Kinchittuಹೋಗಬೇಕು, ಹೋಗಿ ನೋಡಬೇಕು. ನೋಡಿ ನಾಲ್ಕು ಸಾಂತ್ವನದ ಮಾತು ಹೇಳಿ ಬರಬೇಕು ಎಂದು ಪ್ರತಿದಿನವೂ ಅನ್ನಿಸುತ್ತದೆ. ಹೃದಯ ಹೋಗು ಹೋಗು ಎನ್ನುತ್ತದೆ. ಮನಸ್ಸು ಒಮ್ಮೊಮ್ಮೆ ತಿರುಗೇಟು ಹಾಕುತ್ತದೆ. ಮನಸ್ಸಿಗೇಕೆ ಹೃದಯದ ಭಾಷೆ ಅರ್ಥವಾಗುವುದಿಲ್ಲ? ಅಥವಾ ಅರ್ಥವಾದರೂ ಆಗದಂತೆ ನಟಿಸುತ್ತದೆಯೆ?

ಮೇಸ್ಟ್ರು ಹಾಸಿಗೆ ಹಿಡಿದು ಮಲಗಿ ಬಿಟ್ಟಿದ್ದಾರೆ. ನಿತ್ಯವಿಧಿ ಹೇಗೋ ಪೂರೈಸಿಕೊಳ್ಳುತ್ತಾರೆ. ಓದು ಬರಹ ನಿಂತೇ ಬಿಟ್ಟಿದೆ ಯಂತೆ ಎಂದು ಚಂದ್ರ ಬಂದು ಹೇಳಿದ್ದ. ಅವ ಮೇಸ್ಟ್ರನ್ನು ತುಂಬಾ ಹಚ್ಚಿಕೊಂಡಿದ್ದ. ಅವನೆಂದೇನು? ಅವನಿಗಿಂತ ಅವಳು ಆರನ್ನು ಹೆಚ್ಚು ಹಚ್ಚಿಕೊಳ್ಳಲಿಲ್ಲವೇ? ಮೇಸ್ಟ್ರನ್ನು ಹಚ್ಚಿಕೊಳ್ಳದಿದ್ದವರು ಸಿಗುತ್ತಿದ್ದುದೇ ಅಪರೂಪ. ಕಂಡಾಗೊಂದು ಮುಗುಳ್ನಗು. “ಹೇಗಿದ್ದೀಯಾ?” ಎಂಬ ಒಂದು ಮಾತು. “ನೀನು ನನ್ನ ನೆನಪಿನಲ್ಲಿ ಇರುತ್ತೀಯಾ” ಎಂಬ ಒಂದು ಆತ್ಮೀಯತೆ. ಇಷ್ಟು ಸಾಕಿತ್ತು ಎಂತವರನ್ನೂ ಕಟ್ಟಿಹಾಕಲು.

ಕಾಲೇಜಿಗೆ ಸೇರುವುದಕ್ಕೆ ಮೊದಲೇ ಮೇಸ್ಟ್ರಬಗ್ಗೆ ಅವಳಿಗೆ ಗೊತ್ತಿತ್ತು. ಪತ್ರಿಕೆಗಳಲ್ಲಿ ಆಗಾಗ ಏನಾದರೊಂದು ಸುದ್ದಿಯಲ್ಲಿ ಇರುತ್ತಿದ್ದರು. ಸಾಹಿತ್ಯ, ಯಕ್ಷಗಾನ, ನಾಟಕಗಳನ್ನು ಸಂಘಟಿಸುತ್ತಿದ್ದರು. ಪುಸ್ತಕ ಬರೆಯುತ್ತಿದ್ದರು. ಆಕಾಶವಾಣಿಯ ಕತೆಗಳ ಮೂಲಕ ಮನೆಯೊಳಗೇ ನೇರವಾಗಿ ಬಂದು ಬಿಡುತ್ತಿದ್ದರು. ಹಾಗೆಯೇ ಮನದೊಳಕ್ಕೂ. ಅದಕ್ಕೆಂದೇ ಅವಳು ಅವರಿರುವ ಕಾಲೇಜನ್ನು ಆರಿಸಿದ್ದು.ಏಕತಾನತೆಯ ನೀರಸ ಬದುಕಿಕೊಂದು ವಿಭಿನ್ನ ಆಯಾಮ ಸಿಗಲೆಂದು ಬಯಸಿದ್ದು.

ಕಾಲೇಜಿಗೆ ಸೇರುವ ಮೊದಲೇ ಅವರನ್ನು ಕಂಡಾಗ ಅವಳ ಕೈಗಳು ಜೋಡಿಯಾಗಿ ಬಿಡುತ್ತಿದ್ದವು. ಅವರು ಮುಗುಳ್ನಕ್ಕು ನಮಸ್ಕರಿಸುವಾಗ ಅವರ ನಗುವಿನಲ್ಲಿ ಎಂತಹ ಆತ್ಮವಿಶ್ವಾಸವಿದೆ ಎಂದು ಅವಳಿಗೆ ಅನ್ನಿಸಿತ್ತು. ದಿನಾ ಅವಳು ಭೇಟಿಯಾಗುವ ಜನ, ಹೆಚ್ಚೇಕೆ ಅವಳತಂದೆ-ತಾಯಿ ಯಾರಲ್ಲೂ ಅಂತಹಾ ಆತ್ಮವಿಶ್ವಾಸದ ನಗುವನ್ನು ಅವಳು ಕಂಡಿರಲಿಲ್ಲ.

ಪುಸ್ತಕದಂಗಡಿಯೊಂದರ ಎದುರು ಅವಳು ನಮಸ್ಕರಿಸಿದಾಗ ಜೀವನದಲ್ಲಿ ಮೊದಲ ಬಾರಿ ಮೇಸ್ಟ್ರು ಮಾತಾಡಿದ್ದರು.” ನೋಡಿದರೆ ನಮ್ಮ ಕಾಲೇಜಿನವಳಂತ್ತಿಲ್ಲ. ಕಂಡಾಗೆಲ್ಲ ನಮಸ್ಕಾರ ಮಾಡುತ್ತೀಯಲ್ಲಮ್ಮ, ಯಾರು ನೀನು? ಸಾಮಾನ್ಯವಾಗಿ ಏನಾದರೂ ಕೆಲಸವಾಗಬೇಕಿದ್ದರೆ ಮಾತ್ರ ಮೇಸ್ಟ್ರುಗಳಿಗೆ ನಮಸ್ಕಾರ ಸಿಗೋದು.” ಎಂದು ಕಣ್ಣು ಮಿಣುಕಿಸಿ ನಕ್ಕಿದ್ದರು. ಹಾಸ್ಯದ ಗಳಿಗೆ ಯಲ್ಲೂ ಆತ್ಮವಿಶ್ವಾಸದ ನಗು.

ಮೇಸ್ಟ್ರು ಪಾಠಕ್ಕಾಗಿಯೇ ಅವಳು ಅವರ ಕಾಲೇಜಿಗೆ ಪಿ.ಯು.ಸಿ.ಗೆ ಸೇರಿದ್ದು. ಆರಂಭದಲ್ಲಿ ಮೇಸ್ಟ್ರು ಅವಳ ಕ್ಲಾಸಿಗೆ ಬರುತ್ತಿರಲಿಲ್ಲ. ಅವಳು ಹೇಳಿದ್ದಕ್ಕೆ ಮಕ್ಕಳೆಲ್ಲ ಸೇರಿ ಪ್ರಿನ್ಸಿಪಾಲರಲ್ಲಿ ನಿಯೋಗ ಹೋದದ್ದಕ್ಕೆ ಮೇಸ್ಟ್ರು ಕ್ಲಾಸಿಗೆ ಬರುವಂತಾದದ್ದು. ಆ ವರೆಗಿನ ನೀರಸ ಪಾಠಗಳು ಅವರಿಂದಾಗಿ ವರ್ಣರಂಜಿತವಾದದ್ದು. ಅವಳೂ ಸೇರಿದಂತೆ ಎಲ್ಲರೂ ದಿನಾ ಲೈಬ್ರೆರಿಗೆ ಹೋಗುವಂತಾದದ್ದು. ಮೇಸ್ಟ್ರ ಪಾಠಕ್ಕಾಗಿ ಅವರೆಲ್ಲ ಕಾಯುವಂತಾದದ್ದು. ಮೇಸ್ಟ್ರು ಅಂದರೆ ಹೀಗಿಲಬೇಕು ಅಂತ ಅವರಿಗೆಲ್ಲ ಅನ್ನಿಸಿದ್ದು.ಮೇಸ್ಟ್ರು ಬರೆಯುತ್ತಿದ್ದ ಕತೆಗಳು, ಅವರ ಗಡ್ಡ, ಕನ್ನಡಕ, ಯಕ್ಷಗಾನದ ಪಾತ್ರಗಳು, ಬಡಮಕ್ಕಳಿಗೆ ಕೊಡುತ್ತಿದ್ದ ನೆರವು, ನೀಡುತ್ತಿದ್ದ ಆತ್ಮವಿಶ್ವಾಸ, ವಿಮರ್ಶೆಯ ವಸ್ತುಗಳಾದದ್ದು. ಒಂದೇ ಎರಡೇ.

ಪಿ.ಯು.ಸಿ.ಯ ಕೊನೆಯಲ್ಲಿ ಓದಿದ್ದು ಯಾವುದೂ ನೆನಪಲ್ಲಿ ಉಳಿಯದೆ ಕಾಲೇಜೇ ಬೇಡವೆಂದು ಅವಳು ಮನೆಯಲ್ಲಿಯೇ ಉಳಿದು ಬಿಟ್ಟಳು. ವಿಷಯ ಗೊತ್ತಾಗಿ ಮೇಸ್ಟ್ರು ಹೇಳಿ ಕಳಸಿದರು. ಅವರ ಮನೆಗೆ ಅವಳು ಮೊದಲು ಹೋದದ್ದು ಅದೇಬಾರಿ. ಅವಳಿಗೆ ಅಂದಿನ ಸಂಭಾಷಣೆ ಅಕ್ಷರಕ್ಷರ ನೆನಪಿನ ಪದರದಲ್ಲಿ ಉಳಕೊಂಡಿತ್ತು. ಅವಳಿಗದು ನೆನಪಾಯಿತು. ಏನು ಕೊಂಡು ಹೋಗಿದ್ದೆ? ತಿಂಡಿ? ಹೆಣ್ಣು? ಏನೂ ಕೊಂಡು ಹೋಗಿರಲಿಲ್ಲ!

ಮೇಸ್ಟ್ರು ಅವಳನ್ನು ಗದರಿದ್ದರು : “ಏನು ಹುಚ್ಚು ನಿನಗೆ? ಹೆಣ್ಣಿನ ಶಿಕ್ಷಣಕ್ಕೆ ಬೇರೆಯವರು ಕಲ್ಲು ಹಾಕುವುದುಂಟು. ಸ್ವಯಂ ಅವಳೇ ಕಲ್ಲು ಹಾಕಿಕೊಳ್ಳುವುದೆಂದರೇನು?”

ಅವಳು ತೊದಲಿದ್ದಳು : “ಏನು ಮಾಡುವುದು ಸರ್. ಅಪ್ಪನಿಗೆ ಕಾಯಿಲೆ, ಅಮ್ಮನಿಗೆ ತೋಟ ನಿಭಾಯಿಸಲಿಕ್ಕಾಗುವುದಿಲ್ಲ. ಇರೋಳು ನಾನೊಬ್ಬಳು ಮಗಳು. ಈ ಒತ್ತಡದಲ್ಲಿ ಓದೋದಕ್ಕಾಗುವುದಿಲ್ಲ. ಓದಿದ್ದು ನೆನಪಿನಲ್ಲಿ ಉಳಿಯೋದಿಲ್ಲ. ಪಾಸಾದ್ರೂ ಅಪ್ಪ-ಅಮ್ಮ ಬಿ.ಎ.ಗೆ ಕಳಿಸಲ್ಲ. ಮದುವೆ ಮಾಡಿ ಬಿಡ್ತಾರಂತೆ.”

ಮೇಸ್ಟ್ರು ಆತ್ಮವಿಶ್ವಾಸ ತುಂಬಿದ್ದರು. “ಇದೊಂದು ತಿಂಗಳು. ಒಂದೇ ತಿಂಗಳು. ನಿನ್ನ ಮೇಸ್ಟ್ರಿಗಾಗಿ ಓದು. ನೋಡುವಾ ನಿನ್ನನ್ನು ಯಾಕೆ ಬಿ.ಎ.ಗೆ ಕಳಿಸಲ್ಲಾಂತ.”

ಆ ವರ್ಷ ಎರಡು ಸಂಬಂಧಗಳು ಬಂದಿದ್ದವು. ಆತ್ಮವಿಶ್ವಾಸದ ನಗುವೇ ಕಾಣಿಸದ ಆ ಎರಡು ಮುಖಗಳನ್ನು ನೋಡುವಾಗ ಅವಳಿಗೆ ಹೇಸಿಗೆ ಹುಟ್ಟಿತು. ಅವಕ್ಕೆ ಬೇಕಿದ್ದದ್ದು ಅವಳ ಆಸ್ತಿ! ಅವಳು”ಬಿ.ಎ.ಆಗಲಿ” ಎಂದು ಪಟ್ಟು ಹಿಡಿದು ಅವರನ್ನು ನಿವಾರಿಸಿಕೊಂಡಿದ್ದಳು.

ರಿಸಲ್ಟ್ ಬಂದಾಗ ಅವಳಿಗೇ ಆಶ್ಚರ್ಯವಾಗಿತ್ತು. ಅವಳು ಪಾಸಾಗಿದ್ದಳು! ಮೇಸ್ಟ್ರು ನೀಡಿದ್ದ ಧೈರ್ಯ, ಹೇಳಿಕೊಟ್ಟ ಪಾಠ, ತುಂಬಿದ್ದ ಆತ್ಮವಿಶ್ವಾಸ ಅದಕ್ಕೆ ಕಾರಣವೆಂದು ಅವಳಿಗೆ ಗೊತ್ತಿತ್ತು. ಆದರೆ ಅವಳ ಅಪ್ಪ-ಅಮ್ಮ ಸಂತೋಷ ಪಟ್ಟಿರಲಿಲ್ಲ. ಫೇಲಾಗಿದ್ದರೆ ಮದುವೆಗೆ ಒಪ್ಪಿ ಬಿಡುತ್ತಿದ್ದಳು ಎಂದು ಎಷ್ಟೋ ಬಾರಿ ಗೊಣಗಿಕೊಂಡಿದ್ದರು. ಓದಿದ್ದು ಹೆಚ್ಚಾದರೆ ಗಂಡು ಸಿಗುವುದಿಲ್ಲ ಎಂದಿದ್ದರು. ಕಾಲೇಜಿಗೆ ಅವಳನ್ನು ಬರುವಂತೆ ಮಾಡಲು ಮೇಸ್ಟ್ರು ಎಷ್ಟು ಬಾರಿ ಫೋನು ಮಾಡಿದ್ದರೋ!

ಬಿ.ಎ.ಗೆ ಸೇರಿದ್ದೇ ಅವಳಲ್ಲಿ ಹೊಸ ಉತ್ಸಾಹ ಮೂಡಿತ್ತು. ದಿನಾ ಕತೆ-ಕವನ ಓದು ಚಿಂತನೆಗಳ ಲೋಕ. ಆದರೂ ಬರೆಯಲಾಗುತ್ತಿರಲಿಲ್ಲ. ಮನೆಯಲ್ಲಿ ಕತೆ ಪುಸ್ತಕ ಹಿಡಿದರೆ ಸಾಕು, ಅಮ್ಮ ಸಿಡಿಮಿಡಿಗೊಳ್ಳುತ್ತಿದ್ದಳು. “ನಾವು ಕೃಷಿಕರು. ಅಡಿಕೆ ಕೃಷಿ ಮಾಡೋದು ಮತ್ತು ಅಡುಗೆ ಮಾಡೋದು ಕಲಿತರೆ ಸಾಕು. ಓದು ಏನಾಗಬೇಕು?”

ಅವಳು ಅದನ್ನು ಮೇಸ್ಟ್ರಲ್ಲಿ ಹೇಳಿದಾಗ ಅವರು ನಕ್ಕಿದ್ದರು. ” ಇನ್ನೂ ಒಂದನ್ನು ಸೇರಿಸಿಲ್ಲ ನಿನ್ನಮ್ಮ. ವರ್ಷಕ್ಕೊಂದು ಮಗುವನ್ನು ಹೆರುವುದು!”

ಅವಳು ಅಮ್ಮನ ಪಕ್ಷ ವಹಿಸೋದು ಹೇಗೆ? ಅವಳ ಮುಖ ನೋಡಿ ಮೇಸ್ಟ್ರು ಸಾಂತ್ವನ ಹೇಳಿದ್ದರು. “ನಿನ್ನಮ್ಮ ಪ್ರಾಮಾಣಿಕವಾಗಿ ಹೇಳಲಿ ಅವರು ಸಂತೋಷ ವಾಗಿದ್ದಾರೆಂದು, ಅವರ ಜೀವನ ಸಾರ್ಥಕವಾಗಿದೆಯೆಂದು. ತಪ್ಪು ತಿಳಿಯಬೇಡ. ಅವರು ಕಾಣದ ಪ್ರಪಂಚ  ಮಗಳಿಗೂ ಬೇಡವೆಂಬ ಸಣ್ಣತನ ಅವರದ್ದು. ನೀನು ಹೆಚ್ಚು-ಹೆಚ್ಚು ಓದಬೇಕು. ಅನ್ನಿಸಿದ್ದನ್ನು ಬರೆಯಲು ಯತ್ನಿಸಬೇಕು. ಓದು ಬರಹಗಳಿಗಿಂತ ಹೆಚ್ಚಿನ ಸಂತೋಷ ನೀಡಲು ಜಗತ್ತಿನ ಯಾವ ಶಕ್ತಿಗೂ  ಸಾಧ್ಯವಿಲ್ಲ. ಪುಸ್ತಕಗಳಷ್ಟು ಹತ್ತಿರದ ನೆಂಟರು ಯಾರೂ ಇಲ್ಲ.

ಒಮ್ಮೊಮ್ಮೆ ಅವಳಿಗೆ ಹಾಗೆ ಅನ್ನಿಸಿದ್ದುಂಟು. ಆದರೆ ಅವಳಿಂದ ಬರೆಯಲಾಗುತ್ತಿರಲಿಲ್ಲ. ಅಪ್ಪ-ಅಮ್ಮ ಅವಳಲ್ಲಿ ಒಂದೇ ಒಂದು ಹವ್ಯಾಸ ಮೂಡಿಸಲಿಲ್ಲ. ಜೀವನ ಪೂರ್ವ ನಿರ್ಧರಿತ ರೀತಿಯಲ್ಲಿ ಸಾಗಬೇಕೆನ್ನುವವರು. ಅಪ್ಪ-ಅಮ್ಮ ಇಷ್ಟ ಪಟ್ಟವನನ್ನು ಅವಳು ಮದುವೆಯಾಗಬೇಕು! ಮದುವೆ ಮಕ್ಕಳು ಸಾವು-ಜೀವನ ಇಷ್ಟೆನಾ? ಅಪ್ಪನಲ್ಲಿ ಹೇಗೆ ಕೇಳುವುದು? ಅಪ್ಪ ಹೋಗುವ ಮದುವೆಗಳಿಗೆಲ್ಲ ಅವಳನ್ನು ಪ್ರದರ್ಶನದ ಗೊಂಬೆಯಂತೆ ಎಳೆದೊಯ್ಯೊತ್ತಿದ್ದರು. ಅಲ್ಲಿ ಹಸಿದ ಕಣ್ಣುಗಳು ಅವಳ ಶರೀರವನ್ನು ಸ್ವಚ್ಛಂದವಾಗಿ ಮೇಯುತ್ತಿದ್ದವು. ಯಾವ್ಯಾವುದೋ ಸಂಬಂಧ ಹುಡುಕಿ ಪಡ್ಡೆ ಹುಡುಗರು, ಗಂಡಸರು ಮಾತಿಗೆಳೆಯುತ್ತಿದ್ದರು. ಎಂತಹ ನೀರಸ ಮಾತುಗಳು ಅವು. ಆಹಾರ, ನಿದ್ರೆ, ಮದುವೆ, ಮಳೆ, ಬೆಳೆ, ಬಿಟ್ಟರೆ ಬೇರ ಲೋಕವೇ ಗೊತ್ತಿಲ್ಲ. ಕಲೆ-ಸಾಹಿತ್ಯ, ಸಂಸ್ಕೃತಿ?ಊಹ್ಞುಂ! ಮಾಂಸ,  ಇಸ್ಪೇಟು, ಬಟ್ಟಿ ಸಾರಾಯಿಗಳ ಮಾತೆಂದರೆ ಇವರಿಗೆಲ್ಲ ಖುಷಿಯೋ ಖುಷಿ. ಯಾಕೆ ಇವರೆಲ್ಲ ಮೇಸ್ಟ್ರ ಹಾಗೆ ಇರಬಾರದಿತ್ತು?

ಮೊದಲ ವರ್ಷದ ಬಿ.ಎ. ಯಲ್ಲಿ ಓದಿದ್ದು ಒಂದೂ ನೆನಪಿಲ್ಲದೆ ಅವಳು ಕಂಗಾಲಾಗಿದ್ದಳು.” ಒಳ್ಳೆಯದಾಯಿತು. ಓದಿ ಏನಾಗಬೇಕಾಗಿದೆ?” ಎಂದು ಅಪ್ಪ-ಅಮ್ಮ ಹೇಳಿದ್ದರು. ಮೇಸ್ಟ್ರ ಒತ್ತಾಯದಿಂದ ಅವಳು ಪರೀಕ್ಷೆಗೆ ಹೋಗದಿರುತ್ತಿದ್ದರೆ ಯಾವನಾದರೊಬ್ಬ ಬೆಪ್ಪನಿಗೆ ಅವಳನ್ನು ಗಂಟು ಹಾಕಿ ಬಿಡುತ್ತಿದ್ದರು. ಜೀವನ ಪೂರ್ತಿ ಅವನ ದಾಸಿಯಾಗಿ, ಅವನಿಗಿಂತ ಹೆಚ್ಚು ಬೆಪ್ಪು ಮಕ್ಕಳ ತಾಯಿಯಾಗಿ ಇದೇ ರಿಂಗು ಸೆರಮನಿ, ಮನೆ ಒಕ್ಕಲು, ಮದರಂಗಿ, ಮದುವೆ, ತುಪ್ಪ, ಸಾವುಗಳಲ್ಲಿ ಜೀವನ ಮುಗಿದು ಹೋಗುತ್ತಿತ್ತು. ಹಾಗಾಗ ಬಾರದು. ಮೇಸ್ಟ್ರೆ ತನಗೀಗ ಗತಿಯೆಂದು ಬೆಳಿಗ್ಗೆ ಐದಕ್ಕೆ ಫೋನು ಮಾಡಿದ್ದಳು.

ತಾನಾರೆಂದು ಹೇಳಿದಾಗ ಆಚೆ ಕಡೆಯಿಂದ ಕೇಳಿ ಬಂದದ್ದು ಆತ್ಮವಿಶ್ವಾಸದ ನಗು.

“ಸ್ವರ ಕೇಳಿದಾಗಲೇ ಗೊತ್ತಾಯಿತು. ಹೆಸರು ಹೇಳುವ ಅಗತ್ಯವೇ ಇರಲಿಲ್ಲ. ಏನು ಇವತ್ತು ಇಷ್ಟು ಬೇಗ? ಹೀಗಾದರೆ ರ್ಯಾಂಕು ಬಂದು ಬಿಡುವ ಅಪಾಯವಿದೆ.”

ಆ ದನಿ ಅವಳ ನೋವು ಹಿಂಜರಿಕೆಗಳನ್ನು ಹೋಗಲಾಡಿಸಿತ್ತು. ಅವಳು ಅಳುಬುರುಕು ದನಿಯಲ್ಲಿ ಹೇಳಿದ್ದಳು. “ಓದಿದ್ದು ಒಂದೂ ನೆನಪಾಗುತ್ತಿಲ್ಲ ಸರ್. ಓದದೇ ಇದ್ದರೆ ಯಾವನೋ ಒಬ್ಬನನ್ನು ಕಟ್ಟಿಕೊಂಡು ಏಗಬೇಕಾಗುತ್ತದೆ.” ಮೇಸ್ಟ್ರು ನಕ್ಕಿದ್ದರು. “ಯಾವಾಗಲಾದರೂ ಕಟ್ಟಿಕೊಳ್ಳಲೇ ಬೇಕಲ್ಲ. ಈಗಲೇ ಕಟ್ಟಿಕೋ.” ಆದರೂ ಅವರು ಅವಳನ್ನು ಬರಹೇಳಿದ್ದರು. ಗೊತ್ತಿಲ್ಲದಿರುವುದನ್ನೆಲ್ಲ ಬಿಡಿಬಿಡಿಯಾಗಿ ತಿಳಿಸಿ ನೆನಪಿಟ್ಟುಕೊಳ್ಳುವಂತೆ ಮಾಡಿದ್ದರು. ಅವಳಿಗೇ ಆಶ್ಚರ್ಯವಾಗುವಂತೆ ಅವಳು ಪಾಸಾಗಿದ್ದಳು. ಪಾಸಾದಮೇಲೆ ಅವಳು ಅವರಿಗೆ ಒಂದು ಥ್ಯಾಂಕ್ಸು ಕೂಡಾ ಹೇಳಿರಲಿಲ್ಲ.

ಮತ್ತೆ ಎರಡನೇ ವರ್ಷ ಮೇಸ್ಟ್ರು ಕ್ಲಾಸಿಗೇ ಬಾರದಾಗ ಅವಳು ಕಂಗಾಲಾಗಿದ್ದಳು. ಅವಳ ಒದ್ದಾಟ ಕಂಡು ಅಮ್ಮ ಹೇಳಿದ್ದರು. “ನೀನು ಆ ಮೇಸ್ಟ್ರನ್ನು ಹಚ್ಚಿಕೊಂಡದ್ದು ಹೆಚ್ಚಾಯಿತು. ಏನು ಬೇರೆ ಮೇಸ್ಟ್ರು ಕಾಲೇಜಲ್ಲಿ ಇಲ್ಲವಾ?” ಅವಳು ಅದಕ್ಕೆ ಉತ್ತರಿಸಿದ್ದಳು. “ಪಾಠ ಮಾಡುವವರೆಲ್ಲ ಮೇಸ್ಟ್ರಾಗುವುದಿಲ್ಲ. ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುವವರೆ ನಿಜವಾದ ಮೇಸ್ಟ್ರು.” ಅವಳನ್ನು ಕಂಡಾಗ ಮೇಸ್ಟ್ರು ಹೇಳಿದ್ದರು.” ನನಗೀಗ ತುಂಬಾ ಖುಷಿ ಯಾಗಿದೆ. ನೀನು ಇಂಡಿಪೆಂಡೆಂಟಾಗಿ ಪಾಠ ಅರ್ಥ ಮಾಡಿಕೊಳ್ಳುವ ಹಂತಕ್ಕೆ ಮುಟ್ಟಿದ್ದೀಯಾ!”

ಅವಳಿಗೆ ತನ್ನ-ನೋವನ್ನು ಮೇಸ್ಟ್ರಲ್ಲಿ ಹೇಳಿಕೊಳ್ಳಲಾಗುತ್ತಿರಲಿಲ್ಲ. ಒಂದು ಪೇಪರಿನಲ್ಲಿ ಫೇಲಾದಾಗ ಮೇಸ್ಟ್ರ ಕಣ್ಣು ತಪ್ಪಿಸಿ ಓಡಾಡಿದ್ದಳು. ಕೊನೆಗೂ ಮೇಸ್ಟ್ರು ವಿಷಯ ತಿಳಿದು ಪಾಠ ಹೇಳಿ ಕೊಟ್ಟಿದ್ದರು. ಪಾಠ ಅಂದರೆ ಅವರದು! ಅವಳು ಪಾಸಾಗಿದ್ದಳು. ಆಗಲೂ ಅವಳು ಅವರಿಗೆ ಏನನ್ನೂ ಕೊಟ್ಟಿರಲಿಲ್ಲ. ಫೋನಿನಲ್ಲಿ ಕೂಡಾ ಉಪಕಾರ ಸ್ಮರಣೆ ಮಾಡಿರಲಿಲ್ಲ.

ಕೊನೆಯ ವರ್ಷ ಮೇಸ್ಟ್ರು ಅವಳನ್ನು ನೃತ್ಯ ತಂಡಕ್ಕೆ ಸೇರಿಸಿ, ಅದೆಷ್ಟು ಬಾರಿ ವೇದಿಕೆ ಹತ್ತಿಸಿ ಕುಣಿಸಿದ್ದರೋ! ವರ್ಷದ ಕೊನೆಯಲ್ಲಿ ಅಮ್ಮ ಕಾಯಿಲೆ ಬಿದ್ದಿದ್ದಳು. ಅವಳನ್ನು ಆಸ್ಪತ್ರೆಗೆ ಸೇರಿಸಿದಾಗ ಸುಶ್ರೂಷೆಗೆ ಅವಳು ನಿಲ್ಲಬೇಕಾಯಿತು. ವರ್ಷದ ಕೊನೆಯ ಪ್ರವಾಸ ತಪ್ಪಿ ಹೋಗುತ್ತದೆಂದು ಅವಳಿಗೆ ಖೇದವಾಗಿತ್ತು. ಮೇಸ್ಟ್ರೇ ನಡೆಸಬೇಕಾಗಿದ್ದ ಪ್ರವಾಸವದು. ಅವಳ ಅವಸ್ಥೆಗೆ ಮರುಗಿ ಅವರು ಪ್ರವಾಸವನ್ನೇ ಕೈಬಿಟ್ಟಿದ್ದರು. ಹೀಗೂ ಉಂಟಾ?

ಅಮ್ಮನಿಗೆ ಕಾಯಿಲೆ ವಾಸಿಯಾಗಿ ಮನೆಗೆ ಬಂದು ಒಂದು ತಿಂಗಳಾಗಿಲ್ಲ. ಆಗಲೇ ಮೂವರು ಗಂಡುಗಳು ಹಾಜರು. ಅವರ ಮುಖಗಳಲ್ಲಿ ಅವಳು ಹುಡುಕುತ್ತಿದ್ದುದ್ದು ಮೇಸ್ಟ್ರ ಆತ್ಮವಿಶ್ವಾಸದ ನಗುವನ್ನು. ಅಲ್ಲಿದ್ದದ್ದು ಹಸಿವು. ಬರೀ ಹಸಿವು! ಹಸಿವು ಇಂಗಿದ ಮೇಲೆ ತನ್ನನ್ನಿವರು ಮನುಷ್ಯಳಂತೆ ಕಾಣಲು ಸಾಧ್ಯವೇ ಇಲ್ಲವೆನ್ನಿಸಿ ಸದ್ಯಕ್ಕೆ ಮದುವೆ ಬೇಡವೆಂದಿದ್ದಳು. ಎಲ್ಲಾ ಸಮಸ್ಯೆಗಳ ನಡುವೆ ಓದಲಾಗದೆ ತಲೆಗೆ ಕೈ ಹೊತ್ತು ಪರೀಕ್ಷೆಯೇ ಬೇಡವೆಂದು ಕೂತಾಗ ಅವಳ ಗೆಳತಿಯಿಂದ ಸುದ್ದಿ ತಿಳಿದು ಮೇಸ್ಟ್ರು ಫೋನು ಮಾಡಿದ್ದರು. ಅಮ್ಮ ನೊಡನೆ ಅವರ ಮನೆಗೆ ಹೋಗಿ ಒಂದು ವಾರ ಪಾಠ ಹೇಳಿಸಿಕೊಂಡದ್ದಕ್ಕೆ ಅವಳು ಪಾಸಾಗಿದ್ದಳು.

ಕೊನೆಗೆ ಮೇಸ್ಟ್ರು ಹೇಳಿದಂತೆ ತಯಾರಿ ನಡೆಸಿ ಎಂ.ಬಿ.ಎ ಯಲ್ಲಿ ಸೀಟು ಗಿಟ್ಟಿಸಿದಳು. ಆದರೆ ಇಂಟರ್ನಲ್ ಎಸೆಸಮಂಟಿ ಗಾಗಿ ರಿಸರ್ಚ್ ವರ್ಕ್ ಮಾಡಲಾಗದೆ ಒದ್ದಾಡಿ ಕೊನೆಗೆ ಮೇಸ್ಟ್ರಲ್ಲಿಗೆ ಹೋಗಿದ್ದಳು. ಮೇಸ್ಟ್ರು ಥೀಮು, ಕ್ವಶ್ಚನೇರು ಸಿದ್ಧಪಡಿಸಿ ಕೊಟ್ಟಿದ್ದರು. ಅವಳ ಫೀಲ್ಡ್ ಸ್ಟಡಿಯ ಮಟೇರಿಯಲ್ ವಿಶ್ಲೇಷಿಸಿ ಪ್ರಬಂಧ ಡಿಕ್ಟೇಟು ಮಾಡಿದ್ದರು. ಒಂದು ತಿಂಗಳಿಡೀ ಮೇಸ್ಟ್ರಲ್ಲೇ ಊಟ-ತಿಂಡಿ. ಒಮ್ಮೊಮ್ಮೆ ಅಪ್ಪ-ಅಮ್ಮ ಜೊತೆಯಾಗಿರುತ್ತಿದ್ದರು. ಸದಾ ಬ್ಯುಸಿಯಾಗಿರುವ ಮೇಸ್ಟ್ರು ತಮ್ಮ ಓದು-ಬರಹ ಎಲ್ಲವನ್ನೂ ಬದಿಗಿಟ್ಟು ಕೆಲಸ ಮಾಡಿಕೊಟ್ಟಿದ್ದರು. ಇಂತವರು ಎಲ್ಲಿ ಸಿಗುತ್ತಾರೆ? ಇಷ್ಟಾದರೂ ತಾನವರಿಗೆ ಏನನ್ನೂ ಕೊಟ್ಟಿರಲಿಲ್ಲ.

ಅವಳು ಎಂ.ಬಿ.ಎ. ಮಾಡಿ ಇಂಟರ್ವ್ಯೂ ಎದುರಿಸಿ ಕಾರ್ಖಾನೆಯೊಂದರಲ್ಲಿ ಅಧಿಕಾರಿಯಾದಾಗ ಮೇಸ್ಟ್ರಿಗೆ ಫೋನು ಮಾಡಿ ಹೇಳಿದ್ದಳು. ಅದೇ ಆತ್ಮ ವಿಶ್ವಾಸದ ನಗುವಿನಲ್ಲಿ ಅವರು ಹೇಳಿದ್ದರು. “ಪಿ.ಯು.ಸಿ.ಯಲ್ಲೇ ನಿಲ್ಲಿಸುತ್ತಿದ್ದರೆ ಈಗ ದೇಶಕ್ಕೆ ಆರು ಮಕ್ಕಳನ್ನು ಕಾಣಿಕೆ ಕೊಟ್ಟು ಬಿಡುತ್ತಿದ್ದೆ!”

ಅದೇ ಕಾರ್ಖಾನೆಯ ಎಂ.ಡಿ.ಯ ಹೆಂಡತಿಯಾಗಿ ಮೊದಲ ಹೆರಿಗೆಯ ನೋವಿನ ಗಳಿಗೆಯಲ್ಲೂ ಮೇಸ್ಟ್ರ ನೆನಪಾಗಿ ನಕ್ಕಿದ್ದಳು! ಅದೊಂದಕ್ಕೇ ನಿಲ್ಲಿಸಿದ್ದಳು. ಪತಿಯೊಡನೆ ಮೇಸ್ಟ್ರ ಬಗ್ಗೆ “ಒಮ್ಮೆ ನೋಡಿಕೊಂಡು ಬರುವ” ಎಂದಾಗ ಅವನು ಹೇಳಿದ್ದ : “ಧಾರಾಳ ಹೋಗಿ ಬಾ. ಏನು ಕಾಣಿಕಿ ಬೇಕಾದರೂ ಕೊಟ್ಟು ಬಾ. ನಿಮ್ಮ ನಡುವೆ ನಾನ್ಯಾಕೆ?”ಆದರೂ ಅವಳಿಗೆ ಹೋಗಲಾಗಿರಲಿಲ್ಲ. ಹೊರಟಾಗೆಲ್ಲಾ ನೂರೆಂಟು ವಿಘ್ನ.ಇಷ್ಟಕ್ಕೂ ಹೆಣ್ಣೊಬ್ಬಳು ತನಗೆ ಇಷ್ಟವಾದಂತೆ ಮಾಡಲು ಎಲ್ಲಿ ಸಾಧ್ಯವಾಗುತ್ತದೆ?

ಪಿ.ಯು.ಸಿ.ಯಲ್ಲೇ ಕಮರಿ ಹೋಗಲಿದ್ದ ಅವಳ ಕನಸುಗಳಿಗೆ ಮೇಸ್ಟ್ರು ಜೀವ ನೀಡಿದ್ದರು. ಆಗ ಅವರಿಗೆ ಏನನ್ನಾದರೂ ಕೊಡಬೇಕೆಂದು ಅನ್ನಿಸಿತ್ತು. ಏನನ್ನು ಕೊಡುವುದು? ಚಿನ್ನದ ಉಂಗುರ? ಕೊರಳಿಗೊಂದು ಚಿನ್ನದ ಸರ? ಕಾಲೇಜಲ್ಲಿ ನಾಲ್ಕೈದು ಉಂಗುರ ಹಾಕಿಕೊಳ್ಳುವ ಸರಪಣಿಯಂತ ಚಿನ್ನದ ಸರ ಹಾಕುವ ಮೇಸ್ಟ್ರು ಮೇಡಂಗಳಿಗೆ ಬರವಿರಲಿಲ್ಲ. ಈ ಮೇಸ್ಟ್ರು ಬೆರಳು-ಕೊರಳು ಖಾಲಿ ಖಾಲಿ. ಮೇಸ್ಟ್ರಿಗೆ ಚಿನ್ನ ಇಷ್ಟವಿಲ್ಲ. ಮೇಸ್ಟ್ರಲ್ಲಿ ಲಟಾರಿ ಸ್ಕೂಟರೊಂದಿದೆ. ತಾನು ಕಾರು ತೆಗೆದು ಕೊಟ್ಟರೆ ಹೇಗೆ? ಅಂದು ತನಗೇ ಕಾರಿರಲಿಲ್ಲ. ತಾನೆಲ್ಲಿಂದ ತೆಗೆದು ಕೊಡುವುದು? ಈಗ ಸಾಧ್ಯವಿದೆ. ಆದರೆ ಈಗ ಕಾರು ಕೊಟ್ಟರೇನು ಉಪಯೋಗ? ಮೇಸ್ಟ್ರು ಓದಿ-ಓದಿ ಬರೆದು-ಬರೆದು ದೃಷ್ಟಿ ಕಳಕೊಂಡಿದ್ದಾರೆ. ಛೇ!

ಕೊನೆಗೂ ಅವಳು ಹೊರಟೇ ಬಿಟ್ಟಳು, ಅವಳ ಕಾರಲ್ಲಿ. ಮೇಸ್ಟ್ರಿಗೆ ಜರಿತಾರಿ ಪಂಚಿ, ಸಿಲ್ಕ್-ರೆಡಿಮೇಡ್ ಜುಬ್ಬ, ಮೈಸೂರು ಪೇಟೆ, ಟೈಮೆಕ್ಸ್ ವಾಚು. ಮೇಸ್ಟ್ರ ಹೆಂಡತಿಗೆ ರೇಷ್ಮೆ ಸೀರೆ, ಚಿನ್ನದುಂಗುರ, ಒಂದಷ್ಟು ಹಣ್ಣು-ಹೂವು, ತಿಂಡಿ. ಹಿಂದೊಮ್ಮೆ ಅವಳು ಕೇಳಿದ್ದಳು:”ನನ್ನನ್ನು ಈ ಹಂತಕ್ಕೆ ನೀವು ತಂದಿದ್ದೀರಿ ಸಾರ್. ನಿಮಗೇನು ಕೊಡಲಿ?” ಅವರು ನಕ್ಕಿದ್ದರು. “ಪ್ರೀತಿ ಇದ್ದರೆ ಸಾಕು. ಎಂದೆಂದಿಗೂ ಮುಗಿದು ಹೋಗದಷ್ಟು, ಸಾಧ್ಯವಾದರೆ ನಾನು ಓದಿರದ ಒಂದೆರಡು ಪುಸ್ತಕ ಕೊಡು.”

ಮೇಸ್ಟ್ರ ಮನೆಯಲ್ಲಿ ಪುಸ್ತಕಗಳದ್ದೇ ಆರು ಕಪಾಟುಗಳು. ಅವರು ಓದದ ಪುಸ್ತಕ ಯಾವುದೆಂದು ತನ್ನಿಂದ ಕಂಡು ಹಿಡಿಯಲು ಸಾಧ್ಯವಾ? ಈಗಂತೂ ಮೇಸ್ಟ್ರಿಗೆ ಓದಲಾಗುತ್ತಿಲ್ಲ. ತನಗಾಗಿ ಎಷ್ಟು ಕಾಲವನ್ನು ಕೊಟ್ಟರು.ತನಗೊಂದು ಅಸ್ತಿತ್ವ ಕಲ್ಪಿಸಿಕೊಟ್ಟರು. ಅವರಲ್ಲದಿರುತ್ತಿದ್ದರೆ ತನಗೆ ಪಿ.ಯು.ಸೀನೂ ಆಗುತ್ತಿರಲಿಲ್ಲ. ಅವರ ತನಗಾಗಿ ವ್ಯಯಿಸಿದ ಕಾಲವನ್ನು ಬರವಣಿಗೆಗೆ ಬಳಸುತ್ತಿದ್ದರೆ ಎಷ್ಟು ಪ್ರಶಸ್ತಿ ಸಿಗುತ್ತಿತ್ತೇನೋ? ತನ್ನಿಂದಾಗಿ ಮೇಸ್ಟ್ರು ಏನು ಗಳಿಸಿರಬಹುದು? ಒಬ್ಬಳಿಗೆ ಒಂದು ಬದುಕು ಕೊಟ್ಟ ಆತ್ಮಸಂತೋಷ ಮಾತ್ರ. ತಾನು ಅವರಿಗೆ ಏನು ಕೊಟ್ಟಿದ್ದೇನೆ? ಏನೂ ಇಲ್ಲ. ಏನೇನೂ ಇಲ್ಲ. ಅವರ ಕಣ್ಣಿನ ಚಿಕಿತ್ಸೆಗಾಗಿ ಒಂದಷ್ಟು ಹಣವನ್ನು ಕೊಡಬೇಕು. ಅವರಿಗೆ ಮತ್ತೆ ದೃಷ್ಟಿ ಬರಬೇಕು. ಅವರು ಬರೆಯುವಂತಾಗಬೇಕು. ನನ್ನಂತವರಿಗೆ ಕಾಣದ ಬೆಳಕನ್ನು ಅವರು ತೋರಿಸಬೇಕು.

ಅವಳ ಕಾರು ಮೇಸ್ಟ್ರಮನೆಯಂಗಳದಲ್ಲಿ ನಿಂತು ಅವಳು ಕೆಳಗಿಳಿದಳು. ಎಲ್ಲೆಲ್ಲೂ ನೀರವ ಮೌನ. ಬಾಗಿಲು ತೆರೆದ ಮೇಸ್ಟ್ರ ಹೆಂಡತಿ ಬಿಕ್ಕಿದರು. “ನಿನ್ನಷ್ಟು ಅವರು ಯಾರನ್ನೂ ಹಚ್ಚಿಕೊಂಡವರಲ್ಲ.” ಹಾಸಿಗೆ ಹಿಡಿದ ಮೇಲೆ ನಿನ್ನನ್ನು ದಿನಕ್ಕೆ ನಾಲ್ಕೈದು ಬಾರಿಯಾದರೂ ಕೇಳುತ್ತಿದ್ದರು. ನಿನ್ನೆ ಹೋಗಿಬಿಟ್ಟರು. ಸಾಯುವ ಮೊದಲೇ ದೇಹವನ್ನು ಆಸ್ಪತ್ರೆಗೆ ದಾನ ಮಾಡುವ ವೀಲು ನಾಮೆ ಬರೆಸಿಟ್ಟಿದ್ದರು. ದೇಹವನ್ನು ಆಸ್ಪತ್ರೆಯವರು ತೆಗೆದುಕೊಂಡು ಹೋಗಿದ್ದಾರೆ.”

ಅವಳು ಸೆರಗಿನಿಂದ ಕಣ್ಣೊರೆಸಿಕೊಂಡಳು. ತಾನು ತಂದದ್ದೆಲ್ಲವನ್ನೂ ಅವರ ಕೈಗಿತ್ತು ಕಾರು ಹತ್ತಿದ್ದಳು. ಅವಳ ಕಾರು ಆ ಆಸ್ಪತ್ರೆಯತ್ತ ಚಲಿಸಿತು.
*****

Latest posts by ವೀಣಾ ಮಡಪ್ಪಾಡಿ (see all)