ನಿಷೇಧಿತ ಜಗತ್ತಿನೊಳಗೊಂದು ಇಣುಕುನೋಟ

ನಿಷೇಧಿತ ಜಗತ್ತಿನೊಳಗೊಂದು ಇಣುಕುನೋಟ

ಇದಾಗಲೇ ಹಳೆಯ ಟ್ರೆಂಡ್. ಸಮಾಜದ ವಿಧಿ ನಿಷೇಧಗಳ ಮಧ್ಯೆಯೇ ಬಿಚ್ಚಿಕೊಳ್ಳುತ್ತಿರುವ ಗುಂಪು, ವಿಭಿನ್ನವಾದ ಲೈಂಗಿಕ ವಾಂಛೆ ಹಾಗು ದೈಹಿಕ ಬದಲಾವಣೆಗಳ ಕಾರಣದಿಂದ ಬದಲಾಗುವ ಜೀವನಶೈಲಿಯು ಸಮಾಜದ ಮುಖ್ಯವಾಹಿನಿಯ ಜೀವನಶೈಲಿಯನ್ನು ನಿರಾಕರಿಸುತ್ತದೆ. ಜಗತ್ತಿನಾದ್ಯಂತ ಸಲಿಂಗಕಾಮಿಗಳು ಮುಖ್ಯವಾಹಿನಿಯ ಬದುಕುವಿಕೆಯನ್ನು ನಿರಾಕರಿಸಿ ಬದುಕುತ್ತಿದ್ದಾರೆ. ಏಕೆಂದರೆ ಅವರಿಗೆ ಬಹುಸಂಖ್ಯಾತರು ನಿರ್‍ಣಯಿಸುವ ಜೀವನ ಎನ್ನುವುದರ ಡೆಫಿನಿಷನ್ ವಿಭಿನ್ನವಾಗಿರುತ್ತದೆ.

ಸಾಹಿತ್ಯದಲ್ಲಿ ಈ ಬದುಕುವಿಕೆಯು ಅಭಿವ್ಯಕ್ತಗೊಳ್ಳುವಾಗ ಸಹಜವಾಗಿಯೇ ಅದು ಬೇರೆ ಮಾನದಂಡಗಳನ್ನು ಬಯಸುತ್ತದೆ. ಸಲಿಂಗಕಾಮದ ಸಾಹಿತ್ಯ ಯುರೋಪಿನಲ್ಲಿ ಹುಟ್ಟು ಹಾಕಿದ ತಾತ್ವಿಕತೆಯ ಪ್ರಶ್ನೆಯು ಸಲಿಂಗಕಾಮಿಗಳ ಬಗ್ಗೆ, ಸಲಿಂಗಕಾಮಿಗಳು ಬರೆದ ಸಾಹಿತ್ಯದ ಬಗೆಗೆ ಅನೇಕ ಬಗೆಯ ಜಿಜ್ಞಾಸೆಗಳು ಉಂಟಾಯಿತು. ಸಮಾಜದಲ್ಲಿ ಅನ್ಯರಾಗಿ ಬದುಕುತ್ತಿರುವ ಜೀವಿಗಳು ಸದಾ ಮುಖ್ಯವಾಹಿನಿಯಿಂದ ದೂರ ಉಳಿಯುತ್ತಾರೆ. ಅವರನ್ನು ಸಮಾಜವೂ ಆದರಿಸುವುದಿಲ್ಲ; ಇತ್ತ ಕಡೆಯಿಂದ ಇವರಿಗೂ ತಮ್ಮ ಜೀವನಶೈಲಿಯ ಬಗ್ಗೆಗೆ ನಿರ್‍ಭಿಡೆಯಿಂದ ಇರಲು ಅವ್ಯಕ್ತ ಭಯವಿರುತ್ತದೆ. ಸ್ತ್ರೀವಾದದ ಅರಿವುಗಳನ್ನೇ ಅರಗಿಸಿಕೊಳ್ಳಲು ಹಿಂದೇಟು ಹಾಕುವ ಮನಸ್ಥಿತಿಯುಳ್ಳ ಸಾಂಪ್ರದಾಯಿಕರಿಗೆ ಎಲ್ ಜಿ ಬಿ ಟಿ(ಲೆಸ್ಬಿಯನ್, ಗೇ, ಬೈಸೆಕ್ಷುಯಲ್ ಮತ್ತು ಟ್ರಾನ್ಸ್ ಸೆಕ್ಷುಯಲ್) ಪರಿಕಲ್ಪನೆಗಳನ್ನು ಅರಗಿಸಿಕೊಳ್ಳಲು ಬಹಳ ಕಷ್ಟವೇ ಹೌದು. ಆದುದರಿಂದ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳುವ ಆಂದೋಲನ ಆರಂಭವಾಯಿತು. ಆನಂತರ ತಮ್ಮ ಬದುಕುಗಳನ್ನೇ ಸಾಹಿತ್ಯ ಮತ್ತು ಕಲೆಗಳಲ್ಲಿ ಅಭಿವ್ಯಕ್ತಿಸಲು ಪಾಶ್ಚಿಮಾತ್ಯ ಸಲಿಂಗಕಾಮಿಗಳು ಶುರುವಿಟ್ಟುಕೊಂಡರು. ಆಸ್ಕರ್ ವೈಲ್ಡ್, ಆಡೆನ್‌, ಇ.ಎಂ.ಫಾಸ್ಟರ್, ವಾಲ್ಟ್ ವಿಟ್ ಮನ್, ಎಲಿಸ್ ಅವರಿ, ಆಡ್ರಿನ್ ರೀಚ್ ಮುಂತಾದ ಖ್ಯಾತನಾಮರು ತಾವು ಗೇ ಎಂದು ಒಪ್ಪಿಕೊಂಡರು; ತಮ್ಮ ಸಂವೇದನೆಗಳನ್ನೇ ಸಾಹಿತ್ಯವಾಗಿಸುವ ಕಡೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರು.

ತಾತ್ವಿಕವಾಗಿ ಸಲಿಂಗಕಾಮಿಗಳು ಒಂದು ಈಸ್ತೆಟಿಕ್ಸ್ ಅನ್ನು ರೂಢಿಸಿಕೊಳ್ಳಲೆತ್ನಿಸಿದರು ಎನ್ನಬಹುದು. ಸಲಿಂಗಕಾಮಿಗಳ ಪ್ರಕಾರ ಅವರದು ಸಂತಾನಾಪೇಕ್ಷೆಯಿಲ್ಲದ ಪ್ರೀತಿ, ಹೀಗಾಗಿ ಮಾಮೂಲಿ ಗಂಡು ಹೆಣ್ಣಿನ ಪ್ರೀತಿಗಿಂತ ವಿಭಿನ್ನವಾದುದು ಎಂಬುದು ಅವರ ತಿಳಿವಳಿಕೆ. ಈ ಗುಂಪಿನ ಪ್ರಕಾರ ಮುಖ್ಯವಾಹಿನಿಯ ಸಾಹಿತ್ಯವು ಪರಸ್ಪರ ವಿರೋಧ ಲಿಂಗಿಗಳ ಆಕರ್ಷಣೆಯಲ್ಲಿ ತುಂಬಿ ಹೋಗಿರುವ ಸಾಹಿತ್ಯವಾಗಿದ್ದು ಅದರಲ್ಲಿ ಬೇರೆ ಸಂವೇದನೆಗಳಿಗೆ ಜಾಗವೇ ಇಲ್ಲ. ಆದುದರಿಂದ ಪ್ರಚಲಿತವಿರುವ ಜಾರ್‍ಗನ್‌ಗಳನ್ನು ಬದಲಾಯಿಸಿಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಕಂಡುಕೊಂಡರು. ಸಾಮಾನ್ಯವಾಗಿ ಕ್ಲಾಸಿಕಲ್ ಕಾವ್ಯಗಳಲ್ಲಿ ಬರುವ ಹೆಣ್ಣಿನ ವರ್ಣನೆ, ಹೆಣ್ಣು ಗಂಡಿನ ಆಕರ್ಷಣೆಗಳು ಈ ತಾತ್ವಿಕತೆಯ ಪ್ರಕಾರ ಯಜಮಾನಿಕೆಯನ್ನು ಸ್ಥಾಪಿಸುತ್ತವೆ. ಒಂದು ಚೌಕಟ್ಟಿನೊಳಗೆ ಲಿಂಗೀಯತೆಯನ್ನು ಕಟ್ಟಿಹಾಕುತ್ತಾ ಸೌಂದರ್‍ಯ ಮೀಮಾಂಸೆಯನ್ನು ಸೀಮಿತಗೊಳಿಸುತ್ತದೆ (ಇದನ್ನು ಅವರು ‘ಸ್ಟೇಟ್ ಐಡಿಯಾಲಾಜಿ’ ಎಂದೇ ಗುರುತಿಸಿಕೊಳ್ಳುತ್ತಾರೆ). ಈ ಬಗೆಯ ನೇರಾನೇರತೆಯನ್ನು ವಿರೋಧಿಸಿ ಬಹುಲಿಂಗೀಯತೆಗೆ ಅವಕಾಶ ಗಳಿಸುವುದಲ್ಲದೆ, ಅದನ್ನು ಸಾಹಿತ್ಯದಲ್ಲಿ ವ್ಯಕ್ತ ಮಾಡಬೇಕೆನ್ನುವ ತಾತ್ವಿಕ ಒತ್ತಡ ಈ ಸಾಹಿತ್ಯದ ಹಿಂದೆ ಇದೆ. ಇದರೊಂದಿಗೆ ಸಲಿಂಗಕಾಮಿಗಳ ಸಾಹಿತ್ಯದಲ್ಲಿ ತಮ್ಮ ಸಮುದಾಯ ಅನುಭವಿಸುತ್ತಿರುವ ಅಪಾರ ನೋವಿನ ಸಂಗತಿಗಳನ್ನು ದಾಖಲಿಸಬೇಕೆನ್ನುವ ತುಡಿತವೂ ಇದೆ. ಈ ನಿಲುವು ಅವರನ್ನು ಶೋಷಿತ ಸಮುದಾಯಗಳ ಗುಂಪಿಗೆ ಸೇರುವಂತೆ ಮಾಡುತ್ತದೆ. ವಾಸ್ತವವಾಗಿ ಇಂದು ಸ್ತ್ರೀವಾದದ ಉತ್ತರೋತ್ತರ ಬೆಳವಣಿಗೆಯಲ್ಲಿ ಈ ಸಾಹಿತ್ಯವನ್ನು ಇನ್ನೂ ಮಾನವೀಯವಾಗಿ ನೋಡಬೇಕೆನ್ನುವ ನಿರೀಕ್ಷೆ ಹೆಚ್ಚಾಗಿದೆ. ಹೆಚ್ಚ ಕಡಿಮೆ ಜನಸಂಖ್ಯೆಯ ಅರ್‍ಧ ಭಾಗದಷ್ಟಿರುವ ಸ್ತ್ರೀ ಸಂಕುಲಕ್ಕೆ ಸಿಗಬೇಕಾದ ನ್ಯಾಯದಷ್ಟೇ ಲೈಂಗಿಕ ಅಲ್ಪಸಂಖ್ಯಾತರು ಹಾಗು ಸಲಿಂಗಕಾಮಿಗಳಿಗೂ ಸಿಗಬೇಕೆನ್ನುವುದು ಅಂಚಿನ ಸಮುದಾಯಗಳ ಅಧ್ಯಯನಗಳ ಅಪೇಕ್ಷೆಯಾಗಿದೆ.

ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ ಸಲಿಂಗಕಾಮ ನಿಷೇಧಿತ ಸಂಗತಿಯೇನು ಆಗಿರಲಿಲ್ಲ. ಬಹಳ ಹಿಂದಿನ ಕಾಲದಿಂದಲೇ ಇದ್ದ ರೂಢಿಯನ್ನು ಸಾಹಿತ್ಯ ನಿರ್‍ಭಿಡೆಯಿಂದ ಮುಟ್ಟಿಕೊಂಡಿದ್ದು ವಸಾಹತುಶಾಹಿ ಮುಖಾಮುಖಿಯಾದ ನಂತರ. ಬ್ರಿಟಿಷರು ತಂದ ವಿಧಿಯಿಂದ ಸಲಿಂಗಕಾಮವು ಭಾರತೀಯತೆಗೆ ಓರಿಯೆಂಟಲ್ ಸ್ಪರ್‍ಶ ಕೊಟ್ಟು ದ್ವಿಲಿಂಗೀಯತೆಯನ್ನು ತನ್ನ ಯಜಮಾನಿಕೆಯಿಂದ ಹೇರಿತು. ಅಲ್ಲಿಂದಾಚೆಗೆ ಈ ಸಂಗತಿಯು ಕಾನೂನು ಬಾಹಿರ ಎಂದೆನಿಸಿತು. ಕಾಮ ಎನ್ನುವುದೇ ಸಮಾಜದಲ್ಲಿ ನಿಷೇಧಿತ ಪ್ರವೃತ್ತಿ. ಈ ಮೂಲಭೂತ ಪ್ರವೃತ್ತಿಯನ್ನು ಸಂಸ್ಕೃತಿಯ ಮೇಲ್ಪದರದ ಸುಂದರ ಚಹರೆಯಲ್ಲಿ ಎಂದಿಗೂ ಕಾಣಲಿಚ್ಛಿಸದ ಸಾಮಾಜಿಕರು ಅನೈಸರ್‍ಗಿಕವೆನ್ನಿಸುವ ಸಲಿಂಗಕಾಮವನ್ನು ಸ್ವೀಕರಿಸುವುದಕ್ಕೆ ಹಿಂಜರಿಯುತ್ತಾರೆ ಎನ್ನುವುದು ಖಂಡಿತ. ಪರಿಸ್ಥಿತಿ ಹೀಗಿದ್ದರೂ ಭಾರತೀಯ ಲೇಖಕರನೇಕರು ಸಲಿಂಗಕಾಮೀ ಸಾಹಿತ್ಯವನ್ನು ಯಾವ ಹಿಂಜರಿಕೆಯೂ ಇಲ್ಲದೆ ಬರೆದಿದ್ದಾರೆ. ರವೀಂದ್ರನಾಥ ಠಾಗೂರ್, ರಾಜಾರಾವ್, ಇಸ್ಮತ್ ಚುಗ್ತಾಯಿ ಇನ್ನೂ ಮುಂತಾದ ಲೇಖಕರು ಸ್ವಾತಂತ್ರ್ಯಪೂರ್ವಕಾಲದಲ್ಲಿಯೇ ಸಲಿಂಗಕಾಮದ ಬಗೆಗೆ ಸಾಹಿತ್ಯ ಸೃಷ್ಟಿಸಿದ್ದಾರೆ. ಸಲಿಂಗಕಾಮ ಎನ್ನುವ ರೂಢಿಯ ಕಟ್ಟಳೆಗಳನ್ನು ಈ ಲೇಖಕರು ಮೀರಿದ್ದಾರೆ. ಇಂದು ಅಶೋಕ್ ರೋ ಕವಿ, ವಿಕ್ರಮ್ ಸೇಠ ಮುಂತಾದವರು ಧೈರ್ಯವಾಗಿ ತಮ್ಮನ್ನು ಸಲಿಂಗಕಾಮೀ ಲೇಖಕರೆಂದು ಕರೆದುಕೊಂಡು, ಆ ಬಗೆಯ ಸಾಹಿತ್ಯವನ್ನು ಸೃಷ್ಟಿಸುತ್ತಿದ್ದಾರೆ.

ಭಾರತೀಯ ವಲಸಿಗ ಲೇಖಕರ ಸಾಹಿತ್ಯದಲ್ಲಿ ಸಲಿಂಗಕಾಮವು ಒಂದು ಉಟೋಪಿಯಾ ಕಲ್ಪನೆಯನ್ನು ಪೋಷಿಸುವಂತದ್ದು. ಏಕೆಂದರೆ ದೇಶ ಬಿಟ್ಟು ತಮ್ಮದಲ್ಲದ ದೇಶದಲ್ಲಿರುವವರಿಗೆ ಇರುವ ಪ್ರಾದೇಶಿಕ ಅಭದ್ರತೆಯು ತಾವು ವಾಸಿಸುತ್ತಿರುವ ದೇಶದ ಕಟ್ಟುಪಾಡುಗಳನ್ನು ಮೀರಿ ತಮ್ಮದೇ ಆದ ಉಪನಗರಗಳನ್ನು ಸೃಷ್ಟಿಸಿಕೊಳ್ಳುವ ವಿಚಿತ್ರವಾದ ತುಡಿತ ಇದರ ಹಿಂದೆ ಇರುತ್ತದೆ. ಆದುದರಿಂದ ಹೊಸ ಡಯಾಸ್ಪೊರಾ ಸಮುದಾಯದ ಭಾರತೀಯ ಲೇಖಕರಲ್ಲಿ ಸಲಿಂಗಕಾಮವು ಚಿತ್ರಿಸಲ್ಪಡುತ್ತಲೇ ಇರುತ್ತದೆ.

ಕನ್ನಡದಲ್ಲಿ ನವ್ಯ ಸಾಹಿತ್ಯ ಬಂದಾಗ ಅದರ ಮೇಲಿನ ಟೀಕೆ ಎಂದರೆ ಅದು ಕಾಮವನ್ನು ಕೇಂದ್ರವಾಗಿಸಿಕೊಂಡಿದೆ ಎಂದು. ಆದರೆ ಒಂದು ಅಂಶವನ್ನು ಇಲ್ಲಿ ವಿವೇಚಿಸಬೇಕಾಗಿದೆ. ಎಲ್ಲಾ ಪ್ರಮುಖ ಲೇಖಕರು ಕಾಮವನ್ನು ಸತ್ವದಂತೆ, ಬದುಕಿನ ಅಸ್ತಿತ್ವವಾದೀ ನೆಲೆಯತ್ತ ಕೊಂಡೊಯ್ಯುವ ಸಾಧನದಂತೆ ಚಿತ್ರಿಸಿದರೂ ಅದರಲ್ಲಿ ಒಂದು ಏಕತಾನತೆ ಇದೆ. ಸಾಮಾನ್ಯವಾಗಿ ಅಲ್ಲಿ ಕಾಮವನ್ನು ನಿರ್ದೇಶಿಸುವುದು ಗಂಡು, ಅವನ ಪ್ರಕಾರ ವಿಶ್ಲೇಷಣೆಗೆ ಒಳಪಡುವ ಕಾಮವೆಂಬ ಪ್ರವೃತ್ತಿಯನ್ನು ಸ್ತ್ರೀವಾದಿಗಳು ಏಕಮುಖವೆಂದು ಗುರುತಿಸಿದರು. ಇದರಲ್ಲಿ ಹೆಣ್ಣಿನ ದೃಷ್ಟಿಕೋನವೇ ಇಲ್ಲ ಎಂದು ಅಭಿಪ್ರಾಯಪಟ್ಟರು. ಅದನ್ನೇ ಮುಂದುವರೆಸಿ ಹೇಳುವುದಾದರೆ ಸಲಿಂಗಕಾಮಿಗಳಿಗೂ ಲೈಂಗಿಕ ಅಲ್ಪಸಂಖ್ಯಾತರಿಗೂ ಲೈಂಗಿಕತೆಯನ್ನೇ ಪ್ರಧಾನವಾಗಿಟ್ಟುಕೊಂಡ ನವ್ಯದ ಕಾಲದಲ್ಲಿಯೂ ಅಭಿವ್ಯಕ್ತಿಗೆ ಜಾಗ ಇರಲಿಲ್ಲವೆನ್ನಬಹುದು. ಕೆಲವೇ ಕೆಲವು ಸುಮ್ಮನೇ ಹಾದು ಹೋಗುವ ಸೂಚನೆಗಳು ನವ್ಯ ಸಾಹಿತ್ಯದಲ್ಲಿ ಸಿಗುತ್ತವೆ, ಇಲ್ಲವೆಂದಲ್ಲ(ಕಾಮರೂಪಿಯವರ ‘ಕುದುರೆ ಮೊಟ್ಟೆ’ ಕಾದಂಬರಿಯಲ್ಲಿ ಬರುವ ಶಂಕರ ಹೀಗೆ ಸಲಿಂಗಕಾಮಕ್ಕೆ ಬಳಸಿಕೊಳ್ಳುವ ಧೂರ್‍ತನಾಗಿದ್ದಾನೆ. ನವ್ಯ ಕಾಲದಲ್ಲಿಯೇ ಬರೆದ ಎಂ.ಎಸ್.ಕೆ ಪ್ರಭು ಅವರಲ್ಲೂ ಹೀಗೆ ಹಾದು ಹೋಗುವ ಪಾತ್ರವಿದೆ). ಆದರೆ ಅವು ಚರ್‍ಚೆಯ ಭಾಗವಾಗಿ ಬೆಳೆಯಲಿಲ್ಲ ಎನ್ನುವುದನ್ನು ಗಮನಿಸಬೇಕು.

ನವ್ಯೋತ್ತರ ಕಾಲದಲ್ಲಿ ಲೈಂಗಿಕತೆಯ ಬಗೆಗಿನ ಮುಕ್ತ ಬರವಣಿಗೆಗೆ ಯಾವುದೇ ಮಾನ್ಯತೆ ಸಿಗಲಿಲ್ಲವೆಂದೇ ಹೇಳಬಹುದು. ಬಂಡಾಯದ ಸಂದರ್‍ಭದಲ್ಲಿ ಕಾಮ ಸಂಬಂಧವು ಯಜಮಾನ ಆಳು ಸಂಬಂಧದ ಕೀಳು ಸಂಬಂಧವನ್ನು ತೋರಿಸುವಂತೆ ಬಂದಿತು. ಸ್ತ್ರೀವಾದದ ಸಂದರ್ಭದಲ್ಲಿ ಹೆಣ್ಣಿನ ಶೋಷಣೆಯು ದೇಹವನ್ನು ಕೇಂದ್ರೀಕರಿಸಿದಂತೆ ಪರಿಭಾವಿಸಿದ್ದೇ ಹೆಚ್ಚು. ಲೈಂಗಿಕ ಅಲ್ಪಸಂಖ್ಯಾತ, ಲಿಂಗಬದಲಾವಣೆ ಹೊಂದಿದ, ಸಲಿಂಗಕಾಮಿಗಳ ಲೈಂಗಿಕತೆಯನ್ನು ಕುರಿತು ಕನ್ನಡದಲ್ಲಿ ಈಚಿನ ಎರಡು ವರ್‍ಷಗಳಲ್ಲಿ ಕೆಲವು ಗಮನಾರ್‍ಹ ಪುಸ್ತಕಗಳು ಬಂದಿವೆ. ಲಿಂಗ ಬದಲಾಯಿಸಿದ ಕಥನವನ್ನು ಕಾಣಿಸಿದ ‘ನಾನು ಅವನಲ್ಲ ಅವಳು’(ಅನು:ತಮಿಳ್ ಸೆಲ್ವಿ) ಹಾಗು ರೇವತಿಯವರ ಆತ್ಮಕಥನ-‘ಬದುಕು-ಬಯಲು’ -ಇವು ಲಿಂಗಾಂತರದ ಸಮಸ್ಯೆಗಳನ್ನು ಕುರಿತು ಬಂದ ಆತ್ಮ ಕಥನಗಳು. ಈ ಲೇಖಕರು ಹವ್ಯಾಸಿ ಬರಹಗಾರರು. ಕಥನ ಅಥವಾ ಕಾವ್ಯದ ಉದ್ಯೋಗದಲ್ಲಿ ತೊಡಗಿಕೊಂಡ ಬರಹಗಾರರಲ್ಲಿ ಈ ದಿಸೆಯಲ್ಲಿ ಪ್ರಯತ್ನಗಳನ್ನು ಮಾಡಿದವರು ಕಡಿಮೆ ಅಥವಾ ಇಲ್ಲವೇ ಇಲ್ಲ ಎನ್ನುವಂತೆ. ಚಿದಾನಂದ ಸಾಲಿಯವರ ‘ಒಳಗಿನೊಳಗಿನವನು’ ಕಥೆಯನ್ನು ಬಿಟ್ಟರೆ ಕಳೆದ ವರ್ಷ ಬಂದ ವಸುಧೇಂದ್ರರ ‘ಮೋಹನಸ್ವಾಮಿ’ ಕೃತಿ ಈ ನಿಟ್ಟಿನಲ್ಲಿ ಒಂದು ಹೊಸ ಪ್ರಯತ್ನವಾಗಿದೆ. ‘ಮೋಹನಸ್ವಾಮಿ’ ಕೃತಿಯು ಸಲಿಂಗಕಾಮದ ಎಲ್ಲ ಹಿಂಜರಿಕೆಗಳನ್ನು ಬದಿಗೊತ್ತಿ ನಿರ್ಭಿಡೆಯಿಂದ ಅವರ ಸುಖ ದುಃಖಗಳನ್ನು ಚಿತ್ರಿಸಿದೆ. ಈ ಸಂಕಲನದ ಮೊದಲ ಐದು ಕಥೆಗಳು ಮೋಹನಸ್ವಾಮಿಯೆಂಬ ಸಲಿಂಗಕಾಮಿಯನ್ನು ನಾಯಕನನ್ನಾಗಿಸಿಕೊಂಡು ಬರೆದವು. ಈ ಕಥೆಗಳು ಸಲಿಂಗಕಾಮವನ್ನು ಸಾಮಾಜಿಕ ಮತ್ತು ಮಾನಸಿಕ ಆಯಾಮಗಳಲ್ಲಿ ನೋಡುತ್ತವೆ. ಸಮಾಜದಲ್ಲಿ ಅನೈಸರ್‍ಗಿಕವೆನ್ನಿಸುವ ಲೈಂಗಿಕ ಆಸೆಯಿಂದ ಅನುಭವಿಸಬೇಕಾದ ಅಪಮಾನ, ಕಾನೂನಿನ ಅಂಜಿಕೆಯಿಂದ ಹಿಡಿದು ಗಂಡು ಗಂಡಿನ ನಡುವೆ ಇರಬಹುದಾದ ಪರಮಾಪ್ತ ಸಂಬಂಧವನ್ನು (ದೈಹಿಕ ಮತ್ತು ಮಾನಸಿಕ) ಒಳಗೊಂಡಂತೆ ಸಂಬಂಧಗಳ ಮರುವಿನ್ಯಾಸ ಇಲ್ಲಿ ವ್ಯಕ್ತವಾಗಿವೆ. ಈ ರೀತಿಯ ಕತೆಗಳು ನಮ್ಮ ವಿಮರ್‍ಶೆಯ ಜಾರ್‍ಗನ್ನುಗಳನ್ನು ಬದಲಾಯಿಸಿಕೊಳ್ಳುವಂತೆ ಒತ್ತಾಯಿಸುತ್ತವೆ.

ಕರಾಳಲೋಕದಲ್ಲಿ ಸಂಚರಿಸುವ ಮನುಷ್ಯರಂತೆ ಸಮಾಜದ ಕಣ್ಣಿಗೆ ತೋರುವ ಎಲ್ ಜಿ ಬಿ ಟಿ ಸದಸ್ಯರು ತಮ್ಮ ಅಸ್ಮಿತೆಗಳನ್ನು ಕಲೆಯಲ್ಲಿ ಅಭಿವ್ಯಕ್ತಿಸಲು ತವಕಿಸುತ್ತಿರುವುದು ಮುಖ್ಯವಾಹಿನಿಯೊಂದಿಗೆ ಅವರ ಸವಾಲು ಅಷ್ಟೇ ಅಲ್ಲ, ತಮ್ಮ ಪಾಲುದಾರಿಕೆಯ ಪ್ರಶ್ನೆಯನ್ನು ಕೂಡ ತೋರಿಸುತ್ತಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಹಿ ಎನ್ನುವಂತೆ ಆ ಮರವ ಬದಲಿಸಿದೊಡೇನು ಲಾಭವೋ?
Next post ಕಡಲಿನಾಳದ ನದಿ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…