ದಾವಣಗೆರೆ ಜಿಲ್ಲೆಯ ಕಥಾಸಾಹಿತ್ಯ

ದಾವಣಗೆರೆ ಜಿಲ್ಲೆಯ ಕಥಾಸಾಹಿತ್ಯ

* ಒಡಲಾಳದ ಚಿತ್ರ

ಹೆಳವನಕಟ್ಟೆ ಗಿರಿಯಮ್ಮನ ‘ಚಂದ್ರಹಾಸ ಕಥೆ’, ‘ಸೀತಾ ಕಲ್ಯಾಣ’, ‘ಉದ್ಧಾಲಕನ ಕತೆ’ ಮುಂತಾದ ಕತನಕಾವ್ಯಗಳಲ್ಲೇ ಕಥನ ಪರಂಪರೆಯ ಕುರುಹುಗಳಿವೆ. ಇಂತಹ ಪರಂಪರೆಯನ್ನು ಪೋಷಿಸಿಕೊಂಡು ಬಂದ ದಾವಣಗೆರೆ ಜಿಲ್ಲೆಯಲ್ಲಿ ಶಕ್ತವಾಗಿ ಕಥೆ ಹೇಳಬಲ್ಲ ಹಲವಾರು ಕಥಗಾರರ ದಂಡೇ ಇದೆ. ಇಲ್ಲಿಯೇ ಹುಟ್ಟಿಬೆಳೆದು ಕಥೆಗಾರರಾದ ಹಲವಾರು ಜನ ಲೇಖಕರು ಈಗ ನಾಡಿನ ಬೇರೆಬೇರೆ ಕಡೆ ವಾಸಿಸುತ್ತಿದ್ದರೂ, ಜಿಲ್ಲೆಯ ಸೊಗಡಿರುವ ಭಾಷೆ, ಸಂಸ್ಕೃತಿಗಳನ್ನು ಬಿಡದೇ ಪ್ರಕಟಿಸುತ್ತ ಬಂದಿರುವುದು ಜಿಲ್ಲೆಯ ಕಥಗಾರರೆಂಬ ಅಸ್ತಿತ್ವಕ್ಕೆ ಮಹತ್ವದ ಕೊಟ್ಟಂತಾಗಿದೆ.

ಈ ಹಿಂದೆ ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆ ಜಿಲ್ಲೆ ಈಗ ಪ್ರತ್ಯೇಕಗೊಂಡಿದೆ. ಆದರೂ ಚಿತ್ರದುರ್ಗ ಸೀಮೆಯ ಪ್ರಾದೇಶಿಕ ಲಕ್ಷಣಗಳನ್ನು ಸ್ವಲ್ಪಮಟ್ಟಿನ ಈ ಜಿಲ್ಲೆಯಲ್ಲಿ ಕಾಣಬಹುದು. ಆ ಕಡೆ ಹುಬ್ಬಳ್ಳಿ, ರಾಣಿಬೆನ್ನೂರುಗಳಂತಹ ಉತ್ತರ ಕರ್ನಾಟಕ ಸೀಮೆಯನ್ನೂ ಹೊತ್ತಿರುವ ದಾವಣಗೆರೆ ಜಿಲ್ಲೆಯು ತನ್ನದೇ ಆದ ವಿಶಿಷ್ಟ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಮಧ್ಯಕರ್ನಾಟಕದ ಸಂಸ್ಕೃತಿ ಸೊಗಡು ಇಲ್ಲಿನ ಬಹುತೇಕ ಕಥೆಗಾರರಲ್ಲಿ ಮೇಳವಿಸಿದೆ.

ವ್ಯಾಪಾರ ವಹಿವಾಟುಗಳಲ್ಲಿ ಕರ್ನಾಟಕದಲ್ಲೇ ಹೆಸರು ಮಾಡಿರುವ ದಾವಣಗೆರೆ ಜಿಲ್ಲೆ, ಒಂದು ಕಾಲದಲ್ಲಿ ‘ಕರ್ನಾಟಕದ ಮಾಂಚೆಸ್ವರ್’ ಎಂದು ಖ್ಯಾತಿವೆತ್ತ ಪ್ರದೇಶವಾಗಿತ್ತು. ಈ ಖ್ಯಾತಿ ಇಲ್ಲಿನ ಬಟ್ಟೆಮಿಲ್‍ಗಳಿಂದ ಬಂದದ್ದು. ಬಂಡವಾಳಶಾಹಿಯ ಆಭಿವೃದ್ದಿಯು ಮೇಲೆ ತೋರುವಂತೆ ಹಿತವಾಗಿ ಇರುವುದಿಲ್ಲ. ಅದರೊಳಗೆ ಬಡತನ, ಶೋಷಣೆಗಳಿವೆ; ಅಸಮಾನತೆ, ಯಂತ್ರನಾಗರಿಕತೆಯ ಮೋಹದಿಂದುಂಟಾಗುವ ಪರಿಣಾಮಗಳಿವೆ. ಈ ಬಂಡವಾಳಶಾಹಿಯ ಬದುಕಿನ ಕ್ರಮಗಳನ್ನುಪರೀಕ್ಷಿಸಿ ನೋಡುವ, ಶೋಷಿತರ ದನಿಯಾಗಿ ಹೊಮ್ಮುವ ಇಲ್ಲಿನ ಕಥೆಗಳು ಅವುಗಳ ಸ್ಥೂಲರೂಪದಲ್ಲೇ ಬಂಡಾಯದ ಲಕ್ಷಣಗಳನ್ನು ತೋರಿಸುತ್ತವೆ. ನವೋದಯ ಮತ್ತು ನವ್ಯಕಾಲದಲ್ಲಿ ಅಷ್ಟಾಗಿ ಕಾಣಸಿಗದ ಇಲ್ಲಿನ ಕಥೆಗಾರರು ಬಂಡಾಯದ ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವುದೂ ಆನುಷಂಗಿಕವೆಂದೇ ಹೇಳಬಹುದು. ಬಂಡಾಯ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ಹಲವಾರು ಕಥೆಗಾರರು ಇಲ್ಲಿದ್ದಾರೆ. ಚಳವಳಿಯ ಮೂಲ ಸಿದ್ದಾಂತದ ಸ್ವರೂಪಗಳನ್ನು ಇಡಿಯಾಗಿ ಗ್ರಹಿಸುವ ಆಶಯ ಇರುವ ಇಲ್ಲಿನ ಹಲವಾರು ಲೇಖಕರಿಗೆ, ಘೋಷಣೆಗಳ ಅಬ್ಬರದ ಹಾದಿ ಮಾದರಿಯಾಗಿಲ್ಲ ಎನ್ನುವುದು ಗಮನಾರ್ಹ ಆಂಶ. ಬಂಡಾಯದ ದನಿಯನ್ನು ಮಾನವೀಯ ಶ್ರುತಿಗೆ ಒಗ್ಗಿಸುವ ಮಾದರಿಯನ್ನೇ ಇಲ್ಲಿ ಕಾಣಬಹುದು. ಹಾಗಾಗಿಯೇ ಆಳವಾದ ಶೋಧನೆಯ, ಪರಿಣಾಮಕಾರಿ ಕಥೆಗಳು ಇಲ್ಲಿ ಹುಟ್ಟಿವೆ. ಒಟ್ಟಾರೆ ಜಿಲ್ಲೆಯ ಕಥಾಸಾಹಿತ್ಯವು ಗಂಭೀರ ನೆಲೆಯಿಂದ ರಚಿತವಾಗಿರುವುದು ಅಭ್ಯಾಸಕ್ಕೆ ಆಸಕ್ತಿ ಹುಟ್ಟಿಸುವಂತಿದೆ.

ಸುಮಾರು ಎಂಬತ್ತು, ತೊಂಬತ್ತರ ದಶಕಗಳಲ್ಲಿ ನಿಯತಕಾಲಿಕಗಳು ಕತೆಗಾರರಿಗೆ ಒಳ್ಳೆಯ ವೇದಿಕೆಗಳಾಗಿದ್ದವು. ಅಂತಹ ಸಮಯದಲ್ಲಿ ಸಾಕಷ್ಟು ಜನ ಬರಹಗಾರರು ನಿಯತಕಾಲಿಕಗಳ ಮೂಲಕವೇ ಬೆಳಕಿಗೆ ಬಂದವರು ಮತ್ತು ಪ್ರಸಿದ್ಧಿಯನ್ನು ಪಡೆದವರಾಗಿದ್ದರು. ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ ಕಥೆಗಳು ಮಿತಿ ಎಂದರೆ ಜನರಿಗೆ ತಲುಪಿಸುವ ಉದ್ದೇಶದಲ್ಲಿ ಸಿದ್ದಸೂತ್ರಗಳ ಕಥೆಗಳು ತಯಾರಾಗುವ ಸಂಭವ ಇದೆ. ಆದರೆ ಇದೇ ಒತ್ತಡ, ಮಿತಿಗಳನ್ನು ಕ್ರಿಯಾಶೀಲವಾಗಿ ಎದುರಿಸಿ ಧ್ವನಿಪೂರ್ಣವಾಗಿ ಬರೆಯುವವರೂ ಇದ್ದಾರೆ. ದಾವಣಗೆರೆ ಜಿಲ್ಲೆಯ ಬಹುಪಾಲು ಕತೆಗಾರರ ಕತೆಗಳು ನಿಯತಕಾಲಿಕಗಳಲ್ಲಿ ಪ್ರಕಟಗೂಂಡಿವೆ. ಈ ಗುಂಪಿನಲ್ಲಿ ಕ್ರಿಯಾಶೀಲ ಅಭಿವ್ಯಕ್ತಿಯನ್ನು ತೋರುವ ಕತೆಗಾರರು, ಜನಪ್ರಿಯ ಧಾಟಿಯಲ್ಲಿ ಬರೆಯುವವರು, ಇಂದಿನ ಸವಾಲುಗಳನ್ನು ಎದುರಿಸಿ ಬರೆಯುವ ಯುವಬರಹಗಾರರು, ಸ್ತ್ರೀಸಂವೇದನೆ, ದಲಿತ ಸಂವೇದನೆಯನ್ನು ಭಾವಿಸಿ ಬರೆಯುವ ಲೇಖಕಿಯರಿದ್ದಾರೆ. ಇನ್ನೂ ಆನೇಕರು ಯಾವ ಗುಂಪಿಗು ಸೇರದೆ ಬರೆಯುವ ಲೇಖಕರೂ ಇದ್ದಾರೆ. ಹೆಚ್ಚಿನ ಕತೆಗಳು ನಾಡಿನ ಜನರ ಗಮನ ಸೆಳೆದಿವೆ ಎನ್ನುವುದು ಮುಖ್ಯ ಸಂಗತಿ.

* ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ…

ದಾವಣಗೆರೆ ಜಿಲ್ಲೆಯ ಕಥೆಗಾರರಲ್ಲಿ ಆಗ್ರಸಾಲಿನಲ್ಲಿರುವ ಲೇಖಕರು ಬಹಳಜನರಿದ್ದಾರೆ. ಪ್ರಹ್ಲಾದ ಮತ್ತು ಲೋಕೇಶ ಅಗಸನಕಟ್ಟಿಯವರುಗಳು, ಜಿ.ಪಿ. ಬಸವರಾಜು, ಬಿ.ಟಿ.ಜಾಹ್ನವಿ, ಆನಂದ್ ಋಗ್ವೇದಿ, ಬಾಮಾ ಬಸವರಾಜಯ್ಯ, ಸುಶೀಲಾದೇವಿ, ಪ್ರಕಾಶ್ ಮುಂತಾದ ಹಿರಿಕಿರಿಯ ಕಥೆಗಾರರು ಕಥಾರಚನೆಯಲ್ಲಿ ತೊಡಗಿಕೊಂಡಿರುವುದು ಕ್ರಿಯಾಶೀಲ ಅಭಿವ್ಯಕ್ತಿಯನ್ನು ಹೇಳುವಂತಿದೆ. ಇವರೆಲ್ಲ ಒಂದು ದಶಕದಿಂದೀಚೆಗೆ ಕಥಾಸಾಹಿತ್ಯವನ್ನು ಬೆಳೆಸಿದ್ದಾರೆ ಎನ್ನುವುದೂ ಇಲ್ಲಿ ಗಮನಿಸಬೇಕಾದ ಸಂಗತಿ. ಕಥೆಗಾರ-ಕವಿ-ವಿಮರ್ಶಕ ಎಂಬ ಮೂರು ಪಾತ್ರಗಳನ್ನು ನಿರ್‍ವಹಿಸುತ್ತ ಕುಶಲಿಗಳಾದ ಪ್ರಹ್ಲಾದ್ ಮತ್ತು ಲೋಕೇಶ್ ಅಗಸನಕಟ್ಟೆ ಇಬ್ಬರೂ ಕಥಾಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುವುದು ಅವರಿಬ್ಬರ ಕಥೆಗಳಿಗೆ ಸಾರ್ಥಕ ಹೊರಕವಚ ಹೊದಿಸಿದಂತಾಗಿದೆ. ದಾವಣಗೆರೆ ಜಿಲ್ಲೆಯ ಹಳ್ಳಿಯಲ್ಲಿ ಹುಟ್ಟಿದ ಇವರಿಬ್ಬರ ಭಾಷೆ, ಆವರಣ, ಅಭಿವ್ಯಕ್ತಿಗಳು ದಾವಣಗೆರೆಯದ್ದೇ ಆಗಿ ವಿಶಿಷ್ಟತೆಯನ್ನು ಪಡೆದುಕೊಳ್ಳುತ್ತವೆ.

ನೇರ ಕಥನ ಶೈಲಿಗೊಲಿದ ಪ್ರಹ್ಲಾದ ಆಗಸನಕಟ್ಟೆ ಆಪ್ತಧಾಟಿಯಲ್ಲಿ ಕಥೆ ಹೇಳುವಂತವರು. ಯಂತ್ರನಾಗರಿಕತೆ ಮತ್ತು ಮನುಷ್ಯ ಸಂಬಂಧಗಳ ನಡುವಣ ನಿರ್ವಾತ ಅವರನ್ನು ಕಾಡುವ ಸಂಗತಿ. ಇದನ್ನು ಅವರು ಮಾತಿನ ಆಡಂಬರವಿಲ್ಲದೆ ಕಟ್ಟಿಕೊಡುತ್ತಾರೆ. ಇದು ಅವರ ಕಥೆಗಳಿಗೆ ಒಂದು ರೀತಿಯ ಅನನ್ಯತೆಯನ್ನು ತಂದುಕೊಡುತ್ತದೆ. ಬಂಡಾಯ ಸಾರುವ ಕಥೆಗಳನ್ನೂ ಮಾನವೀಯತೆಯ ವಿನಯದಲ್ಲಿ ತಂದು ನಿಲ್ಲಿಸುವ ಅವರು ‘ಶೂಪಾಲೀಶ್ ಹುಡುಗ’ದಂತಹಕ ಕಥೆಗಳಲ್ಲಿ ಅದನ್ನು ಚೆನ್ನಾಗಿ ಸಾಧಿಸುತ್ತಾರೆ. ಮಾನವೀಯತೆಗೆ ಸವಾಲು ಹಾಕುವಂತಿರುವ ‘ಪ್ರಕ್ಷುಭ್ದದ ಅಲೆಗಳು’, ಸಂಬಂಧಗಳ ತುಲನಾತ್ಮಕ ಶೋಧ ಇರುವ ‘ತಾಜ್‌ಮಹಲ್’ -ಇಂತಹ ಅನೇಕ ಕಥೆಗಳಲ್ಲಿ ಪ್ರಹ್ಲಾದ್ ಅವರು ಆಧುನಿಕ ಸಮಾಜದ ನೋವನ್ನು ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಇದುವರೆಗು ಬಂದ ನಾಲ್ಕು ಸಂಕಲನಗಳಲ್ಲಿ, ಬರುವ ಕಥೆಗಳು ಒಂದೇ ಶ್ರುತಿಯವು. ಅಂದರೆ ಅವುಗಳಿಗೆ ಮನುಷ್ಯ ಮತ್ತು ಮನುಷ್ಯ ಪ್ರೀತಿಯೇ ಕೇಂದ್ರಗಳು. ಹೀಗಾಗಿ ಒಂದೇ ಭಾವ ಸ್ಥಾಯಿಯಾಗಿ ನಿಂತು ಕಥೆಯಿಂದ ಕಥೆಗೆ ಬೇರೆ ಸಂಚಾರಿ ಭಾವಗಳನ್ನು ತರುವಂತೆ ಕಾಣುತ್ತದೆ. ಸಣ್ಣಕತೆಗಾರನ ಕಸಬುಗಾರಿಕೆ ಮಾನವೀಯತೆಯ ವಿನಯ ಇಟ್ಟುಕೊಂಡು ಕಥೆ ಬರೆಯುವುದರಿಂದ ಪ್ರಹ್ಲಾದರ ಕಥೆಗಳು ಗಂಭೀರ ನೆಲೆಯವು ಎನ್ನಬಹುದು. ಲೋಕೇಶರ ಕಥೆಗಳಲ್ಲಿ ಬಂಡಾಯವು ಮೂಲಹಂದರ ಸಾಮುದಾಯಿಕ ನೆಲೆಯಿಂದ ಹುಟ್ಟುವ ಅವರ ಬಹುಪಾಲು ಕತೆಗಳು ಆತ್ಮಶೋಧಕ್ಕಿಂತ ಸಾಮಾಜಿಕ ಸ್ವರೂಪವನ್ನು ಕುರಿತು ಧ್ಯಾನಿಸುವಂತಿದೆ. ಕೆಲವು ಕತೆಗಳಲ್ಲಿ ಆತ್ಮಶೋಧನೆಯ ಗುಣವೂ ಇಲ್ಲದಿಲ್ಲ. ಆದರೆ ಸಾಮುದಾಯಿಕ ಮತ್ತು ವ್ಯಕ್ತಿಗತ ನೆಲೆಗಳೆರಡರಲ್ಲು ಏಕಕಾಲದಲ್ಲಿ ಶೋಧನೆ ನಡೆಸುವ ಅವರ ಕತೆಗಳಲ್ಲಿ ‘ಮುಖಾಮುಖಿ’, ’ಜಟಕಾಬಂಡಿ ಮತ್ತದರ ಗಾಲಿಗಳು’- ಇವುಗಳನ್ನು ಹೆಸರಿಸಬಹುದು. ಇತ್ತೀಚೆಗೆ ಸಂಕಲನವೂ ಬರುತ್ತಿರುವಲ್ಲಿ ಸಣ್ಣಕತೆಗಳ ರಚನೆಯನ್ನು ಅವರು ಗಂಭೀರವಾಗಿ ಗಣಿಸಿದ್ದಾರೆಂದು ತಿಳಿಯಬಹುದು.

ಕಥಗಾರ-ಕವಿ-ವಿಮರ್ಶಕರ ಸಾಲಿಗೆ ಸೇರುವ ಇನ್ನೊಬ್ಬ ಶಕ್ತ ಬರಹಗಾರ ಜಿ. ಪಿ. ಬಸವರಾಜು ಅವರು. ಅವರ ಮೊದಲ ಸಂಕಲನ ‘ರಾಜ ಮತ್ತು ಹಕ್ಕಿ’ಯಲ್ಲಿಯೇ ಕಥೆ ಹೇಳುವ ಎರಡು ವಿಧಾನಗಳನ್ನು ಕಂಡುಕೊಂಡಿದ್ದಾರೆ. ವಾಸ್ತವದ ನೆಲೆಯಿಂದ ಹುಟ್ಟುವ ಕಥಾನಕಗಳಲ್ಲಿ ಬದುಕಿನ ವಿಫಲತೆ, ವಿಷಾದಗಳಿದ್ದರೆ, ಅಲ್ಲಿಯೇ ಅವುಗಳ ವಿಧ್ವಂಸಕ ಗುಣವನ್ನು ಕುರಿತು ಆಲೋಚಿಸುವ ಗತಿ ಇದೆ. ಜಿ. ಪಿ. ಅವರ ಇನ್ನೊಂದು ವಿಧಾನವೆಂದರೆ ಫ್ಯಾಂಟಸಿ ತಂತ್ರ. ಫ್ಯಾಂಟಸಿ ಕತೆಗಳು ವಾಸ್ತವದ ಕ್ರೌರ್ಯವನ್ನು ಫ್ಯಾಂಟಸಿಯ ಮೂಲಕ ಎದುರಿಸುವ ರೀತಿಯವು. ಈ ತಂತ್ರ ಉಪಯೋಗಿಸಿ ಬರೆದ ಕೆಲವು ಕತೆಗಳು ಪರಿಣಾಮಕಾರಿಯಾಗಿವೆ. ಕೆಲವು ಭಾಷೆಯ ಅತ್ಯುತ್ಸಾಹದಿಂದ ಸೊರಗಿವೆ. ಅವರ ಇತ್ತೀಚಿನ ‘ಒಂದು ಗುಲಾಬಿ’ ಕೃತಿಯಲ್ಲಿ ಜಿ. ಪಿ. ಬಸವರಾಜು ಅವರ ಗಮನಾರ್ಹ ಬೆಳವಣಿಗೆಯನ್ನು ಕಾಣಬಹುದು. ಆಧುನಿಕ ಮನಸ್ಸಿನ ತಲ್ಲಣಗಳು ಮತ್ತು ಸಾಮಾಜಿಕ ಸ್ವರೂಪಗಳು- ಇವು ಅವರಿಗೆ ಕಾಡುವ ಸಂಗತಿಗಳಾಗಿವೆ. ಅವರ ಮೊದಲ ಸಂಕಲನದಲ್ಲಿ ಕಾಣುವ ಉತ್ಸಾಹೀ ವ್ಯಂಗ್ಯವು ಇಲ್ಲಿ ಪಕ್ವಗೊಂಡಿದೆ. ಹಾಗಾಗಿ ಅವರ ಕಾಳಜಿಗಳು ಗಂಭೀರ ಎನ್ನಿಸುತ್ತದೆ.

ಬಾಮಾ ಬಸವರಾಜಯ್ಯನವರು ನಿಯತಕಾಲಿಕಗಳಲ್ಲಿ ಕಥೆಗಳನ್ನು ಬರೆಯುತ್ತ ಬಂದವರು. ಅವರ ಧಾಟಿ ಸ್ವಲ್ಪ ಜನಪ್ರಿಯ ಎನ್ನಿಸಿದರೂ, ಸಣ್ಣಕತೆಯ ಮಿತಿಯೊಳಗೆ ಮನಸ್ಸನ್ನು ಸೆಳೆಯುತ್ತವೆ. ಅವರ ಸಂಕಲನ ಬಂದಿಲ್ಲವಾದ ಕಾರಣ, ಅವರ ಒಟ್ಟು ಧೋರಣೆ ಆನಂತರವೇ ತಿಳಿದೀತು. ಆದರೆ ಬಾಮಾ ಅವರ ಕಥೆಗಳು ದಾವಣಗೆರೆ ಜಿಲ್ಲೆಯ ಕಥಾಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ ಎನ್ನುವುದನ್ನು ಮರೆಯುವಂತಿಲ್ಲ.

ನಾನು ಒಲಿದಂತೆ ಹಾಡುವೆ:

ದಾವಣಗೆರೆ ಜಿಲ್ಲೆಯ ಕಥಾಸಾಹಿತ್ಯದಲ್ಲಿ ಮಹಿಳೆಯರೇ ಅರ್‍ಧಪಾಲು ಇರುವುದು ಶುಭಸೂಚಕ ಚಿಹ್ನೆಯಾಗಿದೆ. ಜನಪ್ರಿಯಧಾಟಿಯಲ್ಲಿ ಬರೆಯುವವರೆಂದು ಮಹಿಳಾ ಲೇಖಕಿಯರನ್ನು ದೂರವಿಟ್ಟ ಕಾಲವೊಂದಿತ್ತು. ಆದರೆ ಈಗ ಯಾವುದರ ಹಂಗಿಲ್ಲದೆ, ಶಕ್ತ ಕಥೆಗಳನ್ನು ಕೊಟ್ಟು ಕಥನ ಸಾಹಿತ್ಯಕ್ಕೆ ಹೊಸದಿಕ್ಕುಗಳನ್ನು ಸೂಚಿಸುವಂತೆ ಬರೆಯುತ್ತಿರುವ ಬಿ. ಟಿ. ಜಾಹ್ನವಿಯಂತಹ ಲೇಖಕಿಯರು ಭರವಸೆ ಹುಟ್ಟಿಸುತ್ತಾರೆ.

ಜಾಹ್ನವಿಯವರ ‘ಕಳೆದುಕೊಂಡವಳು ಮತ್ತು ಇತರ ಕಥೆಗಳು’ ಕಥಾ ಸಂಕಲನ ಬಂದಾಗ ಬಂಡಾಯದ ಉಚ್ಛ್ರಾಯ ಕಾಲ. ಅದೇ ಸಮಯದಲ್ಲಿ ಬಂಡಾಯೋತ್ತರ ಸೂಚನೆಗಳನ್ನು ನೀಡುವ ಕತೆಗಳನ್ನು ಬರೆದಿದ್ದು ಜಾಹ್ನವಿಯವರ ಹೆಗ್ಗೆಳಿಕೆ. ಶೋಷಿತರಲ್ಲೇ ಸ್ವಲ್ಪ ಸುಶಿಕ್ಷಿತರಾದ ವರ್ಗ ತಮ್ಮದೇ ವರ್ಗವನ್ನು ಹೀನಾಯವಾಗಿ ನಡೆಸಿಕೊಳ್ಳುವುದನ್ನು ಅವರ ‘ಕಳ್ಳುಬಳ್ಳಿ’ ಕಥೆ ನಿರೂಪಿಸುತ್ತದೆ. ದಲಿತರ ಬಗ್ಗೆ ಬರೆದಂತೆ ಆಧುನಿಕ ಸ್ತ್ರೀಯರ ಮನೋಭಾವ, ಜೀವನ ವಿಧಾನಗಳನ್ನು ವಿವರಿಸುವ ಕತೆಗಳನ್ನೂ ಜಾಹ್ನವಿ ಬರೆದಿದ್ದಾರೆ. ಕೆಲವೊಮ್ಮೆ ಜನಪ್ರಿಯ ಸೂತ್ರಗಳಿಗೆ ಜೋತುಬಿದ್ದಂತೆ ಕಾಣುತ್ತದೆ. ಇದಕ್ಕೆ ಕಾರಣ ಸಹಜವಾಗಿ ಬರೆದಾಗ ಇರದ ಕೃತಕ ಆವರಣ. ಮೊದಲೇ ಊಹಿಸಿಕೊಂಡು ಬರೆದಾಗ ಆಸಹಜ ಎನ್ನಿಸುವುದು ಆಧುನಿಕ ಮನೋಭಾವಗಳ ಸರಳೀಕರಣ ಜಾಹ್ನವಿಯವರಲ್ಲಿ ಕೆಲವೂಮ್ಮೆ ಇಣುಕಿಬಿಡುತ್ತದೆ. ಜಾತಿವಿನಾಶವೂ ಅಷ್ಟೆ. ಅದೊಂದು ರೊಮ್ಯಾಂಟಿಕ್ ರೂಪ ಪಡೆಯುವುದಕ್ಕಿಂತ, ಜಾತೀಯ ಕಾರಣಗಳಿಂದ ಹೆಚ್ಚುತ್ತಿರುವ ಹಿಂಸೆ, ತಲ್ಲಣಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ನೋಡಿದಾಗ ಇನ್ನಷ್ಟು ಶಕ್ತಿಶಾಲಿ ಕತೆಗಳು ಜಾಹ್ನವಿಯವರಿಂದ ಬರಬಹುದೆಂಬ ಆಶಯ ನನ್ನದು. ಅವರ ‘ದೇವರು ಬಂದಾವ್ ಬನ್ನಿರೊ’ ಸಂಕಲನವು ಇನ್ನೂ ಲಭ್ಯವಿಲ್ಲದ ಕಾರಣ ಅದರ ಬೆಳವಣಿಗೆಗಳನ್ನು ಕುರಿತು ಇಲ್ಲಿ ಹೇಳಲಾಗುತ್ತಿಲ್ಲ.

ಚಿತ್ರದುರ್ಗ ಜಿಲ್ಲೆಯಲ್ಲಿ ಹುಟ್ಟಿದ ನಂತರ ಬಳ್ಳಾರಿಯಲ್ಲಿ ನೆಲೆಸಿದ್ದ ಸುಶೀಲಾದೇವಿ ಆರ್. ರಾವ್. ಅವರು ಸದ್ಯ ದಾವಣಗೆರೆಯಲ್ಲಿದ್ದಾರೆ. ಮಯೂರ, ಉತ್ಥಾನ, ಕರ್ಮವೀರಗಳಲ್ಲಿ ಸುಶೀಲ ಆವರ ಕಥೆಗಳು ಬರುತ್ತಲೇ ಇದ್ದ ಕಾಲವೊಂದಿತ್ತು. ಅವರ ಕತೆಗಳ ಪರಿಸರ ಬಳ್ಳಾರಿ ಜಿಲ್ಲೆಯದು. ಭಾಷೆಯೂ ಸ್ವಲ್ಪಮಟ್ಟಿಗೆ ಆದೇ ಇದೆ. ಹೆಣ್ಣಿನ ಬದುಕಿನ ಬಗ್ಗೆ ಕಾಳಜಿಯಿಂದ ಬರೆಯುವ ಸುಶೀಲಾದೇವಿಯವರ ಕಥೆಗಳಲ್ಲಿ ಓದಿಸಿಕೊಂಡು ಹೋಗುವ ಗುಣವಿದೆ. ಸಂಕೀರ್ಣಸಮಸ್ಯೆಗಳನ್ನೇನೂ ಅವರು ಎತ್ತಿಕೊಳ್ಳುವುದಿಲ್ಲ. ‘ಷೋಕೇಸಿನ ಗೊಂಬೆ’ ಸಂಕಲನವು ಆಗತಾನೇ ಪ್ರಚಲಿತವಾಗುತ್ತಿದ್ದ ಸ್ತ್ರೀವಾದವನ್ನು ಹೇಳುವಂತಿದೆ.

ಅರುಂಧತಿ ರಮೇಶ್ ಅವರು ‘ಸೌಜನ್ಯ’ವೆಂಬ ಹೆಸರಲ್ಲಿ ನಿಯತಕಾಲಿಕೆಗಳಲ್ಲಿ ಕಥೆಗಳನ್ನು ಬರೆಯುತ್ತಿದ್ದವರು. ಅವರ ‘ಒಂದು ರೊಮ್ಯಾಂಟಿಕ್ ಕಥೆಯೊಂದರ ಕೊನೆ’ ಎಂಬುದು ಈವರೆಗಿನ ಕಥೆಗಳ ಸಂಗ್ರಹವಾಗಿದೆ. ಮಹತ್ತರವಾದ ಶೋಧನೆಗೆ ಹೋಗದೆ, ಇರುವ ಮಿತಿಯಲ್ಲಿಯೇ ಮನಸ್ಸಿನ ಗೊಂದಲ, ತಳಮಳಗಳನ್ನು ವ್ಯಕ್ತಪಡಿಸುವ ಅರುಂಧತಿಯವರು ಕಥೆಯನ್ನು ಹವ್ಯಾಸವನ್ನಾಗಿ ಮಾತ್ರ ಸ್ವೀಕರಿಸಿದಂತೆ ಕಾಣುತ್ತದೆ. ‘ನಾನು’ ಎಂಬ ಉತ್ತಮ ಪುರುಷ ನಿರೂಪಣೆಯಲ್ಲಿ ಅನಾವರಣಗೊಳ್ಳುವ ಅವರ ಬಹುಪಾಲು ಕತೆಗಳು ಆ ಕೇಂದ್ರವನ್ನು ಪ್ರೀತಿಸಿ, ಅಲ್ಲಿಯೇ ನಿಲ್ಲುತ್ತವೆ.

ಹರಿಹರದ ಡಾ.ಗಿರಿಜಮ್ಮ ಅನುಪಮಾರನ್ನು ಹೋಲುವ ಲೇಖಕಿ. ವೈದಕೀಯ ವೃತ್ತಿ- ಬರವಣಿಗೆ ಈ ಎರಡನ್ನೂ ಅನುಪಮಾ ನಿಭಾಯಿಸುವಂತೆ ಗಿರಿಜಮ್ಮನವರೂ ಸಹ ಮಾಡಬಲ್ಲರು. ಶೋಷಿತ ಮಹಿಳೆಯರ ಬಗ್ಗೆ ಹೆಚ್ಚು ಆಸಕ್ತಿ ಪ್ರಕಟಿಸುವ ಲೇಖಕಿ ಈವರೆಗು ‘ಮಂದಾರಹೂವು’, ‘ಬಿರುಕು’, ‘ಸ್ಪರ್‍ಶ’ ಎಂಬ ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಕೊಂಚ ಸಿನಿಮೀಯ ಅಂಶಗಳಿರುವ ಗಿರಿಜಮ್ಮನವರ ಕಥೆಗಳು ಸ್ವಲ್ಪ ದಾರಿ ತಪ್ಪಿದರೆ ಜಾಳು ಎನ್ನಿಸಿಕೊಳ್ಳುವ ಆಪಾಯ ಇದೆ. ಶೋಷಿತರ ಕುರಿತಾದ ಆಳದ ದೃಷ್ಟಿಕೋನಗಳಿಲ್ಲದೆ, ಹೊರಗಿನ ಕಾಳಜಿಯೆಂದು ಕಾಣಿಸಿಬಿಡುವ ಕಷ್ಟವೂ ಇದೆ. ಟಿ. ವಿ., ವೈದಕೀಯ ಬರವಣಿಗೆಗೆ ಬೇರೆ ಬೇರೆ ಶೈಲಿಯಲ್ಲಿ ಬರೆಯುವ ಗಿರಿಜಮ್ಮ ಕತೆಗಾರ್ತಿಯಾಗಿ ಕಥಾಹಂದರ ನಿರ್ವಹಣೆಯನ್ನು ಮಾತ್ರ ಮಾಡಿ ಮುಗಿಸಲು ಬಯಸುತ್ತಾರೆ. ಇದು ಅವರ ಕತೆಗಳ ಕೊರತೆಯಾಗಿ ಕಾಣುತ್ತದೆ.

ಶ್ರೀಮತಿ ಟಿ. ಗಿರಿಜ ಅವರು ತಮ್ಮ ಸಂಶೋಧನಾಗ್ರಂಥ ‘ಚಿತ್ರದುರ್ಗ ಜಿಲ್ಲಾದರ್‍ಶಿನಿ’ಯಿಂದ ಪ್ರಸಿದ್ದಿ ಪಡೆದಿದ್ದಾರೆ. ಇದಕ್ಕೂ ಮೊದಲು ಕಥೆ ಕಾದಂಬರಿಗಳನ್ನು ಬರೆದು ಪ್ರಕಟಿಸಿರುವ ಅವರು ಸ್ತ್ರೀಯರ ದನಿಗಳು ಹುಟ್ಟುತ್ತಿದ್ದ ಕಾಲದಲ್ಲಿ ಕಥೆಗಳನ್ನು ಬರೆದದ್ದು ವಿಶೇಷ. ಮಹಿಳೆಯರೇ ಅವರ ಮುಖ್ಯ ಪಾತ್ರಗಳು, ಆವರ ನೋವು ನಲಿವುಗಳೇ ಅವರ ಕಥಾವಸ್ತುಗಳು. ಇಲ್ಲಿಯವರೆಗಿನ ೨೪ ಕಥೆಗಳು ಇನ್ನೂ ಸಂಕಲನದ ರೂಪದಲ್ಲಿ ಬಂದಿಲ್ಲವಾದರೂ, ತಮ್ಮದೇ ಆದ ಛಾಪು ಮೂಡಿಸಲು ಯಶಸ್ವಿಯಾಗಿವೆ.

ದಾವಣಗೆರೆ ಜಿಲ್ಲೆಯಲ್ಲಿ ಯುವ ಕಥೆಗಾರರು ಸಹ ಉತ್ತಮ ಕತೆಗಳನ್ನು ನೀಡಿದ್ದಾರೆ. ಹಿರಿಯ ಕಥೆಗಾರರ ಕಥನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಭರವಸೆಯನ್ನು ಮೂಡಿಸುವ ಹಲವಾರು ಲೇಖಕರು ಇಲ್ಲಿದ್ದಾರೆ. ಯುವ ಲೇಖಕರು ತಮ್ಮದೇ ಆದ ಶೈಲಿಯನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೇನೋ ನಿಜ, ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಅದು ಲಭ್ಯವಾಗಿಲ್ಲ ಎನ್ನಬಹುದು. ಯುವ ಲೇಖಕರ ಒತ್ತಡಗಳು ಅವರ ಕಥೆಗಳನ್ನು ರೂಪಿಸುವುದರಿಂದ, ಅದನ್ನು ಮೀರಿದ ಹೊಳಹುಗಳು ಅವರ ಕಥೆಗಳಲ್ಲಿ ಇನ್ನು ಮುಂದೆ ಕಾಣಿಸಿಕೊಳ್ಳಬೇಕಿದೆ. ಈ ಗುಂಪಿನಲ್ಲಿ ಭರವಸೆಯ ಲೇಖಕನೆಂದರೆ ಆನಂದ್ ಋಗ್ವೇದಿ. ಕವಿ-ಕತೆಗಾರ-ನಾಟಕಕಾರ ಹೀಗೆ ಮೂರು ಪಾತ್ರಗಳನ್ನು ನಿರ್ವಹಿಸುವ ಆನಂದ್ ಎಲ್ಲಾ ಪ್ರಕಾರಗಳಲ್ಲೂ ಕ್ಕೆಯಾಡಿಸುವ ಆಸೆ ಇಟ್ಟುಕೊಂಡಂತಿದೆ. ಅವರ ಸಣ್ಣಕತೆಗಳು ನವ್ಯದ ಛಾಯೆಯುಳ್ಳ ಕತೆಗಳು. ಆಧುನಿಕ ಮನುಷ್ಯ ಮತ್ತು ಬದುಕಿನ ಸಂಕೀರ್ಣತೆಯನ್ನು ಕುರಿತು ಬರೆಯುವ ಆನಂದ, ಹೊಸದನ್ನು ಹೇಳುವ ಹಂಬಲದಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿದ್ದಾರೆ. ಇದು ಅವರ ಕತೆಗಳನ್ನು ವಿಶಿಷ್ಟ ಎನ್ನಿಸುವಂತೆ ಮಾಡುತ್ತದೆ. ಸಿದ್ದಾಂತಗಳ ಭಾರವಿಲ್ಲದೆ, ಭಾಷೆಯ ಪ್ರಯೋಗಗಳಿಲ್ಲದೆ ಕಥೆ ಹೇಳುವ ಕಸುಬುದಾರಿಕೆ ಆನಂದ ಅವರಿಗಿನ್ನು ಲಭ್ಯವಾಗಿಲ್ಲ. ಪ್ರೀತಿಯಿಂದ ಕಥೆ ಹೇಳಿದಾಗ ಋಗ್ವೇದಿ ನಿಜಕ್ಕೂ ಒಳ್ಳೆಯ ಕತೆಗಾರರಾಗಿ ನಿಲ್ಲಬಲ್ಲರು. ಅವರ ಮೊದಲ ಸಂಕಲನ ‘ಚನ್ನ ಮತ್ತು ಆನೂಹ್ಯ ಸಾಧ್ಯತೆ’ಯ ನಂತರ ಅವರು ಬೇರೆ ಬೇರೆ ರಚನೆಗಳ ಕಡೆ ಗಮನ ಹರಿಸಿದ್ದರಿಂದಲೋ ಏನೋ ಕತೆಗಳನ್ನು ಅಷ್ಟಾಗಿ ಬರೆದಂತೆ ಕಾಣುವುದಿಲ್ಲ.

ಈಗ ನಾಟಕಕ್ಷೇತ್ರದಲ್ಲಿ ಆಸಕ್ತಿವಹಿಸಿ ದುಡಿಯುತ್ತಿರುವ ಮಲ್ಲಿಕಾರ್‍ಜುನ ಕಡಕೋಳ, ಅನುಸೂಯ ಅವರು ಯಶಸ್ವಿ ಕತೆಗಾರರೂ ಹೌದು. ಅಲ್ಲಲ್ಲಿ ಅವರ ಬಿಡಿಕತೆಗಳು ಪ್ರಕಟವಾಗಿವೆ. ಇತ್ತೀಚೆಗೆ ಸಾಕಷ್ಟು ಹೊಸ ಕಥೆಗಾರರು ಈ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದಾರೆ. ಮಂಜುಶ್ರೀ ಕಡಕೋಳ, ರವಿಚಂದ್ರ ಬೂಸೇರ, ಪ್ರಕಾಶ್ ಕೊಡಗನೂರು- ಈ ಮುಂತಾದವರು ಒಲ್ಲೆಯ ಪ್ರಯತ್ನಗಳು ಮಾಡುತ್ತಿದ್ದಾರೆ.

ಇನ್ನು ಸಣ್ಣಕತೆ ನಾಟಕಗಳನ್ನು ಅನುವಾದಿಸುತ್ತ ಕ್ರಿಯಾಶೀಲವಾಗಿರುವ ಶ್ರೀನಿವಾಸ ಸುತ್ರಾವೆಯವರು ಸ್ವಯಂ ಕವಿ-ಕತೆಗಾರರು. ಆದರೆ ಅನುವಾದದ ಕೆಲಸ ಮಾಡಲು ತೊಡಗಿಸಿಕೊಂಡಿದ್ದರಿಂದ ಅವರ ಸ್ವತಂತ್ರ ಕೃತಿಗಳು ಮಸಕಾಗಿವೆ. ಚೆಕಾಫ್, ಗಾರ್‍ಕಿ, ಟಾಲ್‌ಸ್ಟಾಯ್ ಮುಂತಾದ ಲೇಖಕರನ್ನು ಕನ್ನಡಕ್ಕೆ ತಂದ ಸುತ್ರಾವೆ ರವೀಂದ್ರನಾಥ ಠಾಗೂರರನ್ನು ಸಹ ಕನ್ನಡಕ್ಕೆ ಪರಿಚಯಿಸಿದ್ದಾರೆ. ಡಾ.ಎಂ.ಜಿ.ಈಶ್ವರಪ್ಪನವರು ಜಾನಪದ ಕಥೆಗಳನ್ನು ಸಂಗ್ರಹಿಸಿ, ‘ಬಂಗಾರ ಕೂದಲ ಜೈರಾಣಿ’ ಎಂಬ ಹೆಸರಿನಲ್ಲಿ ಹೊರತಂದಿದ್ದಾರೆ. ಇದೂ ಸಹ ಇಲ್ಲೇಖಾರ್ಹ.

* ಇವನಾರವ ಎನಿಸದಿರಯ್ಯ: ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬರಹಗಾರರನ್ನು ಈವರೆಗು ಚರ್ಚಿಸಲಾಗಿದೆ. ನಾನು ಈಗಾಗಲೇ ಹೇಳಿದಂತೆ ಒಬ್ಬ ಲೇಖಕನನ್ನು ಪ್ರಾದೇಶಿಕತೆಗೆ ಕಟ್ಟಿ ಹಾಕುವುದು ಸರಿಯಲ್ಲ. ಆದರೂ ಈಗ ದಾವಣಗೆರೆ ಜಿಲ್ಲೆಯ ವ್ಯಾಪ್ತಿಗೆ ಬರುವ ಹೊನ್ನಾವಳಿಯ ಕಥೆಗಾರ ಬಿದರಹಳ್ಳಿನರಸಿಂಹ ಮೂರ್ತಿ, ಶಿವದೊಗ್ಗ ಮೂಲದ ಕಂನಾಡಿಗ (ಸ್ವಲ್ಪಕಾಲ ದಾವಣಗೆರೆಯಲ್ಲಿದ್ದು, ಕೆಲಸ ಮಾಡಿ ಬಂದವರು), ಹೊಸದುರ್ಗದ ಟಿ.ಎಸ್.ರಾಜೇಂದ್ರಪ್ರಸಾದ್ ಮುಂತಾದವರನ್ನು ದಾವಣಗೆರೆಯವರಲ್ಲ ಎಂದು ಹೇಳುವುದು ಹೇಗೆ? ಒಂದು ದೃಷ್ಟಿಯಿಂದ ಇವರನ್ನೂ ಅನೂರ್ಜಿತ ಗೊಳಿಸುವುದು ಸರಿಯೇ? ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ಬಿದರಹಳ್ಳಿಯವರಂತಹ ಲೇಖಕರು ಈ ಗಡಿಯನ್ನು ದಾಟುವ ಶಕ್ತಿಯುಳ್ಳವರು. ‘ಹಂಸೆ ಹಾರಿತ್ತು’ ಸಂಕಲನವು ಕನ್ನಡದ ಕಥೆಗಳಲ್ಲೇ ಉತ್ತಮ ಎನ್ನುವ ಕಥೆಗಳನ್ನು ಒಳಗೊಂಡಿದೆ. ಅವರ ಕಥನ ಕ್ರಮವೂ ವಿಶಿಷ್ಟವಾಗಿದ್ದು ಅವರನ್ನು ಮಹತ್ತದದ ಲೇಖಕರೆನ್ನಿಸುವಂತೆ ಮಾಡಿದೆ. ಹೊನ್ನಾಳಿಭಾಷೆಯನ್ನು ಬಳಸುವ ಅವರ ರೀತಿಯೂ ಆಪ್ಯಾಯಮಾನವಾಗಿದೆ.

* ಮನುಜಮತದ ದಾರಿ – ಒಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ನೆಲದಲ್ಲಿ ಇಷ್ಟು ಜನ ಕಥೆಗಾರರು ಕಾಣಿಸುವುದು ಕನ್ನಡ ಕಥಾ ಸಾಹಿತ್ಯಕ್ಕೆ ಒಂದು ಭರವಸೆಯಂತೆ ಕಾಣುತ್ತದೆ. ಅದರಲ್ಲೂ ಮಾನವೀಯ ಸಹಸ್ಪಂದನಗಳನ್ನು ಎತ್ತಿಹಿಡಿಯುವ ಮೌಲ್ಯಗಳು ಇಲ್ಲಿನ ಕಥೆಗಳಲ್ಲಿ ಕಾಣುವುದರಿಂದ ಕಥನದ ಘನತೆಯೂ ಹೆಚ್ಚಿದೆ ಎಂದು ಹೇಳಬಹುದು.
———————
ದಾವಣಗೆರೆ ಸಾಹಿತ್ಯ ಸಮ್ಮೇಳನದ ನೆನಪಿನ ಸಂಚಿಕೆಗೆಂದು ಬರೆದ ಲೇಖನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೈಸೂರು ಮಕ್ಕಳು
Next post ಗೋರಿಗಳ ನಡುವೆ

ಸಣ್ಣ ಕತೆ

 • ಬೂಬೂನ ಬಾಳು

  ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

  ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

cheap jordans|wholesale air max|wholesale jordans|wholesale jewelry|wholesale jerseys