ಅನಾದಿಯ ವಯಸ್ಸಲ್ಲಿ ಒಮ್ಮೆ
ಕಾವ್ಯ ಬಂದಿತ್ತು ನನ್ನನ್ನು ಹುಡುಕಿಕೊಂಡು.
ಗೊತಿಲ್ಲ, ನನಗೆ ಗೊತಿಲ್ಲ
ಎಲ್ಲಿಂದ ಬಂತೋ, ನದಿಯಿಂದಲೋ, ಚಳಿಯಿಂದಲೋ,
ಹೇಗೆ ಬಂತೋ ಯಾವಾಗ ಬಂತೋ ಗೊತಿಲ್ಲ.
ದಿನಗಳಿರಲಿಲ್ಲ, ಶಬ್ಬಗಳಿರಲಿಲ್ಲ, ನಿಶ್ಯಬ್ದವಿರಲಿಲ್ಲ.
ಬೀದಿಯಲ್ಲಿದ್ದ ನನ್ನನ್ನು ಕರೆಯಿತು.
ಕತ್ತಲ ಕೊಂಬೆಗೆ ಜೋತುಬಿದ್ದವನನ್ನು,
ಬೆಂಕಿಯುರಿಯಲ್ಲಿದ್ದವನನ್ನು,
ಒಬ್ಬನೇ ವಾಪಸ್ಸು ಹೋಗುತ್ತಿದ್ದವನನ್ನು,
ಸಾವಿರ ಜನರಲ್ಲಿ ಒಬ್ಬನಾಗಿ ಮುಖವಿಲ್ಲದಿದ್ದವನನ್ನು,
ಕರೆದು ಮೈದಡವಿತು.

ಏನು ಹೇಳಲಿ? ತಿಳಿಯಲಿಲ್ಲ,
ನಾಲಗೆಯಲ್ಲಿಶಬ್ದವಿರಲಿಲ್ಲ, ಕಣ್ಣಲ್ಲಿ ಬೆಳಕಿರಲಿಲ್ಲ.
ಜ್ವರವೋ, ಹಾರಲು ಮರೆತ ರೆಕ್ಕೆಗಳೋ
ನನ್ನ ಮನಸ್ಸಿನೊಳಗೇನೋ ಚಲನೆ.

ಒಳಗಿನ ಕಿಡಿಯ ಬೆಳಕಿನಲ್ಲಿ
ಒಂದಿಷ್ಟು ದಾರಿಮಾಡಿಕೊಂಡೆ.
ಮೊದಲ ಸಾಲು ಬರೆದೆ.
ಅಸ್ಪಷ್ಟ, ಅರ್ಥಹೀನ, ಅಶಕ್ತಸಾಲು,
ಏನೇನೂ ಗೊತ್ತಿಲ್ಲದವನ
ಶುದ್ಧ ವ್ಯರ್‍ಥಾಲಾಪ, ಶುದ್ಧ ಜ್ಞಾನ.

ತಟ್ಟನೆ ಆಕಾಶದ ಚಿಲಕ ತೆಗೆದು
ಗ್ರಹ ತಾರೆಗಳು ಮೈದೆರೆದು
ಸುತ್ತಿಕೊಂಡ ಕತ್ತಲಲ್ಲಿ
ಜಗದ ಮೇಲೆ
ಬಾಣ, ಬೆಂಕಿ, ಹೂಗಳ ಒಗಟು ತೂರುವ
ನೆರಳ ರಂಧ್ರಗಳು.
ನಾನು, ಅಣುವಿನಣುವಿನಣುವಾದ ನಾನು
ನಕ್ಷತ್ರ ಖಚಿತ ಮಹಾ ಶೂನ್ಯವನ್ನು
ಅಗಾಧ ರಹಸ್ಯದ ಬಿಂಬವನ್ನು ಹೀರಿ
ಪರಿಶುದ್ಧ ಬಯಲ ಅಂಶವಾಗಿ
ನಕ್ಷತ್ರಗಳೊಡನೆ ಹೊರಳಿದೆ.
ನನ್ನೆದೆ ಭಾವ ಗಾಳಿಯೊಡನೆ ತೇಲಿತು.
*****
ಮೂಲ: ಪಾಬ್ಲೋ ನೆರುಡಾ

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)