ಮ್ಯಾಕ್ಸಿಂ ಗಾರ್ಕಿಯವರ ‘ತಾಯಿ’ – ಒಂದು ಪ್ರತಿಕ್ರಿಯೆ

ಲಿಯೋಟಾಲ್ಸ್ ಟಾಯ್ಸ್ ಅವರನ್ನು The Mirror of the Russian revolution ಎಂದು ಕರೆಯುವ ವಾಡಿಕೆ ಇದೆ. ಇದಕ್ಕೆ ಪೋಷಕವಾಗಿ ಅವರ ಕೃತಿಗಳೂ ಇವೆ. ಇದೇ ಮಾತನ್ನು ‘ತಾಯಿ’ ಕಾದಂಬರಿಯ ಸಂದರ್ಭದಲ್ಲಿ ಮ್ಯಾಕ್ಸಿಂಗಾರ್ಕಿಯವರಿಗೂ ಅನ್ವಯಿಸಬಹುದಾಗಿದೆ. ಇದು ಒಂದೇ ಕೃತಿಯ ಸಂದರ್ಭದಲ್ಲಿ ಪೂರ್ಣವಲ್ಲದಿದ್ದರೂ ಬಹುತೇಕ ಸತ್ಯವೇ ಆಗಿದೆ.

ಪ್ರಸ್ತುತ ಕೃತಿ ೧೯೧೭ರಲ್ಲಿ ಘಟಿಸಿದ ರಷ್ಯಾ ಕ್ರಾಂತಿಗೆ ಪೂರ್ವಭಾವಿಯಾದ ಕ್ರಾಂತಿಕಾರಿ ಚಟುವಟಿಕೆಗಳ ಒಂದು ಜಗತ್ತನ್ನು, ತನ್ನ ಅನೇಕ ವಿವರ ಮತ್ತು ಸೂಕ್ಷ್ಮಗಳೊಂದಿಗೆ ಕಟ್ಟಿಕೊಡುತ್ತದೆ. ಈ ಕ್ರಿಯೆಯಲ್ಲಿ ದೊಡ್ಡ ಕ್ರಾಂತಿಗೆ ಪೋಷಕವಾಗಿ ಉದಾತ್ತ ವ್ಯಕ್ತಿಗಳಂತೆಯೇ ಸಾಮಾನ್ಯ ಪಾತ್ರಗಳು ಸಹ ಅಸಾಮಾನ್ಯವಾದ ರೀತಿಯಲ್ಲಿ ದುಡಿದ ಬಗೆಯನ್ನು ವಿವರಿಸುವಂತಹ ಅನೇಕ ಒಳನೋಟಗಳನ್ನು ಸಹ ಕೃತಿ ನೀಡುತ್ತದೆ.

ಹೀಗೆ ರಷ್ಯಾ ಕ್ರಾಂತಿಯ ವಸ್ತು ಸ್ವರೂಪವನ್ನು ವಿವರಿಸುವ ಈ ಕೃತಿ ಕೇವಲ ಚರಿತ್ರೆಯ ಪಠ್ಯವಾಗಿ ಉಳಿಯುವುದಿಲ್ಲ. ತನ್ನ ಅನನ್ಯತೆಯ ಕಾರಣದಿಂದ ಒಂದು ನಿರ್ದಿಷ್ಟ ಕಾಲ ಮತ್ತು ದೇಶವನ್ನು ಮೀರಿ ಬೆಳೆಯುವತ್ತ ನಮ್ಮ ಇವತ್ತಿನ ಅನೇಕ ಪ್ರಗತಿಪರ ಚಿಂತನೆ-ಹೋರಾಟಗಳಿಗೂ ಪರೋಕ್ಷವಾಗಿ ಮುಖಾಮುಖಿಯಾಗುತ್ತದೆ. ಈ ಬಗೆಯ ಅನುಸಂಧಾನದಿಂದಲೇ ಸಮಕಾಲೀನ ಸಂದರ್ಭದ ಓದುವಿಕೆಗೂ ಅರ್ಹವಾಗುವ ಈ ಕೃತಿ ಭಾಷಾತೀತ ನೆಲೆಗೂ ಏರಿ ನಿಲ್ಲುತ್ತದೆ. ಈ ನೆಲೆಯಲ್ಲಿ ಇದು ರಷ್ಯಾ ಕ್ರಾಂತಿಗೆ ಒಡ್ಡಿದ ಕನ್ನಡಿಯಾಗದೆ ಪ್ರತಿಮೆಯಾಗಿ ನಿಂತಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾದ್ದಿಲ್ಲ ಅನ್ನಿಸುತ್ತದೆ.

ಪ್ರಸ್ತುತ ಕೃತಿಗೆ ವಿಶಿಷ್ಟ ತಂತ್ರ ವಿನ್ಯಾಸ ಇದೆ. ಇದರ ಕೇಂದ್ರ ಪಾತ್ರ ಮತ್ತು ಕೃತಿಯ ಎಲ್ಲಾ ವಿವರ, ಘಟನೆಗಳ ಚಲನೆಯ ಸಾಕ್ಷೀ ಪ್ರಜ್ಞೆ ಪೆಲಗೇಯ ನೀಲೊವ್ನ ಆಗಿದ್ದಾಳೆ. ಈಕೆಯೇ ಇಲ್ಲಿಯ ‘ತಾಯಿ’ ಪಾತ್ರವಾಗಿರುವುದು. ಇವಳ ಕಣ್ಣಿಗೆ ಕಾಣುವ ಜಗತ್ತು ಮಾತ್ರ ಇಲ್ಲಿಯ ಕಾದಂಬರಿಯಾಗಿದೆ. ಇದರಲ್ಲಿ ತಾನೊಂದು ಪಾತ್ರವೂ ಹೌದು.
ಹೀಗೆ ಇಲ್ಲಿಯ ಮುಖ್ಯ ಪಾತ್ರ ನೀಲೋವ್ನಳು ಒಂದು ಪಾತ್ರವಾಗಿ, ಕೃತಿಯ ಕಣ್ಣೋಟವಾಗಿ ತನ್ನ ಆಸ್ತಿತ್ವವನ್ನು ತೋರ್ಪಡಿಸುತ್ತಾಳೆ.

ರಷ್ಯಾ ಕ್ರಾಂತಿ ಸಂಭವಿಸಿದ್ದು ೧೯೧೭ರಲ್ಲಿ. ಇದಕ್ಕೆ ಅನೇಕ ವರ್ಷಗಳ ಹೋರಾಟದ ಇತಿಹಾಸವಿದೆ. ಇದರಲ್ಲಿ ಕಾರ್ಮಿಕರು ಮತ್ತು ರೈತರೇ ಪ್ರಮುಖ ಪಾತ್ರಗಳಾಗಿ ಕಾಣುತ್ತಾರೆ. ಶ್ರಮವೇ ಇವರ ಉಸಿರಾಗಿದೆ. ಬಿಸಿಯುಸಿರೇ ಇವರ ಪ್ರತಿಫಲವಾಗಿದೆ. ಇವರ ಈ ಬಗೆಯ ಶೋಚನೀಯತೆಗೆ ವಿರುದ್ಧ ದಿಕ್ಕಿನಲ್ಲಿ ಬೆವರಿನಿಂದ ದೂರವುಳಿದ ಕೆಲವೇ ಜನರ ಒಂದು ವರ್ಗ ಐಷಾರಾಮ ಜೀವನವನ್ನು ನಡೆಸುತ್ತಿದೆ. ಇವರ ಜೀವನದ ಮುಖ್ಯ ದ್ರವ್ಯ ಜಾಣತನದ ಬುದ್ಧಿ. ಆದ್ದರಿಂದಲೇ ಇವರ ಬದುಕು ಬೆವರಿನಿಂದ ದೂರ ಮತ್ತು ಬೆವರಿನಲ್ಲಿ ಬದುಕನ್ನು ಕಳೆಯುತ್ತಿರುವ ದೊಡ್ಡ ಜನವರ್ಗವಾದ ಶ್ರಮಿಕರಿಂದ ಸಹ ದೂರ. ಇವರ ವಕ್ತಾರರಾಗಿ ಜ್ಸಾರ್ ದೊರೆಗಳು, ಬಂಡವಾಳಶಾಹಿಗಳು, ಭೂಮಾಲೀಕರು, ಬೂರ್ಜ್ವಾ ಅಧಿಕಾರಶಾಹಿಗಳು ಕಾಣಿಸುತ್ತಾರೆ. ಇವರ ವಿರುದ್ಧ ಮತ್ತು ಅಸಂಖ್ಯ ಶೋಷಿತರ ಪರವಾದ ನೆಲೆಯಲ್ಲಿ ಹುಟ್ಟಿಕೊಳ್ಳುವ ವರ್ಗ ಸಂಘರ್ಷ ಅಷ್ಟು ಸುಲಭದ್ದಲ್ಲ. ಇದಕ್ಕೆ ಕಾಲವೂ ಬೇಕು. ಅಗತ್ಯ ಶಿಕ್ಷಣವೂ ಬೇಕು. ಈ ಬಗೆಯ ಶಿಕ್ಷಣವು ಶಾಲಾ-ಕಾಲೇಜುಗಳ ಮೂಲಕ ದೊರೆಯುವ ಔಪಚಾರಿಕ ಶಿಕ್ಷಣವೇ ಆಗಬೇಕಾದ್ದಿಲ್ಲ. ಭಾಷಣ, ಗುಂಪು ಚರ್ಚೆ, ಕರಪತ್ರಗಳ ಮೂಲಕ ಸಿಗುವ ಅರಿವು-ಈ ಮೊದಲಾದ ರೂಪಗಳಲ್ಲಿಯೂ ಇರಬಹುದು. ಇದು ಅನಕ್ಷರತೆ ಹೆಚ್ಚು ಇರುವ ಎಡೆಗಳಲ್ಲಿ ಹೆಚ್ಚು ಯೋಗ್ಯ.

ಹೀಗೆ ಅಪೇಕ್ಷಣೀಯ ಕ್ರಾಂತಿಗೆ ಪೂರ್ವಭಾವಿಯಾಗಿ ನಿರೀಕ್ಷಿತ ಬೌದ್ಧಿಕ ಸಿದ್ಧತೆ ಬೇಕು. ಇದು ಈ ಕೃತಿಯ ಬಹುಮುಖ್ಯ ನೆಲೆ. ಇಂತಹ ನೆಲೆಯಲ್ಲಿಯೇ ಅನಕ್ಷರಸ್ಥಳೂ ಸಾಮಾನ್ಯ ಗೃಹಸ್ಥೆಯೂ ಆಗಿದ್ದ ‘ತಾಯಿ’ ಒಬ್ಬ ಕ್ರಾಂತಿಕಾರಿಣಿಯಾಗಿ ಬೆಳೆದು ನಿಲ್ಲಲು ಸಾಧ್ಯವಾಗಿದ್ದು. ತಾನು ಗತಿಸಿದ ಕೆಲವೇ ವರ್ಷಗಳಲ್ಲಿ ತನ್ನ ನಿರೀಕ್ಷೆಯ ಕ್ರಾಂತಿ ಸಾಫಲ್ಯವು ಆಗಿದ್ದು. ಇಲ್ಲಿ ಬಸವಣ್ಣನ ನೇತೃತ್ವದಲ್ಲಿ ನಡೆದ ಕ್ರಾಂತಿಯ ಪ್ರಯತ್ನ ಮತ್ತು ಅದರ ಸಾಫಲ್ಯ-ವೈಫಲ್ಯಗಳು ನೆನಪಾಗುತ್ತವೆ. ಇದು ಸಹಜ.
ಪ್ರಸ್ತುತ ಕೃತಿ ಪ್ರಖರ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದೆ. ಹಾಗೆಂದು, ತಾನು ಎಲ್ಲೂ ಇದಕ್ಕೆ ಸಂಬಂಧಿಸಿದ ಭಾಷಣಗಳನ್ನು ಬಿಗಿಯುವುದಿಲ್ಲ. ಆದರೆ ಅದರ ತಾತ್ವಿಕತೆ ಸಹೃದಯರಲ್ಲಿ ವಿದ್ಯುತ್ಪ್ರವಾಹವಾಗಿ ಹರಿಯುವಲ್ಲಿ ಯಶಸ್ಸನ್ನು ಕಂಡಿದೆ. ಇದು ಈ ಕೃತಿಯ ಕಲಾತ್ಮಕತೆಯ ಗೆಲುವು.

ಇದಕ್ಕೆ ಪೋಷಕವಾಗಿ ಮಾತ್ರ ಕೃತಿಯ ಒಂದೆಡೆಯಲ್ಲಿ ನ್ಯಾಯಾಲಯದ ಕಟಕಟೆಯಲ್ಲಿ ನ್ಯಾಯಾಧಿಶರ ಎದುರಿನಲ್ಲಿ ‘ತಾಯಿ’ಯ ಮಗ ಪಾವೆಲ್ ಅಡುವ ಮಾತುಗಳ ಗುಚ್ಫವು ಕಾಣಿಸುತ್ತದೆ. ಇದು ಮೇಲ್ನೋಟಕ್ಕೆ ಭಾಷಣವೇ ಆಗಿ ಕಂಡರೂ ವಾಸ್ತವದಲ್ಲಿ ನ್ಯಾಯಾಧಿಶರ ಎದುರಿನಲ್ಲಿ ಆಡಲೇಬೇಕಾದ ಅನಿವಾರ್ಯ ಮಾತುಗಳಾಗಿ ಕೇಳಿಬರುತ್ತವೆ. ಇದರ ಮೂಲಕವಾಗಿ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳಿಗೆ ಗ್ರಾಸವಾದ ವರ್ಗ ಅಸಮಾನತೆಯ ವ್ಯವಸ್ಥೆಯನ್ನು ಬಿಂಬಿಸುವ ಪ್ರಯತ್ನವನ್ನು ಈ ಪಾತ್ರ ಮಾಡುತ್ತದೆ. ಇದನ್ನು ಹೊರತು ಪಡಿಸಿದಂತೆ ವ್ಯವಸ್ಥೆಯನ್ನು ಕುರಿತ ಈ ಬಗೆಯ ದೀರ್ಘ ವ್ಯಾಖ್ಯಾನ ಕೃತಿಯಲ್ಲಿ ಬೇರೆಲ್ಲಿಯೂ ಬರುವುದಿಲ್ಲ. ಈ ಬಗೆಯ ಅರಿವು ಕೃತಿಯ ಸಂರಚನೆಯನ್ನು ನಿರ್ಮಿಸುತ್ತಾ ಸಾಗುವ ವಿವಿಧ ಪಾತ್ರಗಳ ನುಡಿಗಳಿಗಿಂತಲೂ ಅವುಗಳ ನಡೆಗಳಿಂದಲೇ ನಮಗೆ ದಕ್ಕುತ್ತಾ ಹೋಗುತ್ತದೆ. ಈ ಬಗೆಯ ಕಲಾತ್ಮಕತೆ ಮತ್ತು ಮನುಷ್ಯಪರ ತಾತ್ವಿಕತೆ ಈ ಕೃತಿಯ ದ್ರವ್ಯವಾಗಿರುವುದರಿಂದಲೇ ನಿಜ ಮನುಷ್ಯರೆಲ್ಲರಿಗೂ ಇದು ಇಂದಿಗೂ ಆಪ್ಯಾಯಮಾನವಾಗಿರುವುದು.

ಮ್ಯಾಕ್ಸಿಂ ಗಾರ್ಕಿಯವರ ಈ ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಿ ಕನ್ನಡ ಸಂಸ್ಕೃತಿಯನ್ನು ಎತ್ತರಿಸುವ ಕಾರ್ಯವನ್ನು ಮಾಡಿದವರು ಕನ್ನಡದ ತೀವ್ರ ಎಡಪಂಥೀಯ ಚಿಂತಕರಾದ

ಶ್ರೀ ನಿರಂಜನ ಅವರು. ಈ ಮೂಲಕವಾಗಿಯೂ ಅವರ ಬದ್ಧತೆಯ ಜಗತ್ತು ನಮಗೆ ಪರಿಚಯವಾಗುತ್ತದೆ. ಇಂತಹ ಬದ್ಧತೆಯನ್ನು ಅವರು ಜಗತ್ತಿನ ಇನ್ನೂ ಅನೇಕ ಭಾಷೆಗಳ ಸಣ್ಣ ಕತೆಗಳ ಅನುವಾದದ ಮೂಲಕವೂ ಪ್ರಕಟಿಸಿದ್ದಾರೆ. ಅಂತಹ ಕತೆಗಳಲ್ಲಿ ಅನುವಾದವು ಬಹಳಷ್ಟು ಹಿತಕರವಾಗಿದೆ. ಆದರೆ ಈ ಬಗೆಯ ಅನುವಾದ ಇಲ್ಲಿ ಕೆಲವೆಡೆ ಮಾತ್ರ ಅಷ್ಟು ಹಿತವಾಗಿ ಮೂಡಿಲ್ಲ ಎಂಬುದು ನನ್ನ ಅನುಭವದ ಗ್ರಹಿಕೆ. ಇದು ಅತ್ಯಂತ ಸಣ್ಣ ಮಿತಿ. ಇದನ್ನು ಮರೆತು ಓದಿದಾಗ ಕೃತಿ ನಿಜಕ್ಕೂ ಕನ್ನಡದ್ದೇ ಎಂಬಷ್ಟು ಸೋಪಜ್ಞವಾಗಿ ಬೆಳೆದು ನಿಲ್ಲುತ್ತದೆ.
*****
ಜನವಾಹಿನಿ, ೨೪-೦೬-೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲವು ಸರಿಯುತಿದೆ
Next post ಒಂಟಿ ದನಿ

ಸಣ್ಣ ಕತೆ

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

cheap jordans|wholesale air max|wholesale jordans|wholesale jewelry|wholesale jerseys