ಕಥನ ಹಾಗೂ ಪುರಾಣ: ಒಂದು ವಸ್ತುವಿನ ಎರಡು ಮುಖಗಳು

ಕಥನ ಹಾಗೂ ಪುರಾಣ: ಒಂದು ವಸ್ತುವಿನ ಎರಡು ಮುಖಗಳು

ಬ್ರಿಟಿಷ್ ವಿದ್ವಾಂಸ ಫ್ರಾಂಕ್ ಕರ್ಮೋಡ್ ರಾಚನಿಕ ವಿಮರ್ಶಕನಾಗಲಿ ಆಧುನಿಕೋತ್ತರ ವಿಮರ್ಶಕನಾಗಲಿ ಅಲ್ಲ, ಆದರೂ ವಿಮರ್ಶಾಕ್ಷೇತ್ರದಲ್ಲಿ ಆತನಿಗೆ ತನ್ನದೇ ಆದ ಸ್ಥಾನವಿದೆ; ವಾಸ್ತವದಲ್ಲಿ ಕರ್ಮೋಡ್ ಸಮಕಾಲೀನ ಎಲ್ಲ ಪಂಥಗಳಿಗೂ ಹೊರ ನಿಂತು ಸಾಹಿತ್ಯದ ಪಾಠ ಹೇಳುವ ವಿದ್ವಾಂಸ. ಒಂದು ತರದ ಪಂಡಿತ ಪರಂಪರೆಗೆ ಸೇರಿದವನೆಂದರೂ ಸರಿಯೆ. ಹೀಗಿದ್ದೇ ಆತ ಪುರೋಗಾಮಿ ದೃಷ್ಟಿಕೋನವನ್ನು ಬೆಳೆಸಿಕೊಂಡವನು. ಕರ್ಮೋಡ್ ತನ್ನ The Sense of an Ending ಎಂಬ ಕೃತಿಯಲ್ಲಿ ಪುರಾಣ (Myth) ಮತ್ತು ಕಥನ (fiction) ಗಳ ಕುರಿತು ನಡೆಸುವ ಜಿಜ್ಞಾಸೆಯೊಂದಿದೆ. ಕಥನಗಳು ಯಾವಾಗ ಕಥಿತವೆಂದು (fictive) ಪ್ರಜ್ಞಾಪೂರ್ಣವಾಗಿ ತೆಗೆದುಕೊಳ್ಳಲ್ಲಡುವುದಿಲ್ಲವೋ ಆವಾಗಲೆಲ್ಲ ಅವು ಪುರಾಣಗಳಾಗಿ ಜೀರ್ಣಿಸುವ ಸಾಧ್ಯತೆಯಿದೆ ಎನ್ನುತ್ತಾನೆ ಕರ್ಮೋಡ್. ಇಲ್ಲಿ ಪುರಾಣಗಳೆಂದರೆ ಐತಿಹ್ಯಗಳು, ದಂತಕತೆಗಳು, ಮಹಿಮೆಗಳು ಎಲ್ಲವೂ ಹೌದು. ಕಥನಗಳೆಂದರೆ ಕತೆ, ಕಾದಂಬರಿ ಇತ್ಯಾದಿ. ಇವೆರಡೂ ಒಂದು ರೀತಿಯ ರೂಪಕಗಳು. ಇಂದು ನಾವು ಪುರಾಣಗಳಾಗಿ ಸ್ವೀಕರಿಸುವಂಥವು ಹಿಂದೊಂದು ಕಾಲದಲ್ಲಿ ಕಥನಗಳಾಗಿದ್ದ ರಚನೆಗಳೇ ಎಂದು ತಿಳಿಯಬೇಕಾಗುತ್ತದೆ. ಕ್ರಮೇಣ ಜನ ಯಾವುದೋ ಕಾರಣಕ್ಕೆ ಅವು ಕಥನಗಳು ಎನ್ನುವುದನ್ನು ಮರೆತುಬಿಟ್ಟುದರಿಂದ ಈ ರಚನೆಗಳು ಪುರಾಣಗಳಾಗಿ ಮಾರ್ಪಟ್ಟುವು.

ಪುರಾಣಗಳು ಆಚರಣಾವಿಧಿಯ ಸೀಮೆಯೊಳಗೆ ಇರುವಂಥವು ಹಾಗೂ ವಸ್ತುಗಳು ಈಗ ಇರುವಂಥ ಮತ್ತು ಒಮ್ಮೆ ಇದ್ದಂಥ ಸ್ಥಿತಿಯ ಪರಿಪೂರ್ಣವೂ ಸಮರ್ಪಕವೂ ಆದಂಥ ವಿವರಣೆಗಳನ್ನು ಪೂರ್ವಭಾವಿಯಾಗಿ ಕಲ್ಪಿಸಿಕೊಂಡಿರುತ್ತವೆ. ಪುರಾಣವೆಂದರೆ ಅದೊಂದು ಆಮೂಲಾಗ್ರವಾಗಿ ಬದಲಾಗದಂಥ ಹಾವಗಳ ಸರಣಿ. ಕಥನಗಳಾದರೆ ವಸ್ತುಗಳನ್ನು ಕಂಡುಕೊಳ್ಳುವುದಕ್ಕೆ ಇರುವಂಥವು, ಹಾಗೂ ಅರ್ಥಮಾಡುವಿಕೆಯ ಅಗತ್ಯಗಳು ಬದಲಾದಂತೆ ಅವು ಬದಲಾಗುತ್ತವೆ.

ಪುರಾಣಗಳು ಸ್ಥಿರತೆಯ ಕರ್ತೃಗಳಾದರೆ ಕಥನಗಳು ಬದಲಾವಣೆಯ ಕರ್ತೃಗಳು. ಪುರಾಣಗಳು ಸಂಪೂರ್ಣವಾದ ಸಮ್ಮತಿ ಬಯಸಿದರೆ ಕಥನಗಳು ಶರ್ತಸಹಿತ ಓಪ್ಪಿಗೆಯನ್ನಷ್ಪೆ ಅಪೇಕ್ಷಿಸುತ್ತವೆ. ಪುರಾಣಗಳು ಕಳೆದುಹೋದ ಕಾಲಕ್ರಮವೊಂದರ ನೆಲೆಗಳಲ್ಲಿ ಮಾತ್ರವೇ ಅರ್ಥಪೂರ್ಣವಾಗುತ್ತವೆ; ಆದರೆ ಕಥನಗಳು, ಅವು ಜಯಪ್ರದವೆನಿಸಿದರೆ, ಇಲ್ಲಿನ ಮತ್ತು ಈಗಿನವನ್ನು ಅರ್ಥಮಾಡಿಕೊಡುತ್ತವೆ. ‘ಸಾಹಿತ್ಕ ಕಥನಗಳನ್ನು ಪುರಾಣಗಳಾಗಿ ತೆಗೆದುಕೊಳ್ಳುವುದು ಸದ್ಯಕ್ಕೆ ಸರಿಯಾಗಿ ಕಾಣಿಸಲೂ ಬಹುದು, ಆದರೆ ಮರಿಯಾನ್ ಮೂರ್ ಕವಿತೆಗಳ ಕುರಿತು ಸರಿಯಾಗಿಯೇ ಹೇಳಿದಂತೆ, ಈ ಸಂಗತಿಗಳು ಮುಖ್ಯವಾಗಿವೆ ಯಾಕೆಂದರೆ ಅವುಗಳ ಮೇಲೊಂದು ದೊಡ್ಡ ಮಾತಿನ ನಿರೂಪಣೆಯನ್ನು ಹೇರಬಹುದೆಂದಲ್ಲ ಆದರೆ ಅವು ಪ್ರಯೋಜನಕಾರಿ ಎಂದು.’

ಕರ್ಮೋಡ್‌ನ ಈ ಮಾತುಗಳನ್ನು ನಾವು ಯಾವ ರೀತಿ ಅರ್ಥಮಾಡಿ ಕೊಳ್ಳಬೇಕು? ಕಥನಗಳು ಪುರಾಣಗಳಾಗಿ ಮಾರ್ಪಡುವ ವಿದ್ಯಮಾನದ ಕಡೆಗೆ ಆತ ಇಲ್ಲಿ ನಮ್ಮ ಗಮನ ಸೆಳೆಯುತ್ತಿದ್ದಾನೆ. ಇದೊಂದು ತರದ ಜೀರ್ಣತೆ ಎನ್ನುತ್ತಾನೆ. ಯಾಕೆಂದರೆ ಕಥನ ಪುರಾಣವಾದೊಡನೆ ಅದು ‘ಕಂಡುಕೊಳ್ಳುವ’ ಅಥವಾ ‘ಕಾಣಿಸುವ’ ಹಾಗೂ ಆ ಮೂಲಕ ಬದಲಾಯಿಸುವ ಗುಣವನ್ನು ಕಳೆದುಕೊಳ್ಳುತ್ತದೆ. ಆಮೇಲೆ ಅದು ನಮ್ಮ ನಿಶ್ಶರ್ತವಾದ ವಿಧೇಯತೆಯನ್ನು ಒತ್ತಾಯಿಸುತ್ತದೆ. ಆದರೆ ಈ ಪುರಾಣೀಕರಣವಾದರೂ ಹೇಗೆ ಸಂಭವಿಸುತ್ತದೆ? ಕಥನಗಳನ್ನು ಕಥನಗಳಾಗಿ ಪ್ರಜ್ಞಾಪೂರ್ವಕ ಕಾಪಾಡಿಕೊಳ್ಳದೆ ಇರುವಾಗ ಎನ್ನುವುದು ವಿಮರ್ಶಕನ ಉತ್ತರ- ಎಂದರೆ ನಾವು ನಮ್ಮ ವಿಮರ್ಶಾಪ್ರಜ್ಞೆಯನ್ನು ಕಳೆದುಕೊಂಡಾಗ ಎಂದು ಅರ್ಥವಾಗುತ್ತದೆ.

ನಮ್ಮದೇ ಕಾಲವನ್ನು ತೆಗೆದುಕೊಂಡರೆ ಮಹಾತ್ಮಾ ಗಾಂಧಿಯವರ ಬದುಕು ಮತ್ತು ಹೋರಾಟ ಇವತ್ತು ಪುರಾಣೀಕರಣಗೊಂಡ ಸಂಗತಿ. ಬಂಗಾಳದಲ್ಲಿ ರವೀಂದ್ರನಾಥ ಠಾಕೂರರ ಹಾಗೂ ಕನ್ನಡದಲ್ಲಿ ಕುವೆಂಪುರವರ ಜೀವನ ಮತ್ತು ಕೃತಿಗಳೂ ಹೀಗೆಯೇ. ಇದು ಯಾವುದೂ ಆಯಾವ್ಯಕ್ತಿಗಳು ಮಾಡಿಕೊಂಡದ್ದಲ್ಲ; ಅಥವಾ ಅವರ ಕೃತಿಗಳು ಇಂಥ ರೂಪೀಕರಣವನ್ನು ತಾವಾಗಿಯೇ ಅಪೇಕ್ಷಿಸುತ್ತವೆ ಎಂದೂ ಅಲ್ಲ. ಆಯಾಕಾಲದ ಸಮಾಜ ಅಥವಾ ರಾಷ್ಟ್ರೀಯತೆ ಅಥವಾ ಇಂಥದೇ ಇತರ ಶಕ್ತಿಗಳು ಚಲಾವಣೆಗೆ ತರುವ ಸಂಗತಿಗಳು ಇವು. ರಾಷ್ಟ್ರಪಿತ ಮತ್ತು ರಾಷ್ಟ್ರಕವಿ ಎಂಬ ಕಲ್ಪನೆಗಳೂ ಈ ಭೂಮಿಕೆಗೆ ಸೇರಿದಂಥವು. ಅದೇ ರೀತಿ ಲೆನಿನ್, ಚೆ ಗವೇರಾ, ಅಂಬೇಡ್ಕರ್ ಮುಂತಾದ ಹೋರಾಟಗಾರರೂ ಕೂಡಾ ಇಂದು ಪುರಾಣೀಕರಣಕ್ಕೆ ಒಳಗಾಗಿರುವುದು ಗಮನಾರ್ಹ. ಇಂಥ ವಿದ್ಯಮಾನದ ಒಂದು ಲಕ್ಷಣವೆಂದರೆ ಅವರು ಪತಿಪಾದಿಸಿದ ಮೌಲ್ಯಕ್ಕಿಂತ ಅವರ ಹೊರ ಚಿಹ್ನೆಗಳೇ ಮುಖ್ಯವಾಗಿ ಅನಿಸುವುದು; ಅಥವಾ ಮೌಲ್ಯ ಮತ್ತು ಚಿಹ್ನೆಗಳ ವ್ಯತ್ಯಾಸವೇ ಹೊರಟುಹೋಗುವುದು, ಎರಡೂ ಒಂದೇ ಎಂದು ಭ್ರಮಿಸುವುದು. ಪ್ರತಿಯೊಂದು ಮತಧರ್ಮದಲ್ಲೂ ಹೀಗಾಗಿದೆ. ಮೌಲ್ಯಗಳು ಮತಧರ್ಮಗಳಾಗಿ ಮಾರ್ಪಡುವುದೇ ಪ್ರಾಯಶಃ ಈ ಕಾರಣಕ್ಕೆ. ಇಲ್ಲೆಲ್ಲವೂ ವಿಚಾರಕ್ಕಿಂತ ಆಚರಣಾವಿಧಿಗಳೇ ಮುಖ್ಯವಾಗುತ್ತವೆ. ಇದನ್ನು ತಿಳಿದೋ ಏನೋ ಜಿದ್ದು ಕೃಷ್ಣಮೂರ್ತಿಯಂಥವರು ತಾವು ಸೇರಿದ ಸಂಘಟನೆಯನ್ನೇ ಬರಖಾಸ್ತುಗೊಳಿಸುತ್ತಾರೆ. ಹಾಗೂ ಝೆನ್ ಬುದ್ಧಿಸಂ ಬೌದ್ಧ ಸಂಘದ ವಿರುದ್ಧವೇ ಸಿಡಿದೇಳುತ್ತದೆ.

ಕಥನದ ಪುರಾಣವಾಗುವ ಇನ್ನೊಂದು ಲಕ್ಷಣವೆಂದರೆ ಅದಕ್ಕೆ ಐತಿಹಾಸಿಕ ಸತ್ಯವನ್ನು ಪ್ರೇರೇಪಿಸುವುದು. ಈಚಿನ ರಾಮಸೇತುವಿನ ವಿಚಾರ ಇಂಥದು. ರಾಮಕಥೆಯೇ ಒಂದು ಕಥನವಾಗಿರುವಾಗ ಅದಕ್ಕೊಂದು ವಾಸ್ತವಿಕ ಇತಿಹಾಸವನ್ನು ಹೊರಿಸುವುದು ವಿಚಿತ್ರವೆನಿಸುತ್ತದೆ. ರಾಮಸೇತುವಿನ ಪುರಾಣೀಕರಣದಿಂದಾಗಿ ಅದನ್ನು ಮುರಿಯುವುದನ್ನು ಪರಿಸರ ಹಾನಿಯ ದೃಷ್ಟಿಯಿಂದ ವಿರೋಧಿಸುವವರ ವಾದ ತನ್ನ ಕರ್ಷತೆಯನ್ನು ಕಳೆದುಕೊಳ್ಳುತ್ತದೆ. ಯಾಕೆಂದರೆ ಮುರಿಯಬೇಕೆನ್ನುವವರ ಮಟ್ಟಿಗೆ ಪುರಾಣವಾದಿಗಳಿಗೂ ಈ ವಿಚಾರವಾದಿಗಳಿಗೂ ಒಂದೇ ಎನಿಸಿಬಿಡುತ್ತಾರೆ. ನಾನು ಚಿಕ್ಕಂದಿನಲ್ಲಿ ನನ್ನ ಊರಲ್ಲಿ ಓಡಾಡುತ್ತಿರುವಾಗ ಪಾಂಡವರ ಮೆಟ್ಟು ಎಂದು ಕರೆಯಲ್ಪಡುವ ಹಾಸುಗಲ್ಲನ್ನು ಕಂಡಿದ್ದೇನೆ: ಈ ಕಲ್ಲಿನಲ್ಲಿ ದೊಡ್ಡ ಆಕಾರದ ಮಾನವ ಹೆಜ್ಜೆಗಳನ್ನು ಹೋಲುವ ಗುರುತುಗಳೇನೋ ಇವೆ. ಅಷ್ಟಕ್ಕೆ ಭೀಮ ಎಂಬ ಕಥಿತ ಪಾತ್ರಕ್ಕೆ ವಾಸ್ತವತೆಯನ್ನು ಹೇರುವುದು ಸರಿಯಾಗುವುದಿಲ್ಲ. ಕಾಡು ಹೂವೊಂದನ್ನು ದ್ರೌಪದಿ ಹೂವೆಂದೂ ಕರೆಯುತ್ತಾರೆ. ದೇಶದ ನಾನಾ ಭಾಗಗಳಲ್ಲಿ ಇಂಥ ಅನೇಕ ಐತಿಹ್ಯಗಳು, ರೂಪಕಗಳು ತುಂಬಿಕೊಂಡಿವೆ. ಇದು ಪುರಾಣೀಕರಣದ ವ್ಯಾಪಕತೆಯನ್ನು ತೋರಿಸುತ್ತದೆಯೇ ಹೊರತು ಇನ್ನೇನನ್ನೂ ಅಲ್ಲ.

ಇದರರ್ಥ ಪುರಾಣದ ಅಥವಾ ಕಥನದ ಹಿಂದೆ ವಾಸ್ತವತೆಯೊಂದು ಇಲ್ಲವೆಂದಾಗಲಿ, ಇವೆಲ್ಲವೂ ಕೇವಲ ಕಾಲ್ಪನಿಕ ಎಂದಾಗಲಿ ಅಲ್ಲ. ಖನನಕಾರರು ಹೋಮರ್ ಕಥಿಸಿ ಈಗ ಪುರಾಣವಾಗಿರುವ ಟ್ರಾಯ್ ನಗರವನ್ನು ಹುಡುಕಿ ತೆಗೆದಿದ್ದಾರೆ ಹಾಗೂ ಹೋಮರ್ ತನ್ನ ಕಾವ್ಯದಲ್ಲಿ ವಿವರಿಸುವ ಕೆಲವೊಂದು ಸಂಗತಿಗಳ ಸೂಚನೆಗಳಿಗೆ ಸಾಕ್ಷ್ಯಗಳನ್ನೂ ಕಂಡಿದ್ದಾರೆ. ಆದರೆ ಅಷ್ಪಕ್ಕೆ ಹೋಮರ್‌ನ ಕಾವ್ಯದಲ್ಲಿ ಹೇಳಿದ ಸಂಗತಿಗಳೆಲ್ಲವೂ ನಿಜವಾಗುವುದಿಲ್ಲ. ಅಂತರರಾಷ್ಟ್ರೀಯ ಯುದ್ಧವೊಂದರ ಆಧಾರದ ಮೇಲೆ ಹೋಮರ್ ತನ್ನ ಮಹಾಕಾವ್ಯವನ್ನು ರಚಿಸಿದ ಎನ್ನುತ್ತದೆ ಆಧುನಿಕ ವಿಮರ್ಶೆ. ಬಹುಶಃ ಗ್ರೀಕ್ ಅರಸುಪಂಗಡಗಳು ಒಟ್ಟಾಗಿ ಟ್ರಾಯ್ ನಗರದ ಮೇಲೆ ದಾಳಿ ಮಾಡಿದ್ದಕ್ಕೆ ಟ್ರಾಯ್‌ಯ ಪ್ರಾದೇಶಿಕ ಆಯಕಟ್ಟು ಕಾರಣವಾಗಿದ್ದಿರಲೂಬಹುದು; ಟ್ರಾಯ್ ತನ್ನ ಸಮುದ್ರದ ಮೂಲಕ ಹಾದುಹೋಗುತ್ತಿದ್ದ ಹಡಗುಗಳ ಮೇಲೆ ಸುಂಕ ವಿಧಿಸಿ ಸುಲಿಗೆ ಮಾಡುತ್ತಿದ್ದಿರಬೇಕು. ಇದಕ್ಕೆ ಹೆಲೆನ್‌ಳ ಕತೆ ಪ್ರವೇಶ ಪಡೆದಾಗ ಇದೊಂದು ಕಥನವಾಯಿತು: ಹೋಮರ್ ಇದೆಲ್ದವನ್ನೂ ಕಥಿಸಿದ್ದು ಬಹುಶಃ ಮೂಲ ಘಟನೆ ನಡೆದು ಅನೇಕ ಶತಮಾನಗಳಾದ ನಂತರವೇ. ಎಲ್ಲಾ ಕವಿಗಳೂ ಇದನ್ನೇ ಮಾಡುವುದಾದ್ದರಿಂದ ಇದರಲ್ಲಿ ವಿಶೇಷವೇನೂ ಇಲ್ಲ. ಆದರೆ ಗ್ರೀಕ್ ರಾಷ್ಟ್ರೀಯತೆ ಹೋಮರನ ಕಾವ್ಯವನ್ನೊಂದು ಪುರಾಣವಾಗಿ ಮಾಡಿದ್ದು ಇಲ್ಲಿ ಪ್ರಸ್ತುತ. ಆಮೇಲೆ ಕೆಲವು ಶತಮಾನಗಳ ನಂತರ ಬಂದ ಅಪ್ಟಟ ಆದರ್ಶವಾದಿ ಪ್ಲೇಟೋ ತನ್ನ ಗಣರಾಜ್ಯದ ಪರಿಕಲ್ಪನೆಯಿಂದ ಕವಿಗಳನ್ನು ಹೊರಗಿಟ್ಟುದನ್ನು ಗಮನಿಸಬೇಕು. ಹೋಮರನ ಕಾವ್ಯಗಳಿಂದಲೂ ಪ್ರಚಲಿತವಿದ್ದ ದಂತಕತೆಗಳಿಂದಲೂ ವಸ್ತುವನ್ನು ಆಯ್ದುಕೊಂಡ ವರ್ಜಿಲ್ ತಾನೂ ಈನಿಡ್ ಎಂಬ ಮಹಾಕಾವ್ಯವೊಂದನ್ನು ರಚಿಸಿದ; ಇದು ರೋಮನ್ ರಾಷ್ಟ್ರೀಯತೆಗೆ ಕಾರಣವಾದ ಹಾಗೆಯೇ ಈ ರಾಷ್ಟ್ರೀಯತೆಯ ಕಾರಣದಿಂದ ಪುರಾಣದ ಸ್ಥಾನವನ್ನೂ ಪಡೆಯಿತು. ಅಷ್ಟೊಂದು ದೂರವೂ ಹೋಗಬೇಕಾದ್ದಿಲ್ಲ; ಐತಿಹಾಸಿಕ ಆಧಾರದ ತುಳುನಾಡಿನ ಕೋಟಿ ಚೆನ್ನಯರ ಕತೆ, ತುಳು ಸಿರಿ ಮುಂತಾದವೂ ಈಗ ಪುರಾಣಗುಣಗಳನ್ನು ಪಡೆದುಕೊಳ್ಳುತ್ತಿವೆ. ಇಂಥ ಹಲವಾರು ಉದಾಹರಣೆಗಳನ್ನು ಎಲ್ಲೆಲ್ಲೂ ಕಾಣಬಹುದಾದ್ದರಿಂದ ಯಾವುದೇ ಸನಾತನ ಪುರಾಣದ ವಾಸ್ತವ ತಳಹದಿಯನ್ನು ಪೂರ್ತಿಯಾಗಿ ನಿರಾಕರಿಸುವುದಾಗಲಿ, ಅದು ಹೇಳುವುದೆಲ್ಲವನ್ನೂ ಯಥಾವತ್ತಾಗಿ ಸ್ವೀಕರಿಸುವುದಾಗಲಿ ಎರಡೂ ಸಮಂಜಸವಲ್ಲ.

ಪ್ರತಿಯೊಂದು ಕಾಲಘಟ್ಟದಲ್ಲೂ ಪುರಾಣವನ್ನು ಮತ್ತೆ ಕಥನದ ಕಡೆಗೆ ತಿರುಗಿಸುವ ಪ್ರಯತ್ನಗಳೂ ನಡೆಯುತ್ತವೆ. ಉದಾಹರಣೆಗೆ ಸೋಫೋಕ್ಲಿಸ್‌ನ ನಾಟಕಗಳು ಗ್ರೀಕ್ ಪುರಾಣದ ಪುನರ್ ಕಥನಗಳು. ಕನ್ನಡದಲ್ಲೂ ಇಂಥಾ ಪ್ರಯತ್ನಗಳು ಆಗಿಂದಾಗ್ಗೆ ನಡಿಯುತ್ತಲೇ ಬಂದಿವೆ. ಆದರೂ ಅಂಥ ಪ್ರಯತ್ನಗಳಿಂದ ಪುರಾಣಗಳೇನೂ ಇಲ್ಲದಾಗುವುದಿಲ್ಲ. ವಾಸ್ತವದಲ್ಲಿ ಪುರಾಣದ ಭಾಗಗಳನ್ನು ನಾವು ಮರುಕಥಿಸಬಹುದಲ್ಲದೆ ಅವುಗಳನ್ನು ತೊಡೆದುಹಾಕುವಂತಿಲ್ಲ. ಅವು ಜನರ ಕಲ್ಪನೆಯಲ್ಲಿ ಬಲವಾಗಿ ಬೇರೂರಿದ ವಿಷಯಗಳು. ಜನರೇ ಅವನ್ನು ಪುರಾಣಗಳಾಗಿ ಸ್ವೀಕರಿಸಿರುವ ಕಾರಣ ಯಾವುದೇ ವೈಚಾರಿಕತೆ ಕೂಡಾ ಅವನ್ನು ಅಳಿಸಿ ಹಾಕುವಂತಿಲ್ಲ. ಒಂದು ಪುರಾಣ ಇನ್ನೊಂದು ಪುರಾಣದಿಂದ ಮಾತ್ರವೇ ಸ್ಥಳಾಂತರಗೊಳ್ಳುವುದು ಸಾಧ್ಯ. ಈ ಗುಣದಲ್ಲಿ ಪುರಾಣವೆಂದರೆ ಒಂದು ವೈಜ್ಞಾನಿಕ ಸಿದ್ಧಾಂತದ ಹಾಗೆ! ಒಂದು ಸಿದ್ಧಾಂತವನ್ನು ಇನ್ನೊಂದು ಸಿದ್ಧಾಂತ ಮಾತ್ರವೇ ಅತಿಕ್ರಮಿಸುತ್ತದೆ.

ಪುರಾಣಗಳ ಈ ನಿರ್ಮಾಣ ಮತ್ತು ಮುಂದರಿಕೆಯ ಹಿಂದೆ ಇರುವ ಶಕ್ತಿ ಯಾವುದೆಂದು ಯೋಜಿಸಿದರೆ ಕಂಡುಬರುವುದು ಅವುಗಳ ಸ್ಥಿತಿರಕ್ಷಕ (conservatism) ಗುಣ. ಯಾವುದೇ ಸಮಾಜದಲ್ಲಿ ಸಾಮಾನ್ಯವಾಗಿ ಕ್ರಾಂತಿ ಗುಣ ಮತ್ತು ಸ್ಥಿತಿರಕ್ಷಕ ಗುಣ ಎಂಬ ಎರಡು ಶಕ್ತಿಗಳು ಸಂವಾದ ಪಕ್ರಿಯೆಯಾಗಿ (dialectics) ಕೆಲಸ ಮಾಡುತ್ತಿರುತ್ತವೆ. ಇವು ಪರಸ್ಪರ ವಿರೋಧಿ ಗುಣಗಳೇನೋ ಹೌದು. ಆದರೆ ಹಾಗೆಂದುಕೊಳ್ಳಬೇಕಾಗಿಯೂ ಇಲ್ಲ. ಪರಸ್ಪರ ಅಗತ್ಯಗಳೆಂದು ಕೂಡಾ ತಿಳಿಯಬಹುದು. ಒಂದು ಬದಲಾವಣೆಯತ್ತ ಸಾಗಿದರೆ ಇನ್ನೊಂದು ಸ್ಥಿರೀಕರಣದತ್ತ ಸೆಳೆಯುತ್ತದೆ. ನಿರಂತರ ಬದಲಾವಣೆ ಅಸ್ಥಿರತೆಯನ್ನು ಹಾಗೂ ನಿರಂತರ ಸ್ಥಿರತೆ ಜಾಡ್ಯವನ್ನು ಉಂಟುಮಾಡುತ್ತವೆ ಎನ್ನುವುದನ್ನು ಒಪ್ಪುವುದಾದರೆ ಈ ‘ವಿರುದ್ಧ ಪ್ರಕ್ರಿಯೆ’ಯ ಮಹತ್ವ ಅರ್ಥವಾಗುತ್ತದೆ. ಒಂದು ನೆನಪು ಹಾಗೂ ಇನ್ನೊಂದು ಕನಸು: ನಮ್ಮ ನಮ್ಮ ವೈಯಕ್ತಿಕ ಒಲವುಗಳೇನೇ ಇದ್ದರೂ ಜನಾಂಗವೊಂದರ ಸಂಸ್ಕೃತಿಗೆ ಆಳ ಒದಗಿಸುವುದೇ ಇಂಥ ಪ್ರಕ್ರಿಯೆ ಎನ್ನುವುದರಲ್ಲಿ ಬಹುಶಃ ಎರಡು ಮಾತಿರಲಾರದು. ಒಂದೊಂದು ಕ್ರಾಂತಿಯೂ ಸ್ಲೇಟಿನ ಬರಹವನ್ನು ಅಳಿಸುವಂತೆ ಇರುವುದೆಲ್ಲವನ್ನೂ ಉಜ್ಜಿಹಾಕುವುದಾದರೆ ಅಂಥ ಕ್ರಾಂತಿಯ ಅರ್ಥ ಕೂಡಾ ನಮಗೆ ಮರೆತುಹೋದೀತು. ಅದೇ ರೀತಿ ಪುರಾಣ ಪ್ರಜ್ಞೆಗೆ ಪೂರ್ತಿಯಾಗಿ ಅಂಟಿಕೊಂಡಿರುವ ಸಮಾಜಕ್ಕೆ ಪುರೋಗಮನವೂ ಸಾಧ್ಯವಾಗಲಾರದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಗೆಯ ಗಾಡಿ
Next post ತಾರಾ

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…