ಉತ್ತಮ ಸಮಾಜದತ್ತ….

ಉತ್ತಮ ಸಮಾಜದತ್ತ….

ಮಹಾತ್ಮ ಗೌತಮ ಬುದ್ಧರ ಆದರ್ಶಗಳನ್ನು ಅನುಪಾಲಿಸಿಕೊಂಡು ಬದುಕುತ್ತಿರುವ ಶ್ರೀ ಎಸ್. ಎಂ. ಜನವಾಡಕರ್‌ ಹೆಸರು ಬೀದರ ಜಿಲ್ಲೆಯ ಸಾಹಿತ್ಯ ಲೋಕದಲ್ಲಿ ಈಗಾಗಲೆ ಚಿರಪರಿಚಿತ ಹೆಸರಾಗಿದೆ. ದಿನಾಂಕ: ೩-೧-೧೯೫೦ ರಂದು ಹಾಲಹಳ್ಳಿ ಗ್ರಾಮದಲ್ಲಿ ಜನಿಸಿದ ಇವರು ಬಿ.ಎ., ಎಂ.ಎ., ಪದವಿಗಳನ್ನು ಪಡೆದು ಶಿಕ್ಷಣ ಇಲಾಖೆಯಲ್ಲಿ ಸೇರಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಿ ನಿವೃತ್ತಿ ಹೊಂದಿದವರು.

ಇವರು ಈಗಾಗಲೆ ಶೀಲ ತರಂಗ, ಧಮ್ಮಾಮೃತ ಗೀತೆ, ಬುದ್ಧ ಚರಿತೆ ಕಾವ್ಯ, ತಥಾಗತ ಗಾಥೆಗಳು, ಧಮ್ಮ ಚರಿತ್ರೆ ಕಾವ್ಯ, ಬುದ್ಧ ಗೆದ್ದ ಮಾರನ ಯುದ್ಧ, ನಂಟು ಬಿಡದೆ ಅಂಟಿಕೊಂಡವರು, ಗಾಜಿನ ಬಳೆಚೂರು, ಬಣ್ಣದ ಬದುಕು, ಪ್ರಜ್ಞಾತರಂಗ, ಮಾಸಿದ ಹಾಸಿಗೆ, ಹಿಮಸಾಗರ, ಕರುಣ ತರಂಗ, ಕುರಿತಂತೆ ಕತೆ, ಕಾವ್ಯ ವೈಚಾರಿಕತೆ, ವ್ಯಕ್ತಿ ಚಿತ್ರ, ಕಾದಂಬರಿ, ಪ್ರವಾಸ ಕಥನ ಚಿಂತನಗಳ ಕುರಿತಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿಯೂ ಸೃಜನಾತ್ಮಕವಾಗಿ ರಚಿಸಿದ್ದಾರೆ. ಅಲ್ಲದೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಸಿದ್ಧಾರ್ಥ ಪ್ರಶಸ್ತಿ, ವಚನ ಸಾಹಿತ್ಯ ಪ್ರಶಸ್ತಿ, ಗಣರಾಜ್ಯ ಪ್ರಶಸ್ತಿ, ಬೀದರ ತಾಲೂಕಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಕರಿತಂತೆ ಇವರಿಗೆ ಶೋಭೆ ತಂದಿವೆ. ಈಗ ಇವರು ಇವೆಲ್ಲ ಗ್ರಂಥಗಳ ದಾಟಿ ಕಲ್ಯಾಣ ಕಂಡ ಕಲ್ಯಾಣ, ಕರುಳಿನ ಕತ್ತರಿ, ಇಂಥ ಮೌಲಿಕ ಗ್ರಂಥಗಳನ್ನು ಪ್ರಕಟಿಸುತ್ತಿರುವುದು ಇವರ ಕೀರ್ತಿಗೆ ಕಳಸವಿಟ್ಟಿದೆ.

ಕರುಳಿನ ಕತ್ತರಿ, ಇದೊಂದು ವೈಚಾರಿಕ ಲೇಖನಗಳ ಸಂಗ್ರಹ. ಇದರಲ್ಲಿ ಒಟ್ಟು ೧೨ ಲೇಖನಗಳಿದ್ದು, ಎಲ್ಲವೂ ಮೌಲಿಕ ಹಾಗೂ ಸಮಕಾಲಿನ ಪ್ರಜ್ಞೆಯನ್ನು ಎತ್ತಿ ಹಿಡಿದಿದೆ.

ರಾಡಿಯಲ್ಲಿ ರೂಢಿ, ಎಂಬ ಈ ಲೇಖನದಲ್ಲಿ ಲೇಖಕರು ಹಂತಹಂತವಾಗಿ ವಿಶದಪಡಿಸುತ್ತ ನಿಸರ್ಗದಲ್ಲಿ ತಂಪಾದ ಬಿರುಗಾಳಿ ಚಂಡ ಮಾರುತ, ಸುನಾಮಿ, ಜ್ವಾಲಾಮುಖಿಗಳಂಥ ನೈಸರ್ಗಿಕ ವಿಕೋಪಗಳಿಂದ ಮಾನವನು ತಲ್ಲಣಗೊಂಡಿದ್ದಾನೆ. ಅಂತಹದೊಂದಿಗೆ ಬಾಳುತ್ತಿರುವ ಮಾನವನಿಗೆ ಪಾಶ್ಚಿಮಾತ್ಯ ಸಂಸ್ಕೃತಿ ಓಲೈಸಿದೆ. ಅದರ ಪ್ರಭಾವದಿಂದ ಆಹಾರ, ಉಡುಪುಗಳಲೆಲ್ಲ ಬದಲಾವಣೆ ತಂದಿದ್ದಾನೆ. ದೇಶ ಸಂಸ್ಕೃತಿ, ಸೊಗಡು ಮರೆಯಾಗುತ್ತಿದೆ. ಹಬ್ಬ-ಹರಿದಿನಗಳು ಎಂದಿನಂತೆ ಆಚರಿಸಲ್ಪಡುತ್ತಿದ್ದರೂ ಅದರಲ್ಲಿನ ಉತ್ಸಾಹ ಕಡಿಮೆಯಾಗಿದೆ. ಜನರಲ್ಲಿ ಸಂಸ್ಕೃತಿ ಬಗ್ಗೆ ಕೀಳರಿಮೆ ಮೂಡಿದೆ. ಮಾನವರು ಮತ್ತನ್ನುಂಟು ಮಾಡುವ ಮಾದಕ ದ್ರವ್ಯಗಳನ್ನು ಸೇವಿಸುತ್ತ ಡಾಂಭೀಕತನದಲ್ಲಿ ಮೆರೆಯುತ್ತಿದ್ದಾರೆ. ದೇಶಿ ಭಾಷೆ, ಉಡುಪು, ಸಂಸ್ಕೃತಿಗಳ ಮರೆತ ತರುಣ-ತರುಣಿಯರು ಅವಹೇಳನಕಾರಿಯ ಬಾಳನ್ನು ಬಾಳುತಿಹರು. ತಂದೆ-ತಾಯಿಯರಿಗೆ ಅಗೌರವ ತೋರಿ ಧಿಕ್ಕರಿಸಿ ಪ್ರೇಮ ಪ್ರಕರಣಗಳಲ್ಲಿ ಕಾಲ ದೂಡುತ್ತಿರುವುದು ನಿಜಕ್ಕು ಹೇಯ ಕೃತ್ಯ. ಇಂಥ ಪರಿಸರ ಈಗ ಸಮಾಜದಲ್ಲಿ ನಿರ್ಮಾಣವಾಗಿ ಉತ್ತಮ ರೂಢಿಗಳಲ್ಲಿ ಅನೈತಿಕ ರಾಡಿ ಚೆಲ್ಲಿ ಸಂಪ್ರದಾಯ ಹಾಳಾಗುತ್ತದೆ. ಇದನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.

ನುಂಗದ ತುತ್ತು ಗಂಟಲ ಕಂಟಕ : ಎಂಬ ಲೇಖನದಲ್ಲಿ ಲೇಖಕರು ಜಾತಿ ಪದ್ಧತಿ ವಿರುದ್ಧ ವಿಶ್ಲೇಷಿಸಿದ್ದಾರೆ. ಇವತ್ತು ಹಿಂದೂ ಸಮಾಜದಲ್ಲಿ ಮೇಲ್ವರ್ಗ ಕೆಳವರ್ಗ ಎಂಬ ಭೇದಗಳನ್ನು ಹುಟ್ಟಿಸಿ ದಲಿತರ ಮೇಲೆ ಎಸಗುತ್ತಿರುವ ಅನ್ಯಾಯ, ಶೋಷಣೆಯ ಬಗ್ಗೆ ದನಿ ಎತ್ತಿದ್ದಾರೆ. ಕಂದಾಚಾರ, ಅಸಮಾನತೆ, ಅಸ್ಪೃಶ್ಯಗಳಂಥ ಕೆಟ್ಟ ಸಂಪ್ರದಾಯಗಳು ಭಾರತದಿಂದ ತೊಲಗಬೇಕು. ಧಾರ್ಮೀಕ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲೂ ಜಾತಿಯ ಅಳತೆಗೋಲು ಎದುರಿಟ್ಟಿಕೊಂಡು ಶೋಷಣೆಯಾಗುತ್ತಿದೆ. ರಾಜಾರಾಮ ಮೋಹನರಾಯ, ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ, ಕಬೀರದಾಸ, ಸರ್ವಜ್ಞ, ಕನಕದಾಸ, ಗುರುನಾನಕರಂಥವರು ಬಂದರೂ ಈ ದೇಶದಲ್ಲಿ ಜಾತಿಯತೆಗೆ ಅಂಟಿದ ಕೊಳಕು ತೊಲಗಿಲ್ಲವೆಂಬುದು ಮಾನವರ ಮೇಲೆ ಎಸಗುತ್ತಿರುವ ದೊಡ್ಡ ಆಘಾತ. ಬೆತ್ತಲೆ ಸೇವೆ, ಉರುಳು ಸೇವೆ, ದೇವದಾಸಿ ಪದ್ಧತಿಗಳೆಲ್ಲವೂ ಈ ದೇಶದಿಂದ ಪೂರ್ತಿಯಾಗಿ ನಿರ್ಮೂಲನೆ ಆಗಬೇಕು. ಇವೆಲ್ಲವೂ ನುಂಗದ ತುತ್ತುಗಳು ಎಂದು ಲೇಖನದ ಮೂಲಕ ಜಗಜ್ಜಾಹಿರಗೊಳಿಸುತ್ತಾರೆ. ನಿಜವಾಗಿಯೂ ಇದು ಆಲೋಚನೆಗೆ ಎಡೆಮಾಡಿಕೊಡುವುದಾಗಿದೆ.

ಇನ್ನು ವಂಚನೆಯ ಕುಂಚಿಯಲ್ಲಿ ದೇಶದ ಬೆನ್ನೆಲುಬು ಆದ ರೈತನ ಬದುಕು ಇಂದು ಶೋಚನೀಯ ಸ್ಥಿತಿಯಲ್ಲಿದೆ. ಅವನು ಬೆಳೆದ ಬೆಲೆಗಳಿಗೆ ಪೂರಕ ಬೆಲೆಗಳಿಲ್ಲ. ಫಸಲುಗಳು ನಿಸರ್ಗ ವಿಕೋಪಗಳಿಂದ ಇಳುವರಿಯಿಲ್ಲ. ವ್ಯಾಪಾರಸ್ತರು, ದಲ್ಲಾಳಿ, ಕಮಿಷನ್ ಏಜೆಂಟರುಗಳೆಲ್ಲ ರೈತರ ಶತ್ರುಗಳಾಗಿದ್ದಾರೆ. ಕಲಬೆರಕೆ ಮಿಶ್ರಣಗಳಿಂದ ವ್ಯಾಪಾರಸ್ಥರು ಗ್ರಾಹಕರಿಗೆ ವಂಚಿಸುತ್ತಿರುವುದು ಸಾಮಾನ್ಯ ಜನರಿಗೆ ಮೋಸವಾಗುತ್ತಿದೆ. ಗ್ರಾಹಕ ರಕ್ಷಣ ವೇದಿಕೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಸಂವಿಧಾನ ಬದ್ಧವಾಗಿ ಜನರಿಗೆ ವಂಚಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶಗಳಿದ್ದರೂ ಅವೆಲ್ಲವು ನಿಷ್ಪ್ರಯೋಜನಗಳಾಗಿವೆ. ಹೀಗಾಗಿ ದೇಶದಲ್ಲಿ ಆಳುವವರ-ಬಾಳುವವರ ನಡುವೆ ದೊಡ್ಡ ಕಂದರ ನಿರ್ಮಾಣವಾಗಿ ನ್ಯಾಯವಾಗಿ ಜೀವನ ಮಾಡುವಂತಿಲ್ಲ. ಈ ದೇಶದಲ್ಲಿ ವಂಚನೆ ರಾಕ್ಷಸವಾಗಿ ಮೆರೆಯುತ್ತಿದೆ. ಈ ಬಗ್ಗೆ ಪ್ರಜ್ಞಾವಂತರು, ತರುಣರು, ಕ್ರಿಯಾಶೀಲರಾಗಬೇಕೆನ್ನುತ್ತಾರೆ. ರಕ್ಷಕರೇ ಭಕ್ಷಕರು ಎಂಬ ಲೇಖನದಲ್ಲಿ ಸಿರಿವಂತರ ಅಟ್ಟಹಾಸ ವಿವರವಾಗಿ ತೋರ್ಪಡಿಸಲಾಗಿದೆ. ಈ ನಾಡಿನಲ್ಲಿ ತೋಳ್ಬಲ ಹಣಬಲವೇ ಜಾಸ್ತಿಯಾಗಿ ಮತದಾರರು ವ್ಯವಸ್ಥೆಯಲ್ಲಿ ಮಾರಿಹೋಗುತ್ತಿದ್ದಾರೆ. ರಾಜಕೀಯ ಜನರು ಹಣದ ಬಲದಿಂದ ಮತದಾರನನ್ನು ಖರೀದಿಸಿ ಅಧಿಕಾರ ಗಿಟ್ಟಿಸಿ ಬಡ ಜನರನ್ನು ಶೋಷಿಸುತ್ತಿರುವುದು ನಿಜಕ್ಕೂ ಹೇಯ ಕೃತ್ಯ ಎಲ್ಲೆಲ್ಲಿಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮನೆಯೊಳಗಿನ ಕಳ್ಳರನ್ನು ಯಾರು ಹಿಡಿಯಲು ಸಾಧ್ಯ! ಎಂದು ಲೇಖಕರು ಪ್ರಶ್ನಿಸುತ್ತಾರೆ. ಹರಿಯದೆ ಹರಿದ ಚಿಂದಿಯಲ್ಲಿಯೂ ಮಾನವೀಯ ಮೌಲ್ಯಗಳು ದಿಕ್ಕು ಪಾಲಾಗುತ್ತಿವೆ. ಸರ್ಕಾರವು ಕೈ ಕಟ್ಟಿ ಕುಳಿತಿದೆ. ಪ್ರಜಾ ಪ್ರಭುತ್ವವು ಭ್ರಷ್ಟರ ವಿರದ್ಧ ಬಂಡೇಳದಿದ್ದ ಪರಿಣಾಮವಾಗಿ ಜನಸಾಮಾನ್ಯರ ಬದುಕಿಗೆ ಯಾವ ಬೆಲೆ ಇಲ್ಲದಂತಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ. ತಿಂದುತೇಗಿಲ್ಲ ಎಂಬ ಲೇಖನದಲ್ಲಿ ಜಾಗತೀಕರಣ ಎಂಬ ಹೆಸರಿನಲ್ಲಿ ಅಂತರಾಷ್ಟ್ರೀಯ ಬಹುರಾಷ್ಟ್ರೀಯ ಕಂಪನಿಗಳು ಸಹ ಉದ್ಯೋಗಕ್ಕಾಗಿ ರೈತರ ಸಾವಿರ ಸಾವಿರ ಎಕರೆ ಜಮೀನು ಬಡವರಿಂದ ಕಬಳಿಸುತ್ತಿವೆ. ಈಗೀಗ ಕೃಷಿ ಭೂಮಿ ಇಲ್ಲವಾಗಿ ರೈತರ ಬದುಕು ಶೋಚನೀಯ ಸ್ಥಿತಿಯಲ್ಲಿದೆ. ಒಕ್ಕಲುತನ ಮಾಯವಾಗಿ ಗ್ರಾಮಸ್ಥರ ಬದುಕು ಕಂಗಾಲಾಗಿ ಇಂಥ ಬಡ ಜನರ ಭೂಮಿ ಸಿರಿವಂತರ ವ್ಯಾಪಾರಸ್ತರ ಕೈಗೆ ವಶವಾಗಿ ಬಡವರು ಭೂಮಿಯಿಲ್ಲದೆ ನಿರಾಧಾರಿಗಳಾಗಿದ್ದಾರೆ ಎಂದು ದುಃಖದಿ ನುಡಿಯುತ್ತಾರೆ.

ಕರಿ ಪರದೆಯಲ್ಲಿ ಬಿಸಿಯುಸಿರು ಎಂಬ ಲೇಖನದಲ್ಲಿ ಗಗನವು ಓಜೋನ ಅನಿಲ ಕಳೆದುಕೊಳ್ಳುತ್ತ ಸಾಗಿದೆ. ಕಾರ್ಖಾನೆಗಳ ಹೊಗೆಯಾಡುವಿಕೆಯಿಂದ ಪರಿಸರ ಹದಗೆಡುತ್ತದೆ. ವಾಯು ಮಲೀನವಾಗಿದೆ. ವಾಹನಗಳ ಅಧಿಕ ಸಂಖ್ಯೆ ಮರಗಳ ಮಾರಣ ಹೋಮ, ಗಣಿಗಾರಿಕೆ, ವಾಯು ಮಾಲಿನ್ಯ, ಜಲ ಮಾಲಿನ್ಯಗಳೆಲ್ಲ ಆರೋಗ್ಯದ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತಿವೆ. ಇಂಥದರಲ್ಲಿ ಸಂಸ್ಕೃತಿಗಳು ಮಾಯವಾಗಿ ಈ ದೇಶದಲ್ಲಿ ನಗ್ನ ಸಂಸ್ಕೃತಿ ತಲೆ ಎತ್ತಿದೆ ಎಂದು ಬರೆಯುತ್ತಾರೆ. ಹೀಗೆ ಮುರಿದ ಮನೆಯ ಸೌಂದರ್ಯ, ದೂರ ದೃಷ್ಟಿಯ ಧೂಳು, ಮೂಕ ರೋದನ, ಗಡಿಯ ನುಡಿ ಸ್ಥಿತಿ, ಕಾಯ ನುಂಗುವ ಕರಿ ಹಸ್ತ, ಮುಂತಾದ ಮೌಲಿಕ ಲೇಖನಗಳಲ್ಲಿ ರಾಜಕೀಯ ಅಧರ್ಮ, ಬಡವರಿಗೆ, ಹಿಂದುಳಿದವರಿಗೆ ಈವರೆಗೂ ತಲುಪದಿದ್ದ ಶಿಕ್ಷಣ ಮಹಿಳೆಯ ಮೇಲಾಗುತ್ತಿರುವ ಅತ್ಯಾಚಾರ, ಅಸಮಾನತೆ, ಲೈಂಗಿಕ ಕಿರುಕುಳಗಳನ್ನೆಲ್ಲ ಲೇಖಕರು ಈ ಲೇಖನಗಳಲ್ಲಿ ವಿಶ್ಲೇಷಿಸಿದ್ದಾರೆ. ಗಡಿನಾಡುಗಳಲ್ಲಿ ಕನ್ನಡ ಕ್ಷೀಣಗೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯವೆಂದು ಈ ಲೇಖನ ಬಿತ್ತರಿಸುತ್ತದೆ.

ಆರೋಗ್ಯವೇ ಭಾಗ್ಯವೆಂಬುದು ಆದರೆ ಇಂದಿನ ದಿನಗಳಲ್ಲಿ ಆರ್ಯುವೇದ, ನಾಟಿವೈದ್ಯ, ಪದ್ಧತಿ ಕರಗುತ್ತಿದೆ. ಜನರಿಗೆ ಆರೋಗ್ಯ ರಕ್ಷಣೆ ಇಲ್ಲ. ಸರಕಾರದ ಅನುದಾನ ಭ್ರಷ್ಟರ ಕಪಿಮುಷ್ಠಿಯಿಂದಾಗಿ ಸರಿಯಾದ ಔಷದೋಪಚಾರಗಳ ಕೊರತೆಯಾಗಿದೆ. ಖಾಸಗಿ ಆಸ್ಪತ್ರೆಗಳು ಬಡವ ಪ್ರಾಣ ರಕ್ಷಣೆ ಸಹಕಾರಿಗಳಾಗಿಲ್ಲ. ಮಾನವ ಸಂಪನ್ಮೂಲ ಕೊರತೆಯಾಗಿದೆ. ಇಂಥದರಲ್ಲಿ ಜನರ ಬದುಕಿಗೆ ರಕ್ಷಣೆಯಿಲ್ಲದಂತಾಗಿದೆ.

ಹೀಗೆ ಲೇಖಕರು ಈ ಎಲ್ಲ ಲೇಖನಗಳ ಮೂಲಕ ಸಮಾಜದ ಓರೆ ಕೊರೆಗಳನ್ನು ವಿಶದಿಕರಿಸಿದ್ದಾರೆ. ಜಗತ್ತು ಇಪ್ಪತ್ತೊಂದನೆ ಶತಮಾನದತ್ತ ದಾಪುಗಾಲು ಇಟ್ಟು ಸಾಗುತ್ತಿದ್ದರೂ ವ್ಯವಸ್ಥೆ ಹಾಳಾಗುತ್ತಿದೆ. ತಾರತಮ್ಯ ಬಡವ-ಶ್ರೀಮಂತರ ನಡುವಿನ ಕಂದರ, ದಲಿತರ ಶೋಷಣೆ, ಜಾತಿ ಪದ್ಧತಿ, ರಾಜಕೀಯ ಜನತೆಯ ಅಟ್ಟಹಾಸ, ಭ್ರಷ್ಟಾಚಾರದ ಉಗ್ರ ರೂಪ ನಶಿಸುತ್ತಿರುವ ಮಾನವೀಯ ಮೌಲ್ಯಗಳು, ಸಂಸ್ಕೃತಿ, ತರುಣರು ಪಾಶ್ಚಿಪಾತ್ಯ ಸಂಸ್ಕೃತಿ ಅನುಕರಣೆ, ಹೀಗೆ ಬದುಕು ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಬಂದು ನಿಂತುಕೊಂಡಿದೆ. ಆರ್ಥಿಕ, ಸಾಮಾಜಿಕ, ನೈತಿಕ, ಚೌಕಟ್ಟುಗಳಿಂದ ಜೀವನದಿ ಜಾರುತ್ತಿದೆ. ಈ ಬಗ್ಗೆ ಯೋಚನೆಗೆ ಹಚ್ಚುವ ಈ ಲೇಖನಗಳು ನಿಜವಾಗಿಯೂ ಮನ ಮಿಡಿಯುತ್ತವೆ.

ಬೀದರ ಜಿಲ್ಲೆಯ ಸಾಹಿತ್ಯ ಲೋಕದಲ್ಲಿ ತನ್ನನ್ನು ವಿಶೇಷವಾಗಿ ಗುರುತಿಸಿಕೊಳ್ಳುವೆಡೆಗೆ ಸಾಗುತ್ತಿರುವ ಎಸ್. ಎಂ. ಜನವಾಡಕರ್ ಅವರು ಇಂಥ ಒಂದು ಕೃತಿಗೆ ನನಗೆ ಮುನ್ನುಡಿ ಬರೆಯಲು ಕೋರಿಕೊಂಡಿದ್ದು ನನಗೂ ಇದನ್ನು ಬರೆಯಲು ಖುಷಿಯಾಗಿದೆ.

ಮುನ್ನುಡಿಕಾರರು ಎಲ್ಲವನ್ನು ಹೇಳಿದರೆ ಈ ಕೃತಿ ತನ್ನ ಮೌಲ್ಯ ಕಡಿಮೆಗೊಳಿಸಿಕೊಳ್ಳುವಂತೆ ನಾನು ಅಂಥ ಕಾರ್ಯ ಎಸಗದೆ ಓದುಗರು ಈ ಕೃತಿಯ ಲೇಖನಗಳನ್ನು ಖಂಡಿತವಾಗಿ ಓದಬೇಕು. ಇವುಗಳ ವಾಚನದಿಂದ ಸಮಾಜದಲ್ಲಿ ನಾವು ಎಲ್ಲಿದ್ದೇವೆ ಎಂಬುದು ಅರಿವಾಗುತ್ತದೆ. ಪ್ರತಿಯೋರ್ವರು ಈ ಸಮಾಜದ ಒಳಿತಿಗೆ ಪ್ರಯತ್ನಿಸುತ್ತಿರುವುದರಿಂದ ಸಮಾಜ ಸಮೃದ್ಧಿಯಾಗಿ ಬೆಳೆದು ಸರ್ವರಿಗೂ ಸಮ ಪಾಲು ಎಂಬಂತೆ ಎಲ್ಲರ ಉತ್ತಮರಾಗಿ ಬಾಳಲು ಸಾಧ್ಯವಾಗುತ್ತದೆ.

ಶ್ರೀ ಎಸ್. ಎಂ. ಜನವಾಡಕರ್‌ ಅವರಿಂದ ಇನ್ನು ಇಂಥ ಹಲವಾರು ಮೌಲಿಕ ಕೃತಿಗಳು ಪ್ರಕಟಗೊಂಡು ಜನಸಾಮಾನ್ಯರಲ್ಲಿ ಪಸರಿಸಿ ಉತ್ತಮ ಸಮಾಜ ನಿರ್ಮಾಣವಾಗಲೆಂದು ಹಾರೈಸುವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನವೋದಯಂ
Next post ಉಮರನ ಒಸಗೆ – ೧೧

ಸಣ್ಣ ಕತೆ

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಪ್ರಕೃತಿಬಲ

  ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys