ಬೆಂಗ್ಳೂರಿನ ಡಾಲರ್‍ಸ ಕಾಲನಿಯಲ್ಲಿಯ ನನ್ನ ಅಗದೀ ಪೆಟ್ ಲಂಗೋಟಿ ದೋಸ್ತ “ಹುಬ್ಬಳ್ಳಿ ಸಾವ್ಕಾರ”ನ ಮನೆಗೆ ಹೋದಾಗ ಒಂದು ಬಲಂಡ ಭಾರೀ ವಿಚಿತ್ರ ಕಂಡು ದಂಗುದಕ್ಕಾದೆ. ಏನೆಂದರೆ ಅವರ ಬಿಲ್ಡಿಂಗಿನ ಮೇಲಿನ ಸಾವಿರ ಲೀಟರ ನೀರಿನ ಸಿಂಟ್ಯಾಕ್ಸಿಗೆ ಯಾವುದೋ ತಪ್ಲಾ ಹಾಕಿದ್ದರು. ನಾನು ವಕಾವಕಾ ಬಾಯ್ಬಿಟ್ಟು…..”ಇದೇನೋ ದೋಸ್ತಾ ?” ಅಂತ ಕೇಳಿದೆ.

ಆತ ಖುಶಿಯಿಂದ ಹೇಳಿದ-

“ಮಾರಾಯಾ….ನಾಳೆ ಬೆಳಿಗ್ಗೆದ್ರ ಉಗಾದಿ ಹಬ್ಬಾ. ನಾ ಸಣ್ಣಾವಿದ್ದಾಗ ಹುಬ್ಬಳ್ಯಾಗ ನಮ್ಮಜ್ಜ ಹಳೇ ಹಂಡೇಕ ಬೇವಿನ ತಪ್ಲಾ ಹಾಕಿ ಕುದಿಸಿ, ಸುಡುಸುಡೂ ಎಣ್ಣಿಮಜ್ಜನ ಮಾಡಿಸ್ತಿದ್ದಾ. ಆ ಗರಂ ನೀರು ಮನಿಮಂದೆಲ್ಲಾ ಎರಕೋತಿದ್ವಿ”

ನಾ ಕುತೂಹಲದಿಂದ ಕೇಳೀದೆ-
“ಮತ್ತ…. ಈಗೆಂಗ ಮಾಡೀದ್ಯೋ ಸರದಾರಾ?”
ಆತ ಮುಖ ಸಿಂಡ್ರೀಸಿ ಹೇಳಿದ-
“ನಾಳೆ ಯುಗಾದಿ ಹಬ್ಬಾ. ಈಗ ಈ ಮೆಟ್ರೋ ಸಿಟ್ಯಾಗ ಹಂಡೇನೂ ಇಲ್ಲಾ, ಬೇವಿನ ತಪ್ಲಾನೂ ಇಲ್ಲಾ. ನನ್ನ ಹೇಂತಿ ನನ್ನ ಹುಚ್ಚತನಕ್ಕ ಚೊಲೋ ಐಡಿಯಾ ಮಾಡೀದ್ಲು. ರಾಜ ಕಾಲುವೇದ ಚರಂಡಿ ನೀರಾಗ ನಿವ್ಳು ಬೆಳೆದ ಯಾವುದೋ ಬುಡರಸಿಂಗಿ ಹಳೇಕಸದ ತಪ್ಲಾ ತಂದು, ಅದನ್ನ ಬೇವಿನ ಟೊಂಗಿ ಅಂತ ತಿಳಿದು ವಾಟರ್ ಟ್ಯಾಂಕಿಗೆ ಕಟ್ಟೇ ಬಿಟ್ಲು. ನಮ್ಮ ಮಾಡೀ ಮ್ಯಾಲಿನ ಬಿಸಿನೀರಿನ ಗರಂ ಕೊಳವೀಲಿಂದ ಗರಂ ನೀರು ಬರತೈತಿ. ಅದು ನಮಗ ಆಟೋಮ್ಯಾಟಿಕ್ ಆಗಿ ಯುಗಾದಿ ಸ್ನಾನಾ ! ಎನಂತೀ ನನ್ನ ಹೇಂತೀ ಪವಾಡಾ?”

ಬೆಂಗ್ಳೂರಲ್ಲಿ ಯುಗಾದಿ ಹಬ್ಬದ ದಿನ ನನ್ನ ಹೇಂತಿ ಮಾಡಿದ್ದ ….ಕುದಿಸಿದ ಇಲಿ ಮರಿಯಂತಾ ಒಂದು ಗುಲಾಬ ಜಾಮೂನು ಬಕ್ಕರಿಸಿ ತಿನ್ನೂದ್ರಾಗ; ನನಗ ಹಳೇ ನೆನಪು ವಕ್ಕರಿಸಿ ಬಂತು ! ಕಣ್ಣೀರು ಚಿಮ್ಮಿತು!

ಆ ಕಾಲದ ದಿನಮಾನದಾಗ ಮನಿಮಂದಿಗೆಲ್ಲ ಮೊದ್ಲು ಕುಡಿಕಿ ತುಂಬ ತುಂಬಿದ್ದ ಕೊಬ್ರೀ ಎಣ್ಣೀ ಹಾಕಿ ಗಸಗಸಾ ತಿಕ್ಕಿ ಎಣಮಜನಾ ಮಾಡಸ್ತಿದ್ರು. ನಮ್ಮ ಓಣಿಯ ಆ ಬಲಂಡ ಬೇವಿನ ಮರದಿಂದ ತಂದ ತಪ್ಲಾ ಹಾಕಿ ನೀರಲ್ಲಿ ಕತಕತಾ ಕುದಿಸಿ, ಹಂಡೇನೀರು ಜಳಕಾ ಮಾಡತಿದ್ವಿ. ಆ ಕಾಲದ ತಪ್ಪೇಲಿ ಮಾಟದ ದಮ್ಮ ತಂಬಿಗಿ ತುಂಬ ಬಿಸಿನೀರು ತುಂಬಿ ನಮ್ಮ ಅವ್ವ ನಮ್ಮ ಮೈಮೇಲೆ ಬುದುಂಗಂತ ಸುರುವಿದಾಗ ನಾವು ಆ ಸುಡುನೀರು ತಾಳಲಾರದೇ ಮುಂಚೀಬಾಗಲಕ್ಕ ಕೇಳುವಂಗ ಚೀರತಿದ್ವಿ. ಅಷ್ಟರಲ್ಲಿ ಮತ್ತೊಂದು ತಂಬಿಗಿ ಅಡ್ರಾಸಿ ನಮ್ಮ ತಲಿಮ್ಯಾಲೆ ಬಿಸಿನೀರು ಬೀಳತಿತ್ತು. ಆ ಸುಡುಸುಡು ನೀರಿನ ಹೊಡತಕ್ಕ ನಮ್ಮ ಮೈ ಕುದಿಸಿದ ಬದ್ನೀಕಾಯಿ ಆಗತಿತ್ತು ! ನಮ್ಮ ನೀರೊಲಿಯಲ್ಲಿ ಧಣಾಧಣಾ ಉರಿಯುತ್ತಿದ್ದ ತೊಗರಿ ಕಟಿಗಿ ಉರಿ. ಹಂಡೇದಾಗ ಕತಕತಾ ನೀರು. ನಮ್ಮ ಬಚ್ಚಲ ಮನಿ ಮೂರ ಅಂಕಣ ದೊಡ್ಡದಿತ್ತು. ಅದರಾಗ ಎಲ್ಲಾ ಹುಡುಗೂರು-ಹುಪ್ಡಿ ಬರೇಬತ್ಲೇ ಸಾಲಾಗಿ ನಿಲ್ಲಿಸಿ ಸುರ್ರ ಅಂತ ಸುಡುನೀರು ಸುರೂತಿದ್ರು. ಏನ ಹೇಳ್ಲಿ ಆ ಮಜಾ !

ಹಾಂ….ಕೇಳ್ರಿ ಕತಿ. ಉಗಾದಿ ದಿವಸ ಬೆಳಿಗ್ಗೆದ್ದಕೂಡ್ಲೇ ರತ್ನಪಕ್ಷಿ ನೋಡಿದರೆ ಆ ವರ್ಷವಿಡೀ ಶುಭವೇ ಶುಭ. ಅದಕ್ಕ ನಾವೆಲ್ಲಾ ನಮ್ಮಜ್ಜನ ಕೂಡ ಎಂಜಲು ಮಾರಿವಳಗ ಹಳೇಹುಬ್ಬಳ್ಳಿ- ಜಂಗ್ಲೀಪ್ಯಾಟಿ- ಬಾಣಂತೀ ಕಟ್ಟಿ ದಾಟಿ ಬನ್ನೀ ಗಿಡದ ಹೊಲಕ್ಕ ಹೋಗತಿದ್ವಿ. ಅಲ್ಲಿ ರತ್ನಪಕ್ಷಿ ಕಂಡು ಕೈಮುಗುದು…..”ನಮ್ಮನ್ನ ಪಾಸು ಮಾಡು ತಾಯಿ….” ಅಂತಿದ್ವಿ. ಅದರಲ್ಲಿಯೂ ಒಂದು ಡೇಂಜರಸ್ ಪಾಯಿಂಟ್ ! ಆ ರತ್ನಪಕ್ಷಿ ನಮ್ಮ ಬಲಕ್ಕ ಕಂಡರೆ ನಾವು ಪಾಸು ! ಒಂದುವೇಳೆ ರತ್ನಪಕ್ಷಿ ನಮ್ಮ ಎಡಕ್ಕ ಕಂಡರೆ ಫೇಲು ! ಆ ನಮ್ಮ ಅಜ್ಜನೂ ಬ್ಹಾಳ ಸ್ಯಾಣ್ಯಾ ! ಆ ರತ್ನಪಕ್ಷಿ ಅಕಸ್ಮಾತ್ ನಮ್ಮ ಎಡಕ್ಕ ಕಂಡರೆ ಅದು ಅಪಶಕುನಾ ಅಂತ ಆತ ನಮ್ಮನ್ನು ಗರ್ರನೇ ತಿರುಗಿಸಿ ನಿಲ್ಲಿಸುತ್ತಿದ್ದ ! ಆಗ ಎಡಕ್ಕ ಇದ್ದ ರತ್ನಪಕ್ಷಿ ನಮ್ಮ ಬಲಕ್ಕ ಆಗುತ್ತಿತ್ತು ! ಆ ಭವಿಷ್ಯ ಎಂಥಾ ಅದ್ಭುತ ! ಆ ವರ್ಷ ನಾವು ಫೇಲಾದರೂ ನಮ್ಮ ಮಾಸ್ತರು ನಮ್ಮನ್ನು ಎತ್ತಿ ಮ್ಯಾಲೀನ ಈಯತ್ತಾಕ್ಕ ಒಗೀತಿದ್ರು ! ಆ ರತ್ನಪಕ್ಷಿಯ ಆಶೀರ್ವಾದಾ !!

ಯುಗಾದಿ ಸ್ನಾನ ಆದಮೇಲೆ ದೇವರ ಮನೆಯಲ್ಲಿ ನಮಗೆ ಆರತಿ ಮಾಡಿ, ಹಣೆಗೆ ಆರತಿಯ ಕಪ್ಪು ಹಚ್ಚುತ್ತಿದ್ದರು. ಆರತೀ ತಟ್ಟಿಯಲ್ಲಿ ನಾವು ಅವ್ವ ಕೊಟ್ಟ ಎರಡು ದುಡ್ಡು ಇಲ್ಲವೇ ಪಾವ್ಲಿ ಹಾಕಿ ಕೈಮುಗೀತಿದ್ವಿ. ಅತ್ಯಂತ ಭಾರೀ ಬಲಂಡ ಶ್ರೀಮಂತರ ಮನೆಯಲ್ಲಿ ಆರತೀ ತಾಟಿಗೆ ಮನೀ ಯಜಮಾನಾ ಇಡೀ ಒಂದು ಗಟ್ಟೀ ರೂಪಾಯಿ ಹಾಕಿ; ಸಂಜೆ ಚುಟ್ಟಾ ಸೇದಲು ಅದರಲ್ಲಿ ಎಂಟಾಣೆ ವಾಪಾಸು ಇಸಕೊಳ್ಳುತ್ತಿದ್ದ !

ಎಲ್ಲಕ್ಕಿಂತ ಮುಖ್ಯ ಆರತೀ ನಂತರ ಫರಾಳ. ಬೇವು-ಬೆಲ್ಲ ಮೊದಲು ಸೇವಿಸಲೇ ಬೇಕು. ನಾವು ಬೇವನ್ನು ಮೆಲ್ಲಕ ಬಾಜೂ ಒತ್ತಿ, ಬೆಲ್ಲಾ ಮಾತ್ರ ನೆಕ್ಕುತ್ತಿದ್ದೆವು. ನಂತರ ನಮ್ಮ ಗಂಗಾಳಕ್ಕ ಸ್ಯಾವಿಗಿ-ತುಪ್ಪ-ಕೆನಿಹಾಲು. ನಾವು ಗಂಗಾಳ ಎತ್ತಿ ಗಟಗಟಾ ಕುಡೀತಿದ್ವಿ. ಹಾಂಗ ಕುಡಿಯೂ ಮುಂದ ಸ್ಯಾವಿಗಿ ನಮ್ಮ ಅಂಗೈಗುಂಟ ಇಳದು ಮಣಕೈಗೆ ಬಂದ್ರೂ ನಮಗ ಖಬರು ಇರುತ್ತಿರಲಿಲ್ಲ. ಹಾಂಗಿತ್ತು ಆ ಹಸಿವಿಯ ಕಾಲಾ. ಅದರ ಆ ಸುಖಾ ಈಗಿನ ಕಾಲಕ್ಕ ಬಜಾರದಾಗಿನ ಸ್ಯಾವಿಗೀ ಚಮಚೇದ್ಲೆ ತಿನ್ನೂ ಜನಕ್ಕ ಹ್ಯಾಂಗ ತಿಳೀಬೇಕು. ಬೆಂಗ್ಳೂರಿಗೆ ನಾ ಚುನೇಕ ಬಂದಾಗ ಒಬ್ರ ಮನೀಗೆ ಹಬ್ಬಕ್ಕ ಇನ್ವಿಟೀಶನ್ ಪಡದು ಹೋಗಿದ್ದೆ. ನನ್ನ ಪ್ಲೇಟಿಗೆ ಅವ್ರು…. ಒಂದು ಥರಾ ಮುಸುರೀ ಅನ್ನ…. ನಂತ್ರ ಗೊಜ್ಜನ್ನ….. ಆನಂತ್ರ ಕಲಸನ್ನ ….ಅದರಮ್ಯಾಲೆ ಕಲಬೆರಕಿ ರಾಡಿ ಅನ್ನ…. ಹೀಗೆ ನಾಲ್ಕು ನಮೂನಿ ಅನ್ನಾ ಹಾಕಿ ತಿನಿಸಿ; ಕಡೇಪಡೇಕ ಒಂದು ತೆಳ್ಳನ್ನ ಸ್ಟೀಲ ಬಟ್ಟಲದಾಗ ಐದು ಗ್ರಾಮು ಸ್ಯಾವಿಗೀ ನೀಡಿ…. ಅದರಾಗ ಒಂದ ಚಮಚೆ ಇಟ್ಟು ಕೊಟ್ಟರು. ನನಗ ಎಷ್ಟ ಸಿಟ್ಟ ಬಂತಂದ್ರ ….ನಾನು ನೇರವಾಗಿ ಆ ಸ್ಟೀಲ ಬಟ್ಟಲವನ್ನೇ ಕಟಕಟ ತಿಂದುಬಿಟ್ಟೆ !!

ಮದ್ಯಾಣ ಖಡಕ್ಕ ಊಟ ! ಆ ಕಾಲದಲ್ಲಿ ಬಿಸೇ ಹೋಳಿಗೀ ಮೇಲೆ ನಮ್ಮಮ್ಮ ಒಂದು ಚಟಿಗೀ ತುಪ್ಪಾ ಸುರೂತಿದ್ಲು. ಆ ಕಾಲಕ್ಕ ಒಂದು ಫ್ಯಾಶನ್ನು ಇತ್ತು. ಹೋಳಿಗೆಯ ಮೇಲೆ ಮತ್ತೆ ಬೆಲ್ಲದ ಪಾಕ ಹಾಕಿ, ಕಲಿಸಿ ಹೊಡತಾ ಹೊಡೀತಿದ್ರು. ಬೀಗರ ಮನೆಯಲ್ಲಿ ತನ್ನ ತಾಟಿಗೆ ಕಡಿಮೆ ಹೋಳಿಗೆ ಹಾಕಿದಾಗ ಸಿಟ್ಟಿಗೆದ್ದ ಆ ಬೀಗೂತಿ ಅಲ್ಲಿಯೇ ಪದಾ ಕಟ್ಟಿ ಹಾಡಿದಳು……

“ಚೂರ ಹೋಳೀಗಿ ಸೂಜಿಲೆ ತುಪ್ಪಾ
ಸೂರು ಮಾಡ್ಯಾಳು ನಮ್ಮ ಬೀಗೂತೀ….
ಸವಣೂರತನಾ ಕೀರೂತಿ”……!!

ಆಗ ಕನ್ಯಾ ಕೊಡುವವರೂ ಆ ಮನೆಯ ಗೋದಿಯ ಚೀಲ, ಜ್ವಾಳದ ಚೀಲ ಎಣಿಸಿ, ಲೆಕ್ಕಾ ಹಾಕಿ ಕನ್ಯಾ ಕೊಡುತ್ತಿದ್ದರು. ಮಜಾ ಅಂದರೆ ಹೀಗೆ ಯಾರಾದರೂ ಹೆಣ್ಣಿನ ಕಡೆಯವರು ಮನೆತನ ನೋಡಲು ಬರುವವರಿದ್ದರೆ, ಅದರ ಹಿಂದಿನ ದಿನವೇ ಆಜೂಬಾಜೂ ಮನೆಯಲ್ಲಿದ್ದ ಕಾಳಿನ ಚೀಲಗಳನ್ನು ಹೊತ್ತು ತಂದು; ಮನೆಯ ಬಂಕದಲ್ಲಿ ಹಾಗೂ ಹೋಳಗಟ್ಟಿ ಮೇಲೆ ಒಟ್ಟಿಬಿಡುತ್ತಿದ್ದರು. ಆ ಕನ್ಯಾಮನೆಯ ಹುಚ್ಚಬೋಳೇ ಮಂದಿ ಆ ಚೀಲಗಳನ್ನು ಎಣಿಸಿ ಖುಶೀಲಿಂದ ಮುಳುಮುಳು ಉಗುಳು ನುಂಗಿ ಕನ್ಯಾ ಕೊಟ್ಟುಬಿಡುತ್ತಿದ್ದರು !

ಆಗ ಊಟವೇ ಬದುಕು…. ಊಟವೇ ಸುಖ…. ಊಟವೇ ಸರ್ವಸ್ವ ! ಉಗಾದಿ ಊಟ ಉಂಡು-ಉಂಡು ಸುಸ್ತು ಬಂದು ಉರುಳಿ ಬೀಳುವವರೆಗೂ ಸೀ ಊಟ. ಉಂಡು ತೇಕು ಹತ್ತಿದ ಮೇಲೆ ಒಂದು ಗಂಗಾಳ ಖಾರಬ್ಯಾಳಿ ಕುಡಿಯಲೇಬೇಕು.

ಹುಬ್ಬಳ್ಳಿಯಲ್ಲಿ ಉಗಾದಿಯಲ್ಲಿ ಇಡೀ ಹುಬ್ಬಳ್ಳಿ ಸಿದ್ಧಾರೂಢಮಠಕ್ಕೆ ಮುಖಮಾಡುತಿತ್ತು. ಅಲ್ಲಿ ಪಂಚಾಂಗ ಪೂಜೆ, ಪಂಚಾಂಗ ಪಠನ ನಡೆಯುತ್ತಿತ್ತು. ಸಿದ್ಧಾರೂಢಮಠದ ಕೈಲಾಸ ಮಂಟಪದಲ್ಲಿ ಪಂಚಾಂಗ ಪಠನ ನಡೆಯುತ್ತಿತ್ತು. ಆ ವರ್ಷದ ಮಳೆ-ಬೆಳೆ-ಮದುವಿ-ಮುಂಜಿ- ತೊಟ್ಲಾ ಬಟ್ಲಾ- ಸುಖಾ-ದುಃಖಾ- ಹೈ ನೈ…. ಪಂಚಾಂಗ ವಾಚನವನ್ನು ಊರ ಹಿರಿಯರೆಲ್ಲ ಮೈಯಲ್ಲಾ ಕಣ್ಣಾಗಿ ಕಿವಿಯಾಗಿ ಕೇಳುತ್ತಿದ್ದರು. ಆ ಪಂಚಾಂಗ ಪಠನದ ಮೇನ್‌ಪಾಯಿಂಟ್‌ಗಳು ಮರುದಿನ ಪೇಪರಿನಲ್ಲಿ ಚೌಕಾನೇದಲ್ಲಿ ಪ್ರಕಟವಾಗುತ್ತಿದ್ದವು !

ಹಾಂ…. ಒಂದು ಪಾಯಿಂಟ್ ಮರೆತರೆ ತಪ್ಪಾಗುತ್ತದೆ ! ಆ ಕಾಲಕ್ಕೆ ಹುಬ್ಬಳ್ಳಿಯಲ್ಲಿ ಬಹುತೇಕ ಉಗಾದಿ ಹಬ್ಬದಲ್ಲಿ ಅನೇಕರ ಮನೆಯಲ್ಲಿ ಎರಡು ತೊಟ್ಟಿಲಗಳು ತೂಗುತ್ತಿದ್ದವು. ಅದೇನು ಗೊತ್ತೇ….? ಒಂದು ತೊಟ್ಟಿಲದಲ್ಲಿ ಮಗಳು ಹಡೆದ ಚೊಚ್ಚಲ ಕೂಸು ಮಲಗಿರುತ್ತಿತ್ತು ! ಇನ್ನೊಂದು ತೊಟ್ಟಿಲದಲ್ಲಿ ಅವಳ ತಾಯಿ ಹಡೆದ ಎಂಟನೇ ಕೂಸು ಮಲಗಿಸುತ್ತಿದ್ದರು ! ತೊಟ್ಟಿಲು ತೊಟ್ಟಿಲುಗಳ ಸಂಗಮ…. ಹುಬ್ಬಳ್ಳಿಯೇ ಗಮಗಮ !!

ನಾನು ಮರೆತೇನೆಂದರೂ ಮರೆಯಲಾರದ ಹುಬ್ಬಳ್ಳಿ ಗರತಿಯರ ಜಾನಪದ ಹಾಡು…..

“ಬ್ಯಾಸೀಗಿ ದಿವಸಕ್ಕ ಬೇವೀನ ಮರತಂಪ….
ಭೀಮರತಿಯೆಂಬ ಹೊಳೆತಂಪ ಹಡೆದವ್ವ….
ನೀ ತಂಪ ನನ್ನ ತವರೀಗೆ…..” !

ಹೌದು…. ನಮ್ಮ ಇಡೀ ಓಣಿಗೆ ಆ ಬಲಂಡ ಬೇವಿನ ಮರವೇ ತಾಯಿ- ತಂದೆ- ಬಂಧು-ಬಳಗ ! ಎಂಥಾ ಸುಂದರ ಮರ ! ಪಂಚಮಿಯಲ್ಲಿ ಆ ಮರತುಂಬ ಜೋಕಾಲಿ ತೂಗುತ್ತಿದ್ದವು. ಕಾರಹುಣ್ಣಿಮೆಯಲ್ಲಿ ಆ ಮರದ ಕೆಳಗೆ ಕರಿ ಹರಿಯುತ್ತಿದ್ದರು. ಉಗಾದಿ ಹಬ್ಬದಲ್ಲಿ ಆ ಮರದ ಹೂವು- ಎಲೆಗಳನ್ನು ನಾವು ಬಿದ್ದೇವೆಂಬ ಭಯವಿಲ್ಲದೇ ಹರಿದು ಕೊಡುತ್ತಿದ್ದೆವು. ಅದರ ಕೋಟ್ಯಾನು ಕೋಟಿ ಬಿಳಿಹೂಗಳ ಸುವಾಸನಿ ಘಮ್ಮಂತ ನಮ್ಮ ಓಣಿ ತುಂಬುತ್ತಿತ್ತು. ಆ ಬೇವಿನ ಮರತುಂಬ ಹಿಂಡುಗಟ್ಟಲೇ ಗಿಳಿಗಳು ಬಂದು ರಸ ತುಂಬಿದ ಆ ಬೇವಿನ ಹಣ್ಣುಗಳನ್ನು ಚಪ್ಪರಿಸಿ ತಿಂದು ಹಾಡುತ್ತಿದ್ದವು. ಅಂಗಳಕ್ಕೆ ಬಿದ್ದ ಆ ಬೇವಿನ ಹಣ್ಣುಗಳನ್ನು ನಾವು ಹುಡುಗರು ಆರಿಸಿ ಚಾಕಲೇಟ ಸೀಪಿದಂತೆ ಸೀಪಿ ತಿನ್ನುತ್ತಿದ್ದೆವು. ಆದರೆ ಮೊನ್ನೆ ಉಗಾದಿ ಹಬ್ಬದ ದಿನ ಅದೇ ಬೇವಿನ ಮರಕ್ಕೆ ನನ್ನ ಮಮ್ಮಕ್ಕಳೊಂದಿಗೆ ಬೇವಿನ ತಪ್ಪಲು-ಹೂವು ತರಲು ನಾನು ಹೋಗಿದ್ದೆ. ನನ್ನ ಎದೆಗೆ ಒನಕೀಲಿಂದ ಹೊಡೆದಂತಾಯಿತು ! ಮನಸು ಭುಗುಲ್ಲೆಂದಿತು. ನೆಲ ಗರಗರ ತಿರುಗಿತು. ಆ ಬೇವಿನ ಮರದ ಜಾಗದಲ್ಲಿ ಬರೀ ಬಯಲೋ ಬಯಲು ….ಬಿಸಿಲೋ ಬಿಸಿಲು ! ಅಂಕಣ ಗಡುತರದ ಆ ಶೃಂಗಾರ ಮರದ ಜಾಗೆಯಲ್ಲಿ ಒಂದು ಸಿಮೆಂಟ ಕಾಂಕ್ರೀಟ ಬಿಲ್ಡಿಂಗು ನನ್ನನ್ನು ಅಣಕಿಸುತ್ತಿತ್ತು ! ನೋವು ತಾಳಲಾರದೇ ಮನೆಗೆ ಹೋಗಿ ಮಲಗಿದೆ!

ರಾತ್ರಿ ಕನಸಿನಲ್ಲಿ ಆ ಬೇವಿನ ಮರ ಕಾಣಿಸಿಕೊಂಡು ನನಗೆ ಹೇಳಿತು…..
“ಗೆಳಿಯಾ…. ನನ್ನ ಪ್ರೀತಿಯ ಮಕ್ಕಳು ನನ್ನನ್ನು ಕಡಿದುಬಿಟ್ಟರು….ಸುಟ್ಟುಬಿಟ್ಟರು …. ಮರೆತುಬಿಡು ನನ್ನನ್ನು……….”
*****