ಧಾರವಾಡದ ಅಶ್ವರತ್ನ

ಧಾರವಾಡದ ಅಶ್ವರತ್ನ

ಅರ್ಥಾತ್
ಟಾಂಗಾದ ಕುದರಿ

(ಸೆಟ್ಟಿರಿಗೆ ಧಾರವಾಡದಿಂದ ಹುಬ್ಬಳ್ಳಿಗೆ ಹೋಗಬೇಕಾಗಿತ್ತು. ತುಂಬ ಗಡಬಡಿಯ ಕೆಲಸ ಅವರಿಗೆ. ಉಗೆ ಬಂಡಿ ಬಿಡುವದಕ್ಕೆ ಸ್ವಲ್ಪವೇ ಅವಕಾಶ ಉಳಿದಿತ್ತು. ಬಾಡಿಗೆಗೆ ಒಂದು ಟಾಂಗಾ ಗೊತ್ತು ಮಾಡಿ ಸೆಟ್ಟರು ಅದರಲ್ಲಿ ಕುಳಿತರು. ಬೇಗ ಬೇಗ ಟಾಂಗಾ ಹೊಡೆಯೆಂದು ಅಡಿಗಡಿಗೆ ಅವಸರ ಪಡಿಸಲು ತೊಡಗಿದರು. ಟಾಂಗಾದವನು ಹಾಗೆ ಮಾಡದಿದ್ದುದರಿಂದ, ಸೆಟ್ಟರು ಕುದುರೆಗೇ ದೋಷಕೂಡಲಾರಂಭಿಸಿದರು. ಸೆಟ್ಟರ ಮಾತುಗಳನ್ನು ಕೇಳಿ ಟಾಂಗಾದವನು ಹೆಮ್ಮೆಯ ನುಡಿಗಳಲ್ಲಿ ಹೇಳಲಾರಂಭಿಸಿದ)

(ವಿ. ಸೂ. ಟಾಂಗಾದವನ ಭಾಷೆ ಉರ್ದು ಮಿಶ್ರಿತ ಕನ್ನಡವಿತ್ತು, ಆದರೆ ಸಂಪಾ ದಕರ ಮತ್ತು ವಾಚಕರ ಸೌಕರ್ಯಕ್ಕಾಗಿ ಆದನು ಕನ್ನಡದಲ್ಲಿಯೇ ಕೊಟ್ಟಿರುತ್ತದೆ.)

ಟಾಂಗಾದವ: ಏನು ಸೆಟ್ಟರಽ! ಹೆಂತಾ ಕುದುರಿಗೆ ಏನು ಹೆಸರ ಇಡತದೀರಿ….? ಇದು ಜತ್ತಿ ಪಂಡ್ರಾಪೂರ್‌ ಕಡೇದು ಕುದರಿ ಐತಿ !…ನಾ ನೋಡ್ರಿ…. ಟಾಂಗಾ ಮಾಡಿ ಮೂವತ್ತು ವರ್ಸ ಅದೂ. ಅದರ ಮೂವತ್ತ ವರ್ಸದಾಗ, ಒಂದೂ ಹಿಂತಾ ಕುದರೀನಽ ನೋಡಿಲ್ಲ….ಭಾಳ ಅಂದರ ಭಾಳ ಹುಶಾರಿ! ಹಿಂತಾ ಕುದರಿ ಲಕ್ಸದಾಗ ಒಂದು ಎಲ್ಯಾರೆ ಹುಟ್ಟಿರತೈತಿ!

ಸೆಟ್ಟರು: ಟಾಂಗಾ ನಿಂದರಿಸಿದ್ಯಾಕೊ? ಹೊಡಿಯಲಾ ಲಗೂನಽ!

ಟಾಂಗಾದವ: ಇಲ್ರೀ…. ಕುದರಿ ಲದ್ದೀಹಾಕಲಾಕ ನಿಂತೈತಿ…….? ಬಾಕಿ ಕುದರಿ ಹಾಂಗೆಲ್ಲಾ ಓಡೂಮುಂದ ಲದ್ದೀಹಾಕೂವದಿಲ್ಲ ಈ ಕುದರಿ…! ಓಣೆಗುಂಟಽ ಲದ್ದೀ ಹಾಕಲಾಕ ಇದೇನು ಕ್ವಾಣ ಏನ್ರಿ ಸೆಟ್ಟರ?

ಸೆಟ್ಟರು: ಕುಂಟತಽದೇನೋ ಸಾಬಾ ನಿನ್ನ ಕುದರಿ?

ಟಾಂಗಾದವ: ಹೌದರಿ….ಜರಾಽನಽ ಕುಂಟತೈತಿ ! ನೀವು ಒಳೇ ಹುಡಿಕಿ ಹಿಡದ್ರಿ ನೋಡ್ರಿ ಇದರ ಕುಂಟೂದನ್ನ! ಇಲ್ಲದಿರಕ, ಇದು ಬೆರಕೀ ಹೆಣ್ಣಜಾತಿ; ಟಾಂಗಾ ಫಾಸ ಆಗೂಮುಂದ ಒಳ್ಳೇ ಪೋಲೀಸ ಸಾಬನ ಕಣ್ಣೀಗೇ ಇಂಗ ಹಚ್ಚಿತು ನೋಡ್ರಿ!.. ಎರಡ ಹೆಜ್ಜೀ ಕುಂಟತೈತೋ ಇಲ್ಲೋ… ಮುಂದ ನಡಗೀ ನಡದ್ಹಾಂಗ ಮಾಡತೈತಿ! ಪೋಲೀಸಸಾಬ ಬಿಟ್ಟು ಅವನ ಕಾಕಾ ಬಂದರೂ ತಿಳಿಯೂ ಹಾಂಗಿಲ್ಲ…! ಹಿಂಗಾಲ ಎಡಗಾಲು ಕುಂಟ ಇದ್ದದ್ದು ನನಗಽ ಗೊತ್ತು. ಅದಕ್ಕಽ ಗೊತ್ತು! ಬಲ್ ಬೆರಕಿ ಅಂದರ ಬಲ್‌ಬೆರಕಿ…! ಕಾಲ ಕಟ್ಟಿ ಮೆಯ್ಯಲಾಕ ಬಿಟ್ಟಾಗ, ಹುಡಗೂರ ಕರದರ ಹತೀಲಿ ಬರತೈತಿ…. ಅದಽ ನನ್ನ ನೋಡಿದರ ಓಡೂದಽ ಮಾಡತೈತಿ! ಹಿಂತಾ ಬೆಂಡ್ಲ ಜಾತೀದು ಐತಿ…! ಹೂಡಲಿಕ್ಕೆ ಹತ್ತಿದಾಗ ಹೊಸದಾಗಂತೂ ಹುಡೂತಲೇನಽ ನೆಲಕ್ಕಽ ಕುಂಡ್ರೂದು ಮಾಡತಿತ್ತು..! ಕುಂತೈತೀ ಅಂತ ಬಿಚ್ಚಿ ಬಿಡೂತಲೇನಽ ಎದ್ದು ಓಡೇ ಓಡೂದು! ಹಿಂತಾ ಕುದುರೇನಽ ಸಿಗಾಕಿಲ್ಲ…! ನಾನೂ ಏನ ಹಾಂಗಽ ಬಿಡಲಿಲ್ಲ. ನಾಡಾಗಿಲ್ಲದ ಬೆರಕಿ ! ಇದಕ್ಕ ಒಂದ ಬೇತಾ ಮಾಡಿದೆ; ನಮ್ಮ ಅಂಗಳದಾಗೆ ಮಳೇ ನೀರು ನಿಂತಿದ್ದೂ: ಅಲ್ಲೆ ಟಾಂಗಾ ಹೂಡಿದೆ ಕುದರೀ ಹೊಟ್ಟಿಗೆ ಒಂದೆರಡು ಒಳ್ಳೇ ಸುಣ್ಣದ ಹಳ್ಳು ಕಟ್ಟಿದ್ದೆ. ಕುದರಿ ಕೂಂಡ್ರೂದಷ್ಟಽ ತಡಾನೋಡ್ರಿ, ಸುಣ್ಣದ ಹಳ್ಳು ನೀರಾಗ ತೊಯ್ದು ಕುದೀಲಾಕ ಹತ್ತಿದೂ; ಕುದರಿ ಜಿಗಿತು ಎದ್ದು ನಿಂತ್ಯು. ಅಂದಽ ಕಡೀದಿನಾ ನೋಡ್ರಿ. ಅಂದಿನಿಂದಽ ಕುಂಡ್ರೂದಽ ಬಿಟ್ಟು ಬಿಟ್ಟಿತು!

“ನೀವೆಲ್ಲಾ ಕಿತ್ತಿ ಓಡಿಸ ಅಂದೀ; ಕುದರಿ ಹ್ಯಾಂಗ ಓಡೀತು ಹೇಳ್ರಿ! ಮೊನ್ನೆ ಕಾಮನ ಕಟ್ಟ್ಯಾಗ ನನ್ನ ಟಾಂಗಾದ ಎದುರಿಗಿಂದನಽ ನಬೀಸಾಬನ ಟಾಂಗಾ ಭರದಾಂಡ್‌ ಜೋರಲೇ ಬರುತ್ತಿತ್ತು… ; ತರಬ್‌ ತರಬ್‌ ಅನ್ನೂದರಾಗಽ ಓಣೀ ಒಳಗ ಆಡೂ ಹುಡುಗನ ಕಾಲಮ್ಯಾಗಽ ಹಾಯ್ದು ಹೋತು….! ಅದನ್ನ ನೋಡಿದಾಗಿನಿಂದಽ ನಮ್ಮ ಕುದರಿ ಓಡೂದನ್ನಽ ಬಿಟ್ಟು ಬಿಟ್ಟೈತಿ…! ಮುದಿಕಿ ಆಗೈತಿ, ಹಾಂಗ್‌ ಐತಿ ಹಿಂಗ್‌ ಐತಿ… ಅಂತ ಪೊಜದಾರಸಾಬ ಬಯ್ಯಲಾಕ ಸುರೂ ಮಾಡಿದ್ದ-ಪಾಸ್‌ ಮಾಡೂ ಮುಂದ! ಆಗ ನಾ ಒಂದಽ ಮಾತ ಹೇಳಿದೆ; ರಾವಸಾಬ್‌ ನನ್ನ ಕುದರಿಗೀಗ ಹದಿನೆಂಟ ವರಸ ಆಗಿದಾವ್….; ಇದು ಕುದುರೀ ಇರೂಽ ದಽ ಹದಿನಂಟು ವರ್ಸದ ಹುಡಿಗಿ ಇತ್ತಂದರ ನಿಮಗ ಪಾಸ್‌ ಬೀಳುತ್ತಿತ್ತು…. ಪಾಪ, ಕುದರಿ ಮಾತ್ರ ನಾಪಾಸ್‌ ಯಾಕ?…. ನೋಡ್ರಿ ಸೆಟ್ಟರಽ ನಾ ಕರೇ ಹೇಳಿದರೂ ಕೇಳತೀರಿ ಸುಳ್ಳ ಹೇಳಿದರೂ ಕೇಳತೀರಿ…. ಹಿಂಗಽ ಅಂದು ಬಿಟ್ಟೆ. ನನ್ನ ಮಾತಿಗೆ ಪೊಜದಾರ್‌ಸಾಬ ನಗಲಾಕ ಹತ್ತಿದ… ಟಾಂಗಾ ಫಾಸ್‌ ಅಂದ…! ಹಿಂಗ್‌ ಐತಿ ಸೆಟ್ಟರ ಕುದರೀ ಮೋಜು! ಸುಮ್ಮನಽ ಇಲ್ಲ ಈ ಹುಡಿಗಿ….! ಇಬ್ಬರ ಫಾಸ್‌ ಐತಿ ನೋಡ್ರಿ ಈ ಟಾಂಗಾಕ….; ಅಪ್ಪಿ ತಪ್ಪಿ ಮೂರ ಮಂದಿ ಕುಂತರೂ ಪೋಲಿಸಗ ತಿಳೀಲಾಕಿಲ್ಲ; ಇದಕ್ಕೆ ತಿಳಿದು ಬಿಡತೈತಿ….! ಮೂರು ಮಂದಿ ಕುಂತರ ಮುಂದಕ್ಕ ಹೆಜ್ಜೀನಽ ಇಡೂದಿಲ್ಲ…! ಕುದರೀ ಶಾಣೇತನದಿಂದನಽ ನನ್ನ ಮ್ಯಾಲೆ ಇನ್ನೂ ಯಾವ ಪೋಲಿಸನೂ ಒಮ್ಯೂ ಕಟ್ಲೇನಽ ಹಾಕಿಲ್ಲ…! ಇಂಥಾದ ಐತಿ ನನ್ನ ಮಗಳು ಇದು!

“ನೋಡ್ರಿ ಟೇಸನ್‌ ಬಂತು ನೋಡ್ರಿ…! ಎಲೀ ಇವನ….! ಗಾಡೀ ಹೊಂಟೈತ್ಯಲಾ! ಅದಽ ಅಂತೀನಿ. ಈ ಗಾಡಿ ಹೋದರ ಹುಬ್ಬಳ್ಳಿಗೆ ಹೋಗಲಾಕ- ಇನ್ನೊಂದ್‌ ಅರ್ಧಾತಾಸಿನೊಳಗಽ ಇನ್ನೊಂದು ಗಾಡೀ ಐತೀ ಅಂತ ಗೊತ್ತು ನನ್ನ ಕುದರಿಗೆ….! ಸೆಟ್ಟರಽ ಸಾಮಾನು ಇಳಿಸಿಕೂಂಡರ್‍ಯಾ? (ಬಾಡಿಗೆ ತಕ್ಕೂಂಡ ಮೇಲೆ) ಸಲಾಂ ಸಾಬ್‌ ಸಲಾಂ ಸಾಬ್‌, ಚಲ್‌ ಬೇಟಿ ಚಲ್!”

(ಗಾಡಿ ತಪ್ಪಿದುದರಿಂದ ಸೆಟ್ಟರಿಗೆ ಸಾವಕಾಶವಾಗಿ ವಿಚಾರ ಮಾಡಲು ಅವಕಾಶ ದೊರೆಯಿತು. ಇಂಥಾ ಬುದ್ಧಿವಂತ ಕುದುರಿಯನ್ನು ಸಾಕಿದ್ದ ಟಾಂಗಾದವನಿಗೆ ಸೆಟ್ಟರು ಅನೇಕಾನೇಕ ಧನ್ಯವಾದಗಳನ್ನೂ ಕೊಟ್ಟರು. ಕಲಿಯುಗದಲ್ಲಿ ಯಾರಾದರೂ ಅಶ್ವಮೇಧ ಮಾಡಿದರೆ, ಇದೇ ಕುದುರೆಯನ್ನು ಅವರು ಒಯ್ದರೆ ಒಳ್ಳೆಯದೆಂದು ಮನಸ್ಸಿನಲ್ಲಿಯೇ ಅಂದು ಕೊಂಡರು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೈತನ್ಯ ಧಾಮ
Next post ನಾನಲ್ಲ ನೀನಲ್ಲ

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…