ಸಾಹಿತ್ಯದಲ್ಲಿ ಸೃಜನಶೀಲ ಹಾಸ್ಯ

ಸಾಹಿತ್ಯದಲ್ಲಿ ಸೃಜನಶೀಲ ಹಾಸ್ಯ

ಹಾಸ್ಯವು ಸಾಹಿತ್ಯದ ಒಂದು ಪ್ರಕಾರವಾಗಿ ಕನ್ನಡದಲ್ಲಿ ಎಂದೂ ಅರಳಿ ಬರಲಿಲ್ಲ. ಸಾಹಿತ್ಯದಲ್ಲಿ ಸ್ಥಾನ ಪಡೆಯಲೂ ಹಾಸ್ಯಕ್ಕೆ ಸುಮಾರು ಏಳೆಂಟು ದಶಕಗಳೇ ಬೇಕಾದವು. ವಿನೋದ ಎಲ್ಲರಿಗೂ ಬೇಕು. ಸ್ವಲ್ಪ ಹೊತ್ತು ಮೈಮರೆತು ಮುಖದಲ್ಲಿ ನಗೆ ತುಂಬಲು ಬಯಸದವನು ಎಷ್ಟು ದುಃಖಿಯೋ! ನಗೆ ಆರೋಗ್ಯವಂತಿಗೆಯ ಲಕ್ಷಣ. ಹೃದಯದ ನಿರ್ಮಲ ಭಾವ ಮುಖದಲ್ಲಿ ಪ್ರಫುಲ್ಲಿತಗೊಳ್ಳುತ್ತದೆ. ಯಾವ ಭಿಡೆಯೂ ಇಲ್ಲದೆ ಹೂವು ಅರಳುವ ಹಾಗೆ. ಮನುಷ್ಯ ಯಾವ ಪರಿಸ್ಥಿತಿಯಲ್ಲಿ, ಯಾವ ಮೂಡಿನಲ್ಲಿದ್ದರೂ ಅವನ ಹೃದಯವನ್ನು ಹಗುರಗೊಳಿಸಬಲ್ಲ ಸಾಹಿತ್ಯದ ಯಾವುದೇ ತುಣುಕು ಹಾಸ್ಯವೆನಿಸುತ್ತದೆ. ಇದರಲ್ಲಿ ವ್ಯಕ್ತಿಯ ಸ್ಥಿತ ಭಾವವನ್ನು ಬದಿಗೆ ಸರಿಸಿ ನಗೆ ಬುಗ್ಗೆಯನ್ನು ಎಬ್ಬಿಸುವ ಸಾಮರ್ಥ್ಯವಿರುವುದು ಅವಶ್ಯಕ. ಗ್ರಂಥಸ್ಥವಲ್ಲದ ಮಾತುಕತೆಯಲ್ಲಿ ಈ ಶಕ್ತಿ ಹೆಚ್ಚು ಇರುವುದನ್ನು ನಾವು ಕಾಣುತ್ತೇವೆ. ಆದರೆ ಇದನ್ನು ಹಾಸ್ಯ ಸಾಹಿತ್ಯದಲ್ಲಿ ಹಾಕಿಕೊಳ್ಳಲು ಬರುವುದಿಲ್ಲ. ಹಾಸ್ಯ ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿಯೂ ಮಹತ್ವದ ಸ್ಥಾನ ಪಡೆದದ್ದನ್ನು ನಾವು ಕಂಡಿದ್ದೇವೆ. ಕಾಳಿದಾಸನ ನಾಟಕಗಳಲ್ಲಿ ವಿದೂಶಕ, ಶೇಕ್ಸ್‌ಪಿಯರನ ಹಾಸ್ಯದ ಕಲ್ಪನೆ, ಲಾಂಸ್ಲೆಟ್‌ಗೋಬೊ, ಕುಮಾರವ್ಯಾಸನ ಉತ್ತರನ ಪೌರುಷ ಇವೆಲ್ಲ ಸಾಹಿತ್ಯದಲ್ಲಿ (ಗ್ರಂಥ ಇಲ್ಲವೆ ದೃಶ್ಯ) ಹಾಸ್ಯದ ಅವಶ್ಯಕತೆಯನ್ನು ಸೂಚಿಸುತ್ತವೆ. ಮನುಷ್ಯನ ಪ್ರವೃತ್ತಿಯಲ್ಲಿಯೆ ಹಾಸ್ಯ-ವಿನೋದಗಳ ಅನುಭೂತಿಯ ಅಂಶ ಸದೈವ ಜಾಗೃತವಾಗಿರುತ್ತದೆ.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯ ತುಂಬ ನಿಧಾನಗತಿಯಿಂದ ಬೆಳೆಯಿತು. ಇದನ್ನು ಬೆಳವಣಿಗೆ ಎನ್ನಲೂ ಬಾರದ ರೀತಿಯಲ್ಲಿ. ಇದು ಸಾಹಿತ್ಯದ ಒಂದು ಪ್ರಮುಖ ಪ್ರಕಾರವಾಗಿ ಹಿಂದಿ-ಮರಾಠಿಯಲ್ಲಿಯಂತೆ ಈವರೆಗೂ ಬೆಳಗಲು ಸಮರ್ಥವಾಗಲಿಲ್ಲವೆನ್ನುವುದಕ್ಕೆ ಎರಡು ಕಾರಣಗಳನ್ನು ಕೊಡಬಹುದು.

೧. ಸೃಜನಶೀಲ ಹಾಸ್ಯದ ಕೊರತೆ
೨. ಓದುಗರ ಪ್ರಮಾಣದ ಅಲ್ಪತೆಯಿಂದ ಪ್ರಕಾಶಕರು ಮುಂದೆ ಬಾರದ ಪರಿಸ್ಥಿತಿ.

ಹಾಸ್ಯ ಶುದ್ಧ ಮನಸ್ಸನ್ನು ಹೊರಪಡಿಸುವ ಸಾಹಿತ್ಯಿಕ ಸಾಧನವಾಗಿಯೂ ಕನ್ನಡದಲ್ಲಿ ಇದಕ್ಕಿರುವ ರೀಡರ್ಶಿಪ್ ತುಂಬ ಕ್ಷೀಣವಾದುದಾಗಿದೆ. ಮಾತಿನ ಶಬ್ದ ಜಾಲದ ಮೂಲಕ ಹಾಸ್ಯವನ್ನು ಸೃಷ್ಟಿಸುವುದು ಚಾತುರ್ಯ, ಭಾಷೆಯ ಮಾಧ್ಯಮದಿಂದ ಅದನ್ನು ಓದುಗರಿಗೆ ಮುಟ್ಟಿಸಿ ಅವರ ಮನಸ್ಸನ್ನು ನಗೆಯ ತುಂತುರಿನಿಂದ ತುಂಬುವುದು, ಮುಖವನ್ನು ಅರಳಿಸುವುದು ಕಲೆ, ಸಾಹಿತ್ಯ, ಇದು ತಾತ್ಕಾಲಿಕವಲ್ಲ; ಮುಂದಕ್ಕೂ ಉಳಿಯುವ ನಿಧಿ, ಹಾಸ್ಯ ಕನ್ನಡದಲ್ಲಿ ಗೌಣ, ತ್ಯಾಜ್ಯ ವಿಷಯವಾಗಿಯೆ ಉಳಿಯಿತು. ಅದರ ಅಗತ್ಯ ಕ್ಷಣಿಕ ಖುಷಿಯನ್ನು ಒದಗಿಸುವಷ್ಟಕ್ಕೆ ಮಾತ್ರ ಸೀಮಿತಗೊಂಡಿತು. ಕಲಾತ್ಮಕ ಹಾಸ್ಯವನ್ನು ರಚಿಸುವ ಪ್ರಯತ್ನ ಕನ್ನಡದಲ್ಲಿ ಆಗಿದೆ. ಪಡುಕೋಣೆ ರಮಾನಂದರಾಯರ ಹಾಸ್ಯಕತೆಗಳು. ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ ಸಾಹಿತ್ಯಕ ಮೌಲ್ಯವುಳ್ಳದ್ದಾಗಿವೆ. ಮಾಸ್ಟರ ಹಿರಣ್ಣಯ್ಯ ತಮ್ಮ ವೃತ್ತಿ ನಾಟಕಗಳಿಗೆ ಸಂವಾದ ಬರೆಯುವುದಿಲ್ಲ. ಮೌಕಿಕವಾದ ಅವರ ನಾಟಕ ಸಂವಾದ ಪ್ರೇಕ್ಷಕರನ್ನು ನಗೆಕಡಲಿನಲ್ಲಿ ಮುಳುಗಿಸುತ್ತದೆ. ಆದರೆ ಅದು ಸಾಮಯಿಕ ಸಂದರ್ಭಗಳ ಮೇಲೆ ಮಾಡುವ ವಿಡಂಬನೆ, ಅಣಕಗಳೇ ಹೊರತು ಸಾಹಿತ್ಯವಲ್ಲ.

ಹಳೆಗನ್ನಡದಲ್ಲಿ ಹಾಸ್ಯ

ಹಾಸ್ಯದ ಲೇಪನದಿಂದ ಕಾವ್ಯ ಸಂದರ್ಭಕ್ಕೆ ವಿಡಂಬನೆಯ ಅಭಿವ್ಯಕ್ತಿ ನೀಡುವ, ಹಾಸ್ಯವನ್ನು ಕಾವ್ಯದ ನವರಸಗಳಲ್ಲಿ ಒಂದನ್ನಾಗಿ ಸಾಂಪ್ರದಾಯಿಕ ನೆಲೆಯಲ್ಲಿ ಉಪಯೋಗಿಸುವ ಮನಸ್ಸು ಹಳೆಗನ್ನಡ ಸಾಹಿತ್ಯದಲ್ಲಿ ಸಾಕಷ್ಟು ಇದ್ದುದನ್ನು ನಾವು ಕಾಣಬಹುದು. ಪಂಪಭಾರತ, ಪಂಚತಂತ್ರ, ಭರತೇಶ ವೈಭವ ಮುಂತಾದ ಕಾವ್ಯಗಳಲ್ಲಿ ಹಾಸ್ಯ ಪ್ರಸಂಗದ ಅನೇಕ ವರ್ಣನೆಗಳು ಬಂದಿವೆ. ನಯಸೇನ

‘ಕಲಿತನದಿಂ ಲೋಗರ್ ಪೆರ್ಬುಲಿಯಂ ಪಿಡಿದೊಡೇಂ
ಬಿಡೆಂಬರ್, ತಾವೊಂದಿಲಿಯಂ ಪಿಡಿದೊಡಮದು
ಪೆರ್ಬುಲಿಯೆಂಬರ್, ದುರ್ಜನರ್ಗೆತಾನಿದು ಸಹಜಂ’

ಎಂದು ದುರ್ಜನರ ಸ್ವಭಾವವನ್ನು ನಿಂದಿಸುವಲ್ಲಿ ವ್ಯಂಗ್ಯದ ತಿಳಿಹಾಸ್ಯವಿದೆ.

ಹರಿಹರನ ನಂಬಿಯಣ್ಣನ ರಗಳೆಯ ವೃದ್ಧ ಬ್ರಾಹ್ಮಣ,

‘ಎಲವೊ ನಾ ಬೇಡಿ ಬರ್ಪವಂ ನೀಂ ಕೊಡುವವಂ….
ನಡೆನಡೆ ನಿನ್ನಂಬೇಡಿ ಬಂದುದುಂಟುಂಟು
ನೀನೆಮ್ಮ ತೊತ್ತಿನ ಮಗಂ’

ಎಂದು ನಂಬಿಯನ್ನು ಚುಚ್ಚುವಲ್ಲಿ ಹಾಸ್ಯವೆ ಇದೆ. ಆದರೆ ಕುಮಾರವ್ಯಾಸನ ಉತ್ತರನ ಪೌರುಷದ ಹಾಸ್ಯ ಉತ್ತಮ ಸಾಹಿತ್ಯವೆ ಆಗಿದೆ. ಮೂಲದಲ್ಲಿ ವ್ಯಾಸನ ರಚನೆ ಇದಕ್ಕೆ ಪ್ರೇರಣೆಯಾದರೂ ಕುಮಾರವ್ಯಾಸ ಸ್ವಂತದ ಹಾಸ್ಯ ಪ್ರವೃತ್ತಿಯ ಮೇಲ್ಮೆಯನ್ನು ಅದರಲ್ಲಿ ಮೆರೆದಿದ್ದಾನೆ. ಇದಾದನಂತರ ವಚನ ಸಾಹಿತ್ಯದಲ್ಲಿ ಗಂಭೀರ ಧಾರ್ಮಿಕ ವಿಚಾರವು ತಲೆದೋರಿತು. ದಾಸ ಸಾಹಿತ್ಯ ಪರಂಪರೆಯಲ್ಲಿ ಆಧ್ಯಾಯಾತ್ಮದ ನಡುವೆ ಹಾಸ್ಯಕ್ಕೆ ಪ್ರವೇಶವೇ ಸಿಗಲಿಲ್ಲ. ರತ್ನಾಕರ ವರ್ಣಿಯ ‘ಭರತೇಶ ವೈಭವ’ದಲ್ಲಿ ಹಾಸ್ಯ ಅನುಷಂಗಿಕವಾಗಿ ಮಿಂಚಿದ್ದು ತೋರುತ್ತದೆ. ಭರತೇಶ ಯೋಗ-ಭೋಗಗಳನ್ನು ಸಮನ್ವಯಗೊಳಿಸುವಲ್ಲಿ ಹಾಸ್ಯಕ್ಕೆ ಮರೆಹೋಗುವ ಅನೇಕ ಸಂದರ್ಭಗಳು ಬರುತ್ತವೆ. ರಾಣಿಯರೊಡನೆ ಸರಸ – ಸಲ್ಲಾಪ ಪ್ರಣಯ ಕಲಹ, ರಾಜಕೀರನ ಮಾತುಗಳು ಕೆಲವು ಒಳ್ಳೆಯ ಉದಾಹರಣೆಗಳು. ಹಳೆಯ ಕಾವ್ಯದಲ್ಲಿ ಹಾಸ್ಯ ಬಂದರೂ ಪ್ರಾಸಂಗಿಕವಾಗಿ ವಿಡಂಬನೆ ಅಥವಾ ನಿಂದನೆಯನ್ನು ನಿರೂಪಿಸಲೆಂದೆ ಬಂದಿದೆ. ಕುಮಾರವ್ಯಾಸ ಭಾರತದಲ್ಲಿ ಉತ್ತರನ ಪೌರುಷದ ಅಧಿಕಾಂಶ ವರ್ಣನೆ ಮಹಾಕಾವ್ಯದ ತಿಳಿಹಾಸ್ಯದ ನವುರನ್ನು ಓದುಗರಲ್ಲಿ ಎಬ್ಬಿಸುತ್ತದೆ.

ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂವರವರು ಕೆಲರಧಮಕುಲದಲಿ ಸಂದು ಬಂದವರು
ವೀರರೆಂಬವರಿವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು
ಹೆಂಗಳಿದಿರಿನಲಿ

ಅರಿಯೆನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ…..

ಕೌರವರಪಡೆಯೆಲ್ಲಿ ನನಗೆ ಸಮಬಲರು
ಯಾರೂ ಇಲ್ಲ. ದ್ರೋಣ ಬ್ರಾಹ್ಮಣ
ಭೀಷ್ಮ ಯಮಲೋಕಕ್ಕೆ ಹೊರಟವನು,
ಕರ್ಣ ಅಧರ್ಮಕುಲದಲಿ ಹುಟ್ಟಿದವನು

ಇವರೆಲ್ಲ ಎಂಥಾ ಶೂರರು ಎಂದು
ನನಗೆ ಗೊತ್ತಿದೆ. ಎಂದು ಉತ್ತರ
ಕುಮಾರ ನಾರಿಯರ ನಡುವೆ ಕುಳಿತು
ತನ್ನ ಪೌರುಷನನ್ನು ಬಿತ್ತರಿಸಿದನು.

ಅವನು ಹೇಡಿಯೂ, ಅಂಜುಳಿಯೂ ಆಗಿದ್ದನೆಂದು ಕೌರವರ ವಿಶಾಲ ಸೈನ್ಯದ ದೃಶ್ಯವನ್ನು ನೋಡಿಯೇ ನಡುಗಿ ನುಡಿದ ಮಾತಿನಿಂದ ಸ್ಪಷ್ಟವಾಗುತ್ತದೆ.

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬ್ರಹನ್ನಳೆ
ಎಸಗದಿರು ತೇಜಗಳ….
ರಥವ ಮರಳಿಚು…
ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ….
ಅರ್ಜುನ ರಥವನು ನಗುತ್ತ
ಮುಂದೆ ನೂಕಲು
‘ಕೊಂದನೀ ಸಾರಥಿ’ಯೆನುತ
ಮುಂದೆ ಬಂದು ಮೆಲ್ಲನೆ
ರಥದ ಹಿಂದಕೆ ನಿಂದು ದುಮ್ಮಿಕ್ಕಿದನು
ಬದುಕಿದೆನೆಂದು ನಿಟ್ಟೋಟದಲಿ
ಹಾಯ್ದನು (ಓಡಿದನು) ಬಿಟ್ಟ
ಮಂಡೆಯಲಿ

ಹೀಗೆ ಈ ಕೇಡಾಡಿ ಉತ್ತರ ಕುಮಾರ ರಣಕ್ಕೆ ಹೆದರಿ ‘ಕೆದರಿದ ಕೇಶದಲಿ ಕೆಟ್ಟೋಡುತಿರಲ್’ ಅರ್ಜುನ ಅವನ ಹಿಂದೆ ರಥ ಓಡಿಸಿದನು. ಇದೆಲ್ಲವನ್ನು ನೋಡಿ ಕೌರವ ಸೇನೆ ಕೆಡೆದುದು ನಗೆಯ ಕಡಲೊಳಗೆ…’

ಕುಮಾರವ್ಯಾಸ ಭಾರತದ ಈ ಹಾಸ್ಯದ ಹೊನಲು ಹಾಸ್ಯ ಸಾಹಿತ್ಯಕ್ಕೆ ಜೀವ ತುಂಬಲು ಎಷ್ಟು ಸಮರ್ಥವಾಗಿದೆ ನೋಡಿ.

ಆಧುನಿಕ ಸಾಹಿತ್ಯ

೨೦ನೇ ಶತಮಾನದಲ್ಲಿ ಕನ್ನಡ ಗದ್ಯ ಸಾಹಿತ್ಯ ವಿಶೇಷವಾದ ಒಂದು ಉದ್ದೇಶದಿಂದ ಪ್ರಾರಂಭವಾಗುವ ತನಕ ‘ಹಾಸ್ಯ’ಕ್ಕಾಗಿ ಕಾಯಬೇಕಾಯಿತು. ಒಡೆಯರ ಕಾಲದ ಸಾಹಿತ್ಯ ರಾಜಾಶ್ರಯದ ಪರಂಪರೆಯನ್ನು ಪುನರ್ವರ್ತಿಸುವ ಪ್ರಯತ್ನದಲ್ಲಿ ಹಾಸ್ಯಕ್ಕೆ ಯಾವುದೇ ರೀತಿಯ ಬ್ರೇಕ್ ಸಿಗಲಿಲ್ಲ. ಮುದ್ದಣನ ‘ರಾಮಾಶ್ವಮೇಧ’ದ ಸರಸ ಸಲ್ಲಾಪದಲ್ಲಿ ನವುರಾದ ಹಾಸ್ಯರಂಜಕ ಉಲ್ಲಾಸವನ್ನು ಸಾಹಿತ್ಯವಲಯದಲ್ಲಿ ಹರಡುವ ತನಕ ಹಾಸ್ಯ ಬರವಣಿಗೆ ತಡೆಯಬೇಕಾಯಿತು. ಮುದ್ದಣ-ಮನೋರಮೆಯರ ಸರಸ ಸಲ್ಲಾಪ ಸಾಹಿತ್ಯದ ಹೊಸಯುಗದ ಲಕ್ಷಣವನ್ನು ನಿರೂಪಿಸುವ ದಿಶೆಯಲ್ಲಿ ಒಂದು ಪ್ರಯೋಗವಾದರೂ ಪರಿಶುದ್ಧವಾದ ರೋಚಕ ಹಾಸ್ಯ ಒಂದು ವಿಶಿಷ್ಟವಾದ ಸಾಹಿತ್ಯ ಪ್ರಕಾರವಾಗಿ ಉಚ್ಚಸ್ಥಾನವನ್ನು ಪಡೆಯಬಹುದು ಎಂಬುದನ್ನು ಸ್ಪಷ್ಟಪಡಿಸಿತು. ಶಿವರಾಮ ಕಾರಂತರ ಬರವಣಿಗೆಯಲ್ಲಿ ಈ ಬಗೆಯ ಗಂಭೀರ ಹಾಸ್ಯ ಪ್ರವೃತ್ತಿಯ ಗುಣ ನಿರೂಪಣೆಗೆ, ಉಪಯೋಗಿಸಿದ ಭಾಷೆ ಈ ಬಗೆಯ ಸಾಹಿತ್ಯದ ಮೌಲ್ಯವನ್ನು ಹೇಳುತ್ತವೆ. ಕಾರಂತರ ಕಾದಂಬರಿಗಳು ಗಂಭೀರ ವಸ್ತು ವಿಚಾರಗಳ ಶರೀರ ಪಡೆದರೂ ಅವರಲ್ಲಿರುವ ವಿನೋದ ಪ್ರವೃತ್ತಿ ಪ್ರಾದೇಶಿಕ ಸೊಗಸನ್ನು ಪಡೆದು ಸಾಹಿತ್ಯದಲ್ಲಿ ಅಳವಡುತ್ತದೆ.

ನವೋದಯ ಕಾಲದ (೧೯೨೦ ರ ನಂತರ) ಸಾಹಿತ್ಯದಲ್ಲಿ ಹಾಸ್ಯಪ್ರವೇಶ ಮಾಡಲು ಎರಡು ದಶಕವೇ ಬೇಕಾಯಿತು. ೧೯೪೦ ರ ಈಚೆಗೆ ಟಿ.ಪಿ.ಕೈಲಾಸಂ ತಮ್ಮ ನಾಟಕಗಳಲ್ಲಿ ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ವ್ಯಕ್ತಪಡಿಸಲು ಭಾಷೆಯನ್ನೇ ಚುಚ್ಚುವ ಬಾಣದಂತೆ ಉಪಯೋಗಿಸಿದರು. ಇಂಗ್ಲಿಷ್-ಕನ್ನಡದ ಆಂಗ್ಲಿಕ್ ಉಚ್ಚಾರಣೆಯ, ಮೈಸೂರಿನ ತಮಿಳು ಧ್ವನಿಯ ಈ ಭಾಷಾಪ್ರಯೋಗ ನಾಟಕ ಸಾಹಿತ್ಯದಲ್ಲಿ ಪ್ರಬಲ ಹಾಸ್ಯದ ವಾತಾವರಣವನ್ನು ಪ್ರೇಕ್ಷಕರು ಮತ್ತು ಓದುಗರಲ್ಲಿ ಸೃಷ್ಟಿಸಿತು. ಇಂಗ್ಲೀಷಿನ ನಾಟಕ ಪರಿಕಲ್ಪನೆ ಮತ್ತು ಪ್ರಭಾವ ಕೈಲಾಸಂ ನಾಟಕಗಳಲ್ಲಿ ಕಂಡು ಬಂದರೂ ಹಾಸ್ಯದ ಶುಚಿ ಅವರ ರಚನೆಯ ಗುಣವಿಶೇಷವಾಗಿದೆ. ಶ್ರೀರಂಗರ ಸೋಸಿಯೊ-ಪೊಲಿಟಿಕಲ್ ಅಸ್ತಿತ್ವವನ್ನು ಟೀಕಿಸುವ ನಾಟಕಗಳಲ್ಲಿ ಉತ್ತರ ಕರ್ನಾಟಕದ ಕನ್ನಡಭಾಷೆ ಮುಖ್ಯವಾಗಿ ವಿನೋದಕ್ಕೆ ಎಡೆಮಾಡಿಕೊಟ್ಟಿತು. ಅವರ ರಂಗವಿವರಣೆಯ ಕ್ಲಿಷ್ಟತೆಗಳು ರಂಗಪ್ರಯೋಗದ ತೊಂದರೆಗಳಾಗಿ ಹಾಸ್ಯವನ್ನು ಪ್ರಾದುರ್ಭವಿಸುವ ದೃಶ್ಯಗಳೂ ಬಿಗಿಯಾಗಿ ಕಂಡವು. ಪರ್ವತವಾಣಿ, ದಾಶರಥಿ ದೀಕ್ಷಿತ, ನಾಡಿಗೇರ್ ತಮ್ಮ ನಗೆನಾಟಕಗಳ, ಪ್ರಹಸನಗಳ ಮೂಲಕವೆ ಪ್ರಸಿದ್ಧರಾದರು. ಅವರು ಹಾಸ್ಯವನ್ನು ನಾಟಕದ ಆತ್ಮವೆನ್ನುವಂತೆ ಬಳಸಿಕೊಂಡರು. ಅದರ ಬಗೆಬಗೆಯ ಪ್ರಚಾರಕ್ಕೆ ಪ್ರಯತ್ನ ಪಟ್ಟರು. ಎನ್ಕೆಯವರದೂ ಮುಖ್ಯವಾಗಿ ಹಾಸ್ಯಪ್ರಧಾನವಾದ ಸಾಹಿತ್ಯ. ಅವರದು ಹೆಚ್ಚು ಬಿಗಿಯಿರುವ ಹಾಸ್ಯ. ನಾಟಕ ಮುಖ್ಯವಾಗಿ ದೃಶ್ಯ ಸಾಹಿತ್ಯವಾಗಿಯೂ ಸಂಸ್ಕೃತ, ಇಂಗ್ಲಿಷ್‌ನಲ್ಲಿ ಬರುವ ಪ್ರತ್ಯೇಕವಾದ ಹಾಸ್ಯ ಪ್ರಸಂಗದಂಥ ತಂತ್ರವನ್ನು ಬಳಸಿಕೊಳ್ಳುವ ಪರಿಪಾಠವನ್ನು ಕನ್ನಡ ನಾಟಕಗಳು ಬೆಳೆಸಿಕೊಳ್ಳಲಿಲ್ಲ. ಜಾನಪದ ಹಿನ್ನೆಲೆಯಲ್ಲಿ ಅಥವಾ ಜಾನಪದ ವಸ್ತುವನ್ನೆ ಮುಖ್ಯ ಕೇಂದ್ರವನ್ನಾಗಿ ಉಪಯೊಗಿಸಿಕೊಂಡು ರಚಿಸಿದ, ಪ್ರಯೋಗಿಸಿದ ಚಂದ್ರಶೇಖರ ಕಂಬಾರರ ಜೋಕುಮಾರಸ್ವಾಮಿ, ಸಿರಿಸಂಪಿಗೆಯಂತಹ ನಾಟಕಗಳಲ್ಲಿ ಹಾಸ್ಯ ಅತ್ಯಂತ ಕಲಾತ್ಮಕವಾಗಿ ವ್ಯಕ್ತವಾಗಿರುವುದು ಘನತೆಗೆ ಕಾರಣವಾಗಿದೆ. ಲಂಕೇಶ, ಗಿರೀಶ ಕಾರ್ನಾಡರ ನಾಟಕಗಳಲ್ಲಿ ಬರುವ ಹಾಸ್ಯವೂ ಸಾಂದರ್ಭಿಕ ಮತ್ತು ಪ್ರಾದರ್ಶನಿಕ ನೆಲೆಯಲ್ಲಿ ಮಾತ್ರ ಅರ್ಥಪೂರ್ಣವಾಗುತ್ತದೆ. ಇಲ್ಲಿಯೂ ಸಂಕ್ರಾಂತಿ, ಹಯವದನ, ನಾಗಮಂಡಲ, ತಲೆದಂಡದಂತಹ ಜನಪದೀಯ ವಾತಾವರಣವುಳ್ಳ ನಾಟಕಗಳು ಹಾಸ್ಯವನ್ನು ಹೆಚ್ಚು ಪ್ರಸ್ತುತಗೊಳಿಸುತ್ತವೆ.

ಹೊಸಗನ್ನಡ ಗದ್ಯ ಸಾಹಿತ್ಯದಲ್ಲಿ ಹಾಸ್ಯ ವಸ್ತುವಾಗಿ, ಪಾತ್ರವಾಗಿ, ಬದುಕಿನ ಸಂದರ್ಭಗಳಾಗಿ ಸಮಗ್ರ ರೂಪದಲ್ಲಿ ಇಂದಿಗೂ ಸೃಷ್ಟಿಯಾಗಲಿಲ್ಲವೆಂದೇ ಹೇಳಬಹುದು. ಬೀಚಿಯವರು ಹಲವಾರು ಕಾದಂಬರಿಗಳನ್ನು ಹಾಸ್ಯವಿಧಾನದಲ್ಲಿ ಬರೆದರೂ ಅವು ಜನಪ್ರಿಯವಾಗಲಿಲ್ಲ. ಖಾದಿಸೀರೆ, ಭಯೋಗ್ರಫಿ ಅವರ ಹೆಚ್ಚು ಲೋಕಪ್ರಿಯವಾದ ಕೃತಿಗಳು. ತಿಂಮನ ತಲೆಯ ಹಾಸ್ಯ ಬರಹಗಳು ಮಾತ್ರ ಟಾಯಿಮಿಂಗ್ ಮತ್ತು ಟ್ವಿಸ್ಟಗಳ ಉತ್ಕೃಷ್ಟ ಪ್ರಯೋಗ (application) ಒಂದಾಗಿ ಬಹಳಕಾಲ ಓದುಗರನ್ನು ಮೋಜಿಗೊಳಪಡಿಸಲು ಶಕ್ತವಾಗಿವೆ. ಗೊರೂರರ ಗದ್ಯ ಬರವಣಿಗೆಯಲ್ಲಿ ಪರಿಶುದ್ಧವಾದ, ಪ್ರಬುದ್ಧ ಹಾಸ್ಯ ಕನ್ನಡದ ಕೊರತೆಯನ್ನು ನೀಗಿಸಲೆಂಬಂತೆ ಪ್ರಕಟವಾಗಿ ಪ್ರಸಿದ್ಧವಾಗಿವೆ. ಆಧುನಿಕ ಗದ್ಯದಲ್ಲಿ ಹಾಸ್ಯವನ್ನು ಜೀವಂತವಾಗಿ, ಸಮರ್ಪಕವಾಗಿ, ಸಾಹಿತ್ಯಿಕವಾಗಿ ಬಳಸಿದ ಸಾಹಿತಿಗಳಲ್ಲಿ ಗೊರೂರ್, ಕಾರಂತ ಅಗ್ರಗಣ್ಯರಾಗಿದ್ದಾರೆ. ಆದರೆ ಕಾರಂತರನ್ನು ಬೇರೆಯೆ ನೆಲೆಯಲ್ಲಿ ಪರಿಗಣಿಸಬೇಕು. ಅವರ ಸೃಜನ ಶಕ್ತಿಯ ಮಟ್ಟ ತುಂಬ ಉತ್ತುಂಗ.

ಪತ್ರಿಕಾ ಹಾಸ್ಯ

ವಿಕಟವಿನೋದಿನಿ, ಕೊರವಂಜಿ, ನಗುವನಂದ, ವಿನೋದ ಹಾಸ್ಯ ಬರಹಗಳಿಗಾಗಿಯೆ ಮೀಸಲಾದ ಹಳೆಯ ನಿಯತಕಾಲಿಕ ಪತ್ರಿಕೆಗಳು. ಇವುಗಳು ಮುಂಬಯಿಗರಿಗೂ ಓದಲು ದೊರೆಯುತ್ತಿದ್ದುವು. ಆದರೆ ಈ ಸಾಹಿತ್ಯ ಇಲ್ಲಿಯ ಓದುಗರಲ್ಲಿ ಲೇಖಕರನ್ನು ಹುಟ್ಟುಹಾಕುವಲ್ಲಿ ವಿಫಲವಾಯಿತೆಂದೇ ಹೇಳಬಹುದು. ನಾಡಿಗೇರ ಗೋವಿಂದರಾಯರು ಸ್ವಲ್ಪ ಮಟ್ಟಿಗೆ ಮುಂಬಯಿಯ ಅಪರೂಪದ ನಗೆಲೇಖಕರಾಗಿ ಹೆಸರು ಪಡೆದರು. ಇತರ ಅನೇಕ ಪತ್ರಿಕೆಗಳು, ದ್ಯೆನಿಕಸಹಿತ, ಓದುಗರ ಮನರಂಜನೆ ಮತ್ತು ವೆರೈಟಿಯ ಸಲುವಾಗಿ ಮಾತ್ರ ಹಾಸ್ಯ ಲೇಖನಗಳನ್ನು ಪ್ರಕಟಸಿದುವು, ಈ ಬಗೆಯ ಸಾಹಿತ್ಯವನ್ನು ಬೆಳೆಸಿ, ಪ್ರೋತ್ಸಾಹಿಸಬೇಕೆಂಬ ಉದ್ದೇಶ ಸರ್ವಥಾ ಈ ಪತ್ರಿಕೆಗಳದ್ದು ಇರಲಿಲ್ಲವೆಂದು ಹೇಳಬಹುದು. ಅಥವಾ ಪತ್ರಿಕೆಗಳು ಹಾಸ್ಯವನ್ನು ಸಾಹಿತ್ಯದ ಒಂದು ಪ್ರಮುಖ ಅಂಗವನ್ನಾಗಿ ಪರಿಗಣಿಸಿದ್ದೆ ಇಲ್ಲವೆನ್ನಬಹುದು. ಹಾಸ್ಯ ನಗೆಹನಿಯಾಗಿ, ಚುಟುಕು, ಹರಟೆ, ಅಣಕ, ಪ್ರಹಸನವಾಗಿ ಪತ್ರಿಕೆಗಳ ‘ಉಳಿದ’ ಪುಟಗಳನ್ನು ತುಂಬಿಸುವ ಸಾಹಿತ್ಯವಾಗಿ, ಓದುಗರಿಗೆ ಲೈಟ್ ರೀಡಿಂಗನ್ನು ಒದಗಿಸುವ ಅನಿವಾರ್ಯವಾಗಿ ಮಾತ್ರ ಸ್ಥಾನವನ್ನು ಪಡೆಯಿತು. ಈಗಲೂ ದೀಪಾವಳಿ ವಿಶೇಷಾಂಕ ಗಳಲ್ಲಿಯೂ ಇದೇ ಉದ್ದೇಶದಿಂದ ಹಾಸ್ಯಲೇಖನಗಳು ಪ್ರಕಟವಾಗುವುದನ್ನು ನಾವು ಗಮನಿಸಬಹುದು. ಪತ್ರಿಕೆಗಳದು ವ್ಯವಹಾರಿಕ ದೃಷ್ಟಿ, ಮಾರುಕಟ್ಟೆಯಲ್ಲಿ ಅವು ಬದುಕಬೇಕು. ಆದ್ದರಿಂದ ಹಾಸ್ಯಕ್ಕೆ ಸಾಹಿತ್ಯಿಕ ಗಾಂಭೀರ್ಯವನ್ನು ಕೊಟ್ಟು ಪುರಸ್ಕರಿಸಲು ಬಹುಶ ಸಾಧ್ಯವಿಲ್ಲ. ಪತ್ರಿಕೆಗಳಲ್ಲಿ ಅನೇಕ ಹಾಸ್ಯಲೇಖನಗಳು ಪ್ರಕಟಗೊಳ್ಳುತ್ತವೆ. ಅರಾಸೆ, ಕೇಫ, ಗೋಪಿನಾಥ, ಮೋಹನಚಂದ್ರನ್, ಚಂದ್ರಮೌಳಿ, ಟಿ. ಸುನಂದಮ್ಮ, ಹೆಗಡೆ, ಪಾವೆಂ, ನರಸಿಂಹಮೂರ್ತಿ, ಪ್ರಿಯತಮಾ ಮುಂತಾದವರು ಹಾಸ್ಯವನ್ನು ತಮ್ಮ ಬರಹಗಳಲ್ಲಿ ಮೂಡಿಸುವ, ಓದುಗರನ್ನು ನಗಲು ಭಾದ್ಯಪಡಿಸುವ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಆದರೆ ದೀರ್ಘಕಾಲ ನಿಲ್ಲಲು ಸಮರ್ಥವಲ್ಲದ ಇಂಥಾ ನಗೆಸಾಹಿತ್ಯದಿಂದಲೇ ನಾವು ಸಮಾಧಾನಪಟ್ಟುಕೊಳ್ಳಬೇಕಾಗಿದೆ.

ಕನ್ನಡಿಗರಲ್ಲಿ ಹಾಸ್ಯಪ್ರವೃತ್ತಿ ಕಡಿಮೆ ಎಂದು ಹೇಳುತ್ತಾರೆ. ಹಿಂದಿ, ಮರಾಠಿ, ಸಾಹಿತ್ಯವನ್ನು ಗಮನಿಸಿದಾಗ ಇದು ಸತ್ಯವೆಂದು ತೋರುತ್ತದೆ.

ಜಾನಪದದಲ್ಲಿ ಹಾಸ್ಯ

ಜಾನಪದ ಸಾಹಿತ್ಯದಲ್ಲಿ ನಮಗೆ ಮುಗ್ಧ ಮನಸ್ಸಿನಿಂದ ಹೊರಬಂದ ನೈಜ ಹಾಸ್ಯ ದೊರೆಯುತ್ತದೆ. ಹಾಡುಗಳಲ್ಲಿ ಈ ಅಂಶ ಹೆಚ್ಚು. ಮನುಷ್ಯರನ್ನು ಬಿಟ್ಟು ತಾವು ನಂಬಿದ ದೈವದೇವತೆಗಳನ್ನೆ ಸಾದೃಶಗೊಳಿಸಿ ಬದುಕಿನ ಸಹಜ ‘ಟಿಟ್‍ಬಿಟ್ಸ್’ಗಳನ್ನು ನಿರೂಪಿಸುವ ಹಾಡುಗಳು ಜಾನಪದದಲ್ಲಿವೆ. ನಂಜನಗೂಡಿನ ನಂಜಯ್ಯ ಚಾಮುಂಡಿಯರ ಪ್ರಣಯ ಕತೆಯ ತಿಳಿಹಾಸ್ಯ ಸಾಹಿತ್ಯ ಸೊಗಸನ್ನು ಪಡೆಯುತ್ತದೆ. ಬೆಟ್ಟದ ಚಾಮುಂಡಿಯೊಂದಿಗೆ ರಹಸ್ಯ ಸಂಬಂಧವನ್ನಿಟ್ಟುಕೊಂಡ ನಂಜಯ್ಯ (ಶಿವ) ದೇವಿಯ (ಪಾರ್ವತಿ) ಕಣ್ಣುತಪ್ಪಿಸಿ ಚಾಮುಂಡಿಯ ಬಳಿಗೆ ಹೋಗಬಯಸಿ ದೇವಿಗೆ ನಿದ್ರೆ ಬರುವಂತೆ ಮಾಡಲು ಬಸವನನ್ನು ಕೇಳಿಕೊಳ್ಳುವುದು. ರಾತ್ರಿ ಗುಟ್ಟಿನಲ್ಲಿ ಚಾಮುಂಡಿಯಲ್ಲಿಗೆ ಪಟ್ಟೆಯ ಸೀರೆ ಹಿಡಿದುಕೊಂಡು ಹೋಗುವಾಗ ಕತ್ತಲಲ್ಲಿ ತುಂಟ ಬಸವ ಯಾರಲ್ಲಿ ಎಂದು ತಡೆಯುವುದು ಸೊಗಸಾದ ಚಿತ್ರಣ-

ಮಲ್ಲನ ಮೂತಿ ಬಸವಯ್ಯ ಒಂದು ಮಾತುಂಟು ಕೇಳಯ್ಯ
ನಿಮ್ಮಕ್ಕ ದೇವೀರಿಗೆ ನಿದ್ರೆ ಬರಿಸಿದರೆ, ನಿನಗೆ
ಬೆಳ್ಳಿ ಮೊಕರಂಬ ಮಾಡಿಸೇನು ನಂತರ ನಂಜಯ್ಯ
ಎಲ್ಲ ದೇವರಿಗೆ ಹರಕೆ ಮಾಡಿಕೊಂಡು
ಹೊರಟಾನುದೂರ ಪಯಣಾವ

ಪ್ರಿಯೆಯನ್ನು ಕಾಣಲು ಹೋಗುತ್ತಿರುವವನನ್ನು ಕತ್ತಲಲ್ಲಿ ಬಸವ ಅಡ್ಡಕಟ್ಟಿ –

ಪಟ್ಟೆಯ ಸೀರೆಯ ಬಗಲಲ್ಲಿಟ್ಟುಕೊಂಡು
ಎಲ್ಲಿಗೆ ಮಾವಯ್ಯ ನಿಮ್ಮ ಪಯಣ? ಎಂದು ಕೇಳಿಬಿಟ್ಟ.

ಒಂದು ಕ್ಷಣ ತತ್ತರಿಸಿದ ನಂಜಯ್ಯ
ಎಲ್ಲಿಗೆ ಮಾವಯ್ಯ ನಿನ್ನ ಪಯಣ ಎಂದರೆ
ಮೈಸೂರಲ್ಲೊಂದು ಘನ ನ್ಯಾಯ –

ಅದನ್ನು ಪರಿಹರಿಸಲು ಪಯಣ ಎಂದು ಧೈರ್ಯವಾಗಿ ಹೇಳಿಬಿಡುತ್ತಾನೆ; ಬಗಲಲ್ಲಿ ಪಟ್ಟೆ ಸೀರೆಯಿರುವುದರಿಂದ ತನ್ನ ಕಳವು ಪತ್ತೆ ಹಚ್ಚಿತು ಎಂಬ ಅನುಮಾನದಿಂದ.

ಇವಲ್ಲದೆ ಲಾವಣಿ, ದೊಡ್ಡಾಟ, ಪಾರಿಜಾತ, ಯಕ್ಷಗಾನ, ಕೋಲಾಟದ ಪದ್ಯ, ಮದುವೆಯ ಹಾಡು, ವೀರಗಾಥೆಗಳಲ್ಲಿಯೂ ಬರುವ ತಿಳಿಹಾಸ್ಯ ಜಾನಪದ ಬದುಕಿನ ಸುಂದರ ಸಹಜ ಮುಖವನ್ನು ತೋರಿಸುತ್ತದೆ. ಜಾನಪದ ಸೊಗಸಾದ ಹಿನ್ನೆಲೆಯಲ್ಲಿ ಬೆಳೆಸಿದ ಇಂದಿನ ಪ್ರೌಢಸಾಹಿತ್ಯದಲ್ಲಿ ಹಾಸ್ಯ ಹೆಚ್ಚು ಪ್ರಬುದ್ಧವಾಗಿ ಹಾಸು ಹೊಕ್ಕದ್ದನ್ನು ಜೋಕುಮಾರಸ್ವಾಮಿ, ಹಯವದನ, ಸಿರಿಸಂಪಿಗೆ, ಕರೀಮಾಯಿ, ನಾಗಮಂಡಲ ಮುಸ್ಸಂಜೆಯ ಕಥಾಪ್ರಸಂಗ, ಭುಜಂಗಯ್ಯನ ದಶಾವತಾರ, ಚಾಮುಂಡೇಶ್ವರಿ ಭುವನ ಮುಂತಾದ ಕೃತಿಗಳಲ್ಲಿ ಕಾಣಬಹುದಾಗಿದೆ.

ಇಂದಿನ ಸಾಹಿತ್ಯದಲ್ಲಿ ಹಾಸ್ಯ

ರಾಜರತ್ನಂರವರು ರತ್ನನ ಪದಗಳ ಪುಟ್ನಂಜಿರೂಪ ನಲ್ಲೀತಾವ ನಂಮಲ್ಲಿ, ಕನ್ನಡ ಪದಗೊಳ್, ಗಳಲ್ಲಿ ಹಾಸ್ಯಪುಟಿಯುವ ತಿಳಿಭಾವನೆಗಳನ್ನು ಮೈಸೂರಿನ ಸಾಮಾನ್ಯರ ಭಾಷೆಯ ಮೂಲಕ ಕಾವ್ಯರೂಪದಲ್ಲಿ ಹೊಮ್ಮಿಸಿದ ಬಗೆ ವಿಶಿಷ್ಟವಾದುದು. ‘ಎಲೆಲೆ ರಸ್ತೆ, ಏನ್ ಅವ್ಯವಸ್ಥೆ’ ಎಂದು ಕುಡುಕ ರತ್ನ ರಸ್ತೆಯನ್ನು ಚಂದ್ರನನ್ನು ಕುಡುಕನೆಂದು ತಿಳಿಯುವುದು; ಯೆಂಡಕುಡುಕ ರತ್ನನ ಕನ್ನಡ ಪ್ರೇಮ, ಬಸವನಗುಡಿಯ ಶಿಲಾಬಾಲಿಕೆಯರ ವಿಗ್ರಹದಂತೆ ಎದೆಭಾವವುಳ್ಳ ‘ಪುಟ್ನಂಜಿ ರೂಪ’. ನಲ್ಲೀತಾವ ನಂಮಲ್ಲಿ ತೋರಿಸುವ ವರ್ಚಸ್ಸು-ಮುಂತಾದವುಗಳಲ್ಲಿ ಹಾಸ್ಯ ನವುರಾಗಿ ಸಾಹಿತ್ಯವನ್ನು ಪ್ರವೇಶಿಸುತ್ತದೆ. ಈ ಬಗೆಯ ಪದ್ಧತಿಯನ್ನು ನೇರವಾಗಿ, ಮೋಜಾಗಿ ವ್ಯಕ್ತಪಡಿಸುವ ಸಾಹಿತ್ಯಕ ವಿಧಾನ ಮುಂದೆ ಕನ್ನಡದಲ್ಲಿ ಬೆಳೆಯಲಿಲ್ಲ. ಅರವಿಂದ ನಾಡಕರ್ಣಿ, ಸುಮತೀಂದ್ರ ನಾಡಿಗ, ನಿಸ್ಸಾರ ಅಹಮ್ಮದ್ ತಮ್ಮ ಕಾವ್ಯದಲ್ಲಿ ವಿಡಂಬನೆಯನ್ನು ಸೂಚಿಸುವ ಸಾಲುಗಳನ್ನು ನಾಜೂಕಾಗಿ, ವಿಡಂಬನೆಯ ಧ್ವನಿಯಲ್ಲಿ ಉಪಯೋಗಿಸಿದರೂ ಅವನ್ನು ಹಾಸ್ಯದ ಬಗೆ ಎನ್ನಲಾಗದು. ಅರವಿಂದ ನಾಡಕರ್ಣಿಯವರ ಕಾವ್ಯದಲ್ಲಿ ವಿಡಂಬನೆ ಹಾಸ್ಯದ ಸೊಬಗನ್ನು ವ್ಯಕ್ತಪಡಿಸುತ್ತದೆ. ಅವರ ಕವಿತೆಗಳಲ್ಲಿ ವಿಡಂಬನೆ ಕಾವ್ಯದ ಧ್ವನಿಯಾಗಿ ಕೇಳುವ/ಓದುವ ಸಹೃದಯನಲ್ಲಿ ಮುಸಿನಗೆಯ ನವುರನ್ನು ಎಬ್ದಿಸುತ್ತದೆ. ಉದಾಹರಣೆಗಾಗಿ ಕೆಳಗಿನ ಸಾಲುಗಳನ್ನು ನೋಡಿ-

ಸ್ವರ್ಗದಿಂದ ಟೆಲೆಕ್ಸ್ ಸಂದೇಶ
ಧರ್ಮರಾಯ ಕೇಳುತ್ತಾನೆ
ನಾನೀಗ ಅವತರಿಸಿ ಬರಲೇ ಎಂದು
ಸಂದೇಶ ಕಳಿಸಿದೆ
ಇಷ್ಟು ಮುಂಚಿತ ಬೇಡ ಮಾರಾಯಾ
ಬಂದರೆ ನಿನ್ನ ಒಡಹುಟ್ಟಿದವರು ಆಪ್ತತೆಯ ಕಟ್ಟಿದವರು
ಗೆಳೆಯರು ಗುರು ಸಹೋದ್ಯೋಗಿಗಳು
ಪುಢಾರಿಗಳು ನಿನ್ನನ್ನೇ ನಾಮಕರಣ ಮಾಡುವರು….
ಅಧರ್ಮರಾಯನೆಂದು….
ಯಾಕೀ ಉಸಾಬರಿ, ಅಲ್ಲೇ ನಿನ್ನ ಅಪಾರ ಪುಣ್ಯದ
ದಿಂಬಿಗೊರಗಿ. ಗೊರಕೆಹೊಡೆಯಲ್ಲಾ…
ಕಲಿಯುಗ ಪೂರ್ತಿ ಜಾರಲಿ…. ಪಾರ್ಕಲಾಂ

ಮುಂಬಯಿ ನಗರ ಒಂದು ಭಾರತ. ಜಗತ್ತಿನ ಒಂದು ಪ್ರಮುಖ ಜಂಕ್ಶಂನ್ ತರಹ, ಇಲ್ಲಿ ಪುರಾಣ ಮತ್ತು ಇತಿಹಾಸಗಳ ಸಕಲ ಸಂಗತಿಗಳೂ ಯಥಾವತ್ತಾಗಿ ಜರುಗುತ್ತವೆ. ಅವುಗಳನ್ನು ವ್ಯಂಗದ ಲೇಪಕೊಟ್ಟು ನಾಡಕರ್ಣಿಯವರು ರೂಪಿಸಿದ ಬಗೆ ಎಷ್ಟು ಸೊಗಸಾಗಿವೆ ನೋಡಿ-

ಇದೇ ಇದೇ ಈ ಜಂಕ್ಶನ್ನಿನಲ್ಲಿ
ವಿಶ್ವರಥ ದಕ್ಷುಗಳೊಡನೆ
ವಿಶ್ವಾಮಿತ್ರನಾಗಿ ಬಡತಿ ಪಡೆದಿದ್ದ
ಶುನಶ್ಶೇಪನ ಬೋಳು ತಲೆಗೆ
ರಕ್ಷಾಛತ್ರಿ ಹಿಡಿದಿದ್ದ… ಕೊಂಡದರಸನ ತಲವಾರ್ ತಗಲದಂತೆ.
ಇಲ್ಲೇ ಕೃಷ್ಣ…. ಚಿಂದಿ ಸುಧಾಮನನ್ನು
ಇಡಿಯಾಗಿಸಿ, ಸೂಟು ಬೂಟಿನಲಿತುಂಬಿಸಿದ್ದ
ಮತ್ತೆ ಐದೂರಿನ ಮ್ಯಾಗ್ನಾಚಾರ್ಟಾ
ದೃತರಾಷ್ಟ್ರನಿಗೆ ಸಲ್ಲಿಸಿದ್ದ
ಇಲ್ಲೇ ಭರತ ರಾಮನ ಪಾದುಕ ತಲೆಗೇರಿಸಿದ್ದ
ವಿಭೀಷಣ…. ಸೀತೆಯನು ಮರ್ಯಾದೆಯೊಡನೆ
ರವಾನಿಸಲು ದುಷ್ಟರಾವಣ
ಬೋಧಿವೃಕ್ಷದ ಕೆಳಗೆ ಕುಳ್ಳಿರಿಸಿದ್ದ
ಅಕ್ಬರ ಬಾದಶಹ ಸರ್ವಧರ್ಮ ಪಂಡಿತರ ಮೀಟಿಂಗು ಕರೆದಿದ್ದ
ಸಾರಿ… ಹೌದು ಇಲ್ಲೇ ಬಸವಣ್ಣ ವಿಶ್ವಕರ್ಮನ ಕರೆದು ಅನುಭವ ಮಂಟಪ ಕಟ್ಟಿಸಿದ್ದ ಇದೇ ಜಂಕ್ಶನಿನಲ್ಲಿ
ಸೂಟು ಬೂಟು ಬಿಸಾಕಿದ ಗಾಂಧಿ ಸುಧಾಮ
ಕೋಟಿ ಸುಧಾಮರೆದುರು ಕೈಜೋಡಿಸಿ ನಿಂತಿದ್ದ
ಸಾಯುವ ಮೊದಲು….

ನಾಡಕರ್ಣಿ ಕಾವ್ಯದಲ್ಲಿ ವಿಡಂಬನೆ ಅಭಿವ್ಯಕ್ತಿಯ ಶಕ್ತಿಯಾಗಿ ತಿಳಿಯಾದ ಹಾಸ್ಯ ವಾತಾವರಣವನ್ನು ನಿರ್ಮಿಸುತ್ತದೆ.

ಮುಂದೆ ಗದ್ಯಕ್ಕೆ ಬಂದಾಗ ಹಾಸ್ಯವನ್ನೆ ಪ್ರಧಾನವಾಗಿ ಸುನಂದಮ್ಮ, ಬೀಚಿ, ಪಾವೆಂ, ಅರಾಸೆ, ಜಿ.ಡಿ.ನಾಡಕರ್ಣಿ ತಮ್ಮ ಬರವಣಿಗೆಯಲ್ಲಿ ಪ್ರಯೋಗಿಸಿದರು. ಮುಂಬಯಿಯಲ್ಲಿಯೂ ಕೆಲವರಿಂದ ಹಾಸ್ಯ ಸಾಹಿತ್ಯದ ಕಳಕಳಿಯ ರಚನೆಯಾಯಿತು. ಕೆ. ಚಂದ್ರಮೌಳಿ, ನಾಡಿಗೇರ ಗೋವಿಂದರಾಯರು, ಪ್ರಿಯತಮ ತಮ್ಮ ರೀತಿಯಲ್ಲಿ ಹಾಸ್ಯ ಸಾಹಿತ್ಯಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಜಿ.ಡಿ. ಜೋಶಿಯವರ ಹರಟೆಗಳು, ಕೋಡು ಭೋಜ ಶೆಟ್ಟರ ಕವಿತೆಗಳು, ವಿಮರ್ಶಕ ಓದುಗರನ್ನು ಖುಷಿಗೊಳಿಸಿವೆ. ಆದರೆ ಈ ಪರಂಪರೆಯ ಗತಿ ತುಂಬ ನಿಧಾನ. ಆಯಾಸಗೊಂಡಂತೆ.

ನಾಡಕರ್ಣಿಯವರ ‘ಹಾಸ್ಯದ ಲಾಸ್ಯ’ ಒಂದು ಉತ್ತಮ ಹಾಸ್ಯ ಸಾಹಿತ್ಯ ಕೃತಿ. ಚಂದ್ರಮೌಳಿಯವರ ಬರಹ, ಭಾವನೆಗಳಲ್ಲಿ ಹಾಸ್ಯದ ನವುರು ಹೆಚ್ಚು ಚುರುಕಾಗಿರುವುದನ್ನು ನಾವು ಗುರುತಿಸಬಹುದು. ಇಂಥಾದ್ದರಲ್ಲಿ ವ್ಯಾಸರಾವ್ ನಿಂಜುರರ ‘ಶ್ರೀ ಚಾಮುಂಡೇಶ್ವರಿ ಭವನ’ ಕಾರಂತರ ಮಾದರಿಯಲ್ಲಿ ಹಾಸ್ಯ ಕಾದಂಬರಿಯ ವಸ್ತು ಪಾತ್ರಗಳೊಂದಿಗೆ ಜೀವಂತವಾಗಿ ಬೆರೆತುಕೊಳ್ಳಬಹುದೆನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ನಾಟಕದಲ್ಲಿ ಹಾಸ್ಯ
Stage is an effective media for performing humour. ರಂಗ ಮಂಚ ಹಾಸ್ಯಪ್ರವರ್ತನೆಗೆ ಉತ್ತಮ ಮಾಧ್ಯಮ ಎನ್ನಲಾಗಿದೆ. ಹಾಸ್ಯವನ್ನು ವಕ್ತಪಡಿಸಲು, ಅದನು ಕಂಡು, ಕೇಳಿ ಆನಂದಿಸಲು ರಂಗಪ್ರದರ್ಶನದಷ್ಟು ಒಳ್ಳೆಯ ಮೀಡಿಯಾ ಮಾಧ್ಯಮ ಬೇರೆ ಇರಲಾರದು. ಗ್ರಂಥಗಳಲ್ಲಿ ಬಿಗಿಗೊಂಡ ಕನ್ನಡದ ಹಾಸ್ಯ ಎಷ್ಟೋ ಸಾರಿ ರಂಗಮಂಚದಲ್ಲಿ ‘ಎಂಜೋಯೆಬಲ್’ ಆದದ್ದುಂಟು. ಲಂಕೇಶ, ಪ್ರಸನ್ನ ಮುಂತಾದವರ ನಾಟಕಗಳ ಹಾಸ್ಯದಲ್ಲಿ ಟೀಕೆಟಿಪ್ಪಣಿ ಇದ್ದರೆ ಕಾರ್ನಾಡ, ಕಂಬಾರ ನಾಟಕಗಳಲ್ಲಿ ಜಾನಪದ ಬದುಕಿನಿಂದ ಮಿಂಚುವ ಸಂಸ್ಕೃತಿಯ ಪ್ರಭೆ ಇದೆ. ಮುಂಬಯಿಯಲ್ಲಿ ಅನೇಕ ಮರಾಠಿ ನಾಟಕಗಳ ಅನುವಾದ, ರಂಗ ಪ್ರದರ್ಶನಗಳಲ್ಲಿ ಪ್ರೇಕ್ಷಕರನ್ನು ನಗಿಸಬಲ್ಲ ಸಾಮರ್ಥ್ಯವಿದೆ. ನಾಟಕ ಗುಣ ಪ್ರವೃತ್ತಿ ಮತ್ತು ಅಭಿವ್ಯಕ್ತಿಯಲ್ಲಿ ಮಧುರ ಹಾಸ್ಯವನ್ನು ಕಲಾತ್ಮಕವಾಗಿ ನಿರೂಪಿಸುವ ‘ನಲ್ವತ್ತರ ನಲುಗಿ’ನಂತಹ ನಾಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ವಿಮರ್ಶೆ ಅಥವಾ ಶೋಧ ಗ್ರಂಥಗಳೂ ಕನ್ನಡದಲ್ಲಿ ಹಾಸ್ಯದ ಬಗೆಗೆ ತುಂಬಾ ವಿರಳವಾಗಿ ಬಂದಿವೆ. ಡಾ. ಸುಂಕಾಪುರರ ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯ’ ಎಂಬ ಒಂದು ಕೃತಿಯನ್ನು ಬಿಟ್ಟರೆ ಆಗೊಮ್ಮೆ ಈಗೊಮ್ಮೆ ಪತ್ರಿಕೆಗಳಲ್ಲಿ ಬರುವ ಲೇಖನಗಳೇ ಮಿತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾರಿ
Next post ಉರುಳಿತ್ತು ಒಂದೂವರೆ ವರುಷ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…