳ ಕೈಹಿಡಿಯಲು ಮುಂದಾಗುವಷ್ಟರಲ್ಲಿ ಅವಳು ಬೆದರಿ “ಅಪ್ಪಾ ಅಪ್ಪಾ” ಎಂದು ತಂದೆಯನ್ನು ಕೂಗಿದಳು. ಅಲ್ಲಿಯೇ ಮರೆಯಾಗಿದ್ದ ಮನುಷ್ಯನೊಬ್ಬನು ಪ್ರತ್ಯಕ್ಷನಾಗಿ ನನ್ನನ್ನು ಕಂಡು “ತಾವ್ಯಾರು ತಿಳಿಯಲ್ಲಿಲ್ಲ. ತಮ್ಮ ನಾಮಧೇಯವೇನು. ತಾವು ಇಲ್ಲಿಗೆ ಬರಲು ಕಾರಣವೇನು?” ಅದಕ್ಕೆ ಪ್ರತಿಯಾಗಿ ನಾನು ವಿನಯದಿಂದ “ಅದು ಸರಿ ತಾವು ಯಾರು? ಈ ಮನಮೋಹಕ ಉದ್ಯಾನವನದಲ್ಲಿ ಏನು ಮಾಡುತ್ತಿರುವಿರಿ? ಈ ಅನುಪಮ ಲಾವಣ್ಯವತಿ ಮೋಹಕ ನಗೆಯ ಚೆಲುವೆ ಯಾರು?”

“ಮಹಾನುಭಾವ ನಾನು ರಾಕ್ಷಸಶಿಲ್ಪಿಯಾದ ಮಯನು, ನಾನು ಹೇಮೆಯೆಂಬ ಅಪ್ಸರೆಯೊಡನೆ ನೂರಾರು ವರ್ಷ ಸುಖದಿಂದ ಸಂಸಾರ ಮಾಡಿದೆ. ಇಬ್ಬರು ಗಂಡುಮಕ್ಕಳು, ಮಂಡೋದರಿಯೆಂಬ ಈ ಕನ್ನಿಕೆಯೂ ಜನಿಸಿದರು. ನನ್ನ ದುರಾದೃಷ್ಟ ನನ್ನ ಪತ್ನಿಯನ್ನು ಕಳೆದುಕೊಂಡೆ. ಗಂಡು ಮಕ್ಕಳಿಬ್ಬರು ಯೋಗ್ಯ ಕನ್ಯೆಯೊಡನೆ ಮದುವೆಯಾಗಿ ಸುಖವಾಗಿದ್ದಾರೆ. ಈ ನನ್ನ ಮಗಳಾದ ಮಂಡೋದರಿಗೆ ಮದುವೆ ಮಾಡಲು ಯೋಗ್ಯ ವರನನ್ನು ಹುಡುಕುತ್ತಾ ಊರೂರು ಅಲೆಯುತ್ತಿದ್ದೇನೆ. ಸತ್ಪುರುಷನೇ ನೀನು ಯಾರು? ಯಾವ ದೇಶದವನು? ನೋಡಿದರೆ ದೈವಾಂಶ ಸಂಭೂತನಂತೆ ಕಾಣುವೆ. ನಿನ್ನ ಪೂರ್ವೋತ್ತರವನ್ನು ತಿಳಿಸು”

“ಶಿಲ್ಪಿಶ್ರೇಷ್ಟರೇ ನಾನು ಲಂಕಾಧಿಪತಿಯಾದ ರಾವಣನು ಪುಲಸ್ತ್ಯ ಬ್ರಹ್ಮನ ಮಗನಾದ ವಿಶ್ರವಸ್ಸು ನನ್ನ ತಂದೆ. ನನ್ನ ತಾಯಿ ಕೈಕಸೆ. ನನಗೆ ಇಬ್ಬರು ತಮ್ಮಂದಿರು. ಒಬ್ಬ ತಂಗಿಯೂ ಇದ್ದಾಳೆ. ನಾನಿನ್ನು ಅವಿವಾಹಿತನು, ನಿಮಗೆ ಒಪ್ಪಿಗೆಯಾದರೆ ನಿಮ್ಮ ಮಗಳನ್ನು ಮದುವೆಯಾಗುತ್ತೇನೆ”

ನನ್ನ ಮಾತುಗಳನ್ನು ಕೇಳಿ ಅವರಿಗೆ ಸಂತೋಷವಾಯಿತು. ತಮ್ಮ ಮಗಳಿಗೆ ಅನುರೂಪನಾದ ವರನೇ ಸಿಕ್ಕಿದನೆಂದು ಹಿಗ್ಗುತ್ತಾ “ಆಯಿತು. ನಾನೇ ಬಂದು ನಿಮ್ಮ ತಾಯಿಯೊಂದಿಗೆ ವಿವಾಹದ ಬಗ್ಗೆ ಮಾತುಗಳನ್ನಾಡುತ್ತೇನೆ” ಎಂದರು.

ಮತ್ತೊಮ್ಮೆ ಮಂಡೋರಿಯ ಮುದ್ದು ಮುಖವನ್ನು ನೋಡುತ್ತಾ ಒಲ್ಲದ ಮನಸ್ಸಿನಿಂದ ಲಂಕೆಗೆ ತೆರಳಿದೆ. ಮಾತುಕೊಟ್ಟಂತೆ ಶಿಲ್ಪಿವರ್ಯರು ಅರಮನೆಗೆ ಬಂದು ಅಮ್ಮನನ್ನು ಕಂಡು ಮದುವೆಯ ಬಗ್ಗೆ ಮಾತನಾಡುವಾಗ ಅಡ್ಡಬಂದವರು ತಾತ ಸುಮಾಲಿಯವರು. “ಅದು ಹೇಗೆ ಸಾಧ್ಯ ವಿವಾಹ ವಯಸ್ಸಿನ ಮಗಳನ್ನು ಮನೆಯಲ್ಲಿಟ್ಟುಕೊಂಡು ಮಗನಿಗೆ ಮದುವೆ ಮಾಡುವುದು ತರವಲ್ಲ. ಮೊದಲು ಶೂರ್ಪನಖಿಯ ವಿವಾಹ ನಡೆಯಲಿ ಆನಂತರ ರಾವಣನದು.”

ನಿರಾಶೆಯಾದರೂ ತಾತನ ಮಾತು ಮುರಿಯದೆ ಶೂರ್ಪನಖಿಗೆ ಒಳ್ಳೆಯ ವರಗಳಿಗಾಗಿ ಶೋಧಿಸಿದೆ. ಎಲ್ಲಿ ಹುಡುಕಿದರೂ ಬ್ರಾಹ್ಮಣ ವಂಶದಲ್ಲಿ ವರಗಳು ದೊರೆಯಲಿಲ್ಲ. ಕೊನೆಗೆ ರಕ್ಕಸರಲ್ಲಿ ಶ್ರೇಷ್ಠರಾದ ಕಾಲಿಕೇಯರ ಮಗನಾದ ವಿದ್ಯುಜ್ಜಿಹ್ವನಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡಿಸಿದೆ. ತನ್ನ ಸ್ವಾರ್ಥಕ್ಕಾಗಿ ಆತುರಾತುರವಾಗಿ ತಂಗಿಯ ಮದುವೆ ಮಾಡಿದನೆಂದು ಅಮ್ಮ ಗೊಣಗಿದಾಗ ಕೇಳಿಸಿದರೂ ಕೇಳದವನಂತೆ ನಡೆದುಕೊಂಡೆ. ಒಂದು ಶುಭದಿನ ಮಯಶಿಲ್ಪಿಗಳು ತಮ್ಮ ಮಗಳಾದ ಮಂಡೋದರಿಯೊಂದಿಗೆ ಲಂಕಾಪಟ್ಟಣಕ್ಕೆ ಬಂದಿಳಿದರು. ಅಮ್ಮ ಮಂಡೋದರಿಯನ್ನು ಕಂಡು ತನ್ನ ಮಗ ಸರಿಯಾದ ಕನ್ಯೆಯನ್ನು ಮೆಚ್ಚಿದ್ದಾನೆಂದು ಸಮಾಧಾನದ ನಿಟ್ಟುಸಿರುಬಿಟ್ಟುರು. ತನ್ನ ಅದ್ಭುತ ಕೈಚಳಕದಿಂದ ಲಂಕೆಯನ್ನು ದೇವಲೋಕದ ಅಮರಾವತಿಗಿಂತಲೂ ಒಂದು ಕೈ ಮೇಲಾಗುವಂತೆ ವೈಭವಯುಕ್ತವಾಗಿ ಮಾಡಿದರು. ಭರತಖಂಡದ ದಕ್ಷಿಣಕ್ಕಿರುವ ಸಮುದ್ರದ ನಡುವಿರುವ ತ್ರಿಕುಟಾಚಲವೆಂಬ ಪರ್ವತಶಿಖರದಲ್ಲಿ ದೊಡ್ಡದಾದ ಸುಂದರವಾದ ಪಟ್ಟಣವೇ ನನ್ನೂರು ಲಂಕೆ. ಅಂತಹ ಸುಂದರ ಪಟ್ಟಣವನ್ನು ಸುವರ್ಣಮಯವನ್ನಾಗಿ ಮಾಡಿದವರು ಮಾವನವರು, ಸಿಹಿನೀರಿನ ಕಾಲುವೆಗಳು, ಉದ್ಯಾನವನಗಳು, ವಿಸ್ತಾರವಾದ ಪೇಟೆ ಬೀದಿಗಳು, ದಿವ್ಯಾಲಂಕೃತ ಭವನಗಳು, ಇವೆಲ್ಲವನ್ನು ನೋಡಿ, ಇದು ನಿಜವಾಗಿಯೂ ನನ್ನ ಲಂಕೆಯೇ ಎಂದು ಬೆರಗಾದೆನು. ವಿಶ್ವದಲ್ಲಿಯೇ ಇಂತಹ ಸುಂದರ ನಗರ ಇನ್ನೊಂದಿರಲಾರದು. ತಮ್ಮ ಮಾಯಾಶಕ್ತಿಯಿಂದ ಚಿನ್ನದ ಲಂಕೆಯನ್ನಾಗಿ ಮಾಡಿ ಸುಂದರವಾದ ವಿವಾಹಮಂಟಪವನ್ನು ವಧೂವರರಿಗೆ ಉನ್ನತ ಸಿಂಹಾಸನಗಳನ್ನು ನಿರ್ಮಿಸಿದರು. ಬ್ರಾಹ್ಮಣ ಸಂಪ್ರದಾಯದಂತೆ ತಮ್ಮ ಮಗಳನ್ನು ಧಾರೆಯೆರೆದುಕೊಟ್ಟರು. ಶುಭ ಮಹೂರ್ತದಲ್ಲಿ ಮಂಡೋದರಿ ಮಡದಿಯಾದಳು ಮೈಮನ ತುಂಬಿದ ಮಂಡೋದರಿ ಪ್ರಾಣ ಪದಕವೇ ಆದಳು. ಅವಳ ನಯ, ವಿನಯ ಸಜ್ಜನಿಕೆ ತನ್ನ ತಾಯಿ ಕೈಕಸೆಗೆ ಮೆಚ್ಚುಗೆಯಾಯಿತು. ಅಮ್ಮನ ಮುದ್ದಿನ ಸೊಸೆಯಾಗಿ ನಾದಿನಿ, ಮೈದುನರ ಪ್ರೀತಿಯ ಅತ್ತಿಗೆಯಾಗಿ ಲಂಕೆಯ ಬೆಳಕಾಗಿ ಬಾಳಿದಳು. ಅವಳ ಒಲವಿನ ಒಡನಾಟದಲ್ಲಿ ಕಾಲಚಕ್ರ ಸರಿದುದ್ದೇ ಗೊತ್ತಾಗಲಿಲ್ಲ. ನಮ್ಮ ಪ್ರೇಮದ ಫಲವಾಗಿ ಹುಟ್ಟಿದವನು ಇಂದ್ರಜಿತ್ತು. ಹುಟ್ಟಿದ ಕೂಡಲೇ ಅಳುವ ಧ್ವನಿಯು ಸಿಡಿಲಿನಂತೆ ಕರ್ಣಕಠೋರವಾಗಿದ್ದರಿಂದ ಅವನಿಗೆ ಮೇಘನಾದನೆಂದು ಹೆಸರಿಟ್ಟೆ, ಅವನ ಬಾಲ್ಯ ಆಟ ಪಾಠಗಳಲ್ಲಿ ಇನ್ನಷ್ಟು ವರ್ಷಗಳು ಸಂದವು. ಅಕ್ಷಯ ಕುಮಾರ, ಅತಿಕಾಯರೆಂಬ ಮಕ್ಕಳು ಮನೆಯನ್ನು ಬೆಳಗಿದರು. ಆ ವರ್ಷಗಳಲ್ಲಿ ಏನೇನಾಗಬೇಕೋ ಎಲ್ಲವೂ ನಡೆದವು. ತಿಳಿದೋ ತಿಳಿಯದೋ ತಪ್ಪುಗಳು ನಡೆದು ಅನೇಕರ ಆಗ್ರಹಕ್ಕೆ ಗುರಿಯಾದೆ. ಶಾಪಕ್ಕೆ ನಡುಗಿದೆ. ಯಾರ ಶಾಪಕ್ಕೆ ನಡುಗಿದೆ. ಯಾರ ಶಾಪಕ್ಕೂ ಪಾಪಕ್ಕೂ ಹೆದರುವನಲ್ಲ ಈ ರಾವಣ; ಮೊದಲಿನಿಂದಲೂ ನನ್ನ ಸ್ವಭಾವವೇ ಹೀಗೆ, ನಾನೇನಂದು ಕೊಂಡಿದ್ದೆನೋ ಆ ಕಾರ್ಯ ಪಟ್ಟು ಹಿಡಿದು ಸಾಧಿಸಲೇಬೇಕು. ನನಗೆ ಸರಿ ಎನಿಸುವುದನ್ನು ನಾನು ಮಾಡಿಯೇ ತೀರುತ್ತೇನೆ. ಒಳಿತೋ ಕೆಡಕೋ ಅಂಜದೆ ಅಳುಕದೆ ಮುನ್ನಡೆಯುವ ಛಲಗಾರ, ಈಗಲೂ ಅಷ್ಟೆ ಸೀತೆಯನ್ನು ಅಪಹರಿಸಿ ಅಶೋಕವನದಲ್ಲಿಟ್ಟಿದ್ದೇನೆ. ಬಲವಂತನಾಗಿ ನನ್ನವಳಾಗಿಸುವ, ಅಥವಾ ಮದುವೆಯಾಗುವ ಹುನ್ನಾರ ನನಗಿಲ್ಲ. ತಂಗಿಗೆ ಅಪಮಾನ ಮಾಡಿದವರನ್ನು ಮಣಿಸುವ ಅವರ ಸೊಕ್ಕು ಮುರಿಯುವ ಇರಾದೆ ಅಷ್ಟೆ. ತಂಗಿ ಶೂರ್ಪನಖಿಯ ವೇದನೆ ತುಂಬಿದ ಮುಖ ಅಡ್ಡ ಬಂದು ಎಲ್ಲವೂ ಸ್ಮೃತಿಪಟಲದಲ್ಲಿ ಮಿಂಚಿ ಮರೆಯಾದವು.
*****

ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಶಯವೆ
Next post ನಾನಳಿದ ಮೇಲೆಯೂ ನನ್ನ ಪ್ರೀತಿಸಲಿಕ್ಕೆ

ಸಣ್ಣ ಕತೆ

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ದಾರಿ ಯಾವುದಯ್ಯಾ?

  ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys