ಭ್ರಮಣ – ೧೬

ಭ್ರಮಣ – ೧೬

ಪಟ್ಟಣದ ತನ್ನ ಬಾಡಿಗೆ ಮನೆಯನ್ನು ಬಹುಮೊದಲೇ ಖಾಲಿ ಮಾಡಿ ಅಲ್ಲಿದ್ದ ತನ್ನ ಸಾಮಾನುಗಳನ್ನೆಲ್ಲಾ ಇಲ್ಲಿಗೆ ತಂದಿದ್ದ ತೇಜಾ. ಅವರೊಡನೆ ಅವನ ಸ್ಕೂಟರ್ ಕೂಡಾ ಬಂದಿತ್ತು. ಪೋಲೀಸು ವಾಹನವಿಲ್ಲದ ಕಾರಣ. ಈಗ ಅದನ್ನೇ ಉಪಯೋಗಿಸಬೇಕಾಗಿ ಬಂತು. ಮೊದಲೇ ಅದನ್ನು ಒಳ್ಳೆ ಕಂಡಿಶನ್‌ನಲ್ಲಿ ಮಾಡಿ ತಂದ ಕಾರಣ. ಇಲ್ಲಿಯೂ ಆಗಾಗ ಉಪಯೋಗಿಸುತ್ತಿದ್ದ ಕಾರಣ ಅದು ಒಂದೇ ಕಿಕ್ಕಿಗೆ ಸ್ಟಾರ್ ಆಯಿತು. ಏರು ತಗ್ಗುಗಳ ದಾರಿಯಲ್ಲಿ ಅದನ್ನು ಮುಖ್ಯರಸ್ತೆಗೆ ತಂದು ವೇಗವಾಗಿ ಓಡಿಸತೊಡಗಿದ. ವಂಕಟ್‌ನ ಕೊಲೆ ಅವನಲ್ಲಿ ವಿಚಿತ್ರ ಸಂಕಟ ನೋವುಗಳನ್ನು ಹುಟ್ಟಿಸಿತ್ತು. ಇದು ನಾಯಕನ ಬಂಟರೇ ಮಾಡಿರುವ ಕೆಲಸವೆಂಬುವುದರಲ್ಲಿ ಸಂದೇಹವಿಲ್ಲ. ಅವನು ತನ್ನ ಕೊಲ್ಲಲು ಹೂಡಿದ ಸಂಚಿಗೆ ವೆಂಕಟನೇ ಮುಖ್ಯ ಸಾಕ್ಷಿಯಾಗಿದ್ದ. ಪೋಲಿಸ್ ಖಾತೆಗೆ ಸೇರಿದವನಾದ ಅವನ ಮಾತನ್ನು ನ್ಯಾಯಾಲಯ ನಂಬಲಿಕ್ಕಿಲ್ಲ. ಅದೂ ಅಲ್ಲದೇ ವೆಂಕಟನ ಭಂಡ ಧೈರ್ಯದ ಕಾರಣ ನಾಯಕನಿಗೆ ಅವನ ಮೇಲೆ ವಿಪರೀತ ಕೋಪವಿದೆ ಎಂಬ ಮಾತನ್ನು ಯುವಕರು ಹೇಳಿದ್ದರು. ಈಗಲೇ ಏನಾದರೂ ಮಾಡಬೇಕು ಇಲ್ಲದಿದ್ದರೆ ಈ ನಾಯಕ್ ಒಬ್ಬೊಬ್ಬರನ್ನೆ ಮುಗಿಸುತ್ತಾ ಹೋಗಬಹುದು. ಇಂತಹ ಯೋಚನೆಗಳಲ್ಲೇ ವಾಹನವನ್ನು ಅತಿ ತೀವ್ರಗತಿಯಿಂದ ಓಡಿಸುತ್ತಿದ್ದ ತೇಜಾ.

ಅವನು ಬಂಡೇರಹಳ್ಳಿ ಸೇರಿದಾಗ ರಾತ್ರಿಯ ಒಂಭತ್ತೂವರೆ. ವೆಂಕಟನ ಗುಡಿಸಲ ಮುಂದೆ ಸಾಕಷ್ಟು ಜನ ಕುಳಿತಿದ್ದರು. ಒಳಗಿನಿಂದ ಹೆಂಗಸರ ರೋಧನ ಎಂತಹವರ ಹೃದಯವನ್ನಾದರೂ ಕುಲುಕುವಂತಿತ್ತು. ತೇಜಾ ವಾಹನವನ್ನು ಸ್ಕ್ವಾಡಿಗೆ ಎಳೆಯುತ್ತಿದ್ದ ಹಾಗೆ ಹತ್ತಿರ ಬಂದ ತಾತ ಅವನ ಹೆಗಲ ಮೇಲೆ ತಲೆ ಇಟ್ಟು ಅಳತೊಡಗಿದ. ಅವನ ಭುಜ ತಟ್ಟುತ್ತಾ ಕೇಳಿದ ತೇಜಾ.

“ವೆಂಕಟ…”

“ಆಗಲೇ ಪೋಲಿಸಿನವರು ಅವನನ್ನು ರಾಮನಗರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಶವ ಪರೀಕ್ಷೆ ಮಾಡುತ್ತಾರಂತೆ”

ಪೋಸ್ಟ್ ಮಾಟರ್ಂಗೆ ಕಳಿಸಿರಬಹುದೆಂದು, ತನಗೆ ಮೊದಲೆ ಏಕೆ ಹೊಳೆಯಲಿಲ್ಲ ಎಂದುಕೊಂಡ ತೇಜ ಗುಡಿಸಲ ಹತ್ತಿರಬಂದ. ಅವನು ಬಂದ ಸುದ್ದಿ ಆಗಲೇ ಒಳಗಿದ್ದ ಹೆಂಗಸರಿಗೆ ತಿಳಿದಿತ್ತು. ಇಬ್ಬರು ಹೊರಬಂದು ಅವನನ್ನು ತಬ್ಬಿ ತಮ್ಮ ರೋಧನದ ನಡುವೆ ಹೇಳಿದರು.

“ನೀವಿಲ್ಲಿಂದ ಹೋದಿರಿ ಸ್ವಾಮಿ ಪೋಲಿಸಿನವರ ಅತ್ಯಾಚಾರ ಶುರು ಆಗಿದೆ. ಅನ್ಯಾಯವಾಗಿ ನನ್ನ ಬೆಳೆದ ಮಗನನ್ನು ಹೊಟ್ಟೆಗೆ ಹಾಕಿಕೊಂಡರು… ಯಾರ ತಂಟೆಗೂ ಹೋದವನಲ್ಲ ನಮ್ಮ ವೆಂಕಟ… ನೀವು ಭಾಷಣ ಮಾಡಿದ್ದರಲ್ಲ ಸ್ವಾಮಿ ಪೋಲಿಸಿನವರು ಯಾರ ಶತೃಗಳೂ ಅಲ್ಲ ಮಿತ್ರರೆಂದು… ಆ ಪಾಪಿ ಇನ್ಸ್‌ಪೆಕ್ಟರ್ ಜೀಪಿನಲ್ಲಿ ವೆಂಕಟನನ್ನು ಹಾಕಿ ಕಳಿಸೇಬಿಟ್ಟ… ಅವನ ಪ್ರಾಣ ತೆಗೆದುಕೊಂಡವರ ವಂಶನಾಶವಾಗ…”

ಹೀಗೆ ಅಳುವಿನ ನಡುವೆ ವೆಂಕಟನ ಕೊಲೆ ಮಾಡಿದವರನ್ನು ಶಪಿಸುತ್ತಾ ಅವನ ಗುಣಗಾನ ಮಾಡುತ್ತಾ ಶಪಿಸುತ್ತಲೇ ಇದ್ದರವರು. ಇಬ್ಬರು ಯುವಕರು ಆ ಹೆಂಗಸರನ್ನು ಮತ್ತೆ ಗುಡಿಸಲಿನಲ್ಲಿ ಕರೆದುಕೊಂಡು ಹೋದಾಗ ಅದರೆದುರು ಉರಿಯುತ್ತಿರುವ ಬೆಂಕಿಯನ್ನು ನೋಡಿದ ತೇಜ. ಅವನು ಹಾಗೇ ನೋಡುತ್ತಿದ್ದಾಗ ಈ ರೋಧನಗಳೇ ಬೆಂಕಿಯ ಜ್ವಾಲೆಗಳಾಗಿ ಅನ್ಯಾಯಗಳನ್ನು ಎಸಗಿದವರನ್ನು ಸುಟ್ಟುಬಿಡುತ್ತವೇನೋ ಎನಿಸಿತು. ಅಲ್ಲಿನ ಜನರಿಂದ ದೂರ ಬಂಡೆಯೊಂದರ ಮೇಲೆ ಕುಳಿತಾಗ ಯುವಕರು, ಗುಂಡುತಾತ ಮತ್ತಿತರರು ಅವನೆದುರು ಬಂದು ಕುಳಿತರು. ಇದೆಲ್ಲಾ ಹೇಗಾಯಿತೆಂದು ಕೇಳಿದಾಗ ಹೇಳಿದ ಒಬ್ಬ.

“ಏಳು ಏಳೂವರೆಯ ಸಮಯದಲ್ಲಿ ಒಬ್ಬ ಬಯಲಿಗೆ ಹೋದಾಗ, ಅವನಿಂದ ಸ್ವಲ್ಪ ದೂರದಲ್ಲಿ ಮನುಷ್ಯ ಒಬ್ಬನು ಬಿದ್ದಿರುವಂತೆನಿಸಿತಂತೆ. ಆ ಮುಳ್ಳುಗಿಡಗಳ ನಡುವೆ ಯಾರು ಮಲಗಿರಬಹುದೆಂದು ಹತ್ತಿರ ಹೋಗಿ ಕಡ್ಡಿ ಗೀಚಿ ನೋಡಿದರಂತೆ. ವೆಂಕಟನನ್ನು ಗುರುತಿಸಿದ ಅವನು ಇನ್ನೊಂದು ಕಡ್ಡಿ ಗೀಚಿದಾಗ ಎದೆಯಿಂದ ಬರುತ್ತಿರುವ ರಕ್ತ ಕಾಣಿಸಿತಂತೆ. ಒಮ್ಮೆಲೆ ಕೂಗುತ್ತಾ ಓಡಿಬಂದ. ವೆಂಕಟನನ್ನು ಹೊತ್ತುಕೊಂಡು ಇಲ್ಲಿಗೆ ತಂದೆವು. ಹದಿನೈದು ನಿಮಿಷದ ಬಳಿಕ ಬಂದ ಇನ್ಸ್‌ಪೆಕ್ಟರ್‌ ಮತ್ತು ಎಸ್.ಐ. ಸಾಹೇಬರು ನಮ್ಮನ್ನು ಬಾಯಿಗೆ ಬಂದತೆ ಬೈದು, ವೆಂಕಟನನ್ನು ಜೀಪಿನಲ್ಲಿ ಹಾಕಿಕೊಂಡು ಹೋದರು”

ಪೂರ್ತಿ ವಿವರ ಸಿಕ್ಕಂತಾದಮೇಲೆ ಕೇಳಿದ ತೇಜಾ

“ಮೊದಲು ಶವವನ್ನು ನೋಡಿದವ ಎಲ್ಲಿ?”

“ಅವನನ್ನೂ ಕರೆದುಕೊಂಡು ಹೋಗಿ ಪೋಲೀಸ್ ಸ್ಟೇಷನ್‌ನಲ್ಲಿ ಕೂಡಿಸಿದ್ದಾರೆ. ಅವನೇ ಕೊಲೆ ಮಾಡಿದಂತೆ ಮಾತಾಡುತ್ತಿದ್ದರು ಪೋಲಿಸಿನವರು”

ತಾನೀಗ ಏನು ಮಾಡಬೇಕೆಂಬ ಬಗ್ಗೆ ಯೋಚಿಸುತ್ತಿದ್ದ ತೇಜಾ ಸ್ವಲ್ಪ ಹೊತ್ತು ಯೋಚಿಸಿ ಕೇಳಿದ

“ಇನ್ಸ್‌ಪೆಕ್ಟರ್ ಸಾಹೇಬರು ಪೋಲೀಸ್ ಸ್ಟೇಷನ್‌ಲ್ಲಿದ್ದಾರೆಯೇ?”

“ಇರಬಹುದು ಸ್ವಾಮಿ” ಹೇಳಿದ ಒಬ್ಬ

“ನಾನೀಗ ಬರುತ್ತೇನೆ” ಎಂದ ತೇಜಾ ಸ್ಕೂಟರನ್ನು ಸ್ಟಾರ್ ಮಾಡಿ ಪೋಲೀಸ್ ಸ್ಟೇಷನ್ನಿನ ಕಡೆ ಓಡಿಸಿದ.

ಅಲ್ಲಿದ್ದ ಎಸ್.ಐ. ಮತ್ತು ಕಾನ್ಸ್‌ಟೇಬಲರು ಹೊಸಬರೇ. ಅಲ್ಲಿನ ಸಿಬ್ಬಂದಿ ಹೆಚ್ಚಾಗಿರುವಂತೆ ಕಂಡಿತು. ಕೋಣೆಯಲ್ಲಿ ಪ್ರವೇಶಿಸುತ್ತಲೆ ಮುಗುಳ್ನಗುತ್ತಾ ಕೈಮುಂದೆ ಚಾಚಿದ ಬಂಡೇರಹಳ್ಳಿಯ ಹೊಸ ಪೆಕ್ಟರ್ ಜಗದೀಶ, ಅದನ್ನು ಕುಲಕಿ ಮುಂದೆ ಕುಳಿತಾಗ ಅವನೇ ಕೇಳಿದ

“ಇಲ್ಲಿ ಹೇಗೆ ಬರೋಣವಾಯಿತು”

“ವೆಂಕಟ್‌ನ ಕೊಲೆಯಾಗಿದೆ. ಅದಕ್ಕೆ ಬಂದೆ” ನೀವು ಅವನನ್ನು ನೋಡಿದವನನ್ನು ಇಲ್ಲಿ ತಂದು ಕೂಡಿಸಿದ್ದೀರಂತೆ”

ಅವನ ಕುಚೋದ್ಯದ ಮುಗುಳ್ನಗೆ ತುಂಬಿ ಬಂತು. ಅಂತಹದೇ ದನಿಯಲ್ಲಿ ಮಾತಾಡಿದ.

“ಓಹೋ! ನೀವು ಅದಕ್ಕಾಗಿ ಬಂದಿದ್ದೀರಾ?”

“ಹೂಂ! ಅದಕ್ಕೆ! ಈ ಹಳ್ಳಿಯಲ್ಲಿ ಹೊಸದಾಗಿ ಬಂದಿದೆ ಸ್ಟೇಷನ್. ಹಳ್ಳಿಗರಿಗೆ ಕೊಲೆಯಾದವನನ್ನು ನೋಡುತ್ತಲೇ ಪೋಲಿಸಿನವರಿಗೆ ತಿಳಿಸಬೇಕೆಂಬುವುದು ಗೊತ್ತಿಲ್ಲ” ಅವನ ಮಾತಿನಲ್ಲಿದ್ದ ವ್ಯಂಗ್ಯವನ್ನು ಗಮನಿಸದವನಂತೆ ಹೇಳಿದ ತೇಜಾ.

“ನೋಡಿ, ಮಿಸ್ಟರ್ ತೇಜಾ, ಈಗ ಬಂಡೇರಹಳ್ಳಿಯ ಇನ್ಸ್‌ಪೆಕ್ಟರ್ ನಾನು. ನನಗೆ ನೀವು ಪಾಠ ಕಲಿಸಬೇಕಾಗಿಲ್ಲ. ಎಲ್ಲಾ ತರಹದ ಹಳ್ಳಿಗಳಲ್ಲಿ ಕೆಲಸ ಮಾಡಿರುವವನು ನಾನು. ಅವರ ಸ್ವಭಾವ ಪಟ್ಟಣದವರಾದ ನಿಮಗಿಂತ ಚೆನ್ನಾಗಿ ನನಗೆ ಗೊತ್ತು. ಅದಕ್ಕೆ ನನಗೆ ನಿಮ್ಮ ಉಪದೇಶದ ಅವಶ್ಯಕತೆ ಇಲ್ಲ” ವರಟು ದನಿಯಲ್ಲಿ ಹೇಳಿದ ಇನ್ಸ್‌ಪೆಕ್ಟರ್ ಜಗದೀಶ, ಇಂತಹ ಮಾತಿನಿಂದ ತೇಜಾನ ಸಹನೆ ಮೀರಿತು, ಹೇಳಿದ.

“ವೆಂಕಟ್ ಸಿದ್ಧಾನಾಯಕರ ವಿರುದ್ಧವಿರುವ ಕೇಸಿನ ಮುಖ್ಯ ಸಾಕ್ಷಿಯಾಗಿದ್ದ. ನೀವು ಮೊದಲು ಅವರನ್ನು ಪೋಲಿಸ್ ಸ್ಟೇಷನ್ನಿಗೆ ಹಿಡಿದು ತರಬೇಕಾಗಿತ್ತು…”

“ಅದೆಲ್ಲಾ ನನಗೆ ಗೊತ್ತು. ನಾ ಮೊದಲೇ ಹೇಳಿದ ಹಾಗೆ ನೀವು ನನಗೆ ಉಪದೇಶ ಕೊಡಬೇಡಿ. ಈ ಕೊಲೆಗೂ ನಾಯಕರ ಮೇಲಿರುವ ಕೇಸಿಗೂ ಯಾವ ಸಂಬಂಧವೂ ಇಲ್ಲ. ನೀವಿನ್ನು ಹೋಗಬಹುದು”

ತನ್ನ ಸಹೋದ್ಯೋಗಿಯಿಂದ ಇಂತಹ ಅವಮಾನ ತೇಜಾನಿಗೆ ಮೊದಲೆಂದೂ ಆಗಿರಲಿಲ್ಲ. ಕುರ್ಚಿಯಿಂದ ಏಳುತ್ತಾ ಕಟುವಾದ ದನಿಯಲ್ಲಿ ಹೇಳಿದ ತೇಜಾ.

“ನೀವು ನನ್ನೊಡನೆಯು ಹೀಗೆ ವರ್ತಿಸುವಿರೆಂದು ನಾನು ತಿಳಿದಿರಲಿಲ್ಲ ಮಿಸ್ಟರ್‌ ಜಗದೀಶ್ ಎಚ್ಚರಿಕೆಯಂತಹ ಒಂದು ಮಾತು ಹೇಳಿ ಹೋಗುತ್ತೇನೆ. ಈ ಹಳ್ಳಿಯ ಜನ ಎಷ್ಟು ಒಳ್ಳೆಯವರೋ ಅಷ್ಟೇ ಕೆಟ್ಟವರು. ಜಾಗ್ರತೆಯಾಗಿರಿ”

ಅದಕ್ಕೆ ಇನ್ಸ್‌ಪೆಕ್ಟರ್‌ ಜಗದೀಶ ಪ್ರತಿಕ್ರಿಯಿಸುವ ಮುನ್ನ ಕೋಣೆಯಿಂದ ಹೊರಬಿದ್ದಿದ್ದ ತೇಜಾ, ಅವನು ನಾಲ್ಕು ಹೆಜ್ಜೆ ಹಾಕುತ್ತಿದ್ದಂತೆ ಹಿಂದಿನಿಂದ ಬೂಟುಗಾಲಿನ ಓಟ ಕೇಳಿಬಂತು. ನಿಂತು ಹಿಂತಿರುಗಿದ. ಓಡಿ ಅವನ ಬದಿಗೆ ಬಂದ ಎಚ್.ಸಿ. ಹೇಳಿದ

“ಇದು ಕ್ರಾಂತಿಕಾರಿಯರ ಕೇಸು. ಜಾಗ್ರತೆಯಿಂದಿರಿ ಇಲ್ಲದಿದ್ದರೆ, ಇಲ್ಲದ ಪೇಚಿಗೆ ಸಿಕ್ಕಿಹಾಕಿಕೊಳ್ಳುತ್ತೀರಿ ಎಂದು ನಿಮಗೆ ಹೇಳುವಂತೆ ಹೇಳಿದ್ದಾರೆ ಸರ್, ಇನ್ಸ್‌ಪೆಕ್ಟರ್ ಸಾಹೇಬರು”

ಅವನನ್ನು ಕೆಲಕ್ಷಣ ದುರುಗುಟ್ಟಿ, ಅದೇ ತನ್ನ ಉತ್ತರವೆಂಬಂತೆ ವೇಗವಾಗಿ ಮುಂದೆ ನಡೆದ ತೇಜ, ಮುಂದೆ ದಾರಿಯ ಆಚೆ ಎಸ್.ಟಿ.ಡಿ.ಯ ಬೂತ್‌ ಕಾಣಿಸಿದಾಗ ಅವನ ನಡುಗೆಯ ಗತಿ ನಿಧಾನಗೊಂಡಿತು. ಮುಂದೇನು ಮಾಡುವುದೆಂದು ಯೋಚಿಸಿದ. ಸರಕಾರಿ ಆಸ್ಪತ್ರೆಗೆ ಪೋಸ್ಟ್ ಮಾಟರ್ಂಗೆ ಹೋದ ಶವ ಈ ರಾತ್ರಿಯಂತೂ ಬರುವುದಿಲ್ಲ. ತಾನು ಮನೆಗೆ ಹೋಗಿಬರುವುದೇ ಇಲ್ಲೇ ಇರುವುದೇ ಎಂಬ ಬಗ್ಗೆ ಯೋಚಿಸುತ್ತಾ ನಡೆದ. ತಾನಾಗಿಯೇ ಹೆಜ್ಜೆಗಳು ಎಸ್.ಟಿ.ಡಿ ಬೂತ್ ಬಳಿ ಬಂದವು. ಅವನನ್ನು ನೋಡಿ ಗೌರವದಿಂದ ನಮಸ್ಕರಿಸಿ ಎದ್ದು ನಿಂತ ಬೂತಿನ ಮಾಲಿಕ. ಅವನಿಗೆ ಯಾಂತ್ರಿಕವಾಗಿ ಪ್ರತಿ ನಮಸ್ಕರಿಸಿ ರಿಸೀವರನ್ನು ಎತ್ತಿಕೊಂಡು ಮನೆಯ ನಂಬರ್ ತಿರುವಿದ, ರಿಸೀವರನ್ನು ಅಮ್ಮಾ ಎತ್ತಿದ್ದರು. ಆಕೆಯ ಮಾತು ಕೇಳಿಸುತ್ತಲೇ ಹೇಳಿದ

“ಅಮ್ಮಾ ನಾನು. ಒಂದು ನಿಮಿಷ ಕಲ್ಯಾಣಿಗೆ ಕೊಡು”

ಬೂತಿನಲ್ಲಿ ಹೊಕ್ಕ ಅವನ ಮಾತನ್ನು ಯಾರೂ ಕೇಳಿಸಿಕೊಳ್ಳುವ ಹಾಗಿರಲಿಲ್ಲ. ಕಲ್ಯಾಣಿಯ ದನಿ ಕೇಳಿಸಿದಾಗ ಹೇಳಿದ

“ಇಲ್ಲಿ ನನ್ನ ಮಿತ್ರನೊಬ್ಬ ಮಡಿದಿದ್ದಾನೆ. ಶವಸಂಸ್ಕಾರ ನಾಳೆಯೇ ಆಗುವಹಾಗಿದೆ. ನನಗೀ ರಾತ್ರಿ ಬರಲಾಗುವುದಿಲ್ಲವೆಂದು ಅಮ್ಮ, ಅಪ್ಪನಿಗೆ ಹೇಳುತ್ತೀಯಾ”

“ಹೇಳುತ್ತೇನೆ. ಅವಸರ ಬೇಡ ನಿಮ್ಮ ಕೆಲಸವನ್ನು ಮುಗಿಸಿಕೊಂಡು ಬನ್ನಿ” ಎಂದ ಕಲ್ಯಾಣಿ ರಿಸೀವರನ್ನು ಕೆಳಗಿಟ್ಟಳು. ಮಡದಿಯ ನಿರ್ವಿಕಾರ ದನಿಯನ್ನು, ಕೆಲಸಕ್ಕೆ ಬಾರದ ಮಾತುಗಳನ್ನು ತೆಗೆಯದಿರುವುದನ್ನು ಮೆಚ್ಚಿಕೊಳ್ಳುತ್ತಾ ಫೋನ್ ಮಾಡಿದ್ದಕ್ಕೆ ಹಣ ಕೊಡಲು ಹೋದಾಗ ವಿನಯದ ದನಿಯಲ್ಲಿ ಹೇಳಿದ ಬೂತಿನ ಮಾಲಿಕ

“ಇರಲಿ ಸ್ವಾಮಿ! ನೀವು ನಮ್ಮ ಹಳ್ಳಿಗಾಗಿ ಇಷ್ಟು ದುಡಿದಿದ್ದೀರಿ, ನಿಮ್ಮಿಂದ ಹಣದ ಪಡೆಯುವುದೆಂದರೇನು”

ಅವನ ಬೆನ್ನು ತಟ್ಟುತ್ತಾ ಹೇಳಿದ ತೇಜಾ.

“ತಗೊ ನೀ ಕಷ್ಟಪಡುತ್ತಿದ್ದಿ ತೊಗೊ, ನಾನು ಬಂಡೇರಹಳ್ಳಿಗಾಗಿ ಏನೂ ಮಾಡಿಲ್ಲ ನನ್ನ ಕರ್ತವ್ಯ ನಾ ನಿಭಾಯಿಸಿದ್ದೇನಷ್ಟೆ”

ಮೊದಲಿನ ಅವನ ಕಠಿಣ ಮಾತಿಗೆ ಇಷ್ಟವಿಲ್ಲದಿದ್ದರೂ ಹಣ ತೆಗೆದುಕೊಳ್ಳುತ್ತಿರುವಂತೆ ತೆಗೆದುಕೊಂಡನಾತ. ಚಿಲ್ಲರೆಯನ್ನು ಮರಳಿ ಪಡೆಯುತ್ತಾ ಕೇಳಿದ ತೇಜಾ

“ಹೊಸ ಇನ್ಸ್‌ಪೆಕ್ಟರ್ ಸಾಹೇಬರು ಏನನ್ನುತ್ತಾರೆ”

“ಕಲ್ಲಕ್ಕ ಮತ್ತವರ ತಂಡದವರನ್ನು ನಾಶಮಾಡೇ ಮಾಡುತ್ತೀನಿ ಎಂದು ಶಪಥ ಮಾಡಿ ಬಂದಿದ್ದಾರಂತೆ. ಸಿಕ್ಕ ಸಿಕ್ಕವರನ್ನೆಲ್ಲಾ ಎಳೆದುಕೊಂಡು ಹೋಗಿ ಪೋಲಿಸ್ ಸ್ಟೇಷನ್‌ನಲ್ಲಿ ತದಕುತ್ತಿದ್ದಾರೆ” ಆ ಇನ್ಸ್‌ಪೆಕ್ಟರ್‌ ಹುಚ್ಚ ಎಂಬಂತಹ ದನಿಯಲ್ಲಿ ಬಂದಿತ್ತವನ ಮಾತು. ಅವನ ಅಭಿಪ್ರಾಯ ತಿಳಿಯಲು ಕೇಳುವಂತೆ ಕೇಳಿದ

“ಅದು ಆಗ ಬಹುದನ್ನುತ್ತೀಯಾ?”

“ಇವನಿಂದ ಏನು ಸರ್! ಪಟ್ಟಣದಿಂದ ಇದ್ದ ಬದ್ದ ಎಲ್ಲಾ ಪೋಲಿಸ್‌ದಳವು ಇಲ್ಲಿ ಬಂದರೆ ಅದು ಸಾಧ್ಯವಾಗದ ಮಾತು” ದಿಟವಾದ ದನಿಯಲ್ಲಿ ಹೇಳಿದನವ. ವೆಂಕಟನ ಮನೆಯಕಡೆ ನಡೆಯುತ್ತಾ ಇವನಿಗೆ ಕಲ್ಯಾಣಿ ತನ್ನ ಮಡದಿ ಎಂಬುವುದು ಗೊತ್ತಿರಬಹುದೇ ಎಂದುಕೊಂಡ ತೇಜಾ

ವೆಂಕಟನ ಶವ ಬರುವುದು ನಾಳೆಯೆಂದು ತಿಳಿದ ಕೆಲವರು ಹೊರಟುಹೋಗಿದ್ದರು. ಇನ್ನೂ ಕೆಲವರು ಹೋಗಬೇಕೋ ಬೇಡವೋ ಎಂಬ ಪೇಚಿನಲ್ಲಿ ಸಿಕ್ಕಿಹಾಕಿಕೊಂಡಿದ್ದಂತೆ ಕಂಡರು ಇಬ್ಬರು ನಡುವಯಸ್ಕರು ಮತ್ತು ಯುವಕರ ನಡುವೆ ಕುಳಿತಿದ್ದ ತಾತ. ಅವನು ಬರುತ್ತಿರುವುದು ಕಂಡು ಎಲ್ಲರೂ ಎದ್ದು ನಿಂತರು. ಅವರೊಡನೆ ನೆಲದ ಮೇಲೆ ಕುಳಿತ ತೇಜಾ, ಸ್ವಲ್ಪ ಹೊತ್ತು ವೆಂಕಟನ ಸುತ್ತೂ ತಿರುಗಿದ ಮಾತು ಬಂಡೇರಹಳ್ಳಿಯ ಹೊಸ ಇನ್ಸ್‌ಪೆಕ್ಟರ್‌ನ ಕಡೆ ತಿರುಗಿತು. ಆಗಲೇ ಸಾರಾಯಿಖಾನೆಗಳು ಮಾಮೂಲು ಸ್ಥಿತಿಗೆ ಬಂದಿವೆ, ಲಾಟರಿಯಲ್ಲಿ ಅಂಗಡಿ ವಿಜಯೋತ್ಸಾಹದಿಂದ ತೆರೆಯಲಾಗಿದೆ ಎಂಬ ವಿಷಯ ತಿಳಿಯಿತು. ಬಹುಬೇಗ ನಾಯಕ್ ಮತ್ತು ಇನ್ಸ್‌ಪೆಕ್ಟರ್ ಆತ್ಮ ಸ್ನೇಹಿತರಾಗಿಬಿಟ್ಟಿದ್ದಾರಂತೆ. ದಿನಾಗಲೂ ರಾತ್ರಿ ಅವರ ಮನೆಯಲ್ಲೇ ಕುಡಿತದ ಪಾರ್ಟಿ ನಡೆಯುತ್ತದೆ, ವೈನ್‌ಷಾಪ್ ನಿಧಾನವಾಗಿ ಆರಂಭವಾಗುತ್ತಿದೆ ಎಂಬ ಸಂಗತಿಗಳೂ ತಿಳಿದವು. ವೆಂಕಟ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಅದು ನಾಯಕ್ ಮಾಡಿಸಿದ ಕೆಲಸವೆ ಎಂದು ಅಲ್ಲಿಯವರೆಲ್ಲ ಖಡಾಖಂಡಿತವಾಗಿ ಹೇಳಿದರು.

ಹಾಗೇ ಮಾತುಗಳಲ್ಲಿ ಸಮಯ ಸರಿಯತೊಡಗಿತು. ಇಬ್ಬರು ಯುವಕರು ಹೋಗಿ ಎಲ್ಲಿಂದಲೋ ಕಾಫಿ ಮಾಡಿ ತಂದರು. ತಾತಾ ತೇಜನಿಗೆ ‘ಊಟ ಮಾಡುತ್ತೀಯಾ’ ಎಂದು ಕೇಳಿದ. ಅದಕ್ಕೆ ಬೇಡವೆಂದನವ. ಕಲ್ಲಕ್ಕನನ್ನು ಹಿಡಿಯುವ ಭರದಲ್ಲಿ ಆಗಲೇ ಆ ಇನ್ಸ್‌ಪೆಕ್ಟರ್ ಇಬ್ಬರು ಯುವಕರನ್ನು ಅನುಮಾನದ ಮೇಲೆ ಹಿಡಿದುಕೊಂಡು ಹೋಗಿ ಪಕ್ಕೆ ಮುರಿಯುವಂತೆ ಹಿಂಸೆ ಕೊಟ್ಟಿದ್ದಾನೆಂದು ಅವರಿನ್ನೂ ಹಾಸಿಗೆಯಿಂದ ಎದ್ದಿಲ್ಲವೆಂದು ಹೇಳಿದ ತಾತ.

ಹಾಗೇ ಮಾತುಗಳಲ್ಲಿ ರಾತ್ರಿ ಕಳೆಯಿತು. ಮಧ್ಯಾಹ್ನವಾಗುತ್ತಿದ್ದಾಗ ವೆಂಕಟನ ಬಂಧು ಬಳಗದವರು ಒಂದು ವ್ಯಾನಿನಲ್ಲಿ ಶವವನ್ನು ಹಾಕಿಕೊಂಡು ತಂದರು. ಅವನ ಶವ ಬಂದಿದೆಯೆಂದು ತಿಳಿದ ಕೂಡಲೇ ಹಳ್ಳಿಯ ಬಹುಪಾಲು ಜನ ಅಲ್ಲಿಗೆ ಬಂದರು. ಹೆಂಗಸರ, ಗಂಡಸರ ರೋಧನ ಹೆಚ್ಚಾಯಿತು. ವೆಂಕಟನ ಮುಖವನ್ನು ನೋಡಿದ ತೇಜ ಅವನು ಬದುಕಿನ, ಯೌವ್ವನದ ಉತ್ಸಾಹ ಯಾವುದೂ ಬೇಡವೆಂಬಂತೆ ಮಲಗಿದ್ದ.

ಡೋಲಿನ ಸದ್ದಿನೊಡನೆ ಕುಣಿತದೊಡನೆ ವೆಂಕಟನ ಶವಯಾತ್ರೆ ಸ್ಮಶಾನಕ್ಕೆ ಸಾಗಿತು. ಅವನನ್ನು ಮಣ್ಣು ಮಾಡುವ ಕೆಲಸ ಮುಗಿದ ಮೇಲೆ ತಾತನಿಗೆ ಮತ್ತು ಯುವಕರಿಗೆ ಹೇಳಿ ಬಂಡೇರಹಳ್ಳಿಯ ದಾರಿ ಹಿಡಿದ ತೇಜಾ ಕಲ್ಯಾಣಿ ಇನ್ನೂ ಕಾಡಿನಲ್ಲೇ ಇದ್ದಿದ್ದರೆ ಇದಕ್ಕೆ ಸರಿಯಾದ ನ್ಯಾಯ ಒದಗಿಸುತ್ತಿದ್ದಳೇನೋ ಎಂದುಕೊಂಡ ತೇಜಾ.
* * *

ಮರುದಿನ ಹಾಡುಹಗಲಿನಲ್ಲಿ ಬಂದ ಇಬ್ಬರು ನಾಯಕನನ್ನು ಮುಗಿಸಿ ಹೊರಟು ಹೋಗಿದ್ದರು. ಗುಂಡಿನ ನಾದ ಬಹುದೂರದವರೆಗೆ ಹರಡಿದರೂ ಯಾರೂ ಏನಾಗುತ್ತಿದೆ ಎಂಬುವುದು ನೋಡಲು ಹೊರಬರಲಿಲ್ಲ. ಅವರಿಗೆಲ್ಲಾ ಏನಾಗುತ್ತಿದೆ ಎಂಬುವುದು ಚೆನ್ನಾಗಿ ಗೊತ್ತಿತ್ತು. ಬೇರೆ ಹಳ್ಳಿಗೆ ಹೋದ ಇನ್ಸ್‌ಪೆಕ್ಟರ್ ಜಗದೀಶ ಅರ್ಧಗಂಟೆಯನಂತರ ಅಲ್ಲಿ ತನ್ನ ಸಹಾಯಕರೊಡನೆ ಹೋದ, ನಾಯಕನ ಶವ ಶವವಾಗಿ ಕಾಣಲಿಲ್ಲ ಅವನಿಗೆ. ಅವನು ಕುಡಿದು ಗಾಢನಿದ್ದೆಯಲ್ಲಿರುವಂತೆ ಕಂಡಿತು. ಒಂದು ಸಲ ಮಾತ್ರ ಶವದ ಮೇಲೆ ಕಣ್ಣಾಡಿಸಿ ಪೋಲೀಸ್ ಸ್ಟೇಷನ್ನಿಗೆ ಬಂದ ಅವನು, ಆ ವಿಷಯವನ್ನು ತನ್ನ ಹಿರಿಯ ಅಧಿಕಾರಿಯರಿಗೆ ತಿಳಿಸಿದ. ಅದಕ್ಕಿಂತ ಮೊದಲೇ ಕ್ರಾಂತಿಕಾರಿಯರು ಮಾಡಿದ ಪಂಚಾಯತಿ ಪ್ರೆಸಿಡೆಂಟ್‌ನ ಕೊಲೆಯ ಬಗ್ಗೆ ತಿಳಿದ ಪತ್ರಕರ್ತರು ಅಲ್ಲಿಗೆ ಬಂದು ಫೋಟೋಗಳು ಹಿಡಿದು ತಮ್ಮ ವರದಿಯನ್ನು ತಯಾರಿಸಿದ್ದರು. ಹಳ್ಳಿಗರಿಂದ ಅದಕ್ಕೆ ಕಾರಣವೇನಿರಬಹುದು ಎಂದು ಕೇಳಿದ ಅವರಿಗೆ ಸಿದ್ದಾನಾಯಕನ ವಿರುದ್ಧ ಕೋರ್ಟಿನಲ್ಲಿ ಇದ್ದ ಕೇಸಿನ ವಿಷಯ, ಮುಖ್ಯ ಸಾಕ್ಷಿಯಾದ ವೆಂಕಟನ ಕೊಲೆಯ ವಿಷಯ, ಈಗ ಹೊಸದಾಗಿ ಬಂದಿರುವ ಇನ್ಸ್‌ಪೆಕ್ಟರ್‌ರ ಕ್ರೂರತೆಯ ವಿಷಯ ಎಲ್ಲವನ್ನೂ ಹೇಳಿದರು.

ರಾಮನಗರದಿಂದ ಕಲೆಕ್ಟರ್ ಮತ್ತು ಎಸ್.ಪಿ. ಸಾಹೇಬರು ತಮ್ಮ ತಮ್ಮ ಹಿಂಬಾಲಕರೊಡನೆ ಅಲ್ಲಿಗೆ ಬಂದು ಎಲ್ಲವನ್ನೂ ನೋಡಿದ ಮೇಲೆ ಶವವನ್ನೂ ಅಲ್ಲಿಂದ ಸಾಗಿಸಲಾಯಿತು. ಇನ್ಸ್ ಪೆಕ್ಟರಿಗೆ ರಾಮನಗರದಿಂದ ಹೆಚ್ಚಿನ ಪೋಲಿಸ್ ದಳವನ್ನು ಕಳುಹಿಸುವ ಆಶ್ವಾಸನೆ ನೀಡಿದರು ಎಸ್.ಪಿ. ಸಾಹೇಬರು. ಏನೇ ಆಗಲಿ ತಾನು ಕಲ್ಲಕ್ಕನ ದಳವನ್ನು ಮುಗಿಸುವನೆಂದು ಹೇಳಿದ ಇನ್ಸ್‌ಪೆಕ್ಟರ್.

ನಾಯಕನೆ ತನ್ನ ಶಿಫಾರಸಿನ ಮೇಲೆ ತೇಜಾನ ಸ್ಥಾನದಲ್ಲಿ ಜಗದೀಶನನ್ನು ವರ್ಗಾವಣೆ ಮಾಡಿಸಿದ್ದ. ಏನೇ ಆಗಲಿ ತೇಜಾನ ಮೇಲಿನ ತನ್ನ ಸೇಡನ್ನು ತೀರಿಸಿಕೊಳ್ಳುವುದು ಅವನ ಹಠವಾಗಿತ್ತು. ತನ್ನ ಹಿತೈಷಿಯ ಕೊಲೆಯಾದ ಮೇಲೆ ಸೇಡು ತೀರಿಸಿಕೊಳ್ಳುವ ಭಾರ ಇನ್ಸ್ ಪೆಕ್ಟರ ಜಗದೀಶನ ಮೇಲೆ ವರ್ಗವಾಗಿತ್ತು. ಅವನಿಗೆ ಕ್ರಾಂತಿ, ಕ್ರಾಂತಿಕಾರಿಯರ ಮನೋಭಾವ ಅರಿಯುವ ಇಷ್ಟವಿಲ್ಲ. ಅವರನ್ನು ಅಟ್ಟಿಸಿಕೊಂಡು ಹೋಗಿ ಮುಗಿಸುವುದು ಬಹು ಸುಲಭವೆಂದು ಭಾವಿಸಿದ್ದನವ.

ರಾಮನಗರದಿ೦ದ ಬಂದ ಎಲ್ಲಾ ಹಿರಿ ಅಧಿಕಾರಿಯರೂ ಹೋಗುತ್ತಿದ್ದಂತೆ ಅವನು ಮಾಡಿದ ಮೊದಲ ಕೆಲಸವೆಂದರೆ, ಒಬ್ಬ ಬಡಕಲು ಪೇದೆಯನ್ನು ಯಾವುದಾದರೂ ಉಪಾಯ ಮಾಡಿ ದೇವನಹಳ್ಳಿಯಲ್ಲಿರುವ ತೇಜಾನ ಮನೆಯ ಮೇಲೆ ಕಣ್ಣಿಡಲು ಕಳುಹಿಸಿದ್ದು.

ಅಡ್ಡ ಪಂಚೆ, ಜುಬ್ಬಾ ತೊಟ್ಟು ಕಾಲಿಗೆ ಹವಾಯಿ ಚಪ್ಪಲಿ ಮೆಟ್ಟಿದ್ದ ಆ ಆಸಾಮಿ ದೇವನಹಳ್ಳಿಯ ಬಸ್‌ಸ್ಟಾಂಡ್‌ನಲ್ಲಿಳಿದು, ಅಲ್ಲಿ ಬಡಕಲು ಪಟವಾರಿಯವರ ಮನೆ ಯಾವುದೆಂದು ತಿಳಿದುಕೊಂಡ ಯಾರಿಗೂ ಗೊತ್ತಾಗದ ಹಾಗೆ ಆ ಮನೆಯ ಮೇಲೆ ಕಣ್ಣಿಡುವುದು ಹೇಗೆ ಎಂಬುವದೇ ಒಂದು ಸಮಸ್ಯೆಯಾಯಿತು ಪತ್ತೇದಾರನಿಗೆ. ಅಲ್ಲಿದ್ದ ಹೋಟಲಿನಲ್ಲಿ ಕಾಫಿ ಕುಡಿಯುತ್ತಾ ಅದರ ಬಗ್ಗೆ ಯೋತಚಿಸತೊಡಗಿದ. ಹೋಟಲನ್ನು ಎರಡು ಹೆಜ್ಜೆ ದಾಟಿ ನೋಡಿದರೆ ಪಟವಾರಿಯವರ ಬಂಗಲೆ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ ಕೆಲಸ ಮಾಡುತ್ತಾ ಇನ್ಸ್‌ಪೆಕ್ಟರ್‌ ಸಾಹೇಬರು ತನಗೊಪ್ಪಿಸಿದ ಕೆಲಸವನ್ನೂ ಕೂಡ ಮಾಡಬಹುದೆಂದುಕೊಂಡ.

ಇನ್ಸ್‌ಪೆಕ್ಟರ್‌ ಜಗದೀಶನಿಗಾಗಲಿ ಆ ಬಡಪಾಯಿ ಪತ್ತೇದಾರಿ ಕೆಲಸ ಮಾಡಲು ಬಂದ ಕಾನ್ಸ್ ಟೇಬಲ್ಲನಿಗಾಗಲಿ ಅಲ್ಲಿನ ಪ್ರತಿವ್ಯಕ್ತಿ ಪಟವಾರಿಯವರ ಪತ್ತೇದಾರರೆಂಬುವುದು ಗೊತ್ತಿರಲಿಲ್ಲ. ಸ್ವಲ್ಪ ಹೊತ್ತು ಅತ್ತ ಇತ್ತ ಓಡಾಡಿದ ಆ ಬಡಕಲು ಆಸಾಮಿ ಹೋಟೆಲಿಗೆ ಬಂದು ತಾನು ದೂರದ ಊರಿನವನೆಂದು ಹಣವಿಲ್ಲವೆಂದು ಸಪ್ಲೆಯರ್ ಕೆಲಸ ಕೊಡಬೇಕೆಂದು ಕೇಳಿದ. ಅಲ್ಲಿಂದ ಆರಂಭವಾಯಿತು ಯಜಮಾನನ ಪ್ರಶ್ನೆ, ಯಾವ ಊರಿನವನು? ಇಲ್ಲೇಕೆ ಬಂದೆ? ಇತ್ಯಾದಿ…

ಅವನನ್ನು ದೇವನಹಳ್ಳಿಯಲ್ಲಿ ಅಡಿ ಇಟ್ಟಾಗಿನಿಂದ ಗಮನಿಸುತ್ತಿದ್ದ ಐವರು ಅವನನ್ನು ಸುತ್ತುವರೆದರು. ಇಂತಹ ಪರಿಸ್ಥಿತಿ ಎದುರಾಗಬಹುದೆಂದು ಅವನು ಊಹಿಸಿರಲಿಲ್ಲ. ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಬರಲಾರಂಭಿಸಿದಾಗ ಅವನದಕ್ಕೆ ಸರಿಯಾದ ಉತ್ತರ ಕೊಡದಾದ. ಅವನು ಹೇಳುತ್ತಿರುವುದೆಲ್ಲಾ ಸುಳ್ಳು ಎಂದರಿತ ಅವರು ಅವನ ರಟ್ಟೆ ಹಿಡಿದು ದೂರ ಕೊಂಡೊಯ್ದು ಪ್ರಶ್ನಿಸಲಾರಂಭಿಸಿದರು. ನಿಜ ಹೇಳದಿದ್ದರೆ ಕೊಂದು ಇಲ್ಲೇ ಹೂಳಿಟ್ಟುಬಿಡುತ್ತೇವೆ ಎಂಬಂತಹ ಮಾತುಗಳಿಂದ ಅವರು ಹೆದರಿಸಿದಾಗ ನಿಜವನ್ನು ಹೇಳಿ ಪ್ರಾಣ ಸಹಿತ ಪಾರಾಗುವುದೇ ಉತ್ತಮವೆನಿಸಿತವನಿಗೆ. ಇನ್ಸ್‌ಪೆಕ್ಟರ್ ಸಾಹೇಬರು ಹೇಳಿದ ಮಾತನ್ನು ಚಾಚೂತಪ್ಪದೇ ಹೇಳಿಬಿಟ್ಟ. ಅವನಿಗೆ ಒಂದು ಕಾಫಿಯನ್ನು ಕುಡಿಸಿ ಕಳುಹಿಸಿಬಿಟ್ಟರು ಹಳ್ಳಿಗರು. ಅವರಿಗೆಲ್ಲಾ ಕಲ್ಲಕ್ಕ ಅಲ್ಲಿದ್ದಾಳೆಂಬ ವಿಷಯ ತಿಳಿದಿತ್ತು. ಬಾಯಿಯಿಂದ ಬಾಯಿಗೆ ಹರಡಿದ ಆ ವಿಷಯ ನೋಡುನೋಡುತ್ತಿದ್ದಂತೆ ಅಕ್ಕಪಕ್ಕದ ಎಲ್ಲಾ ಊರುಗಳ ಜನರಿಗೆ ಗೊತ್ತಾಗಿಹೋಯಿತು. ತನ್ನ ಪತ್ತೇದಾರ ಆ ಸುದ್ದಿ ತರುವ ಬಹಳ ಮೊದಲೇ ಬಂಡೇರಹಳ್ಳಿಯವರಿಗೆ ಆ ವಿಷಯ ತಿಳಿದುಹೋಗಿತ್ತೆಂಬುವುದು ಇನ್ಸ್‌ಪೆಕ್ಟರ್ ಜಗದೀಶನಿಗೆ ಊಹಿಸಲು ಕಷ್ಟವಾದ ಸಂಗತಿಯಾಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರತಿಕ್ರಿಯೆ
Next post ಕಡಲು ಬೆಟ್ಟಕ್ಕೆ ಹೇಳಿತು

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…