೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ.
ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ ಕನ್ನಂಬಾಡಿ ವೆಂಕಟಪತಯ್ಯನೆಂಬಾತನನ್ನು ಸೇರಿಸಿಕೊಂಡು ಆಡಳಿತವನ್ನು ಮೊದಲಿಟ್ಟರು. ಮೂವರೂ ಸೇರಿ ಅರಮನೆಯ ಆದಾಯದಲ್ಲಿ ಸಾಧ್ಯವಾದಷ್ಟು ಹಣವನ್ನು ತಾವೇ ಸ್ವಂತ ವೆಚ್ಚಕ್ಕಾಗಿ ಉಪಯೋಗಿಸಿಕೊಂಡುದಲ್ಲದೆ ತನ್ನ ಊಳಿಗದವರು ಲಂಚ ತಿಂದು ಶಿಫಾರಸುಮಾಡಿದವರಿಗೆ ಕೆಲಸಗಳನ್ನು ಮಾಡಿಸುತ್ತಲಿದ್ದರು. ಅಯೋಗ್ಯರಾದವರು ಅಧಿಕಾರಿಗಳಾದುದಲ್ಲದೆ ರಾಜ್ಯದ ಆದಾಯವು ಈ ಮೂವರ ಮತ್ತು ಅವರ ಅನುಚರರ ಪಾಲಾಗುತ್ತಿತ್ತು.
ಹೀಗೆ ೫-೬ ವರ್ಷಗಳು ನಡೆದವು. ವಂಚನೆಯಿಂದ ಮೂವರೂ ಹಣವನ್ನು ಸಂಪಾದಿಸಿದ ನಂಜರಾಜಯ್ಯನೂ ಐಶ್ವರ್ಯವನ್ನು ಸೇಕರಿಸಿಕೊಂಡಿದ್ದನು. ಆತನಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅಂತ್ಯಕಾಲವು ಸಮೀಪವಾಯಿತು. ಆಗ ನಂಜರಾಜಯ್ಯನು ತಾನು ಮಾಡಿದ ನೀಚಕಾರ್ಯಕ್ಕೆ ಮನಸ್ಸಿನಲ್ಲಿ ನೊಂದುಕೊಂಡನು. ತಾನು ಗಳಿಸಿಟ್ಟ ದ್ರವ್ಯವು ರಾಜರದೇ ಆಗಿದ್ದುದರಿಂದ ತನ್ನ ಕುಟುಂಬ ಚಂದಾಯಮ್ಮಣ್ಣಿಯ ಜೀವನಕ್ಕೆ ಮಾತ್ರ ಸ್ವಲ್ಪ ಉಳಿಸಿಕೊಂಡು ಉಳಿದ ೨ ಲಕ್ಷ ವರಹಗಳಷ್ಟು ಧನವನ್ನು ದೊರೆಗಳಿಗೆ ತಂದೊಪ್ಪಿಸಿದನು. ಮಾತುಶ್ರೀಯವರನ್ನು ಕಂಡು ಯಥಾರ್ಥವನ್ನು ತಿಳಿಸಿ ದುಷ್ಟರ ವಿಷಯವಾಗಿ ಎಚ್ಚರಿಕೆ ಕೊಟ್ಟು ಪಶ್ಚಾತ್ತಾಪಡುತ್ತ ಈತನು ೧೭೩೯ರಲ್ಲಿ ಶ್ರೀರಂಗಪಟ್ಟಣದಲ್ಲಿಯೇ ಕಾಲವಾದನು. ಸಾಯುವ ಕಾಲದಲ್ಲಿ “ನನ್ನ ತರುವಾಯು ನನ್ನ ಪದವಿಗೆ ದಳವಾಯಿ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜನು ಬಂದರೆ ತೊಂದರೆಯೇ ಸಂಭವಿಸುವುದು” ಎಂದು ಎಚ್ಚರಿಸಿದ್ದನು. ಆದರೂ ಸರ್ವಾಧಿಕಾರಿತನವು ಆ ಕರಾಚರಿ ನಂಜರಾಜಯ್ಯನಿಗೇ ಪ್ರಾಪ್ತವಾಯಿತು.
*****
[ವಂಶರತ್ನಾಕರ ಪುಟ ೧೬೫ ; ವಂಶಾವಳಿ-ಪುಟ ೧೭೫-೧೭೬; ಮತ್ತು ವಿಲ್ಕ್ಸ್, ಮುಂದಿನ ಕಥೆಗಳಲ್ಲಿ ವಿಲ್ಕ್ಸ್ ಗ್ರಂಥವನ್ನೇ ಹೆಚ್ಚಾಗಿ ಅವಲಂಬಿಸಿದೆ]


















