ಕಾಲವು ಸರಿಯುತಿದೆ ಗೆಳೆಯಾ
ಮೇಲಕೆ ಏಳೋ ಎಚ್ಚರ ತಾಳೋ
ಕಾಲ ಮೀರುವ ಮುನ್ನ ಕಾಲನ ಮೀರಿಸೊ || ಪ ||
ನೆಲದಲಿ ಹಾವು ಜಲದಲಿ ಮೀನು
ಅರಿಯದ ಪರಿಯಲಿ ಸರಿಯುವ ರೀತಿ
ಹನಿಹನಿ ರಕುತದಿ ದೇಹದಿ ಹರಿಯುತೆ
ಎಳೆ ಎಳೆ ಉಸಿರಲಿ ಎದೆಯಲಿ ಮಿಡಿದು || ೧ ||
ಸೂರ್ಯನು ಮೂಡುವ ಮುಳುಗುವ ನಿಲ್ಲದೆ
ದಿನ ಮಾನಗಳು ಕೇಳದೆ ಸಾಗಿವೆ
ಋತುಮಾನಗಳಲಿ ವರುಷ ವರುಷದಲಿ
ನಿಲ್ಲದೆ ಓಡಿದೆ ಕಾಲನ ಗಾಲಿ || ೨ ||
ಹುಟ್ಟಿ ಬೆಳೆದು ಬರಿ ತಿನ್ನುತ ಮಲಗುತ
ಕಾಲ ಚಕ್ರದಡಿ ಹೊರಳುವಿ ಏಕೆ
ಸತ್ತು ಹೋಗುವೀ ಕಾಲನ ಮೀರಲು
ಸತ್ಯವ ಸಾಧಿಸೋ ಸತ್ವವ ಮೆರೆಸೋ || ೩ ||
*****