ಚಿತ್ರ: ಡೇವಿಡ್ ಮಾಕ್ ಕೌಗ್ಹೆ
ಚಿತ್ರ: ಡೇವಿಡ್ ಮಾಕ್ ಕೌಗ್ಹೆ

ಸಾಮಾನ್ಯವಾಗಿ ಜನಸಂಖ್ಯೆ ಹೆಚ್ಚಳವಾದಾಗ ಅಥವಾ ಪ್ರವಾಸಿಗರ ಒತ್ತಡವಾದಾಗ ಸಿಟಿಬಸ್, ಸ್ಪೆಷಲ್ ಬಸ್, ಜಾತ್ರಾಸ್ಪೆಷಲ್‌ಗಳೆಂದು ರಸ್ತೆಸಾರಿಗೆ ಸಂಸ್ಥೆ ಹೊಸ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತದೆ. ಇದರಂತೆ ಸಮುದ್ರಯಾನದ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗಲೂ ಸಹ ‘ಮಿನಿ ಸೀಬಸ್’ ಚಿಕ್ಕ ಸಮುದ್ರ ಬಸ್‌ನ್ನು ರೂಪುಗೊಳಿಸಲಾಗುತ್ತದೆ. ಸೀಬಸ್ ವಾಹನಕ್ಕೆ ರೆಕ್ಕೆಗಳಿದ್ದು ಇಟಲಿಯ ‘ಸಬೀನೋರಾಕ್‌ಟೆಲ್ಲ’ ಇದನ್ನು ವಿನ್ಯಾಸಗೊಳಿಸಿದೆ. ಇದಲ್ಲದೇ ಯೂರೋಪಿನ ೧೪ ಕಂಪನಿಗಳೂ ಸಹ ಈ ಸೀಬಸ್‌ನ ನಿರ್ಮಾಣ ಕಾರ್ಯದಲ್ಲಿತೊಡಗಿವೆ.

ಒಂದು ಸೀಬಸ್ನಲ್ಲಿ ೬೮೦ ಜನ ಕುಳಿತುಕೊಳ್ಳಬಹುದಾಗಿದ್ದು ಈ ಮಿನಿ ಸೀಬಸ್ ಹಡಗಿಗಿಂತಲೂ ವೇಗವಾಗಿ ಚಲಿಸುತ್ತದೆ. ಅಟ್ಲಾಂಟಿಕ್ ಸಾಗರವನ್ನು ೨೪ ಗಂಟೆಗಳಲ್ಲಿ ಇದು ದಾಟಿದರೆ ಅತಿವೇಗದ ಹಡಗು ಈ ದೂರವನ್ನು ಕ್ರಮಿಸಲು ಒಂದು ವಾರ ಕಾಲ ಸಮಯಬೇಕು. ಇದರಿಂದಾಗಿ ಈ ಬಸ್‌ನ ವೇಗದ ಮಿತಿ ಅರ್ಥವಾಗುತ್ತದೆ. ಈ ಸೀಬಸ್‌ಗಿರುವ ಎರಡು ಎಡಬಲದ ರೆಕ್ಕೆಗಳು ಸಮುದ್ರವನ್ನು ಸಂಚರಿಸಲು ಅನುಕೂಲವಾಗುತ್ತವೆ. ಅಂದರೆ ತೀವ್ರಗತಿಯಲ್ಲಿ ನೀರನ್ನು ಯಂತ್ರಗಳ ಸಹಾಯದಿಂದ ಹಿಂದಕ್ಕೆ ತಳ್ಳುತ್ತವೆ. ಇನ್ನೂ ಚಿಕ್ಕ ಮಿನಿಬಸ್‌ಗಳು ತಯಾರಾಗುತ್ತಿದ್ದು ಇದರಲ್ಲಿ ೨೦೦ ಜನ ಪ್ರಯಾಣಿಕರು ಕುಳಿತುಕೊಳ್ಳಬಹುದು. ಸಣ್ಣ ಬಂದರುಗಳನ್ನು ತಲುಪಬೇಕಾದಾಗ ಇದರ ರೆಕ್ಕೆಗಳು ಸ್ವಯಂ ಚಾಲಿತವಾಗಿ ಮಡಚಿಕೊಳ್ಳುತ್ತವೆ. ಆಗ ಸಾರಾಗವಾಗಿ ನಿಲ್ದಾಣದೊಳಗೆ ಹೋಗಬಹುದು. ಈ ಸೀಬಸ್‌ಗಳ ನಿರ್ಮಾಣವು ಸಮುದ್ರಯಾನಕ್ಕೊಂದು ಕ್ರಾಂತಿಕಾರಕ ಬದಲಾವಣೆಯೆಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ದುಬಾರಿ ಹಣತೆತ್ತು ತಿಂಗಳುಗಟ್ಟಲೆ ಸಮುದ್ರದಲ್ಲಿ ಯಾನ ಮಾಡುವ ಪ್ರವಾಸಿಗರಿಗೆ ಇದೊಂದು ವರದಾನವಾಗಲಿದೆ.
*****