(ವಿಜಾಪುರ ಡೋಣಿಸಾಲಿನ ಭಾಷೆಯಲ್ಲಿದೆ)

ರಾಮಣ್ಣ- ನಟ್ಟ ಕಡದಾದ್ರೂ ಖರೇತನದಿಂದ ಹೊಟ್ಟೀ ತುಂಬಿಕೋ ಬೇಕಂತ ಶಾಸ್ತ್ರಾ ಹೇಳ್ಳಾಕ ಬಂದಾರು ಶಾಸ್ತ್ರಾನ ಏ. ಯಾರು ಕೇಳಿದ್ರ ನನ್ನ, ನಟ್ಟು ಕಡೂಮುಂದಽ. ಎಷ್ಟ ನಶಿಕ್ಲೆ ಹೋದ್ರೂ ತಡಾಯಾಕಂತ ಕೇಳವ್ರಽ ಮತ್ತ ನಟ್ಟ ಕಡದ ಮ್ಯಾಲ ಹೆಂಟಿ ಉಳಿದೂವು ಪಳಿ ಉಳಿದೂವು ಗುದ್ಲಿ ನೆಟ್ಗ ಇಳಿಸಿಲ್ಲಾಽ ಬಿಸಲ್ನೆತ್ತಿಮ್ಯಾಗ ಬಂದಿಲ್ಲಾಽ ಇನ್ನೂ ಆರತಾಸ ಆಗಿಲ್ಲಾ ಒಂದಽ ಎರಡಽ ನೂರನೆವಾ ಹೇಳಿ ಎರಡು ಸೇರ ಸರಗ ಜೋಳ ಕೂಲಿ ಅಳೀಬೇಕಾದ್ರ ಮೂರ್‍ಕೆರೀ ನೀರ್‍ಕುಸ್ಬಿಡತಿದ್ರಪಾ, ಗೋಳು. ನಟ್ಟಿನ ಹೊಲದಾಗ ಕಾಕುಳ್ಳ ಕೂಡಿಸಿ ಚಾ ಮಾಡಿ ಕುಡದ್ದ್ರ ತಮ್ಮಪ್ಪನ ಗಂಟಽ ಹೋದ್ಹಾಂಗ ಮಾಡತಿದ್ದ್ರು. ಎಕ್ಕೀ ಎಲೀ ಬತ್ತಿ ಕಟ್ಟಿ ತಂಬಾಕ ಸೇದಿದ್ರ ಕಂಣು ಕೆಂಪ ಮಾಡ್ತಿದ್ರಣ್ಣವರು. ಅವಽ.

ಈ ಗ್ಹಾಂಗಾಗೇತಿ? ಗಳಿಗ್ಗೊಮ್ಮೆ ರಾಮಣ್ಣಾ! ಚುಟ್ಟಾ ಬೇಕಽ ಬಿಳಿ ಬಿತ್ತಿಬೇಕಽ ಅಂತ ಕೇಳೇ ಕೇಳ್ಸೂದು. ಹರ್‍ಯಾಗ ಎಳಾಣ ಚಾದಂಗ್ಡಿ ತಿಂದಷ್ಟ ಕಾರಾ, ಕುಡದಟ್ಟಚಾ. ಎರಡೂ ಹೊತ್ತು ಕಾನಾವಳಿ ಊಟಾ ಕಟ್ಟೀ ತುದಿಗೆ ನಿಂದ್ರಗೊಡ್ತಿದ್ದಿಲ್ಲ ನಮ್ಮನ್ನ ವಕೀಲರಮನ್ಯಾಗ. ಅದಽ ಈಗ ವಕೀಲರ ಮನೀಗೆ ಹೋಗಾಣಾ. “ಮ್ಯಾಲೆ ಬಾ ರಾಮಣ್ಣಾ ಇಲ್ಲಿ ಕೂಡಬಾ ಅಲ್ಲಿ ಕೂಡ ಬಾ. ಅಂತ ವಕೀಲರು ಕಾರಕೂನರು ಎಲ್ಲಾರು ಕ್ಯೂವರಽ. ನನಗೂ ಇದೆಲ್ಲಾ ಗತ್ತು ಗೊತ್ತೈತಿ. ಹಗರ ಎದ್ದು ಈಗ ಒಂಜರಾ ಪ್ಯಾಟ್ಯ್ಯಾಗ ದಗದೈತಿ ಹೋಗಿ ಬರ್‍ತೀನಂತ ಎದ್ದ ಏಳತೀನು. ಏಳಾಣ ಹೀಂಗ ಮಜಾಆಗ್ತೈತಿ, ಎಲ್ಯಾರೆ ಸಾಕ್ಷೀ ಒಡದಗಿಡದೀತಂತ ಬೆನ್ನ ಹತ್ತತಾರ.

ಎಲ್ಹೊಂಟಿ ರಾಮಣ್ಣಾ ಅಂತ ಕುಂಡ್ರ ಸತಾರ. ಇಲ್ಲಪಾ. ಹಿರ್‍ಯಾಳಿಗೊಂದು ಗಚ್ಚಿನ್ದಡೀ ಸೀರಿ ಬೇಕು. ಪ್ಯಾಟ್ಯಾಗ ಹೋಗ್ಬರ್‍ತೀನಂತ ಅಂತಿದೇನು. ನನ್ನ ಬೆನ್ಹತ್ತಿ ಬಂದು ಸೀರಿ ಕೊಡಸ್ತಾರು ಖಣಽ ಕೊಡಸ್ತಾರು. ಎಲ್ಲಾ ಕೊಡಿಸಿ ಮತ್ತ ತಿರಗಿ ವಕೀಲರ ಮನೀಗೆ ಕರಕೊಂಡು ಬರತಾರ. ಈಗತ್ತು, ಮಾಡದ ಹೊರ್‍ತ ಗತೀನ ಇಲ್ಲಾ. ಇಲ್ದಿದ್ರ ಮನೀಖರ್ಚ ನಡಿಯೂ ಬಗೀ ಹ್ಯಾಂಗ?

ಹೌದು ಹೌದು ನಾವು ರೊಕ್ಕಾತಗೊಂಡ ಸಾಕ್ಷೀಬರ್‍ತೀವಿ. ನಮ್ಮನೀ ಅನ್ನ ಉಂಡು, ನೋಡದ ಕೇಳದ ನೋಡಿದ್ಹಾಂಗ ಕೇಳಿದ್ಹಾಂಗ ಹೇಳ ಬೇಕಾದ್ರ ಪುಗಸಟ್ಟೆ ಐತೆ? ಅದರಾಗ ಅವರ ವಕೀಲ ಹಡ್ಡಿ ಹಡ್ಡಿ ಕೇಳಾಂವಾ. ಎಲ್ನಿಂತ್ತಿದ್ದಿ? ಎಲ್ಕುಂತಿದ್ದಿ? ಮಾರಿ ಯಾವ ದಿಕ್ಕಿಗಿತ್ತು? ಬೆನ್ನಯಾವ ದಿಕ್ಕಿಗಿತ್ತು? ಮಾಡಹಾಕಿತ್ತೋ? ಬಿಸಲ್ಬಿದ್ದಿತ್ತೋ? ಏಡಕ್ಯಾರಿದ್ರು? ಬಲಕ್ಯಾರಿದ್ರು? ಹಿಂದೇನಿತ್ತು? ಮುಂದೇನಿತ್ತು? ಅಂತ ಒಂದಽ ಎರಡಽ ಸಾವಿರ ಕೇಳಾಂವಾ. ಅದಕ್ಕೆಲ್ಲಾಕೂ ಜವಾಬ ಕೂಡಬೇಕಾದ್ರ ಮನಿಷ್ಯಾ ಹುಶ್ಯಾರ ಇರಬೇಕು.

ಇಲ್ಲಿದ್ರ ಅಂದಾಕರಾ ಬೆರಕಿ ಮಕ್ಕಳು ವಕೀಲರು. ಹಗರಕಽ ಒಯ್ದು ತೆಗ್ಗಿನ್ಯಾಗ ಹಾಕ್ತಾರು. ಸಾಕ್ಷಿದಾರನ ದಗದ ಬಲು ಬೆಂಡ್ಲ ದಗದ. ಸುಳ್ಳಿಂದು ಖರೇ ಹಾಂಗ ಹೇಳಬೇಕು. ಖರೇ ಇದ್ರೂ ಸುಳ್ಳು ಕಾಣ್ಣಾಂಗಿದ್ರ, ಅದನ್ನು ಹೇಳಬಾರದು. ಹಿಂಗ ಮಾಡಿದ್ರನ ರಾಮಣ್ಣಾ, ರಾಮಣ್ಣಾ ಅಂತ ಕರಕೊಂಡು ಹೋಗಿ ಗೋದಿರೊಟ್ಟಿ ಬಾಳೀಹಣ್ಣ ತಿನಸ್ತಾರ, ಇಲ್ದಿದ್ರ ಪುಂಡೀಪಲ್ಯಾ ತಂಗಳ ರೊಟ್ಟಿ ಸಿಗಬೇಕಾದ್ರ ಕಣ್ಣೀರ ಕಪಾಳಿಗೆ ಬರ್‍ತಾವ. ತಿಳಿತಽ, ನಟ್ಟ ಗಿಟ್ಟು ಎಲ್ಲಾಸುಳ್ಳು. ಸುಳ್ಳ ಸಾಕ್ಷೀ ನುಡೀಲಾಕ ಕಲೀಬೇಕು ಆಂದ್ರನಽ ನಾಕೊಪ್ಪತ್ತು ದೇವರು ಹೊಟ್ಟಿ ಸಾಗಸ್ತಾನ, ತೀಳೀತಽ.
*****