ಕವಲು ಕವಲಾಗಿ
ಚಾಚಿ ಕೊಂಡಿರುವ ಆಲದ ಮರ
ವಂಶ-ವೃಕ್ಷಗಳ ಬಿಡುವಂತೆ
ಎಷ್ಟೋ ದುಷ್ಟ ಶಕ್ತಿಗಳು
ಹುಲುಸಾಗಿ ಈ ಭೂಮಿಯಲಿ
ಬೇರು ಬಿಟ್ಟು ಬೆಳೆಯುತ್ತಿವೆ.
ಆಳವಾಗಿ ಬೇರು ಬಿಡುತ್ತ
ಸತ್ವಹೀರಿ ಬೆಳೆಯುತ್ತಿರುವ
ಕೋಮುವಾದಿ ವಿಷವೃಕ್ಷ
ತನ್ನನ್ನೇ ಮಾರಿಕೊಂಡು
ಬೆಳೆಯುತ್ತಿರುವ ಹುತ್ತ
ವಿಷ ಜಂತು ಸರ್ಪಗಳಿಗೆ
ಆಶ್ರಯ ನೀಡುತ್ತ
ಸತ್ಯವನ್ನು ಸ್ವಾರ್ಥಕ್ಕೆ ಮಾರುತ್ತ
ತಾಯ್ ಕರುಳ ಕತ್ತರಿಸಿ,
ತುಂಡು ತುಂಡಾಗಿಸಿ,
ಮತ್ತೇ ಕಸಿ ಮಾಡುವ
ಇವರ ಕ್ರೂರ ಕಸರತ್ತು
ಸಾಕು ನಿಲ್ಲಿಸಲು ಹೇಳಮ್ಮ
ಇವರು ಮಾಡಿದ
ಪಾಪದ ಕಲೆಗಳ ತೊಳೆಯಲು
ನನಗೆ ಅದೆಷ್ಟು
ಕಣ್ಣೀರು ಹರಿಸಬೇಕಿದೆಯೊ!
*****