ಪಟೇಲರ ಆಸನ ಪ್ರಕರಣ…….

ಪಟೇಲರ ಆಸನ ಪ್ರಕರಣ…….

ಪಟೇಲನ ಆಸನತಳಿರು ತೋರಣಗಳಿಂದ ಸಿಂಗರಿಸಿ, ಅಂಗಳಗಳು ಸೆಗಣಿ ಸಾರಿಸಿಕೊಂಡು, ರಂಗೋಲಿ ಇಕ್ಕಿಸಿಕೊಂಡದ್ದಕ್ಕೆ ಸಾಯಲು ಸಿದ್ಧವಾಗಿದ್ದ ಊರಿಗೆ ಕಾಯಕಲ್ಪ ಬಂದಂತಾಗಿತ್ತು. ವರ್ಷಕೊಮ್ಮೆ ಜಾತ್ರೆಗೆ ಊರಿಗೆ ಯೌವನ ಪ್ರಾಪ್ತವಾಗುತ್ತದೆಯಾದರೂ ಅದು ಇತ್ತೀಚಿಗೆ ತನ್ನ ಆಕರ್ಷಣೆ ಕಳೆದುಕೊಂಡಿತ್ತು. ದೇವಸ್ಥಾನದ ಆಸ್ತಿಯನ್ನೆಲ್ಲಾ ಜನರು ನುಂಗಿ ನೀರು ಕುಡಿದು ಜಾತ್ರೆಯನ್ನು ಕಾಟಾಚಾರಕ್ಕೆ ಹೇಗೆ ಹೇಗೋ ನಡೆಸಿಕೊಂಡು ಹೋಗುತ್ತಿದ್ದರು. ಮೊದಲಾದರೆ ಅದು ಎರಡು ವಾರಗಳ ಭರ್ಜರಿ ಜಾತ್ರೆ. ಪ್ರತಿದಿನ ಎಲ್ಲರಿಗೂ ಊಟದ ವ್ಯವಸ್ಥೆ. ಈಗ ಎರಡನೇ ದಿನದಲ್ಲಿ ಎಲ್ಲಾ ಮುಗಿದು ಹೋಗುತ್ತದೆ. ಒಂದು ದಿನ ದರ್ಶನದ ಬಲಿ. ಅಂದೇ ರಥೋತ್ಸವ. ಮರುದಿನ ದೇವರ ಪಟ್ಟಣ ಸವಾರಿ ಮತ್ತು ಜಳಕ. ಹಾಗೇ ಜಳಕವಾಗಿ ಗುಡು ಸೇರಿದ ದೇವರು ಮತ್ತೆ ಹೊರಬರುವುದು ಮತ್ತಿನ ವರ್ಷದ ಜಾತ್ರೆಯಂದೇ.

ದೇವರು ಜಾತ್ರೆ ತನ್ನ ಆಕರ್ಷಣೆ ಕಳಕೊಂಡದಕ್ಕೆ ಅನೇಕ ಕಾರಣಗಳಿದ್ದವು. ದೇವರ ಜಾಗ ನುಂಗಿ ನೀರ್ಕುಡಿದವರನ್ನು ದೇವರು ಏನೂ ಮಾಡಲಾಗದ್ದನ್ನು ಕಂಡು ಕೆಲವು ಧೈರ್ಯಶಾಲಿಗಳು ಜಾತ್ರೆ ಅಡ್ಕವನ್ನು ಸ್ವಲ್ಪ ಸ್ವಲ್ಪವೇ ಆಕ್ರಮಣ ಮಾಡಿ ಜಾತ್ರೆಗೆ ಬರುತ್ತಿದ್ದ ಮರದ ಕುದುರೆ, ತೊಟ್ಟಿಲು, ಬೈಸಿಕಲ್ಲು ಮತ್ತು ಬೈಕು ಸಾಹಸದ ಮರಣ ಗುಂಡಿ, ಹಾವಿನ ಶರೀರದ ಎರಡು ತಲೆಯ ಹುಡುಗಿ, ನಾಯಿ ಸರ್ಕಸ್, ವಿನೋದಕ್ಕೆ ಹೆಸರಾದ ಪನ್ನಾಲಾಲ್ ಎಂಬ ಕತ್ತೆ ಪ್ರದರ್ಶನ, ಮುಟ್ಟಿದರೆ ಶಾಕ್ ಹೊಡೆಯುವ ಹುಡುಗಿ, ಜಲಕನ್ನಿಕೆ ಇತ್ಯಾದಿಗಳ ಪ್ರದರ್ಶನಕ್ಕೆ ಜಾಗವೇ ದೊರೆಯದೆ ಹೋಯಿತು. ಜಾತ್ರೆ ಎಂದರೆ ನಾಲ್ಕು ಬಳೆ ಅಂಗಡಿ, ನಾಲ್ಕು ಸೋಜಿ, ಕಲ್ತಪ್ಪದಂಗಡಿ, ಪಡ್ಡಿನ ತುದಿಯಲ್ಲಿ ಜುಗಾರಿ ಯಾಟ ಎಂಬ ಮಟ್ಟಕ್ಕೆ ಇಳಿದಾಗ ರಾತ್ರೆ ಇಡೀ ಜಾತ್ರೆ ಆಡ್ಕದ ರಷ್ಷಲ್ಲಿ ಅತ್ತಿಂದಿತ್ತ ಇತ್ತಿಂದಲ್ಲಿ ಸಂಚರಿಸುತ್ತಾ ಚಳಿಯಲ್ಲಿ ಆಸಕ್ತಿ ಕೊಳಕೊಂಡರು. ವೈವಿಧ್ಯವೇ ಇಲ್ಲದ ಜಾತ್ರೆ ಯಿಂದಾಗಿ ಬೇಸರಗೊಂಡವು.

ಜಾತ್ರೆಗೆ ಹೊಸ ಆಕರ್ಷಣೆ ಮೂಡಿಸುವುದು ಹೇಗೆ ಎಂದು ದೇವಾಲಯದ ಧಮದರ್ಶಿಗಳು ಅನುದಿನ ಚಿಂತಿಸಿ ಒಂದು ತೀರ್ಮಾನಕ್ಕೆ ಬಂದರು. ಈ ಬಾರಿಯ ಜಾತ್ರೆಗೆ ಪರಮ ಪೂಜ್ಯಶ್ರೀ ಪಾದಂಗಳವರನ್ನು ಕರೆಸಿ ಅವರ ಸಾಮೂಹಿಕ ಪಾದ ಪೂಜೆ ಮಾಡಿಸಿ, ಅವರಿಂದ ಆಶೀರ್ವಚನ ಕೊಡಿಸಿದರೆ ವಾತಾವರಣ ಬದಲಾಗ ಬಹುದೆಂದು ತೀರ್ಮಾನಿಸಿದರು. ಇನ್ನು ತಡವೇಕೆಂದು ಪರಮ ಪೂಜ್ಯ ಶ್ರೀ ಪಾದಂಗಳವರಲ್ಲಿಗೆ ಹೋಗಿ ಅವರಿಗೆ ಉದ್ದಕ್ಕೆ ಅಡ್ಡಬಿದ್ದು ಜಾತ್ರೋತ್ಸವಕ್ಕೆ ಆಗಮಿಸಿ, ಊರನ್ನು ಹರಸಿ ಮಳೆ ಬೆಳೆ ಭೋಗ ಭಾಗ್ಯಕ್ಕೆ ಕಾರಣರಾಗಬೇಕೆಂದು ಕೇಳಿದ್ದರು.

ಪರಮ ಪೂಜ್ಯ ಶ್ರೀ ಪಾದಂಗಳು ಗಿಂಡಿಮಾಣಿಗಳನ್ನು ಓಡಿಸಿ ಪರ್ಸನಲ್ ಅಸಿಸ್ಟೆಂಟ್ ನ್ನು ಕರೆಸಿ ಡೈರಿ ನೋಡಿಸಿ, ಅಂದು ಯಾವುದೇ ಫಿಕ್ಸ್ ಆದ  ಕಾರ್ಯಕ್ರಮ ಇಲ್ಲವೆಂಬುದನ್ನು ಖಚಿತಪಡಿಸಿ ಅನುಗ್ರಹ ಭಾಷಣಕ್ಕೆ ಬರುವುದಾಗಿ ಒಪ್ಪಿಕೊಂಡರು. ಶ್ರೀ ಪಾದಂಗಳ ಒಪ್ಪಿಗೆಯಿಂದ ಪುಳಕಿತರಾಗಿ ಮತ್ತೊಮ್ಮೆ ಉದ್ದಕ್ಕೆ ಅಡ್ಡಬಿದ್ದ ಧರ್ಮ ದರ್ಶಿಗಳು ಮೇಲಕ್ಕೇಳುವಾಗ ಗಡಿಬಿಡಿಯಲ್ಲಿ ಶ್ರೀ ಪಾದಂಗಳ ಕೈಗೆ ತಲೆಯನ್ನು ಬಲವಾಗಿ ತಾಗಿಸಿದ್ದಕ್ಕೆ ನೋವಾಗಿ ಇಬ್ಬರ ಬಾಯಿಯಿಂದಲೂ ’ರಾಮ ರಾಮ; ಎಂಬ ಉದ್ಗಾರ ಹೊರಟಿತು. ಧರ್ಮದರ್ಶಿಗಳು ಪೆಚ್ಚು ಮೋರೆ ಹಾಕಿ ನೋವಾದ ತಲೆಯ ಭಾಗವನ್ನು ತಿಕ್ಕಿಕೊಂಡಿರೆ, ಗಿಂಡಿ ಮಾಣಿಗಳು ಶ್ರೀ ಪಾದಂಗಳ ಮೊಣಕೈಯನ್ನು ನೀವಿದರು. ಶ್ರೀ ಪಾದಂಗಳನ್ನು ಸಂತೃಪ್ತವದನರನ್ನಾಗಿ ಮಾಡುವುದು ಹೇಗೆಂದು ತಿಳಿಯದೆ ಧರ್ಮದರ್ಶಿಗಳು ಪರ್ಸನಲ್ ಅಸಿಸ್ಟೆಂಟರ ಮುಖ ನೋಡಿದರು, ಪರ್ಸನಲ್ ಅಸಿಸ್ಟಾಂಟರ ಕೈ ಸನ್ನೆ ಅರ್ಥವಾಗಿ ಜೇಬಿನಿಂದ ೧೧೦೧ ರೂಪಾಯಿ ತೆಗೆದು ಶ್ರೀಪಾದಂಗಳವರ ಪಾದದ ಮೇಲಿಟ್ಟು ಮತ್ತೊಮ್ಮೆ ಉದ್ದಕ್ಕೆ ಅಡ್ಡಬಿದ್ದರು. ಈ ಬಾರಿ ಮೇಲಕ್ಕೇಳುವಾಗ ಶ್ರೀ ಪಾದಂಗಳ ಯಾವುದೇ ಭಾಗಕ್ಕೆ ತನ್ನ ತಲೆ ಘಟ್ಟಿಸದಂತೆ ನೋಡಿಕೊಂಡರು.

ಸಂತೃಪ್ತವದನರಾದ ಶ್ರೀಪಾದಂಗಳು ಧರ್ಮದರ್ಶಿಗಳಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು. ಅವನ್ನು ಸ್ವೀಕರಿಸಿ ಧರ್ಮದರ್ಶಿಗಳು ಮತ್ತೊಂದು ಬಾರಿ ಶ್ರೀ ಪಾದರಿಗೆ ಉದ್ದಕ್ಕೆ ಅಡ್ಡಬಿದ್ದರು. ಈ ತೆರನಾದ ಪದೇ ಪದೇ ಅಡ್ಡ ಬೀಳುವಿಕೆ ಯಿಂದ ಬಳಲಿದ್ದ ಧರ್ಮದರ್ಶಿಗಳಿಗೆ ಈ ಬಾರಿ ಸರಾಗವಾಗಿ ಮೇಲೇಳಲು ಅವರ ಗುಡಾಣ ಹೊಟ್ಟೆ ಅಡ್ಡಿಯಾಯಿತು. ಧರ್ಮದರ್ಶಿಗಳು ಮೇಲೇಳದ್ದನ್ನು ಕಂಡು ಜತಿಗೆ ಬಂದವರು ಗಾಬರಿಯಾಗಿ ಏನು ಮಾಡಬೇಕೆಂದು ತಿಳಿಯದ ಶ್ರೀ ಪಾದಂಗಳ ಮುಖ ನೋಡಿದರು. ಶ್ರೀ ಪಾದಂಗಳು ಗಿಂಡಿಮಾಣಿಗಳಿಗೆ ಕೈ ಸನ್ನೆ ಮಾಡಿದರು. ಗಿಂಡಿಮಾಣಿಗಳು ಧರ್ಮದರ್ಶಿಗಳ ಎರಡೂ ಕೈಗಳನ್ನು ಹಿಡಿದು ನಿಧಾನವಾಗಿ ಮೇಲೆತ್ತಿದರು.

ಧರ್ಮದರ್ಶಿಗಳ ಮುಖ ನೋಡಿ ಶ್ರೀ ಪಾದಂಗಳು. “ಇಲ್ಲಿಗೆ ಬಂದು ಪಾದನಮಸ್ಕಾರ ಮಾಡುವುದನ್ನು ದಿನಾ ಅಭ್ಯಾಸ ಮಾಡಿದರೆ ನಿಮ್ಮ ಹೊಟ್ಟೆಗೂ ಒಳ್ಳೆದು. ಸರಿ ಹೋಗಿಬನ್ನಿ. ಶ್ರೀ ಮನ್ನಾರಾಯಣನ ಅನುಗ್ರಹವಿರಲಿ.” ಎಂದಿದ್ದಕ್ಕೆ ವಿನೀತರಾದ ಧರ್ಮದರ್ಶಿಗಳು ಹೊರಡುವ ಮುನ್ನ ಇನ್ನೊಂದು ಬಾರಿ ಪಾದ ನಮಸ್ಕಾರ ಮಾಡಬೇಕೇ ಬೇಡವೇ ಎಂಬ ಸಂದಿಗ್ಧದಲ್ಲಿ ತೊಳಲಿದರು. ಮತ್ತೊಮ್ಮೆ ಗಿಂಡಿಮಾಣಿಗಳಿಂದ ಎಬ್ಬಿಸಿಕೊಳ್ಳ ಬೇಕಾದ ದೈನೇಸಿ ಸ್ಥಿತಿ ಬೇಡವೆಂದು ಹಾಗೆ ತಲಿಬಾಗಿ ವಂದಿಸಿ ಹೊರಬಂದುಬಿಟ್ಟರು.

ಶ್ರೀ ಪಾದಂಗಳು ಉರಜಾತ್ರೆಗೆ ಬರುವ ವಿಷಯ ತಿಳಿದು ಜನರೆಲ್ಲ ಸಂಭ್ರಮ ದಿಂದ ರೋಮಾಂಚನಗೊಂಡರು. ಶ್ರೀ ಪಾದಂಗಳ ಪಾದಧೂಳಿಯಿಂದ ಊರಿನ ಸಂಚಿತ ಪಾಪಕರ್ಮ ಫಲವೆಲ್ಲಾ ನಿವಾರಣೆಯಾಗಿ ಸಮೃದ್ಧಿ ಉಂಟಾಗುತ್ತದೆಂದು ಹಿಗ್ಗಿದರು. ಧರ್ಮದರ್ಶಿಗಳು ಪಟೇಲರಿಗೆ ವಿಷಯ ತಿಳಿಸಿದಾಗ ಅವರು “ಅದೆಲ್ಲಾ ಹೌದು. ಸ್ವಾಮೀಜಿ ಆಶೀರ್ವಚನ ಮಾಡುವುದು ಎಂದಾದರೆ ಒಂದು ಸಭೆ ಏರ್ಪಡಿಸಬೇಕು. ಸಭೆ ಎಂದರೆ ಅದಕ್ಕೊಬ್ಬ ಅಧ್ಯಕ್ಷ ಆಗಬೇಕು. ಅಧ್ಯಕ್ಷ ಎಂದರೆ ಊರಪಟೇಲನಾದ ನಾನೇ ಆಗಬೇಕಾಗುತ್ತದೆ. ಹೈದೋ ಅಲ್ಲವೋ ” ಎಂದು ಧರ್ಮದರ್ಶಿಗಳನ್ನು ಸಂದಿಗ್ಧದಲ್ಲಿ ಸಿಲುಕಿಸಿದರು. ಪಟೇಲರೆಂದದ್ದಕ್ಕೆ ಇಲ್ಲವೆಂದರೆ ಜಾತ್ರೆ ಕೆಟ್ಟುಬಿಡುತ್ತದೆಂದು ಧರ್ಮದರ್ಶಿಗಳು “ಹೌದು” ಎಂದು ಬಿಟ್ಟರು.

ಪಟೇಲರು ಗಹಗಹಿಸಿ ನಗುತ್ತಾ “ಅಂದ ಮೇಲೆ ನೀವೀಗ ಒಂದು ಆಮಂತ್ರಣ ಪತ್ರಿಕೆ ಮಾಡಬೇಕು. ಆಮಂತ್ರಣ ಪತ್ರಿಕೆ ಮಾಡಿ ಊರಲ್ಲಿ ಹಂಚಬೇಕು. ಯಾವುದೇ ಸಭೆಯಲ್ಲಿ ಅಧ್ಯಕ್ಷನೇ ದೊಡ್ಡವನು ಎಂದ ಮೇಲೆ ನೀವು ನನ್ನ ಹೆಸರನ್ನು ಶ್ರೀಪಾದಂಗಳ ಹೆಸರಿಗಿಂತ ಮೇಲೆ ಹಾಕಬೇಕು. ಹೌದೋ ಅಲ್ಲವೋ?” ಎಂದು ಧರ್ಮದರ್ಶಿ ಗಳನ್ನು ಮತ್ತೊಮ್ಮೆ ಇಕ್ಕಟ್ಟಿನಲ್ಲಿ ಸಿಲುಕಿಸಿದರು.

ಈ ಬಾರಿ ಧರ್ಮದರ್ಶಿಗಳು ಮೊದಲಿನಷ್ಟು ಸರಾಗವಾಗಿ ಉತ್ತರಿಸಲಿಲ್ಲ. ತಾತ್ಕಾಲಿಕ ನುಣುಚಿಕೊಳ್ಳದಿದ್ದರೆ ಅಪಾಯ ತಪ್ಪಿದಲ್ಲ ಎನ್ನುವುದು ಅವರಿಗೆ ಖಾತ್ರಿಯಾಯಿತು. “ಅದೆಲ್ಲಾ ಮಾಡುವ ಪಟೇಲರೆ, ಈಗ ನಿಮ್ಮ ಮುಂದಾಳುತನದಲ್ಲಿ ಗಡದ್ದು ಜಾತ್ರೆ ನಡೆಯಬೇಕಲ್ಲಾ? ಹೇಗೆ? ನಭೂತೋ ನ ಭವಿಷ್ಯತಿ ಎಂಬ ಹಾಗೆ. ಊರಿಗೆ ಮತ್ತೆ ಮೊದಲಿನ ಕಳೆ ಬರಬೇಕು. ಶ್ರೀ ಪಾದಂಗಳು ಈ ಊರಿಗೆ ಬರುವುದು ಇದೇ ಮೊದಲು. ಊರಿನ ಮರ್ಯಾದೆ ಕಾಪಾಡುವ ಹೊಣೆ ನಿಮ್ಮದು.” ಎಂದದ್ದಕ್ಕೆ ಪಟೇಲರು “ಹಹ್ಹ……ಹೊಹ್ಹೊ.. ಅದಕ್ಕೇ ಅಲ್ಲವೇ ನಾವಿರುವುದು. ನೀವೇನೂ ಹೆದರಿಕೊಳ್ಳಬೇಡಿ.” ಎಂದರು.

ಧರ್ಮದರ್ಶಿಗಳು ದೇವಾಲಯಕ್ಕೆ ಬಂದವರೇ ಉಳಿದ ಟ್ರಸ್ಟಿಗಳನ್ನು ಬರಮಾಡಿಕೊಂಡರು. ಅವರಿಗೆ ಪಟೇಲರ ವಿಷಯ ತಿಳಿಸಿ “ಶ್ರೀ ಪಾದಂಗಳು ದೊಡ್ಡವರೋ ಪಟೇಲರೋ? ಅದು ಗೊತ್ತಿದ್ದೂ ಈ ಪಟೇಲರು ಅಧ್ಯಕ್ಷರ ಹೆಸರನ್ನೇ ಮೇಲೆ ಹಾಕಬೇಕು ಎನ್ನುತ್ತಿದ್ದಾರಲ್ಲಾ? ಇದು ಯಾವ ಸೀಮೆ ನ್ಯಾಯ? ಇಷ್ಟಾಗಿಯೂ ಪಟೇಲರು ಊರಿನವರು. ಅವರಿಗೆ ಮರ್ಯಾದೆ ಸ್ವಲ್ಪ ಕಡಿಮೆ ಯಾದರೂ ಹೇಗಾದರೂ ಹೊಂದಿಕೊಂಡು ಹೋಗಬೇಕಪ್ಪಾ. ಅದು ಬಿಟ್ಟು ಇವರೇ ಇವರ ಹೆಸರನ್ನು ಶ್ರೀ ಪಾದಂಗಳ ಹೆಸರಿಗಿಂತ ಮೇಲೆ ಹಾಕಬೇಕೆಂದರೆ ಹೇಗೆ?” ಎಂದು ತಮ್ಮ ತೋಳಲಾಟವನ್ನು ಹೇಳಿಕೊಂಡರು.

ಅದಕ್ಕೆ ಟ್ರಸ್ಟಿಗಳೊಬ್ಬರು “ಆ ಪಟೇಲನದ್ದು ಅತಿಯಾಯಿತು. ಎಲ್ಲಾ ಕಡೆಗಳಲ್ಲಿ ಅವನಿಗೆ ಒಬ್ಬನಿಗೇ ಹೆಚ್ಚು ಮರ್ಯಾದೆ ಸಿಗಬೇಕೆಂದು ಬಯಸುತ್ತಾನೆ. ಮೂರ್ಖ. ಆದರೆ ಅವನಿಗೆ ಮರ್ಯಾದೆ ಸಿಗದಿದ್ದರೆ ಜಾತ್ರೆಯನ್ನೇ ಕೆಡಿಸಿಬಿಡುತ್ತಾನೆ. ಅವನ ಹೊಟ್ಟೆ ಬೆಳೆದಷ್ಟು ತಲೆ ಬೆಳಿಯುತ್ತಿದ್ದರೆ ಹೀಗಾಗುತ್ತಿರಲಿಲ್ಲ.” ಎಂದರು. ಹೊಟ್ಟೆಯ ಬಗ್ಗೆ ಪ್ರಸ್ತಾವನೆ ಬಂದದ್ದು ಗುಡಾಣ ಹೊಟ್ಟೆಯ ಧರ್ಮದರ್ಶಿಗಳಿಗೆ ಇಷ್ಟವಾಗಲಿಲ್ಲ. “ಈಗ ನೀವು ಬೇರೇನೂ ಮಾತಾಡಿ ಪ್ರಯೋಜನವಿಲ್ಲ. ಪರಿಹಾರವಿದ್ದರೆ ಸೂಚಿಸಿ.” ಎಂದರು.

ಸುಮಾರು ಮೂರು ಗಂಟೆಗಳ ಕಾಲ ವಿಚಾರ ವಿನಿಮಯ ನಡೆದು ಊರಲ್ಲಿ ವಿತರಣೆ ಮಾಡಲಿಕ್ಕೊಂದು, ಹೀಗೆ ಎರಡು ಬಗೆಯ ಆಮಂತ್ರಣ ಪತ್ರಿಕೆ ಮಾಡುವುದೆಂದೂ, ಊರಲ್ಲಿ ವಿತರಿಸುವ ಆಮಂತ್ರಣ ಪತ್ರಿಕೆಯಲ್ಲಿ ಸಭಾಧ್ಯಕ್ಷ ಪಟೇಲರ ಹೆಸರನ್ನು ಶ್ರೀಪಾದಂಗಳ ಹೆಸರಿಗಿಂತ ಮೇಲೆ ಹಾಕುವುದೆಂದೂ, ಹೊರಗಡೆ ವಿತರಿಸುವ ಆಮಂತ್ರಣ ಪತ್ರಿಕೆಯಲ್ಲಿ ಸಭಾಧ್ಯಕ್ಷರ ಹೆಸರನ್ನು ಶ್ರೀಪಾದಂಗಳ ಹೆಸರಿಗಿಂತ ಕೆಳಗೆ ಹಾಕಿಸುವುದೆಂದೂ ತೀರ್ಮಾನಿಸಲಾಯಿತು. ಎಲ್ಲವೂ ನಿರ್ವಿಘ್ನವಾಗಿ ಸಾಗಿ ಊರಿಗೆ ಊರೇ ಸಿಂಗಾರಗೊಂಡು ಶ್ರೀಪಾದಂಗಳ ಪಾದಧೂಳಿಗೆ ಕಾದು ನಿಂತಿತು.

ಕೊನೆಗೂ ಶ್ರೀಪಾದಂಗಳು ಭವ್ಯವಾದ ಹಡಗಿನಂತಾ ಕಾರಿನಲ್ಲಿ ಊರಿಗೆ ಬಂದಿಳಿದರು. ಅವರು ಕಾರಿನಿಂದ ಇಳಿಯುವಾಗ ಪಾದನಮಸ್ಕಾರ ಮಾಡುವವರನ್ನು ನಿಯಂತ್ರಿಸುವುದು ಪೋಲೀಸರಿಗೂ ಕಷ್ಟವಾಯಿತು. ಸ್ತ್ರೀಪುರುಷ, ಮಕ್ಕಳು ಮರಿಗಳು, ಯುವಕರು ಮುದುಕರು ಎಂದು ವ್ಯತ್ಯಾಸವೇ ಇಲ್ಲದೆ ಜನ ಪಾದ ನಮಸ್ಕಾರ ಮಾಡಲು ಮುನ್ನುಗ್ಗುತ್ತಿದ್ದದನ್ನು ಕಂಡು ಇದಕ್ಕೆ ಅಂತ್ಯ ತರುವುದು ಹೇಗೆಂದು ಧರ್ಮದರ್ಶಿಗಳು ಚಿಂತಾಕ್ರಾಂತ ರಾದರು. ಕೊನೆಗೂ ತಮ್ಮ ತಲೆ ಓಡಿಸಿ ಸಭಾವೇದಿಕೆಯ ಮೈಕಿನತ್ತ ಧಾವಿಸಿ “ಈಗ ಯಾರೂ ಪಾದ ನಮಸ್ಕಾರ ಮಾಡಕೂಡದು. ಸಾಮೂಹಿಕ ಪಾದಪೂಜೆಯ ಬಳಿಕ ಪಾದ ನಮಸ್ಕಾರಕ್ಕೆ ಅವಕಾಶವಿದೆ. ಪಾದಪೂಜೆಗೆ ಮೊದಲು ಪಾದ ನಮಸ್ಕಾರ ಮಾಡಿದರೆ ಅದರಿಂದ್ ಯಾವುದೇ ಫಲಪ್ರಾಪ್ತಿಯಾಗುವುದಿಲ್ಲ.” ಎಂದು ಹೇಳಿಬಿಟ್ಟರು. ತಕ್ಷಣ ಶಾಕ್ ಹೊಡೆಸಿಕೊಂಡವರಂತೆ ಜನ ಶ್ರೀ ಪಾದರಗಳಿಂದ ದೂರ ಸರಿದರು. ಶ್ರೀ ಪಾದಂಗಳು ನಿಧಾನವಾಗಿ ವೇದಿಕೆಯತ್ತ ಬರತೊಡಗಿದರು.

ಶ್ರೀಪಾದಂಗಳಿಗೆಂದೇ ವೇದಿಕೆಯ ಬಲಬದಿಯಲ್ಲಿ ಭವ್ಯವಾದ ಸಿಂಹಾಸನ ಹಾಕಿದ್ದರು. ಅದರ ಮೇಲೆ ಕೃಷ್ಣಾಜಿನ ಹಾಕಿ ಪಾರಿಜಾತದ ಹೂ ಚೆಲ್ಲಿದರು. ಅದರಲ್ಲಿ ಶ್ರೀಪಾದಂಗಳು ವಿರಾಜಮಾನರಾದಾಗ ಅವರಿಗೆ ತುಲಸಿಮಾಲೆ ಹಾಕಿ ಫಲ ಅರ್ಪಿಸಿ ಧರ್ಮದರ್ಶಿಗಳು ತಲೆ ಬಾಗಿ ವಂದಿಸಿದರು. ಪಾದ ನಮಸ್ಕಾರ ಮಾಡಿ ಮತ್ತೆ ಗಿಂಡಿಮಾಣಿ ಗಳಿಂದ ಎಬ್ಬಿಸಿಕೊಳ್ಳುವ ಫಜೀತಿ ಬೇಡವೆಂದು ಅವರ ವಿವೇಕ ಎಚ್ಚರಿಸಿತ್ತು. “ಹ್ಞುಂ ಇನ್ನು ಸಭೆ ಶುರುವಾಗಲಿ” ಎಂದು ಶ್ರೀಪಾದಂಗಳು ಆಜ್ಙೆ ಯಿತ್ತರು. ಧರ್ಮದರ್ಶಿಗಳು ಮೈಕಿನ ಬಳಿಗೆ ಹೋಗಿ “ಊರ ಪಟೇಲರು ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಿರ್ವಹಿಸಿ ಕೊಂಡು ಹೋಗಲು ವೇದಿಕೆಗೆ ಬರಬೇಕು” ಎಂದು ಉದ್ಘೋಷಿಸಿದರು.

ವೇದಿಕೆ ಎದುರಲ್ಲೇ ಕೂತಿದ್ದ ಪಟೇಲರು ಏನನ್ನೋ ಸಿಟ್ಟಿನಿಂದ ಹೇಳುವುದು ಕೆಲವರು ಅವರನ್ನು ಸಮಾಧಾನ ಮಾಡಲೆತ್ನಿಸುವುದು ಧರ್ಮದರ್ಶಿಗಳು ಕಿರಿಕಿರಿಯಿಂದ ಗಮನಿಸಿದರು. ಕೊನೆಗೆ ತಾವೇ ಕೆಳಗಿಳಿದು ಹೋದರು.” ನಾನು ಮೊದಲೇ ಹೇಳಿದ್ದೇನೆ. ಒಂದು ಸಭೆ ಯಲ್ಲಿ ಎಲ್ಲರಿಗಿಂತ ಮೇಲು ಅಧ್ಯಕ್ಷರು. ಆದರೆ ನೀವು ಇಲ್ಲಿ ಏನು ಮಾಡಿದ್ದೀರಿ? ಶ್ರೀ ಪಾದಂಗಳಿಗೆ ಅಧ್ಯಕ್ಷರಿಗಿಂತ ಮೇಲಿನ ಆಸನ ನೀಡಿದಿರಿ. ಅಂದಮೇಲೆ ನಾನ್ಯಾಕೆ ವೆದಿಕೆಗೆ ಬರಬೇಕು? ಎತ್ತರದ ಸ್ವರದಲ್ಲಿ ಪಟೇಲರು ಹೇಳಿದ್ದು  ಶ್ರೀಪಾದಂಗಳ ಕಿವಿಗೂ ಬಿದ್ದು ಪರಿಸ್ಥಿತಿ ಅವರಿಗೆ ಅರ್ಥವಾಯಿತು.

ಶ್ರೇಪಾದಂಗಳು ಧರ್ಮದರ್ಶಿಗಳನ್ನು ಕರೆದು ಏನನ್ನೋ ಹೇಳಿದರು. ಧರ್ಮದರ್ಶಿಗಳು ಸಭೆಯ ಎದುರು ಸಾಲಿನ ಐದು ಪ್ಲಾಸ್ಟಿಕ್ ಚೇರುಗಳನ್ನು ವೇದಿಕೆಗೆ ತಂದು ಒಂದರಮೇಲೆ ಒಂದು ಸೇರಿಸಿಟ್ಟರು. ಧ್ವನಿ ವರ್ಧಕದತ್ತ ಹೋಗಿ “ಯಾವುದೇ ಸಭೆಯಲ್ಲಿ ಅಧ್ಯಕ್ಷನೇ ಎಲ್ಲರಿಗಿಂತ ಮೇಲೆ. ಹಾಗಾಗಿ ಸಭಾಧ್ಯಕ್ಷ ಪಟೇಲರಿಗೆ ಎಲ್ಲರಿ ಗಿಂತ ಎತ್ತರದ ಆಸನ ವ್ಯವಸ್ಥ ಮಾಡಿದ್ದೇವೆ. ಇನ್ನವರು ವೇದಿಕೆಗೆ ಬಂದು ಸಭಾಧ್ಯಕ್ಷತೆ ವಹಿಸಿ ಸಸೂತ್ರವಾಗಿ ಸಭೆ ನಡಸಿಕೊಂಡು ಹೋಗಬೇಕು.”

ಸಂತೃಪ್ತವದನ ಪಟೇಲರು ಬೀಗುತ್ತಾ ವೇದಿಕೆಯತ್ತ ನಡೆದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ಯಾಂಕ್
Next post ಮಿಂಚುಳ್ಳಿ ಬೆಳಕಿಂಡಿ – ೧೦

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…