ಗಾಯಗೊಂಡ ಗೋಡೆಗಳೇ ಕಾಳುಬೀಳು ಗೂಡೆಗಳೇ
ಒಡೆದ ಮಡಕೆ ಹರಿದ ತಡಿಕೆ ತುಂಬಿನಿಂತ ನಾಡುಗಳೇ
ನಮ್ಮೊಳಗಿನ ಕರುಳ ಮಾತು ಮುಟ್ಟದಿಲ್ಲಿ ಮಂದಿಗೆ
ಬಾಯಾರಿಕೆ ನೋವಿನುರಿ ತಟ್ಟದಿಲ್ಲಿ ನೀರಿಗೆ
ತಿನ್ನುವನ್ನ ನಂಬುತಿಲ್ಲ ಅಪನಂಬಿಕೆ ಅಗುಳು
ತಟ್ಟೆಗಂತು ಹೊಟ್ಟೆ ತುಂಬ ಅವಮಾನದ ಸಿಡಿಲು
ಬಾಯಲಿಟ್ಟ ತುತ್ತೆಮಗೆ ಕುತ್ತಾಯಿತು ನೋಡಿ
ಮಾತಾಡಿರಿ ಇನ್ನಾದರು ಕಟ್ಟು ಕಳಚಿ ನಿಲ್ಲಿರಿ
ನಮ್ಮ ಮೂಳೆ ಪುಡಿಯ ಕಾಂತಿ ಹೊತ್ತು ಹೊಳೆವ ಮುಖಗಳು
ಬೇಡವಾದ ಗಳಿಗೆಯಲ್ಲೆ ಕೆಂಗಣ್ಣಿನ ನಖಗಳು
ನಮ್ಮ ನಗುವ ಮುಖದ ಮರೆಗೆ ಮಚ್ಚಿನೇಟಿನೊಳಗುದಿ
ಹೆಜ್ಜೆಯಿಟ್ಟ ಸಜ್ಜೆಮನೆಯ ಹೂವು ಉರಿದು ಬೂದಿ.
ಮೌನದಲ್ಲಿ ಕೊಲ್ಲಬೇಡಿ ಕರುಣೆ ನಮಗೆ ಬೇಡ
ಲೆಕ್ಕಬುಕ್ಕು ಬೆಳ್ಳಿಕೋಳ ಅಂಕಗಣಿತ ಬೇಡ
ಜೇಡಜಾಲ ಕೊಡವಿ ನಿಲ್ಲಿ ಹೊಸತು ಮಾತು ಮಸೆಯಿರಿ
ಜೀವಗಾಳಿ ಗೆಳೆಯರಾಗಿ ಮೆದುಳು ಮನಸು ಬೆಸೆಯಿರಿ.
*****