ನಿಮ್ಮ ನಾಡಾವುದು ?
ಮೈಸೂರು.
ನಿಮ್ಮೂರದಾವುದು ?
ಮೈಸೂರು.
ಕನ್ನಡದ ಕಣ್ಣದು,
ಮೈಸೂರು.
ನಾಲುಮಡಿ ಕೃಷ್ಣನ
ಮೈಸೂರು.
ಅಲ್ಲೆಲ್ಲಿ ನೋಡಿದರು ಬಾನ ಕರೆಯಲಿ ಹದುಗಿ ಕಾರ ಮುಗಿಲಂತಿಹುವು ಬೆಟ್ಟ ಹಬ್ಬಿ ;
ತೆರೆ ಎದ್ದು ಬಿದ್ದು ಬಹ ಬಯಲಲ್ಲಿ ಹಳ್ಳಿಗಳು, ತಾವರೆಯಕೆರೆ, ತೋಟ ಹೊಲದ ಹಸುರು;
ಕಾಡಿನಲಿ ನುಸಿಯುತ್ತ, ಕಲ್ಲಿನಲ್ಲಿ ಮೊರೆಯುತ್ತ, ಮರಳಿನಲ್ಲಿ ಸುಳಿಸುಳಿದು, ಸರಿಯ ದುಮುಕಿ,
ಪಯಿರುಗಳ ಬದುಕಾಗಿ, ಹೊಳಲುಗಳ ಬೆಳಕಾಗಿ, ಕಣ್ಣುಗಳ ಬೆರಗಾಗಿ ಹರಿವ ಹೊನಲು.
ಅಲ್ಲಿ ಅಲೆಯಲೆಯಾಗಿ ಬಂದು, ನೆಲೆನೆಲೆಯಾಗಿ ನಿಂದು, ಹಲತೆರದಿಂದ ನುಡಿದು, ನಡೆದು,
ಕಡೆಗೆ ನಾಡೊಂದೆಂದು, ದೊರೆಯೊಬ್ಬ ನಮಗೆಂದು, ಬಾಳ ಬೆಲೆ ಹುದುವೆಂದು ಕಲಿತು, ಕಲೆತು,
ಜಾಣಿನಲಿ, ಚೆಲುವಿನಲಿ, ಸೊಗಸಿನಲಿ, ನಯದಲೌದಾರ್‍ಯದಲಿ, ಕಾರ್‍ಯದಲಿ ಕಳಶವೆನಿಸಿ,
ಮೆರೆಯುತಿಹ ಜನವ ನಾನೇನೆಂಬೆ, ಎಂತು ನಾ ಕನ್ನಡಿಗರೈಸಿರಿಯ ಬಣ್ಣಿಸುವೆನು.
ಚಿನ್ನದ ನಾಡದು,
ಮೈಸೂರು,
ಗಂಧದ ಗುಡಿಯದು,
ಮೈಸೂರು,
ವೀಣೆಯ ಬೆಡಗದು,
ಮೈಸೂರು,
ನಾಲುಮಡಿ ಕೃಷ್ಣನ
ಮೈಸೂರು,
ಅಲ್ಲೊಬ್ಬ ನಮಗಿಹನು ನಾಯಕನು ; ಭಕ್ತಿಯಲಿ ನಿಲುಸಿಲುಕಿ ಕುಣ್ತುಂಬ ನೋಡುತಿರಲು,
ಆನೆಯಂಬಾರಿಯಲಿ ನಸುನಗೆಯನಿಕ್ಕೆಲಕೆ ಬೀರಿ, ಜನರಕ್ಕರೆಯನುಕ್ಕಿಸುವನು.
ಧೀರನಾತನು ; ತುಂಬುಗಾಂಭೀರ್‍ಯದಲಿ ಸತ್ಯವನೆ ಎತ್ತಿ ನಿಲಿಸುವನು ಪ್ರಜೆಯ ತಂದೆ ;
ಮರೆತು ತನ್ನನು ರಾಜ್ಯ ಸೇವೆಯಲಿ, ಸಲಿಸುವನು ಧರ್‍ಮವನು ರಾಜರ್ಷಿ ಕರ್‍ಮಯೋಗಿ.
ಬನ್ನಿ ಕೆಳೆಯರ, ನಮ್ಮ ಬಾಳಿಕೆಯ ಕಾಣಿಕೆಯನೊಪ್ಪಿಸುವ, ಕೈಕೊಳುವ ದೊರೆಯ ಗುರಿಯ ;
ನೋಹಿಯಾತನದು-ತನ್ನರ ಮನೆಯ ಹಸಗೆಯ್ದು ಬೆಳಗಿದಂತೆಯೆ, ಬೆಳಗಿ ಊರ, ನಾಡ,
ಹಸಗೆಯ್ವೆ, ಹೊಸಗೆಯ್ವೆನೆಂಬೊಲುಮೆ ; ನಾವೆಲ್ಲರಾ ನಾಯಕನ ದಳದಿ ದೀಕ್ಷೆ ಪಡೆದು,
ಮೀರಿ ಬಳಸುವ ಬನ್ನಿ ಬುದ್ಧಿಯನು ಶ್ರದ್ಧೆಯನು ಕನ್ನಡಿಗರೈಸಿರಿಯ ಬೆಳೆಯ ಬೆಳಸಿ.
ಬೆಳೆಯುವ ನಾಡದು,
ಮೈಸೂರು.
ಇಳೆಯ ಮಾದರಿಯದು
ಮೈಸೂರು.
ಕನ್ನಡಿಗನುಸಿರದು,
ಮೈಸೂರು.
ನಾಲುಮಡಿ ಕೃಷ್ಣನ
ಮೈಸೂರು,
*****
೧೯೨೦