ಪ್ರೇಮಿಗಳು ಮದುವೆಯಾದಾಗ
ಸಗ್ಗದನುಭವದ ಚಣಗಳಿಗೆ ತೆರವಾಗುವರು
ಎಂದಿಗೂ ಜತೆಬಿಡದ ಭಾವದಲಿ
ಸಮ್ಮಾನಿಸಿಕೊಂಡ ಹಿಗ್ಗನು ಪಡೆಯುವರು,
ವಧು ಸದಾ ಸುಂದರಿ
ವರ ಬಲು ಭಾಗ್ಯವಂತ
ರಕ್ತಮಾಂಸಗಳ ಗರ್ಜನೆಯಿಂದ
ಕೋಣೆಯೊಳಗಣ ಕತ್ತಲು ಹೊರದಬ್ಬಿ ಬರಲು
ನಗ್ನತೆಯ ಭ್ರಮೆಯೂ ಚಂದ!
ಎಲ್ಲ ನಂಬಿಯೆ ನಾನು ಮುಂದುವರಿದೆ
ನಮ್ಮ ಪ್ರೀತಿ ಆದಿ ಪತನವ ಮೀರಿ
ಮರದ ಸಾಲಿನ ನಡುವೆ ಉದ್ದಕೆ
ನಡೆವಾಗ ಮೌನದಿಂದ
ಅಮರತೆಯ ತಂಗಾಳಿ ಮನಹೊಕ್ಕು
ಮುದಗೊಳಿಸುವುದ ತಿಳಿದೆ.
ದೂರವಾದರು ಬಹಳ ಸಲ
ಮರಳಿ ಅಂತೆಯೆ ನಡೆಯುತಿರೆ
ಒಮ್ಮೆಲೆ ಕೇನತೆಯ ಗುರುತು
ಕಾಣತೊಡಗಿತು.
ನನ್ನಲ್ಲಿ ಅವಳಲ್ಲಿ….
ನೋವಿನಳಲನೆ ಇಂತು ಹೇಳುತ್ತ
ಮದುವೆಯ ಗೂಢವನು
ನಾನೇಕೆ ಮುರಿಯಲಿ
ಅದರ ಎಲ್ಲ ಕಾಲದ ಅತಿಥಿ
ನಾನೊಬ್ಬನಾಗಿರಲು ಭವದಲಿ
*****
ಮೂಲ: ನೀಸ್ಸಿಮ್ ಎಜಕೀಲ್
(Marriage)