ಅತ್ಮದ ಪಿಸುದನಿಯಿಲ್ಲದ `ಭಿತ್ತಿ’: ಕೆಲವು ಟಿಪ್ಪಣಿಗಳು

`ಭಿತ್ತಿ’ ಭೈರಪ್ಪನವರ ಆತ್ಮವೃತ್ತಾಂತ. ಇಂದಿನ ದಿನಗಳಲ್ಲಿ ಚರ್ಚೆಯಾಗುತ್ತಿರುವ ಲಂಕೇಶರ `ಹುಳಿಮಾವಿನ ಮರ’ವೂ ಸೇರಿದಂತೆ, ಕನ್ನಡದಲ್ಲಿ ಸಾಕಷ್ಟು ಆತ್ಮಚರಿತ್ರೆಗಳು ಬಂದಿವೆ. ಆತ್ಮಚರಿತ್ರೆಯನ್ನು ಇವೊತ್ತು ಒಂದು ಸಾಹಿತ್ಯ ಪ್ರಕಾರವಾಗಿ ಓದುತ್ತಿದ್ದೇವಾದ್ದರಿಂದ, ಅದು ಹೇಗಿರಬೇಕು ಎಂಬುದರ ಕಲ್ಪನೆ ಸ್ಪಷ್ಟಗೊಳ್ಳುತ್ತಿದೆ. ಆತ್ಮಚರಿತ್ರೆ ಅಂದರೆ ದಾಖಲೆಗಳ ವಿವರ ಮಾತ್ರವಾಗದೆ, ವ್ಯಕ್ತಿಯ `ಹೊರಮುಖ’ (ಸಮಾಜಿಕ ವ್ಯಕ್ತಿತ್ವ) ಮತ್ತು `ಒಳಮುಖ’ಗಳು ಮಿಳಿತವಾಗಿ ಅವನಲ್ಲಿ ಸಂವೇದನೆಯನ್ನುಂಟುಮಾಡಿದ ಅನುಭವ, ಕಲ್ಪನೆ, ಕಾಣ್ಕೆ ಎಲ್ಲವೂ ಸೇರಿರುತ್ತವೆ.

ಇಷ್ಟಲ್ಲಾ ಆದರೂ; ನನಗೆ `ಆತ್ಮಶೋಧನೆ’, `ಆತ್ಮಕಥೆ’- ಈ ಪದಗಳ ಬಗ್ಗೆ ಒಲವು ಉಂಟಾಗುವುದಿಲ್ಲ. ಆತ್ಮಶೋಧನೆ ಒಬ್ಬ ಸಂತನ ಕನ್‍ಫೆಷನ್ ಮಾದರಿಯಲ್ಲಿದ್ದು, ಸಾಮಾನ್ಯ ಮನುಷ್ಯನ ವಿವರಗಳಿಲ್ಲದೆ ಬೋರ್ ಹೊಡೆಸುವಂತೆ ಕಾಣುತ್ತದೆ. `ಆತ್ಮಕಥೆ’ ಎಂಬ ಪದದಲ್ಲಿ `ಆತ್ಮ’ ಎಂಬುದು ಅಮೂರ್ತ ವಾದರೆ, `ಕಥೆ’ಯೆನ್ನುವುದು ಕಲ್ಪನೆ, ರಂಜನೆ, ನಗು, ಅಳು ಎಲ್ಲಸೇರಿ ಖುಷಿ ಕೊಡುವಂಥದ್ದು. ಸದ್ಯಕ್ಕೆ ನಾವು ಆತ್ಮಕಥೆ, ಆತ್ಮಶೋಧನೆ, ಆತ್ಮವೃತ್ತಾಂತ, ಆತ್ಮಚರಿತ್ರೆ- ಈ ಎಲ್ಲ ಪದಗಳನ್ನು ಒಂದು ಅರ್ಥದಲ್ಲಿ ಬಳಸುತ್ತಿದ್ದೇವೆ. ಆತ್ಮಕಥನಗಳಲ್ಲಿ ಕೆಲವು `ಆತ್ಮಶೋಧನೆ’ಯಾಗಿದ್ದರೆ, ಇನ್ನು ಕೆಲವು `ಕತೆ’ಯಾಗಿಯೂ ನಮ್ಮನ್ನು ರಂಜಿಸಬಹುದು. ಆದರೆ ಆತ್ಮಕಥೆ ಬರೆದವನ ಹುಡುಕಾಟ ಏನು? ಅವನ ನೆಲೆ ಗುರುತಿಸಿಕೊಳ್ಳುವ ಬಗೆ ಎಂತು? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಆತ್ಮಕಥೆ ಓದುವುದು ಒಳ್ಳೆಯದೇನೋ.

ಮನುಷ್ಯನ ತಳಮಳಗಳು ಎಷ್ಟು ವಿಚಿತ್ರ! ತನ್ನ ಅಪಮಾನ, ನೋವು, ಸಂಭ್ರಮ, ತಲ್ಲಣಗಳು ಅತ್ಯಂತ ಖಾಸಗಿಯೆಂದೂ, ಅವನ್ನು ತಾನೊಬ್ಬನೆ ಅನುಭವಿಸಿದೆನೆಂದೂ ನೆನೆದು ತಳಮಳಿಸುತ್ತಾನೆ. ಆ ತಳಮಳಕ್ಕೆ ಹೊರಗಿನ ಸ್ಪಂದನ ಸಿಗದಾಗ ದುಗುಡಗೊಳ್ಳುತ್ತಾನೆ. ಇದೆಲ್ಲದರ ನಡುವೆ ಬದುಕನ್ನು ಅನುಭವಿಸುವ ನುಗ್ಗುವ ಕಾತರವೂ ಇರುತ್ತದೆ. ಮನುಷ್ಯ ಒಟ್ಟಾರೆ ಇವೆಲ್ಲದರಿಂದ ಬೆಳೆಯುತ್ತಾ ಹೋಗುತ್ತಾನೆ. ಈ ಸತ್ಯವನ್ನು ಆತ್ಮಕಥೆಯಲ್ಲಿ ಕಾಣಿಸದಿದ್ದರೆ, ಆ ವ್ಯಕ್ತಿಯ ಆತ್ಮಕಥೆ ನಮಗೆ ತಟ್ಟುವುದಿಲ್ಲ. ಸಮಾನ್ಯವಾಗಿ ಆತ್ಮಕಥೆ ಬರೆಯುವವನು ಸಾಮಾಜಿಕ ವ್ಯಕ್ತಿತ್ವವುಳ್ಳವನೇ ಆದ್ದರಿಂದ ಅವನ ಒಳಗಿನ ವ್ಯಕ್ತಿತ್ವ ಹೇಗೆ ಸಾಮಾಜಿಕ ಸ್ತರದಲ್ಲಿ ವಿಕಾಸವಾಗುತ್ತದೆಂಬುದೂ ಕುತೂಹಲಕಾರಿ ಅಂಶವೆ. ಆ ಎಲ್ಲ ಹಿನ್ನೆಲೆಗಳಿಂದ ಭೈರಪ್ಪ ನವರ `ಭಿತ್ತಿ’ ಯನ್ನು ಓದಿದರೆ, `ಭಿತ್ತಿ’ ಅಪೂರ್ಣವೆನಿಸುತ್ತದೆ ; ಅತೃಪ್ತಿ ಹುಟ್ಟಿಸುತ್ತದೆ.

ಭೈರಪ್ಪ ಕಡುಬಡತನ ಅನುಭವಿಸಿ, ಜೀವನದಲ್ಲಿ ಮೇಲೆ ಬಂದವರು. ಅವರ ಕಹಿ ಅನುಭವಗಳು ವಾಸ್ತವವಾದವು. ಆದರೆ ವಾಸ್ತವಿಕತೆಯನ್ನು ಕಂಡು ತಳಮಳಗೊಂಡ ಮನುಷ್ಯನ ಸ್ಪಂದನ ಇಲ್ಲಿಲ್ಲ; ಬದಲಾಗಿ ವಾಸ್ತವವನ್ನು ಮೆಟ್ಟಿನಿಂತ `ಧೀರ’ನ ಕತೆಯಿದೆ. ಹೀಗಾಗಿ `ಭಿತ್ತಿ’ ಒಂದು ಕಾದಂಬರಿಯಂತೆ ಕಂಡರೆ ಆಶ್ಚರ್ಯವಿಲ್ಲ. “ಆತ್ಮವೃತ್ತಾಂತಕ್ಕೆ ಸ್ವರೂಪವಿರುವುದು ಸಾಧ್ಯವಿಲ್ಲ. ಆದರೆ ರೂಪವಂತೂ ಇರಲೇಬೇಕು. ರೂಪವೇ ಇಲ್ಲದಿದ್ದರೆ ಬರವಣಿಗೆಗೆ ಒಂದು ಗತಿ, ದಿಕ್ಕು, ಬಿಗಿ ಬರುವುದು ಹೇಗೆ?” (ಪು. ೧೬) ಎಂದು ಭೈರಪ್ಪನವರೆ ಹೇಳುತ್ತಾರೆ. ಅವರ ಈ ಅನಿಸಿಕೆಯನ್ನು ನೋಡಿ ಹೇಳುವುದಾದರೆ, `ಭಿತ್ತಿ’ ವಾಸ್ತವವನ್ನು ಪುನರ್‌ಸೃಷ್ಟಿಸುವ ಕಲಾತ್ಮಕತೆಯನ್ನೆ ಮರೆತಿದೆ ಎನ್ನಬಹುದು. ಹಾಗೆಯೆ ಕಾದಂಬರಿ ಬರೆದು ಪಳಗಿದ ಕೈಯಾದ್ದರಿಂದ ಬೈರಪ್ಪ ವಾಸ್ತವದಲ್ಲೂ ಗ್ಲಾಮರಸ್ ಅಂಶಗಳನ್ನು ಹೆಕ್ಕುತ್ತಾರೆ. ಅವರ ಆತ್ಮಕಥನದ ಧಾಟಿ ಕಾದಂಬರಿಯದ್ದಾಗಿದೆ.


ಆತ್ಮಕತೆ ಹೇಳುವವನಿಗೆ ಆತ್ಮರತಿ ಅಥವಾ ಸ್ವಾನುಕಂಪ ಒಂದು ತೊಡಕು. `ಭಿತ್ತಿ’ಯಲ್ಲಿ ಬೈರಪ್ಪ ಅನುಸರಿಸುವುದು ವಾಸ್ತವಶೈಲಿಯನ್ನು. ಆದ್ದರಿಂದ ಅಲ್ಲಿ ಸಹಜವಾಗಿ ಸಾಂದರ್ಭಿಕ ವ್ಯಂಗ್ಯ ಕಾಣುತ್ತದೆ. ಅವರು ತಮ್ಮ ಬಾಲ್ಯ, ಯೌವನದ ಅನುಭವಗಳನ್ನು ನವಿರಾದ ಶೈಲಿಯಲ್ಲಿ ನಿರೂಪಿಸದೆ ಇರುವುದರಿಂದ, ಬೇರೆಯವರ ಬಗ್ಗೆ ಹೇಳುವಾಗ ಅಸಹನೆ ಅಥವಾ ನಿರ್ಲಕ್ಷ್ಯ ಹಾಗು ತನ್ನ ಬಗ್ಗೆ ಹೇಳುವಾಗ ಮೆರೆಯುವ ತನ್ನ ಗುಣ, ಇದು `ಭಿತ್ತಿ’ಯಲ್ಲಿ ಸಾಕಷ್ಟಿದೆ. ಭೈರಪ್ಪ ತಮ್ಮ ಕುಶಲಗಳ (skills)ಬಗ್ಗೆ ಸುದೀರ್ಘ ವಿವರಗಳನ್ನು ನೀಡುತ್ತಾರೆ. ಈಜುಗಾರನಾಗಿ, ಚರ್ಚಾಪಟುವಾಗಿ, ಯಶಸ್ವಿ ಬರಹಗಾರನಾಗಿ ಅವರಿಗೆ ತಮ್ಮ ಬಗ್ಗೆ ಸಾಕಷ್ಟು ಹೆಮ್ಮೆಯಿದೆ. “ನನಗೆ ಬರುವಷ್ಟು ಚೆನ್ನಾಗಿ ಮೀನಿಗು ಬರಲ್ಲ ತಿಳುಕೊ” (ಪು.೩೪); “ಯಾವ ವಿಷಯವನ್ನೆ ಕೊಟ್ಟರೂ ಸ್ವಂತವಾಗಿ ಯೋಚಿಸಿ, ನನ್ನದೇ ಧಾಟಿಯಲ್ಲಿ ಪ್ರತಿಪಾದಿಸುವ ಶಕ್ತಿ ನನಗಿದ್ದಷ್ಟು ಬೇರೆ ಯಾರಿಗೂ ಇರಲಿಲ್ಲ” (ಪು. ೯೯); “ಇಡೀ ತರಗತಿಯಲ್ಲಿ ನಾನು ಹೀರೋ ಆದೆ” (ಪು. -೨೯೧); “ಬೇರೆ ಜಾತಿಗಳ ಬಗೆಗಿನ ಇಂಥ ಅನುಭವ ಮತ್ತು ಒಳನೋಟಗಳು ನಮ್ಮ ಬೇರೆ ಯಾವ ಸಾಹಿತಿಗಿದೆ?” ಒಂದು ಕಡೆ, ಚರ್ಚೆಯ Pompಅನ್ನು ಅರ್ಥ ಮಾಡಿಕೊಂಡೆನೆಂದು ಹೇಳುತ್ತರಾದರೂ, ತಮ್ಮ ಸಾಹಿತ್ಯದ ಬಗ್ಗೆ ಚರ್ಚೆ ಬಂದಾಗ ಮಾತ್ರ ಬೇರೆಯವರ ಟೀಕೆಯನ್ನು ಗ್ರಹಿಸಲಾರದೆ ಹೋಗುತ್ತಾರೆ.

`ನಾನು’ ಎಂಬ ಆತ್ಮಾರ್ಥಕ ಸರ್ವನಾಮ ಬಂದಾಗಲೆಲ್ಲ ಉಂಟಾಗುವ ಸಹಜವ್ಯಂಗ್ಯ `ಭಿತ್ತಿ’ಯಲ್ಲೂ ಇದೆ. ಭೈರಪ್ಪನವರು ಅವರ ತಂದೆಯನ್ನು ಸಂಬೊಧಿಸುವಾಗಲೆಲ್ಲ `ತೀರ್ಥರೂಪ’ರು ಎಂದು ವ್ಯಂಗ್ಯವಾಗಿ ಹೇಳುತ್ತಾರೆ. ಅಧ್ಯಾಪಕರು, ಸಹಪಾಠಿಗಳು ಎಲ್ಲರ ಬಗ್ಗೆಯೂ ವ್ಯಂಗ್ಯ ಧೋರಣೆಯೇ ಕಾಣುತ್ತದೆ. ಮಹಾರಾಜರಿಗೆ ಭಾಷಣ ಬರೆದು ಕೊಟ್ಟ ಯಮುನಾಚಾರ್ಯರನ್ನು ತರಾಟೆಗೆ ತೆಗೆದುಕೊಳ್ಳುವುದು, ಮಹಾನ್ ಸಂಗೀತಗಾರರ ಲೋಪಗಳನ್ನು ಪಟ್ಟಿಮಾಡುವುದು- ಇವೆಲ್ಲ ಭೈರಪ್ಪನವರ ಕಟುನಿಲುವನ್ನು ತೋರುತ್ತವೆಯಾದರೂ, ತಾನು ಎಲ್ಲೂ ರಾಜಿಯಾಗದವನೆಂಬ ಅಹಂಭಾವವೇ ಎದ್ದು ಕಾಣುತ್ತದೆ.

ಈ ಬಗೆಯ ವ್ಯಂಗ್ಯ ಭೈರಪ್ಪನವರ ಬರವಣಿಗೆಗೆ ಒಂದು ರೀತಿಯ ಸಿನಿಕತನವಾಗಿ ಬಂದು ಬಿಟ್ಟಿದೆ. ಅವರ ಬೌದ್ದಿಕ ತಳಮಳಗಳು ತರ್ಕಬದ್ದವಾಗಿವೆ. ಭಾವನಾತ್ಮಕ ತಳಮಳಗಳನ್ನು ಅವರು ವಿವರಿಸದೆಯೆ ಅದನ್ನು ಮೀರಿದ್ದೇನೆಂಬ ಧೋರಣೆಯನ್ನು ಹೊಂದಿದ್ದಾರೆ.

ಮೂಲಭೂತ ಪ್ರವೃತ್ತಿಗಳಲ್ಲಿ ಹಸಿವು ಭೈರಪ್ಪನವರಲ್ಲಿ ಗಮನಕೊಡುವ ಅಂಶವಾದರೆ, ಕಾಮ ನಿರ್ಲಿಪ್ತ ಅಂಶವಾಗಿದೆ. ಅವರಲ್ಲಿ ಪ್ರೇಮ ಹುಟ್ಟಿದ್ದನ್ನು (ಯಾರ ಬಗ್ಗೆಯೂ, ತಮ್ಮ ಹೆಂಡತಿಯ ಬಗ್ಗೆ ಹೆಂಡತಿಯ ಮೇಲಿನ ಪ್ರೇಮವನ್ನೂ ಸಹ) ಅವರು ವಿವರಿಸುವುದಿಲ್ಲ. ಹೆಂಡತಿಯ ಬಗ್ಗೆ ತಮ್ಮ ಸಂಬಂಧ ಒಂದು `ಧರ್ಮ ಕರ್ಮಸಂಯೋಗ’ವೆಂಬಂತೆ ಭೈರಪ್ಪನವರ ನಿಲುವಿದೆ. ಅಂದರೆ ಅವರಿಗೆ ಒಲವು ತಾಗಿಯೇ ಇಲ್ಲವೊ, ಅಥವಾ ಮಧ್ಯಮವರ್ಗದ ಕ್ಲೀಷಾನೀತಿಪ್ರಜ್ಞೆ ಕೆಲಸ ಮಾಡಿದೆಯೋ ತಿಳಿಯುವುದಿಲ್ಲ. “ನಾನು ಗಂಭೀರ ತತ್ವಜ್ಞಾನ ಓದುತ್ತಿದ್ದವನು. ಉಪನಿಷತ್ತು, ರಾಮಕೃಷ್ಣ, ವಿವೇಕಾನಂದ, ಪ್ಲೇಟೋ, ಕುಮಾರಸ್ವಾಮಿ, ರೋಮಾರೋಲಾ, ಟಾಲ್‍ಸ್ಟಾಯ್, ಮೊದಲಾಗಿ ಪ್ರೀತಿಯ ನೈತಿಕ ಹಾಗೂ ಆಧ್ಯಾತ್ಮಿಕ ಆಯಮಕ್ಕೆ ಒತ್ತುಕೊಡುವ ವಿಚಾರಗಳನ್ನು ಓದುತ್ತಿದ್ದವನು” ಎಂದು ಒತ್ತಿ ಹೇಳುತ್ತಾ, ತಮ್ಮ ಸಾರ್ವಜನಿಕ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟುಕೊಂಡು ಬಿಡುತ್ತಾರೆ!


ಭೈರಪ್ಪನವರ ಕಾದಂಬರಿಗಳು ನಮ್ಮನ್ನು ವೈಚಾರಿಕತೆಯ ಆಳಕ್ಕೆ ನಮ್ಮನ್ನು ಕರೆದೊಯ್ಯುವಂತೆ ಕಂಡರೂ ಅವುಗಳು ಒಟ್ಟು ಗ್ರಹಿಕೆಯಲ್ಲಿ ಹಳೆಯಶ್ರದ್ಧೆಗಳನ್ನು ಮೀರುವುದಿಲ್ಲ. `ಭಿತ್ತಿ’ಯ ವಿನ್ಯಾಸವೂ ಇದೇ ಆಗಿದೆ. ಜಾತಿ, ನಂಬಿಕೆಗಳ ಪ್ರಶ್ನೆ ಬಂದಾಗ ಭೈರಪ್ಪ ಎರಡು ನಿಲುವುಗಳನ್ನು ಹೊಂದಿದ್ದಾರೆ. ಒಂದು ಕಡೆ ಬ್ರಾಹ್ಮಣನೆಂಬ ಕಾರಣದಿಂದ, ಅವರಿಗೆ ಭಿಕ್ಷಾನ್ನ, ಹಾಸ್ಟೆಲಿನಲ್ಲಿ ವಸತಿ ಎಲ್ಲ ದೊರೆಯುತ್ತದೆ. ಆದರೆ ಆವರಿಗೆ ತಮ್ಮ ಬ್ರಾಹ್ಮಣತ್ವದ ಬಗ್ಗೆ ಶ್ರದ್ದೆ ಇಲ್ಲ. ಬಡತನದ ಕಾರಣದಿಂದ ತಾಯಿಯ ತಿಥಿ ಸರಿಯಾಗಿ ಮಾಡಲು ಆಗದೆ ಇರುವುದನ್ನು ಭೈರಪ್ಪ ಹೇಳುತ್ತಾರೆ. ಇದು ವಿಷಾದದ ದನಿಯೊ, ಆಥವಾ ವೈಚಾರಿಕ ನಿಲುವೊ ತಿಳಿಯುವುದಿಲ್ಲ. ಹಾಗೆಯೆ ಅವರು ಭಿಕ್ಷಾನ್ನ ಮಾಡುವಾಗ, ಯಾರೋ ಮುಂಜಿಯಾಗಿಲ್ಲ ಎಂದು ತಕರಾರು ತೆಗೆದಾಗ, ಮುಂಜಿ ಮಾಡಿಸಿಕೊಳ್ಳುತ್ತಾರೆ. ಬ್ರಾಹ್ಮಣರ ಹಾಸ್ಟೆಲಿನಲ್ಲಿರುತ್ತಲೇ, ಜಾತಿಗಳ ಬಗ್ಗೆ ವಿಮರ್ಶೆನಡೆಸುತ್ತಾರೆ! ಸ್ವಲ್ಪ ಪ್ರಮಾಣದಲ್ಲಿ ಜಾತಿ ಕುರಿತು ಕಸಿವಿಸಿ ತೋರಿದರೂ, ಅದು ದೊಡ್ಡದಾಗಿ ವ್ಯಕ್ತವಾಗುವುದಿಲ್ಲ. ಧರ್ಮ-, ಶ್ರಾದ್ದ ಮುಂತಾದವುಗಳ ಬಗೆಗಿನ ಅವರ ನಂಬಿಕೆ ಕೊನೆಯ ತನಕ ಉಳಿಯುತ್ತದೆಯೆಂಬುದು ಅವರ ಆತ್ಮಕಥೆಯ ಕೊನೆಯ ಪುಟಗಳಲಿ ವ್ಯಕ್ತವಾಗುತ್ತದೆ. ಕೊನೆಗೂ ವ್ಯಕ್ತವಾಗುವುದು ಗೊಂದಲ ಅಷ್ಟೆ. “ಒಟ್ಟಿನಲ್ಲಿ ನಾನು ಶ್ರಾದ್ದವನ್ನೂ ಮಾಡಲಿಲ್ಲ. ಆ ದಿನ ಉಪವಾಸ ದೇವರಿಗೆ ನಮಸ್ಕಾರ ಮಾಡುವುದು ಮೊದಲಾದ ಸರಳಕರ್ಮವನ್ನೂ ಬಿಡಲಿಲ್ಲ. ದೇವರ ಪೂಜೆಯಲ್ಲಿ ನನಗೆ ನಂಬಿಕೆ ಇರಲಿಲ್ಲ. ಆದರೆ ನಾನು ಏನೂ ಮಾಡದೆ ಬಿಟ್ಟೆನೆಂದು ತಿಳಿದರೆ ಚಿಕ್ಕಪ್ಪ ನೊಂದುಕೊಳ್ಳುತ್ತಾನೆ…” ಹೀಗೆ ಅವರ ನಿಲುವುಗಳು ಬದಲಾಗುತ್ತ ಹೋಗಿವೆ.


`ಭಿತ್ತಿ’ಯಲ್ಲಿ `ಆರ್ಯಸಮಾಜ’, `ಸೇವಾಸಂಘ’ಗಳ ಬಗ್ಗೆ ವಿವರ ಇದೆ. ಆದರೆ ಅದೇ ಕಾಲದಲ್ಲಿ ನಡೆದ ಸ್ವಾತಂತ್ರ ಚಳುವಳಿ, ಗಾಂಧೀ ಪ್ರಭಾವದ ಬಗ್ಗೆ ಏನೂ ಇಲ್ಲ. (ಇದು ಭೈರಪ್ಪನವರ ಹಿಂದುಧರ್ಮದ ಕಾಳಜಿಯನ್ನೇ ತೋರುತ್ತದೆಯೆ?)

`ವಂಶವೃಕ್ಷ’ ಮತ್ತು `ಸಂಸ್ಕಾರ’ಗಳನ್ನು ವಿಮರ್ಶಕರು ಹೋಲಿಸಿ ಮಾತನಾಡುವಾಗ, `ವಂಶವೃಕ್ಷ’ ಪ್ರತಿಗಾಮಿ ಧೋರಣೆಯದೆಂದೂ, `ಸಂಸ್ಕಾರ’ ಪ್ರಗತಿಗಾಮಿಯದೆಂದೂ ಗುರುತಿಸಿದ್ದಾರೆಂದು ಭೈರಪ್ಪ ಹೇಳುತ್ತಾರೆ ಮತ್ತು ಅವರಿಗೆ ಈ ವಿಮರ್ಶೆ ಇಷ್ಟವಾಗಿಲ್ಲ. `ಸಂಸ್ಕಾರ’ವನ್ನು ಟೀಕೆಗೆತ್ತಿಕೊಂಡು ಅದು ಸಂಪೂರ್ಣ ಕ್ರಿಶ್ಚಿಯನ್ ತತ್ತ್ವಜ್ಞಾನದಿಂದ ಪ್ರಭಾವಿತವಾಗಿದೆಯೆಂದು ಹೇಳುತ್ತಾರೆ. ಪ್ರಾಣೇಶಾಚಾರ್ಯರು ಅನಾವಶ್ಶಕವಾಗಿ `ನರಳುವಿಕೆ’ಯ (suffering) ಮಾರ್ಗ ಹಿಡಿಯುತ್ತಾರೆಂದು ಆರೋಪಿಸುತ್ತಾರೆ. “…ಧರ್ಮಶಾಸ್ತ್ರದ ಪ್ರಕಾರ ಮದುವೆಯಾಗುವುದೇ ಸಂತಾನಾಭಿವೃದ್ಧಿಗೆ, ಸಂತಾನಾಭಿವೃದ್ದಿ ಶಕ್ತಿ ಇಲ್ಲದವಳನ್ನು ಮದುವೆಯಾಗಬಾರದು, ಮದುವೆಯಾದ ನಂತರ ಹೆಂಡತಿಗೆ ಸಂತಾನ ಶಕ್ತಿ ಇಲ್ಲವೆಂದು ಗೊತ್ತಾದರೆ, ಅವನು ಇನ್ನೊಂದು ಮದುವೆ ಮಾಡಿಕೊಳ್ಳಬೇಕು. ಮೊದಲ ಹೆಂಡತಿಯನ್ನು ಸೌಜನ್ಯದಿಂದ ಬಾಳಿಸಬೇಕು. ಪ್ರಾಣೇಶಾಚಾರ್ಯನಿಗೆ ಈ ಪ್ರಾಥಮಿಕ ಧರ್ಮಸೂತ್ರ ಗೊತ್ತಿರಲಿಲ್ಲವೆ?” – ಈ ರೀತಿಯ ಪ್ಪಶ್ನೆಯೇ ಅಪ್ರಸ್ತುತವೆಂಬುದು ಭೈರಪ್ಪನವರಿಗೆ ಅನ್ನಿಸುವುದಿಲ್ಲ. ಪ್ರಾಣೇಶಾಚಾರ್ಯ ತನ್ನ ಧರ್ಮದಲ್ಲಿ ಅಸ್ತಿತ್ವ ಹುಡುಕುತ್ತ, ಅಲ್ಲಿ ತಾನು `ನಿಜ’ವಾಗದೆ, ಧರ್ಮದ ದಾರಿ ಬಿಟ್ಟು ಬೇರೆ ಕಡೆ ತನ್ನ ಅಸ್ತಿತ್ವ ಹುಡುಕುವ ಪ್ರಶ್ನೆಯಿದೆ. ಹಿಂದೂಧರ್ಮದಲ್ಲಿರುವ ಓರೆಕೋರೆಗಳನ್ನು ಮಾನವೀಯ ನೆಲೆಯಲ್ಲಿ ನಿಂತು ಯೋಚಿಸುವ ಧಾಟಿ ಭೈರಪ್ಪನವರಿಗೆ ಹಿಡಿಸುವುದಿಲ್ಲ. ಅವರು ಹೇಳುವ ಸ್ವಹಿಂಸೆಯ ಕಲ್ಪನೆ ಕ್ರಿಶ್ಚಿಯನ್ನರಲ್ಲಿ ಅಷ್ಟೇ ಅಲ್ಲ ಜೈನಧರ್ಮದಲ್ಲೂ ಇದೆ; ಹಾಗಾದರೆ, ಇದು `ಭಾರತೀಯ ಚಿಂತನೆ’ ಅಲ್ಲವೆ?- ಈ ಎಲ್ಲ ಅಂಶಗಳು `ಭಿತ್ತಿ’ಯಲ್ಲಿ ಒಂದೇ ದೃಷ್ಟಿಯಿಂದ ಚರ್ಚಿತವಾಗಿವೆ.


ಸಾಹಿತಿಯಾಗಿ ಭೈರಪ್ಪನವರು ತಮ್ಮ ವ್ಯಕ್ತಿತ್ವ ತುಂಬಾ ನಾಜೂಕಾಗಿ ಸಮಾಜಿಕ ವ್ಯಕ್ತಿತ್ವವನ್ನು ಮಾತ್ರ ಚಿತ್ರಿಸುತ್ತಾರೆ. ಕೃತಿಯೊಂದನ್ನು ರೂಪಿಸುವಾಗಿನ ತಳಮಳ ಅಥವಾ ಕಾತರಗಳಾಗಲಿ ಇಲ್ಲಿ ಕಾಣುವುದಿಲ್ಲ. ಇಲ್ಲಿಯೂ ಭೈರಪ್ಪನವರಿಗೆ `ಉಳಿವಿ’ನ ಪ್ರಶ್ನೆಯೇ ಮುಖ್ಯವಾಗುತ್ತದೆ. `ಉಳಿವು’ ಅಂದರೆ ತಮ್ಮ ಕ್ರಿಯಾಶೀಲತೆಯ ಸವಾಲುಗಳಲ್ಲ, ಬದಲಾಗಿ ಸಾಹಿತ್ಯ ಚಳವಳಿಗಳಿಂದ ದೂರ ನಿಂತು ಅಸ್ತಿತ್ವ ಉಳಿಸಿಕೊಳ್ಳುವುದು ಹೇಗೆಂಬ ರೀತಿಯದು. `ಭಿತ್ತಿ’ಯಲ್ಲಿ ಸಾಹಿತ್ಯದ ಚರ್ಚೆಗಿಂತ ಹೆಚ್ಚು ಸಾಹಿತ್ಯರಾಜಕೀಯದ ಬಗ್ಗೆಯೇ ಚರ್ಚೆ ಇರುವುದು ವಿಷಾದವನ್ನು ಮೂಡಿಸುತ್ತದೆ.

`ಭಿತ್ತಿ’ಯ ಕಡೆಯ ಪುಟಗಳಲ್ಲಿ ಬರುವ ಸಾಹಿತ್ಯ ಚರ್ಚೆಯೆಂದರೆ, ಭೈರಪ್ಪನವರ ಕೃತಿಗಳ ಬಗ್ಗೆ ಬಂದಿರುವ ವಿಮರ್ಶೆಗಳದ್ದು. ಅಲ್ಲಿ ಪ್ರಗತಿಶೀಲರು ನವ್ಯರು- ಈ ಎಲ್ಲರ ಬಗ್ಗೆ ಟೀಕೆ ಹರಿದಿದೆ. ಸಾಂಸ್ಕೃತಿಕ ಜಗಳಗಳಾಗಿದ್ದರೆ ಹೆಚ್ಚು ಕುತೂಹಕರವಾಗಬಹುದಾದ ಕೆಲವು ಘಟನೆಗಳು ವೈಯಕ್ತಿಕ ದ್ವೇಷವೆಂಬಂತೆ ಚಿತ್ರಿತವಾಗಿವೆ. ತಾನು ನೋಡಿ ನಗುವ ಗುಣವಿಲ್ಲದಿದ್ದರೆ, ಆತ್ಮವ್ಯತ್ತಾಂತ ಸ್ವಸಮರ್ಥನೆಯ ಹಾದಿಯನ್ನು ಹಿಡಿಯುತ್ತದೆ. ಸಮಾಜಿಕ ವ್ಯಕ್ತಿತ್ವವನ್ನು ಕಾಯ್ದುಕೊಳ್ಳುವ ಎಚ್ಚರದ ಬರವಣಿಗೆ ಆಗಿಬಿಡುತ್ತದೆ.” (ನರಹಳ್ಳಿ ಬಾಲಸುಬ್ರಮಣ್ಯ, ಮಯೂರ ೧೯೯೭) ಎನ್ನುವ ಮಾತು ಸತ್ಯವೆನಿಸುತ್ತದೆ.


ಕಾದಂಬರಿಕಾರರಾಗಿ ಭೈರಪ್ಪ ಪರಿಚಿತರು. ಅವರ ಸಾಹಿತ್ಯದ ಪ್ರೇರಣೆಗಳು ತತ್ವಶಾಸ್ತ್ರ ಮತ್ತು ಲಾಜಿಕ್‍ನಿಂದ ಬರೆದ ಹಾಗಿವೆಯೆ ಹೊರತು Passion ನಿಂದ ಅಲ್ಲ; Passionಅನ್ನು ಹತ್ತಿಕ್ಕಿ ಬರೆಯುವುದೇ ಒಳ್ಳೆಯ ಸಾಹಿತ್ಯ ಎಂಬ ಭಾವನೆ ಅವರಿಗಿದ್ದಂತಿದೆ. ಅದರಿಂದ ಅವರ ಕಾದಂಬರಿಗಳಲ್ಲಿ ಘಟನೆಗಳು ಮತ್ತು ವಸ್ತು, ವಿಷಯಗಳು ತರ್ಕಬದ್ದ ಸೂತ್ರದಲ್ಲಿ ಕಟ್ಟಿಹಾಕಿದಂತಿರುತ್ತವೆ. ಹಿಂದೂಧರ್ಮದ ಬಗೆಗಿನ ಅವರ ಒಲವು ತರ್ಕಶಾಸ್ತ್ರ ಮೂಲದ್ದು. ಹೀಗಾಗಿ ಅವರು ಹಿಂದುಧರ್ಮದ ಪುನರಾವಲೋಕನ ಮಾಡುವಂತೆ ಕ೦ಡರೂ, ಅದು ಸನಾತನವಾದದ್ದೆಂದು ಅನಿಸಿ ಅದನ್ನು ಪ್ರತಿಪಾದಿಸುವ ಹಂತದಲ್ಲೇ ನಿಂತುಬಿಡುತ್ತಾರೆ. `ವಂಶವೃಕ್ಷ’, `ತಬ್ಬಲಿಯು ನೀನಾದೆ ಮಗನೆ’, ಮತ್ತು `ದಾಟು’ ಕಾದಂಬರಿಗಳು ಇದಕ್ಕೆ ಉದಾಹರಣೆಯಾಗಬಹುದು. ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಗೋವಿಂದ ಭಟ್ಟರು, “ವಕೀಲರು ಕೇವಲ ಕಾನೂನು ಗ್ರಂಥಗಳನ್ನು ಓದಿದರೆ ಸಾಲದು. ನಿಮ್ಮಲ್ಲಿ ಎಷ್ಟು ಜನ ಭೈರಪ್ಪನವರ ಕೃತಿಗಳನ್ನು ಓದಿದ್ದೀರಿ? ದಾಯಭಾಗ, ಕರ್ಮ, ಸಂನ್ಯಾಸ, ಗೃಹಸ್ಥಧರ್ಮ ಮೊದಲಾಗಿ ಹಿಂದೂ ಕಾನೂನಿಗೆ ಸಂಬಂಧಿಸಿದ ಎಷ್ಟೋ ಸೂಕ್ಷ್ಮ ಕಲ್ಪನೆಗಳ ಒಳನೊಟಗಳು ಅವರ `ವಂಶವೃಕ್ಷ’ವನ್ನು ಓದಿದರೆ ತಿಳಿಯುತ್ತವೆ” ಎಂದು ಹೇಳಿರುವುದನ್ನು ಭೈರಪ್ಪ ಉಲ್ಲೇಖಿಸುತ್ತಾರೆ. ಇದು ಏನನ್ನು ಹೇಳುತ್ತದೆ? ಪರೋಕ್ಷವಾಗಿ ಭೈರಪ್ಪನವರ ಹಿಂದೂಧರ್ಮದ ಕಮಿಟ್‍ಮೆಂಟನ್ನೇ ಸೂಚಿಸುವುದಷ್ಟೆ?


`ಭಿತ್ತಿ’ಯಲ್ಲಿ ಕೆಲವು ಕುತೂಹಲಕಾರಿ ಅಂಶಗಳಿವೆ. ಭೈರಪ್ಪನವರ ರಾಜಕೀಯ ಗ್ರಹಿಕೆ, ಈ ಸಂಬಂಧವಾಗಿ ಅವರು ನೀಡುವ ಕೆಲವು ವ್ಯಕ್ತಿಚಿತ್ರಗಳು, ಇಂದಿರಾಗಾಂಧಿ, ಲಾಲ್‍ಬಹಾದುರ್ ಶಾಸ್ತ್ರಿಯವರ ಮಗ, ಈ ಥರದ ವ್ಯಕ್ತಿಚಿತ್ರಗಳು ಚೆನ್ನಾಗಿವೆ.

“ಸೃಜನಶೀಲತೆಗೆ ಹೆಣ್ಣುಗಂಡೆಂಬ ವ್ಯತ್ಯಾಸವೇ ಇಲ್ಲ, ಅದು ಶುದ್ಧ ಸೃಜನಶೀಲತೆ” (ಪು. ೫೫೦); “ಶುದ್ಧ ಸಾಹಿತ್ಯದ ನಿಷ್ಟೆಯಿದ್ದವನು ಘೋಷಣೆ ಚಳವಳಿ ಮೊದಲಾದವುಗಳಿಗೆ ತನ್ನನ್ನು ತಾನು ಸಮರ್ಪಿಸಿಕೊಂಡು ಕೂರಲಾರ” (ಪು. ೫೫೦); “ನಾನು ಚಿಕ್ಕಹುಡುಗನಲ್ಲಿ ಹಳ್ಳಿಗಳಲ್ಲಿ ಕಂಡಿದ್ದು ಜಾತಿವ್ಯತ್ಯಾಸವನ್ನು, ಜಾತೀಯತೆಯನ್ನಲ್ಲ” (ಪು. ೩೦೭)- ಈ ಕೆಲವು ಅಭಿಪ್ರಾಯಗಳು ಒಪ್ಪುವಂತವು.


ಕೊನೆಯದಾಗಿ, ಆತ್ಮಕಥೆ ಬರೆಯುವರು, ತಮ್ಮಕಥೆಯಲ್ಲಿ ತಮ್ಮ ಸಮಾಜಿಕ ವ್ಯಕ್ತಿತ್ವದ ಬಗ್ಗೆ ಆಸಕ್ತರಾಗಿದ್ದರೆ ಸರಿಯೋ ಅಥವಾ ತಮ್ಮ ವೈಯಕ್ತಿಕ ಸಂದಿಗ್ಧತೆ, ಕಾತುರ, ಕುತೂಹಲಗಳ ಬಗ್ಗೆ ಆಸಕ್ತರಾಗಿದ್ದರೆ ಚೆನ್ನವೊ-ಎನ್ನುವ ಪ್ರಶ್ನೆ ಆತ್ಮಚರಿತ್ರೆಗಳನ್ನು ಓದುವಾಗಲೆಲ್ಲ ನನ್ನನ್ನು ಕಾಡಿದೆ. ಇದರಿಂದ `ಭಿತ್ತಿ’ಯಲ್ಲಿ `ಹೊರಗಿ’ನ ಚರ್ಚೆಯೇ ತುಂಬ ಇದ್ದು, ಮನಸ್ಸನ್ನು ತಾಗುವ ತೀಡುವ ಕಾತರ ದುಮ್ಮಾನಗಳಿಲ್ಲ. ಇದರಿಂದ `ಭಿತ್ತಿ’ಯಲ್ಲಿ ಏನೋ ಕೊರತೆ ಇದೆ ಎನ್ನಿಸುತ್ತದೆ.
(ಸತ್ಯಶುದ್ದ ಕಾಯಕ).
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಡೋಳಾಯ್ತು ಅಲಾವಿಯಾಡಿದರಾರೋ
Next post ಸಾರ್ಥಕತೆ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys