ವಿಧಾನಸೌಧ ಎಂಬ ಮಾಯಾಬಜಾರ್

ವಿಧಾನಸೌಧ ಎಂಬ ಮಾಯಾಬಜಾರ್

ನಾನು ಶಾಲಾ ಬಾಲಕನಾಗಿದ್ದಾಗ ಬೆಂಗಳೂರನ್ನು ನೋಡುವುದು ಒಂದು ಕನಸಾಗಿತ್ತು. ಬೆಂಗಳೂರೆನ್ನುವುದು ಬಣ್ಣ ಬಣ್ಣದ ತೆರೆಗಳಲ್ಲಿ ತೇಲಾಡಿಸುವ ಸುಂದರ ಕನಸಿನ ಕಲ್ಪನೆಯಾಗಿದ್ದಂತೆ, ಜೀವಮಾನದಲ್ಲಿ ಬೆಂಗಳೂರು ದರ್ಶನ ಕೇವಲ ಕಲ್ಪನೆಯೇ ಆದೀತೇನೋ ಎಂಬ ಆತಂಕ, ಕನಸಿನ ಬೇರುಗಳಿಗೆ ಬೆಂಕಿ ಇಟ್ಟು ಬೋರಲಾಗಿ ಬೀಳುವಂತೆ ಮಾಡುತ್ತಿತ್ತು. ನನ್ನ ಹುಟ್ಟೂರಾದ ಬರಗೂರಿನಿಂದ ಹದಿನೈದು ಮೃಲಿ ದೂರದಲ್ಲಿದ್ದ ತಾಲ್ಲೂಕು ಕೇಂದ್ರವಾದ ಶಿರಾಕ್ಕೆ ಹೋಗುವುದು ದುಸ್ತರವಾಗಿದ್ದ ಸನ್ನಿವೇಶದಲ್ಲಿ, ಬೆಂಗಳೂರು ಬರಗೂರಿಗೆ ಬರುವುದಾಗಲಿ, ಬರಗೂರು ಬೆಂಗಳೂರಿಗೆ ಹೋಗುವುದಾಗಲಿ ಹೇಗೆ ಸಾಧ್ಯ ಎಂಬ ಆತಂಕದಲ್ಲಿ ಹಬ್ಬಿದ ನಿರಾಶೆಯ ಹೊಗೆಯಲ್ಲಿ ಕಣ್ತರೆಯುತ್ತಿದ್ದ ಕನಸಿನ ಛಲಕ್ಕೆ ಈಗಲೂ ನನಗೆ ಆಶ್ಚರ್ಯವಾಗುತ್ತದೆ. ಒಂದು ವೇಳೆ ಕನಸು ಕಮರಿದ್ದರೆ ನನ್ನ ನೋವಿನಲ್ಲಿ ನಗೆ ಚಿಗುರುತ್ತಿರಲಿಲ್ಲ. ನಗೆಯಲ್ಲಿರುವ ಹೊಗೆಯಂಚಿನ ಅನುಭವ ಆಗುತ್ತಿರಲಿಲ್ಲ. ಹಳ್ಳಿಗಾಡಿನ ಹುತ್ತದಲ್ಲಿ ಬುಸುಗುಡುವ ಹಾವು ನೋವುಗಳನ್ನು ಪುಂಗಿ ಕನಸುಗಳಲ್ಲಿ ತಮಣೆಗೊಳಿಸುವ ತೀವ್ರತೆ ನನ್ನಂಥವರನ್ನು ಇಲ್ಲಿವರೆಗೆ ಬದುಕಿಸಿದೆ. ಹಳ್ಳಿಯನ್ನು ಕೇವಲ ಕಾಡಾಗಿ ಕಾಣುತ್ತ ಹಳ್ಳಿಗಾಡೆಂದು ಕರೆಯುತ್ತಾ ಕೀಳರಿಮೆಗೆ ತಳ್ಳುವ ಹುಸಿ ವೈಭವಕ್ಕೆ ಮಾರಿ ಕೊಳ್ಳದೆ ಹಳ್ಳಿಯಲ್ಲೇ ಬಳ್ಳಿ ಹಬ್ಬಿಸುತ್ತ, ಆನಂದ ಪಡುವ ಮನಸ್ಥಿತಿ ಆತಂಕಗಳನ್ನು ಕಡಿಮೆ ಮಾಡುತ್ತದೆ. ಆದರೆ ಹಳ್ಳಿಗೆ ದಿಲ್ಲಿಯ ಕನಸು ಬೀಳುವುದನ್ನು ತಡೆದರೆ ಅದೊಂದು ಕ್ರೌರ್ಯವೇ ಸರಿ. ಚರಿತ್ರೆಯ ಚಕ್ರಗತಿಯನ್ನು ಅರ್ಥ ಮಾಡಿಕೊಂಡಿರುವ ಯಾರೂ ಹಳ್ಳಿಯನ್ನಾಗಲಿ, ದಿಲ್ಲಿಯನ್ನಾಗಲಿ ವಿನಾಕಾರಣ ವೈಭವೀಕರಿಸುವುದಿಲ್ಲ. ಪರಸ್ಪರ ಜನ್ಮ ವೈರಿಗಳ ಜಾಗದಲ್ಲಿಟ್ಟು ಹುಸಿ ಸಂತೋಷದಲ್ಲಿ ಹಾದಿ ತಪ್ಪುವುದಿಲ್ಲ. ಈ ಚರ್ಚೆ ಒತ್ತಟ್ಟಿಗಿರಲಿ: ಬರಗೂರಿಗೆ ಬೆಂಗಳೂರು ಒಂದು ಕನಸಾಗಿ ಕಾಡಿದ್ದನ್ನು ಅರ್ಥಮಾಡಿಕೊಳ್ಳುವ ಒಂದು ಹಾದಿಯಾಗಿ ಈ ಚರ್ಚೆಯ ಸೂಚನೆ ನೀಡಿದ್ದೇನೆ ಎಂದು ಗೊತ್ತಾದರೆ ಸಾಕು.

ಹಳ್ಳಿಯ ಶಾಲಾ ಬಾಲಕನೊಬ್ಬನಿಗೆ ಬೆಂಗಳೂರೆಂದರೆ ನೆನಪಿಗೆ ಬರುವ ಕನಸಿನ ಕಟ್ಟಡವೆಂದರೆ ವಿಧಾನಸೌಧ! ದಿ. ಕೆಂಗಲ್ ಹನುಮಂತಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಕಟ್ಟಿಸಿದ, ಕಾರಾಗೃಹದ ಖೈದಿಗಳು ಕಟ್ಟಿದ ಈ ವಿಧಾನಸೌಧವನ್ನು ಪಠ್ಯಪುಸ್ತಕದ ಚಿತ್ರದಲ್ಲಿ ನೋಡಿ, ಓದಿ, ಕೇಳಿ, ಕುತೂಹಲಗೊಂಡ ಮನಸ್ಸಿನಲ್ಲಿ ಅದೆಷ್ಟು ಹಕ್ಕಿಗಳು ಹಾರಾಡಿದ್ದವು! ಎಷ್ಟು ಪ್ರಯತ್ನ ಪಟ್ಟರೂ ಹಕ್ಕಿರೆಕ್ಕೆಗಳು ಸಿರಾದ ಸೀಮೋಲ್ಲಂಘನೆ ಮಾಡಲು ಸಾಧ್ಯವಾಗದೆ ಸುಸ್ತಾಗಿ ಎದೆಗೂಡಿನ ಮೂಲೆಯಲ್ಲಿ ಮುದುಡಿಕೊಂಡಾಗ – ಕಂಡದ್ದು ಬರಿ ಕತ್ತಲೆ, ಕಂಬನಿ ಮಿಡಿಯುವ ಕನಸುಗಳಿಗೆ ಉತ್ತರ ಹೇಳಲಾರದೆ ಮೌನ, ತನಗೆ ತಾನೇ ಹೆಪ್ಪುಗಟ್ಟುತ್ತ, ಶೀತವಾಗಿ ಕೊರೆಯುತ್ತಿದ್ದಾಗ, ಸಿರಾದ ಸಂತೆ, ಸಂತೋಷದ ಬಾಗಿಲನ್ನು ತೆರೆಯಿತು. ಒಮ್ಮೆ ಕಡಲೆಕಾಯಿ ಹೇರಿಕೊಂಡು ಸಂತೆಗೆ ಬಂದ ಎತ್ತಿನಗಾಡಿಯಲ್ಲಿ ಶಿರಾಕ್ಕೆ ಬಂದ ನಾನು ‘ಬೊಂಬಾಯಿ ನೋಡು ಕಲ್ಕತ್ತಾ ನೋಡು’ ಎಂದು ಬಣ್ಣದ ಮಾತಿನಲ್ಲಿ ಕರೆಯುತ್ತಿದ್ದರು ಪೆಟ್ಟಿಗೆಯೊಳಗೆ ವಿಧಾನಸೌಧವನ್ನು ಕಂಡು ಪುಳಕಿತಗೊಂಡು. ಎಂಥ ಮಾಯಾ ಪೆಟ್ಟಿಗೆ! ಒಂದಾದ ಮೇಲೊಂದರಂತೆ ಚಿತ್ರಗಳನ್ನು ತೋರಿಸುತ್ತಾ, ಒಂಟಿ ಕಣ್ಣಿಗೆ ಹಬ್ಬ ತುಂಬುತ್ತ, ಒಂಟಿ ಕಾಲಿನ ಕನಸುಗಳ ಕಂಬನಿಯನ್ನು ಒರೆಸಿದ ಸಾಂತ್ವನ ಶಕ್ತಿ ಅದರಲ್ಲಿತ್ತು. ಅದರಂತೆಯೇ ಹಂಬಲಗಳನ್ನು ವಿಸ್ತರಿಸಿತ್ತು. ಪೆಟ್ಟಿಗೆಯಲ್ಲಿ ನೋಡಿದ ಸೌಧವನ್ನು ಎದುರು ನಿಂತು ಎಂದು ನೋಡಬಹುದು ಎಂಬ ಬೆಂಬಲ ಹಬ್ಬಿ ನರನಾಡಿಗಳಲ್ಲಿ ಮಿಡಿಯುತ್ತಿರುವ ಮುಂದಿನ ಶಿಕ್ಷಣಕ್ಕೆಂದು ಜಿಲ್ಲಾ ಕೇಂದ್ರವಾದ ತುಮಕೂರಿಗೆ ಬಂದ ನನಗೆ ಬೆಂಗಳೂರಿಗೆ ಹತ್ತಿರದಲ್ಲಿದ್ದೇನೆಂಬ ಆನಂದ. ಪ್ರೌಢಶಾಲೆಯ ಶಿಕ್ಷಣಕ್ಕೆ ಹಳ್ಳಿಯಿಂದ ಇಷ್ಟು ದೂರ ಬಂದಿದ್ದೇನೆಂಬ ಸಾಹಸದ ಸಂತೋಷ. ಹಳ್ಳಿಯಿಂದ ಒಂದಿಂಚು ಹೊರಗೆ ಸಂಚರಿಸಿದಾಗ ಆಗುವ ಸೀಮೋಲ್ಲಂಘನ ಸಂತೋಷವನ್ನು ಅನುಭವಿಸಿಯೇ ತಿಳಿಯಬೇಕು. ತುಮಕೂರಿನಿಂದ ಬೆಂಗಳೂರಿಗೆ ಕೇವಲ ನಲವತ್ತಾರೇ ಮೈಲಿಯಂದು ತಿಳಿದಾಗ ರಾಜಧಾನಿಗೆ ಎಂದಾದರೂ ಕಾಲಿಡಬಹುದು. ವಿಧಾನಸೌಧವನ್ನು ಕಣ್ಣಿಗೆ ತುಂಬಿಕೊಳ್ಳಬಹುದು ಎಂದು ಕಾಯುತ್ತಲೇ ಶಬರಿಮನವಾದ ನನಗೆ ಆಸೆ ಕೈಗೂಡಿದ್ದು ೧೯೬೭ರಲ್ಲಿ. ತುಮಕೂರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬೆಂಗಳೂರಿನ ಕಲಾಮಂದಿರಕ್ಕೆ ಯುವ ಲೇಖಕನಾಗಿ ನನಗೆ ಶ್ರೀ ಎ. ಎಸ್. ಮೂರ್ತಿ ಯವರಿಂದ ಆಹ್ವಾನ. ‘ಯುವ ಲೇಖಕನಾಗಿ’ ಬೆಂಗಳೂರನ್ನು ಪ್ರವೇಶಿಸುವಾಗ ಇದೊಂದು ಐತಿಹಾಸಿಕ ಘಟನೆಯೆಂಬಷ್ಟು ಎದೆಬಡಿತ! ಕನಸಲ್ಲಿ ಕಾಡಿಸುತ್ತಿದ್ದ ವಿಧಾನಸೌಧದ ‘ದಿವ್ಯ ದರ್ಶನ’ಕ್ಕೆ ಕ್ಷಣಕ್ಷಣವೂ ಕಾತರಿಸುತ್ತ ಬಂದವನು, ಆಟೋಗಳ ಅಬ್ಬರ, ಜನ ಜಂಗುಳಿಯ ಬಣ್ಣ ಬಣ್ಣದ ಬಿರುಸು ಮತ್ತು ಧಿರಸುಗಳನ್ನು ಕಂಡು ದಿಕ್ಕೆಟ್ಟಂತೆ ನಿಂತೆ. ಧೈರ್ಯ ಮಾಡಿ ಒಂದು ಆಟೋ ಹತ್ತಿದೆ. ಇದು ವಿಧಾನಸೌಧದೆದುರು ಬರ್ರೆಂದು ಹೋಗುವಾಗ ಜೀವ ಹಿಡಿದು ಕೂತಿದ್ದವನ ಕಣ್ಣಿಗೆ ಆ ಸೌಧದ ಒಂದು ಕ್ಷಿಪ್ರ, ನೋಟವಷ್ಟೇ ಸಾಧ್ಯವಾಯಿತು. ಮತ್ತೆ ಆ ಜಾಗಕ್ಕೆ ಹೋಗಿ ನಿಧಾನವಾಗಿ ನೋಡಲು ಆಗ ಸಾಧ್ಯವಾಗದೆ ಮಾಯಾಸೌಧವಾಗಿಯೇ ಉಳಿದ ಈ ‘ಕಣ್ಕಟ್ಟಡ’ವನ್ನು ಕಂಡದ್ದು ಎಂ.ಎ. ಓದಲು ಬಂದಾಗಲೇ.

ವಿಧಾನಸೌಧ ಒಂದೊಂದು ಕಂಬವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಸುತ್ತಮುತ್ತ ಸುತ್ತುತ್ತ, ಒಳಗೆಲ್ಲ ನೋಡಲು ಸಾಧ್ಯವಾಗದೆ ಒಳಗೆ ತಳಮಳ ಸುತ್ತ ಇದ್ದಾಗ ಎರಡು ವರ್ಷ ಕಳೆದಿತ್ತು. ವಿಧಾನಸೌಧ ಒಳಗಿನ ದರ್ಶನ ಸ್ವಲ್ಪ ಸ್ವಲ್ಪವೇ ಆಗುತ್ತಾ ಹೋದಂತೆ ಹೊರಗಿನ ವೈಭವ ವ್ಯಂಗ್ಯವಾಗಿತೊಡಗಿತ್ತು. ಕಣ್ಣಿಗೆ ಕಟ್ಟಿದ ಕನಸಿನ ಪೊರೆ ಹರಿಯುತ್ತ, ಶಿಲ್ಪ ಸೌಂದರ್ಯವನ್ನು ಮೀರಿದ ಮನೋಧರ್ಮವೊಂದು ವಿಧಾನಸೌಧಕ್ಕೆ ನೆಟ್ಟ ನೋಟವಾಗಿ, ಬಿಟ್ಟ ಬಾಣವಾಗಿ, ರೂಪುಗೊಳ್ಳತೊಡಗಿತ್ತು. ಸೌಂದರ್ಯ ಪ್ರಜ್ಞೆ ಅರ್ಥವೂ ವಿಸ್ತಾರವಾಗ ತೊಡಗಿತ್ತು. ಒಳಗೆ ಹುನ್ನಾರಗಳನ್ನಿಟ್ಟುಕೊಂಡು ಹೊರಗೆ ವಯ್ಯಾರ ಬೀರುವ ವಂಚನೆಗೆ ವಾಸಸ್ಥಾನವಾಗುತ್ತಿರುವಂತೆ ಕಂಡ ವಿಧಾನಸೌಧ ಶಿಲ್ಪಕಲ್ಪನೆಯ ಸತ್ವ ಮರೆಯಾಗಿ ಕನಸುಗಳಿಗೆ ಕೊಳ್ಳಿಯಿಡುವ ಕತ್ತಲ ಕುಣಿತ ಕಂಡು, ಹಳ್ಳಿ-ದಿಳ್ಳಿಗಳ ನಡುವೆ ಬತ್ತಿದ ಬಳ್ಳಿಯಾಗಿದ್ದು, ನನ್ನೊಳಗೆ ಒಂದು ಹೊಸ ಚರಿತ್ರೆಯ ಹುಟ್ಟತೊಡಗಿದ್ದು, ಎಂಥ ವೈರುಧ್ಯ! ವಿಧಾನಸೌಧ ನನಗೆ ಕಲಿಸಿದ ದೊಡ್ಡ ಪಾಠವೆಂದರೆ – ಬದುಕು ವೈರುಧ್ಯಗಳ ಒಂದು ಒಕ್ಕೂಟ – ಎಂಬ ಕಟುವಾಸ್ತವ.

ವಿಧಾನಸೌಧದ ಬಗ್ಗೆ ಇಟ್ಟುಕೊಂಡಿದ್ದ ಕನಸು ಇಂದು ಕಣ್ಣು ಕಳೆದುಕೊಂಡ ಒಂದು ಕೊರಗಾಗಿರಬಹುದಾದರೂ, ವಿಧಾನಸೌಧ ಉಕ್ಕಿಸಿದ ವಿಷಾದೆ ಹೊಸ ನೋಟಗಳ ನಾಂದಿಯನ್ನು ಹಾಡಿದೆ. ರಾಜಕೀಯ ವ್ಯವಸ್ಥೆಯೊಂದರ ಒಳಹೊರಗನ್ನು ವಿವೇಕದಿಂದ ಕಾಣುವ ನೋಟದ ಜೊತೆಗೆ ಜೀವನದ ವಿವಿಧ ಮಗ್ಗಲುಗಳು ಪಡೆಯುತ್ತಿರುವ ವಿಧಾನಕ್ಕೂ ‘ವಿಧಾನ’ಸೌಧಕ್ಕೂ ಸಂಬಂಧ ಕಲ್ಪಿಸುವ ಜ್ಞಾನಕ್ಕೆ ಒತ್ತಾಸೆಯಾಗಿ ಕೆಲಸ ಮಾಡಿದೆ. ಸಂತೋಷ-ಸಂಕಟ ಉತ್ಸಾಹ-ವಿವೇಕಗಳನ್ನು ಒಟ್ಟಿಗೆ ಇಟ್ಟುಕೊಳ್ಳುವ ಒಳಗೊಂದನ್ನು ಬೆಳೆಸಿಕೊಳ್ಳುತ್ತಿರುವ ನನಗೆ ವಿಧಾನಸೌಧದ ಝಗಮಗಿಸುವ ಬೆಳಕಿನ ಗೆರೆಗಳನ್ನು ಕಾಣುತ್ತ ಖುಷಿ ಪಡುತ್ತಿರುವಾಗಲೇ ಒಳಗಿನ ಕತ್ತಲು ವಿಷಾದವಾಗಿ ಕಾಡಿಸಲು ಸಾಧ್ಯವಾಗುತ್ತಿದೆ. ಭವ್ಯತೆ ಮತ್ತು ಮಾನವತೆಗಳು ಒಂದಾಗಲೂ ಸಾಧ್ಯವಾಗದ ಸನ್ನಿವೇಶಕ್ಕೆ ಒದಗಿದ ಸಂಕೇತದಂತೆ ಕಾಣುವ ವಿಧಾನಸೌಧ ನಮ್ಮ ಸಾಮಾಜಿಕ ರಾಜಕೀಯ ಬೆಳವಣಿಗೆಗಳ ಮೂಕಸಾಕ್ಷಿಯಾಗಿ ಕಾಣಿಸುತ್ತಿದೆ. ಸಾಕ್ಷಿಗಳು ಮೂಕವಾಗುವುದರ ಅಪಾಯ ಮೌನ ಮಾನಾಪಹರಣಕ್ಕೆ ಹಾದಿಯೇ- ಎಂದು ಮೂಲಭೂತ ಪ್ರಶ್ನೆ ಏಳುತ್ತದೆ.

ಇಷ್ಟು ವರ್ಷಗಳಲ್ಲಿ ವಿಧಾನಸೌಧ ಏನೆಲ್ಲ ಕಂಡಿದೆ! ನನ್ನಂಥವರಿಗೆ ವಿಧಾನಸೌಧವನ್ನು ಕಾಣುವುದೇ ಕನಸಾಗಿದ್ದ ಕಾಲಕ್ಕೆ ಈ ಹೊತ್ತು ಕಾಲನ ಭಯ ಕಾಡಿಸುತ್ತಿದೆ. ಕಟ್ಟಡದ ಭವ್ಯತೆಯ ಬದಲು ಒಳಗಿರುವ ಕುರ್ಚಿಯ ಕನಸು ಹೆಚ್ಚಾಗಿ, ಅದು ಅನೇಕರಿಗೆ ನನಸಾಗಿ, ಕೆಲವರಿಂದ ಹೊಲಸಾಗಿ ಇತಿಹಾಸವಾಗಿದ್ದು ನಿಜವಾದರೂ ಉತ್ತಮವಾದದ್ದು ಅಲ್ಲಿ ಹುಟ್ಟೇ ಇಲ್ಲವೆಂದು ಹೇಳಲಾಗದು. ಕರ್ನಾಟಕ ರಾಜ್ಯ ಭೂಸುಧಾರಣೆ ಕಾನೂನು ಕನಸೊಡೆದದ್ದು ಇದೇ ಕಟ್ಟಡದಲ್ಲಿ. ಬಡವರಿಗೆ ತಲೆಯ ಮೇಲೊಂದು ಸೂರು ನಿರ್ಮಿಸುವ ಸಂಕಲ್ಪವಾದದ್ದು ಇದೇ ಸೌಧದಲ್ಲಿ. ಸಾಮಾಜಿಕವಾಗಿ ಆರ್ಥಿಕವಾಗಿ ತುಳಿಸಿಕೊಂಡು ಅಳಿಸಿಹೋಗುತ್ತಿದ್ದ ಸ್ತರಗಳು ಗಟ್ಟಿಸ್ವರಗಳಾಗಿ ವಿಧಾನಸಭೆಯಲ್ಲಿ ಜನಿಸಿದ್ದು ಇದೆ ವಿಧಾನಸೌಧದಲ್ಲಿಯೇ. ಹೀಗೆ ಜಾತಿ ಮತ್ತು ವರ್ಗಗಳಿಂದ ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಅಲ್ಪಸ್ವಲ್ಪ ಸಾಂತ್ವನಗೊಳ್ಳುವಂತೆ ಕೆಲಸಗಳು ರೂಪುಗೊಂಡ ಸೌಧವಾದದ್ದರಿಂದಲೇ ಪೂರ್‍ಣ ಕುರೂಪ ಆವರಿಸಿಕೊಂಡಿಲ್ಲ. ಆದರೂ ಒಳಗೆ ಆವರಿಸಿಕೊಂಡ ಭ್ರಷ್ಟತೆ, ಚಿಲ್ಲರೆ ತಂತ್ರಗಾರಿಕೆ, ಅಧಿಕಾರದ ಅಹಂಕಾರ, ಆಶ್ವಾಸನೆಗಳ ಮಹಾಪೂರ ಮುಂತಾದುವನ್ನು ಮರೆಯುವಂತಿಲ್ಲ.

ವಿಧಾನಸೌಧದ ಮೆಟ್ಟಲುಗಳಿಗೂ ಮೌನ ಚರಿತ್ರೆಯೊಂದಿದೆ. ಅದರ ಮೇಲೆ ಕೂತು ಸಂಜೆಯಲ್ಲಿ ಬೆಳಗಿನ ಕನಸು ಕಾಣುವ ಪ್ರೇಮಿಗಳು, ಹಾಯೆಂದು ನಿಟ್ಟುಸಿರು ದೋಣಿ ಬಿಡುವ ದಂಪತಿಗಳು, ನೆನಪಿನಲ್ಲಿ ನೋಟ ಬೀರುವ ಹಿರಿಯರು – ಎಲ್ಲರೂ ಮೆಟ್ಟಿಲುಗಳ ಮಿತ್ರರಾಗಿದ್ದಾರೆ. ಅಲ್ಲಿ ನಡೆಯುವ ಸಮಾರಂಭಗಳ ವೈಖರಿಯು ವಿಭಿನ್ನವಾಗಿದ್ದು, ಥರಾವರಿ ಮಾತುಗಳ ಮೇಲಾಟದಲ್ಲಿ ಮೆಟ್ಟಿಲುಗಳು ಮಾತು ಕಳೆದುಕೊಂಡು ಹೊಸ ಕಾಲಕ್ಕೆ ಕಾಯುತ್ತಿರಬಹುದೇನೋ ಎಂಬ ಒಳಗಿನಾಸೆ ನನ್ನಂಥವರಿಗೆ. ಇನ್ನು ಒಳಗಡೆಯಾದರೂ ಅಷ್ಟೇ; ಥರಾವರಿ ಶೈಲಿಯ ಮನುಷ್ಯರು; ಮಾತುಗಾರರು. ಇಂಥವರ ನಡುವೆ ನಿರೀಕ್ಷೆ ಹೊತ್ತು ಬಂದು ಬಾಡಿದ ಮುಖಗಳು, ಶಾಸಕ ಮಂತ್ರಿಗಳ ಮಾಮೂಲಿ ಪತ್ರ ಸಿಕ್ಕಿದರೂ ಸಂತೋಷ ಅರಳಿ ಜೀವನ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವ ಜನಸಾಮಾನ್ಯರು ಪುನರ್ ನವೀಕರಣಗೊಳ್ಳುವ ರೀತಿಯೇ ವಿಚಿತ್ರವಾದದ್ದು; ವಿಶಿಷ್ಟವಾದದ್ದು. ಏನೋ ಆದೀತು, ಎಂಬ ಆಸೆಯಲ್ಲಿ ಉಸಿರ್‍ಆಡುವ ಇವರ ಇಚ್ಛಾಶಕ್ತಿ ಒಂದು ಜೀವನದರ್ಶನವೇ ಸರಿ.

ಎದುರಿಗೆ ಜನಸಾಮಾನ್ಯರನ್ನು ಸಾಕಷ್ಟು ಕಾಯುವ ನ್ಯಾಯಾಂಗದ ರಾಜ್ಯ ಶಿಖರವಾದ ಹೈಕೋರ್ಟ್, ಮುಂದುಗಡೆಯಲ್ಲಿ ಉದ್ಯೋಗ ಲೋಕದ ವೈರುಧ್ಯಗಳನ್ನು ಹೊತ್ತು ನಿರುದ್ಯೋಗಿಗಳ ನಿರೀಕ್ಷಣಾ ಕೇಂದ್ರವಾದ ಲೋಕಸೇವಾ ಆಯೋಗ, ಒಂದು ಪಕ್ಕದಲ್ಲಿ ಆಶ್ವಾಸನೆಗಳನ್ನು ಅಚ್ಚು ಮಾಡುವ ಸರ್ಕಾರಿ ಮುದ್ರಣಾಲಯ, ಇನ್ನೊಂದು ಪಕ್ಕದಲ್ಲಿ ಯಾಂತ್ರಿಕತೆ ಹೆಸರಾದ ಹುದ್ದೆಗೆ ವಾಸಸ್ಥಾನವಾದ ರಾಜ್ಯಪಾಲ ಭವನ-ಇಂಥ ನಾಲ್ಕು ದಿಕ್ಕುಗಳ ನಡುವೆ ನಮ್ಮ ವಿಧಾನಸೌಧ ನಿಂತಿದೆ ಎಂದರೆ ಬೇರೆ ವ್ಯಾಖ್ಯಾನವೇ ಬೇಕಿಲ್ಲ. ಉತ್ತಮ ಉದ್ದೇಶದಿಂದ ಬರೆಸಿದ ‘ಸರ್ಕಾರದ ಕೆಲಸ ದೇವರ ಕೆಲಸ’ ಎನ್ನುವುದು ವಿಧಾನಸೌಧಕ್ಕೆ ಒಂದು ವ್ಯಾಖ್ಯಾನವಾಗಿರುವುದನ್ನು ಇಲ್ಲಿ ಉಲ್ಲೇಖಿಸಬೇಕು. ವಿಧಾನಸೌಧದವರು- ಅಂದರೆ ಸರ್ಕಾರದವರು ಯಾಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ವೆಂಬುದಕ್ಕೆ ಉತ್ತರ- ‘ಸರ್ಕಾರದ ಕೆಲಸ ದೇವರ ಕೆಲಸ’. ದೇವರು ಮಾಡಬೇಕಾದ ಕೆಲಸವನ್ನು ಇವರು ಮಾಡುವುದಾದರೂ ಹೇಗೆ? ಆದ್ದರಿಂದ ಸರ್ಕಾರದ ಕೆಲಸವನ್ನು ಕಾಣದ ದೇವರಿಗೆ ಬಿಟ್ಟು ತಂತಮ್ಮ ಕೆಲಸಗಳನ್ನು ಮಾತ್ರ ಮಾತಾಡಿಕೊಳ್ಳುತ್ತಿರಬಹುದು!
*****
೦೩-೦೪-೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾವ್ಯ
Next post ಜಲಾಲುದ್ದೀನ್ ಜಲಾಲಿ

ಸಣ್ಣ ಕತೆ

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys