ಬದುಕ ಪಯಣದಲ್ಲೊಂದು ಆಕಸ್ಮಿಕ

ಬದುಕ ಪಯಣದಲ್ಲೊಂದು ಆಕಸ್ಮಿಕ

ಚಿತ್ರ: ಅನೆಲ್ಕ
ಚಿತ್ರ: ಅನೆಲ್ಕ

ಓಡೋಡುತ್ತಲೇ ಬಂದರೂ ಬಸ್‌ಸ್ಟಾಪಿಗೆ ಬರುವಷ್ಟರಲ್ಲಿಯೇ ಬಸ್ಸು ಹೊರಟು ಬಿಟ್ಟಿತ್ತು. ಬಾಗಿಲಿನುದ್ದಕ್ಕೂ ನೇತಾಡುತ್ತಿದ್ದವರನ್ನು ಕಂಡೇ ಬಸ್ಸು ಹತ್ತುವ ಧೈರ್ಯ ಬರಲಿಲ್ಲ. ವಾಚು ನೋಡಿಕೊಂಡಳು. ಗಂಟೆ ಆಗಲೇ ೧೦ ತೋರಿಸುತ್ತಿತ್ತು. ಇನ್ನರ್ಧ ಗಂಟೆಯಲ್ಲಿ ಆಫೀಸಿನಲ್ಲಿರಬೇಕು. ಇನ್ ಕಾಲುಗಂಟೆ ನೋಡಿ ನಂತರ ಆಟೋ ಹತ್ತುವುದೆಂದು ಅಂದುಕೊಳ್ಳುತ್ತಿರುವಾಗಲೇ ಬಸ್ಸು ಬಂದೇ ಬಿಟ್ಟಿತು. ಈ ಬಸ್ಸಿನಲ್ಲಿ ಹೋದರೆ ೧೦ ನಿಮಿಷ ನಡಿಬೇಕು. ಆದ್ರೂ ಚಿಂತೆಯಿಲ್ಲ. ಆಟೋ ಹಣ
ಉಳಿಯುತ್ತದೆಯಲ್ಲ ಎಂದು ಕೊಂಡವಳೇ ಬಸ್ಸು ಹತ್ತಿದಳು.

ಮಹಿಳೆಯರಿಗಾಗಿ ಎಂದಿದ್ದರೂ ಆದೇ ಸೀಟಿನ ಮೇಲೆ ಕುಳಿತಿದ್ದ ವ್ಯಕ್ತಿಗೆ “ಏನ್ರಿ ಮೇಡಂ ಟೈಂ ಎಷ್ಟು” ಕೇಳಿದಳು.

“ಏನ್ರಿ ನಿಮಗೆ ಕಣ್ಣು ಕಾಣಿಸುವುದಿಲ್ಲವೇ ನಾನೇನು ಹೆಂಗಸಾಗಿ ಕಾಣ್ತ ಇದ್ದಿನಾ” ರೇಗಿದಾಗ ಸುತ್ತಲಿದ್ದವರೆಲ್ಲ ಗೊಳ್ಳೆಂದು ನಕ್ಕರು.

“ಮತ್ಯಾಕ್ರಿ, ಹೆಂಗಸರಿಗೆ ಅಂತ ಇರುವ ಸೀಟಿನಲ್ಲಿ ಕುಳಿತಿದ್ದೀರಿ? ಪ್ರಶ್ನಿಸಿದಾಗ

“ಖಾಲಿ ಇತ್ತು, ಕುತ್ಕೊಂಡೆ ಈಗೇನು ನೀವು ಕುತ್ಕೊ ಬೇಕು ತಾನೇ ಸರಿ ಕುತ್ಕೊಳ್ಳಿ” ಎಂದವನೇ ತನ್ನ “ಜಾಗ ಬಿಟ್ಟು ಕೊಟ್ಟಾಗ ಗೆಲುವಿನ ನಗೆ ಬೀರುತ್ತ ಕುಳಿತುಕೊಂಡಳು.  ಈ ಪ್ರಾಣಿ ಇಷ್ಟು ಬೇಗ ಸೀಟು ಬಿಟ್ಟು ಕೊಡಬೇಕಾದ್ರೆ, ಹೆಂಗಸರಿಗೆ ಮೀಸಲಾದ ಜಾಗದಲ್ಲಿ ಕುತ್ಕೊಂಡೊವರನ್ನೆಲ್ಲ ಹುಡುಕಿ ಫೈನ್ ಹಾಕ್ತ ಇರುವುದು ಗೊತ್ತಾಗಿದೆ.  ಅದಕ್ಕೆ ಅಷ್ಟುಸುಲಭವಾಗಿ ಎದ್ದು ಹೋಗಿರುವುದು ಅಂದು ಕೊಂಡಳು.

ಆಫೀಸು ತಲುಪಿದ ಕೂಡಲೇ ಮನಸು ಒಂದು ರೀತಿ ಸಡಗರಿಸಿತು. ಹದಿನೈದು ದಿನ ಆಯ್ತು. ಆದ್ರೂ ಎನೋ ಯುಗಗಳಂತೆ ಅನಿಸುತ್ತಿದೆ ತಾನು ಆಫೀಸಿಗೆ ಬರದೆ.
ಬಂದವಳೇ ತನ್ನ ಛೇರಿನತ್ತ ನಡೆಯುತ್ತಿದ್ದಾಗಲೇ ಎದುರಿಗೆ ಬಂದ ಪ್ಯೂನ್ ಬಸಪ್ಪನಿಗೆ “ಏನು ಬಸಪ್ಪ ಹೇಗಿದ್ದೀಯಾ” ಪ್ರಶ್ನಿಸಿದಾಗ ತಬ್ಬಿಬ್ಬಾದ ಬಸಪ್ಪ “ಚೆನ್ನಾಗಿದ್ದೀನಿ” ಎಂದುಸುರಿ ಆಶ್ಚರ್ಯ ಚಕಿತನಾಗಿ ಒಳಗೆ ಓಡಿಯೇ ಬಿಟ್ಟಾಗ “ಒಳ್ಳೇ ಬಸಪ್ಪ” ಅಂದುಕೊಂಡಳು.

ಟೇಬಲ್ ಮೇಲಿದ್ದ ಒಂದಿಂಚು ಧೂಳನ್ನು ಕಂಡು ಸಿಟ್ಟು ನೆತ್ತಿಗೇರಿ “ರೀ ಬಸಪ್ಪ ಬನ್ರಿ ಇಲ್ಲಿ, ನಾನು ಹದಿನೈದು ದಿನ ಆಫೀಸಿಗೆ ಬರಲಿಲ್ಲ ಅಂತ ನನ್ನ ಟೇಬಲ್ನೆ ಒರೆಸಿಲ್ಲವಲ್ಲರಿ. ಎಂಥ ಜನ ನೀವು, ಬನ್ನಿ ಇಲ್ಲಿ ಮೊದಲು ಟೇಬಲ್ ಕ್ಲೀನ್ ಮಾಡಿ” ಗದರಿಸಿದಾಗ.

“ಅದು ಹಾಗಲ್ಲ ಮೇಡಂ, ನೀವು ಇವತ್ತು ಬರ್ತೀರಿ ಅಂತ ನಂಗೆ ಗೊತ್ತೇ ಇರಲಿಲ್ಲ. ಇಷ್ಟು ಬೇಗ ನೀವೆಲ್ಲಿ ಬರ್ತೀರಾ ಅಂದುಕೊಂಡೆ” ತಲೆ ಕೆರೆಯುತ್ತ ನಿಂತಾಗ ಛೇ ಎಂದುಕೊಳ್ಳುತ್ತ ಸುಮ್ಮನಾಗಿ ಬಿಟ್ಟಳು.

ಆಫೀಸಿನ ಗಡಿಯಾರ ಡಣ್‌ ಎಂದು ಶಬ್ದ ಮಾಡಿ ಹತ್ತೂವರೆಯಾಯ್ತು ಅಂತಾ ಹೇಳಿತು. ಒಬ್ಬೊಬ್ಬರಾಗಿ ಆಫೀಸಿಗೆ ಇಳಿಯತೊಡಗಿದವರನ್ನು ಕಂಡು ಥೂ ಈ ಜನಕ್ಕೆ ಸ್ವಲ್ಪನೂ ಟೈಂ ಸೆನ್ಸ್ ಇಲ್ಲಾ. ಆಫೀಸ್ ಅಂದ್ರೆ ಎಷ್ಟು ಹೊತ್ತಿಗೆ ಬೇಕಾದ್ರೂ ಬರಬಹುದು ಅಂತಾ ತಿಳ್ಕೊತಾರೆ. ಮನಸ್ಸಿನಲ್ಲಿಯೇ ಬೈಯ್ದುಕೊಳ್ಳುತ್ತ ಫೈಲ್ ಓಪನ್ ಮಾಡಿ ಬರೆಯತೊಡಗಿದಳು.

ತನ್ನ ಕೆಲಸದಲ್ಲಿ ಮುಳುಗಿದ್ದವಳನ್ನು ಕಂಡು ದಂಗಾದ ವೀಣಾ “ಅರೆ ಮನು, ಆಗ್ಲೆ ಆಫೀಸಿಗೆ ಬಂದುಬಿಟ್ರಾ, ನೀವು ಇಷ್ಟು ಬೇಗ ಆಫೀಸಿಗೆ ಬರ್ತೀರಾ ಅಂತ ಅಂದುಕೊಂಡಿರಲೇ ಇಲ್ಲಾ” ಪ್ರಶ್ನೆಗೆ ಬೇಸರವಾಗಿ “ಯಾಕ್ರೀ ಬರಬಾರದಿತ್ತಾ, ಹದಿನೈದು ದಿನ ರಜಾ ವೇಸ್ಟಾಗಿರುವುದು ಸಾಲ್ದೆ” ಹುಬ್ಬುಗಂಟಿಕ್ಕಿದಳು.

ಸೀಡಾರನೇ ಬಂದ ಉತ್ತರದಿಂದ ಪೆಚ್ಚಾದ ವೀಣಾ ಸುಮ್ಮನೆ ತನ್ನ ಟೇಬಲನತ್ತ ನಡೆದಳು.

“ಏನ್‌ಮೇಡಂ ಹೇಗಿದ್ದಿರಾ, ಪರ್ವಾಗಿಲ್ಲ, ಇಷ್ಟು ಬೇಗ ಚೇತರಿಸಿಕೊಂಡು ಆಫೀಸಿಗೆ ಬಂದು ಬಿಟ್ಟಿದ್ದೀರಲ್ಲಾ” ಟೇಬಲಿನ ಮುಂದೆ ಒರಗಿ ಮುಖಕ್ಕೆ ಹತ್ತಿರ ಬಂದು ನುಡಿದ ಕಾಡುಕಪಿ ಅರ್ಥಾತ್ ಕಪಿಲ್‌ದೇವನನ್ನು “ದೂರ ನಿಂತ್ಕೊಂಡು ಮಾತಾಡೋಕೆ ಬರಲ್ವಾ, ಎಷ್ಟು ಸಲ ಹೇಳಬೇಕು ನಿಮ್ಗೆ, ಹೀಗೆ ಮೈಮೇಲೆ ಬೀಳೋ ತರ ಬಂದು ಮಾತಾಡಿಸಬೇಡಿ ಅಂತಾ” ಗುಂಡು ಸಿಡಿದಂತೆ ನುಡಿದಾಗ

“ಯಾಕ್ರಿ ಹಾಗೆ ಗುರ್ರೆನ್ನುತ್ತೀರಾ, ಏನೋ ಪಾಪ ಹೇಗಿದ್ದಿರಿ ಅಂತಾ ವಿಚಾರಿಸಿದರೆ ಮುಖಕ್ಕೆ ಹೊಡೆದ ಹಾಗೆ ಮಾತಾಡ್ತಿರಾ? ಇನ್ನೂ ನಿಮ್ಮ ಕೊಬ್ಬು ಇಳಿದಿಲ್ಲವಲ್ಲ.
ಮಹಾಪತಿವ್ರತೆಯ ಥರಾ ನಡ್ಕೋತ್ತಿರರ್ಲಿ.” ವ್ಯಂಗ್ಯವಾಗಿ ಚುಚ್ಚಿದ.

ದುರುದುರು ನೋಡಿದವಳನ್ನೆ ಅಪಹಾಸ್ಯದಿಂದ ನೋಡಿ ನಕ್ಕ.

“ಅಯ್ಯೋ ಅಯ್ಯೋ, ಮೇಡಂ ಬಂದು ಬಿಟ್ಟಿದ್ದಾರೆ. ಯಾಕೆ ಇಷು ಬೇಗ ಬರೋಕೆ ಹೋದ್ರಿ, ಪಾಪ ನೀವು ಹೇಗಿದ್ದಿರೊ ಏನೋ ಅಂತಾ ತುಂಬಾ ಯೋಚ್ನೆ ಮಾಡ್ತಾ ಇದ್ದೆ.  ಸದ್ಯ ನೀವು ಹುಶಾರಾಗಿದ್ದಿರಲ್ಲಾ”, ತನ್ನ ಎದೆಯತ್ತಲೇ ದೃಷ್ಟಿ ನೆಟ್ಟು ನುಡಿದ, ನೋಟದಲ್ಲೇ ಬೆತ್ತಲೆ ಮಾಡುತ್ತಿದ್ದ ಶ್ರೀಪತಿಯ ಬಗ್ಗೆ ಅಸಹ್ಯಿಸಿಕೊಂಡಳು.

ಆಫೀಸಿನಲ್ಲಿದ್ದವರೆಲ್ಲರೂ ಹೀಗೆಯೇ ಪ್ರಶ್ನಿಸಿ, ವ್ಯಂಗ್ಯ ಕುಹಕ, ಅಪಹಾಸ್ಯ, ಕರುಣೆ, ಹೀಗೆ ನಾನಾ ವಿಧದ ಭಾವನೆಗಳನು ವ್ಯಕ್ತ ಪಡಿಸಿದಾಗ ರೋಸಿ ಹೋದಳು.

ಕೊನೆಗೆ ಬಾಸ್ ಕೂಡ ಅವಳು ಕುಳಿತಲ್ಲಿಗೆ ಬಂದು, “ಏರ್ನಿ, ಮನುಜ, ನೀವೆಲ್ಲಿ ಆಫೀಸಿಗೆ ಬರೋದೇ ಇಲ್ಲವೇನೋ ಅಂತ ಹೆದರಿಬಿಟ್ಟಿದ್ದೆ. ಆಫೀಸಿನಲ್ಲಿ ನೀವಿಲ್ಲ
ಅಂದ್ರೆ ಚಂದ್ರನಿಲ್ಲದ ಆಕಾಶದಂತೆ. ಸದ್ಯ ಬಂದ್ರಲ್ಲ”. ಮೆಚ್ಚುಗೆಯಿಂದ, ಎಲ್ಲರೆದುರು ನುಡಿದಾಗ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿತ್ತು. ಎಲ್ಲರೆದುರು ಬಾಸ್ ತನ್ನನ್ನು ಹೊಗಳಬಾರದಿತ್ತು. ಚಂದ್ರನಿಗೆ ಹೋಲಿಸಬಾರದಿತ್ತು ಎಂದು ಮನಸ್ಸಿನಲ್ಲಿಯೇ ಹೇಳಿಕೊಂಡಳು.

ಬಾಸ್ ಒಳಗೆ ಹೋಗುತ್ತಿದ್ದಂತೆಯೇ ಶಾಂತ “ಅಲ್ವೆ, ಮತ್ತೇ, ಬಾಸ್‌ಗೂ ಕೂಡ ಮನುಜ ಚಂದ್ರನಂತೆ ಕಾಣ್ತ ಇದ್ದಾರೆ, ಇನ್ನು ಇಲ್ಲಿರುವವರಿಗೆಲ್ಲ ಇನ್ನೇನಾಗಿ ಕಾಣ್ತಾರೋ, ಅಂತೂ ಚಂದ್ರನಿಗೆ ಕಲೆ ಇದ್ದರೂ ಎಲ್ಲರಿಗೂ ಆ ಚಂದ್ರನೇ ಇಷ್ಟ ಅಲ್ವೆ.  ಏಕೆ ಅಂದ್ರೆ ನಾವೆಲ್ಲ ಚಂದ್ರ ಆಗೋಕೆ ಸಾಧ್ಯಾನಾ” ಕೊಂಕು ನುಡಿಯುತ್ತ ಮನುಜಳ ಮೇಲಿನ ಅಸೂಯೆಯನ್ನು ಕಾರಿಕೊಂಡಳು.

“ಮನುಜ ನಿಮ್ಮ ಧೈರ್ಯವೇ ಧೈರ್ಯ ಕಣ್ರಿ, ಅದೆಷ್ಟು ಹಗುರಾಗಿ ತಗೊಂಡು ಬಿಟ್ಟಿದ್ದಿರಾ, ನಾವೆಲ್ಲ ನಿಜಕ್ಕೂ ಹೆದರುಪುಕ್ಕಲು ಬಿಡಿ, ನಮಗೆ ಹಾಗೆ ಆಗಿದ್ದಿದ್ರೆ ಈ ಭೂಮಿ ಮೇಲೆ ಇರ್ತ ಇರ್ಲಿಲ್ಲ. ಸತ್ತು ಎಷ್ಟುದಿನ ಆಗಿರುತ್ತಿತ್ತು. ನಿಜಕ್ಕು ನಿಮ್ಮ ಎದೆಗಾರಿಕೆನಾ ಮೆಚ್ಚಬೇಕಾದದ್ದೆ” ತನ್ನನ್ನೆ ತಾನು ಹೀಗೆಳುದುಕೊಳ್ಳುತ್ತಾ ಮನುಜಳನ್ನು ಹೊಗಳುವ ನೆಪದಲ್ಲಿ ತನಗಾಗಿದ್ದ ಅಪಮಾನವನ್ನು ತೀರಿಸಿಕೊಳ್ಳಲೆತ್ನಿಸಿದಳು ವೀಣಾ.  ತಾನು ಕೇಳಿದ್ದು ಆಫೀಸಿಗೆ ಬೇಗ ಬಂದ್ರಲ್ಲಾ ಅಂತಾ ಆದರೆ ಅದ್ಹೇಗೆ ಸಿಡಿದಳು ಎಂದುಕೊಂಡ ವೀಣಾ ಮಾತಿನಲ್ಲಿ ಕುಟುಕಿದಳು.

“ಯಾಕೆ, ಯಾಕೆ ಹೀಗೆ ಎಲ್ಲರೂ ಅವಳನ್ನು ಮಾತಿನಲ್ಲಿ ಕೊಲ್ತ ಇದ್ದೀರಾ, ಎಲ್ಲವನ್ನು ಮರೆತು ಮೊದಲಿನ ಹಾಗೆ ಇರಬೇಕು ಅಂದುಕೊಂಡಿರೊ ಅವಳ ನಿರ್ಧಾರವನ್ನು ಯಾಕೆ ಚೂರು ಚೂರು ಮಾಡ್ತ ಇದ್ದೀರಿ, ಅದರಿಂದ ನಿಮಗೆ ಸಿಗೋ ಲಾಭ ಏನು, ಏನ್ರಿ ವೀಣಾ ನೀವು ಒಂದು ಹೆಣ್ಣು ಅನ್ನೋದನ್ನಮರೆತು ಬಿಟ್ರಿದ್ದಿರರ್ಲಿ.
ಶಾಂತಮ್ಮ ನಿಮಗೂ ಹೆಣ್ಣು ಮಕ್ಕಳಿದ್ದಾರೆ ತಾನೇ, ಗಾಜಿನ ಮನೇಲಿ ಇರೋ ನೀವು ಇನ್ನೊಂದು ಮನೆಗೆ ಕಲ್ಲ್ಯಾಕೆ ಹೊಡೆಯೋಕೆ ಹೋಗ್ತಿರಾ. ಶ್ರೀಪತಿ ಕಪಿಲ್ ದೇವ್ರವರೇ
ಕೈಗೆ ಎಟುಕದೆ ಇರೋ ದ್ರಾಕ್ಷಿ ಹುಳಿ ಅಂತೆ, ಬಾಯಿಗೆ ಬಂದ ಹಾಗೆ ಮಾತಾಡ್ತಿರಾ.  ನಾಳೆ ನಿಮ್ಮ ಮನೆಯಲ್ಲಿ ಯಾರಿಗಾದ್ರೂ ಇಂತಹ ಸಂದರ್ಭ ಬಂದಿದ್ರೆ ಆಗ ನೀವೇನು ಮಾಡ್ತ ಇದ್ರಿ.  ಕುತ್ತಿಗೆ ಹಿಸುಕಿ ಸಾಯಿಸಿ ಬಿಡ್ತ ಇದ್ರಾ.  ಛೀ ನಿಮ್ಮಂತವರೆಲ್ಲ ಈ ಆಫೀಸಿನಲ್ಲಿರುವುದೇ ನನಗೆ ಅಸಹ್ಯ ಅನ್ನಿಸುತ್ತ ಇದೆ. ಛೇ” ತಿರಸ್ಕಾರದಿಂದ ಹೇಳಿದವಳೇ.

“ಮನುಜ ಸಂತೆಯ ಒಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯ ಅನ್ನುವುದನ್ನು ಇಂತವರ ಬಗ್ಗೆನೇ ಹೇಳಿದ್ದಾರೆ ಅನ್ನಿಸುತ್ತೆ. ನೀನೇನು ಬೇಸರ
ಮಾಡಿಕೊಳ್ಳಬೇಡ. ಒಂದೆರಡು ದಿನ ನಾಲಿಗೆ ಹೇಗೆ ಬೇಕೋ ಹಾಗೆ ಹರಿದಾಡುತ್ತೆ.  ಹೊಸ ವಿಷಯ ಸಿಕ್ಕಿದ ಕೂಡಲೇ ಈ ವಿಷಯನ್ನ ಮರೆತು ಬಿಡುತ್ತೆ. ನೀನು
ಎದೆಗುಂದಬೇಡ, ಧೈರ್ಯವಾಗಿರು” ಎಲ್ಲರ ಮಾತಿನ ಧಾಳಿಯಿಂದ ಕಂಗೆಟ್ಟು ಕುಳಿತಿದ್ದ ಮನುಜಳನ್ನು ರೇಖಾ ಸಂತೈಸಿದಳು.

ಯಾವುದನ್ನು ಮರೆಯಬೇಕು ಅಂದುಕೊಂಡು ಅದನ್ನು ಮರೆಯಲೆಂದೇ ಆಫೀಸಿಗೆ ಬಂದಿದ್ದ ಮನುಜಳಿಗೆ ಪ್ರಯತ್ನ ಪಟ್ಟು ಮರೆಯುತ್ತಿದ್ದ, ಮರೆತಿದ್ದೆ ಎಂದು
ಭಾವಿಸಿಕೊಳ್ಳುತ್ತಿದ್ದ ಮನುಜಳಿಗೆ ಅದಾವುದನ್ನು ಮರೆಯದಂತೆ ಪ್ರತಿಯೊಬ್ಬರೂ ಚುಚ್ಚಿ ಚುಚ್ಚಿ ಎಚ್ಚಿರಿಸಿದರು. ಹಳೆಯದೆಲ್ಲ ನೆನಪಾಗಿ ಗಡಗಡನೆ ನಡುಗಿದಳು.

“ಸಾರಿ, ರೇಖಾ, ನಂಗೀವತ್ತು ಕೆಲ್ಸ ಮಾಡೋಕೆ ಆಗ್ತಿಲ್ಲ. ಬಾಸ್‌ಗೆ ಹೇಳಿ ಬಿಡು ಪ್ಲೀಸ್” ಎಂದವಳನ್ನು ನೋಡಿ ಏನೋ ಹೇಳಲು ಪ್ರಯತ್ನ ಪಟ್ಟ ರೇಖಾ ಕೊನೆಗೆ
ಸುಮ್ಮನಾಗಿ ತಲೆಯಾಡಿಸಿದಳು. ಅವಳಿಗೀಗ ಖಂಡಿತಾ ಏಕಾಂತಬೇಕು. ಅದರ ಅವಶ್ಯಕತೆ ಖಂಡಿತಾ ಇದೆ ಎಂದುಕೊಂಡವಳೇ “ಸರಿ ನೀನು ಹೋಗು ಮನು, ನಾ ಬಾಸ್ಗೆ ಹೇಳ್ತಿನಿ” ಎಂದು ಕಳುಹಿಸಿ ಕೊಟ್ಟಳು.

ಬೀಗ ತೆಗೆದು ಮನೆಗೆ ಹೊಕ್ಕೊಡನೆ ಮಂಚದ ಮೇಲೆ ದುಪ್ಪೆಂದು ಬಿದ್ದವಳೇ ಅಳಲಾರಂಭಿಸಿದಳು. ಸಾಕಷ್ಟು ಅತ್ತು ತನ್ನ ಮನಸ್ಸಿನ ದುಗುಡವನ್ನೆಲ್ಲ ಇಳಿಸಿಕೊಂಡ ಮೇಲೆ ಯೋಚಿಸಲಾರಂಭಿಸಿದಳು.

ಯಾಕೆ ಈ ಜನ ರಣಹದ್ದುಗಳಂತೆ ತನ್ನನ್ನು ಕುಕ್ಕಿ ಕುಕ್ಕಿ ತಿನ್ನುತ್ತಾರೆ. ಇದರಲ್ಲಿ ತನ್ನ ಪಾತ್ರವೇನಿದೆ. ತನ್ನ ಅಪರಾಧವೇನಿದೆ ಹೀಗಾಯಿತೆಂದು ತಾನು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತೆ. ಇಲ್ಲಾ ನಂಗೆ ಸಾಯೋಕೆ ಇಷ್ಟ ಇಲ್ಲಾ. ನಾನು ಸಾಯಲಾರೆ. ಆದ್ರೆ ಈ ಜನ ಬದುಕೋಕು ಬಿಡಲ್ಲವಲ್ಲ. ಆ ಘಟನೆ ಬಗ್ಗೆ ನಂಗೆ ನೋವಾಗಿದೆ, ನನ್ನ ಮನಸ್ಸಿಗೆ ಘಾಸಿಯಾಗಿದೆ ನಿಜ.  ಜೀವನದಲ್ಲಿ ಯಾವುದೇ ಬೇಡದ ಆಕಸ್ಮಿಕ ನಡೆದರೆ ಹೀಗಾಗುವುದು ಸಹಜವೇ. ಹಾಗಂತ ಜೀವವನ್ನೇ ಕಳ್ಕೊಳ್ಳೋದ್ದಿಕ್ಕೇ ಆಗುತ್ತಾ.

ಆಗಿದ್ದಾದರೂ ಏನೋ, ಆಫ್ಟರಾಲ್ ಒಂದಿಬ್ಬರೂ ನನ್ನ ಮೇಲೆ ದೈಹಿಕವಾಗಿ ಆಕ್ರಮಣ ನಡಿಸಿದ್ದಾರೆ. ನನ್ನ ವಿರೋಧದ ನಡುವೆಯೂ ನನ್ನ ಅನುಭವಿಸಿದ್ದಾರೆ.
ಅದಕ್ಕೇನು ಮಾಡುವುದು. ನಾನು ಬೆಳಗಿನ ಜಾವ ಊರಿಂದ ಬಂದಿಳಿದದ್ದೆ ತಪ್ಪು. ರಜೆ ಇಲ್ಲಾ ಅಂತಾ ರಾತ್ರೆಯೆಲ್ಲ ಜರ್ನಿ ಮಾಡಿ ಬೆಳಗ್ಗೆ ಆಟೊದವನ್ನ ನಂಬಿ ಮನಗೆ ಹೋಗಿದ್ದು ತನ್ನದೇ ತಪ್ಪು. ಕೆಟ್ಟ ಧೈರ್ಯವೇ ನನ್ನ ಶತ್ರುವಾಯಿತು. ಮನೆಗೆ ಹೋಗಿ ಒಂದೆರಡು ಗಂಟೆ ನಿದ್ದೆ ಮಾಡಬಹುದಲ್ಲ ಎಂದುಕೊಂಡು ಬೆಳಕು ಹರಿಯುವ ತನಕ ಕಾಯದೆ ಆಟೊ ಹತ್ತಿದ್ದೆ ಇಷ್ಟಕ್ಕೆಲ್ಲ ಕಾರಣವಾಯ್ತು.

ಒಂಟಿ ಹೆಣ್ಣು, ನಿರ್ಜನ ಪ್ರದೇಶ ಅವರನ್ನ ಪ್ರಚೋದಿಸಿ ನನ್ನ ಮೇಲೆ ಧಾಳಿ ಮಾಡಿದರು. ನಾವೆಷ್ಟೇ ವಿರೋಧಿಸಿದರೂ ಅವರಿಂದ ತಪ್ಪಿಸಿಕೊಳ್ಳಲು
ಅಸಾಧ್ಯವೆನಿಸಿದಾಗ, “ರೇಪ್ ಅನಿವಾರ್ಯವಾದಾಗ ಕಣ್ಮುಚ್ಚಿ ಅನುಭವಿಸು” ಎಂಬ ಸೂಕ್ತಿ ನೆನಪಾಗಿ ನನ್ನ ವಿರೋಧ ನಿಲ್ಲಿಸಿಬಿಟ್ಟೆ. ಒಬ್ಬರಾದ ನಂತರ ಒಬ್ಬರು ನೆನೆಸಿಕೊಂಡರೆ ಮೈಮೇಲೆ ಮುಳ್ಳುಗೇಳೇಳುತ್ತವೆ.

ಮೂರನೆಯವ ಮೈಮೇಲೇರಿ ಬರುವಷ್ಟರಲ್ಲಿ ಜನರು ಜಾಗಿಂಗ್ ಬರುತ್ತಿರುತ್ತಾರೆ ಈ ವೇಳೆಯಲ್ಲಿ ಎಂಬ ನೆನಪಾಗಿ ಜೋರಾಗಿ ಕೂಗಿಕೊಳ್ಳತೊಡಗಿದೆ. ನಾನೆಣಿಸಿದಂತೆಯೇ ಆಯಿತು. ಒಟ್ಟಾಗಿ ಬರುತ್ತಿದ್ದ ನಾಲೈದು ವಿದ್ಯಾರ್ಥಿಗಳು ತಮ್ಮ ಕೋಚ್ ಒಂದಿಗೆ ನನ್ನ ಕೂಗು ಕೇಳಿಸಿಕೊಂಡವರು ಇತ್ತ ಓಡಿ ಬಂದು ಆ ಮೂವರನ್ನು ಹಿಡಿದು ಹಿಗ್ಗಾಮುಗ್ಗಾ ಬಡಿದು ಅವರನ್ನು ಪೋಲಿಸರಿಗೊಪ್ಪಿಸಿ ನನ್ನನ್ನು ಅಸ್ಪತ್ರಗೆ ಕರೆತಂದರು.

ಇಬ್ಬರೇ ಆದ್ದರಿಂದ, ಅದೂ ನನ್ನ ವಿರೋಧವೇನು ಹೆಚ್ಚಿರಲಿಲ್ಲವಾಗಿ ದೈಹಿಕವಾಗಿ ಅಷ್ಟೇನೂ ಹಾನಿಯಾಗಿರಲಿಲ್ಲ. ಮಾನಸಿಕವಾಗಿ ಒಂದಷ್ಟು ಕುಗ್ಗಿದರೂ ಧೈರ್ಯವನ್ನೇನು ಕಳೆದುಕೊಂಡಿರಲಿಲ್ಲ.

ರೇಪೆಂದು ಸಾಬೀತಾಗಿದ್ದರಿಂದ ಆ ದುರುಳರಿಗೆ ಶಿಕ್ಷೆ ಖಂಡಿತಾ ಆಗಿಯೇ ಆಗುತ್ತದೆ.  ನಾನೂ ಕೋರ್ಟಿನಲ್ಲಿ ಧೈರ್ಯವಾಗಿ ಎಲ್ಲವನ್ನು ಹೇಳಿದ್ದಾಗಿದೆ. ಇದ್ದುದೊಂದೇ ಆತಂಕ, ಈ ಕೆಟ್ಟ ಘಟನೆಯಿಂದ ಎಲ್ಲಿ ನನ್ನ ಶರೀರದಲ್ಲಿ ಬದಲಾವಣೆಯಾಗುತ್ತದೆಯೋ ಎಂದು ಹೆದರಿದ್ದೆ. ಆದರೆ ನಾಲ್ಕೈದು ದಿನಗಳಲ್ಲಿಯೇ ಮಾಸಿಕಸ್ರಾವ ಕಾಣಿಸಿ ನೆಮ್ಮದಿಯಾಗಿದ್ದೆ.

ಇದೊಂದು ಆಕಸ್ಮಿಕ ಅದಕ್ಕೇಕೆ ಕೊರಗಿ ಕೊರಗಿ ಸಾಯಬೇಕು. ಏನಾಗಿದೆ ಎಂದು ಈ ಜನ ನನ್ನನ್ನು ಹಾಗೆ ನೋಡುತ್ತಾರೆ.

ಬದುಕಿನಲ್ಲಿ ಬೇರೇನೇ ನಡೆದರೂ ಅನುಕಂಪ ತೋರಿಸೋ ಜನ, ರೇಪ್ ನಡೆದಿದೆ ಅಂದಕೂಡಲೇ ಏಕೆ ಬದಲಾಗುತ್ತಾರೆ. ಚುಚ್ಚಿ ಚುಚ್ಚಿ ಮಾತಲ್ಲೇ ಕೊಂದು ಹಾಕ್ತಾರೆ.

ಎಷ್ಟೆ ದೃಢವಾದ ಮನಸ್ಸಿದ್ದರೂ ಈ ಮಾತುಗಳನ್ನು ಕೇಳಲಾರದೆ, ಅವರ ಅಪಹಾಸ್ಯ, ನಿಂದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡು ಬಿಡಬೇಕು ಹಾಗೆ ಮಾಡ್ತಾರೆ.
ರೇಪ್ ಆಯ್ತಲ್ಲ ಅನ್ನೋ ಸಂಕಟಕ್ಕಿಂತ ಹೆಚ್ಚಾಗಿ ಜನರನ್ನ ಎದುರಿಸುವ ಸಂಕಟವೇ ಜಾಸ್ತಿಯಾಗಿದೆ. ಚಿಂತಿಸಿ ಚಿಂತಿಸಿ ತಲೆ ಕಾದ ಕೆಂಡದಂತಾಯಿತು.

ಡೋರ್ ಲಾಕ್ ತೆಗೆದುಕೊಂಡು ಒಳ ಬಂದ ರೇಖಾ ಕೆಂಡದುಂಡೆಗಳಾಗಿರುವ ಮನುಜಳ ಕಣ್ಣುಗಳನ್ನೆ ನೋಡಿ “ಮನು ನಂಗೊತ್ತು ನೀ ಹೀಗೆ ಚಿಂತೆ ಮಾಡ್ತ ಕೂತಿದ್ತಿಯಾ
ಅಂತಾ. ಅಲ್ವೆ ಅವರೆಲ್ಲ ಮಾತಾಡಿದ್ರೂ ಅಂತ ನೀನು ಹೀಗೆ ಬಂದು ಬಿಡುವುದ, ನಾಳೆ ಏನ್ ಮಾಡ್ತಿ. ನಾಳೇನೂ ಬರ್ತೀಯಾ” ಕಳಕಳಿಯಿಂದ ಪ್ರಶ್ನಿಸಿದಳು.

ಒಂದೂ ಮಾತಾಡದೆ ಮಲಗಿಯೇ ಇದ್ದ ಮನುವನ್ನು “ನಿನ್ನ ಬೇಸರ ನಂಗೆ ಅರ್ಥವಾಗುತ್ತೇ ಕಣೇ, ಆದ್ರೆ ಏನ್ ಮಾಡುವುದು ಹೇಳು. ನಿಂಗೆ ಅಫೀಸಿಗೆ ಬರೋದು
ಅಷ್ಟು ಬೇಸರ ಆದ್ರೆ ಒಂದೆರಡು ತಿಂಗಳು ರಜೆ ಹಾಕಿ ವರ್ಗ ಮಾಡಿಸಿಕೊ. ಆ ಜನ ಬದುಕುವುದಕ್ಕಂತೂ ಬಿಡಲ್ಲ. ರಣಹದ್ದುಗಳಂತೆ ಮಾತಿನಲ್ಲಿಯೆ ಕುಕ್ಕಿ ಕುಕ್ಕಿ ತಿನ್ತಾರೆ” ರೋಷದಿಂದ ನುಡಿದಳು.

ತಟ್ಟನೆ ಎದ್ದು ಕುಳಿತ ಮನುಜ “ಅವರ ಮುಂದೆನೇ ಬದುಕಿ ತೋರಿಸ್ತಿನಿ ನೋಡು, ಅವರ ಬಾಯಿಗೆ ಹೆದರಿ ಹೇಡಿಯಂತೆ ಓಡಿ ಹೋಗಲ್ಲ. ನಾನೇನು ತಪ್ಪು ಮಾಡಿದ್ದಿನಿ ಅಂತ ಅವರಿಗೆ ಹೆದರಬೇಕು. ಅದೆಷ್ಟು ದಿನ ಆಡ್ಕೋತಾರೋ ನೋಡ್ತಿನಿ. ಅವರೇ ಸೋತು ಸುಮ್ಮನಾಗಬೇಕು. ಇನ್ನು ಮೇಲೆ ಯಾರು ಏನು ಮಾತಾಡಿದರೂ ನಾ ನೊಂದುಕೊಳ್ಳುವುದಿಲ್ಲ. ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಈ ಜನಗಳು ನನ್ನ ಪಾಲಿಗೆ ರಣಹದ್ದುಗಳಾಗೋಕೆ ನಾ ಬಿಡಲ್ಲ ರೇಖಾ” ಆತ್ಮವಿಶ್ವಾಸದಿಂದ ಪ್ರಜ್ವಲಿಸುತ್ತ ನುಡಿದಾಗ ಭೇಷ್ ಎನ್ನುವಂತೆ ನೋಡುತ್ತ “ಇದು ನಿಜವಾದ ತೀರ್ಮಾನ. ಹೀಗೆ ಧೈರ್ಯವಾಗಿ ನಿಲ್ಲಬೇಕು. ನಂಗೆಷ್ಟು ಸಂತೋಷವಾಗುತ್ತ ಇದೆ ಗೂತ್ತ, ಇನ್ನು ಯಾರಿಂದಲೂ ನಿನ್ನ ಘಾಸಿ ಮಾಡೋಕೆ ಸಾಧ್ಯ ಇಲ್ಲಾ. ಎಂದವಳೇ ರೇಖಾ ಮನುಜಳ ಕೈ ಹಿಡಿದು ಎಳೆದು ಕನ್ನಡಿ ಮುಂದೆ ನಿಲ್ಲಿಸಿ, “ಈಗ ನೀನು ಮನುಜಳಂತೆ ಕಾಣ್ತಾ ಇದ್ದಿಯಾ ಹಳೆಯ ಮನುಜಳಂತೆ.” ಮೆಚ್ಚುಗೆಯಿಂದ ನುಡಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಐಸುರ ಮೋರುಮ ದಸರೆಕ
Next post ಜಾರತ ಕರ್ಮವು ತೀರಿದ ಬಳಿಕ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…