ನಾನು ಇನ್ನೊಮ್ಮೆ ಮರಳಿ ಬರುವಾಗ
ಬದುಕಿನ ಯಾವದಾದರೂ ಒಂದು ತಿರುವಿನಲ್ಲಿ
ಸತ್ಯವತಿಯಾಗಿ ಸತಿಯಾಗಿ
ನೀನು ಖಂಡಿತ ನನಗೆ ಸಿಕ್ಕುತ್ತಿ
ಹಳೆ ಪರಿಚಯ ಉಕ್ಕಿ ಬಂದು
ಮನದಲ್ಲಿ ಬಿಕ್ಕುತ್ತಿ
ಆಗ ನಿನ್ನ ವದನತುಂಬ
ವಿರಹದ ನೋವಿನ ಗೆರೆಗಳನ್ನು
ಬಿಸಿಯುಸಿರಿನಲ್ಲಿ
ಪಾಪಪ್ರಜ್ಞೆಯ ಬರೆಗಳನ್ನು
ನೋಡುವ ಇಚ್ಛೆ ನನಗಿರದು
ಅವೆಲ್ಲ ಹಿಂದೆ ನಡೆದ ಅಪರಾಧಗಳು
ಪ್ರೀತಿ-ನೀತಿಯಿರದ
ದಾಹ-ಮೋಹದ ಮಿಲನದಿಂದಾದ
ಪ್ರಮಾದಗಳು.
ಅವುಗಳಲ್ಲಿ ನಂಬಿಕೆ ನಿನಗೂ ಇರದು.
ಬಯಸಲಿಲ್ಲವೆ ನೀನು ರಾಣಿಯ ಪಟ್ಟ
ಹೊರಿಸಲಿಲ್ಲವೆ ಪರಿಪರಿಯ ಆಣೆಗಳ ಬೆಟ್ಟ
‘ಬೇಡುವುಡೆ ನೀವೆನ್ನ ಅಯ್ಯನಂ ಬೇಡಿ’ರೆಂದು
ನಾಚಿ ನನಗೆ ಹುಚ್ಚು ಹಿಡಿಸಲಿಲ್ಲವೆ,
ಆಗಲೆ ತಿಳಿಯಬೇಕಿತ್ತು
ನಿನ್ನಂತರಂಗದ ಹೋರೆಯನು
ಕಾಮ-ಪ್ರೇಮದ ಮೇರೆಯನು
ಗಂಡು ಎಂದೆಂದೂ ಹೆಣ್ಣಿಗೆ ಸೋತಿದ್ದಾನೆ
ಅಂತ-ದುರಂತಕ್ಕೆ ಬಲಿಯಾಗಿದ್ದಾನೆ
ಅದಕೆಂದೆ ನುಡಿವೆ
ಸಿಕ್ಕಿದರೆ ನೀನು ‘ಹಲೋ’ ಎಂದು ತೆರಳು
ತಡೆಯದಿರು, ನುಡಿಯದಿರು
ಮತ್ತೊಮ್ಮೆ ಕನ್ನೆಯಾಗಿ
ನನ್ನೆದುರು ಸುಳಿಯದಿರು
ನಾನು ಮತ್ತೊಮ್ಮೆ ಮಂಕಾಗಿ
ಮುಂದಿನ ಭಾರತಕ್ಕೆ ಕಾರಣವಾಗಲಾರೆ.
*****