ಪ್ರೀತಿ ಎಂದರೆ

ಪ್ರೀತಿ ಎಂದರೆ

ಆ ಕೇಸಿನ ತೀರ್ಪನ್ನು ಜಜ್ಜು ಸಾಹೇಬರು ನಾಳೆ ನೀಡಬೇಕು. ಸಾಹೇಬರಿಗೆ ಎಷ್ಟು ಯೋಚಿಸಿದರೂ ಪರಿಹಾರ ಹೊಳೆಯುತ್ತಿರಲಿಲ್ಲ. ಮನೆಯಲ್ಲಿ ಎಲ್ಲರೂ ಮಲಗಿ ನಿದ್ರಿಸುತ್ತಿದ್ದರೆ ಇವರು ಮಹಡಿ ಮೇಲಿನ ತಮ್ಮ ಅಧ್ಯಯನ ಕೊಠಡಿಯಲ್ಲಿ ಕತ್ತಲಲ್ಲಿ ಬುದ್ಧನಂತೆ ಕೂತಿದ್ದರು. ಏನು ಮಾಡಿದರೂ ನಿದ್ದೆ ಬರುತ್ತಿರಲಿಲ್ಲ.

ಅವರ ಕಣ್ಣೆದುರು ಆ ತರುಣಿಯ ಸುಂದರ ವೇದನಾಪೂರಿತ ಮುಖ ಮತ್ತೆ ಮತ್ತೆ ತೇಲಿ ಬರುತ್ತಿತ್ತು. ಅವಳಿಗೆ ಮದುವೆಯಾಗಿ ಮೂರು ವರ್ಷಗಳಾಗಿದ್ದವಷ್ಟೆ. ದುಡ್ಡಿನಾಸೆಗೆ ಅವಳ ಗಂಡ ಇನ್ನೊಂದು ಮದುವೆಯಾಗ ಹೊರಟಿದ್ದ. ಅವಳು ಗಂಡನನ್ನು ಬಿಡಲು ಸಿದ್ಧಳಿರಲಿಲ್ಲ. ಅವನನ್ನು ಇನ್ನೊಬ್ಬಳೊಡನೆ ಹಂಚಿಕೊಳ್ಳಲು ಅವಳಿಂದ ಸಾಧ್ಯವಿರಲಿಲ್ಲ. ಗಂಡನ ಮರುಮದುವೆಯನ್ನು ತಡೆದು ತನಗೆ ಗೌರವಯುತವಾಗಿ ಬಾಳುವ ಹಕ್ಕು ಸಿಗುವಂತೆ ಮಾಡಬೇಕೆಂದು ಅವಳು ನ್ಯಾಯಾಲಯದ ಮೊರೆ ಹೊಕ್ಕಿದ್ದಳು.

ನಾಳೆ ತೀರ್ಪಿನ ದಿನ. ತೀರ್ಪು ಅವಳ ಪರವಾಗಿಯೇ ನೀಡಬೇಕು. ಅದು ನ್ಯಾಯ ಮತ್ತು ಧರ್ಮ. ಆದರೆ ಅವಳ ಗಂಡ ಎರಡನೆಯ ಮದುವೆಯಾಗುವುದು ತಪ್ಪೆಂದು ನೈತಿಕವಾಗಿ ತಾನು ಹೇಳುವಂತಿಲ್ಲ. ಹಾಗಂತ ಅವಳ ವಿರುದ್ಧ ತೀರ್ಪು ನೀಡಲು ಸಾಧ್ಯವೇ ಇಲ್ಲ. ನೀಡಿಬಿಟ್ಟರೆ ಹಣಕ್ಕಾಗಿ ಮರು ಮದುವೆಯಾಗುವವರು ಹೆಚ್ಚಾಗಿ ಸಮಾಜದ ಆರೋಗ್ಯ ಹಾಳಾಗುತ್ತದೆ. ಹೆಣ್ಣುಗಳ ಮೇಲಿನ ದೌರ್ಜನ್ಯ ಹೆಚ್ಚಾಗಲು ತಾನು ಕಾರಣನಾಗುತ್ತೇನೆ.

ಸಾಹೇಬರು ನೀರವ ಗಾಢಾಂಧಕಾರದಲ್ಲಿ ಅತ್ತಿತ್ತ ನಡೆದರು. ಮನಸ್ಸಿನಲ್ಲೇ ತರ್ಕಿಸಿದರು. ಬಾಲ್ಕನಿಗೆ ಬಂದು ಅಮಾವಾಸ್ಯೆಯ ಕತ್ತಲಲ್ಲಿ ಮಿನುಗುವ ತಾರೆಗಳನ್ನು ದಿಟ್ಟಿಸಿದರು. ತಾನು ಸಾಗಿ ಬಂದ ಹಾದಿಯ ಸಿಂಹಾವಲೋಕನ ಮಾಡಿದರು. ಅವಳಿಗೆ ಅನ್ಯಾಯವಾಗಬಾರದು, ನೈತಿಕ ಪ್ರಜ್ಞೆ ತನ್ನನ್ನು ಅಣಕಿಸಬಾರದು. ಏನು ಮಾಡಲಿ ಎಂದು ಯೋಚಿಸಿ, ಯೋಚಿಸಿ, ಒಂದು ನಿರ್ಧಾರಕ್ಕೆ ಬಂದರು. ಕೋಣೆಗೆ ಬಂದು ದೀಪ ಹಾಕಿ ತೀರ್ಪನ್ನು ಟೈಪು ಮಾಡಿದರು. ಲೆಟರು ಪ್ಯಾಡಲ್ಲಿ ಏನನ್ನೋ ಬರೆದು ಸಹಿ ಹಾಕಿ ಮಡಚಿ ಲಕೋಟೆಯೊಂದಕ್ಕೆ ಹಾಕಿ ಅಂಟಿಸಿ ನಿರುಮ್ಮಳವಾದರು. ದೀಪ ನಂದಿಸಿ ಹಾಸಿಗೆಯಲ್ಲಿ ಉರುಳಿ ಗಾಢ ನಿದ್ದೆಗೆ ಶರಣಾದರು.
* * * *

ಸಾಹೇಬರು ಎಂ.ಎಲ್‌. ಮುಗಿಸಿ ಲಾ ಕಾಲೇಜೊಂದರಲ್ಲಿ ಸೇರಿದ್ದ ಆರಂಭದ ದಿನಗಳವು. ಆಗ ಅವರನ್ನು ಆಕರ್ಷಿಸಿದ್ದು ದುಂಡು ಮುಖದ ತುಂಬಿದ ಅಂಗಾಂಗಗಳ ವೀಣಾ. ಅವಳು ತುಂಬಾ ಬುದ್ಧಿವಂತಳಾಗಿದ್ದಳು. ಹೆಣ್ಣುಗಳೆಂದರೆ ಮಾರು ದೂರವಿರುತ್ತಿದ್ದ ಸಾಹೇಬರಲ್ಲಿ ವೀಣಾ ಹೊಸ ಭಾವಗಳನ್ನು ಮೂಡಿಸಿದ್ದಳು. ಅವನೆನಲ್ಲಾ ಅವಳೆದುರು ಹೇಳಿದರೆ ತಾನು ಸಣ್ಣವನಾಗುತ್ತೇನೆಂದು ಅವರು ಬಾಯಿ ಬಿಟ್ಟಿರಲಿಲ್ಲ. ಮನಸ್ಸು ಮಾತ್ರ ಅವಳನ್ನು ಆರಾಧಿಸುತ್ತಿತ್ತು.

ಹೊರಗೆ ಗಂಭೀರವಾಗಿರುತ್ತಿದ್ದ ಅವರು ತರಗತಿಗಳಲ್ಲಿ ಹೊಸ ಲೋಕವನ್ನು ಸೃಷ್ಟಿಸುತ್ತಿದ್ದರು. ಪಾಠ ಮಾಡುವ ಕಲೆ ಹುಟ್ಟಿನಿಂದಲೇ ಬಂದಿದೆಯೆಂದು ಅವರ ಬಗ್ಗೆ ವಿದ್ಯಾರ್ಥಿಗಳು ಆಡಿಕೊಳ್ಳುತ್ತಿದ್ದರು. ಕ್ಲಿಷ್ಟವಾದ ಮತ್ತು ಶುಷ್ಕವಾದ ವಿಷಯಗಳನ್ನು ಅವರು ಸರಳವಾಗಿ, ಸುಂದರವಾಗಿ, ಕಾವ್ಯಾತ್ಮಕವಾಗಿ ಮನದಟ್ಟು ಮಾಡಿ ಬಿಡುತ್ತಿದ್ದರು. ಪುರಾಣಗಳ ದೃಷ್ಟಾಂತ ದೊಡನೆ ಕ್ರಿಮಿನಲ್‌ ಲಾವನ್ನು ಆಪ್ತವನ್ನಾಗಿಸುತ್ತಿದ್ದರು.

“ಶೂರ್ಪನಖಿಗೆ ಪತಿ ಪ್ರೇಮದಕ್ಕಲಿಲ್ಲ; ಸೋದರ ಪ್ರೇಮವೂ ಸಿಗಲಿಲ್ಲ. ನೂರ ಒಂದು ಮಂದಿ ಕೌರವರನ್ನು ಅಪ್ಪಿ ಮುದ್ದಾಡಲು ಅವರಮ್ಮ‌ಅಪ್ಪರಿಂದ ಸಾಧ್ಯವಿರಲಿಲ್ಲ. ಪ್ರೀತಿ ಸಿಗದವರು ಕ್ರಿಮಿನಲ್ಲುಗಳಾಗುತ್ತಾರೆ. ಪ್ರೀತಿಯೇ ನ್ಯಾಯವನ್ನು ಉಳಿಸುವ, ಕಾನೂನಿಗೆ ಬೆಲೆ ತಂದುಕೊಡುವ ಶಕ್ತಿ ಎಂದವರು ಹೇಳುತ್ತಿದ್ದರು.

“ಹಾಗಾದರೆ ನೈತಿಕ ಮೌಲ್ಯಗಳು ಮತ್ತು ಕಾನೂನುಗಳು ಏಕಿರಬೇಕು? ಪ್ರೀತಿ ಯೊಂದೇ ಸಾಕಲ್ಲಾ?”

ವೀಣಾ ಪ್ರಶ್ನಿಸಿದಾಗ ಸಾಹೇಬರ ಮುಖದಲ್ಲಿ ನಗು ಕಾಣಿಸಿಕೊಂಡಿತು. ಪ್ರೀತಿಯನ್ನು ಅನುಭವಿಸಲು ಎಲ್ಲರಿಂದ ಸಾಧ್ಯವಾಗುವುದಿಲ್ಲ. ಅದೊಂದು ಅತ್ಯುನ್ನತ ಭಾವ. ಆಧ್ಯಾತ್ಮದಲ್ಲಿ ಭಗವಂತನೊಡನೆ ಭಾವಸಮಾಧಿ ಎಂದಿದೆ. ಅದನ್ನು ಸಾಧಿಸಲು ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಗಂಡಹೆಂಡಿರು, ತಂದೆಮಕ್ಕಳು ಕರ್ತವ್ಯ ಪ್ರಜ್ಞೆಯಿಂದ ಅನ್ಯೋನ್ಯ ವಾಗಿರುವುದುಂಟು. ಅದನ್ನು ನೆನಪಿಸಲಿಕ್ಕಾಗಿ ನೈತಿಕ ಮೌಲ್ಯಗಳು ಮತ್ತು ಕಾನೂನುಗಳು. ಸಮಾಜದ ಭಯದಿಂದಾಗಿ ನೈತಿಕತೆ ಹುಟ್ಟಿಕೊಳ್ಳಬಹುದು. ಭೀತಿ ಮೂಡಿಸಲೆಂದೇ ಕಾನೂನುಗಳನ್ನು ರೂಪಿಸುವುದುಂಟು. ಭಯವನ್ನು ಮೀರಬಲ್ಲವರನ್ನು ನೈತಿಕತೆಯಿಂದ ತಡೆಯಲಾಗುವುದಿಲ್ಲ. ಪ್ರೀತಿಯಿಂದ ತಡೆಯಬಹುದು.”

“ಹಾಗಾದರೆ ಪ್ರೀತಿಯೆಂದರೇನು?”

“ಅದನ್ನು ವಿವರಿಸುವುದು ಕಷ್ಟ. ಅನುಭವಿಸಬೇಕಷ್ಟೆ.”
* * * *

ಕಾನೇರೆನ್ಸೊಂದಕ್ಕೆ ಹೋಗಿ ಬಂದ ಮೇಲೆ ಯಜಮಾನರು ಮೊದಲಿನಂತಿಲ್ಲದಿರುವುದನ್ನು ಸಾಹೇಬರ ಪತ್ನಿ ಗಮನಿಸಿದ್ದರು. ಯಜಮಾನರೊಡನೆ ಅವರದು ಎಷ್ಟು ಬೇಕೋ ಅಷ್ಟೇ ಮಾತುಕತೆ. ಕಷ್ಟದಲ್ಲಿ ಮೆಟ್ರಿಕ್ಯುಲೇಶನ್‌ ಮಾಡಿದ ತಾನೆಲ್ಲಿ? ಲಾ ಕಾಲೇಜು ಪ್ರಿನ್ಸಿಪಾಲರಾಗಿ ಈಗ ಕೋರ್ಟು ಜಜ್ಜು ಆಗಿರುವ ಯಜಮಾನರೆಲ್ಲಿ? ತನ್ನೊಡನೆ ಮಾತಾಡಲು ಅವರಿಗೆ ಸಮಯವೇ ಸಿಗುತ್ತಿರಲಿಲ್ಲ. ಕೋರ್ಟಿಂದ ಬಂದ ಮೆಲೆ ದಪ್ಪ ದಪ್ಪನೆಯ ಪುಸ್ತಕಗಳಲ್ಲಿ ಅವರು ಕಳೆದು ಹೋಗುತ್ತಿದ್ದರು. ತಾನು ದೀಪವಾರಿಸಿ ಮಲಗಿ ಅವರಿಗಾಗಿ ಕಾಯಬೇಕಿತ್ತು. ಮೂಡು ಬಂದರೆ ಪಕ್ಕಕ್ಕೆಳೆದುಕೊಳ್ಳುತ್ತಿದ್ದರು. ಆಗಲೂ ಮಾತಿಲ್ಲ. ಮೂರು ಮಕ್ಕಳಾದ ಮೇಲೆ ತಾವೇ ವ್ಯಾಸೆಕ್ಟಮಿ ಮಾಡಿಸಿಕೊಂಡರು. ಅವರೆಂದರೆ ಅವಳಿಗೆ ಅದಮ್ಯ ಭಯ ಭಕ್ತಿ. ತಾನವರಿಗೆ ಸರಿಯಾದ ಹೆಂಡತಿಯಾಗಲಿಲ್ಲ ಎನ್ನುವ ಕೊರಗು. ಹಾಗಂತ ಸಾಹೇಬರು ಒಂದು ದಿನವೂ ಅಂದವರಲ್ಲ. ನಿಂಗೆ ಬೇಸರವಾದ್ರೆ ಅಕ್ಕಪಕ್ಕದವರೊಟ್ಟಿಗೆ ಸಿನಿಮಾಕ್ಕೆ ಹೋಗಿ ಬಾ. ನನ್ನದು ತೀರಾ ಪರ್ಸನಲ್ಲು ವೃತ್ತಿ. ಯಾರೊಡನೆಯೂ ಹೆಚ್ಚು ಬೆರೆಯುವಂತಿಲ್ಲ ಎಂದು ಮದುವೆಯಾದ ಆರಂಭದ ದಿನಗಳಲ್ಲಿ ಹೇಳುತ್ತಿದ್ದರು. ಅವಳು ಅವರಿಗೆ ಒಗ್ಗಿಕೊಂಡಳು. ಯಾವುದಕ್ಕೂ ಗೊಣಗಲಿಲ್ಲ. ಸಂಸಾರ, ಪತಿ, ಮಕ್ಕಳು ಎಲ್ಲವೂ ಋಣಾನುಬಂಧವೆಂದು ಅಂದುಕೊಳ್ಳುತ್ತಿದ್ದಳು.

ಯಜಮಾನರು ಕೋರ್ಟಿನ ಸಂಗತಿಗಳನ್ನು ಮನೆಯಲ್ಲಿ ಹೇಳಿದವರಲ್ಲ. ಕೆಲವೊಮ್ಮೆ ಉದ್ವಿಗ್ನರಾಗುತ್ತಿದ್ದುಂಟು. ಅಂತಹ ದಿನಗಳಲ್ಲಿ ಮನೆಗೆ ಯಾರ್ಯಾರದೋ ಫೋನುಗಳು. ಏರಿದ ಸ್ವರದಲ್ಲಿ ಉತ್ತರ ಕೊಡುತ್ತಿದ್ದ ಯಜಮಾನರು ಫೋನಿಟ್ಟ ಮೇಲೆ ಈಡಿಯಟ್ಸು, ನ್ಯಾಯವನ್ನು ಕೊಂಡುಕೊಳ್ಳಬಹುದು ಅಂದ್ಕೂಂಡಿದ್ದಾರೆ ಎಂದು ಗಟ್ಟಿಯಾಗಿ ಗೊಣಗು ತ್ತಿದ್ದರು. ಒಂದು ದಿನವಂತೂ ನೀನೊಬ್ಬ ತಲೆಹಿಡ್ಕ. ನಿಂಗೆ ಹಣಕೊಟ್ಟು ಓದಿಸ್ದೆ. ವೃತ್ತಿ ಸೂತ್ರವನ್ನೆಲ್ಲಾ ಹೇಳ್ಕೂಟ್ಟೆ. ಅಂತಹ ಗುರುಗಳ ಮೇಲೆ ಸಲ್ಲದ ಆಪಾದನೆ ಮಾಡಿ ಪ್ರಚಾರ ಗಿಟ್ಟಿಸಿ ಕ್ಲಯಿಂಟುಗಳನ್ನು ಆಕರ್ಷಿಸಲು ಯತ್ನಿಸುತ್ತಿದ್ದಿ. ಗುರುದ್ರೋಹಿಗಳಿಗೆ ಎಂದಿಗೂ ಒಳ್ಳೆಯದಾಗಲ್ಲ ನೋಡ್ತೀರು ಎಂದು ಯಾರಿಗೋ ಫೋನಿನಲ್ಲಿ ಗದರಿದ್ದರು. ಅಂತಹ ದಿನಗಳಲ್ಲಿ ಆಕೆಗೆ ಹೆದರಿಕೆಯಾಗುತ್ತಿತ್ತು. ಯಜಮಾನರ ನೇರವಂತಿಕೆಯಿಂದ ಏನು ಅಪಾಯವಾಗುತ್ತೊ? ಹಾಗಂತ ಅವರನ್ನು ಸಂತೈಸುವುದು ಹೇಗೆಂದು ಅವಳಿಗೆ ಹೊಳೆಯುತ್ತಿರಲಿಲ್ಲ.

ಮಕ್ಕಳಾದ ಮೇಲೆಯೇ ಮನೆಯ ಏಕತಾನತೆ ದೂರವಾದದ್ದು. ಯಜಮಾನರು ಮಕ್ಕಳೊಟ್ಟಿಗೆ ಮಕ್ಕಳಾಗುತ್ತಿದ್ದರು. ಅವರು ಬೆಳೆದಂತೆಲ್ಲಾ ಹೋಂವರ್ಕಿಗೆ ಸಹಾಯ ಮಾಡುತ್ತಿದ್ದರು. ಮನೆಗೆ ಕ್ಯಾರಮ್ಮು, ಚೆಸ್ಸು, ಕಾರ್ಡು ಬಂತು. ಇಂಟರ್‌ನ್ಯಾಶನಲ್‌ ರಮ್ಮಿ ಆಡೋದನ್ನು ಆಕೆಯೂ ಕಲಿತಳು. ಮನೆಯ ಹಿಂಬದಿಯಲ್ಲೊಂದು ಶಟಲ್ಲು ಕೋರ್ಟು ಸಿದ್ಧವಾಯಿತು. ಈಗ ಅವಳಿಗೆ ಸಾಹೇಬರ ಪ್ರೀತಿ ಅರ್ಥವಾಗತೊಡಗಿತು.

ಹಾಗೆ ಬದಲಾದ ಯಜಮಾನರು ಕಾನ್ಫರೆನ್ಸಿನ ಬಳಿಕ ಅನ್ಯಮನಸ್ಕರಾಗಿ ತೊಳಲುವುದನ್ನು ಆಕೆಯಿಂದ ತಡೆದುಕೊಳ್ಳಲಾಗಲಿಲ್ಲ. ಒಂದು ಸಂಜೆ ಧೈರ್ಯಮಾಡಿ ಕಾರಣ ಕೇಳಿದಳು.

“ನಾನು ಟೀಚಿಂಗು ಲೈಫ್‌ಗೆ ಎಂಟರಾದಾಗ ವೀಣಾ ಎಂಬ ಹುಡುಗಿ ಫೈನಲಿಯರಲ್ಲಿದ್ಲು. ಮೊನ್ನೆ ಕಾನ್ಫರೆನ್ಸಲ್ಲಿ ಸಿಕ್ಳು. ಅವ್ಳಿನ್ನೂ ಮದ್ವೆಯಾಗಿಲ್ಲ. ನಂಗೆ ಅಪರಾಧಿ ಪ್ರಜ್ಞೆ ಕಾಡುತ್ತಿದೆ.”

ಅವ್ಳು ಮದ್ವೆಯಾಗದ್ದಕ್ಕೆ ನೀವ್ಯಾಕೆ ನೊಂದ್ಕೋಬೇಕು?

“ನಂಗೆ ಅವ್ಳು ಇಷ್ಟವಾಗಿದ್ಲು. ಆದ್ರೆ ಹೇಳೋದಿಕ್ಕೆ ನನ್ನಿಂದ ಸಾಧ್ಯವಾಗ್ಲಿಲ್ಲ. ಅವ್ಳಿಗೂ ನನ್ ಮೇಲೆ ಇಷ್ಟ ಇತ್ತಂತೆ. ಹೇಳೋ ಧೈರ್ಯ ಎಲ್ಲಿ ಬರ್ಬೇಕು? ಯಾಕ್‌ ಮದ್ವೆ ಆಗ್ಲಿಲ್ಲ ಅಂದ್ರೆ ಪ್ರೀತಿ ಎಂದ್ರೇನು ಅಂತ ಹುಡುಕುತ್ತಾ ಇದ್ದೀನಿ. ಮನಸ್ಸು ನಿಮ್ಮನ್ನು ಅಗಾಧವಾಗಿ ಪ್ರೀತಿಸ್ತು. ಇನ್ನೊಬ್ಬನಿಗೆ ಬರೀ ದೇಹ ಕೊಡ್ಬೇಕಲ್ಲಾಂತ ಹಾಗೆ ಉಳಿದ್ಬಿಟ್ಟೆ ಅಂದ್ಲು. ನನ್ನಿಂದಾಗಿ ಅವ್ಳು ಜೀವನದ ಸುಖವನ್ನೇ ಕಳಕೊಂಡ್ಳು.”

ಸಾಹೇಬ್ರು ಅಂತರ್ಮುಖಿಯಾದರು. ಅವಳಿಗೆ ಏನು ಹೇಳಬೇಕೆಂದು ತಕ್ಷಣ ಹೊಳೆಯಲಿಲ್ಲ. ರಾತ್ರೆ ಅವಳಿಗೆ ನಿದ್ದೆ ಬರಲಿಲ್ಲ. ಯವ್ವನದ ದಿನಗಳಲ್ಲಿ ಅಂತಹ ಮೆಚ್ಚುಗೆ ಸಾಮಾನ್ಯ. ಮೆಚ್ಚಿದವರನ್ನೆಲ್ಲಾ ಮದ್ವೆಯಾಗೋದಕ್ಕಾಗೋದಿಲ್ಲ. ಯಜಮಾನ್ರು ಹೆಣ್ಣು
ನೋಡಲು ಬಂದಿದ್ದಾಗ ಅವಳ ಇಷ್ಟವನ್ನು ಯಾರೂ ಕೇಳಿರಲಿಲ್ಲ. ಆದರೆ ಮದುವೆ ಯಾಯಿತು, ಮಕ್ಕಳೂ ಆದರು. ಈಗ ಅವರಿಗೆ ಐವತ್ತು ದಾಟಿದೆ. ಫೈನಲ್‌ಯಿಯರಲ್ಲಿದ್ಲು ಅಂದ್ರೆ ಆಕೆಗೂ ಐವತ್ತರ ಅಂಚು. ಮದುವೆಯಾಗಿ ಇಷ್ಟು ವರ್ಷಗಳಲ್ಲಿ ಆಕೆಯ ಹೆಸರು ಒಮ್ಮೆಯೂ ಪ್ರಸ್ತಾಪವಾಗಿರಲಿಲ್ಲ. ಆಕೆ ಇವರ ನೆನಪಲ್ಲೇ ಇಷ್ಟು ವರ್ಷ ಕಳೆದಿದ್ದಾಳೆ. ಇನ್ನು ಆಕೆಗೆ ವೈವಾಹಿಕ ಬದುಕಿಲ್ಲ. ಲೋಕ ಒಪ್ಪಲಿ, ಬಿಡಲಿ ಆಕೆಯ ಪಾಲಿಗೆ ಇವರೇ ಗಂಡ. ಹೀಗೂ ಉಂಟಾ?

ಸಾಹೇಬರ ಪತ್ನಿ ಮರುದಿನ ಯಜಮಾನರಲ್ಲಿ ಹೇಳಿದಳು ನೀವು ಹೇಳಿದ್ರಲ್ಲಾ ವೀಣಾ? ಆಕೀನ ಇಲ್ಲಿಗೊಮ್ಮೆ ಕರೆಸ್ತೀರಾ? ಇಲ್ದಿದ್ರೆ ನೀವು ಸರಿಯಾಗಲ್ಲ.
* * * *

ವೀಣಾ ಬಂದಳು. ಯವ್ವನದ ಕಳೆ ಮಾಸಿದ್ದರೂ ಈಗಲೂ ಚೆಲುವೆಯೇ. ತನಗಿಂತ ನಾಲ್ಕೈದು ವರ್ಷಕ್ಕೆ ದೊಡ್ಡವಳಿರಬಹುದು. ಏನು ಮಾತಾಡಬೇಕೆಂಬುದು ಮೂವರಿಗೂ ಹೊಳೆಯುತ್ತಿರಲಿಲ್ಲ. ಕೊನೆಗೆ ಸಾಹೇಬರ ಪತ್ನಿ ಆರಂಭಿಸಿದಳು ನಾನು ನಿಮ್ಮಿಬ್ಬರಿಗಿಂತ ಚಿಕ್ಕವಳು. ನಮ್ಮ ಯಜಮಾನರ ಸ್ಥತಿಯನ್ನು ಕಾಣಲಾರದೆ ನಿಮ್ಮನ್ನು ಬರಹೇಳಿದ್ದೇನೆ. ತಮ್ಮಿಂದಾಗಿ ನಿಮ್ಮ ಜೀವನದ ಸುಖಸೌಭಾಗ್ಯ ದೂರವಾಯಿತೆಂಬ ಪಾಪಪ್ರಜ್ಞೆ ಅವರನ್ನು ಕಾಡುತ್ತಿದೆ. ನಿಮ್ಮಮಿಬ್ಬರಲ್ಲಿ ಒಬ್ಬರು ಧೈರ್ಯದಿಂದ ತಮ್ಮ ಮನಸ್ಸನ್ನು ಅಂದೇ ತೋಡಿಕೊಳ್ಳುತ್ತಿದ್ದರೆ ಇಲ್ಲಿ ನಾನಿರುತ್ತಿರಲಿಲ್ಲ. ಇರಲಿ. ಈಗ ಇದಕ್ಕೊಂದು ಪರಿಹಾರ ಹುಡುಕಲೇಬೇಕು.

ಸಾಹೇಬರು ಮತ್ತು ವೀಣಾ ಆಕೆಯನ್ನೇ ನೋಡುತ್ತಿದ್ದರು. ಈವರೆಗೆ ನೀವು ಇವರ ನೆನಪಲ್ಲೇ ಕಾಲ ಕಳೆದಿರಿ. ಇನ್ನು ಇವರು ನಿಮಗೂ ಸಿಗುತ್ತಾರೆ. ಈ ಪ್ರಾಯದಲ್ಲಿ ನೀವು ಮದುವೆಯಾದರೆ ಲೋಕ ನಗುತ್ತೆ. ಸಾಹೇಬರು ಕೆಲ್ಸಾ ಕಳಕೊಳ್ಳುತ್ತಾರೆ. ಮದ್ವೆ ಅಂದರೆ ತಾಳಿ ಕಟ್ಟೋದೇ ಅಲ್ಲ. ಮನಸ್ಸು ಸೇರೋದು. ಇವ್ರು ನನಗೆ ತಾಳಿ ಕಟ್ಟಿದವರು. ಮನಸ್ಸೊಳಗೆ ಎಲ್ಲೋ ನೀವಿದ್ರಿ. ಇನ್ನು ಮುಂದೆ ಇವರು ನಿಮಗೂ ಸೇರಿದವರು. ನೀವು ಇದೇ ಮನೇಲಿ ಇರ್ತೀರಿ. ಮಕ್ಕಳಿಗೆ ನಾನು ಹೇಳ್ತೀನಿ. ಉಳಿದವ್ರು ಏನಂದುಕೊಂಡ್ರೂ ಪರವಾಗಿಲ್ಲ. ಇನ್ನಂತೂ ನಿಮಗೆ ಮಕ್ಕಳಾಗಲ್ಲ. ಇವರ ಪ್ರೀತಿನಾದ್ರೂ ಇರ್‍ಲಿ.

ಪತ್ನಿಯ ಕಣ್ಣಿಂದ ಕೆನ್ನೆಯ ಮೇಲೆ ನೀರು ಉದುರಿದಾಗ ಸಾಹೇಬರು ಕರ್ಚೀಫಿನಿಂದ ಒರೆಸಿದರು. ವೀಣಾ ಆಕೆಯ ಎಡಗೈ ಹಿಡಕೊಂಡಳು.
* * * *

ಕೇಸು ಪತ್ನಿಯ ಪರವಾಗಿ ಇತ್ಯರ್ಥವಾಯಿತು. ಆದರೆ ಅಪಾರ ಪಾಂಡಿತ್ಯದ, ಸಮಾಜದಲ್ಲಿ ತುಂಬಾ ಗೌರವಕ್ಕೆ ಪಾತ್ರರಾಗಿದ್ದ ಜಜ್ಜು ಸಾಹೇಬರು ತಾವಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟದ್ದು ಯಾಕೆಂದು ಯಾರಿಗೂ ಗೊತ್ತಾಗಲಿಲ್ಲ.
*****
೧೯೯೪

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಡುಬಳೆ
Next post ಅಪ್ಪ ಅಪ್ಪ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys