ಉರುಳಿತ್ತು ಒಂದೂವರೆ ವರುಷ
ಹರುಷ ಕಳೆಯಿತು ಕಳೆದು ಕೂಡಿ
ಅಳೆದು ಅದರದರ ಭಾವನೆ
ಭಾಗಿಸುವಂತೆ ಹರುಷ ಕಳೆಯಿತು||

ನೆನಪೆಂಬ ಶೇಷ ಉಳಿದು
ಮನವ ತುಂಬಿ ಒಲಿದು ಪ್ರೀತಿ
ಎಂಬ ಪಕಳೆ ಉದುರಿ ಇಳೆಗೆ
ನವನನೀನತೆಯ ಭಾಗಿಸುವಂತೆ ಹರುಷ ಕಳೆಯಿತು ||ಉ||

ನಾನು ನನ್ನದೆಯ ಕಾಮನೆ
ಮೇಘಗಳೆ ನಿಮ್ಮೊಡೆಯ ದಿಶೆಗೆ
ಕುಂಚವು ಚಿತ್ರ ಬಿಡಿಸಿ ತುಡಿತಗಳ
ಭಾಗಿಸುವಂತೆ ಕಳಿಸಿರುವೆ ಸಂದೇಶ ||ಉ||

ಎಂದೂ ಬರುವುದೋ ಸಂದೇಶ
ಹೇಳಿ ತಿಳಿ ಹೇಳಿ ಕೇಳಿ ಮೇಘಗಳೆ
ಕರಗದೇ ಪ್ರತಿಕ್ಷಣ ಆಶಾನಿರಾಶಾ ಕೂಡಿ ಕಳೆದು
ವಿಶ್ವಾಸ ಶೇಷ ಉಳಿಯುವಂತೆ ಹರಿಸಿ ಪ್ರೀತಿಯ ||ಉ||

ಒಂದೂವರೆ ವರುಷ ನೂರು ಹರುಷ
ಕಳೆದ ನೆನೆಪು ಇನಿಯನೆದೆಯ ತೆರೆಯ
ಗೋಧೂಳಿ ಬಣ್ಣದ ಓಕುಳಿ ಸ್ವಂದನದೆ
ಹುಣ್ಣಿಮೆ ಚಂದ್ರ ಶೇಷ ಉಳಿಸಿ ಪ್ರೀತಿಯ ಹರಸಿತು ||ಉ||
*****

Latest posts by ಹಂಸಾ ಆರ್‍ (see all)