ಕಾಡೋಳಾಯ್ತು ಅಲಾವಿಯಾಡಿದರಾರೋ
ನಾಡೊಳಗ ಐಸುರ ನೋಡಿದರಾರೋ         ||ಪ||

ಪಂಜ ತಾಬೂತ ಪೂಜೆಮಾಡಿದರಾರೋ
ಹುಂಜನ ಕೊಯ್ದು ತಿಂದವರ‍್ಹೆಸರ‍್ಹೇಳಿ ಸಾರೋ    ||೧||

ಒಂದ ಕುಡಕಿಯೊಳು ಹಣಹಾಕಿದರಾರೋ
ನಜರಿಟ್ಟು ದಾಳಿಂಬರಗೊನಿ ಊರಿದರ‍್ಯಾರೋ     ||೨||

ಮುಲ್ಲನ ಮಸೀದಿಗ್ಹೋಗಿ ಬೆಲ್ಲ ಓದಿಸಿದರಾರೋ
ಕಲ್ಲಿನೊಳು ಕರ್ಬಲ ಕಂಡವರಾರೋ              ||೩||

ಶಿಶುನಾಳ ಶಾಹಿರ ಹಾಡಿದರಾರೋ
ದಶದಿನದೊಳು ಇದರ ಉತ್ತರ ತಂದು ಸಾರೋ    ||೪||

*****